ಅಮೆರಿಕನ್ನಡ
Amerikannada
ಹಬ್ಬ
-ಜ್ಯೋತಿ ಮಹದೇವ್, ಮಣಿಪಾಲ


ನೀ ಬಂದ ದಿನದಂದೇ ನನಗೆ ದೀಪಾವಳಿಯು
ಮುಖ ಮಂಟಪದ ಒಳಗೆ ಜೋಡು ದೀಪ
ಮನವೆಲ್ಲ ಬೆಳಗಿರಲು ಅಂಗಳದಿ ಸಂಭ್ರಮವು
ಜಗಲಿಯುದ್ದಕೂ ಹೊಳೆವ ಸಾಲು ರೂಪ

ನಿನ್ನ ಕಣ್ ಬೆಳಕ ಕಿಡಿ ಕುಡಿಬೆರಳ ಸೋಕಿರಲು
ನರನಾಡಿಯೊಳಗೆಲ್ಲ ಸಡಗರದ ಸದ್ದು
ಒಂದೊಂದು ಸೆಳಕಿನಲು ಗಾಢಗೂಢದ ಗುನುಗು
ಏರಿ ಸ್ಫೋಟಿಸುತ್ತಿತ್ತು ಆಕಾಶಕೆದ್ದು

ಮುಸುಕು ಸಂಜೆಯ ಹೊತ್ತು ಸುಖಕಿರಣವೊಲಿದಿತ್ತು
ಬಣ್ಣಬುಟ್ಟಿಯನೇರಿ ತೂಗಿ ನಲಿದು
ದಾರಿ ತೋರುತ್ತಿತ್ತು ಚುಕ್ಕಿಚಿತ್ತಾರಗಳಿಗು
ನಿನ್ನ ಒಲುಮೆಗೆ ಇರುಳು ಕರಗಿದಂದು

ಸುಳಿನಾಭಿ ಸುತ್ತೆಲ್ಲ ತುಳಸಿದಳಗಳ ಕಂಪು
ನೆಲ್ಲಿನೀರಿಗು ಇರದ ಸಿಹಿ ದಕ್ಕಿತು
ನಡೆವ ಹಾದಿಯ ಅಂಚು ಇಂಚರದಿ ತೋಯ್ದಿರಲು
ಅಕ್ಕರೆಯ ತೋಳಿನಲಿ ಖುಷಿ ನಕ್ಕಿತು