ಅಮೆರಿಕನ್ನಡ
Amerikannada
ತೋರು ಬೆರಳು
-ಡಾ. ಬಿ.ಎನ್. ಸತ್ಯನಾರಾಯಣರಾವ್
ಡಾ. ಶಶಿಧರ ಬೆಂಗಳೂರಿನಲ್ಲಿ ಎಂ.ಬಿ.ಬಿ.ಎಸ್ ಡಿಗ್ರೀ ಮುಗಿಸಿ, ಅಮೆರಿಕಾದ ಮಿಚಿಗನ್ ಸ್ಟೇಟ್’ನಲ್ಲಿರುವ ಡೆಟ್ರಾಯಿಟ್ ನಗರದಲ್ಲಿ ತರಬೇತಿ ಮುಗಿಸಿ, ಅಲ್ಲಿಯೇ ಒಂದು ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ. ಒಂದು ವರ್ಷದ ಹಿಂದೆ ತಾನೆ ಮದುವೆಯಾಗಿತ್ತು. ಅಲ್ಲಿಯ ತನಕ ತರಬೇತಿಯಲ್ಲಿದ್ದುದರಿಂದ ಹಣದ ಅನುಕೂಲವಿರಲಿಲ್ಲ. ಎರಡು ವರ್ಷ ಕೆಲಸ ಮಾಡಿ ಸ್ವಲ್ಪ ಹಣ ಸಂಗ್ರಹಿಸಿ, ಬೆಂಗಳೂರಿನ ಹುಡುಗಿಯನ್ನೇ ಮದುವೆಯಾಗಿ ಡೆಟ್ರಾಯಿಟ್’ಗೆ ವಾಪಸ್ ಹೋಗಿ ಸಂಸಾರ ಹೂಡಿದ್ದ. ಉಳಿತಾಯ ಮಾಡಿದ್ದ ಹಣವನ್ನೆಲ್ಲಾ ಹಾಕಿ, ಬ್ಯಾಂಕಿನಲ್ಲಿ ಸಾಲ ತೆಗೆದು, ಒಂದು ಮನೆ ಕೊಂಡುಕೊಂಡಿದ್ದ. ಸಂಪಾದನೆ ಚೆನ್ನಾಗಿದ್ದು ನವ ದಂಪತಿಗಳಿಬ್ಬರೂ ಸಂತೋಷದಿಂದಿದ್ದರು.
ಒಂದು ದಿನ ಬೆಳಿಗ್ಗೆ ಅವನು ಆಸ್ಪತ್ರೆಯೊಳಗೆ ಕಾಲಿಟ್ಟ ಕೂಡಲೆ ರಿಸೆಪ್ಷನಸ್ಟ್ ಕ್ಯಾರೊಲ್ ಅವನನ್ನು ನಿಲ್ಲಿಸಿ,
“ಡಾಕ್ಟರ್. ಶಶಿ , ನಿಮಗೊಂದು ಟೆಲಿಫೋನ್ ಕಾಲ್ ಇದೆ ” ಎಂದು ಫೋನ್ ಕೊಟ್ಟಳು.
“ಹೆಲೋ, ಡಾ. ಶಶಿಧರ್ ಸ್ಪೀಕಿಂಗ್.”
“ಹೆಲೋ. ಡಾಕ್ಟರ್, ನಾನು ಕ್ಯಾರೆನ್ ಕ್ರಾಂಪ್ಟನ್. ನಿಮಗೆ ನನ್ನ ನೆನಪಿಲ್ಲದೆ ಇರಬಹುದು. ಆದರೆ ನಾನು ನಿಮ್ಮನ್ನು ಮರೆಯುವ ಹಾಗೇ ಇಲ್ಲ.”
ಒಂದೆರಡು ಕ್ಷಣ ಡಾ. ಶಶಿ ನೆನಪಿನಾಳದಲ್ಲಿ ಮುಳುಗಿ, ಇವಳು ಯಾರಿರಬಹುದೆಂದು ಯೋಚಿಸಿದ. ಉ ಹು! ಜ್ಞಾಪಕ ಬರಲಿಲ್ಲ. ಇಷ್ಟು ಪರಿಚಯವಿರುವ ಹಾಗೆ ಮಾತನಾಡುತ್ತಿದ್ದಾಳಲ್ಲ, ಎಂದು ಚಿಂತಿಸಿದ.
