ಅಮೆರಿಕನ್ನಡ
Amerikannada
ಮಾತೃ ಬಂಧನದಿಂದ ಕುಮಾರನ ವಿಮೋಚನೆ
-ಜಯಂತಿ ಅಮೃತೇಶ್, ಮೈಸೂರು*
ಅದೋ ಅಲ್ಲಿ ನಿಂತಿದ್ದಾನೆ ನನ್ನ ಮಗ; ತಲೆಯಲ್ಲಿ ಪೊದರಿನಂತೆ ಬೆಳೆದಿರುವ ಕೂದಲಿನ ಜೊಂಪೆ ; ಕತ್ತಿನಲ್ಲಿ ಜೋತಾಡುತ್ತಿರುವ ಟೈ ನೊಂದಿಗೆ. “ಸರಿ, ನಾನು ಬಂದಿದ್ದೇನೆ” ಎನ್ನುತ್ತಾನೆ.
ಅವನು ಎಷ್ಟು ಸಮಯದವರೆಗೆ ಇಲ್ಲಿರಲು ಬಂದಿದ್ದಾನೆ ಎನ್ನುವ ವಿಷಯವನ್ನು ಕೇಳಬಾರದೆಂದು ನನಗೆ ಗೊತ್ತಿದೆ. ಆದುದರಿಂದ ನಾನವನಿಗೆ ಹೇಳುತ್ತೇನೆ. “ನೀನು ಯಾವ ಉಡುಪನ್ನು ಧರಿಸಿ ಹೋರಡುತ್ತೀಯೆಂದು ನಾನು ನೋಡಬೇಕು. ಏಕೆಂದರೆ ನೆನ್ನೆ ನೀನು ಧರಿಸಿದ ಉಡುಪು ಅತ್ಯಂತ ಕೊಳಕಾಗಿತ್ತು.” ಆಗ ಅವನು ತನ್ನ ಕಾತುರದ ನೋಟವನ್ನು ಅಲ್ಲೇ ಇರುವ ತನ್ನ ಸ್ನೇಹಿತರ ಗುಂಪಿನತ್ತ ಹರಿಸುತ್ತಾನೆ. ಅವರೆಲ್ಲರೂ ತಲೆಯನ್ನು ಕೆಳಗಡೆಗೆ ಜೋತುಹಾಕಿಕೊಂಡು ಈ ಮಾತುಗಳನ್ನೂ, ಮ್ಯಾಥ್ಯೂಗೆ ಅತ್ಯಂತ ನೋವುಂಟುಮಾಡುತ್ತಿರುವ ಈ ಸಂಸ್ಕಾರವನ್ನೂ ತಾವು ನೋಡಿಯೇ ಇಲ್ಲವೇನೋ ಎಂಬಂತೆ ಅಡುಗೆ ಕೋಣೆಯಲ್ಲಿ ಅಲ್ಲಿಂದಿಲ್ಲಿಗೆ ಓಡಿಯಾಡುತ್ತಿದ್ದಾರೆ.
ಅವನು ರಾತ್ರಿಯೂಟಕ್ಕೆ ಮನೆಗೆ ಬರುವುದಿಲ್ಲವೆಂದು ಹೇಳುತ್ತಾನೆ. ಆಗ ನಾನು, “ನೀನು ರಾತ್ರಿಯನ್ನು ಎಲ್ಲಿ ಕಳೆಯುತ್ತೀಯ ಎನ್ನುವುದನ್ನು ದೂರವಾಣಿಯ ಮೂಲಕ ತಿಳಿಸಲು ಮರೆಯಬೇಡ. ಈ ಸಲ ನೀನಿದನ್ನು ಮರೆತರೆ ಏನಾಗಬಹುದೆಂದು ನಿನಗೆ ಗೊತ್ತುಂಟೋ? ಈ ಮಾತು ಈಗ ನಿರ್ಧಾರವಾದಂತೆ.” ಎನ್ನುತ್ತೇನೆ. ಅವನು ನನ್ನ ಕಡೆಗೆ ಕರುಣಾಜನಕ ದೃಷ್ಟಿಯಿಂದ ದಿಟ್ಟಿಸಿದ. ಒಬ್ಬ ವೈದ್ಯನು ರೋಗಿಗೆ ನಿಜ ಸಂಗತಿಯನ್ನು ತಿಳಿಸಿದಾಗ ಅದೇ ಕ್ಷಣ ಅವನು ಸಾಯಬಹುದೇನೋ ಎನ್ನುವ ಹಾಗೆ ದಿಟ್ಟಿಸಿದ. ಆದರೆ ನನಗೆ ನಿಶ್ಚಯವಾಗಿ ತಿಳಿದದ್ದು ಇದು. ನನ್ನ ಮಗನ ಮೇಲಿನ ಹಿಡಿತವನ್ನು ನಾನು ಕಳೆದುಕೊಂಡಿದ್ದೇನೆ ಎನ್ನುವುದು !
