ಅಮೆರಿಕನ್ನಡ
Amerikannada
ಕರ್ಣ
-ಡಾ. ಬಿ.ಎನ್. ಸತ್ಯನಾರಾಯಣ ರಾವ್
ಭಯಂಕರ ಸಂಜೆ. ಮಳೆ ಧೋ ಎಂದು ಸುರಿಯುತ್ತಿತ್ತು. ಮಧ್ಯೆ ಮಧ್ಯೆ ಕೋಲ್ಮಿಂಚುಗಳು, ಬರಸಿಡಿಲುಗಳು ಕತ್ತಲೆಯನ್ನು ಸೀಳಿ ಬಂದು ಎದೆಯನ್ನು ನಡುಗಿಸುತ್ತಿವೆ. ಕರಿ ಮೋಡಗಳು ಬಾನನ್ನು ಆವರಿಸಿ ಸಂಜೆ ನಾಲ್ಕು ಗಂಟೆಯಾಗಿದ್ದರೂ ಅಮಾವಾಸ್ಯೆಯ ರಾತ್ರಿಯಂತೆ ತೋರುತ್ತಿದೆ. ಹಾಸನದಲ್ಲಿ ಇಷ್ಟು ಜೋರಾಗಿ ಮಳೆ ಬಂದಿದ್ದು ತೊಂಬತ್ತು ವರ್ಷಗಳ ಹಿಂದಂತೆ. ಮಧ್ಯಾಹ್ನ ಮೂರು ಗಂಟೆ ತನಕ, ಬಟ್ಟೆ ಮೈಗಂಟುವಂತೆ ಬೆವರಿಸಿದ ಸೆಖೆಯ ಬೆನ್ನಲ್ಲೇ ಬಂದ ಬಿರುಗಾಳಿ ಒಟ್ಟುಗೂಡಿಸಿದ ಕರಿ ಮೋಡಗಳು, ನಾಲ್ಕು ಗಂಟೆ ಹೊತ್ತಿಗೆ, ಹಾಸನ ಹಿಂದೆಂದೂ ಕಾಣದಂಥ, ಕಿವಿ ಗಡಚಿಕ್ಕುವ ಗುಡುಗು, ಕಣ್ಣು ಕೋರೈಸಿ ಕುರುಡಾಗಿಸುವಂತ ಬಗೆ ಬಗೆಯ ವಿನ್ಯಾಸಗಳ ಬಳ್ಳಿ ಮಿಂಚುಗಳು, ಧಾರೆ ಧಾರೆಯಾಗಿ ಸುರಿಯುತ್ತಿರುವ ಜಡಿ ಮಳೆ, ಜನರಿಗೆ ದಿಕ್ಕೇ ತೋಚದಂತೆ ಮಾಡಿತು. ಯಾವ ಕೊಡೆಯೂ ಈ ಮಳೆಯನ್ನು ತಡೆಯುವಂತಿರಲಿಲ್ಲ. ಹಾಗೂ ಧೈರ್ಯ ಮಾಡಿ ಗೋಣಿ ಚೀಲದ ಕುಪ್ಪೆಯನ್ನೋ, ರೆಯಿನ್ ಕೋಟನ್ನೋ ಹಾಕಿ ಹೊರಟ ಕೆಲವರಿಗೆ ಮೂರಡಿ ದೂರದಷ್ಟೂ ದೃಷ್ಟಿ ಹಾಯಿಸಲಾಗದಂಥ ಮಳೆ. ಟಾರ್ಚ್ ಹಾಕಿದರೆ ಬರೀ ತುಂತುರುಗಳಷ್ಟೇ ಕಾಣುತ್ತಿದ್ದುವು. ಲಾರಿಗಳು, ಕಾರುಗಳು ಡಬಲ್ ಸ್ಪೀಡ್ ವೈಪರುಗಳನ್ನೂ, ಹೈ ಬೀಮ್ ಹೆಡ್ ಲೈಟ್‌ಗಳನ್ನು ಹಾಕಿದರೂ ಮುಂದೆ ಹೋಗಲು ಆಗದೆ ರಸ್ತೆಗಳ ಬದಿಯಲ್ಲಿ ಅಲ್ಲಲ್ಲೇ ನಿಂತವು. ಜನ ಎಲ್ಲೆಲ್ಲಿದ್ದರೋ ಅಲ್ಲಲ್ಲೇ ಬಂಧಿಗಳಾದರು. ಮಳೆರಾಯನ ಆರ್ಭಟಕ್ಕೆ ಕೊನೆಯೇ ಇದ್ದಂತಿರಲಿಲ್ಲ. ಹತ್ತಿಪ್ಪತ್ತು ಮರಗಳಾದರೂ ಬುಡಮೇಲಾಗಿರಲೇ ಬೇಕು, ಹಲವಾರು ಮನೆಗಳಾದರೂ ಕುಸಿದಿರಲೇ ಬೇಕು ಎಂದು ಅಲ್ಲಲ್ಲಿ ಜನ ಭಯದಿಂದ ಎಣಿಕೆ ಹಾಕುತ್ತಿದ್ದರು. ಸ್ಕೂಲಿನಿಂದ ಮಕ್ಕಳು ಇನ್ನೂ ಮನೆಗೆ ಬಂದಿಲ್ಲ. ಒಂದೊಂದು ಸಿಡಿಲು ಬಡಿದಾಗಲೂ ತಂದೆ ತಾಯಿಗಳಿಗೆ ಉಸಿರು ಸಿಕ್ಕಿಸುವಂಥ ಆತಂಕ. ’ಈ ಸಿಡಿಲು ಯಾರನ್ನು ಬಲಿ ತೆಗೆದುಕೊಂಡಿತೋ? ದೇವರೇ ನಮ್ಮ ಮಗುವನ್ನು ಕಾಪಾಡಪ್ಪ’ ಎಂದು ಹರಕೆ ಹೊತ್ತವರು ನೂರಾರು.
ಈ ಜಡಿ ಮಳೆಯಲ್ಲಿ ಹೇಮಂತ್ ಅವರ ಕಾರು ನಿಧಾನಗಿ ಚಲಿಸುತ್ತ ಬಂದು ಶಾಂತಲಾ ರೆಸಿಡೆನ್ಸಿ ಹೋಟೆಲಿನ ಆವರಣದಲ್ಲಿ ನಿಂತಿತು. ಬೆಂಗಳೂರಿನ ನೀರು ಸರಬರಾಜು ಇಲಾಖೆಯಲ್ಲಿ ಎಂಜಿನಿಯರ್ ಆಗಿದ್ದ ಹೇಮಂತ್, ಪತ್ನಿ ಕಲ್ಯಾಣಿಯೊಡನೆ ಕುಕ್ಕೆ ಸುಬ್ರಮಣ್ಯಕ್ಕೆ ಹೊರಡುವುದೆಂದು ನಿರ್ಧರಿಸಿದ್ದರು. ಮದುವೆಯಾಗಿ ಹತ್ತು ವರ್ಷಗಳಾದರೂ ಮಕ್ಕಳಿಲ್ಲದ ಚಿಂತೆ ಈ ದಂಪತಿಗಳಿಗೆ. ಐದಾರು ಸ್ಪೆಷಲಿಸ್ಟ್ ಡಾಕ್ಟರುಗಳನ್ನಾಗಲೇ ನೋಡಿಯಾಗಿತ್ತು. ಏನೂ ಪ್ರಯೋಜನ ವಾಗಿರಲಿಲ್ಲ. ಹೇಮಂತ್ ತಂದೆ ತಾಯಿಗಳಿಗೆ ವಿಪರೀತ ನಿರಾಸೆಯಾಗಿತ್ತು. ಕಲ್ಯಾಣಿಯ ತಂದೆ ತಾಯಿಗಳಿಬ್ಬರೂ ಅವಳ ಮದುವೆಯಾದ ಮೂರು ವರ್ಷಗಳಲ್ಲೆ ತೀರಿಕೊಂಡಿದ್ದರು. ಅವಳ ತಮ್ಮ ಶಿವುಗೆ ಆಗಿನ್ನೂ ಹನ್ನೆರಡು ವರ್ಷ. ಗಂಡನನ್ನು ಒಪ್ಪಿಸಿ ತಬ್ಬಲಿಯಾದ ತಮ್ಮನನ್ನು ತನ್ನ ಮನೆಗೇ ಕರೆದುಕೊಂಡು ಬಂದು, ತಾಯಿಯ ಪ್ರೇಮವನ್ನೆರೆದು ಬೆಳೆಸಿದ್ದಳು. ಹೇಮಂತ್‌ಗೂ ಅವನಲ್ಲಿ ವಿಶ್ವಾಸ ಬೆಳೆದಿತ್ತು. ಈಗವನು ಹತ್ತೊಂಬತ್ತು ವರ್ಷದ ತರುಣ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ. ಈ ದಂಪತಿಗಳಿಗೆ ಮಕ್ಕಳಿಲ್ಲದೆ ಒಳಗೇ ಸುಪ್ತವಾಗಿದ್ದ ಕೊರಗು ಹೊತ್ತಿ ಉರಿಯತೊಡಗಿತು. ಕಲ್ಯಾಣಿಗೆ ಮುವತ್ತೆರಡು ವರ್ಷ ತುಂಬಿ ಬಂಜೆತನ ಕುಕ್ಕಿ ಕುಕ್ಕಿ ಕಾಡುತ್ತಿತ್ತು.
“ಹೇಮಂತ್, ಮುಂದೆ ನಮ್ಮ ಗತಿ ಏನು? ಶಿವು ನೋಡಿಕೊಂಡು ನನ್ನ ನೋವನ್ನು ಮರೆತಿದ್ದೆ. ಇನ್ನು ಮೂರು ವರ್ಷದಲ್ಲಿ ಅವನೂ ಮನೆ ಬಿಟ್ಟು ಹೋಗುವವನೇ. ಆಮೇಲೆ ನಾವು ಒಂಟಿಯೇ.”
“ಅವನೇ ನಮ್ಮ ಮಗ ಎಂದುಕೊಂಡರಾಯ್ತು” ಎಂದರು ಹೇಮಂತ್. “ನನ್ನ ತಮ್ಮನೇ ಆದರೂ ಮಗನಂತಾಗುವುದಿಲ್ಲವಲ್ಲ” ಪ್ರಶ್ನಿಸಿದಳು ಕಲ್ಯಾಣಿ.
“ನೋಡು ಕಲ್ಯಾಣಿ, ದೇವರು ಅವನನ್ನು ತಬ್ಬಲಿ ಮಾಡಿದ. ಅವನನ್ನು ಕಾಪಾಡಲೆಂದೇ ನಮಗೆ ಈ ಪರಿಸ್ಥಿತಿ ಕೊಟ್ಟ. ನಿಜವಾಗಲೂ ಹೇಳು, ಮದುವೆಯಾಗಿ ವರ್ಷವಾದ ಮೇಲೆ ನಮಗೆ ಮಗ ಹುಟ್ಟಿದ್ದರೆ, ನೀನು ಶಿವುನ ಇಷ್ಟು ಅಕ್ಕರೆಯಿಂದ ಬೆಳೆಸಲು ಸಾಧ್ಯವಿತ್ತೇ? ಇದೆಲ್ಲಾ ‘ಹುಟ್ಟಿಸಿದ ದೇವರು ಹುಲ್ಲ ಮೇಯಿಸನೆ’ ಎಂಬ ಅವನ ತಂತ್ರ.”
“ಸಾಕು, ಸಾಕು, ನಿಮ್ಮ ವೇದಾಂತ. ನನ್ನ ವಾರಿಗೆಯವರಿಗೆಲ್ಲಾ ಈಗ ಎರಡು, ಮೂರು ಸ್ಕೂಲಿಗೆ ಹೋಗುವ ಮಕ್ಕಳಿವೆ. ನೋಡಿದರೆ ಹೊಟ್ಟೆ ಕಿವುಚುತ್ತೆ.”
“ಸಮಾಧಾನ ಮಾಡಿಕೋ. ಹಾಗೆಲ್ಲಾ ಹೊಟ್ಟೆ ಕಿಚ್ಚು ಪಡಬಾರದು”
ಮೊನ್ನೆ ಡಾ. ದಮಯಂತಿಯವರನ್ನ ಮತ್ತೆ ಕೇಳಿದೆ. “ಏನಾದರೂ ಸಾಧ್ಯವಿದೆಯಾ” ಅಂತ. ಅದಕ್ಕೆ ಅವರು, “ನಮ್ಮ ಪ್ರಯತ್ನವೆಲ್ಲಾ ನಾವು ಮಾಡಿದ್ದಾಯಿತು. ಈಗೊಬ್ಬರು ಹೊಸ ಅಬ್ಸ್ಟೆಟ್ರಿಷಿಯನ್ ಬಂದಿದ್ದಾರೆ. ಟೆಸ್ಟ್ ಟ್ಯೂಬ್ ಬೇಬಿ ಅಂತ ನೀವು ಕೇಳಿರಬಹುದು. ಅವರು ಅದನ್ನು ಕಲಿತು ಬಂದಿದ್ದಾರೆ. ಏಳೆಂಟು ಕೇಸ್ ಗಳನ್ನು ಮಾಡಿದ್ದಾರಂತೆ. ನೀವು ಅವರನ್ನು ಒಂದು ಸಲ ಕೇಳಿ ನೋಡಿ. ಡಾ. ಸೌಮ್ಯ ಅಂತ ಅವರ ಹೆಸರು.” ಎಂದು ಹೇಳಿ ಅವರ ಅಡ್ಡ್ರೆಸ್ ಕೊಟ್ಟರು.