“ಹೆಲೋ ಮಿಸರ್ಸ್. ಕ್ರಾಂಪ್ಟನ್. ಹೇಗಿದ್ದೀರಿ.” ಎಂದು ತಡವರಿಸಿದ.
“ನಾನು ಚೆನ್ನಾಗಿದ್ದೀನಿ. ನಿಮಗೆ ನೆನಪಿಲ್ಲದೆ ಇರಬಹುದು. ಈಗ ಒಂದುವರೆ ವರ್ಷದ ಕೆಳಗೆ ನೀವು ನನ್ನ ಬಲಗೈ ತೋರು ಬೆರಳಿಗೆ ಗಾಯವಾಗಿದ್ದಾಗ ಚಿಕಿತ್ಸೆ ಮಾಡಿದ್ದಿರಿ. ನಾನು ನಿಮ್ಮನ್ನು ನೋಡಬೇಕು.”
ಡಾ. ಶಶಿಧರ್ ಅದುವರೆಗೂ ಸುಮಾರು ನೂರಾರು ಬೆರಳಿನ ಗಾಯಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದ. ಇವಳು ಯಾರೆಂದು ಹೇಗೆ ತಾನೆ ನೆನಪಿರಲು ಸಾಧ್ಯ?
ಆ ದಿನಗಳಲ್ಲಿ ಅಮೆರಿಕಾದ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಗೊಂದಲವೆದ್ದಿತ್ತು. ರೋಗಿಗಳು ಡಾಕ್ಟರುಗಳನ್ನು ‘ಸ್ಯೂ’ ( ಮಾಲ್ ಪ್ರಾಕ್ಟೀಸ್ ಕೇಸ್ ) ಮಾಡಿ ಕೋರ್ಟಿಗೆಳೆದು ಪರಿಹಾರ ಧನ ಕೇಳುವುದು ವಿಪರೀತ ಮಟ್ಟಕ್ಕೆ ಬೆಳೆದು, ಡಾಕ್ಟರುಗಳಿಗೆ ಮಾಲ್ ಪ್ರಾಕ್ಟೀಸ್ ಇನ್ಸ್ಯೂರೆನ್ಸ್ ನೀಡುವ ಕಂಪನಿಗಳು ಅಪಾರ ನಷ್ಟಕ್ಕೊಳಗಾಗಿ ಡಾಕ್ಟರುಗಳು ತೆರಬೇಕಾದ ಪ್ರೀಮಿಯಂ ವರ್ಷೇ ವರ್ಷೇ ಏರಿಕೆಯಾಗಿ ಈ ವರ್ಷ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಬಹಳ ವರ್ಷಗಳಿಂದ ಈ ಇನ್ಸ್ಯೂರೆನ್ಸ್ ಕೊಡುತ್ತಿದ್ದ ಒಂದು ಕಂಪನಿ, ಐದು ವರ್ಷಗಳ ಹಿಂದೆಯೇ ಹೊಸ ಡಾಕ್ಟರುಗಳಿಗೆ ಇನ್ಸ್ಯೂರೆನ್ಸ್ ಕೊಡುವುದನ್ನು ನಿಲ್ಲಿಸಿತ್ತು. ಡಾ. ಶಶಿಧರ ಪ್ರಾಕ್ಟೀಸ್ ಶುರು ಮಾಡಿದಾಗ ಒಂದು ಹೊಸ ಕಂಪನಿ ಹೆಚ್ಚಿನ ಪ್ರೀಮಿಯಂಗೆ ಹೊಸ ಡಾಕ್ಟರುಗಳಿಗೆ ಇನ್ಸ್ಯೂರೆನ್ಸ್ ಕೊಡಲು ಒಪ್ಪಿತ್ತು. ಆ ಕಂಪನಿ ಕೂಡ ತೊಂದರೆಗೊಳಗಾಗಿ, ಮಾಲ್’ಪ್ರಾಕ್ಟೀಸ್ ಇನ್ಸ್ಯೂರೆನ್ಸ್ ಕ್ಷೇತ್ರದಿಂದ ಹೊರಬರಲು ನಿರ್ಧರಿಸಿ, ಅವರ ಪಾಲಿಸಿದಾರರಿಗೆಲ್ಲ ಮುಂದಿನ ವರ್ಷದಿಂದ ಎಲ್ಲಾ ಪಾಲಿಸಿಗಳನ್ನೂ ಪಾಲಿಸಿಯ ಆವಧಿ ಮುಗಿದನಂತರ, ರದ್ದು ಮಾಡುವ ಸೂಚನೆಯನ್ನು ಕೊಟ್ಟಿತ್ತು. ಡಾ. ಶಶಿಧರನಿಗೂ ಈ ಸೂಚನಾ ಪತ್ರ ಬಂದಿದ್ದು, ಇನ್ನೆರಡು ತಿಂಗಳಲ್ಲಿ ಆವಧಿ ಮುಗಿಯುವುದರಲ್ಲಿತ್ತು. ಇದರಿಂದ ಮಿಚಿಗನ್ ಸ್ಟೇಟ್’ನ ಸಹಸ್ರಾರು ಡಾಕ್ಟರುಗಳು ಗೊಂದಲಕ್ಕೆ ಒಳಗಾಗಿದ್ದರು. ಮಾಲ್ ಪ್ರಾಕ್ಟೀಸ್ ಇನ್ಸ್ಯೂರೆನ್ಸ್ ಇಲ್ಲದೆ, ಆಸ್ಪತ್ರೆಗಳಲ್ಲಿ ಡಾಕ್ಟರುಗಳು ಚಿಕಿತ್ಸೆ ಮಾಡುವಂತಿರಲಿಲ್ಲ. ಇನ್ಸ್ಯೂರೆನ್ಸ್ ಸಿಗದಿದ್ದರೆ ತಾವುಗಳೆಲ್ಲ ನಿರುದ್ಯೋಗಿಗಳಾಗಿ, ಇನ್ಸ್ಯೂರೆನ್ಸ್ ಸಿಗುವ ಬೇರೆ ರಾಜ್ಯಗಳಿಗೆ ಹೋಗಬೇಕಾಗಿತ್ತು. ಅದೂ ಕೂಡ ಕಷ್ಟ ಸಾಧ್ಯವಾದ ಸಂಗತಿ. ಡಾಕ್ಟರುಗಳು ಕ್ಲಿಷ್ಟವಾದ ಕೇಸ್’ಗಳನ್ನು ತೆಗೆದುಕೊಳ್ಳಲು ಹೆದರುತ್ತಿದ್ದರು. ಹೀಗಾಗಿ ರಾಜ್ಯದಲ್ಲಿ ಒಂದು ವಿಷಮ ಪರಿಸ್ಥಿತಿ ಬಂದಿತ್ತು. ಮಿಚಿಗನ್ ಸ್ಟೇಟ್ ಸರಕಾರ ಈ ಬಿಕ್ಕಟ್ಟನ್ನು ಪರಿಹರಿಸಲು, ಮಿಚಿಗನ್ ಸ್ಟೇಟ್ ವೈದ್ಯಕೀಯ ಸಂಘದೊಡನೆ ಸಮಾಲೋಚನೆ ಮಾಡಿ, ವೈದ್ಯರುಗಳೇ ಸೇರಿ ಬಂಡವಾಳ ಹೂಡಿ ಒಂದು ಇನ್ಸ್ಯೂರೆನ್ಸ್ ಕಂಪನಿಯನ್ನು ಶುರು ಮಾಡಲು ಉತ್ತೇಜಿಸಿ, ರಾಜ್ಯದಿಂದಲೂ ಧನ ಸಹಾಯವನ್ನು ನೀಡುವುದಾಗಿ ಹೇಳಿತ್ತು. ಈ ಮಾತುಕತೆಗಳು ಬಿರುಸಿನಿಂದ ನಡೆಯುತ್ತಿದ್ದು ಡಾಕ್ಟರುಗಳೆಲ್ಲ ಆತಂಕ ಪಡುತ್ತಿದ್ದರು. ಏಕೆಂದರೆ ಎಲ್ಲಾ ರಾಜ್ಯಗಳಲ್ಲೂ ಇದೇ ರೀತಿಯ ಸಮಸ್ಯೆ. ಅಲ್ಲದೇ ಚೆನ್ನಾಗಿ ತಳಹದಿ ಹಾಕಿ, ಸಾಲ ತೆಗೆದು ಹಣಹೂಡಿ ವರ್ಷಾನುಗಟ್ಟಳೆ ಕಷ್ಟಪಟ್ಟು ಬೆಳೆಸಿದ ಪ್ರಾಕ್ಟೀಸು, ಮತ್ತು ಒಳ್ಳೆಯ ಹೆಸರನ್ನು ಮಾಡಿದ್ದು, ಎಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿ ಬೇರೆಕಡೆಗೆ ವಲಸೆ ಹೋಗುವ ಪರಿಸ್ಥಿತಿ ಅತಿ ದಾರುಣವಾಗಿತ್ತು.
