ಅಮೆರಿಕನ್ನಡ
Amerikannada
ಕನಕದಾಸರು
-ಶಿಕಾರಿಪುರ ಹರಿಹರೇಶ್ವರ
ಕ್ರಿ.ಶ. ೧೫೫೦ರ ಕಾಲ ಹರಿದಾಸ ಪರಂಪರೆಯ ಒಂದು ಸುವರ್ಣ ಸಂದರ್ಭ ಎನ್ನಬಹುದು. ದಾಸಕೂಟ, ವ್ಯಾಸಕೂಟದ ಎರಡೂ ಶಿಷ್ಯಸ್ತೋಮವನ್ನ ಸಮಾನವಾಗಿ ನಡೆಸಿಕೊಂಡು ಹೋಗುತ್ತಿದ್ದ ವ್ಯಾಸತೀರ್ಥರದು ಮೇರು ವ್ಯಕ್ತಿತ್ವ. ಕನಕ ಮತ್ತು ಪುರಂದರರಷ್ಟು ವ್ಯಾಸತೀರ್ಥರ ಪ್ರಭಾವಶಾಲಿಗಳಾಗಿದ್ದ ಶಿಷ್ಯರು ದಾಸಕೂಟದಲ್ಲಿ ಬೇರಿನ್ನಾರೂ ಇರಲಿಲ್ಲ. ತನ್ನ ಕೀರ್ತನೆಗಳನ್ನೆಲ್ಲ ಕನಕದಾಸರು ಇಷ್ಟದೇವತೆಯಾದ ಕಾಗಿನೆಲೆಯ ಆದಿಕೇಶವರಾಯರಿಗೆ ಅಂಕಿತ ಮಾಡಿದ್ದಾರೆ. ಕೀರ್ತನೆಗಳಲ್ಲದೆ ಕನಕದಾಸರು ಬರೆದ ಕಾವ್ಯಗಳು- ಮೋಹನ ತರಂಗಿಣಿ, ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆ ಮತ್ತು ನಳಚರಿತ್ರೆ. ನೃಸಿಂಹಸ್ತವ ಎಂಬ ೯೭ ಪದ್ಯಗಳ ಒಂದು ಸಾಗತ್ಯ ಗ್ರಂಥವೂ ಇವನದಿರಬಹುದೆಂಬ ಅಭಿಪ್ರಾಯವಿದೆ. ಡಾ| ದೇಜಗೌ ಅವರು “ರಾಮಧಾನ್ಯ ಚರಿತ್ರೆ”ಯನ್ನೂ, ಗದ್ಯಾನುವಾದದೊಂದಿಗೆ ವಿದ್ವಾನ್ ಎನ್. ರಂಗನಾಥ ಶರ್ಮರು “ಹರಿಭಕ್ತಿ ಸಾರ”ವನ್ನೂ, ಗದ್ಯಾನುವಾದದೊಂದಿಗೆ ಶ್ರೀ ಹಾತೂರು ಶಂಕರನಾರಾಯಣ ಭಟ್ಟ ರವರು “ನಳಚರಿತ್ರೆ”ಯನ್ನೂ ಮತ್ತು ಪ್ರೊ| ಬಿ.ಎಸ್. ಸಣ್ಣಯ್ಯನವರು “ಮೋಹನತರಂಗಿಣಿ”ಯನ್ನೂ ಸಂಪಾದಿಸಿ ಪ್ರಕಟಿಸಿರುವ ಗ್ರಂಥಗಳು ಈಗ ನಮಗೆ ಲಭ್ಯವಿವೆ.
ಮೋಹನ ತರಂಗಿಣಿ: ಛಂದಸ್ಸು ಸಾಂಗತ್ಯ; ಕಥಾವಸ್ತು ಕಾಮದಹನ ಉಷಾ ಮತ್ತು ಅನಿರುದ್ಧರ ವಿವಾಹಕ್ಕೆ ಸಂಬಂಧಿಸಿದ ಪೌರಾಣಿಕ ಕತೆ. ವರ್ಣನಾ ಚಾತುರ‍್ಯ, ಸಂದರ್ಭೋಚಿತ ಹೊಸ ಸನ್ನಿವೇಶಗಳ ರಚನೆ, ವಿವಿಧ ರಸಗಳ ಪ್ರತಿಪಾದನೆ ಇದು ಮೋಹನ ತರಂಗಿಣೀಯ ಕಾವ್ಯಸಂಪತ್ತು. ಇದರಲ್ಲಿ ೪೨ ಸಂಧಿಗಳೂ, ೨೭೦೫ ಪದ್ಯಗಳೂ ಇವೆ. ಇದರ ಪೀಠಿಕೆಯಲ್ಲಿ ಶ್ರೀ ರಾಮಾನುಜ ಮುನಿಗಳನ್ನ ಗುರುರಾಯ ಎಂದು ಕವಿ ಕರೆದಿದ್ದಾನೆ. ಶ್ರೀ ವೈಷ್ಣವಗುರುಗಳಾದ ತಾತಾಚಾರ್ಯರ ಪಾದಕ್ಕೆ ವಂದನೆಗಳಿವೆ. ಕಾವ್ಯದ ನಡುನಡುವೆ ಅಚಾರ್ಯ ಶ್ರೀ ರಾಮಾನುಜರ ಶ್ರೀವೈಷ್ಣವ ಪಂಥದ ಅನುಯಾಯಿಗಳ ವರ್ಣನೆ ಎದ್ದು ಕಾಣುವಂತಿದೆ.
