ಅಮೆರಿಕನ್ನಡ
Amerikannada
ಚಂದ್ರಶೇಖರ ಕಂಬಾರ ಒಂದು ವಿವೇಚನೆ
-ಶಿಕಾರಿಪುರ ಹರಿಹರೇಶ್ವರ
“ಮಳೆಯಾಗಿ ಬಿದ್ದವನೆ, ಸ್ವಾಮಿ,
ಬೆಳೆಯಾಗಿ ಎದ್ದವನೆ,
ಎಳಿ ನಗಿ ನಕ್ಕವನೆ, ಬೇಲಿ ಹೂವಿನೊಳಗೆ ... ...”

ಎಂದು ಪ್ರಾರಂಭವಾಗುವ ಚಂದ್ರಶೇಖರ ಕಂಬಾರರ ನಾಟಕ “ಜೋಕುಮಾರಸ್ವಾಮಿ”ಗೆ ಮೇಳದವರ ನಗೆಯಾಟದ ಮಾತುಗಳೇ ನಾಂದಿಯಾಗುತ್ತದೆ.
ಹಾಗೆ ನೋಡಿದರೆ, ನಗೆಯಾಟದ ಹಾಡು, ಕುಣಿತ, ವೇಷ, ಮಾತುಗಳ ಪ್ರಾರಂಭ ಪ್ರೇಕ್ಷಕರಿಗೆ ಎಷ್ಟು ಮೋಡಿ ಮಾಡಬಹುದು ಎಂಬುದು ನಾಟಕಕಾರ ಕಂಬಾರರಿಗೆ ಗೊತ್ತು. ಉದಾಹರಣೆಗೆ, ಅವರ ಒಂದು ಮಕ್ಕಳ ನಾಟಕ “ಅಲೀಬಾಬಾ ಮತ್ತು ನಲವತ್ತು ಕಳ್ಳ”ರನ್ನು ನೋಡಿ:
ಅಲ್ಲಿ ಪ್ರಾರಂಭದಲ್ಲಿ, ಗಣೇಶನ ವೇಷಧಾರಿ ಒಂದು ಮಗು ರ೦ಗದ ಮೇಲೆ ಮೊದಲು ಓಡಿ ಬರುತ್ತದೆ. ಮೇಳದವರು ಕುಣಿಯುತ್ತಾ, ಹಾಡುತ್ತಾ ಬರುತ್ತಾರೆ:
“ಶ್ರೀ ಗಜವದನಾ
ಗಿರಿಜಾನಂದನ
ಸ್ವೀಕರಿಸಯ್ಯಾ ಸಾವಿರ ನಮನ ... ...
ಭದ್ರಾಕೃತಿಯವನೆ
ಜೋಕಿಲಿ ಕುಳಿತವನೆ
ಜೋಕೆ ತಪ್ಪದ ಮಾತು ದಯಪಾಲಿಸಣ್ಣ
ಕಲಿಸಿದ ಗುರುವರ್ಯ
ಭೂಸನೂರು ಮಠದಯ್ಯ
ಸಾವಳಿಗಿ ಶಿವನಿಂಗ
ಘೊಡಗೇರಿ ಗಜನಿಂಗ
ಇಂತಿಂಥಾ ಸಂತರ ಮಾತಾಗಿ ಬಂದವನೆ
ತಪ್ಪಿದ ಪದ ಒಪ್ಪಿ ಅಪ್ಪಿಕೊಂಬ೦ಥವನೆ
ಮತಿವಂತ ಮಂದೀಯ ವಿದ್ಯೆಗೆ ಅಧಿಕಾರಿ
ಅಹಂಕಾರ ಪಡುವಂಥ ಹುಂಬರ ಕಡುವೈರಿ
ಸ್ವೀಕರಿಸಯ್ಯ ಸಾವಿರ ನಮನ ”

ನೋಡಿ, ಎಷ್ಟು ಚೆನ್ನಾಗಿ ಗಣಪತಿಯನ್ನ ಬಣ್ಣಿಸಿದ್ದಾರೆ, ಮಕ್ಕಳಿಗೂ ಅರ್ಥವಾಗುವ ಹಾಗೆ. ಈಗ ಬಲು ದೊಡ್ಡ ಪದವಿಗೆ ಏರಿ, ಸಹಸ್ರಾರು ವಿದ್ಯಾರ್ಥಿಗಳ ಪ್ರಾಚಾರ್ಯ, ಕುಲಪತಿ- ಹೀಗೆ ಏನೇನೋ ಆಗಿರಬಹುದು, ಆದರೂ ಚಿಕ್ಕಂದಿನಲ್ಲಿ ಅ ಆ ಇ ಈ ಕಲಿಸಿದ, ಮುಂದಿನದ ಎಲ್ಲಕ್ಕೂ ಬುನಾದಿ ಹಾಕಿದ ಆ ಪ್ರಾಥಮಿಕ ಶಾಲೆಯ ಮಾಸ್ತರುಗಳನ್ನು ಕವಿ, ನಾಟಕಕಾರ ಮರೆಯುವುದಿಲ್ಲ, ಆ ಗುರುಗಳ, ಸಂತರ ಮಾತೇ ನೀನಪ್ಪ - ಎಂದು, ವಿನಯಪೂರ್ವಕವಾಗಿ ನೆನೆಯುತ್ತಾರೆ, ಕಂಬಾರರು. ವಿನಯ ಕಂಬಾರರ ಹುಟ್ಟುಗುಣ. ಇರಲಿ, ಮಾತು ಎಲ್ಲಿ ಎಲ್ಲಿಗೋ ಹೋಯಿತು.
“ಅಲಿಬಾಬಾ” ನಾಟಕದಲ್ಲಿ ಗಣೇಶನನ್ನ ಅದು ಹೇಗೆ ತಂದರು, ಏನು ಸಂಬಂಧ ?- ಎಂದು ನೀವು ಆಶ್ಚರ್ಯ ಪಡಬಹುದು. ಅದಕ್ಕೆ ಉತ್ತರವನ್ನೂ ಕಂಬಾರರೇ ಕೊಟ್ಟುಬಿಟ್ಟಿದ್ದಾರೆ. ಮೇಳದವರ ಹಾಡು, ಕುಣಿತವಾದ ಮೇಲೆ, ಸೂತ್ರಧಾರ ಪ್ರವೇಶಿಸಿ, ಸಭಿಕರನ್ನ ಉದ್ದೇಶಿಸಿ ಹೇಳುತ್ತಾನೆ:
“ಬಾಲಕ ಬಾಲಕಿಯರೇ, ಮತ್ತು ಪಾಲಕರೇ, ನಾವು ಓದೋ ಮಕ್ಕಳು ನಾಟಕ ಆಡತೀವಿ. ನಾಟಕದ ಹೆಸರು ‘ಅಲಿಬಾಬಾ ಮತ್ತು ನಲವತ್ತು ಕಳ್ಳರು’ ಅಂತ. ನಾಟಕದ ಪ್ರಾರಂಭದಲ್ಲಿ ಗಣೇಶನ ಪೂಜೆ ಮಾಡಬೇಕು. ಇದೇನಪ್ಪಾ, ಅಲ್ಲಾನ ಊರಲ್ಲಿ ಕಲ್ಲಯ್ಯ೦ದು ಏನು? ಅಂದಂತೆ, ಮುಸ್ಲಿಮರ ಕಥೇಲಿ ಗಣೇಶನ ಪೂಜೆ ಯಾಕೆ ಅಂತ ಗಲಾಟೆ ಮಾಡಬೇಡಿ. ನಿಮ್ಮ ಗಲಾಟೆ ಎಂಬ ವಿಘ್ನ ದೂರ ಮಾಡೋದಕ್ಕೇ ನಾವು ಗಣೇಶನ ಪೂಜೆ ಮಾಡ್ತಾ ಇರೋದು.