ಡಾ. ಶಶಿಧರನ ಮನಃಪಟಲದ ಮುಂದೆ ಈ ವಿಷಯಗಳೆಲ್ಲ ಕ್ಷಣಮಾತ್ರದಲ್ಲಿ ಸುಳಿದು ಹೋದುವು. ನಿಮ್ಮ ಬೆರಳು ಹೇಗಿದೆ ಎಂದು ಕೇಳಲು ಹೆದರಿದ. ಹೇಗೋ ಸಾವರಿಸಿಕೊಂಡು
“ಆಗಲಿ. ಮಧ್ಯಾಹ್ನ ನಾಲಕ್ಕು ಗಂಟೆಗೆ ನನ್ನ ಕ್ಲಿನಿಕ್ ಗೆ ಬನ್ನಿ” ಎಂದು ಹೇಳಿ ಫೋನ್ ನ ಇಟ್ಟು ಹೊರಟ.
ಆಸ್ಪತ್ರೆಯ ನಾಲಕ್ಕನೆ ಫ್ಲೋರ್ಗೆ ಹೋಗಿ ಆಪರೇಟಿಂಗ್ ರೂಮಿನಲ್ಲಿ ಸರ್ಜೆರಿ ಮಾಡುವಾಗಲೂ ಇದೇ ವಿಷಯ ಶಶಿಧರನ ಮನಸ್ಸನ್ನು ಕೊರೆಯುತ್ತಿತ್ತು. ಇವಳೇಕೆ ಸುಮಾರು ಎರಡು ವರ್ಷಗಳಲ್ಲಿ ನನ್ನನ್ನು ಇದ್ದಕ್ಕಿದ್ದಂತೆ ಕರೆಯುತ್ತಿದ್ದಾಳೆ? ಡಾಕ್ಟರುಗಳೆಲ್ಲರಿಗೂ ಗೊತ್ತಿದ್ದ ಒಂದು ಸಂಗತಿಯೆಂದರೆ, ಡಾಕ್ಟರುಗಳ ಚಿಕಿತ್ಸೆಯ ಬಗ್ಗೆ ಏನಾದರೂ ತೊಂದರೆ ಇದ್ದಲ್ಲಿ, ಎರಡು ವರ್ಷಗಳಲ್ಲಿ ‘ಸ್ಯೂ’ ಮಾಡಬೇಕಿತ್ತು. ಲಾಯರುಗಳು ಈ ಆವಧಿ (ಸ್ಟಾಚ್ಯೂಟ್ಸ್ ಅಫ್ ಲಿಮಿಟೇಶನ್) ಮುಗಿಯುವುದರೊಳಗೆ ಕೇಸ್ ಹಾಕಬೇಕಿತ್ತು. ಹಾಗಾಗಿ ಲಾಯರುಗಳು ಕೇಸನ್ನು ಸರಿಯಾಗಿ ಪರಿಶೀಲಿಸದೆ, ಅವಸರದಲ್ಲಿ ಎರಡು ವರ್ಷದ ಗಡಿಯೊಳಗೆ ಹೇಗೋ ಒಂದು ಕೇಸ್ ದಾಖಲಿಸುವುದು ಸಾಮಾನ್ಯವಾಗಿತ್ತು. ಹೋದ ವರ್ಷ ತಾನೆ ಮದುವೆಯಾಗಿದೆ. ಹೆಂಡತಿ ಗರ್ಭಿಣಿ. ಮನೆ ಕೊಂಡಾಗಿದೆ. ಗಳಿಸಿದ್ದರಲ್ಲಿ ಒಂದು ಸಿಂಹ ಪಾಲು ಮಾಲ್ಪ್ರಾಕ್ಟೀಸ್ ಇನ್ಶ್ಯೂರೆನ್ಸ್’ಗೆ ಹೋಗುತ್ತಿದೆ. ಮನೆ ಮೇಲಿನ ಸಾಲದ ಕಂತು ಪ್ರತಿ ತಿಂಗಳೂ ಕಟ್ಟಬೇಕು. ಕಾರಿನ ಸಾಲದ ಕಂತು, ಮೆಡಿಕಲ್ ಇನ್ಸ್ಯೂರೆನ್ಸ್, ಲೈಫ್ ಇನ್ಸ್ಯೂರೆನ್ಸ್, ಮನೆ ಖರ್ಚು ಎಲ್ಲ ನಿಭಾಯಿಸಬೇಕು. ಮಾಲ್ಪ್ರಾಕ್ಟೀಸ್ ಕೇಸ್ ಒಂದಾದರೂ ಸಾಕು, ಲಾಯರ್ ಆಫೀಸಿಗೆ, ಕೋರ್ಟಿಗೆ ಓಡಾಟ, ಅವಮಾನ, ರೋಗಿಯ ಪರ ತೀರ್ಪುಬಂದರೆ, ಒಂದಕ್ಕೆರಡರಷ್ಟಾಗುವ ಪ್ರೀಮಿಯಮ್, ಪ್ರಾಕ್ಟೀಸ್’ಗಾಗುವ ಹಾನಿ, ಅಲ್ಲಿ ನಿರಪರಾಧಿ ಎಂದು ಸಾಬೀತಾದರೂ ಕೂಡ, ಕೇಸಿನಲ್ಲಿ ತನ್ನ ಹೆಸರು ಬಂದಿದ್ದೇ ಒಂದು ಕಳಂಕ ಮತ್ತು ಪ್ರೀಮಿಯಂ ಏರಿಕೆ.... ಆಸ್ಪತ್ರೆಯಲ್ಲಿ ಕೆಲಸಗಳನ್ನು ಮುಗಿಸಿ ಡಾ. ಶಶಿಧರ ಎರಡು ಗಂಟೆಗೆ ಮನೆಗೆ ಬಂದು ಊಟ ಮುಗಿಸಿ ಸುಧಾರಿಸಿಕೊಂಡು, ಮೂರೂವರೆ ಗಂಟೆಗೆ ಕ್ಲಿನಿಕ್’ಗೆ ಹೊರಟ.
