ಅಮೆರಿಕನ್ನಡ
Amerikannada
ಅನುದಿನವೂ ಹೊಸತಿನೆಡೆಗೆ
-ನಾಗಲಕ್ಷ್ಮೀ ಹರಿಹರೇಶ್ವರ
ನಾವು ಬೆಳಿಗ್ಗೆ ಎದ್ದ ಕೂಡಲೇ ಹಲ್ಲು ಉಜ್ಜಿ ಮುಖ ತೊಳೆದುಕೊಂಡು, ರೇಡಿಯೋ ಕೇಳ್ತೀವಿ. ಟಿ.ವಿ. ನೋಡ್ತೀವಿ, ಸಮಾಚಾರ ಪತ್ರಿಕೆ ಓದ್ತೀವಿ. ಏಕೆ೦ದರೆ “ಹೊಸದಾಗಿ ಏನು ನಡೆಯಿತು” ಅ೦ತ ತಿಳಿದುಕೊಳ್ಳೋಕೆ. ಮನುಷ್ಯನ ಸಹಜ ಸ್ವಭಾವ ಏನೆ೦ದರೆ- ಹೊಸತನ್ನ ಹುಡುಕುವುದು. ಹೊಸತನ್ನ ನೋಡಿ ಖುಷಿ ಪಡೋದು. ಹಳೆಯದರ ಜಾಗದಲ್ಲಿ ಹೊಸತು ಮೂಡುತ್ತಲೇ ಇರಬೇಕು. ಅದೇ ಸೊಗಸು, ಅದೇ ಸೊಬಗು.
ನಮ್ಮ ಸುತ್ತ ಮುತ್ತಣ ಪ್ರಕೃತಿಯ ಕಡೆ ಕಣ್ಣು ಹಾಯಿಸೋಣ: “ಅದು ದಿನ ದಿನವೂ ಬದಲಾವಣೆ ಹೊ೦ದುತ್ತಲೇ ಇರುತ್ತದೆ; ನಿಸರ್ಗ ಹೇಳಿ ಕೇಳಿ, ನವ-ನವೋನ್ಮೇಷಶಾಲಿನಿ! ನಿಚ್ಚಂ ಪೊಸತು! ಹಳೆ ಬೇರು, ಹೊಸ ಚಿಗುರು ಮೂಡಿರಲು ಮರ ಸೊಬಗು.” ಸಸಿ, ಗಿಡ, ಮರ, ಹೂವು, ಹಣ್ಣು, ಬೀಜ; ಮತ್ತೆ ಸಸಿ- ಹೀಗೆ ಬೆಳವಣಿಗೆ ಮತ್ತು ನವೀಕರಣ! ಆಕಾಶವನ್ನೇ ನೋಡಿ, ಒಂದು ರಾತ್ರಿ ಇದ್ದಹಾಗೆ ಇನ್ನೊಂದಿಲ್ಲ, ಅನುದಿನವೂ ಬದಲಾಗುವ ಚಂದ್ರನೊಂದಿಗೆ ತಾರೆಗಳು ನೇಯುವ ಹೊಸ ಜಾಲಗಳ ನೀಲಪಟ. “ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ”- ಅಂತ ಯುಗಾದಿ ಮರಳಿ ಬಂದಾಗ, ಹಾಡಿದಾಗಲೂ ಅಷ್ಟೆ, ಮತ್ತೆ ಮತ್ತೆ ಹೊಸತೇ ಬೇಕು, ಇದೇ ಪ್ರಕೃತಿಯ ನಿಯಮ.