ಇದು ಹೇಳಿ ಕೇಳಿ ಕಳ್ಳರ ಕಥೆ. ಗಣೇಶ ಶಿಷ್ಟ-ಪಾಲಕ, ದುಷ್ಟ-ಶಿಕ್ಷಕ. ಅಂದರೆ, ಶಿಷ್ಟರಿಗೆ ಪಾಲಕ ಅಂದರೆ, ಪೇರೆಂಟ್ ಥರ, ದುಷ್ಟರಿಗೆ ಶಿಕ್ಷಕ ಅಂದರೆ ಟೀಚರ್ ಥರ, ಟೀಚರೋಪಾದಿಯಲ್ಲೂ ಇರತಕ್ಕವನು. ಅದಕ್ಕೇ ಪ್ರಾರಂಭದಲ್ಲಿ ಅವನ ಪೂಜೆ ಮಾಡಿ, ನಾಟಕ ಸುರು ಮಾಡ್ತೀವಿ.”-ಎನ್ನುತ್ತಾನೆ.
ನಾನೂನು, ಅದೇ ರೀತಿ, ಗಣೇಶನ ಮಾತು ಮೊದಲು ಹೇಳಿಯೇ, ಮುಂದೆ ಮಾತನಾಡ್ತೇನೆ.
ಈಗ “ಜೋಕುಮಾರಸ್ವಾಮಿ” ನಾಟಕದ ಕಡೆಗೆ ಬರೋಣ. ೧೯೭೫ರ ಭಾರತೀಯ ಭಾಷೆಯ ಅತ್ಯುತ್ತಮ ನಾಟಕ ಎಂದು “ಕಮಲಾದೇವಿ ಚಟ್ಟೋಪಾಧ್ಯಾಯ” ಬಹುಮಾನ, ಇನ್ನೂ ಅನೇಕ ಪ್ರಶಸ್ತಿಗಳನ್ನ ಪಡೆದ ನಾಟಕ ಇದು. ವರ್ಧಮಾನ ಪ್ರಶಸ್ತಿ ಪಡೆದ “ಜೈಸಿದನಾಯ್ಕ” ಆಮೇಲೆ ಬಂತು. ಇರಲಿ.
ನಾಟಕದ ನೆಲಗಟ್ಟು ಏನು?
ಕಂಬಾರರ ಮೊದಲ ನಾಟಕ “ಋಷ್ಯಶೃಂಗ”. ಅದರಲ್ಲಿನ ಹಾಗೇನೇ “ಜೋಕುಮಾರಸ್ವಾಮಿ” ಯಲ್ಲೂ ಜಾನಪದದ ಸಾರ, ಆಕಾರ, ನೇರ ವಿಚಾರ ಹೇಳೋ ವ್ಯಾಪಾರ - ಎಲ್ಲಾ ಇದೆ. ಹಾಗೆ ನೋಡಿದರೆ, ಜಗತ್ತಿನ ಎಲ್ಲಾ ಜಾನಪದದ ಫೋಕ್‌ಲೋರ್‌ನ ಕಾವ್ಯಗಳ ಒಳ ತಿರುಳು ಏನು? ಒಳ್ಳೆಯದು ಮತ್ತು ಕೆಟ್ಟದರ ಸಂಘರ್ಷ. ಶಕ್ತಿ ಮತ್ತು ಪ್ರತಿಶಕ್ತಿಗಳ ಸಮರ. ಮೊದ ಮೊದಲು ಕೆಟ್ಟದ್ದೇ ಗೆದ್ದಿತೇನೋ ಎಂದು ಭಾಸವಾದರೂ, ಕೊನೆಗೆ ಗೆಲ್ಲುವುದು ಯಾವುದು? ಸಾಮಾಜಿಕವಾಗಿ, ಎಲ್ಲರೂ ಯಾವುದನ್ನ ಒಳ್ಳೆಯದು ಎಂದು ಒಪ್ಪಿಕೊಂಡಿದ್ದಾರೋ, ಅದೇ! ಇಲ್ಲೂ ಆಗುವುದು ಅದೇನೇ.