ಕ್ಲಿನಿಕ್’ನ ವೈಟಿಂಗ್ ರೂಮಿನ ಮೂಲಕ ತನ್ನ ಚೇಂಬರ್’ಗೆ ಹೋಗುವಾಗ, ಆಗಲೇ ಬಂದು ಕುಳಿತಿದ್ದ ಸುಮಾರು ಮುವತ್ತು ವರ್ಷದ ಸುಂದರವಾಗಿದ್ದ ಹೆಂಗಸನ್ನು ನೋಡಿ, ಇವಳೇ ಮಿಸರ್ಸ್. ಕ್ರಾಂಪ್ಟನ್ ಇರಬೇಕು ಎಂದು ಊಹಿಸಿದ. ಹಾಗೆಯೇ ಅವಳ ಕೈಗಳನ್ನು ನೋಡಿದ. ಡಿಸೆಂಬರ್ ತಿಂಗಳಾಗಿದ್ದರಿಂದ ಗ್ಲವ್ಸ್ ಹಾಕಿದ್ದಳು. ಬೆರಳುಗಳನ್ನು ನೋಡಲು ಆಗಲಿಲ್ಲ. ತನ್ನ ಚೇಂಬರ್’ಗೆ ಬಂದು ‘ದೊಪ್’ ಎಂದು ಕುರ್ಚಿಯೊಳಗೆ ಕುಸಿದ. ಸೆಕ್ರೆಟರಿ ಜಾನೆಟ್ ಒಂದು ಕಪ್ ಕಾಫಿ ತಂದು
“ಡಾಕ್ಟರ್, ನಿಮಗೇನಾಗಿದೆ ಇವತ್ತು ಹೀಗೇಕೆ ಕುಸಿದಿದ್ದೀರಿ” ಎಂದಳು.
“ಏನಿಲ್ಲ. ಸ್ವಲ್ಪ ತಲೆನೋವು ಅಷ್ಟೆ. ಯಾರಲ್ಲಿ ಬಂದಿರುವವರು?”
“ಮಿಸರ್ಸ್. ಕ್ಯಾರೆನ್ ಕ್ರಾಂಪ್ಟನ್. ಅವಳಾಗಲೆ ಬಂದು ಹತ್ತು ನಿಮಿಷವಾಯ್ತು.”
“ಸರಿ. ಒಳಗೆ ಕಳಿಸು.”
“ಅವಳ ಅಪಾಯಿಂಟ್ಮೆಂಟ್ ನಾಲಕ್ಕೂ ಕಾಲಿಗೆ. ಮೊದಲನೆ ಪೇಶಂಟ್ ಇನ್ನೂ ಬಂದಿಲ್ಲ. ಹತ್ತು ನಿಮಿಷ ಸುಧಾರಿಸಿಕೊಳ್ಳಿ.”
“ಪರವಾಗಿಲ್ಲ. ಅವಳನ್ನು ಒಳಗೆ ಕಳಿಸು.”
ಮಿಸರ್ಸ್. ಕ್ರಾಂಪ್ಟನ್ ಒಳಗೆ ಬಂದು “ಹೆಲೋ. ಡಾಕ್ಟರ್, ಹೌ ಆರ್ ಯು?” ಎಂದು ಒಂದು ಮಾರಕ ನಗೆಯನ್ನು ಬೀರಿದಳು.
ಅವಳಷ್ಟೇ ಸುಂದರವಾಗಿದ್ದ ಅವಳ ಕೋಕಿಲ ವಾಣಿ ಈ ಸಂದರ್ಭದಲ್ಲಿ ಶೂಲದಿಂದ ಇರಿಯುವಂತಿತ್ತು. ಇನ್ನೇನು ಎರಡೇ ನಿಮಿಷಗಳಲ್ಲಿ ಅವಳು ಗ್ಲವ್ಸ್ ತೆಗೆದು ನನ್ನ ಭವಿಷ್ಯಕ್ಕೇ ಮೃತ್ಯುಪ್ರಾಯವಾಗಿರಬಹುದಾದ, ಡೊಂಕಾಗಿರುವ ಅವಳ ತೋರುಬೆರಳನ್ನು ನನ್ನ ಮೂತಿಯೆದುರಿಗೆ ಹಿಡಿಯಬಹುದು, ಎಂದು ಸಂದರ್ಭವನ್ನು ಎದುರಿಸಲು ಸಿದ್ಧವಾದ.
“ಹೆಲೋ. ಮಿಸರ್ಸ್. ಕ್ರಾಂಪ್ಟನ್. ಹೇಗಿದ್ದೀರ. ನಿಮ್ಮ ಬೆರಳಿನ ವಿಷಯ ಹೇಳಿದ್ದಿರಿ. ಈಗ ಹೇಗಿದೆ? ಏನಾದರು ತೊಂದರೆಯಿದೆಯೇ?”
