ಅಮೆರಿಕನ್ನಡ
Amerikannada
ಭಾರತೀಯ ಸಂಸ್ಕೃತಿಯ ಹರಿಕಾರ ಮತ್ತೂರು ಕೃಷ್ಣಮೂರ್ತಿ
-ಮಾಗಲು ಮಲ್ಲಿಕಾರ್ಜುನ*
ದಿವಂಗತ ಶಿಕಾರಿಪುರ ಹರಿಹರೇಶ್ವರರಿಗೆ ಮತ್ತೂರು ಕೃಷ್ಣಮೂರ್ತಿ ಅವರ ಬಗ್ಗೆ ಬಹಳ ಪ್ರೀತಿ ವಿಶ್ವಾಸಗಳಿತ್ತು. ಮತ್ತೂರು ಕೃಷ್ಣಮೂರ್ತಿಗಳಿಗಂತೂ ಹರಿಹರೇಶ್ವರರನ್ನು ಕಂಡರೆ ಬಹಳ ಅಭಿಮಾನ. ಇಬ್ಬರು ಒಬ್ಬರಿಗೊಬ್ಬರು ಗೌರವದಿಂದ ಕಾಣುತ್ತಿದ್ದರು. ಈ ಇಬ್ಬರೂ ಮಹನೀಯರು ಶಿವಮೊಗ್ಗ ಜಿಲ್ಲೆಯವರೇ ಅನ್ನುವುದು ವಿಶೇಷ. ಹರಿಯವರು ಅಮೆರಿಕಾದಲ್ಲಿ ಕನ್ನಡವನ್ನು ಪಸರಿಸಿದರೆ, ಮತ್ತೂರರು ಲಂಡನ್ನಿನಲ್ಲಿ ಕನ್ನಡದ ಕಂಪನ್ನು ಹರಡಿ ಕನ್ನಡ ಸಂಸ್ಕೃತಿಯನ್ನು ಇಮ್ಮಡಿಗೊಳಿಸಿದ ಸರಸ್ವತಿ ಪುತ್ರರು. ಇಂತಹ ಮಹಾನ್ ಚೇತನ ಮತ್ತೂರರು ತಮ್ಮ ಜೀವನಕ್ಕೆ ವಿದಾಯ ಹೇಳಿರುವುದು ಕನ್ನಡ ಸಾರಸ್ವತಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಸಂಸ್ಕೃತ-ಸಂಸ್ಕೃತಿ, ವೇದ ಉಪನಿಷತ್ತು, ಕನ್ನಡ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ಡಾ| ಮತ್ತೂರುಜಿ ತಮ್ಮ ಮನಮೋಹಕ ಮಾತುಗಾರಿಕೆ, ಗಮಕ ವ್ಯಾಖ್ಯಾನಗಳಿಂದ ಕನ್ನಡ ನಾಡಿನ ಮನೆ-ಮನ ಗೆದ್ದವರು. ಅವರೇನೂ ಕಾಲೇಜು ಮೆಟ್ಟಿಲು ಹತ್ತಿದವರಲ್ಲ. ಸ್ವಂತ ಪರಿಶ್ರಮದಿಂದ ಬಾಲ್ಯದ ಕಿತ್ತು ತಿನ್ನುವ ಬಡತನದ ನಡುವೆಯೂ ವಾರಾನ್ನ, ಭಿಕ್ಷಾನ್ನಗಳ ಮೂಲಕ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಉತ್ತುಂಗ ಶಿಖರವೇರಿದವರು. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು.