ಕೆಲವರು ಇದನ್ನು ಹೋದರೆ ಹೋಗಲಿ ಬಿಡಿ, ಎನ್ನುತ್ತಾರೆ. ಆದರೆ ಇದು ತಮಗೇ ಅನ್ವಯಿಸಿದಾಗ ಮಾತ್ರ ಅದರ ಒಳಗಿನ ವಿಷಯ ಅರ್ಥವಾಗಬಲ್ಲವು. ಅವನಿಗೆ ೧೪ ಅಥವಾ ೧೫ ವರ್ಷಗಳಾಗುವವರೆಗೂ ನಾನು ಎಲ್ಲಿಗೂ ಹೋಗಿಲ್ಲ. ಒಂದು ನಿಮಿಷವೂ ಬಿಡದೇ ಅವನನ್ನು ಗಮನಿಸುತ್ತಾ ಬಂದಿದ್ದೇನೆ. ಸ್ನಾನದ ಕೋಣೆಯಲ್ಲಿ ಜಾರಿ ಬೀಳುವನೇನೋ ಎನ್ನುವ ಶಂಕೆ, ಶಾಲಾ ಮೈದಾನದಲ್ಲಿ, ಅಂಗಡಿಬೀದಿಗಳಲ್ಲಿ ಅವನನ್ನು ಯಾರಾದರೂ ಅಪಹರಣ ಮಾಡಬಹುದೇನೋ ಎನ್ನುವ ಹೆದರಿಕೆ, ದೂರದರ್ಶನ ಹೆಚ್ಚು ಹೆಚ್ಚು ವೀಕ್ಷಿಸಿದರೆ ಅವ ಮನಸ್ಸು ಎಲ್ಲಿ ಹಾಳಾಗಿ ಹೋಗುವುದೋ ಎನ್ನುವ ಆತಂಕ ಹೀಗೆ ಇದ್ದವು ನನ್ನ ಆಲೋಚನೆಗಳು.
ರಸ್ತೆಯ ಒಂದು ಬದಿಯಲ್ಲಿ ನಾವು ವಾಸವಾಗಿದ್ದೇವೆ. ಅವನ ಸಹಪಾಠಿಗಳೆಲ್ಲ ಮತ್ತೊಂದು ಬದಿಯಲ್ಲಿದ್ದಾರೆ. ಅವನ ಸಾಮಾಜಿಕ ಪ್ರಜ್ಞೆಗಳಿಗೆಲ್ಲ ನಾವೇ ಹೊಣೆಗಾರರು. ಕೇವಲ ಎರಡು ವರ್ಷಗಳ ಹಿಂದೆ ಮಾತ್ರ ಅವನನ್ನು ಒಂಟಿಯಾಗಿ ರಸ್ತೆ ದಾಟಲು ಅನುಮತಿ ಕೊಟ್ಟಿತ್ತು. ಅವನ ಜೀವಕ್ಕೆ ಅವನೇ ಹೊಣೆಗಾರನೆಂಬುದನ್ನು ನಾವು ಒಪ್ಪಿಕೊಳ್ಳಬೇಕೇನೋ ಹೌದು. ಆದರೆ ಅವನು ತನ್ನ ಸಮವಯಸ್ಕರಂತೆ ರಸ್ತೆ ದಾಟುವಾಗ ಎರಡೂ ಪಾರ್ಶ್ವಗಳನ್ನು ನೋಡುವುದೇ ಇಲ್ಲ. ತಾನು ಅಮರನೆಂದು ಅಂದುಕೊಂಡಿದ್ದಾನೆ.
ಅವನು ಹೇಳುವ ವಾಸ್ತವಿಕ ಪ್ರಪಂಚದ ತತ್ವವನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಅವನಿಗೆ ಗೊತ್ತಿದೆ. “ಅಮ್ಮ, ನೀನು ಯೋಚಿಸಬೇಡ. ನಿನಗೆ ಸಂತೋಷವಾಗುವುದಾದರೆ ನಾನು ಫೋನಿನ ಮೂಲಕ ತಿಳಿಸುವೆನು” ಎನ್ನುತ್ತಾನೆ.