“ಸರಿ ಪ್ರಯತ್ನ ಮಾಡೋಣ.” ಎಂದು ಹೇಮಂತ್ ಅರೆಮನಸ್ಸಿನಿಂದ ಹೇಳಿದರು. ಮಾರನೆ ದಿನವೇ ಹೇಮಂತ್ ಮತ್ತು ಕಲ್ಯಾಣಿ ಡಾ. ಸೌಮ್ಯ ಅವರನ್ನು ಭೇಟಿ ಮಾಡಿದರು. ಡಾ.ಸೌಮ್ಯ ಹೇಳಿದರು. “ಪ್ರಯತ್ನವೇನೋ ಮಾಡಬಹುದು. ಆದರೆ ಮಗು ಆಗಿಯೇ ಆಗುತ್ತೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸರಾಸರಿ ಹೇಳುವುದಾದರೆ ಎರಡು ಮೂರು ಸಲ ಪ್ರಯತ್ನಿಸಿದರೆ ಒಂದು ಸಲ ಗರ್ಭ ನಿಲ್ಲಬಹುದು. ಕೆಲವರಿಗೆ ಇನ್ನೂ ಹೆಚ್ಚು ಸಲ ಬೇಕಾಗಬಹುದು. ಈಗ ನಾನು ಹನ್ನೆರಡು ಪೇಷಂಟ್‌ಗಳ ಮೇಲೆ ನಲವತ್ತು ಪ್ರಯತ್ನ ಮಾಡಿದ್ದೇನೆ. ಐದು ಮಕ್ಕಳು ಹುಟ್ಟಿವೆ. ಒಂದೊಂದು ಪ್ರಯತ್ನಕ್ಕೂ ಸುಮಾರು ೬೦-೭೦ ಸಾವಿರ ಅಗುತ್ತೆ. ಮರುಪ್ರಯತ್ನಕ್ಕೆ ಮತ್ತೆ ೩೦-೪೦ ಸಾವಿರ ಆಗುತ್ತೆ.” ಎಂದು ಡಾ. ಸೌಮ್ಯ ಹೇಳಿದರು.
ಮನೆಗೆ ಬರುತ್ತ ಹೇಮಂತ್ ಹೇಳಿದರು. “ಕಲ್ಯಾಣಿ, ಈ ರೇಜಿಗೆಯಲ್ಲ ಯಾಕೆ? ಹೀಗೇ ಇದ್ದುಬಿಡೋಣ. ಹೊಟ್ಟೆಯಲ್ಲಿ ಹುಟ್ಟಿದ ಮಾತ್ರಕ್ಕೆ ಮಕ್ಕಳು ನಮ್ಮ ಪ್ರೀತಿಯ ಮಕ್ಕಳಾಗುತ್ತಾರೆ, ಸರಿಯಾಗಿರುತ್ತಾರೆ ಅಂತ ಹೇಳುವುದಕ್ಕಾಗುವುದಿಲ್ಲವಲ್ಲ. ಈಗ ಶಿವು ನಮಗೆ ಮಗನ ಹಾಗೇ ಇದ್ದಾನಲ್ಲ, ಇನ್ನೇನು ಬೇಕು?”
“ಅಯ್ಯೋ, ಹೆಂಗಸಿನ ಹೊಟ್ಟೆ ಸಂಕಟ, ತಾಯ್ತನದ ಹಂಬಲ ಗಂಡಸರಿಗೆ ಗೊತ್ತಾಗುಲ್ಲ ಹೇಮಂತ್”
“ಒಂದು ಮಗುವನ್ನು ಅಂದರೆ ಆಗತಾನೆ ಹುಟ್ಟಿದ ಅಥವಾ ೩-೪ ತಿಂಗಳಿನ ಮಗುವನ್ನು ದತ್ತ್ಯ್ ತೆಗೊಂಡರೆ ಮಗುವಿಗೂ ಒಂದು ನೆಲೆಯಾಯಾಗುತ್ತೆ, ನಿನಗೆ ತಾಯ್ತನವೂ ಸಿಗುತ್ತೆ. ಏನಂತೀಯ?”
“ಈಗ ನಮಗೆ ಶಿವು ದತ್ತು ಮಗನ ತರವೇ ಇಲ್ಲವೇ? ನನಗೆ ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವೇ ಬೇಕು” ಎಂದು ಹಠ ಹಿಡಿದಳು ಕಲ್ಯಾಣಿ. “ಸರಿ, ಮತ್ತೆ ಡಾ. ಸೌಮ್ಯ ಅವರನ್ನು ನೋಡೋಣ.” ಕಲ್ಯಾಣಿ ಯೋಚಿಸುತ್ತಿದ್ದಳು. ಈ ಹಾಳು ಗಂಡಸರಿಗೆ ನಮ್ಮ ಕಷ್ಟ ಹೇಗೆ ತಿಳಿಯುತ್ತೆ. ಹುಟ್ಟಿಸುವುದೊಂದು ಮಾತ್ರ ಗೊತ್ತು ಅವರಿಗೆ. ಹೊತ್ತು, ಹೆರುವುದರಲ್ಲಿರುವ ನೋವು, ನಲಿವು, ಕರುಳ ಬಳ್ಳಿಯ ಸಂಬಂಧ ಇವರಿಗೇನು ಗೊತ್ತು. ಯಾವುದೋ ಮಗುವನ್ನು ಅಡಾಪ್ಟ್ ಮಾಡಿಕೊಂಡರೆ ಹೇಗ ಸಾಧ್ಯ?
ಡಾ.ಸೌಮ್ಯ ಅವರ ಕ್ಲಿನಿಕ್‌ಗೆ ಹತ್ತು ಹನ್ನೆರಡು ಸಲ ಹೋಗಿಯಾಯಿತು. ಎರಡು ವರ್ಷದಲ್ಲಿ ನಾಲಕ್ಕು ಪ್ರಯತ್ನಗಳು ವಿಫಲವಾದವು. ಕಲ್ಯಾಣಿ ನಿರಾಸೆಯಿಂದ ಕುಸಿದಳು. ಹೇಮಂತ್‌ಗೂ ತಾಳ್ಮೆ ಮೀರುತ್ತ ಬಂತು. “ಕಲ್ಯಾಣಿ, ಇಲ್ಲಿಗೆ ಈ ಪ್ರಯತ್ನ ಇನ್ನು ಸಾಕು. ಪ್ರತಿ ಸಲವೂ ಮಗುವನ್ನು ಕಳೆದುಕೊಂಡಷ್ಟೇ ದುಃಖವಾಗುತ್ತಿದೆ. ನೀನಂತೂ ಕಂದಿ ಹೋಗಿದ್ದೀಯ.” “ಆಯಿತು” ಎಂದಳು ಕಲ್ಯಾಣಿ. ಅದು ತೀವ್ರ ನಿರಾಸೆಯಿಂದ ಹೊರಬಂದ ಮಾತು ಎಂದು ಹೇಮಂತ್‌ಗೆ ಅನ್ನಿಸದಿರಲಿಲ್ಲ. ಅವರಿಗೆ ಮಗುವಿಗಿಂತ ಕಲ್ಯಾಣಿಯ ಆರೋಗ್ಯವೇ ಮುಖ್ಯವಾಗಿತ್ತು. ಎಲ್ಲಿ ಅವಳಿಗೆ ಬುದ್ಧಿ ಭ್ರಮಣೆಯಗುತ್ತೊ ಎಂದು ಹೆದರಿದ್ದರು. ಹೇಮಂತ್ ಅವರ ತಂದೆ ಸದಾಶಿವಯ್ಯ ಒಂದು ದಿನ ಮಾತೆತ್ತಿದರು. “ಕಲ್ಯಾಣಿ, ನೀನು ಎಷ್ಟು ಸೊರಗಿ ಹೋಗಿದ್ದೀಯಮ್ಮ. ದೇವರಿಗೆ ಯಾಕೋ ನಿನ್ನ ಮೇಲೆ ಇನ್ನೂ ಕರುಣೆ ಬಂದಿಲ್ಲ. ನೀವು ಈಗಿನ ಕಾಲದವರು. ನಮ್ಮ ಸಾಂಪ್ರದಾಯಿಕ ನಂಬಿಕೆಗಳು ನಿಮಗಿಲ್ಲದಿರಬಹುದು. ಆದರೆ ನನಗೋಸ್ಕರ ಒಂದು ಪ್ರಯತ್ನ ಮಾಡಿ.” “ಏನದು ಮಾವಯ್ಯ?” ಎಂದು ಕೇಳಿದಳು. “ನಾನು ನಮ್ಮ ಪುರೋಹಿತರು, ನಾಗಾಜೋಯಿಸರನ್ನು ನೋಡಿದ್ದೆ. ಅವರು ನಿಮ್ಮಗಳ ಜಾತಕ ನೋಡಿ, ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ನಾಗ ಪ್ರತಿಷ್ಠೆ ಮಾಡಿಸಿ ಎಂದರು. ನಾಲ್ಕು ದಿನ ಹೋಗಿ ಬನ್ನಿ. ಏನಿಲ್ಲಾಂದರೂ ನಿಮ್ಮ ಮನಸ್ಸಿನ ಬೇಜಾರಾದರೂ ಕಳೆಯಬಹುದು. ಈ ಬೆಂಗಳೂರನ್ನು ಮರೆತು ಹಾಯಾಗಿ ನಾಲ್ಕು ದಿನ ಹೋಗಿ ಬನ್ನಿ. ಅಲ್ಲಿಯ ಪರಿಸರ ನಿಮ್ಮ ಮನಸ್ಸಿಗೆ ಶಾಂತಿಯನ್ನಾದರೂ ತಂದೀತು.” “ಆಗಲಿ ಅಪ್ಪ. ನಾನು ನಾಳೇನೇ ವ್ಯವಸ್ಥೆ ಮಾಡುತ್ತೇನೆ” ಎಂದು ಹೇಮಂತ್ ಹೇಳಿದರು. ಕಲ್ಯಾಣಿಯೂ ಒಪ್ಪಿದಳು.
ಹೇಮಂತ್ ಐದು ದಿನ ರಜ ತೆಗೆದುಕೊಂಡು ಕಲ್ಯಾಣಿ ಜೊತೆ ತಮ್ಮ ನೀಲಿ ಬಣ್ಣದ ಸಾಂಟ್ರೊ ಕಾರಿನಲ್ಲಿ ತೀರ್ಥಯಾತ್ರೆ ಹೊರಟರು. ಹಾಸನದ ಮಾರ್ಗವಾಗಿ ಹೋಗಿ ಕುಕ್ಕೆ ಸುಬ್ರಮಣ್ಯವನ್ನು ಸಂಜೆ ತಲುಪಿದರು. ದಾರಿಯಲ್ಲಿ ಹಸಿರು ತುಂಬಿ ನಿಂತ ಗದ್ದೆಗಳು ,ತೋಟಗಳು, ಸುಬ್ರಮಣ್ಯದ ಹತ್ತಿರವಿದ್ದ ದಟ್ಟವಾದ ಕಾಡು ಕಲ್ಯಾಣಿಯ ಮನಸ್ಸಿನ ತುಮುಲವನ್ನು ಶಾಂತಗೊಳಿಸಿ ನಾಗಾ ಜೋಯಿಸರ ಮಾತಿನಲ್ಲಿ ಭರವಸೆಯನ್ನೂ ಮೂಡಿಸಿದವು. ಸುಬ್ರಮಣ್ಯದಲ್ಲಿ ಒಂದು ಗೆಸ್ಟ್ ಹೌಸ್‌ನಲ್ಲಿ ಇಳಿದುಕೊಳ್ಳಲು ಏರ್ಪಾಡಾಗಿತ್ತು. ನಾಗಾಜೋಯಿಸರು ಪರಿಚಯವಿದ್ದ ಪುರೋಹಿತರಿಗೆ ಹೇಳಿ ನಾಗ ಪ್ರತಿಷ್ಠೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರು. ದಂಪತಿಗಳು ಎರಡು ದಿನ ಇದ್ದು ಭಕ್ತಿಯಿಂದ ಸುಬ್ರಮಣ್ಯನ ಸೇವೆ ಮಾಡಿ ಸಂತತಿಗಾಗಿ ಬೇಡಿಕೊಂಡರು. ಮಾರನೆ ದಿನ ಬೆಳಿಗ್ಗೆ ಹೊರಟು ಮಧ್ಯಾಹ್ನ ಧರ್ಮಸ್ಥಳಕ್ಕೆ ಹೋಗಿ,ಸಂಜೆ ಹೊತ್ತಿಗೆ ಉಡುಪಿ ತಲುಪಿದರು. ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿ ಮಲ್ಪೆ ಬೀಚಿಗೆ ಹೋಗಿ ರಾತ್ರಿವರೆಗೂ ಅಲ್ಲಿಯೇ ಕುಳಿತಿದ್ದರು. ಒಂದರಮೇಲೊಂದು ನಿರಂತರವಾಗಿ ಬರುತ್ತಿದ್ದ ಅಲೆಗಳನ್ನು ದಿಟ್ಟಿಸಿ ನೋಡುತ್ತ, ಕಲ್ಯಾಣಿ ಅನ್ಯಮನಸ್ಕಳಾಗಿ ಕುಳಿತಿದ್ದಳು. ಸೂರ್ಯನ ಪ್ರಖರತೆ ಕಮ್ಮಿ ಕಮ್ಮಿಯಾಗುತ್ತಾ ಬಂದು, ಅವನು ದೊಡ್ಡ ಬೆಂಕಿಯ ಉಂಡೆಯಾಗಿ, ದಿಗಂತದ ಅಂಚಿನಲ್ಲಿ ನೀಲವರ್ಣದ ಸಾಗರದ ಮೇಲೆ ತನ್ನ ಬಣ್ಣವನ್ನು ಚೆಲ್ಲಿ ಕ್ರಮೇಣ ಸಾಗರದೊಳಗೆ ಮುಳುಗಿದನು. ಇನ್ನೂ ಹದಿನೈದು ನಿಮಿಷಗಳಲ್ಲಿ ಕೆಂಪು ರಂಗನ್ನು ಅಂಟಿಸಿಕೊಂಡಿದ್ದ ಆಕಾಶವನ್ನು ಕ್ರಮೇಣ ಕತ್ತಲೆಯು ಆವರಿಸಿತು. ಕಲ್ಯಾಣಿಯ ಕೈ ಹಿಡಿದು ಕುಳಿತಿದ್ದ ಹೇಮಂತ್ ಕೇಳಿದರು.