ರಾಮಕೃಷ್ಣಯ್ಯ ಹಾಗೂ ನಂಜಮ್ಮ ಅವರ ಕೊನೆಯ ಮಗ ಕೃಷ್ಣಮೂರ್ತಿಗಳು ೧೯೨೯ ರ ಆಗಸ್ಟ್ ೮ ರಂದು ಶಿವಮೊಗ್ಗೆಯ ಮತ್ತೂರಿನಲ್ಲಿ ಕೃಷ್ಣ ಜನ್ಮಾಷ್ಠಮಿಯಂದು ಜನಿಸಿದರು. ಆದರೆ ಅವರ ಬಾಲ್ಯದ ದಿನಗಳು ಸುಖಕರವಾಗಿರಲಿಲ್ಲ. ಪ್ರಾಥಮಿಕ ಶಿಕ್ಷಣವನ್ನು ತವರಿನಲ್ಲೇ ಮುಗಿಸಿದ ಅವರು, ಬದುಕಿಗಾಗಿ ಅಣ್ಣನೊಂದಿಗೆ ಮದರಾಸಿಗೆ ತೆರಳಿದರು. ಆ ಸಂದರ್ಭದಲ್ಲಿ ಮಹಾತ್ಮಗಾಂಧೀಜಿ ಚನ್ನೈನಲ್ಲಿ ಮೂರು ವಾರ ತಂಗಿದ್ದರು. ಗಾಂಧಿಯನ್ನು ನೋಡಬೇಕೆಂಬ ಆಸೆ ಮತ್ತೂರರ ಮನದಲ್ಲಿ ಚಿಗುರೊಡೆಯಿತು. ಚನ್ನೈನ ಕಾಂಗ್ರೆಸ್ ಅಧಿವೇಶನಕ್ಕೆ ಸ್ವಯಂಸೇವಕರ ಆಯ್ಕೆ ನಡೆದಿತ್ತು. ಸ್ವಯಂಸೇವಕರಿಗೆ ಕಡ್ಡಾಯವಾಗಿ ಹಿಂದಿ ಭಾಷೆ ತಿಳಿದಿರಬೇಕು ಎಂಬ ನಿಯಮವಿತ್ತು. ಒಂದೇ ವಾರದಲ್ಲಿ ಹಿಂದಿ ಕಲಿತು ಮೂರು ವಾರ ಗಾಂಧೀಜಿಯ ಕೊಠಡಿಯಲ್ಲೇ ಸೇವಕರಾಗಿದ್ದುಕೊಂಡು ಅಭೂತಪೂರ್ವ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಗಾಂಧೀಜಿಯ ಮಾತು ಅವರ ಪ್ರವಚನಗಳು ಮತ್ತೂರರ ಬದುಕು ಕಟ್ಟಿಕೊಟ್ಟಿತು.
ಕ್ಯಾಂಟಿನ್‌ವೊಂದರಲ್ಲಿ ಸಹಾಯಕರಾಗಿದ್ದುಕೊಂಡು ಎಸ್‌ಎಸ್‌ಎಲ್‌ಸಿ ಓದಿ ಮುಗಿಸಿದರು. ಮುಂದೆ ಬದುಕನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದರು. ಬಸವನಗುಡಿಯಿಂದ ಶಿವಾಜಿನಗರಕ್ಕೆ ಓಡಾಡುತ್ತಿದ್ದ ಸಿಟಿಬಸ್‌ನಲ್ಲಿ ಮೂರು ತಿಂಗಳು ಕಂಡಕ್ಟರ್ ಆಗಿ ಕಾರ್ಯನಿರ್ವಹಿಸಿದರು. ಮುಂದೆ ಟಿಕೆಟ್ ಕಲೆಕ್ಟರ್ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಪಡೆದರು. ರಾಜಾಮಿಲ್ಕ್, ಮಿನರ್ವ ಮಿಲ್ಕ್‌ಗಳಲ್ಲೂ ನೌಕರರಾಗಿ ದುಡಿದರು. ಬಿಡುವು ದೊರೆತಾಗಲೆಲ್ಲ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದರು. ೧೨ ವರ್ಷ ಉಪಸಂಪಾದಕರಾಗಿ ಪತ್ರಿಕೋದ್ಯಮದಲ್ಲಿ ಗಟ್ಟಿನೆಲೆ ಕಟ್ಟಿಕೊಂಡರು. ಆಕಾಶವಾಣಿಯಲ್ಲಿಯೂ ಕಾರ್ಯಕ್ರಮ ನಿರೂಪಕರಾಗಿ ದುಡಿದರು.
