ಅಮೆರಿಕನ್ನಡ
Amerikannada
ಪ್ರಾರ್ಥನೆ
-ಪ್ರೊ. ಎಚ್.ಜಿ. ಸುಬ್ಬರಾವ್


ರೀತಿ ರಿವಾಜುಗಳೆಲ್ಲ ನಿತ್ಯ ಮೌಲ್ಯಗಳಲ್ಲ
ಹಳೆಯದರ ಸ್ಥಾನಕ್ಕೆ ಹೊಸದು ಬರಲೇಬೇಕು
ಸಂತನಿಗೂ ಸಾವುಂಟು ಪಾಪಿಗೂ ಕ್ಷಮೆಯುಂಟು
ಕಾಲ ಕೆಟ್ಟಿತು ಎಂದು ಅಳುತಲಿರುವುದು ಸಲ್ಲ.

ಸತತ ಬದಲಾವಣೆಯು ಪ್ರಕೃತಿಯಾ ನಿಯಮವದು
ಗುರುತರದ ಮೌಲ್ಯವೂ ಬಳಸುತ್ತ ಹಳಸುವುದು
ತೀರುವುದು ಒಂದು ದಿನ ಸಜ್ಜನರ ಆಯಸ್ಸು
ಬೇಗ ನಿರ್ಗಮಿಸುವುದು ಅವರಿಗೇ ಶ್ರೇಯಸ್ಸು.

ನಿನ್ನ ಬತ್ತಳಿಕೆಯಲಿರುವ ಪ್ರಬಲಾಸ್ತ್ರ ಪ್ರಾರ್ಥನೆಯು
ಅದರ ಸದುಪಯೋಗ ಹೊಂದುವುದು ಜಾಣತನ
ಸ್ವಹಿತ ಸಾಧನೆಯು ಸಹಜ ಮಾನವ ಗುಣವು
ಪರಹಿತ ಬಯಸುವುದು ಸಜ್ಜನರ ದೊಡ್ಡತನ

ಶುದ್ಧ ಪ್ರಾರ್ಥನೆಗುಂಟು ಪವಾಡವೆಸಗುವ ಶಕ್ತಿ
ಅದಕಾಗಿ ರೂಢಿಸಿಕೊ ನಿಜ ನಿರ್ಮಲ ಭಕ್ತಿ
ಕುರಿಕೋಳಿಗಳಂತೆ ಕುರುಡು ಜೀವನ ಸಾಕು-
ಸರ್ವರೂ ಸುಖವಾಗಿರಲಿ ಎಂಬ ಪ್ರಾರ್ಥನೆ ಬೇಕು!

ಆಲ್‌ಫ್ರೆಡ್ ಲಾರ್ಡ್ ಟೆನಿಸನ್‌ನ ‘ಮಾರ್ಟ್ ಡಿ ಆರ್ಥರ್’ ಪದ್ಯದ ಭಾವಾನುವಾದ