ಅಮೆರಿಕನ್ನಡ
Amerikannada
ಶೇಕ್ಸ್‌ಪಿಯರನ ನಾಡಿನಲ್ಲಿ ನಲವತ್ತೈದು ದಿನಗಳು
-ಜಯಂತಿ ಅಮೃತೇಶ್, ಮೈಸೂರು
ಒಂದು ದೇಶದ ಸಂಸೃತಿ ಎಂದರೇನು? ಜಾನ್ ಡ್ಯೂಯಿ ಎಂಬ ಅಮೆರಿಕನ್ ತತ್ವ ಶಾಸ್ತ್ರಜ್ಞನ ಪ್ರಕಾರ ಸಂಸೃತಿ ಎಂಬುದು ಅಯಾ ದೇಶದ, ಸಮುದಾಯದ ಮೌಲ್ಯಗಳ, ಕಲೆಯ, ಆದರ್ಶಗಳ, ಸಾಧನೆ ಮತ್ತು ಪರಿಜ್ಞಾನ. ಯಾವುದೇ ಸಮಾಜದ ಜನ ಏನು ಮಾಡುತ್ತಾರೆ, ಹೇಗೆ ಚಿಂತಿಸುತ್ತಾರೆ, ಹೇಗೆ ಸಂವೇದನೆಯನ್ನು ವ್ಯಕ್ತ ಪಡಿಸುತ್ತಾರೆ ಸ್ಪಂದಿಸುತ್ತಾರೆ, ಅವರ ನಂಬಿಕೆಗಳೇನು, ವಾಂಛೆಗಳು ಯಾವುವು, ಯಾವುದಕ್ಕೆ ಅಂಜುತ್ತಾರೆ ಎಂಬುದನ್ನೊಳ ಗೊಂಡಂತೆ ಒಂದು ಜನಾಂಗದ ಸಮಗ್ರ ಜೀವನವೇ ಸಂಸೃತಿ ಎನ್ನಬಹುದು. ಸಂಸೃತಿ ಎಂಬುದು ಬದುಕಿನ ಒಂದು ವಿನ್ಯಾಸ, ನೀಲ ನಕ್ಷೆ, ರೇಖಾ ಲೇಖ, ಜನತೆಯ ಸಂಚಿತ ಕ್ರಿಯೆ ಮತ್ತು ಚಿಂತನೆಯ ವಿಧಾನಗಳು. ದುಡಿಮೆ, ಕಲೆ, ಶರೀರದ ನಿಯಂತ್ರಣ, ಪರಿಸರದೊಂದಿಗೆ ಹೊಂದಿಕೆ, ಇತರರೊಂದಿಗೆ ವ್ಯವಹಾರ ಇವೆಲ್ಲವೂ ಒಂದು ಜನಾಂಗದ ಸಂಸೃತಿಗೆ ಕನ್ನಡಿ. ಒಟ್ಟಿನಲ್ಲಿ ಸಂಸೃತಿ ಎಂಬುದು ಒಬ್ಬ ವ್ಯಕ್ತಿಯ, ಒಂದು ಸಮುದಾಯದ ಬದುಕಿಗೆ ಸಂಬಂಧಿಸಿದೆಲ್ಲ ಅಂಶಗಳಿಗೆ ಅನ್ವಯಿಸುವಂಥದು. ಇದೊಂದು ಸಮಗ್ರ ಮತ್ತು ವ್ಯಾಪಕವಾದ ಪರಿಕಲ್ಪನೆ.