ಗ್ಲವ್ಸ್ ನ ತೆಗೆಯುತ್ತ ಹೇಳಿದಳು
“ಮೈ. ಫಿಂಗರ್ ಈಸ್ ಫೈನ್ ಡಾಕ್ಟರ್.”
ಗ್ಲವ್ಸ್ ಕಳಚಿ ಕೋಮಲವಾಗಿ ನೀಳವಾಗಿದ್ದ ತನ್ನ ಬಲ ಹಸ್ತದ ತೋರು ಬೆರಳನ್ನು ನೀಡಿದಳು.
ಡಾ. ಶಶಿಧರ್’ಗೆ ಬೆಟ್ಟವನ್ನು ತಲೆಯ ಮೇಲಿಂದ ಇಳಿಸಿದಂತಾಗಿ ಮನಸ್ಸು ಮತ್ತು ಮೈ ಹಗುರವಾಗಿ, ಒಂದೇ ಕ್ಷಣದಲ್ಲಿ ಅವನ ಶಕ್ತಿಯೆಲ್ಲಾ ಹಿಂದುರಿಗಿ ಬಂದಂತಾಯಿತು.
“ಡಾಕ್ಟರ್. ಜಜ್ಜಿಹೋಗಿದ್ದ ನನ್ನ ಈ ಬೆರಳಿಗೆ ನೀವು ಎಷ್ಟು ಚೆನ್ನಾಗಿ ಸರ್ಜೆರಿ ಮಾಡಿದಿರೆಂದರೆ, ಈಗ ಯಾವ ಬೆರಳಿಗೆ ಗಾಯವಾಗಿತ್ತು ಎಂತ ಹೇಳುವುದೇ ಅಸಾಧ್ಯ. ಗಾಯದ ಗುರುತು ಕೂಡ ಕಂಡರೂ ಕಾಣಿಸದಂತಿದೆ. ನಿಮಗೆ ಎಷ್ಟು ವಂದಿಸಿದರೂ ಸಾಲದು. ನಿಮಗೆ ಕೃತಜ್ಞತೆ ಹೇಳಬೇಕೆಂದು ಎಷ್ಟೋ ಸಲ ಅನ್ನಿಸಿತ್ತು. ಆದರೆ ಆಗಿರಲಿಲ್ಲ. ಹೋದ ತಿಂಗಳು ನಾನು ಇಂಗ್ಲೆಂಡಿಗೆ ಹೋಗಿದ್ದಾಗ ಒಂದು ವೆಡ್ಜ್ ವುಡ್ ಕಲೆಕ್ಟರ್ ಎಡಿಶನ್ ಅಂತ ಮಾಡಿದ್ದ ಒಂದು ವಸ್ತುವನ್ನು ನೋಡಿದೆ. ನಾನೊಂದನ್ನು ಕೊಂಡುಕೊಂಡೆ. ನಿಮ್ಮ ನೆನಪು ಬಂದು ನಿಮಗೂ ಒಂದನ್ನು ಗಿಫ್ಟ್ ಅಂತ ತಂದಿದ್ದೀನಿ.”
ತನ್ನ ಕೈಚೀಲದಿಂದ ಗಿಫ್ಟ್ ರ‍್ಯಾಪ್ ಮಾಡಿದ್ದ ಒಂದು ಪೆಟ್ಟಿಗೆಯನ್ನು ತೆಗೆದು ಕೊಟ್ಟಳು. ಅದನ್ನು ಅವಳೆದುರಿಗೇ ತೆಗೆದು ನೋಡಲು ಹೇಳಿದಳು. ಅದರಲ್ಲಿದ್ದುದು ಒಂದು ಸುಂದರವಾದ ಹೃದಯದ ಆಕಾರದ ಕ್ಯಾಂಡಿ ಬಾಕ್ಸ್! ಅದರಲ್ಲಿ ಅತ್ಯುತ್ತಮವಾದ ಇಂಗ್ಲಂಡಿನ ಚಾಕೊಲೇಟ್’ಗಳು.
“ಥ್ಯಾಂಕ್ ಯು ವೆರಿ ಮಚ್.” ಎಂದು ಶಶಿಧರ್ ಉದ್ಗರಿಸಿದ.