“ಎಂತಹ ರಮ್ಯವಾದ ಸಂಜೆಯಿದು. ನೀನು ಮಾತನಾಡಿ ಒಂದು ಗಂಟೆಯ ಮೇಲಾಯಿತು. ನೀನು ಪ್ರಕೃತಿಯಲ್ಲಿ ಅಷ್ಟು ತಲ್ಲೀನಳಾಗಿರುವುದನ್ನು ನೋಡಿ, ಅದಕ್ಕೆ ಭಂಗ ತರಲು ಇಷ್ಟವಾಗಲಿಲ್ಲ. ಏನು ಯೋಚಿಸುತ್ತಿದ್ದೆ ಕಲ್ಯಾಣಿ?” “ನಿಜವಾಗಿಯೂ ಇದು ಅತಿ ಸುಂದರವಾದ ಸಂಜೆ. ಆದರೆ ನಾನು ನೋಡುತ್ತಿದ್ದುದು ಅಲ್ಲಿ ಅರೆಬೆತ್ತಲೆಯಾಗಿ ಕುಣಿಯುತ್ತಿದ್ದ ಬೆಸ್ತರ ಮಕ್ಕಳನ್ನು. ಎಲ್ಲರಿಗೂ ಮಕ್ಕಳನ್ನು ಕೊಟ್ಟ ದೇವರು ನನ್ನನ್ನು ಮಾತ್ರ ಮರೆತನಲ್ಲ ಎಂದು.” ಹಾಗಾದರೆ ನಿನ್ನ ಮನಸ್ಸಿಗಿನ್ನೂ ನೆಮ್ಮದಿಯಿಲ್ಲ ಅನ್ನು. ಈ ಪೂಜೆಗಳಲ್ಲಿ ನನಗಷ್ಟು ನಂಬಿಕೆಯಿಲ್ಲದಿದ್ದರೂ, ಒಂದು ರೀತಿಯಲ್ಲಿ ನಂಬಿಕೆಯಿಲ್ಲದೆ ಮನುಷ್ಯ ಇರಲು ಸಾಧ್ಯವಿಲ್ಲ ಅನ್ನಿಸಿತು. ಅಲ್ಲಿ ಅಷ್ಟೊಂದು ಜನ ಭಕ್ತಾದಿಗಳು ಬಂದು ದೇವರ ದರ್ಶನ ಮಾಡುತ್ತಿದ್ದರು. ಅವರ ದೃಷ್ಟಿಯಲ್ಲಿ ಕಾಣುತ್ತಿದ್ದ ಭಕ್ತಿ ಭಾವ, ಅವರ ದೃಢ ನಂಬಿಕೆ, ಶರಣಾಗತಿ, ನನ್ನಲ್ಲೇನನ್ನೋ ಸ್ಪಂದಿಸಿತು. ನಾವು ಮಾಡಿದ ನಾಗ ಪ್ರತಿಷ್ಠೆಯಿಂದ ಏನೋ ಒಳ್ಳೆಯದಾಗುತ್ತೆ ಅನ್ನಿಸಿತು. “ನನಗೂ ಹಾಗೆ ಅನ್ನಿಸಿತು. ನೋಡೋಣ, ಡಾಕ್ಟರುಗಳಿಗೆ ಸಾಧ್ಯವಿಲ್ಲ ಎಂದರೆ ದೇವರಿಗೂ ಸಾಧ್ಯವಿಲ್ಲವೇ. ಆಗಲಿ ಇದು ದೇವರಿಗೂ ಒಂದು ಪರೀಕ್ಷೆ.” “ನೀನು ನೊಂದಿದ್ದೀಯ, ಆದರೆ ದೇವರನ್ನು ಹಳಿಯಬಾರದು.” “ಕತ್ತಲಾಯಿತು, ಹೋಗೋಣ ಬನ್ನಿ.”
ಹತ್ತಿರದಲ್ಲೇ ಇದ್ದ ಒಂದು ಹೋಟಲಿನಲ್ಲಿ ಊಟ ಮಾಡಿಕೊಂಡು ಗೆಸ್ಟ್ ಹೌಸ್‌ಗೆ ಬರುತ್ತಿದ್ದಾಗ ದಾರಿಯಲ್ಲಿ ಒಂದು ದೊಡ್ಡ ಮೈದಾನದಲ್ಲಿ ಟೆಂಟ್ ಹಾಕಿದ್ದರು. ಅಲ್ಲಿ ಅವತ್ತು ರಾತ್ರಿ ದಕ್ಷಿಣ ಕನ್ನಡದಲ್ಲಿ ಹೆಸರುವಾಸಿಯಾದ ಯಕ್ಷಗಾನ ತಂಡದವರಿಂದ ಯಕ್ಷಗಾನದ ಕಾರ್ಯಕ್ರಮವಿತ್ತು. “ಇಷ್ಟು ದೂರ ಬಂದಿದ್ದಾಯಿತು. ಯಕ್ಷಗಾನ ನೋಡೋಣ. ಬೆಂಗಳೂರಿನಲ್ಲಿ ಟಿ.ವಿ., ಸಿನಿಮ, ನೋಡಿ ನೋಡಿ ಸಾಕಾಗಿದೆ. ಹೋಗೋಣವೆ?” ಕೇಳಿದರು ಹೇಮಂತ್. “ಆಗಲಿ, ಆದರೆ ಇದು ರಾತ್ರಿಯೆಲ್ಲಾ ನಡೆಯುತ್ತೆ, ನೀವು ನಾಳೆ ಮತ್ತೆ ಡ್ರೈವ್ ಮಾಡಬೇಕಲ್ಲ.” ಎಂದಳು ಕಲ್ಯಾಣಿ. ಬೆಳಿಗ್ಗೆ ನಿಧಾನವಾಗಿ ಎದ್ದು ಹೋದರಾಯಿತು. ಬಾ. ಹೋಗೋಣ
ಟಿಕೆಟ್ ತೆಗೆದುಕೊಂಡು ಇಬ್ಬರೂ ಹೋಗಿ ಮುಂದಿನ ಸಾಲಿನಲ್ಲಿದ್ದ ಕಬ್ಬಿಣದ ಕುರ್ಚಿಗಳಲ್ಲಿ ಕುಳಿತರು. ಕಿವಿ ಗಡಚಿಕ್ಕುವಂತ ಸಂಗೀತ. ಯಕ್ಷಗಾನ ಆಗಲೇ ಶುರುವಾಗಿತ್ತು. ಅವತ್ತಿನ ಪ್ರಹಸನ ಮಹಾಭಾರತದ ದಾನಶೂರ ಕರ್ಣನದು. ಯಕ್ಷಗಾನದವರು ಅದ್ಭುತವಾಗಿ ಕುಣಿಯುತ್ತಿದ್ದರು. ಮಹಾರಾಜ ಕುಂತೀಭೋಜನ ಅರಮನೆಗೆ ದೂರ್ವಾಸ ಮುನಿಗಳು ಆಗಮಿಸುತ್ತಾರೆ. ಮಹಾ ಕೋಪಿಷ್ಟರಾದ ಈ ಮುನಿವರ್ಯರನ್ನು ಯಾವ ಲೋಪವೂ ಬಾರದಂತೆ ನೋಡಿಕೊಳ್ಳಲು, ಮಹಾರಾಜನು ತನ್ನ ಮಗಳು ಕುಂತಿಯನ್ನೇ ನೇಮಿಸುತ್ತಾನೆ. ಶ್ರದ್ಧಾಭಕ್ತಿಗಳಿಂದ ಅವರಿಗೆ ಸೇವೆ ಮಾಡಿ ಕುಂತಿ ಅವರ ಮೆಚ್ಚುಗೆಯನ್ನು ಪಡೆಯುತ್ತಾಳೆ. ಸುಪ್ರೀತರಾದ ದೂರ್ವಾಸರು ಕುಂತಿಗೆ ಒಂದು ಮಂತ್ರದ ವರವನ್ನು ಕೊಡುತ್ತಾರೆ. ಈ ಮಂತ್ರವನ್ನು ಜಪಿಸಿ ನೀನು ಯಾವ ದೇವತೆಯನ್ನು ಕರೆದರೂ ಅವನು ಬಂದು ನಿನ್ನ ವಶವಾಗುತ್ತಾನೆ ಎಂದರು. ಆಗ ಕುಂತಿಯಿನ್ನೂ ಕನ್ಯೆ. ದೂರ್ವಾಸರು, ಇನ್ನೂ ಪ್ರೌಢೆಯಾಗದ ಕನ್ಯೆಗೆ ಯೋಗ್ಯನಾದ ಪತಿ ದೊರಕಲಿ ಎಂದು ಆಶೀರ್ವದಿಸುವ ಬದಲು ಅನ್ಯದೇವತೆಗಳನ್ನು ವಶಮಾಡಿಕೊಳ್ಳುವ ಮಂತ್ರವನ್ನೇಕೆ ಕೊಟ್ಟರೋ ಎಂಬುದು ಮಹಾಭಾರತದಲ್ಲಿ ಬರುವ ಅನೇಕ ಜಿಜ್ಞಾಸೆಗಳಲ್ಲಿ ಒಂದು. ಕುಂತಿಯನ್ನು ವರಿಸುವ ಪಾಂಡು ಶಾಪಗ್ರಸ್ತನಾಗುತ್ತಾನೆಂದು ಅವರಿಗೆ ದಿವ್ಯದೃಷ್ಟಿಯಿಂದ ತಿಳಿದಿದ್ದಿರಬಹುದು. ಕುಂತಿ ಕುತೂಹಲ ತಡೆಯಲಾರದೆ ಮಂತ್ರ ಶಕ್ತಿಯನ್ನು ಪರೀಕ್ಷಿಸುತ್ತಾಳೆ. ಯಾರನ್ನು ಆಹ್ವಾನಿಸುವುದು? ಎದುರಿಗೆ ಉದಯಿಸುತ್ತಿದ್ದ ಸೂರ್ಯದೇವನನ್ನು ಕರೆಯುತ್ತಾಳೆ. ಸೂರ್ಯದೇವನು ತಕ್ಷಣ ಪ್ರತ್ಯಕ್ಷನಾಗಿ ಒಂದು ವರ ಪುತ್ರನನ್ನು ವಜ್ರಕವಚ ಮತ್ತು ಕರ್ಣಕುಂಡಲಿಗಳ ಸಮೇತ ಕುಂತಿಗೆ ಕೊಟ್ಟು ಅದೃಶ್ಯನಾಗುತ್ತಾನೆ.