ನಮ್ಮ ಸಂಸೃತಿಗಿಂತ ಅತ್ಯಂತ ಭಿನ್ನವಾದ ಸಂಸೃತಿಯ ಮಡಿಲಲ್ಲಿ, ಹಲವು ವಾರಗಳನ್ನು ಕಳೆಯುವ ಸೌಭಾಗ್ಯ ಒಂದು ಸಲ ನಮಗೆ ಒದಗಿ ಬಂದಿತು ೧೯೯೫ರಲ್ಲಿ. ನಮ್ಮಲ್ಲಿ ಅನೇಕರು ವಿದೇಶದಲ್ಲಿ ನೆಲಸಿರುವ ಮಗಳು ಅಳಿಯ, ಅಥವಾ ಮಗ ಸೊಸೆ ಇವರ ಆಹ್ವಾನವನ್ನು ಮನ್ನಿಸಿ ದೂರದ ಊರಿಗೆ ತೆರಳಿ ಅಲ್ಲಿ ಹಲವಾರು ವಾರಗಳನ್ನು ಕಳೆದು ಬರುವುದು ಇತ್ತೀಚಿನ ದಿನಗಳಲ್ಲಿ ಒಂದು ಸಾಮಾನ್ಯವಾದ ಸಂಗತಿ. ಆದರೆ ನಮ್ಮದು ಇದಕ್ಕಿಂತ ಭಿನ್ನವಾದ ಪ್ರಯಾಣ. ಹೇಗೆಂದರೆ ನಾವು ಇಂಗ್ಲೆಂಡಿಗೆ ಹೋಗಿ ಅಲ್ಲಿ ಪಾಶ್ಚಾತ್ಯರ ಮನೆಗಳಲ್ಲಿ ವಾಸವಿದ್ದು, ಅವರೊಟ್ಟಿಗೆ ಬೆರೆತು ಐದಾರು ವಾರಗಳನ್ನು ಕಳೆಯ ಬೇಕಾಗಿ ಬಂದಾಗ ಆಗುವ ಅನುಭವ, ಅನಿಸಿಕೆಗಳೇ ಬೇರೆ ರೀತಿಯದು.
ನಾವು, ದಂಪತಿಗಳು ಇಂಗ್ಲೆಂಡಿನಲ್ಲಿ ವಾಸವಾಗಿದ್ದ ನನ್ನ ಯಜಮಾನರ ಅಣ್ಣನವರ ಮನೆಗೆ ಹೋಗಿದ್ದೆವು. ನಮ್ಮ ಭಾವನವರಾದ ಡಾ. ಗಣೇಶ್ ತಾವು ವಾಸವಾಗಿದ್ದ ವೇಲ್ಸ್ ಪ್ರಾಂತದ ಮಹಿಳೆಯನ್ನು ಮದುವೆಯಾಗಿದ್ದರು. ಅವರು ಇಂಗ್ಲೆಂಡಿಗೆ ಹೋಗಿದ್ದು ೧೯೫೬ ನೆಯ ಇಸವಿಯಲ್ಲಿ. ಅರ್ಧ ಶತಮಾನವನ್ನು ಅಲ್ಲಿ ಕಳೆದಿರುವ ಅವರು ಹೆಚ್ಚುಕಡಿಮೆ ಆ ಊರಿನವರೇ ಆಗಿಹೋಗಿದ್ದಾರೆ. ಈ ದಂಪತಿಗಳಿಗೆ ನಾಲ್ವರು ಮಕ್ಕಳು. ಮೂರು ಜನ ಗಂಡು ಮಕ್ಕಳು; ಒಬ್ಬ ಮಗಳು. ಇವರ ಅಳಿಯ ಮತ್ತು ಇಬ್ಬರು ಸೊಸೆಯರು ಇಂಗ್ಲೀಷಿನವರೇ. ೧೯೭೦ನೆಯ ಇಸವಿ ಯಿಂದಲೂ ನಮ್ಮ ಭಾವನವರು ತಮ್ಮ ಬ್ರಿಟಿಷ್ ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ಪ್ರತಿ ವರುಷ ಭಾರತದ ಪ್ರವಾಸ ಕೈಗೊಳ್ಳುತ್ತಿದ್ದರು. ಅನಂತರ ಅವರ ಮಕ್ಕಳು ದೊಡ್ಡವರಾಗಿ ತಮ್ಮ ತಮ್ಮ ಸಂಸಾರದೊಂದಿಗೆ ಬರಲು ಪ್ರಾರಂಭಿಸಿದ್ದೂ ಉಂಟು. ನಾವು ಮುಂಬೈಯಲ್ಲಿ ವಾಸವಿದ್ದ ಆ ಮೂರು ಕೋಣೆಗಳ ಅಪಾರ್ಟ್‌ಮೆಂಟಿನಲ್ಲಿಯೇ ಎಲ್ಲರ ವಾಸ. ಅವರೆಲ್ಲರೂ ಒಂದು ಸಂಸಾರದಂತೆ ನಮ್ಮೊಂದಿಗೆ ಬೆರೆತು ಹೋಗಿದ್ದರು. ಅವರೆಲ್ಲರೂ ಈಗ ತಮ್ಮದೇ ಸಂಸಾರಗಳನ್ನು ಹೂಡಿದ್ದುದರಿಂದ ನಾವು ಈ ಬಾರಿ ಇಂಗ್ಲೆಂಡಿಗೆ ಹೋದಾಗ ಎಲ್ಲ ಮಕ್ಕಳ ಮನೆಗಳಲ್ಲೂ ಹೋಗಿ ಇರಬೇಕೆಂಬುದು ಮಕ್ಕಳ ವಿನಂತಿ ಮತ್ತು ಆಸೆ. ಅವರ ಈ ಅಪೇಕ್ಷೆಯನ್ನು ನಾವು ತಳ್ಳಿಹಾಕುವ ಹಾಗಿರಲಿಲ್ಲ. ಹೀಗಾಗಿ ಅಲ್ಲಿಯ ಪಾಶ್ಚಾತ್ಯ ಸಂಸೃತಿಯಲ್ಲಿ ೬ ವಾರಗಳು ಕಳೆಯುವ ಸೌಭಾಗ್ಯ ನಮ್ಮದಾಯಿತು.