ಅವನು ಹೇಳಿದ್ದು ಸರಿ. ನನಗೆ ಕಿರುಚಿಕೊಳ್ಳಬೇಕು ಎನ್ನಿಸುತ್ತದೆ. ನನ್ನ ತಂದೆ ತಾಯಿಯರು ನನ್ನ ಭದ್ರತೆಯ ಬಗ್ಗೆ ಕಾಳಜಿ ವಹಿಸಿದಾಗ ನಾನು ಅವರ ಕಡೆಗೆ ತಿರಸ್ಕಾರದ, ಅವಹೇಳನದ ನಗೆ ನಕ್ಕಿದ್ದೆ. ಇವನು ಏಕೆ ಹಾಗೆ ಮಾಡಲಿಲ್ಲ? ನಾನು ಹೇಳಿದ ಹಾಗೆ ಸುಳ್ಳು ಹೇಳುವುದಾದರೆ ಹೇಳು, ಆದರೆ ನಿಜವನ್ನೇ ಹೇಳಿ ನನ್ನ ಧೃತಿಗೆಡಿಸಬೇಡ?
ಈಗಾಗಲೇ ನಾನು ಭಾನುವಾರದ ರಾತ್ರಿಯ ಹಸ್ತಪ್ರತಿ ಬರೆಯಬಲ್ಲೆ. “ಎಂತಹ ನೀರಸವಾದ ರಜೆಯದಿನ” ಎನ್ನುವನು. ಹೊಸತೇನೂ ಇಲ್ಲವೇ ಇಲ್ಲ ಎಂದು ಹೇಳುವನು. ಇದಾದಮೇಲೆ ಒಬ್ಬ ಸ್ನೆಹಿತನು ಅತಿಯಾದ ಮಾದಕ ಪಾನೀಯಗಳ ಸೇವನೆಯಿಂದಾಗಿ ದವಾಖಾನೆಗೆ ಸೇರಿಸಲ್ಪಟ್ಟಿದ್ದು, ಒಬ್ಬ ಸ್ನೇಹಿತನು ಇವನ ತಲೆಯಮೇಲೆ ಮೂರನೇ ಮಹಡಿಯಿಂದ ಶಿರಸ್ತ್ರಾಣವನ್ನು ಕೊಲ್ಲಲು ಪ್ರಯತ್ನಿಸಿದ್ದು, ಮತ್ತೊಬ್ಬನು ರಸ್ತೆಯ ಕಂಬಗಳಿಗೆ ತನ್ನ ಕಾರನ್ನು ಗುದ್ದಿಸಿದ್ದು. . . ಇತ್ಯಾದಿ.
ನಾನು ಹೆದರಿಕೆಯಿಂದ ಚೀರಿದಾಗ ಮ್ಯಾಥ್ಯೂ ಹೇಳುವುದೇನೆಂದರೆ “ನೀನು ಏತಕ್ಕಾಗಿ ಗೊಣಗುತ್ತಿದ್ದೀಯೆಂದು ತಿಳಿಯದು. ನೀನೇ ಅಲ್ಲವೇ ನನಗೆ ಎಲ್ಲ ಸುದ್ದಿ ಸಮಾಚಾರಗಳನ್ನು ಮುಚ್ಚುಮರೆಯಿಲ್ಲದೇ ನೇರವಾಗಿ ತಿಳಿಸಬೇಕು ಎಂದು ಹೇಳಿದ್ದು” ಎನ್ನುತ್ತಾನೆ.
ಹೌದು ಹೇಳಿದ್ದೆ. ಯಾವಾಗ ಎಲ್ಲ ಸುದ್ದಿ ಸಮಾಚಾರಗಳೂ, ಒಪ್ಪಿಕೊಳ್ಳಲೇಬೇಕಾದಂತಹ ಮೆಚ್ಚುಗೆ, ಶ್ಲಾಘನೆಗಳಿಂದ ಕೂಡಿದಾಗ ಮಾತ್ರ ಎಂದು ಹೇಳಿದ್ದೆ. ಇದರಿಂದಲೇ ನಾನೀಗ ವಂಚಿತಳಾಗುತ್ತಿರಯವುದು. ಏನೂ ಅರಿಯದ ಒಂದು ಮುಗ್ಧ ಮಗುವಿನ ಪ್ರಪಂಚವನ್ನು ವಿವರಿಸಿ ತಿಳಿಸುವಾಗ ಆಗುವ ಸಂತೋಷವನ್ನು ಅನೇಕ ಸಲ ನಾವೇ ತಪ್ಪಿತಸ್ಥರಾಗುತ್ತೇವೆ. ಹೇಗೆಂದರೆ ಮರದ ರೆಂಬೆಗಳಲ್ಲಿದ್ದ ಮೊಗ್ಗುಗಳನ್ನು ತೋರಿಸಿ, ಅವು ಕೆಲವು ತಿಂಗಳುಗಳಾದ ಮೇಲೆ ಏನಾಗಿ ಬದಲಾವಣೆ ಹೊಂದಬಹುದು ಎನ್ನುವ ಅಂಶವನ್ನು ಮಕ್ಕಳ ಮಾತಿನಲ್ಲಿ ವರ್ಣಿಸುವಾಗ, ಮ್ಯಾಥ್ಯೂ, ನಾನು ದೇವರೇನೋ ಎಂಬಂತೆ ನನ್ನನ್ನು ನೋಡುತ್ತಿದ್ದ.