ಕಲ್ಯಾಣಿ ನಕ್ಕಳು. “ಹೇಮಂತ್ ಇದು ಎಷ್ಟು ಸಿಲ್ಲಿ ಅನ್ನಿಸುವುದಿಲ್ಲವೇ?” “ಏಕೆ ನಗುತ್ತೀಯ. ಈಗ್ ಟೆಸ್ಟ್ ಟೂಬ್ ಬೇಬಿಗಳು, ಕೃತಕ ವೀರ್ಯ ಜನಿತ ಶಿಶುಗಳು, ಸರೊಗೇಟ್ ತಾಯಿಗಳು ಅಂದರೆ ದಂಪತಿಗಳ ವೀರ್ಯಾಣು ಮತ್ತು ಅಂಡಾಣುಗಳನ್ನು ಪ್ರಯೋಗ ಶಾಲೆಯಲ್ಲಿ ಕೂಡಿಸಿ ಅದನ್ನು ಹಣದಾಸೆಗೆ ಒಪ್ಪಿಕೊಳ್ಳುವ ಇನ್ನೊಂದು ಹೆಣ್ಣಿನ ಗರ್ಭದಲ್ಲಿಟ್ಟು ಬೆಳೆಸುವುದು, ಇದೆಲ್ಲ ಸಾಧ್ಯವಾಗಿದೆಯಲ್ಲಾ”
ತನ್ನ ತೋಳುಗಳ ಮೇಲೆ ತಕ್ಷಣವೆ ಅವತರಿಸಿದ ವರಪುತ್ರನನ್ನು ನೋಡಿ ಕುಂತಿ ಗಾಬರಿಯಾಗುತ್ತಾಳೆ. ಕನ್ಯೆಯಾದ ತನಗೆ ಮಗುವಾಗಿರುವುದು, ತನ್ನನ್ನು ಮತ್ತು ತಂದೆ ತಾಯಿಗಳನ್ನು ಅಪಮಾನಕ್ಕೀಡು ಮಾಡುತ್ತೆಂದು ಹೆದರುತ್ತಾಳೆ. ಗುಟ್ಟಾಗಿ ಆ ಮಗುವನ್ನು ಒಂದು ಭದ್ರವಾದ ಪೆಟ್ಟಿಗೆಯಲ್ಲಿಟ್ಟು, ನದಿಯಲ್ಲಿ ತೇಲಿಬಿಟ್ಟು ಸರ್ವದೇವತೆಗಳಿಗೂ ತನ್ನ ಪುತ್ರನನ್ನು ರಕ್ಷಿಸುವಂತೆ ಮೊರೆಇಡುತ್ತಾಳೆ. ಕಲ್ಯಾಣಿಗೆ ಇದು ಬಹಳ ಖೇದವೆನಿಸಿತು. ಮಹಾಭಾರತದಲ್ಲಿ ಕುಂತಿಯ ಪಾತ್ರ ಬಹಳ ಅಸಹ್ಯವೆನಿಸಿತು. ಅವಳ ಜೀವನವೆಲ್ಲ ದ್ವಂದ್ವ ಮತ್ತು ಜಿಜ್ಞಾಸೆಗಳೇ. ದೂರ್ವಾಸರು ಪ್ರೀತಿ ಮತ್ತು ಮುಂದಾಲೋಚನೆಯಿಂದ ಅನುಗ್ರಹಿಸಿದ ಮಂತ್ರವನ್ನು ಕೇವಲ ಬಾಲಿಶ ಕುತೂಹಲದಿಂದ ಪರೀಕ್ಷಿಸಿದ್ದು, ಅದರಿಂದ ಒದಗಿದ ಮಗುವನ್ನು ನದಿಯ ಪಾಲು ಮಾಡಿದ್ದು (ಮಹಾರಾಜನಿಗೆ ಹೇಳಿ ಒಬ್ಬ ದಾಸಿಯ ಮನೆಯಲ್ಲಿ ಬೆಳೆಸಬಹುದಿತ್ತು. ಅವಳಿಗೆ ತನ್ನ ಮಾನದ ರಕ್ಷಣೆ ಮಗುವಿನ ಪ್ರಾಣಕ್ಕಿಂತ ಮುಖ್ಯವಾಯಿತು). ರಾಜಕುಮಾರಿಯಾಗಿದ್ದು ಅತಿ ಸಾಮಾನ್ಯ ಹೆಣ್ಣಿಗಿಂತ ಕೀಳಾಗಿ ನಡೆದುಕೊಂಡಳಲ್ಲ. ದೂರ್ವಾಸರಿಗೆ ದಿವ್ಯಜ್ಞಾನದಿಂದ ಇದು ತಿಳಿದು ಕೋಪಬರಲಿಲ್ಲವೆ? ಅನಂತರ ಅವಳು ಪಾಂಡು ಮಹಾರಾಜನ ರಾಣಿಯಾಗಿ ವಿಜೃಂಭಿಸಿದ್ದು. ಪಾಂಡು ಶಾಪಗ್ರಸ್ತನಾದ ಮೇಲೆ ಮಂತ್ರಶಕ್ತಿಯಿಂದ ಪಡೆದ ಪಂಚ ಪಾಂಡವರನ್ನು ಪ್ರೀತಿಯಿಂದ ಬೆಳೆಸುತ್ತಾ, ಹಿರಿಯ ಮಗ ಕರ್ಣನ ವಿಷಯವನ್ನೇ ಮರೆತಿದ್ದು, ಕರ್ಣ ಬೆಳೆದು ಹಸ್ತಿನಾಪುರಕ್ಕೆ ಬಂದು ಪರಶುರಾಮರಿಂದ ತಾನು ಕಲಿತ ವಿದ್ಯೆಯನ್ನು ಪ್ರದರ್ಶಿಸಿ ಅರ್ಜುನನಿಗೆ ಸಮನಾಗಿ ನಿಂತರೂ, ಸೂತಪುತ್ರನೆಂದು ನಿಂದಿಸಿಕೊಂಡಿದ್ದನ್ನು ನೋಡಿಯೂ, ಅವನ ವಜ್ರಕವಚ, ಕರ್ಣಕುಂಡಲಿಗಳಿಂದ ಅವನು ತನ್ನ ಮಗನೆಂದು ತಿಳಿದರೂ, ತನ್ನ ಗುಟ್ಟನ್ನು ಬಿಡದೆ, ಕರ್ಣನನ್ನು ದುರ್ಯೋಧನನ ಕೃಪೆಗೆ ಬಿಟ್ಟಿದ್ದು, ನಂತರ ಕೌರವ ಪಾಂಡವರ ದ್ವೇಷ ಬೆಳೆದು ಕುರುಕ್ಷೇತ್ರ ಯುದ್ಧ ಅನಿವಾರ್ಯವಾದಾಗ, ಕರ್ಣ ತನ್ನ ಮಗನೆಂದು ತಿಳಿದಿದ್ದರೂ, ಅವನ ದಾನಶೀಲತೆಯನ್ನು ದುರುಪಯೋಗಪಡಿಸಿಕೊಂಡು , ಪಾಂಡವರನ್ನು ಕೊಲ್ಲುವುದಿಲ್ಲ ಎಂದು ವಚನಕೊಡು ಎಂದು ಕೇಳಿದ್ದು (ಅರ್ಜುನನ್ನು ಹೊರತು ಮಿಕ್ಕ ಪಾಂಡವರನ್ನು ಕೊಲ್ಲುವುದಿಲ್ಲ ಎಂದು ವಚನ ಕೊಡುತ್ತಾನೆ ಕರ್ಣ). ಕೊನೆಗೆ ತಿಳಿದೂ ತಿಳಿದೂ ಕರ್ಣನ ರಹಸ್ಯವನ್ನು ಮೊದಲಿಂದಲೂ ಬಚ್ಚಿಟ್ಟಿದ್ದಳೆಂದು ಧರ್ಮಜನಿಗೆ ಕರ್ಣನ ಶವದ ಮುಂದೆ ತಿಳಿದಾಗ, "ಯಾವ ರಹಸ್ಯವನ್ನೂ ಕಾಪಾಡಲು ಹೆಣ್ಣಿಗೆ ಸಾಧ್ಯವಾಗದಿರಲಿ" ಎಂದು ಇಡೀ ಹೆಣ್ಣು ಕುಲಕ್ಕೇ ಶಾಪವನ್ನು ಕೊಡುವಂತೆ ಮಾಡಿದ್ದು-ಇದೆಲ್ಲವೂ ಸರಣಿ ಸರಣಿಯಾಗಿ ಕಲ್ಯಾಣಿಯ ಮನಸ್ಸಿಗೆ ಬಂದು ವಿಷಾದದಿಂದ ನಕ್ಕಳು. ಆದರೆ ಪೆಟ್ಟಿಗೆಯಲ್ಲಿ ತೇಲಿ ತಮ್ಮಬಳಿಗೆ ಬಂದ ಮಗುವನ್ನು ತೆಗೆದುಕೊಂಡು ಮಕ್ಕಳಿಲ್ಲದ ನಮಗೆ ದೇವರೇ ಕೊಟ್ಟ ಮಗುವಿದೆಂದು ಮನೆಗೆ ತೆಗೆದುಕೊಂಡು ಹೋಗಿ, ಆ ಮಗುವನ್ನು ಪ್ರೀತಿಯಿಂದ ಸಾಕಿ ಸಲಹಿದ ಶೂದ್ರ ದಂಪತಿಗಳ ಪ್ರಕರಣವನ್ನು ನೋಡಿದಾಗ ಅವಳಿಗೆ ಹೃದಯ ತುಂಬಿ ಬಂದು ಕಣ್ಣಲ್ಲಿ ನೀರೂರಿತು.
“ಏಕೆ ಈಗ ಅಳುತ್ತಿದ್ದೀಯ. ಇಷ್ಟೊಂದು ಸೆಂಟಿಮೆಂಟಲ್ ಆದರೆ ಹೇಗೆ ?” ಹೇಮಂತ್ ಕೇಳಿದರು. “ಇಲ್ಲ. ಮಕ್ಕಳಿಲ್ಲದ ಆ ಶೂದ್ರ ದಂಪತಿಗಳೊಡನೆ ನನ್ನ ಮನಸ್ಸು ಸ್ಪಂದಿಸಿತು. ಹಾಗೆಯೇ ನದಿಯಲ್ಲಿ ತೇಲಿಬಂದ ಮಗುವನ್ನು ಅವರು ದೇವರ ವರವೆಂದು ಸ್ವೀಕರಿಸಿದ್ದು, ಅದೇ ಮಗುವನ್ನು ನಿಜವಾಗಲೂ ದೇವರ ವರವಾಗಿ ಪಡೆದಿದ್ದರೂ, ಅದನ್ನು ತಿರಸ್ಕರಿಸಿ ಕುಂತಿ ನದಿಯಲ್ಲಿ ತೇಲಿಬಿಟ್ಟಿದ್ದು ಎಂತಹ ವಿಪರ್ಯಾಸ ಎನ್ನಿಸಿತು. ಇತ್ತ ಸತ್ಕುಲದಲ್ಲಿ ರಾಜಕುಮಾರಿಯಾಗಿ ಜನಿಸಿದ ಕುಂತಿ, ಅತ್ತ ಶೂದ್ರ ದಂಪತಿಗಳು ಮತ್ತು ಅವರಲ್ಲಿ ಬೆಳೆದು, ಸೂತನಾಗಿ ಸುಳ್ಳು ಹೇಳಿ ವಿದ್ಯೆ ಕಲಿತನೆಂದು ಗುರುಶಾಪಕ್ಕೆ ಗುರಿಯಾದ ಕರ್ಣ, ಕಪಟಿ ಕೃಷ್ಣ ಯುದ್ಧಕ್ಕೆ ಮುಂಚೆ, ಅವನ ಜನ್ಮ ರಹಸ್ಯವನ್ನು ತಿಳಿಸಿ, ನೀನೇ ಕೌರವ ಪಾಂಡವರಿಗೆಲ್ಲ ಹಿರಿಯ, ಅವರನ್ನು ನಿನ್ನ ಪಾದಗಳಲ್ಲಿ ಕೆಡವಿ ನಿನ್ನನ್ನು ಕುರು ಮಹಾರಾಜನನ್ನಾಗಿ ಮಾಡುತ್ತೇನೆಂದರೂ ಮಣಿಯದ, ಸತ್ಯ ಶೀಲ, ದಾನಶೀಲ, ಮತ್ತು ನಿಷ್ಟಾವಂತ ಕರ್ಣ- ಇದನ್ನೆಲ್ಲಾ ನೆನೆಸಿಕೊಂಡು ಭಾವಪರವಶಳಾದೆ ಅಷ್ಟೆ.” ಎಂದು ಕಣ್ಣೊರೆಸಿಕೊಂಡಳು ಕಳ್ಯಾಣಿ. “ಆ ಶೂದ್ರ ದಂಪತಿಗಳು ನಿಜವಾಗಿಯೂ ಆದರ್ಶ ದಂಪತಿಗಳಲ್ಲವೇ?” “ಖಂಡಿತ ಹೌದು. ಆದರೆ ಚರಿತ್ರೆಯಲ್ಲಿ ಅವರಿಗೆ ಅಷ್ಟು ಮನ್ನಣೆಯೂ ಇಲ್ಲ, ಕುಂತಿಗೆ ಅಷ್ಟು ಖಂಡನೆಯೂ ಇಲ್ಲ.” “ಒಟ್ಟಿನಲ್ಲಿ ನಿನಗೆ ಕುಂತಿಯ ಮೇಲೆ ಕೋಪ, ಶೂದ್ರ ದಂಪತಿಗಳು ಮತ್ತು ಕರ್ಣನ ಮೇಲೆ ಅನುಕಂಪ. ನೀನೇ ಒಂದು ಭಾಷ್ಯ ಬರೆದು ಬಿಡು.”