ಪ್ರಯಾಣ ಸಿದ್ಧತೆಗಳು ಭರದಿಂದ ಪ್ರಾರಂಭವಾದುವು. ಅಲ್ಲಿಯ ಮಕ್ಕಳಿಗೆಲ್ಲ ಏನೇನು ಬೇಕು ಎನ್ನುವುದರ ಉದ್ದ ಪಟ್ಟಿಯೇ ತಯಾರಾಯಿತು. ಅವರಿಗೆ ನಮ್ಮ ಊರಿನ ಯಾವ ಯಾವ ತಿಂಡಿ ಇಷ್ಟ ಎಂದು ನನಗೆ ಚೆನ್ನಾಗಿ ಗೊತ್ತಿತ್ತು. ಒಬ್ಬನಿಗೆ ಮವಿನಕಾಯಿ ಉಪ್ಪಿನಕಾಯಿ ಇಷ್ಟವಾದರೆ, ಚಿಕ್ಕವನಿಗೆ ಮಾಗಳೀಬೇರಿನ ಉಪ್ಪಿನಕಾಯಿ ಎಂದರೆ ಪ್ರಾಣ. ಒಬ್ಬರಿಗೆ ಓಂಪುಡಿಯಾದರೆ ಇನ್ನೊಬ್ಬರಿಗೆ ಕೊಬ್ಬರಿ ಮಿಠಾಯಿ. ಅವರು ಇಲ್ಲಿಗೆ ಬಂದಾಗ ನಡೆದ ಒಂದೆರಡು ಸ್ವಾರಸ್ಯಕರ ವಿಷಯಗಳನ್ನು ಇಲ್ಲಿ ಹೆಳಲೇಬೇಕು.
ನಮ್ಮ ಬ್ರಿಟಿಷ್ ಮೊಮ್ಮಕ್ಕಳು ಸೂರ್ಯೋದಯವಾದ ಕೂಡಲೇ ಸೂರ್ಯನನ್ನು ನೋಡಲು ಓಡುತ್ತಿದ್ದರು. ಅದೇನು ಮಹಾ! ಸೂರ್ಯೋದಯವಾದ ನಂತರ ಸೂರ್ಯನನ್ನು ನೋಡುವುದೇನು ಬಂತು ಎನ್ನುತ್ತೀರಾ? ಹೌದು, ಡಿಸೆಂಬರ್ ತಿಂಗಳಲ್ಲಿ ಅವರು ಸೂರ್ಯನನ್ನು ಅದರಲ್ಲೂ ಬೆಳಗಿನ ಸೂರ್ಯನನ್ನು ಕಂಡಿದ್ದೇ ಇಲ್ಲವಂತೆ. ಅದು ಸರಿ; ಅವರೆಲ್ಲ ಒಕ್ಕೊರಲಿನಿಂದ ಹೇಳುತ್ತಿದ್ದುದು ಒಂದು ಮಾತು; ಅದು, ನಾನೇಕೆ ಒಬ್ಬಳೇ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತೇನೆನ್ನುವುದು? ಆ ದೇಶದಲ್ಲಿ ಗಂಡಹೆಂಡಿರಿಬ್ಬರೂ ಸೇರಿ ಅಡುಗೆ ಮನೆಯ ಕೆಲಸ ನಿರ್ವಹಿಸುತ್ತಾರೆ. ಆದ್ದರಿಂದ ಇದು ಅವರಿಗೆ ಬಿಡಿಸಲಾರದ ಪ್ರಶ್ನೆ. ಕಾಯಿತುರಿಯುವ ಮಣೆ ಅವರಿಗೆ ಒಂದು ಅಪಾಯಕಾರಿ ಆಯುಧದಂತೆ ತೋರುತ್ತಿತ್ತು. ಅದರ ಮೇಲೆ ನಾನು ಧೈರ್ಯವಾಗಿ ಕುಳಿತು ಹೇಗೆ ತರಕಾರಿ ಹೆಚ್ಚುತ್ತೇನೆ; ಕಾಯಿತುರಿಯುತ್ತೇನೆ ಎನ್ನುವುದನ್ನೆಲ್ಲ ವಿಡಿಯೋದಲ್ಲಿ ಚಿತ್ರೀಕರಿಸಿಕೊಂಡರು! ಅವರಿಗೆ ಇಲ್ಲಿಯ ಪ್ರತಿಯೊಂದು ಸಂಗತಿಯೂ ಸೋಜಿಗವೇ. ಬೆಳಗ್ಗೆ ಮನೆಯ ಮುಂದೆ ಬಿಡಿಸುವ ರಂಗವಲ್ಲಿಯಿಂದ ಹಿಡಿದು. ತಾವೂ ಸಹಾ ರಂಗವಲ್ಲಿ ಪುಡಿಯಿಂದ ರೇಖೆಗಳನ್ನು, ವಕ್ರರೇಖೆಗಳನ್ನು ಬಿಡಿಸಲು ಮುಂದಾಗುತ್ತಿದ್ದರು. ನಿತ್ಯವೂ ನನ್ನ ಜೊತೆ ತುಳಸೀ ಪೂಜೆಗೆ ಸಿದ್ಧರಾಗುತ್ತಿದ್ದರು. ಬೆಳಗ್ಗೆ ಎದ್ದ ತಕ್ಷಣ ಪಂಚಪಾತ್ರೆಯಲ್ಲಿ ನೀರು, ಹೂವು, ಅರಶಿನ ಕುಂಕುಮದ ಪಂಚವಾಳ, ಏನಾದರೂ ಹಣ್ಣು ಇಷ್ಟನ್ನೂ ಇಟ್ಟುಕೊಂಡು ತಯಾರಾಗಿಬಿಡುತ್ತಿದ್ದರು. ನಾವು ಏಕೆ ಹೀಗೆ ಗಿಡವನ್ನು ಪೂಜಿಸುತ್ತೇವೆ ಎಂಬ ಆ ಹಸುಳೆಗಳ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟವಾಗುತ್ತಿತ್ತು. ಇದಲ್ಲದೇ ದೇವರಮನೆಯಲ್ಲಿ ಮಂಟಪದಲ್ಲಿದ್ದ ದೇವರ ವಿಗ್ರಹಗಳು ಅವರಲ್ಲಿ ಕುತೂಹಲ ಮೂಡಿಸಿದ್ದುವು. ಅಲ್ಲಿದ್ದ ಹಿತ್ತಾಳೆಯ ಗೋವಿನ ವಿಗ್ರಹ ನಾಗರ ವಿಗ್ರಹಗಳನ್ನು ನೋಡಿ ನೀವೇಕೆ ಹಾವು, ಹಸು ಇವನ್ನೆಲ್ಲ ಪೂಜಿಸುತ್ತೀರಿ? ಅವೆಲ್ಲ ಏಕೆ ಇಲ್ಲಿವೆ? ಎಂಬ ಅಮಾಯಕ ಪ್ರಶ್ನೆಗಳನ್ನು ಹಾಕುತ್ತಿದ್ದರು. ನಮ್ಮ ಭಾವನವರ ಹೆಸರು ಗಣೇಶ್ ಎಂದು. ಆದ್ದರಿಂದ ಅವರಿಗೆಲ್ಲ ಗಣಪತಿಯ ಬಗ್ಗೆ ತಿಳಿದಿತ್ತು. ಆ ವಿಗ್ರಹದ ಬಗ್ಗೆ, ಅದರ ಆನೆಯ ತಲೆಯ ಕಥೆಯ ಬಗ್ಗೆ ಅರಿವಿತ್ತು ! ಇಷ್ಟೊಂದು ದೇವರುಗಳ ಗುಂಪನ್ನೇ ನೋಡಿದ ಅವರ ಆನಂದ ಹೇಳತೀರದು. ಅವರೆಲ್ಲ ಊರಿಗೆ ಹೊರಡುವ ದಿನ; ಕಿರಿಯ ಮೊಮ್ಮಗಳು ಸುತ್ತಮುತ್ತ ಎಲ್ಲೂ ಕಾಣಿಸಲಿಲ್ಲ; ದೇವರ ಮನೆಯಲ್ಲಿ ಇವಳೇನು ಮಾಡುತ್ತಿದ್ದಾಳೆಂದು ಇಣುಕಿ ನೋಡಿದರೆ, ಒಂದು ಪ್ಲಾಸ್ಟಿಕ್ ಚೀಲವನ್ನು ಕೈಯಲ್ಲಿ ಹಿಡಿದು ಎಲ್ಲ ದೇವರ ವಿಗ್ರಹಗಳನ್ನು ಬಾಚಿ ತನ್ನ ಚೀಲದಲ್ಲಿ ತುಂಬಿಸಿ ಕೊಳ್ಳುತ್ತಿದ್ದಳು! ಅವುಗಳ ಜೊತೆ ಗಂಟೆ, ದೀಪ, ಆರತಿಹಲಗೆ ಎಲ್ಲವೂ ಸೇರಿತ್ತು. ನಾನು ಅವಳಿಗೆ ಸಮಾಧಾನ ಹೇಳಿ, “ಇವೆಲ್ಲ ನಿನಗೆ ಬೇಡಮ್ಮ; ನಿನಗಾಗಿ ಹೊಸದನ್ನು ತಂದುಕೊಡುತ್ತೇನೆ” ಎಂದು ಹೇಳಿ ಸಮಾಧಾನಪಡಿಸುವುದರಲ್ಲಿ ಸಾಕಾಗಿಹೋಯಿತು. ಆದ್ದರಿಂದ ಆ ಪುಟ್ಟ ಬಾಲೆಯರಿಗೆ ಚಿಕ್ಕದಾದ ಕರಿಮರದ ಮಂಟಪ ಮತ್ತು ಅದರೊಳಗೊಂದು ದೇವರ ವಿಗ್ರಹವನ್ನು ಉಡುಗೊರೆಯನ್ನಾಗಿ ಕೊಡುವುದು ಎಂದು ತೀರ್ಮಾನವಾಯಿತು. ನಮ್ಮ ಭಾವನವರ ನಾಲ್ಕು ಜನ ಮಕ್ಕಳ ಮನೆಯಲ್ಲಿ ಒಂದೊಂದು ವಾರ ಇರುವುದೆಂದು ತೀರ್ಮಾನವಾಯಿತು.
ನಮ್ಮ ಭಾರತೀಯ ಅತಿಥಿ ಸತ್ಕಾರವೇ ಬೇರೆ; ಅವರದ್ದೇ ಬೇರೆ. ಅಂದರೆ ಪ್ರೀತಿಯನ್ನು ತೋರ್ಪಡಿಸಿ ಕೊಳ್ಳುವ ರೀತಿ ಬೇರೆ ಅಷ್ಟೆ. ನಾವು ನಮ್ಮ ಕಾರ್ಯಕ್ರಮಗಳನ್ನೆಲ್ಲಾ ಬದಿಗಿಟ್ಟು, ಬಗೆ ಬಗೆಯ ಅಡುಗೆ ತಿಂಡಿಗಳನ್ನು ಮಾಡಿ ಬಡಿಸುತ್ತೇವೆ. ಅವರ ರೀತಿಯೇ ಬೇರೆ, ಅದರಲ್ಲೂ ಒಂದು ವಿಧವಾದ ಸ್ನೇಹ, ಪ್ರೀತಿ, ಅಂತಃಕರಣ ತುಂಬಿರುತ್ತದೆ. ಅದನ್ನು ತೋರ್ಪಡಿಸುವ ರೀತಿಬೇರೆ ಅಷ್ಟೆ. ನಮ್ಮಿಬ್ಬರನ್ನು ಎಲ್ಲರೂ ತುಂಬು ಮನಸ್ಸಿನಿಂದ ಬರಮಾಡಿಕೊಂಡರು. ನಾವು ಲಂಡನ್‌ನಲ್ಲಿ ವಿಮಾನದಿಂದ ಇಳಿದ ನಂತರ ಮೊದಲು ನಮ್ಮ ಭಾವನವರ ಊರಾದ ದಕ್ಷಿಣ ವೇಲ್ಸ್‌ನ ‘merthyr tydfil’ ಅನ್ನು ತಲುಪಿದೆವು. ಮನೆ ತಲುಪಿದ ಕೂಡಲೇ ಅವರು ಶಾಖಾಹಾರಿ ಅಡುಗೆ ಏನು ಮಾಡುವುದೆಂದು ನಮ್ಮನ್ನೇ ಕೇಳಿದಾಗ ನಮಗೆ ಆಶ್ಚರ್ಯವೋ ಆಶ್ಚರ್ಯ! ಇಲ್ಲಿಯಾದರೆ ನಾವು ಯಾರಾದರೂ ಬರುತ್ತಾರೆಂದು ತಿಳಿದರೆ ಸಾಕು, ಅವರಿಗೆ ಏನನ್ನೆಲ್ಲ ಮಾಡಿ ಉಣಬಡಿಸಬೇಕೆನ್ನುವ ಪಟ್ಟಿಯನ್ನೇ ತಯಾರು ಮಾಡುತ್ತೇವೆ. ಅವರು ಬಂದಿಳಿದ ಕೂಡಲೇ ಊಟಕ್ಕೋ, ತಿಂಡಿಗೋ ಟೇಬಲ್ಲಿಗೆ ಆಮಂತ್ರಿಸುವುದೊದೇ ಕೆಲಸವಲ್ಲವೇ? ಇಲ್ಲಿ ಅದಕ್ಕೆ ತದ್ವಿರುದ್ಧ. ೧೬ ಗಂಟೆಗಳ ಕಾಲದ ವಿಮಾನ ಪ್ರಯಾಣದಲ್ಲಿ ದಣಿದಿದ್ದರಿಂದ ಏನೂ ಬೇಡ ಎಂದೆವು. ಬರೀ ಹಾಲು ಕುಡಿದೆವು. ಅಲ್ಲಿ ಯಾರೂ ಯಾರನ್ನು ಇಂತಹುದನ್ನೇ ತಿನ್ನಬೇಕೆಂದೂ ಅಥವಾ ಏನನ್ನೂ ತಿನ್ನದೇ ಮಲಗಬಾರದೆಂದೂ ಹೇಳುವುದಿಲ್ಲ, ಬಲವಂತ ಮಾಡುವುದೂ ಇಲ್ಲ. ಪ್ರತಿಯೊಬ್ಬರ ಭಾವನೆಗಳನ್ನೂ ಗೌರವಿಸುತ್ತಾರೆ. ಇದನ್ನು ನಾವು ಉದಾಸೀನ ಅಥವಾ ತಾತ್ಸಾರವೆಂದು ತಿಳಿಯಬಾರದು. ಅವರು ನಮ್ಮ ಪಾಡಿಗೆ ನಮ್ಮನ್ನು ಇರಲು ಬಿಡುತ್ತಾರೆ. ನಮ್ಮ ಸ್ವಂತ ನಿರ್ಣಯಗಳನ್ನು ಗೌರವಿಸುತ್ತಾರೆ. ಅಷ್ಟು ಬೃಹತ್ತಾದ ಮನೆಯಲ್ಲಿ ನಮ್ಮ ಭಾವ ಮತ್ತು ಓರಗಿತ್ತಿ ಮಾತ್ರ ವಾಸವಾಗಿದ್ದಾರೆ. ಹತ್ತಿರದಲ್ಲೇ ಎಂದರೆ ಎರಡು ಮೈಲಿ ದೂರದಲ್ಲಿ ಮಗ, ಸೊಸೆ ತಮ್ಮ ಎರಡು ಮಕ್ಕಳೊಡನೆ ವಾಸವಾಗಿದಾರೆ. ಮೊಮ್ಮಕ್ಕಳಿಬ್ಬರೂ ನಮ್ಮನ್ನು ನೋಡಿದ ಕೂಡಲೇ ತೊಡೆ ಏರಿ ಕುಳಿತವು. ಕುಟುಂಬದವರೆಲ್ಲರೂ ಅಲ್ಲಿ ಸೇರಿದ್ದರಿಂದ ಅವರಿಗೆಲ್ಲ ತಂದಿದ್ದ ಉಡುಗೊರೆಗಳನ್ನು ಹಂಚಿದೆವು. ಹರ್ಷೋದ್ಗಾರದೊದಿಗೆ ಎಲ್ಲರೂ ಅವುಗಳನ್ನು ಸ್ವೀಕರಿಸಿದರು. ನಾವು ಕೊಟ್ಟ ಬೆಳ್ಳಿಯ ದೀಪಗಳು ಕ್ಯಾಂಡಲ್ ಹೋಲ್ಡರ್‌ಗಳಾಗಿ ಪರಿವರ್ತಿತಗೊಂಡವು. ಸಾರು, ಹುಳಿ. ಬಾತಿನಪುಡಿ ಮತ್ತು ಚಟ್ನಿಪುಡಿಗಳ ವಿತರಣೆಯೂ ನಡೆಯಿತು.
