ಅಮೆರಿಕನ್ನಡ
Amerikannada
ನೆನೆಪಿನ ದೋಣಿಯಾನ
ವಿಶ್ವ, ಸ್ಯಾನ್ ರಮೋನ್, ಕ್ಯಾಲಿಪೋರ್ನಿಯ
ಮರೆವಿನ ಗತ ಸಾಗರದಲಿ
ನುರಿತಂಬಿಗ ಮನ ನೆನಪಿನ ದೋಣಿಯನೇರೀ
ಅರಿಯದ ನಲುವಿನ ನೆಲುವನು
ಅರೆಸುತಿರಲು ತೇಲಿಬಂತು ಮೋಹಕ ಸುಳಿವೂ || ೧ ||

ಮನಚುಂಬಕ ಸೆಳೆದ ಚಹರೆ
ಅನಿಸಿಕೆಗಳ ಅಲೆಗಳಾಗಿ ಭಾವ ಮಥಿಸಿತು
ಕ್ಷಣದಲೊಳ ಚಿಲುಮೆ ಚಿಮ್ಮಿದ
ಗಾನರಸ ಹೊನಲಲಿ ಹಚ್ಚಿತದೆಗೊಡದ ದಗೇ || ೨ ||

ಮನವುಂಡು ಚಿತ್ತ ದೌತಣ
ತಣಿತಣಿದು ಅರಿತಿತು ಅದರ ಯೌವನ ಗುಟ್ಟ
ತೃಣದ ವಿವರವು ಹುದುಗಿಹುದು
ಗಣಿಯಂತೆ ಸಲಿಸಲಿಯು ಹೊಸತಾಗಿ ಮೆಲುಕಲೂ || ೩||

ಮುಪ್ಪಂಟದು ಮನಕೆಂದಿಗು
ಒಪ್ಪಿದನದು ಬಯಸಿದೊಡನೆ ಸಾಕಾರವಾಗೀ
ರಪ್ಪೆಯ ಮಿಡಿಯುವುದೊರಳಗೆ
ಅಪ್ಪುವುದು ನೆನಪಿನ ದೋಣಿಯ ಪಯಣಿಗರನೂ || ೪ ||

ನಿಪುಣತೆ ಗೀಳನಡಗಿಸಿ
ವಿಫಲತೆ ಸಫಲತೆ ತುಲನಗಳನು ಬದಿಗಿಟ್ಟೂ
ಅಪ್ಪು ಅನುಭವವನಿಂದೇ
ಹೆಪ್ಪದು ನಾಳೆಮೆಲಕುವ ರಸಿಕತೆಯ ಸಿಹಿಗೇ || ೫ ||