ಯಕ್ಷಗಾನ ಮುಗಿಯುವ ಹೊತ್ತಿಗೆ ಬೆಳಗಿನ ಜಾವ ಎರಡು ಗಂಟೆಯಾಗಿತ್ತು. ಗೆಸ್ಟ್ ಹೌಸ್’ಗೆ ಬಂದು ಮಲಗಿ ಬೆಳಿಗ್ಗೆ ಹತ್ತು ಗಂಟೆಗೆ ನಿಧಾನವಾಗಿ ಎದ್ದು ತಿಂಡಿ ಕಾಫಿ ಮುಗಿಸಿ ಮಂಗಳೂರಿಗೆ ಹೊರಟರು. ಮಂಗಳೂರಿನಲ್ಲಿ ಊಟ ಮಾಡಿ, ಘಟ್ಟದ ಮೇಲೆ ಡೊಂಕು ಡೊಂಕಾಗಿ ಸಾಗಿದ್ದ ಹೆದ್ದಾರಿಯಲ್ಲಿ ಬಂದು, ಉಪ್ಪಿನಂಗಡಿ ಹತ್ತಿರ ಬರುವ ಹೊತ್ತಿಗೆ ತುಂತುರು ತುಂತುರಾಗಿ ಶುರುವಾದ ಮಳೆ, ಧೋ ಎಂದು ಭೋರ್ಗರೆದು ಧಾರಾಕಾರವಾಗಿ ಸುರಿಯಲು ಶುರುವಾಯಿತು. ಕಾರಿನ ಮುಂದೆ ಹತ್ತು ಅಡಿಗಳಷ್ಟು ಕೂಡ ದಾರಿ ಕಾಣದಂತಾಯಿತು. ರಸ್ತೆಗೆ ಸ್ವಲ್ಪ ದೂರದಲ್ಲಿ ಒಂದು ದೇವಸ್ಥಾನ ಮಸುಕು ಮಸುಕಾಗಿ ಕಾಣಿಸಿತು. ಹೇಮಂತ್, ದೇವಸ್ಥಾನದ ಕಾಂಪೌಂಡಿನ ಪಕ್ಕದಲ್ಲಿದ್ದ ದೊಡ್ಡ ಸಂಪಿಗೆ ಮರದ ಕೆಳಗೆ ಕಾರನ್ನು ನಿಲ್ಲಿಸಿದರು. ಅದೊಂದು ಗಣೇಶನ ಗುಡಿ. ಮಧ್ಯಾಹ್ನ ಮೂರು ಗಂಟೆಯಾಗಿತ್ತು. ದೇವಸ್ಥಾನದ ಒಳಗೆ ಹೋಗಿ ನೋಡೋಣ ಎಂದು ಛತ್ರಿ ಹಿಡಿದುಕೊಂಡು ಕಾರಿನಿಂದ ಇಳಿದು ಹೊರಟರು.
ದೇವಸ್ಥಾನದ ಬಾಗಿಲು ತೆಗೆದಿತ್ತು. ಅರ್ಚಕರೂ ಅಲ್ಲೇ ಇದ್ದರು. ತೀರ್ಥವನ್ನು ಕೊಟ್ಟು ಅರ್ಚಕರು ಕೇಳಿದರು. “ಇದೇನು ಈ ಜಡಿ ಮಳೆಯಲ್ಲಿ ಬಂದಿದ್ದೀರ. ಯಾವ ಊರಿಂದ?” “ಬೆಂಗಳೂರಿನವರು, ಸುಬ್ರಮಣ್ಯ, ಉಡುಪಿ , ಮಂಗಳೂರಿಗೆ ಹೋಗಿ ವಾಪಸ್ ಬರುವಾಗ ಮಳೆ ಶುರುವಾಯಿತು.” “ಇದೊಂದು ಅಕಾಲಿಕವಾಗಿ ಬಂದಿರುವ ಭಾರಿ ಮಳೆ. ಹಾಸನದವರೆಗೂ ಬಾರಿಸುತ್ತಿದೆಯಂತೆ. ನಿಮ್ಮ ಹಾಗೆ ಬಂದವರೊಬ್ಬರು ಹೇಳಿದರು” “ನಾವು ರಾತ್ರಿ ಒಳಗೆ ಬೆಂಗಳೂರು ಸೇರಬೇಕಾಗಿದೆ.” “ಇಲ್ಲಿಯೇ ತಂಗಿದ್ದು ನಾಳೆ ಹೋಗಬಾರದೆ? ನಮ್ಮ ಮನೆಯಲ್ಲೇ ವ್ಯವಸ್ಥೆ ಮಾಡುತ್ತೇನೆ. ಬಹಳ ದೂರದಿಂದ ಬಂದಿದ್ದೀರ.” ಕಲ್ಯಾಣಿ ಹೇಳಿದಳು: “ಪರವಾಗಿಲ್ಲ. ಸ್ವಲ್ಪ ಮಳೆ ಕಮ್ಮಿಯಾದರೆ ಹೋಗುತ್ತೀವಿ. ನಾನು ಬಚ್ಚಲು ಮನೆ ಉಪಯೋಗಿಸಬೇಕಾಗಿದೆ. ನಿಮ್ಮ ಮನೆ ಇಲ್ಲೆ ಇದೆಯೆ?” “ಇಲ್ಲೇ ದೇವಸ್ಥಾನದ ಹಿಂದೆಯೇ ಇದೆ. ನನ್ನ ಹೆಂಡತಿ ಮಕ್ಕಳಿದ್ದಾರೆ. ಹೋಗಿ ಬನ್ನಿ.” ಮತ್ತೆ ಛತ್ರಿ ಹಿಡಿದುಕೊಂಡು ಇಬ್ಬರೂ ದೇವಸ್ಥಾನದ ಪ್ರಾಕಾರವನ್ನು ದಾಟಿ ಅದರ ಹಿಂಭಾಗದಲ್ಲಿದ್ದ ಮನೆಗೆ ಹೆಜ್ಜೆಯುದ್ದ ನೀರಲ್ಲಿ ನಡೆದು ಹೋದರು. ಬಾಗಿಲು ತಟ್ಟಿದ ಕೂಡಲೆ ಅರ್ಚಕರ ಹೆಂಡತಿ ಬಾಗಿಲನ್ನು ಅರ್ಧ ತೆಗೆದು ನೋಡಿ ಆಗಂತುಕರನ್ನು ಪ್ರಶ್ನಾರ್ಥಕವಾಗಿ ನೋಡಿದರು. ತಲೆಯ ಮೇಲೆ ಪಾಣಿ ಪಂಚೆ ಸುತ್ತಿಕೊಂಡು ಹಿಂದೆಯೇ ಬಂದ ಅರ್ಚಕರು, “ಆಚ್ಚೂ, ಇವರು ಬೆಂಗಳೂರಿಂದ ಬಂದು ಮಳೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಬಚ್ಚಲು ಮನೆ ಉಪಯೋಗಿಸಬೇಕಂತೆ” ಎಂದು ಕೂಗಿ ಹೇಳಿದರು. ಅಚ್ಚಮ್ಮ ಬಾಗಿಲು ಪೂರಾ ತೆಗೆದು ‘ಒಳಗೆ ಬನ್ನಿ’ ಎಂದು ಕರೆದರು. ಬಚ್ಚಲು ಮನೆಗೆ ಹೋಗಿ ಬರುವ ಹೊತ್ತಿಗೆ ಬಿಸಿ ಬಿಸಿಯಾಗಿ ಕಾಫಿ ಮಾಡಿಕೊಟ್ಟು ಊಟವಾಗಿದೆಯ ಎಂದು ವಿಚಾರಿಸಿಕೊಂಡರು. ಈ ಹಳ್ಳಿಯ ಮೂಲೆಯಲ್ಲಿದ್ದ ದಂಪತಿಗಳ ಸರಳವಾದ ಆತಿಥ್ಯ ನಗರದ ದಂಪತಿಗಳನ್ನು ಬೆರಗುಗೊಳಿಸಿತು. ಅಚ್ಚಮ್ಮ ಕಲ್ಯಾಣಿಯಿಂದ ಅವರ ತೀರ್ಥಯಾತ್ರೆಯ ವಿವರಗಳನ್ನೆಲ್ಲಾ ಕೇಳಿ “ಖಂಡಿತ ಸುಬ್ರಮಣ್ಯ ನಿಮಗೆ ಒಳ್ಳೆಯದನ್ನು ಮಾಡಿಯೇ ಮಾಡುತ್ತಾನೆ. ಚಿಂತಿಸ ಬೇಡಿ” ಎಂದರು.
ಅಷ್ಟು ಹೊತ್ತಿಗೆ ಧಾರೆ ಮಳೆ ನಿಂತು ಸಣ್ಣ ಹನಿ ಮಳೆ ಬೀಳುತ್ತಿತ್ತು. ಆರ್ಚಕರಿಗೆ ಮತ್ತು ಅಚ್ಚಮ್ಮನವರಿಗೆ ಕೃತಜ್ಞತೆ ಹೇಳಿ ಹೇಮಂತ್ ಮತ್ತು ಕಲ್ಯಾಣಿ ಕಾರಿನೊಳಗೆ ಬಂದು ಕುಳಿತರು. ಕಾರನ್ನು ಸ್ಟಾರ್ಟ್ ಮಾಡಿ ಇನ್ನೇನು ಹೊರಡಬೇಕು ಅನ್ನುವ ಹೊತ್ತಿಗೆ ಸರಿಯಾಗಿ: “ಕೇಳಿಸಿತೇ ನಿಮಗೆ” ಉಸುರಿದಳು ಕಲ್ಯಾಣಿ. “ನನಗೇನೂ ಕೇಳಿಸಲಿಲ್ಲ. ಏನದು?” ಹೇಮಂತ್ “ಯಾರೋ ನರಳಿದಂತಾಯ್ತು.” ಕಾರ್ ಎಂಜಿನ್ ಅಫ್ ಮಾಡಿ ಒಂದು ನಿಮಿಷ ಆಲಿಸಿದರು. ಜೋರಾಗಿ ಬೀಸುತ್ತಿದ್ದ ಗಾಳಿಯ ಸುಯ್ ಎಂಬ ಶಬ್ದ, ಧೋ ಎಂದು ಬೀಳುತ್ತಿದ್ದ ಮಳೆಯ ಶಬ್ದ ಬಿಟ್ಟು ಇನ್ನೇನೂ ಕೇಳಿಸಲಿಲ್ಲ. ಸ್ವಲ್ಪ ದಾರಿ ಕಳೆದ ಮೇಲೆ ಮತ್ತೆ ಕಲ್ಯಾಣಿ ಕೇಳಿದಳು. “ಈಗ ಕೇಳಿಸಿತೇ?” “ಏನು? ಏನು?” “ಯಾರೋ ಅಸ್ಪಷ್ಟವಾಗಿ ನರಳಿದ ಧ್ವನಿ. ಇಲ್ಲೇ ಹತ್ತಿರದಿಂದ” “ನನಗೇನೂ ಕೇಳಿಸಲಿಲ್ಲ. ತಡಿ. ನೋಡೋಣ.” ಎಂದು ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಛತ್ರಿ ಹಿಡಿದು ಹೊರಗೆ ಬಂದರು. ಮೋಡ ಕವಿದು ಕತ್ತಲೆಯಾಗಿತ್ತು. ಕಾರಿನ ಸುತ್ತ ಪ್ರದಕ್ಷಿಣೆ ಹಾಕಿ, ಅತ್ತ ಇತ್ತ ನೋಡಿದರು. ಎಲ್ಲ ನಿರ್ಜನವಾಗಿತ್ತು. ಆಗಾಗ್ಗೆ ಲಾರಿಯೋ ಕಾರೋ ರಸ್ತೆಯಲ್ಲಿ ಹೋಗುತ್ತಿದ್ದವು. ಮಳೆ ಇನ್ನೂ ಜೋರಾಯಿತು. ಯಾವುದೋ ಪ್ರಾಣಿ ಕೂಗಿರಬಹುದು ಎಂದುಕೊಂಡು ಹೊರಟರು.