ನಳಚರಿತ್ರೆ: ಇದೊಂದು ಕಥನ ಕವನ, ಸುಂದರ ಲೌಕಿಕ ಕಾವ್ಯ; ಭಾಮಿನಿ ಷಟ್ಪದಿಯ ಛಂದಸ್ಸು, ಸುಲಭವಾದ ಭಾಷೆ, ಸರಳವಾದ ಶೈಲಿ ವ್ಯಾಸ ಭಾರತದ ಅರಣ್ಯಪರ್ವದ ಕಥಾವಸ್ತುವೇ ಇದಕ್ಕೆ ಆಕರ. ಆದರೆ ಆಕರವನ್ನು ಮೀರಿದ ನವರಸ ಪ್ರತಿಪಾದನೆ ಈ ಖಂಡ ಕಾವ್ಯದ ವೈಶಿಷ್ಟ್ಯ.
ಹರಿಭಕ್ತಿಸಾರ: ಭಕ್ತಿ ರಸದ ಆರ್ತಭಾವದ ರಸಗಟಗಟ್ಟಿ. ೧೧೦ ಪದ್ಯಗಳು ಒಂದೊಂದೂ ಒಂದು ಮುಕ್ತಕಗಳಂತೆ ಉಲ್ಲೇಖನೀಯ ಭಾವಗೀತೆಗಳು. ಸದಾ ನಮ್ಮನ್ನು ಕಾಪಾಡುತ್ತಾ ಇರು ಎಂದು ಕಳಕಳಿಯಿಂದ ದೇವರನ್ನು ಬೇಡಿಕೊಳ್ಳುವ ಒಂದು ಪದ್ಯವಂತೂ ಕನ್ನಡಿಗರೆಲ್ಲರಿಗೂ ಸುಪರಿಚಿತ.
ದೀನ ನಾನು ಸಮಸ್ತ ಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿನೀನು|
ಏನ ಬಲ್ಲೆನು ನಾನು ನೆರೆ ಸು
ಜ್ಞಾನ ಮೂರುತಿ ನೀನು ನಿನ್ನ ಸ
ಮಾನರುಂಟೇ ದೇವ ರಕ್ಷಿಸು ನಮ್ಮನನವರತ||೪೯||

ರಾಮಧಾನ್ಯಚರಿತ್ರೆ: ನೂರಾ ಎಂಟು ಭಾಮಿನಿ ಷಟ್ಪದಿಗಳ ಒಂದು ಖ೦ಡಕಾವ್ಯ ಈ ರಾಮಧಾನ್ಯ ಚರಿತ್ರೆ. ನರೆದಲೆ ಧಾನ್ಯವನ್ನು ಶ್ರೀ ರಾಮಚಂದ್ರನು ಗೌರವಿಸಿ ಅನು‘ರಾಗಿ’ಸಿ ಅದಕ್ಕೆ “ರಾಘವಧಾನ್ಯ”- ಎಂಬ ಹೆಸರು ಬರಲು ಕಾರಣನಾದ. ಮುಂದೆ ಅದು ಜನರ ಬಾಯಲ್ಲಿ ‘ರಾಗಿ’ ಎಂಬ ಹೆಸರನ್ನು ತಳೆಯಿತು. ಈ ಕವಿಕಲ್ಪನೆ ಕನಕದಾಸರ ಒಂದು ಮೌಲಿಕ ಸಂಶೋಧನೆ! ಯಾವ ಬಗೆಯ ಲೌಕಿಕ ಕಥಾವಸ್ತುವನ್ನು ಆರಿಸಿಕೊಂಡರೂ, ಅದನ್ನು ಪೌರಾಣಿಕ ಅಥವಾ ಐತಿಹಾಸಿಕ ಚೌಕಟ್ಟಿನೊಳಗೆ ಕೂರಿಸುವ ಹಂಬಲ ನಮ್ಮ ಹಿಂದಿನ ಕವಿಗಳಿಗಿತ್ತು. ಅದನ್ನೇ ಕನಕರು ಇಲ್ಲಿ ಮಾಡಿದ್ದಾರೆ; ಈ ಕಥಾವಸ್ತುವನ್ನ ಆಧರಿಸಿ ರಾಮಾಯಣದೊಳಗೆ ತೂರಿಸಿ, ಒಂದು ಖಂಡಕಾವ್ಯವನ್ನು ಕನಕರು ರಚಿಸಿದ್ದಾರೆ. ಇಲ್ಲಿ ಕನಕದಾಸರ ದೇಶೀ ಶೈಲಿ, ಸರಳ ನಿರೂಪಣೆ, ಕಥನಕಲೆಗೆ ಹೇಳಿ ಮಾಡಿಸಿದಂತೆ ಇದೆ.