ಜಗದ್ವಂದ್ಯ ಕನ್ನಯ್ಯಲಾಲ್ ಮುನ್ಷಿ ಅವರು ಭಾರತೀಯ ವಿದ್ಯಾಭವನವನ್ನು ಸ್ಥಾಪಿಸಿ ಈ ನೆಲದ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸಲು ಕ್ರಿಯಾಶೀಲರಾಗಿದ್ದರು. ಭಾರತೀಯ ವಿದ್ಯಾಭವನದ ಮದರಾಸು ಶಾಖೆಯ ಎಸ್. ರಾಮಕೃಷ್ಣನ್ ಬೆಂಗಳೂರು ಶಾಖೆಗೆ ಒಬ್ಬ ಯೋಗ್ಯ ವ್ಯಕ್ತಿಯನ್ನು ಹುಡುಕುತ್ತಿದ್ದರು. ಮತ್ತೂರರ ವ್ಯಕ್ತಿತ್ವದಿಂದ ಪ್ರಭಾವಿತರಾದ ರಾಮಕೃಷ್ಣನ್ ೧೯೬೯ ರಲ್ಲಿ ಮತ್ತೂರರನ್ನು ಬೆಂಗಳೂರು ಶಾಖೆಯ ರಿಜಿಸ್ಟಾರ್ ಆಗಿ ನೇಮಕ ಮಾಡಿದರು. ಅಲ್ಲಿಂದ ಮತ್ತೂರರು ತಮ್ಮ ಬದುಕಿಗೆ ವಿದಾಯ ಹೇಳುವವರೆಗೂ ಭಾರತೀಯ ವಿದ್ಯಾಭವನವನ್ನು ಮುಗಿಲೆತ್ತರ ಬೆಳೆಸಿದರು. ಬಹುಬೇಗ ತಮ್ಮ ಪ್ರಾಮಾಣಿಕ ದುಡಿಮೆಯಿಂದ ಮತ್ತೂರರು ಜನಪ್ರಿಯರಾದರು. ಅವರ ಕೆಲಸದಿಂದ ಪ್ರಭಾವಿತರಾದ ರಾಮಕೃಷ್ಣನ್ ಲಂಡನ್ನಿನಲ್ಲಿ ಪ್ರಾರಂಭವಾದ ಭಾರತೀಯ ವಿದ್ಯಾಭವನಕ್ಕೆ ೧೯೭೨ ರಲ್ಲಿ ರಿಜಿಸ್ಟಾರ್ ಆಗಿ ನೇಮಿಸಿದರು. ಒಂದು ಸಣ್ಣ ಕೊಠಡಿಯಲ್ಲಿ ಪ್ರಾರಂಭವಾದ ಲಂಡನ್ನಿನ ವಿದ್ಯಾಭವನ ಮತ್ತೂರರ ಶ್ರಮದಿಂದ ವಿಶ್ವಮನ್ನಣೆ ಪಡೆಯಿತು. ರಾಮಾಯಣ, ಮಹಾಭಾರತ, ಭಗವದ್ಗೀತೆ, ತಿರುಕುರುಳ್, ದೇಶೀಯ ಸಂಸ್ಕೃತಿ ಮಹಾಕಾವ್ಯಗಳ ಕುರಿತು ವಿಚಾರಪೂರ್ಣ ಉಪನ್ಯಾಸಗಳಿಂದ ಮತ್ತೂರರು ಲಂಡನ್ನಿನ ಇಂಗ್ಲಿಷರನ್ನು ಅಯಸ್ಕಾಂತದಂತೆ ಸೆಳೆದುಬಿಟ್ಟರು. ಅಂದಿನ ಬ್ರಿಟನ್ ಪ್ರಧಾನಿಗಳಾದ ಜೇಮ್ಸ್ ಕಲೆಹನ್, ಮಾರ್ಗರೇಟ್ ಥ್ಯಾಚರ್ ಮೊದಲಾದ ಗಣ್ಯರು ವಿದ್ಯಾಭವನಕ್ಕೆ ಭೇಟಿ ನೀಡಿ ಮುಕ್ತಕಂಠದಿಂದ ಹೊಗಳಿ ಭವನದ ಬೆಳವಣಿಗೆಗೆ ಸಂಪೂರ್ಣ ನೆರವು ನೀಡಿದರು. ೨೩ ವರ್ಷ ಲಂಡನ್ನಿನಲ್ಲಿ ಮತ್ತೂರರು ಭಾರತೀಯ ವಿದ್ಯಾಭವನವನ್ನು ಕಟ್ಟಿ ಬೆಳೆಸಿದ ರೀತಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಭಾರತದಿಂದ ಯಾರೇ ಲಂಡನ್ನಿಗೆ ಹೋಗಲಿ ಅವರು ತಪ್ಪದೇ ವಿದ್ಯಾಭವನಕ್ಕೆ ಭೇಟಿ ನೀಡುವುದು ಒಂದು ಪರಿಪಾಠವಾಯಿತು.
