ಅಮೆರಿಕನ್ನಡ
Amerikannada
ವಿದ್ವಾನ್ ಎಚ್.ವಿ. ನಾಗರಾಜರಾವ್ ಅವರಿಗೆ ರೋಟರಿ-ಅಮರವಾಣಿ ಪ್ರಶಸ್ತಿ ಪ್ರದಾನ
-ವೀಣಾ, ಮೈಸೂರು
ವಿದ್ವಾನ್ ಎಚ್.ವಿ. ನಾಗರಾಜರಾವ್ ರವರು ಕೋಲಾರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಜನಿಸಿದರು. ಅವರು ೧೯೫೮ರಲ್ಲಿ ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಕರಣ ಮತ್ತು ಅಲಂಕಾರಶಾಸ್ತ್ರಗಳಲ್ಲಿ ವಿದ್ವತ್ ಪದವಿಯನ್ನು ವಿಶೇಷ ಪ್ರಾವಿಣ್ಯದೊಂದಿಗೆ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದ ಸಂಸ್ಕೃತ ಎಂ.ಎ. ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಮತ್ತು ನಾಲ್ಕು ಚಿನ್ನದ ಪದಕಗಳನ್ನು, ಚಿಕಾಗೋ ವಿಶ್ವವಿದ್ಯಾನಿಲಯದ ‘ಏಷಿಯನ್ ಲ್ಯಾಂಗ್ವೇಜಸ್’ನಲ್ಲಿ ಎಂ.ಎ. ಪ್ರಥಮ ರ‍್ಯಾಂಕ್ ಗಳಿಸಿದರು. ಅವರು ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಸಂಶೋಧಕರಾಗಿ ಸುಮಾರು ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಾಚೀನ ಭಾರತೀಯ ಸಾಹಿತ್ಯ ಯೋಜನೆಯಲ್ಲಿ ಉಪಸಂಪಾದಕರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
೪೧ ವರ್ಷಗಳಿಂದ ಮೈಸೂರಿನಿಂದ ಪ್ರಕಟವಾಗುತ್ತಿರುವ ‘ಸುಧರ್ಮಾ’ ಏಕೈಕ ಸಂಸ್ಕೃತ ದಿನಪತ್ರಿಕೆಯ ಗೌರವ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಸ್ಥಾಪಕ ಸಂಪಾದಕರಾದ ಪಂಡಿತ ಕೆ.ಎನ್. ವರದರಾಜ ಅಯ್ಯಂಗಾರ್‌ರ ಕಾಲದಿಂದಲೂ ಪತ್ರಿಕೆಯಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ಪತ್ರಿಕೆಯ ಓದುಗರಿಗೆ ಇವರ ಲೇಖನ, ಸಂಪಾದಕೀಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಸುಧರ್ಮಾ ಪ್ರಕಾಶನದಿಂದ ಭಲ್ಲಟಶತಕ, ಶ್ರೀವರದರಾಜಸ್ತವ, ಅನ್ಯಾಪದೇಶಶತಕ, ಶ್ರೀ ಆನಂದಸಾಗರಸ್ತವ ಹೊರಬಂದಿವೆ. ಡಾ| ಹಾ.ಮಾ. ನಾಯಕರ ಲಲಿತ ಪ್ರಬಂಧಗಳ ಸಂಕಲನ ‘ನಮ್ಮ ಮನೆಯ ದೀಪ’ವನ್ನು ‘ಅಸ್ಮಾಕಂ ಗೃಹಸ್ಯ ದೀಪಃ’ ಎಂದು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ. ಶ್ರೀ ವೇದಾಂತ ದೇಶಿಕರ ‘ದಶಾವತಾರ ಸ್ತೋತ್ರ’ ಕೃತಿಯ ಅನುವಾದ ತಾತ್ಪರ್ಯ, ರೂಪಕ ಚತುಷ್ಟಯೀ ಎಂಬ ನಾಲ್ಕು ಸಂಸ್ಕೃತನಾಟಕಗಳು, ಹರಿಭಟ್ಟನ ಸುಭಾಷಿತ ಹಾಗೂ ಸೂಕ್ತಿದ್ವಿಶತಿಗಳಲ್ಲದೆ ಇನ್ನೂ ಹಲವಾರು ಕೃತಿಗಳನ್ನು ನೀಡಿದ್ದಾರೆ.
ಹೃದಯಾಮೃತ, ಕಾಮವಿಲಾಸ ಭಾಣ, ನ್ಯಾಯಶತಕ, ಶಿವನಾಮಕಲ್ಪಲತಾಲವಾಲ ಮುಂತಾದ ಗ್ರಂಥಗಳು ಇವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿವೆ. ಮುಮ್ಮಡಿ ಕೃಷ್ಣರಾಜ ಒಡೆಯರ ‘ಶ್ರೀತತ್ವನಿಧಿ’ಯನ್ನು ಆಂಗ್ಲಭಾಷೆಗೆ ಅನುವಾದಿಸಿದ್ದಾರೆ. ಡಾ| ಎಸ್.ಎಲ್. ಭೈರಪ್ಪನವರ ‘ಸಾರ್ಥ’ ಕಾದಂಬರಿಯನ್ನು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ, ಇದಕ್ಕೆ ೨೦೦೬ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ. ‘ಋಣ ವಿಮುಕ್ತಿ’ ಎಂಬ ಸಂಸ್ಕೃತ ಕಾದಂಬರಿ, ‘ಕಥಾಲಹರಿ’ ಎಂಬ ಕಥಾ ಸಂಕಲನ, ಮೂರು ಸಂಪುಟಗಳಲ್ಲಿ ಅನುವಾದಿಸಿರುವ ‘ಕಥಾಸರಿತ್ಸಾಗರ’, ಅಕಾಡೆಮಿಯವರಿಂದ ಪ್ರಕಟಗೊಂಡಿವೆ.
ಇವರ ಮುಡಿಗೆ ಎಂ.ಎಲ್. ಶಾಸ್ತ್ರೀ ಪ್ರತಿಷ್ಠಾನದ ‘ವಿದ್ವಾನ್ ಸನ್ಮಾನ’ (೨೦೦೨), ಸ್ವರ್ಣವಲ್ಲೀ ಮಠದ ಶ್ರೀಗಳಿಂದ ‘ಕಾವ್ಯ ಶಾಸ್ತ್ರ ವಿಚಕ್ಷಣ ಪ್ರಶಸ್ತಿ’ (೨೦೦೭), ಹರಿಯಾಣದ ಭವಾನಿ ನಗರದ ಶೇಖಾವತಿ ಆಶ್ರಮದಿಂದ ‘ವ್ಯಾಸಮಹರ್ಷಿ ಪ್ರಶಸ್ತಿ’ (೧೯೯೭), ಸೋಮಪುರದ ದತ್ತಾಶ್ರಮದಿಂದ ‘ಅಭಿನಂದನ ಪತ್ರ’ (೨೦೦೯) ಹಾಗೂ ಸಂಸ್ಕೃತ ಭಾಷೆಗೆ ಸೇವೆಸಲ್ಲಿಸಿರುವ ಇವರಿಗೆ ‘ರಾಷ್ಟ್ರಪತಿ ಪುರಸ್ಕಾರ’ (೨೦೧೦) ಲಭ್ಯವಾಗಿವೆ.
ಇವರು ೧೯೯೫-೯೬ ಮತ್ತು ೨೦೦೧ರಲ್ಲಿ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇಸ್ರೇಲ್ ದೇಶದ ಜೆರುಸೆಲಮ್‌ನಲ್ಲಿರುವ ಹಿಬ್ರೂ ವಿಶ್ವವಿದ್ಯಾನಿಲಯದ ಆಹ್ವಾನದ ಮೇರೆಗೆ ಅಲ್ಲಿನ ಕಾರ‍್ಯಾಗಾರದಲ್ಲಿ ಭಾಗವಹಿಸಿ ‘ಫೆಲೋ’ ಆಗಿ ಬೋಧನೆ ಮಾಡುತ್ತಿದ್ದಾರೆ. ಹಾಂಗ್‌ಕಾಂಗ್ ಹಾಗೂ ಥಾಯ್‌ಲೆಂಡ್ ದೇಶದ ಚುಲಂಗ್‌ಕಾರನ್ ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ.
ಶ್ರೀಯುತರ ಕವನಗಳು ಸುಧರ್ಮಾ ದಿನಪತ್ರಿಕೆ, ಸಂಸ್ಕೃತ ಪ್ರತಿಭಾ, ಸಮಸ್ಕೃತ ಮಂಜರೀ, ಸಂಸ್ಕೃತ ಭಾರತೀ, ಸಂವಿತ್, ನವನಂದನ ಕಲ್ಪತರು ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿವೇಕಪ್ರಭಾ, ಸಂದೇಶ ಪ್ರಸಾದ, ಶಂಕರಭಾಸ್ಕರ ಮುಂತಾದ ನಿಯತಕಾಲಿಕೆಗಳಲ್ಲಿ ಕನ್ನಡ ಲೇಖನಗಳು ಪ್ರಕಟವಾಗಿವೆ. ಇವರು ಕನ್ನಡ, ಸಂಸ್ಕೃತ, ತೆಲುಗು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿದ್ದಾರೆ. ಬಸವ ಸಮಿತಿಯಿಂದ ನಿಯೋಜಿತವಾಗಿರುವ ವಚನಗಳ ಅನುವಾದದ ಕಾರ್ಯದಲ್ಲಿ ಸಂಸ್ಕೃತ ಅನುವಾದಗಳ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಶ್ರೀಯುತರ ಪತ್ನಿ ಶ್ರೀಮತಿ ಎನ್. ವತ್ಸಲಾ, ರಸಾಯನಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರು. ಮಗ ಅಜಿತ್ ಕುಮಾರ್ ಸ್ಯಾನ್‌ಫ್ರಾನ್ಸಿಸ್ಕೋನ ಗೂಗಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗಳು ಪತಿಯೊಂದಿಗೆ ಅಮೆರಿಕಾದ ಬೆಂಟಾನ್‌ವಿಲ್ ಎಂಬಲ್ಲಿ ವಾಸಿಸುತ್ತಿದ್ದಾರೆ.