ಅಮೆರಿಕನ್ನಡ
Amerikannada
ದೀಪಾವಳಿ ರಹಸ್ಯ
ವಿಶ್ವ, ಸ್ಯಾನ್ ರಮೋನ್ ಕ್ಯಾಲಿಫೋರ್ನಿಯಾ
ಸಾಂಕೇತಿಕವಾಗಿ ಅಂತರ್ ಜ್ಯೋತಿಯನ್ನು ಹೋಲುವ ತುಪ್ಪದ ದೀಪ ಹಚ್ಚಿ
ಮಂಕಿನ ಅಮವಾಸೆ ಕಳೆಯಿತೆಂದು ಕುಣಿಯುತ ದೀಪಾವಳಿಯ ಆಚರಿಸುವಂತೆ

ಅಸುರ ಮಿತ್ರರ ಕೂಡಿದ ಮುದದಲಿ ಮದವೇರಿ
ಬಲಿರಾಜ ಸುರರ ಮೆಟ್ಟಿ ಸೆರೆಯಲಿ ಕೂಡಿ
ಛಲದಸುರರ ಶಕ್ತಿಗಳನಾರು ಅಳಿಸದಂತೆ
ಆಳುತಿದ್ದನಂತೆ ಮೂರು ಲೋಕವನು

ತಿಳಿವಳಿಕೆಯಿರದ ರಾಜನ ಅಸುರರ ಅನೀತಿ
ಆಳುವಿಕೆಗೆ ಸೋತು ಸೊರಗಿದ ದೇವ ಗಣ
ಅಳುತಳುತ ಕರೆದರಂತೆ ನರರುಪಕಾರಿಯನು
ಬಲ ಮುರಿಯಲು ಕುಬ್ಜ ಜನಿಸಿದನಂತೆ

ದೇವ ಯುಕ್ತಿಗಳನಡಗಿಸಿ ಸೆರೆಹಿಡಿದಿಹೆ ಸುರರ
ಇವ ಕುಬ್ಜ ಕೇಳಿದ ನೆಲ ದಾನವ ಕೊಡದೆ
ಅವಮಾನದ ಚ್ಯುತಿ ತರನೆನ್ನಸುರ ಹಿರಿಮೆಗೆ
ಆವರಿಸು ನಿನ್ನ ನೆಲವೆಂದನಂತೆ

ನರಹರಿ ತ್ರಿವಿಕ್ರಮ ಪಾದದಲಿ ಇಹ ಪರವ
ಭರದಿ ತುಳಿದುಳಿದಪಾದವೆಲ್ಲಿಡಲೆನಲು
ಶಿರವ ತೋರ್ದನಂತೆ ಬಲಿ ಬಲದ ಮದವಳಿದು
ಹರಿಯವನ ಪಾತಾಳಕೆ ತುಳಿದನಂತೆ

ಒಗಟಿನ ಪ್ರಭು ಸಮ್ಮಿತ ತೊಡರು ಭಾಷೆಯ ಬದಲು
ಸೊಗದ ಮಿತ್ರ ಸಮ್ಮಿತ ಪುರಾಣ ಕಥೆಗಳು
ಹಗಲಿರುಳ ಸಾಮತಿ ಸುರಾಸುರರ ಕಾಳಗ ಕಲಹಗಳ
ಬಗೆಗಳಲೊಳ ತಿರುಳ ತಿಳಿಸುವುದಂತೆ

ಮಲ್ಲಿಗೆಯ ಮೊಗ್ಗಿನಂತೆ ಹೆಬ್ಬರೆಳುದ್ದದ
ಜ್ವಾಲೆ ಎಲ್ಲರ ಹೃದಯ ಕಮಲ ಸೊಡರೊಳು
ಅಲುಗದೆ ಬೆಳಗುತಲಿರುವ ಹೊನ್ನಾರಿಕೆ ಹೂವ
ಬೆಳಕು ಯೋಗಿಯ ಅಂಜನದಂತೆ

ತೆರೆತೆರೆ ಪದರದಲಾ ವೇದಸಾರ ರತ್ನವ
ಪರಿಮಿತಿಯನರಿಯದ ರವಿ ತೀಕ್ಷ್ಣ ಕಿರಣವು
ಇರಿದು ಚದುರಿಸಲಾಗದಂತೆ ಮುಚ್ಚುವುದಂತೆ
ದುರಿತ ಮನದ ಮೌಡ್ಯತೆಯ ಕಾರ್ಮೋಡ

ಕಾಣದ ಜ್ಯೋತಿ ಗುಡಿಯಲಡಗಿರುವ ಕಾಂತಿಯ
ಕಾಣದಿರೆ ದೊರಕದಂತೆ ಪರದ ಜ್ಞಾನ
ಸಣ್ಣ ತುಪ್ಪದ ದೀಪದಂತ ಬೆಳಕಿನ
ತಾಣವರಸಿ ಅದನರಿಯಬಹುದಂತೆ

ಒಟ್ಟಿನಲಿ ಕಥೆಯ ಸರಳ ಉಪದೇಶವಿದು
ಹುಟ್ಟಿದವರೆದೆಯಲಿ ಜ್ಯೋತಿಯುರಿಯುತಲಿದೆ
ಕಟ್ಟಿದ ಅಸುರ ಭಾವಗಳ ದಟ್ಟತೆರೆ ಹರಿದು
ದಿಟವನರಿವ ಯತ್ನವ ಮಾಡಿರೆಂದು