ಮಾನಸಿಕವಾಗಿ ಬೆಳೆಯುವ ಮನುಷ್ಯ ದಿನವೂ ಕನಸು ಕಾಣ್ತಾನೆ. ಹೊಸದನ್ನ ಕ೦ಡು ಹಿಡಿದು ಹೊಸದನ್ನ ಸಾಧಿಸೋದಕ್ಕೆ ಪ್ರಯತ್ನ ಪಡ್ತಾನೆ. ಸಾಹಸ ಪಡ್ತಾನೆ. ಸಾಹಸ ಅ೦ದಾಗ ಎಲ್ಲಾ ಹೊಸದೇ. ಹಳೆಯದು ಎಂದಿಗೂ ಸಾಹಸ ಎನಿಸಿಕೊಳ್ಳೋದಿಲ್ಲ! ಜಗತ್ತಿನ ಎಲ್ಲೆಡೆ, ಸಾಂಸ್ಕೃತಿಕ ಕ್ರಾಂತಿಗಳು ಕಹಳೆಯೂದಿದ್ದೇ ಹೀಗೆ. ಬದಲಾವಣೆಯನ್ನ, ಹೊಸತನ್ನ ಹುಡುಕಿಕೊಂಡು ಹೊರಟವರಿಗೇ, ಹೊಸತನ್ನ ಕಂಡು, ಗೆದ್ದು, ಅನುಭವಿಸಿದ ನಾಯಕ ನಾಯಿಕೆಯರಿಗೇ ವಿಶ್ವದ ಮಹಾಕಾವ್ಯಗಳಲ್ಲಿ ಸಿಂಹಪಾಲು!
ನಾವು ಮುಂದಾಲೋಚನೆ ಮಾಡೋದೂ, ಆಸೆ, ಅಭಿಲಾಷೆ, ಆಕಾಂಕ್ಷೆ- ಎಲ್ಲವೂ ಹೊಸದರ ಕಡೆಗೇನೇ. ಹಾಗೆ ಆಲೋಚನೆ ಮಾಡಿದಾಗಲೂ ‘ಒಳ್ಳೆಯದೇ ಆಗುತ್ತೆ!’ ಅನ್ನೋ ‘ಪಾಸಿಟೀವ್’ ದೃಷ್ಟಿಯಿ೦ದಲೇ, ಯೋಚನೆ ಮಾಡ್ತಾ ಮು೦ದುವರಿದರೆ, ಸರಿಯಾಗಿ ಯೋಜನೆ ಹಾಕಿಕೊಂಡರೆ, ಒಳ್ಳೆ ಫಲಗಳೇ ಸಿಗುತ್ತವೆ. ಇದರಿಂದ ನೆಮ್ಮದಿ ಹೆಚ್ಚುತ್ತೆ, ಬಾಳಿನಲ್ಲಿ ಇನ್ನೂ ಹೆಚ್ಚು ಹೆಚ್ಚು ಉತ್ಸಾಹ ಚಿಮ್ಮಿ ಚಿಮ್ಮಿ ಬರುತ್ತೆ!
ಹೊಸದಾಗಿ ಕೆಲಸಕ್ಕೆ ಸೇರ್ತೀರಾ ಅ೦ತಿಟ್ಕೊಳ್ಳಿ. ಅಲ್ಲಿ ನಿಮ್ಮ ಬುದ್ಧಿಶಕ್ತಿಗೆ ಸಾಮರ್ಥ್ಯಕ್ಕೆ ಒಂದು ತರಹಾ ಛಾಲೆ೦ಜಿ೦ಗ್ ಆಗಿದ್ದರೇನೇ ಕೆಲಸ ಒಂದು ಮೋಜು. ಒಂದೇ ತರಹಾ ಅದೇ ಹಳೇ ಕೆಲಸಾನೇ ಮಾಡದೇ, ಹೊಸ ಹೊಸದನ್ನ ಮಾಡ್ತಾ ಇದ್ದಾಗ, ಮಾಡೋ ಕೆಲಸದಲ್ಲಿ ಹುರುಪು, ಆಸಕ್ತಿ ಜಾಸ್ತಿಯಾಗಿರುತ್ತೆ, ಉತ್ಸಾಹ ಮೂಡಿ ಬರುತ್ತೆ, ಆತ್ಮವಿಶ್ವಾಸ, ಆತ್ಮಗೌರವ ಇನ್ನೂ ಹೆಚ್ಚುತ್ತೆ ಎಲ್ಲದರಲ್ಲೂ, ಎಲ್ಲರೆದುರಲ್ಲೂ.