ಹಾಸನಕ್ಕೆ ಬಂದಾಗ ಸಂಜೆ ಏಳು ಗಂಟೆ. ಇನ್ನೂ ಮಳೆ ಸುರಿಯುತ್ತಿತ್ತು. ಗುಡುಗು, ಮಿಂಚು, ಸಿಡಿಲು, ಜೋರಾಗಿತ್ತು . ಕತ್ತಲೆ ಕವಿದಿತ್ತು. “ಇನ್ನು ಈ ಮಳೆಯಲ್ಲಿ ಹೋಗುವುದು ಬೇಡ. ಹೇಮಂತ್. ರಾತ್ರಿ ಇನ್ನೂ ಅಪಾಯ ಜಾಸ್ತಿ. ಯಾವುದಾದರೂ ಹೋಟಲಿನಲ್ಲಿ ಇಳಿದುಕೊಂಡು ನಾಳೆ ಹೋಗೋಣ.” “ಹಾಗೇ ಆಗಲಿ” ಎಂದು ಹೇಮಂತ್ ಕಾರನ್ನು ನಿಧಾನವಾಗಿ ಚಲಿಸಿ ಶಾಂತಲ ರೆಸಿಡೆನ್ಸಿ ಹೋಟೆಲಿನ ಆವರಣದಲ್ಲಿ ನಿಲ್ಲಿಸಿದರು. ಹೋಟೆಲಿನ ಆಳು ಸಾಮಾನು ಒಳಗೆ ಸಾಗಿಸಲು ಸಹಾಯ ಮಾಡಲು ಬಂದ. ಹೇಮಂತ್ ಡಿಕ್ಕಿಯಲ್ಲಿದ್ದ ಲಗ್ಗೇಜನ್ನೆಲ್ಲ ಅವನಿಗೆ ಕೊಟ್ಟು, ಹಿಂದಿನ ಸೀಟ್ ಮೇಲಿದ್ದ ಕೈ ಚೀಲಗಳನ್ನು ತೆಗೆಯಲು ಕೈ ಹಾಕಿದರು. ಕೈ ಚೀಲದ ಬದಲು ಏನೋ ಕೈಗೆ ಸಿಕ್ಕಂತಾಯಿತು. ಹಾಗೇ ತಡವರಿಸಿ ನೋಡಿದರೆ ಒಂದು ಕೈ, ಬೆನ್ನು, ತೊಡೆ, ಕಾಲು ! ಒಬ್ಬ ಪುಟ್ಟ ಹುಡುಗ ಬೋರಲಾಗಿ ಸೀಟಿನ ಮೇಲೆ ಬಿದ್ದಿದ್ದಾನೆ! ಸುಮಾರು ಆರು-ಏಳು ವರ್ಷದ ಹುಡುಗ. ಅವನ ಬಟ್ಟೆಯೆಲ್ಲಾ ಒದ್ದೆಯಾಗಿದೆ. ಜ್ಞಾನ ತಪ್ಪಿ ನಿಶ್ಚೇತನನಾಗಿ ಬಿದ್ದಿದ್ದಾನೆ
“ಕಲ್ಯಾಣಿ, ಕಲ್ಯಾಣಿ” ಎಂದು ಗಾಬರಿ ಮತ್ತು ಉದ್ವೇಗದಿಂದ ಕೂಗಿದರು. ಹೋಟೆಲಿನ ರಿಸೆಪ್ಷನ್ ಡೆಸ್ಕ್ ನಲ್ಲಿ ರೂಮ್ ರೆಜಿಸ್ಟರ್ ಮಾಡುತ್ತಿದ್ದ ಕಲ್ಯಾಣಿ ಓಡಿ ಬಂದಳು. ಹೇಮಂತ್ ಹುಡುಗನನ್ನು ಮೆಲ್ಲಗೆ ಕಾರಿನ ಸೀಟಿನಿಂದ ಮೇಲೆತ್ತಿ, ತನ್ನ ಎದೆ ಭುಜದ ಆಸರೆ ಕೊಟ್ಟು ಎತ್ತಿಕೊಂಡು ಹೋಟೆಲ್ ಒಳಗೆ ನಡೆದರು. ಸುತ್ತ ಮುತ್ತಲಿದ್ದ ಜನ ಬಂದು ಸೇರಿದರು. ಹೇಮಂತ್ ಯಾವ ವಿವರಣೆಯನ್ನೂ ಕೊಡಲಿಲ್ಲ. ಕಲ್ಯಾಣಿ ರೆಜಿಸ್ಟರ್ ಮಾಡಿದ ರೂಮಿಗೆ ಎತ್ತಿಕೊಂಡು ಹೋದರು. ಬಂದ ಜನರೆಲ್ಲ ಏನೋ ಮೂರ್ಛೆ ರೋಗವಿರಬಹುದೆಂದುಕೊಂಡು ಚೆದುರಿದರು. ರೂಮಿನಲ್ಲಿ ಹುಡುಗನನ್ನು ಹಾಸಿಗೆಯಲ್ಲಿ ಮಲಗಿಸಿ, ಒದ್ದೆ ಬಟ್ಟೆಯನ್ನು ಕಳಚಿ ಟವಲಿನಿಂದ ಮೈ ಒರೆಸಿದರು. ಹುಡುಗ ಇನ್ನೂ ಉಸಿರಾಡುತ್ತಿದ್ದ. ಸಧ್ಯ ಬದುಕಿದ್ದಾನಲ್ಲ ಎಂದುಕೊಂಡು ರಗ್ ಹೊದಿಸಿ, ಕೆನ್ನೆ ತಟ್ಟಿ ಮುಖಕ್ಕೆ ನೀರು ಚಿಮುಕಿಸಿ ಎಚ್ಚರಿಸಲು ಪ್ರಯತ್ನಿಸಿದರು. ಏಳಲಿಲ್ಲ. ಹೋಟೆಲ್ ಮ್ಯಾನೇಜರನ್ನು ವಿಚಾರಿಸಿ ಹತ್ತಿರದಲ್ಲೆ ಇದ್ದ ಒಂದು ನರ್ಸಿಂಗ್ ಹೋಂ ಗೆ ಅವನನ್ನು ಸೇರಿಸಿದರು. ಡಾಕ್ಟರು ಬಂದು ನೋಡಿ “ಮಗು ಹಸಿವಿನಿಂದ ಬಳಲಿದೆ. ಡಿಹೈಡ್ರೇಶನ್ ಆಗಿದೆ . ಮಳೆಯಲ್ಲಿ ನೆನೆದು ಬಿಟ್ಟಿದ್ದಾನೆ. ಜ್ವರ ಬಂದಿದೆ” ಎಂದು ಹೇಳಿ, ಐ.ವಿ. ಡ್ರಿಪ್ ಹಾಕಿ ಆಂಟಿಬಯಾಟಿಕ್ಸ್ ಕೊಟ್ಟರು. “ಏನೂ ಹೆದರ ಬೇಡಿ. ನಿಮ್ಮ ಮಗ ಚೇತರಿಸಿಕೊಳ್ಳುತ್ತಾನೆ” ಎಂದರು. ಕಲ್ಯಾಣಿ ಮತ್ತು ಹೇಮಂತ್ ಚಕಿತರಾಗಿ ಪರಸ್ಪರ ಮುಖ ಮುಖ ನೋಡಿಕೊಂಡರು. ಹೇಮಂತ್ ಕಣ್ಣು ಸನ್ನೆಯಲ್ಲೇ ಕಲ್ಯಾಣಿಗೆ ಸುಮ್ಮನಿರಲು ಸೂಚಿಸಿದರು.
“ನೀವು ಟ್ರೀಟ್‌ಮೆಂಟ್ ಕೊಡಿ ಡಾಕ್ಟರೆ, ಎಷ್ಟು ಖರ್ಚಾದರೂ ಪರವಾಗಿಲ್ಲ” ಎಂದರು ಹೇಮಂತ್. ಡಾಕ್ಟರು ಹೇಳಿದ ಔಷಧಿಗಳನ್ನೆಲ್ಲಾ ಫಾರ್ಮಸಿಯಿಂದ ತಂದು ಕೊಟ್ಟು ಹೋಟೆಲಿಗೆ ಮರಳಿದರು. ಡಾಕ್ಟರು ಅವನನ್ನು ನಮ್ಮ ಮಗ ಅಂದಾಗ ನೀವೇಕೆ ನಿಜ ತಿಳಿಸಲಿಲ್ಲ? ಎಂದು ಪ್ರಶ್ನಿಸಿದಳು ಕಲ್ಯಾಣಿ. “ಹಾಗೆ ಹೇಳಿದರೆ ಇಪ್ಪತ್ತೆಂಟು ಪ್ರಶ್ನೆಗಳೇಳುತ್ತವೆ. ಅವನು ಯಾರು. ನಿಮ್ಮ ಕಾರಿನಲ್ಲಿ ಹೇಗೆ ಬಂದ. ಇತ್ಯಾದಿ. ಪೋಲೀಸಿನವರು ಬಂದು ವಕ್ಕರಿಸುತ್ತಾರೆ. ಅದಕ್ಕೆ ಸಧ್ಯಕ್ಕೆ ಅವನು ನಮ್ಮ ಮಗ ಅಂತಲೇ ಇರಲಿ. ಈಗ ಯೋಚನೆ ಮಾಡಲು ಸ್ವಲ್ಪ ಸಮಯ ಸಿಕ್ಕಂತಾಯಿತಲ್ಲ.” “ಹೌದು, ಇದು ನನಗೆ ಹೊಳೆಯಲೇ ಇಲ್ಲ. ಈಗೇನು ಮಾಡುವುದು?” “ಸಧ್ಯಕ್ಕೆ ಅವನು ಹುಷಾರಾಗಲಿ. ಅವನ ಹೆಸರು ‘ಅಪ್ಪು’ ಎಂದು ಹೇಳಿದ್ದೇನೆ. ನಿಜ ಗೊತ್ತಾದ ಮೇಲೆ ಅದು ಅವನ ನಿಕ್ ನೇಮ್ ಎಂದರಾಯಿತು.” “ನಿಮ್ಮ ಸಮಯೋಚಿತ ಜಾಣ್ಮೆ ಮೆಚ್ಚಬೇಕಾದ್ದೆ” ಬಹುಶಃ ನಾವು ಅರ್ಚಕರ ಮನೆಯಲ್ಲಿದ್ದಾಗ ಈ ಹುಡುಗ ಕಾರಿನೊಳಗೆ ಬಂದು ಮಲಗಿರಬಹುದು. ಜ್ವರವಿತ್ತೇನೋ ಪಾಪ. ಅವನು ನರಳಿದ್ದು ನಿನಗೆ ಕೇಳಿಸಿತು. ಆಗ ನಮಗೆ ಗೊತ್ತಾಗಲಿಲ್ಲ. “ನಮ್ಮ ಪಾಡಿಗೆ ನಾವು ಬೆಂಗಳೂರಿಗೆ ಹೋದರೆ ಹೇಗೆ.” “ಹಾಗೆ ಮಾಡಲಾಗುವುದಿಲ್ಲ. ನಮ್ಮ ಅಡ್ರೆಸ್ ಹೋಟೆಲಿನಲ್ಲಿ, ನರ್ಸಿಂಗ್ ಹೋಂ ನಲ್ಲಿ ಕೊಟ್ಟಿದ್ದೇವೆ. ಪೋಲೀಸಿಗೆ ತಿಳಿಸದೆ ಹೋಗುವುದು ಸರಿಯಲ್ಲ” “ಮತ್ತೆ ಈಗೇನು?” “ನೋಡೋಣ , ಹುಡುಗನಿಗೆ ಜ್ಞಾನ ಬಂದ ಮೇಲೆ ಎಲ್ಲ ಸ್ಪಷ್ಟವಾಗಬಹುದು.” ಆ ರಾತ್ರಿ ಇಬ್ಬರಿಗೂ ಸರಿಯಾಗಿ ನಿದ್ರೆ ಬರಲಿಲ್ಲ. ಹುಡುಗನ ಬಗ್ಗೆ ಬಹಳ ಅನುಕಂಪವೂ ಆಗಿತ್ತು. ಬೆಳಿಗ್ಗೆ ನರ್ಸಿಂಗ್ ಹೋಂ ಗೆ ಹೋದಾಗ ಹುಡುಗನಿಗೆ ಜ್ವರ ಇಳಿದು ಜ್ಞಾನ ಬಂದಿತ್ತು. ಆದರೆ ಒಂದೇ ಸಮನೆ ಅಳುತ್ತಿದ್ದ. ಹೇಮಂತ್ ಮತ್ತು ಕಲ್ಯಾಣಿ ಅವನ ಪಕ್ಕದಲ್ಲಿ ಹಾಸಿಗೆಯ ಮೇಲೆ ಕುಳಿತರು. ಹುಡುಗ "ಊಂ, ಊಂ " ಎಂದು ಅಳುತ್ತ ಕಣ್ಣುಜ್ಜುತ್ತಿದ್ದ. ಕಲ್ಯಾಣಿ ಅವನ ತಲೆ ನೇವರಿಸಿ “ಅಪ್ಪು , ಯಾಕೆ ಅಳುತ್ತಿದ್ದೀಯ?” ಎಂದಳು “ಊಂ, ಊಂ , ನಾನು ಅಪ್ಪು ಅಲ್ಲ ಗಣೇಶ” ಅಂತ ಅಂದ. “ಆಯಿತು ಗಣೇಶ, ಅಳಬೇಡ. ನಿನ್ನೂರು ಯಾವುದು.” “ಉಪ್ಪಿನಂಗಡಿ” “ನಿನ್ನಪ್ಪ, ಅಮ್ಮ ಯಾರು?” ಗಣೇಶ ಸುಮ್ಮನೆ ಕಲ್ಯಾಣಿಯ ಮುಖ ನೋಡಿ ಮತ್ತೆ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ ಸ್ಕೂಲ್ ಯೂನಿಫಾರ್ಮ್ ಗಮನಿಸಿದ ಹೇಮಂತ್ ಕೇಳಿದರು “ನೀನು ಯಾವ ಕ್ಲಾಸು?” “ಎರಡನೆ ಕ್ಲಾಸು” “ಯಾವ ಸ್ಕೂಲು?” “ಸರ್ಕಾರಿ ಪ್ರೈಮರಿ ಸ್ಕೂಲು, ಉಪ್ಪಿನಂಗಡಿಯಲ್ಲಿ” “ನೀನು ನಮ್ಮ ಕಾರೊಳಗೆ ಹೇಗೆ ಬಂದೆ?” “ಮಧ್ಯಾಹ್ನ ಸ್ಕೂಲಿಂದ ಬರುತ್ತಿದ್ದಾಗ ನಾನು, ರಾಮು, ಕಿಟ್ಟಿ ಫುಟ್’ಬಾಲ್ ಆಡ್ತಿದ್ವಿ. ಬಾಲ್ ಹೋಗಿ ಆ ಸಂಪಿಗೆ ಮರದಲ್ಲಿ ಸಿಕ್ಕಾಕ್ಕೊಂಡ್ತು. ರಾಮೂನ ಅಂಬೆಗಾಲ್ಕೂರಿಸಿ, ಅವನ ಮೇಲೆ ಕಿಟ್ಟುನ ನಿಲ್ಸಿ, ಅವ್ನ ಭುಜದ್ಮೇಲಿಂದ ಕೊಂಬೆ ಮೇಲೆ ಹತ್ದೆ. ಬಾಲ್ ತೆಗೊಂಡೆ. ಆದ್ರೆ ಇಳಿಯೋಕ್ಕೆ ಆಗ್ಲಿಲ್ಲ. ತುಂಬಾ ಹೆದ್ರಿಕೆ ಆಯ್ತು. ರಾಮು, ಕಿಟ್ಟಿ ಯಾರಾದ್ರು ದೊಡ್ಡೋನ ಕರ್ಕೊಂಬರ್ತೀವಿ ಅಂತ ಹೋದ್ರು. ಎಷ್ಟೊತ್ತಾದ್ದ್ರು ಬರ್ಲೇ ಇಲ್ಲ. ಜೋರಾಗಿ ಮಳೆ, ಗುಡ್ಗು,ಸಿಡ್ಲು,ಮಿಂಚು ಎಲ್ಲಾ ಬಂತು. ಹೆದುರ್ಕೊಂಡು ಅಲ್ಲೇ ಕೂತಿದ್ದೆ. ಆಮೇಲೆ ಒಂದ್ಕಾರು ಬಂದು ನಾನಿದ್ಕೊಂಬೆ ಕೆಳ್ಗೇ ನಿಂತ್ಕೊಂಡ್ತು. ಕಾರ‍್ನಲ್ಲಿದ್ದೋರು ಇಳ್ದು ಗುಡೀಗ್‌ಹೋದ್ರು. ನಾನು ಕೊಂಬೆಯಿಂದ ಕಾರ‍್ಮೇಲೆ ಹಾರಿ ಕೆಳಗ್ಬಂದೆ. ಕಾಲು ಉಳ್ಕಿ ನಡೆಯೊಕಾಗ್ಲಿಲ್ಲ. ಮಳೆ ಜೋರಾಗ್ಬರ್ತಿತ್ತು. ನಾನು ಕಾರೊಳ್ಗಡೆ ಮಲಕ್ಕೊಂಡೆ. ನಿದ್ದೆ ಬಂತು. ಆಮೇಲೆ ನಂಗೊತ್ತಿಲ್ಲ.”