ಬೆಳಗಾವಿ ಜಿಲ್ಲೆಯ ಘೊಡಗೇರಿಯಲ್ಲಿ, ಬಸವಣ್ಣೆಪ್ಪ ರಾಮಪ್ಪ ಕಂಬಾರ ಮತ್ತು ಚೆನ್ನವ್ವ ಅವರ ಮಗನಾಗಿ ಜನಿಸಿದ ಚಂದ್ರಶೇಖರ ಕಂಬಾರರಿಗೆ ಜಾನಪದ, ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜಾನಪದವೇ ಉಸಿರು, ಜೀವ. ಉತ್ತರ ಕರ್ನಾಟಕದ ಜಾನಪದ ರಂಗಭೂಮಿ ಇವರ ಸಂಶೋಧನಾ ಕ್ಷೇತ್ರ. “ಜಾನಪದ ವಿಶ್ವಕೋಶ”ದಂಥ ಬೃಹದ್ ಗ್ರ೦ಥ ಸಂಪುಟವನ್ನು ಕನ್ನಡದಲ್ಲಿ ಹೊರತ೦ದ ಕೀರ್ತಿ ಇವರದು. “ನಾರ್ಸಿಸಸ್” ಮತ್ತು “ಬೆಂಬತ್ತಿದ ಕಣ್ಣು” ಸಹ ಹೆಸರು ಮಾಡಿದ ಇವರ ನಾಟಕಗಳು.
ಕಾವ್ಯ ಪ್ರಕಾರದಲ್ಲಿ ಕಂಬಾರರ “ಹೇಳತೇನ ಕೇಳ”, “ಮುಗುಳು”, “ತಕರಾರಿನವರು” ಎಲ್ಲರ ಕಣ್ಣ ಸೆಳೆಯಿತು. ಮೊದಲ ಕಾದಂಬರಿ “ಕರಿಮಾಯಿ”. ಆಮೇಲೆ ಬಂತು, “ಸಿಂಗಾರವ್ವ ಮತ್ತು ಅರಮನೆ”. ಮೊದಲ ಕಾದಂಬರಿಯಲ್ಲಿ ಕಾಣುವ ಬೀಸು, ಘಟನೆಗಳ ಒಡಮೂಡಿಸುವ ಕಲೆ “ಸಿಂಗಾರವ್ವ”ನಲ್ಲೂ ಕಾಣುತ್ತೇವೆ. ಪಾತ್ರಗಳನ್ನು ಪರಿಣಾಮಕಾರಿಯಾಗಿ ಹುಟ್ಟಿಸಿ ಬೆಳಸುವ, ಓದುಗನ ಮೇಲೆ ಪ್ರಭಾವ ಬೀರುವ ರಸಪೋಷಣೆಯನ್ನು ಇಲ್ಲೂ ಕಾಣುತ್ತೇವೆ. ಅನುಭವವನ್ನು ಅದರ ಎಲ್ಲಾ ಆಳ- ಮಗ್ಗುಲುಗಳಲ್ಲಿ ನೋಡಿ ಬೆಲೆ ಕಟ್ಟುವುದು ಒಂದು ಅಸಮಾನ್ಯ ಕಲೆ. ಕಂಬಾರರು ತಮ್ಮ ಕಾದಂಬರಿಗಳಲ್ಲಿ ಇದನ್ನು ಸಾಧಿಸಿದ್ದಾರೆ.
ಹಳೆಯ ಮೌಲ್ಯಗಳನ್ನ ಒತ್ತರಿಸಿಕೊಂಡು ಹೊಸ ಮೌಲ್ಯಗಳು ಹೇಗೆ ಹುಟ್ಟಿಯಾವು ಎಂಬುದನ್ನ, ಹೊಸನೀರು ಹಳೆಯ ನೀರನ್ನು ಹೇಗೆ ಕೊಚ್ಚಿಕೊಂಡು ಹೋಗಬಲ್ಲದು ಎಂದು, ಕಂಬಾರರು ವಿವೇಚಿಸುತ್ತಾರೆ. ಅವರ ನಾಟಕಗಳಲ್ಲಿ, ಕಾದಂಬರಿಗಳಲ್ಲಿ, ಕಾವ್ಯದಲ್ಲಿ ಹೊಸತು- ಹಳತುಗಳ ಮಿಶ್ರಣ ರಸಮಿಶ್ರಣವಾಗಿ ಅಚ್ಚಳಿಯದ ಪರಿಣಾಮ ಓದುಗರ ಮೇಲೆ ಬೀರುತ್ತದೆ.
ಇದೇನೆ ಚಂದ್ರಶೇಖರ ಕಂಬಾರರು ಕೇಳುಗರ ಮೇಲೆ, ಓದುಗರ ಮೇಲೆ, ನೋಡುಗರ ಮೇಲೆ ಹಾಕುವ ಮೋಡಿ!