ವಿಜ್ಞಾನ ಅ೦ದ್ರೆ ಹೊಸ ಹೊಸದಾಗಿ ತಿಳಿದುಕೊ೦ಡ ‘ವಿಶೇಷವಾದ ಜ್ಞಾನ.’ ಇದು ಸಾಧ್ಯವೇ? ಅ೦ತ ಹಿಂದಿನವರು ಅನುಮಾನ ಪಡುತ್ತಾ ಇದ್ದ ಕೆಲಸಗಳನ್ನ ಸಾಧಿಸೋದು, ಹೊಸ ಹೊಸದನ್ನ ಕ೦ಡು ಹಿಡಿಯೋದು, ಅಲ್ಲವಾ? ಈ ವಿಜ್ಞಾನದ ಸಹಾಯದಿಂದ ಏನೇನೋ ಸೌಲಭ್ಯ, ಸೌಕರ್ಯ, ಸಲಕರಣೆಗಳನ್ನ, ಉಪಕರಣಗಳನ್ನ ಹೊಸಹೊಸದಾಗಿ ಕ೦ಡು ಹಿಡಿದು, ಅವುಗಳನ್ನ ನಮ್ಮ ಅನುದಿನದ ಬಾಳಿನಲ್ಲಿ ಅಳವಡಿಸಿಕೊಂಡಿದ್ದೇವೆ. ನಮ್ಮ ಜೀವನದ ಮಟ್ಟವನ್ನ ಉತ್ತಮ ಪಡಿಸಿಕೊಂಡಿದ್ದೇವೆ. ಕಾಲ ದೇಶದ ಗಡಿಗಳನ್ನು ಮೀರಿ, ಮುರಿದು, ಪ್ರಪ೦ಚದ ಮೂಲೆಮೂಲೆಗೂ ಮನೋವೇಗದಲ್ಲಿ ಹೋಗಿ ಮುಟ್ಟಬಹುದಾದ ಸ೦ಪರ್ಕ ಸಾಧನಗಳನ್ನ ಮಾಧ್ಯಮಗಳನ್ನ ನಾವೀಗ ಗಳಿಸಿಕೊ೦ಡಿದ್ದೇವೆ. ಇದಕ್ಕೆಲ್ಲ ಮುಖ್ಯವಾದ ಕಾರಣ ಏನೂ ಅ೦ದ್ರೆ- ನಾವು ಅನುದಿನವೂ ಹೊಸ ಹೊಸತನೇ ಅಪೇಕ್ಷೆ ಪಟ್ಟಿದ್ದು, ಪಡೋದು, ಪಡ್ತಾ ಇರೋದು.
ಒ೦ದು ಕ್ಷಣ ಹೀಗೆ ಯೋಚನೆ ಮಾಡೋಣ: ಯಾರಾದರೂ ತಮ್ಮ ಜೀವನದಲ್ಲಿ ಹೊಸ ಹೊಸದನ್ನ ಬಯಸೋದಿಲ್ಲ, ನೋಡೋದಿಲ್ಲ, ಕಾಣೋದಿಲ್ಲ. ಅಂದುಕೊಳ್ಳೋಣ ಆವಾಗ ಏನಾಗುತ್ತೆ? ಜೀವನ ನೀರಸವಾಗಿ ಬಿಡುತ್ತೆ. ಆ ತಟಸ್ಥ ಬಾಳಿನಲ್ಲಿ, ಡಿಪ್ರೆಷನ್ ಆಗುತ್ತೆ, ಖಿನ್ನತೆ ಆವರಿಸುತ್ತೆ. ಮಂಕು ಬಡಿಯುತ್ತೆ. ಉತ್ಸಾಹದ ಸೆಲೆ ಬತ್ತಿ, ಬಾಳು ಪಾಳುಬಾವಿ ಆಗಿಬಿಡುತ್ತೆ. ಅದಕ್ಕೇನೇ ನಮ್ಮ ಜೀವನ ನಿ೦ತ ನೀರಾಗ ಬಾರದು; ಧುಮ್ಮಿಕ್ಕಿ ಸುರಿವ ಜಲಪಾತವಾಗಬೇಕು, ಬೆಟ್ಟದ ಬುಡದ ಝರಿಯಾಗಬೇಕು, ಹರಿವ ಹೊನಲಾಗಬೇಕು! ಜೀವನದಲ್ಲಿ ಅನುದಿನವೂ ಹೊಸತೇ ಇರಬೇಕು! ಹೊಸದೇ ಮೂಡಿ ಬರುತ್ತಿರಬೇಕು!