೧೯೯೫ ರಲ್ಲಿ ಭಾರತಕ್ಕೆ ಮರಳಿದ ಮತ್ತೂರರು ಮೇ ೧೫ ರಂದು ಬೆಂಗಳೂರು ವಿದ್ಯಾಭವನದ ಕಾರ್ಯಕಾರಿ ನಿರ್ದೇಶಕರ ಹುದ್ದೆಯನ್ನು ಅಲಂಕರಿಸಿದರು. ಸಾಕಷ್ಟು ಶ್ರಮವಹಿಸಿ ಮೈಸೂರಿನಲ್ಲಿ ವಿದ್ಯಾಭವನದ ಸುಂದರ ಕಟ್ಟಡವನ್ನು ನಿರ್ಮಿಸಿ ಕೇಂದ್ರ ತೆರೆದರು. ಮಡಿಕೇರಿ, ಬಾಗಲಕೋಟೆಯಲ್ಲಿಯೂ ಕೇಂದ್ರಗಳು ತಲೆ ಎತ್ತಿದವು.
ಮತ್ತೂರರು ೪೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅಲೈ ಓಷೈ (ತಮಿಳು) ದೀಪಧಾರಿಣೀ, ಹಿಮಾಲಯದ ವೀರರು, ರಾಮಕಥಾಸಾರ, ನಮ್ಮೆಲ್ಲರ ಶ್ರೀರಾಮ, ಯೋಗಕ್ಷೇಮಂ ವಹಾಮ್ಯಹಂ, ಗಾಂಧಿ ಉಪನಿಷತ್ತು, ಉಪಾಖ್ಯಾನಪಂಚಕ, ಧರ್ಮರಾಜ ಯುಧಿಷ್ಠರ ಈ ಕೃತಿಗಳ ಜೊತೆಗೆ ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ ಅವರ ಆತ್ಮಕಥೆ ಇನ್‌ಸೈಡರ್ ಕೃತಿಯನ್ನು ಕನ್ನಡಕ್ಕೆ ಅತಃದೃಷ್ಟಿ ಹೆಸರಿನಲ್ಲಿ ಅನುವಾದಿಸಿದ್ದಾರೆ.
ಮತ್ತೂರರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಜಗತ್ತಿನಾದ್ಯಂತ ಪ್ರಶಸ್ತಿಗಳು ಅವರಿಗೆ ದೊರೆತಿವೆ. ಕೇಂದ್ರಸರ್ಕಾರದ ಪದ್ಮಶ್ರೀ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಧರ್ಮಸ್ಥಳ ಧರ್ಮಸಮ್ಮೇಳನ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯಕಲಾ ಅಕಾಡೆಮಿ, ಆಳ್ವಾಸ್ ಸಿರಿನುಡಿ ಪ್ರಶಸ್ತಿ ಮತ್ತೂರರ ವ್ಯಕ್ತಿತ್ವಕ್ಕೆ ಸಂದ ಉಡುಗೊರೆಗಳಾಗಿವೆ.
ಭಾರತೀಯ ವಿದ್ಯಾಭವನದ ಕೀರ್ತಿ ಕಳಸ, ಕನ್ನಡ ಸಾರಸ್ವತಲೋಕದ ಹಿರಿಯಜ್ಜ ಮತ್ತೂರರು ನಮ್ಮಿಂದ ದೂರವಾಗಿದ್ದಾರೆ. ಅಕ್ಟೋಬರ್ ೭ ರಂದು ಅವರ ಹುಟ್ಟೂರು ಮತ್ತೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು. ಕೃಷ್ಣ ಜನ್ಮಾಷ್ಠಮಿಯಂದು ಹುಟ್ಟಿದ ಇವರು ವಿಜಯದಶಮಿಯಂದು ಅಸ್ತಂಗತವಾಗಿರುವುದು ಅವರೊಬ್ಬರು ದೇವಮಾನವರೆಂದೇ ಬಿಂಬಿಸುತ್ತ ಅವರಿಗೆ ಅಮೆರಿಕನ್ನಡ ಬಳಗದ ವತಿಯಿಂದ ನಮನಗಳು.
*ಮಾಗಲು ಮಲ್ಲಿಕಾರ್ಜುನ
ನಂ. ೧೩೨, ೨೩ನೇ ಮುಖ್ಯ ರಸ್ತೆ
೨ನೇ ಹಂತ, ಜೆ. ಪಿ. ನಗರ
ಮೈಸೂರು-೫೭೦೦೦೮
ಫೋನ್: ೮೧೪೭೪೭೨೫೪೯