“ಈಗ ನೀನು ಔಷಧಿ ತೆಗೊಂಡು ಹುಷಾರಾಗು. ನಿನ್ನ ಉಪ್ಪಿನಂಗಡಿಗೆ ಕರಕೊಂಡು ಹೋಗ್ತೀವಿ. ಆಯ್ತ?” ಈ ಮಾತನ್ನ ಕೇಳಿ ಗಣೇಶ ಗೆಲುವಾದ. ಡಾಕ್ಟರು ಬಂದು ಅವನನ್ನು ನೋಡಿ ಈಗ ಜ್ವರ ಇಳಿದಿದೆ. ಬೆಳಿಗ್ಗೆ ಆಹಾರಾನು ತೆಗೊಂಡಿದ್ದಾನೆ. ನಾಳೆ ಹೊತ್ತಿಗೆ ಸರಿಯಾಗ್ತಾನೆ. ಮನೆಗೆ ಕರೆದುಕೊಂಡು ಹೋಗಬಹುದು. ಎಂದರು. ಇದನ್ನು ಕೇಳಿ ನಿರಾಳವೆನಿಸಿತು ದಂಪತಿಗಳಿಗೆ. ಮಾರನೆ ದಿನ ಬೆಳಿಗ್ಗೆ ಟಿ.ವಿ. ನೋಡುತ್ತಿದ್ದಾಗ ಒಂದು ಸುದ್ದಿ ಕೇಳಿಬಂತು: “ಉಪ್ಪಿನಂಗಡಿಯ ಮಂಜುನಾಥ ಅನಾಥಾಶ್ರಮದಿಂದ ಗಣೇಶ ಎಂಬ ಏಳು ವರ್ಷದ ಹುಡುಗ ಕಾಣೆಯಾಗಿದ್ದಾನೆ. ಅವನು ದುಂಡು ಮುಖದ, ಮೂರುಮುಕ್ಕಾಲು ಅಡಿ ಎತ್ತರದ, ಗೌರವರ್ಣದ ಹುಡುಗ. ಬೂದುಬಣ್ಣದ ಸ್ಕೂಲ್ ಯೂನಿಫಾರ್ಮ್ ಹಾಕಿಕೊಂಡಿದ್ದಾನೆ. ಏನಾದರೂ ಮಾಹಿತಿ ಸಿಕ್ಕಿದರೆ ಈ ಕೆಳಕಂಡ ಫೋನ್ ನಂಬರ್ ಕರೆದು ಉಪ್ಪಿನಂಗಡಿ ಪೋಲೀಸ್ ಠಾಣೆಗೆ ದಯವಿಟ್ಟು ತಿಳಿಸಿ.” “ಹೇಮಂತ್, ಇವನು ಅನಾಥಾಶ್ರಮದಲ್ಲಿದ್ದಾನೆ ಅಂತ ಆಯಿತು. ಅದಕ್ಕೆ ಅಪ್ಪ ಅಮ್ಮ ಯಾರು ಎಂದರೆ ಏನೂ ಹೇಳಲಿಲ್ಲ.” “ಸರಿ. ಈಗ ಪೋಲೀಸ್ ಠಾಣೆಗೆ ಫೋನ್ ಮಾಡುತ್ತೇನೆ. ಆಮೇಲೆ ಬೆಂಗಳೂರಿಗೆ ಹೊರಡಬಹುದು.” “ಫೋನ್ ಮಾಡಲೇ ಬೇಕಾಗುತ್ತೆ. ನರ್ಸಿಂಗ್ ಹೋಂ ನವರಿಗೆ ಆಗಲೇ ಅನುಮಾನ ಬಂದಿರಬಹುದು. ಆದರೆ ನನಗೊಂದು ಯೋಚನೆ” ಕಲ್ಯಾಣಿ ಹೇಳಿದಳು. “ಏನದು?” “ಆ ಕುಕ್ಕೆ ಸುಬ್ರಮಣ್ಯನೇ ಗಣೇಶನನ್ನ ನಮ್ಮ ಮಡಿಲಿಗೆ ಹಾಕಿದ್ದಾನೆ.” “ಏನು ಹೇಳುತ್ತಿದ್ದೀಯ ನೀನು ಕಲ್ಯಾಣಿ!.” “ಹೌದು ಹೇಮಂತ್, ನಾವೇಕೆ ಗಣೇಶನನ್ನು ದತ್ತು ತೆಗೆದುಕೊಳ್ಳಬಾರದು. ಹೇಗಿದ್ದರೂ ಅನಾಥಾಶ್ರಮದಲ್ಲಿದ್ದಾನೆ. ಸುಂದರವಾದ ಹುಡುಗ. ನಾವೇ ಉಪ್ಪಿನಂಗಡಿಗೆ ಹೋಗಿ ಪ್ರಸ್ತಾಪ ಮಾಡೋಣ.” “ನೀನು ಅವಸರದಲ್ಲಿ ನಿರ್ಧಾರ ಮಾಡುತ್ತಿದ್ದೀಯ ಅನ್ನಿಸುತ್ತೆ. ಹೊತ್ತು, ಹೆತ್ತು , ಕರುಳ ಬಳ್ಳಿ ಇದೆಲ್ಲಾ ಏನಾಯಿತು?” “ಇಲ್ಲ ಹೇಮಂತ್, ಆ ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಿದ್ದಾಗ ನನ್ನನ್ನು ದೇವರು ಕೈ ಬಿಡುವುದಿಲ್ಲವೆನ್ನಿಸುತ್ತಿತ್ತು. ಈ ಮಳೆ , ಗಣೇಶ ಸಂಪಿಗೆ ಮರದಲ್ಲಿ ಸಿಕ್ಕಿಕೊಂಡಿದ್ದು, ನಮ್ಮ ಕಾರು ಅವನ ಕೆಳಗೇ ನಿಂತಿದ್ದು, ಅವನು ಕಾಲುಳುಕಿಸಿಕೊಂಡು ನಮ್ಮ ಕಾರೊಳಗೇ ಮಲಗಿದ್ದು- ಇದೆಲ್ಲಾ ದೈವೇಚ್ಛೆಯಿಂದಲೇ ಕೂಡಿಬಂದ ಸಂದರ್ಭಗಳು. ಪರೋಕ್ಷವಾಗಿ ಸುಬ್ರಮಣ್ಯ ನಮ್ಮ ಪ್ರಾರ್ಥನೆಗೆ ಈ ರೀತಿ ಉತ್ತರ ಕೊಟ್ಟಿದ್ದಾನೆ.” “ನಿನಗೆ ಸಂತೋಷವಾದರೆ ನನಗೂ ಸಂತೋಷ. ದತ್ತು ತೆಗೆದುಕೊಳ್ಳಲು ನೀನೊಪ್ಪಿರಲಿಲ್ಲವಲ್ಲ. ಅದಕ್ಕೇ ಹಾಗಂದೆ.” “ಹಿಂದೊಮ್ಮೆ ನೀವೇ ಹೇಳಿದ್ದಿರಲ್ಲ. ಶಿವುನ ತಬ್ಬಲಿ ಮಾಡಿ ಅವನನ್ನು ನೋಡಿಕೊಳ್ಳಲೆಂದೇ ನಮಗೆ ಈ ಪರಿಸ್ಥಿತಿ ಕೊಟ್ಟ ಅಂತ. ಇದೂ ಹಾಗೇನೆ ಅಂದುಕೊಳ್ಳೋಣ. ಗಣೇಶನನ್ನ ದೇವರೆ ನಮಗೆ ಕೊಟ್ಟಿದ್ದಾನೆ ಅಂತ ನನಗನಿಸುತ್ತಿದೆ.” ಹೇಮಂತ್ ತಮ್ಮ ಮೇಲಧಿಕಾರಿಗೆ ಫೋನ್ ಮಾಡಿ ಎರಡು ದಿನ ರಜೆ ವಿಸ್ತರಿಸುವಂತೆ ಕೇಳಿಕೊಂಡರು. ನರ್ಸಿಂಗ್ ಹೋಂ ಗೆ ಹೋದಾಗ ಅಲ್ಲೇನು ಗಲಭೆ ಎದ್ದಿರಲಿಲ್ಲ. ಗಣೇಶನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಉಪ್ಪಿನಂಗಡಿಗೆ ಹೊರಟರು. ಮಳೆ ನಿಂತು ಆಕಾಶ ಶುಭ್ರವಾಗಿ ಹೊಂಬಿಸಿಲು ಬಂದಿತ್ತು. ಅಂತೆಯೇ ಕಲ್ಯಾಣಿಯ ಮನಸ್ಸೂ ಕೂಡ -ಆ ನಿರ್ಧಾರ ತೆಗೆದುಕೊಂಡ ಮೇಲೆ ಪ್ರಶಾಂತವಾಗಿತ್ತು. ಗಣೇಶ ಬಹಳ ಗೆಲುವಾಗಿ ಅವನ ಸ್ಕೂಲು, ಸ್ನೇಹಿತರು, ಆಶ್ರಮದ ಬಗ್ಗೆ ಉತ್ಸಾಹದಿಂದ ದಾರಿಯುದ್ದಕ್ಕೂ ಮಾತನಾಡುತ್ತಿದ್ದ. ಅವನ ಸ್ಕೂಲ್ ಯೂನಿಫಾರಂ ಒಣಗಿ ಅದನ್ನೇ ಹಾಕಿಕೊಂಡಿದ್ದ. ಉಪ್ಪಿನಂಗಡಿ ಪೋಲೀಸ್ ಠಾಣೆಗೆ ಗಣೇಶನನ್ನು ಕರೆದುಕೊಂಡು ಹೋದಾಗ ಸಬ್ ಇನ್ಸ್ಪೆಕ್ಟರ್ ಭರಮಪ್ಪನವರಿಗೆ ಆಶ್ಚರ್ಯವಾಯಿತು. ರೇಡಿಯೋ, ಟಿ.ವಿ. ಗಳ ಮೂಲಕ ಸುದ್ದಿ ಹೇಳಿದ ಒಂದುವರೆ ದಿನದಲ್ಲೇ ಕಳೆದು ಹೋದ ಹುಡುಗ ಸಿಕ್ಕಿದ್ದ. ಇದು ಅವರ ೨೫ ವರ್ಷದ ಸರ್ವಿಸ್‌ನಲ್ಲಿ ಇದೇ ಮೊದಲು. “ನೀವು ಅವನನ್ನು ಕಾಪಾಡಿ ಪುಣ್ಯ ಕಟ್ಟಿಕೊಂಡಿರಿ. ತುಂಬ ಥ್ಯಾಂಕ್ಸ್ ” ಎಂದು ಹೇಳಿ ಅನಾಥಾಶ್ರಮಕ್ಕೆ ಫೋನ್ ಮಾಡಿ ವಾರ್ಡನ್ ನಾಗೇಶ್ ಹೊಳ್ಳ ಅವರಿಗೆ ಹುಡುಗ ಸಿಕ್ಕ ಸಮಾಚಾರ ತಿಳಿಸಿದರು. ಹೊಳ್ಳ ಅವರು ಹತ್ತೇ ನಿಮಿಷಗಳಲ್ಲಿ ಅಲ್ಲಿಗೆ ಬಂದು ಎಲ್ಲರಿಗೂ ಕೃತಜ್ಞತೆಗಳನ್ನು ಹೇಳಿದರು. ಹೇಮಂತ್ ತಮ್ಮ ಕಾರಿನಲ್ಲೇ ಅವರನ್ನು ಗಣೇಶನ ಜೊತೆ ಅನಾಥಾಶ್ರಮಕ್ಕೆ ಕರೆದುಕೊಂಡು ಹೋದರು.