ಕನಕದಾಸರ ಕೀರ್ತನೆಗಳು: ದಾಸಸಾಹಿತ್ಯದ ಅಶ್ವಿನೀಕುಮಾರರಂತಿರುವ ಪುರಂದರ ಮತ್ತು ಕನಕದಾಸರದೇ ಹೆಚ್ಚು ಜನಪ್ರಿಯ ಕೀರ್ತನೆಗಳು. “ಕೀರ್ತನೆಗಳನ್ನು ಬೋಳುಭಜನೆಗಳಂತಾಗಿಸದೆ, ಉತ್ತಮಕಾವ್ಯಸ್ತರಕ್ಕೆ ಏರಿಸಿದ ಕೀರ್ತಿ ಕನಕದಾಸರದು. ತಮ್ಮ ಕೀರ್ತನೆಗಳ ಮುಖಾಂತರ ದಾಸಪಂಥದ ಈ ಸಂತರು ಹೇಗೆ ಶ್ರೀಸಾಮಾನ್ಯನ ಜೀವನದಲ್ಲಿ ಹತ್ತಿರವಾದರು. ಕನಕದಾಸರ ಕೀರ್ತನೆಗಳಲ್ಲಿ ಎದ್ದು ಕಾಣುವ ಒಂದಂಶವೆಂದರೆ, ದೇಸಿಯ ಸೊಗಡು. ಕಮ್ಮಗೋಲ, ಸೊಂಡಿಲಹೆಮ್ಮಯ್ಯ, ಮೊರದಗಲ ಕಿವಿ, ಟವಳಿಗಾರ- ಇತ್ಯಾದಿ ಅವರು ಬಳಸುವ ಪದಪುಂಜಗಳಲ್ಲಿ ಸಹಜ ದೇಸಿಯ ಸವಿತಿರುಳು ಮೈಗೊಂಡಿದೆ.
ಕನಕರ ಕೀರ್ತನೆಗಳಲ್ಲಿ ಹಲವು ಸುಂದರ ಭಾವಗೀತೆಗಳು: ತನು ನಿನ್ನದು ಜೀವನ ನಿನ್ನದು; ತಲ್ಲಣಿಸದಿರು ಕಂಡ್ಯ ತಾಳು ಮನವೆ; ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ; ಈಶ ನಿನ್ನ ಚರಣ ಭಜನೆ; ನನ್ನಿಂದ ನಾನೇ ಜನಿಸಿಬಂದೆನೆ; ಮುಂದೆ ದಯೆವಿರಲಿ ಶ್ರೀಹರಿಯೇ; ನೊಂದೆ ನಾನು ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು ಇತ್ಯಾದಿ, ಇತ್ಯಾದಿ. ಅವರ ಕೀರ್ತನೆಗಳಲ್ಲಿರುವ ಕೆಲವು ನುಡಿಗಳು, ನುಡಿಗಟ್ಟುಗಳು ಸೊಗಸಾದ ನಾಣ್ಣುಡಿಗಳಾಗಿ ಗಾದೆಗಳ ರೀತಿಯಲ್ಲಿ ಶಾಶ್ವತವಾಗಿ ಉಳಿದುಬಂದಿವೆ: ದೇವರು ಇಲ್ಲದ ಗಾಡಿಯು, ಹಾಳುಬಿದ್ದ ಅಂಗಡಿಯು; ಭಾವವಿಲ್ಲದ ಭಕುತಿ, ಅದಕೂ ಹಾಕ ಯುಕುತಿ; ಹೇವವಿಲ್ಲದ ಹೆಣ್ಣು, ಗಜುಗ ಬೆಳೆದ ಕಣ್ಣು; ಸೇವೆಯರಿಯದ ಧಣಿಯು, ಅವನು ಕಲ್ಲಿನ ಕಣಿಯು; ಕಣ್ಣೇ ಕಾಮನ ಬೀಜ; ನೀನು ಉಪೇಕ್ಷೆಯ ಮಾಡೆ, ಬೇರೆ ಗತಿಯಾರೆನಗಯ್ಯ; ಎಲ್ಲಿ ನೋಡಿದರಲ್ಲಿ ರಾಮ; ತತ್ವದ ಅರ್ಥ ವಿಚಿತ್ರದಿ ಪೇಳಲು ಕತ್ತೆಗೆ ತಿಳಿದೀತೆ; ಪುತ್ಥಳಿ ಬೊಂಬೆಯ ಚಿತ್ರದಿ ಬರೆದಿರೆ ಮುತ್ತನು ಕೊಟ್ಟರೆ ನುಡಿದೀತೆ; ಏನು ಇಲ್ಲದ ಎರಡು ದಿನದ ಸಂಸಾರ ಇತ್ಯಾದಿ, ಇತ್ಯಾದಿ.