ಆಗಿನ ಕಾಲದಲ್ಲಿ ಮ್ಯಾಥ್ಯೂ ಒಂದು ಮಾತನ್ನು ಮಾತ್ರ ನಂಬುತ್ತಿರಲಿಲ್ಲ. ಅದೇನೆಂದರೆ, ತನ್ನ ತಾಯಿಯ ಹಿಂದೆಯೇ ಸುತ್ತುತ್ತಾ ಆಕೆಯ ಮಾತನ್ನೇ ನಂಬಿಕೊಂಡಿರಲೇಬೇಕಾಗಿಲ್ಲ ಎನ್ನುವ ಕಾಲವೂ ಬರುತ್ತದೆ ಎನ್ನುವುದನ್ನು. ತಾನು ಒಬ್ಬ ದೊಡ್ಡ ಮನುಷ್ಯನಾದಾಗ ಮಾಡುವ ಮೊದಲ ಕೆಲಸವೇನೆಂದರೆ ಅಮ್ಮನಿಗೆ ಸ್ನಾನದ ಕೋಣೆ ಶುಚಿಗೊಳಿಸಲು ಸಹಾಯ ಮಾಡುವುದು ಎಂದು ಹೇಳುತ್ತಿದ್ದ.
ಆದರೆ ಅದನ್ನು ಯಾವತ್ತೂ ಮಾಡಲಿಲ್ಲ. ಆದರೆ ನಾನು ಆಳುವ ತನಕವೂ ನನ್ನ ರಾಜ್ಯವು ಸ್ಥಿರವಾಗಿದ್ದಿದ್ದಕ್ಕೆ ನಾನು ಕೃತಜ್ಞಳಾಗಿರಬೇಕು. ಬಿರುಸಿನ ರಸ್ತೆ ಸಂಚಾರ ಮತ್ತು ಮಕ್ಕಳ ಅಪಹರಣಕಾರರು ಇಲ್ಲದಿದ್ದರೆ ಮ್ಯಾಥ್ಯೂನಿಗೆ ತನ್ನ ಪಕ್ಕದಲ್ಲಿ ಬೇರೊಂದು ಪ್ರಪಂಚ ಇದೆ ಎನ್ನುವುದೂ, ಅಲ್ಲಿ ಹಿರಿಯರ ಒಪ್ಪಿಗೆ ಇಲ್ಲದೆಯೇ ಜೀವಿಸಿರಬಹುದು ಎನ್ನುವ ವಿಷಯವೆಲ್ಲ ತಿಳಿದುಬಿಡುತ್ತಿತ್ತು.
ಆ ದಿನ ಹಿಮ ಕರಗಿದ ಆ ಕ್ಷಣ ನನಗೆ ಚೆನ್ನಾಗಿ ನೆನಪಿದೆ. ಇದು ನಡೆದದ್ದು ಆ ಚಿಕ್ಕ ಬೆಟ್ಟದ ಕಣಿವೆಯಲ್ಲಿ. ಅದನ್ನು ಹತ್ತುವುದು ನನ್ನ ಉದ್ದೇಶವೇನೂ ಆಗಿರಲಿಲ್ಲ. ನನಗೆ ಶಿಖರಗಳೆಂದರೆ ಹೆದರಿಕೆ; ಮ್ಯಾಥ್ಯೂನಿಗೂ ಅಷ್ಟೆ. ಆದರೆ ಅದು ಮೇಲಿನಿಂದ ಕೆಳಗಿನ ದೃಶ್ಯವನ್ನು ನೋಡುವವರೆಗೆ ಮಾತ್ರ. “ಅಮ್ಮಾ ಇದು ಎಷ್ಟು ಸುಂದರವಾಗಿದೆ? ನೀನೇಕೆ ನನಗೆ ಹೇಳಲೇ ಇಲ್ಲ?” ಎಂದು ಉದ್ಗರಿಸಿದ.