ಕಲ್ಯಾಣಿ ಕೇಳಿದಳು. “ಹೊಳ್ಳ ಅವರೆ ನಮಗೆ ಮಕ್ಕಳಿಲ್ಲ. ಗಣೇಶನನ್ನೇ ದತ್ತು ಮಾಡಿಕೊಳ್ಳೋಣ ಎಂಬ ಯೋಚನೆ ಬಂದಿದೆ. ಇದು ಸಾಧ್ಯವೆ?” ಎಂದು ಕಲ್ಯಾಣಿ ಪ್ರಸ್ತಾಪ ಮಾಡಿದಳು. “ನಮಗೆ ಇದಕ್ಕಿಂತ ಒಳ್ಳೆ ಸುದ್ದಿ ಏನಿದೆ. ಧಾರಾಳವಾಗಿ ಆಗಬಹುದು. ಇದಕ್ಕೆ ಸಂಬಂಧ ಪಟ್ಟ ಅರ್ಜಿಗಳನ್ನು ಕೊಡುತ್ತೇನೆ. ದತ್ತು ಕೊಡುವ ನಿಯಮಾವಳಿಗಳೆಲ್ಲ (ಫಾರ್ಮ್ಯಾಲಿಟೀಸ್) ಮುಗಿದ ಮೇಲೆ ಒಂದು ತಿಂಗಳಲ್ಲಿ ಗಣೇಶ ನಿಮ್ಮ ದತ್ತು ಪುತ್ರನಾಗುತ್ತಾನೆ.” “ನಿಮ್ಮ ಹತ್ತಿರ ಅವನಿಗೆ ಸಂಬಂಧಿಸಿದ ದಾಖಲೆಗಳೇನೇದರೂ ಇದೆಯೇ?” “ಅವನ ಅಪ್ಪ ಅಮ್ಮ ಯಾರು ಅಂತ ಗೊತ್ತಿಲ್ಲ. ಏಳು ವರ್ಷಗಳ ಹಿಂದೆ, ಆ ಗಣೇಶನ ಗುಡಿಯ ಬಾಗಿಲ ಮುಂದೆ ಮಗುವಾಗಿದ್ದ ಈ ಗಣೇಶನನ್ನು ಯಾರೋ ಬಿಟ್ಟು ಹೋಗಿದ್ದರು. ಮಗು ಅಳುತ್ತಿದ್ದುದನ್ನು ಕೇಳಿ ಪಕ್ಕದಲ್ಲೆ ವಾಸವಾಗಿದ್ದ ಅರ್ಚಕರು ಬಂದು ನೋಡಿ ಮಗುವನ್ನು ಪೋಲೀಸ್ ಠಾಣೆಗೆ ಒಪ್ಪಿಸಿದರು. ಮಗುವಿನ ಪಕ್ಕದಲ್ಲಿ ಒಂದು ಪತ್ರವಿತ್ತು . ಮಗುವನ್ನು ಈ ಅನಾಥಾಶ್ರಮಕ್ಕೆ ಸೇರಿಸಲಾಯಿತು. ಗಣೇಶನ ಗುಡಿಯಲ್ಲಿ ಸಿಕ್ಕಿದ್ದರಿಂದ ಆ ಮಗುವಿಗೆ ಗಣೇಶ ಎಂದೇ ಹೆಸರಿಟ್ಟರು. ಅಷ್ಟೇ ನಮಗೆ ತಿಳಿದಿರುವುದು.” “ಆ ಪತ್ರ ನೋಡಬಹುದೇ?” ಕಲ್ಯಾಣಿ ಕೇಳಿದಳು ಹೊಳ್ಳ ಫೈಲ್ ತೆಗೆದು ಆ ಪತ್ರವನ್ನು ತೆಗೆದುಕೊಟ್ಟರು. ಅದೊಂದು ಅನಾಮಧೇಯ ಪತ್ರ. “ನಾನೊಬ್ಬ ನಿರ್ಭಾಗ್ಯೆ. ನಾನು ಬೇಲೂರಿನವಳು. ತಂದೆ ತಾಯಿಗಳಿಲ್ಲ. ಅಣ್ಣನ ಮನೆಯಲ್ಲಿ ಬೆಳೆದೆ. ಅವರು ಬಡವರು. ನನ್ನನ್ನು ಕಷ್ಟ ಪಟ್ಟು ಓದಿಸಿದರು. ವಿಶ್ವಾಸದಿಂದ ನೋಡಿಕೊ೦ಡರು. ನಾನು ಹಾಸನದಲ್ಲಿ ಪಿ.ಯು.ಸಿ ಎರಡನೆ ವರ್ಷದಲ್ಲಿ ಓದುತ್ತಿದ್ದೆ. ಆಗ ನನಗೆ ಹದಿನೇಳು ವರ್ಷ. ನನ್ನ ಕಾಲೇಜಿನ ಲೆಕ್ಚರರ್ ಒಬ್ಬರು ನನ್ನನ್ನು ಪ್ರೇಮಿಸಿದರು. ಮದುವೆಯಾಗುತ್ತೇನೆಂದು ಹೇಳಿ ಮೋಸ ಮಾಡಿದರು. ನಾನು ಗರ್ಭಿಣಿ ಎಂದು ತಿಳಿದ ಕೂಡಲೆ ಕೆಲಸ ಬಿಟ್ಟು ಎಲ್ಲೋ ಹೊರಟು ಹೋದರು. ಮುಂಬೈಗೆ ಹೋದರು ಅಂತ ಯಾರೋ ಹೇಳಿದರು. ಅವರು ಮೊದಲಿಗೆ ಮುಂಬೈನವರೆ. ಅಣ್ಣ ಅತ್ತಿಗೆಗೆ ಈ ವಿಷಯ ತಿಳಿದ ಮೇಲೆ ನನ್ನನ್ನು ಶಪಿಸಿ ಹೊರದೂಡಿದರು. ಹೊಟ್ಟೆಪಾಡಿಗಾಗಿ ಏನೇನೋ ಮಾಡಿದೆ. ನನ್ನ ಕಷ್ಟಕಾಲದಲ್ಲಿ ಒಬ್ಬ ಸ್ನೇಹಿತೆಯ ಮನೆಯವರು ಆಶ್ರಯ ಕೊಟ್ಟರು. ಮಗು ಹುಟ್ಟಿದ ಮೇಲೆ ಸಮಾಜಕ್ಕೆ ಹೆದರಿ ಅವರೂ ನನ್ನ ಕೈ ಬಿಟ್ಟರು. ಹಾಗೂ ಹೀಗೂ ಈ ಮಗುವನ್ನು ಮೂರು ತಿಂಗಳು ಸಾಕಲು ಪ್ರಯತ್ನಿಸಿದೆ. ಮಗು ಬಡವಾಗುತ್ತಿದೆ. ಇನ್ನು ಈ ಮಗು ಬದುಕುವುದಿಲ್ಲ ಎಂದು ಭಯವಾಗುತ್ತಿದೆ. ಈ ಮಗುವನ್ನು ಗಣೇಶನ ಪಾದಗಳಲ್ಲಿ ಹಾಕಿ ದೂರ ಹೋಗುತ್ತಿದ್ದೇನೆ. ಈ ಮಗುವನ್ನು ಅವನೇ ಕಾಪಾಡಬೇಕು.”
ಪತ್ರವನ್ನೋದಿ ಕಲ್ಯಾಣಿಯ ಕಣ್ಣಲ್ಲಿ ನೀರು ತುಂಬಿತು. ಹೊಳ್ಳ ಕೊಟ್ಟ ಅರ್ಜಿ ಗಳನ್ನೆಲ್ಲ ಭರ್ತಿಮಾಡಿ ಹೇಮಂತ್, ಕಲ್ಯಾಣಿ ಬೆಂಗಳೂರಿಗೆ ಹೊರಟರು. ಹೋಗುವ ಮುಂಚೆ ಗಣೇಶನಿಗೆ ಇನ್ನೊಂದು ತಿಂಗಳಲ್ಲಿ ಬಂದು ನಮ್ಮ ಮನೆಗೇ ಕರೆದುಕೊಂಡು ಹೋಗಿ, ಅಲ್ಲಿಯೇ ಸ್ಕೂಲಿಗೆ ಸೇರಿಸುತ್ತೇವೆ ಎಂದು ಹೇಳಿ, ಅಪ್ಪಿ ಮೈದಡವಿ ಮುದ್ದಿಸಿದರು. ದಾರಿಯಲ್ಲಿ ಹೇಮಂತ್ ಕೇಳಿದರು. “ಅಷ್ಟು ಗಂಭೀರವಾದ ನಿರ್ಧಾರವನ್ನು ನೀನು ಅಷ್ಟು ಬೇಗ ತೆಗೆದುಕೊಂಡಿದ್ದು ನನಗೆ ಆಶ್ಚರ್ಯವಾಗಿದೆ.” “ಈ ಗಣೇಶನ ಕಥೆ ಹೀಗೆಯೇ ಇರಬಹುದೆಂದು ಊಹಿಸಿದ್ದೆ. ಆ ಯಕ್ಷಗಾನದಲ್ಲಿ, ಕುಂತಿ ಅಪವಾದಕ್ಕೆ ಹೆದರಿ ಮಗುವನ್ನು ತ್ಯಜಿಸಿದಳು. ಆದರೆ ಆ ಶೂದ್ರ ದಂಪತಿಗಳು ಆ ಮಗುವನ್ನೆ ದೇವರಿತ್ತ ವರವೆಂದು ಭಾವಿಸಿದರು. ಮಕ್ಕಳಿಲ್ಲದೇ ಕೊರಗುತ್ತಿದ್ದ ಅವರು, ಅಕಸ್ಮಾತ್ ಆಗಿ ಮಗು ನದಿಯಲ್ಲಿ ತೇಲಿಕೊಂಡು ಅವರ ಕಡೆ ಬಂದಾಗ ಅದರಲ್ಲಿದ್ದ ದೇವರ ಕೈವಾಡವನ್ನು ಅರಿತರು. ಆ ಶೂದ್ರ ದಂಪತಿಗಳ ನಡತೆಯಿಂದ ಪ್ರಭಾವಿತಳಾದ ನನಗೆ ಗಣೇಶ ಅಕಸ್ಮಾತ್ ಆಗಿ ಸಿಕ್ಕಿದ. ನನಗೂ ಇದು ಭಗವಂತನ ಕೈವಾಡವೇ ಅನ್ನಿಸಿತು. ಈ ತೀರ್ಥ ಯಾತ್ರೆ, ಈ ಪೂಜೆ, ಯಕ್ಷಗಾನದಲ್ಲಿ ನನ್ನನ್ನು ಇದಕ್ಕೆ ಸಜ್ಜುಗೊಳಿಸಲೋ ಎಂಬಂತೆ ಇದ್ದ ಕುಂತಿ, ಕರ್ಣ, ಶೂದ್ರ ದಂಪತಿಗಳ ಪ್ರಸಂಗ, ನನಗೆ ಬೇಕಾಗಿದ್ದ ನಂಬಿಕೆಯ ಹಿನ್ನೆಲೆಯನ್ನು ಸೃಷ್ಟಿಸಿತ್ತು. ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಕಷ್ಟವಾಗಲಿಲ್ಲ.” “ನನಗಂತೂ ತುಂಬ ಸಂತೋಷವಾಗಿದೆ. ಗಣೇಶನ ನಿಕ್‌ನೇಮ್‌ನ ‘ಅಪ್ಪು’ ಬದಲು ‘ಕರ್ಣ’ ಎಂದು ಮಾಡುವುದು ಸೂಕ್ತವಲ್ಲವೆ?” “ನಿಜ. ಆದರೆ ನೋಡಿ ಆ ಕುಂತಿದೇವಿ ಇಂಥ ಕೆಲಸ ಮಾಡಿದರೂ ಕೊನೆಗೆ ರಾಜಮಾತೆಯಾಗಿಯೇ ಉಳಿದಳು. ಆದರೆ ಈ ಕರ್ಣನ ತಾಯಿ ನಿರ್ಭಾಗ್ಯೆ ಏನಾದಳೋ ಗೊತ್ತಿಲ್ಲ.” “ನನಗಂತು ಅವಳು ಬದುಕಿಲ್ಲ ಅನ್ನಿಸುತ್ತೆ ,ಆ ಪತ್ರ ನೆನೆಸಿಕೊಂಡರೆ”. ಎನ್ನುತ್ತಿದ್ದ ಕಲ್ಯಾಣಿಯ ಕಣ್ಣುಗಳನ್ನು ಒರೆಸಿದರು ಹೇಮಂತ್.