ಆ ದಿನದಿಂದ ಅವನು ಪರ್ವತಾರೊಹಣವನ್ನು ಮಾಡುತ್ತಲೇ ಇದ್ದಾನೆ. ನನಗೆ ತಿಳಿಯದ ಸಂಗೀತ, ನನಗೆ ಪರಿಚಯವಿಲ್ಲದ ಅವನ ಸ್ನೇಹಿತರು, ನನಗೆ ಅರ್ಥವಾಗದ ಭೌತಶಾಸ್ತ್ರ ಇವೆಲ್ಲದರ ಬಗ್ಗೆ ಮಾತನಾಡುತ್ತಾನೆ. ಈಗ ಪರಿಸ್ಥಿತಿ ತಿರುಗು ಮುರುಗಾಗಿದೆ. ಅವನು ಹೊರಗಡೆ ಸುತ್ತುತ್ತಾನೆ, ನಾನು ಒಳಗಿರುತ್ತೇನೆ.
ಹೊರಗಡೆ ಹೋಗುವಾಗ ಅವನು ನನ್ನೆದುರು ತಿರುಗುತ್ತಾ ತಾನು ಅದೇ ನೆನ್ನೆಯ ಅಸಹ್ಯಕರವಾದ ಅಂಗಿಯನ್ನು ಹಾಕಿಕೊಂಡಿದ್ದೇನೆಂದು ತೋರಿಸಿಯೇ ಹೋಗುತ್ತಾನೆ. ನಾನು ಅವನಿಗೆ ಅಚ್ಚುಕಟ್ಟುತನದ ಬಗ್ಗೆ ತಿಳಿಸಿಹೇಳಿ ಭಾಷಣ ಕೊಡುತ್ತಿದ್ದರೆ ಅವನ ಕಣ್ಣುಗಳು ಹೊಳೆಯುತ್ತಿರುತ್ತದೆ.
“ನೀನು ಬೇಸಗೆಯ ಉದ್ಯೋಗವನ್ನು ಮರೆತುಬಿಡು ತಿಳಿಯಿತೇನು? ನೀನು ಈ ತರಹ ಕಳ್ಳನಂತೆ ಕಾಣಿಸಿಕೊಂಡರೆ ಯಾರೂ ನಿನಗೆ ಕೆಲಸವನ್ನು ಕೊಡಲಾರರು” ಎಂದು ನಾನು ಹೇಳಿದಾಗ ಅವನು, “ಸರಿ ಅಮ್ಮಾ, ಹಾಗಾದರೆ ನಾನೀಗ ಹೋಗಲೇನು?” ಎನ್ನುತ್ತಾನಲ್ಲ!
“ಹೋಗು, ಖಂಡಿತ ಹೋಗು” ಎಂದು ನಾನು ಹೇಳುತ್ತೇನೆ. ಅವನು ತನ್ನ ಸ್ನೇಹಿತರೊಡಗೂಡಿ ಹೋಗುತ್ತಿರುವಾಗ- ನಾನು ಸುಮ್ಮನಿರುತ್ತೇನೆ. ಅಷ್ಟಲ್ಲದೇ ಅವ ಹಿಂದೆ ಓಡುತ್ತಾ, ಅಳುತ್ತಾ “ನೀನೇಕೆ ಸ್ನಾನದ ಕೋಣೆಯ ಬಗ್ಗೆ ನನಗೆ ಸುಳ್ಳು ಹೇಳಿದೆ?” ಎಂದು ಚೀರಲು ಸಾಧ್ಯವೇನು?
೨೦೦೦ದ ಜೂನ್ ತಿಂಗಳ ರೀಡರ‍್ಸ್ ಡೈಜೆಸ್ಟ್ ನಲ್ಲಿ ಪ್ರಕಟವಾದ ಮಾರೀನ್ ಫ್ರೀಲೇಯವರ “Independence day- for my son” ಎನ್ನುವ ಲೇಖನದ ಭಾವಾನುವಾದ.
*-ಜಯಂತಿ ಅಮೃತೇಶ್
‘ಕೃತ್ತಿಕ’, ನಂ. 40, 6ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು 570 009
(0821) 2543472
08453 12952
email: jayanthiamrutesh@gmail.com