ಮಾರನೆಯದಿನವೇ ನಮ್ಮ ಭಾವನವರು ಮತ್ತು ಅವರ ಪತ್ನಿ ಮೈರಾ ರೋಟರಿ ಕ್ಲಬ್ಬಿನ ಸಮ್ಮೇಳನಕ್ಕಾಗಿ ದೂರದ ಊರಿಗೆ ನಾಲ್ಕು ಇದನಗಳ ಕಾಲ ಹೋಗಿಬರುವ ಕಾರ್ಯಕ್ರಮವಿತ್ತು. ನಮ್ಮನ್ನು ಸ್ವಾಗತಿಸಲು ಬಂದ ಮಕ್ಕಳೆಲ್ಲರೂ ಊರಿಗೆ ಹೊರಟಿದ್ದರಿಂದ ನಾವು ಮಾತ್ರ ಮನೆಯಲ್ಲಿ ಇರಬೇಕಿತ್ತು. ಎಲ್ಲ ಸೌಲಭ್ಯಗಳೂ ಇದ್ದುದರಿಂದ ತೊಂದರೆ ಏನೂ ಇರಲಿಲ್ಲ; ಆದರೆ ನಮ್ಮಲ್ಲಿ ಹೇಗೆಂದರೆ ಅಥಿತಿಗಳು ಬಂದರೆಂದರೆ ನಾವು ನಮ್ಮ ಎಲ್ಲ ಕಾರ್ಯಕ್ರಮಗಳನ್ನೂ ಆದಷ್ಟು ಮಟ್ಟಿಗೆ ರದ್ದು ಪಡಿಸುತ್ತೇವೆ. ಅವರಿಗೆ ಯಾವ ಅನಾನುಕೂಲವೂ ಆಗಬಾರದೆಂದು ಅತೀ ಕಾಳಜಿ ವಹಿಸುತ್ತೇವೆ. ಆದರೆ ಇಲ್ಲಿಯ ಸಂಸೃತಿಯೇ ಬೇರೆ. ಅವರು ತಮಗೆ ತೊಂದರೆ ಯಾಗದಿರುವಮತೆ ನೋಡಿ ಕೊಳ್ಳುತ್ತಾರೆ ; ತಮ್ಮ ಕಾರ್ಯ ಕ್ರಮಗಳಿಗೆ ಧಕ್ಕೆ ಬಾರದಂತೆ ಜಾಗರೂಕತೆ ವಹಿಸುತ್ತಾರೆ.
ಭಾವನವರು ಮತ್ತು ಅತ್ತಿಗೆ ಊರಲ್ಲಿ ಇಲ್ಲದಿರುವಾಗ ನಾವಿಬ್ಬರೂ ಒಂದೆರಡು ಮೈಲಿದೂರದಲ್ಲಿದ್ದ ಹಿರಿಯ ಮಗನ ಮನೆಗೆ ಹೋಗಿ ಇರುವುದು ಎಂದು ತೀರ್ಮಾನವಾಯಿತು. ಮಕ್ಕಳು ಕುಣಿದಾಡುತ್ತಾ ನಮ್ಮಿಬ್ಬರನ್ನೂ ಅವರ ಮನೆಗೆ ಕರೆಒದಯ್ದರು. ನಮಗೂ ಅವರೊಟ್ಟಿಗೆ ಕಾಲ ಕಳೆಯುವುದು ಇಷ್ಟವಾಗಿತ್ತು. ಅವರು ಭಾರತಕ್ಕೆ ಬಂದಾಗ ಆ ಮಕ್ಕಳು ನಮ್ಮನ್ನು ಬಹಳ ಹೊಂದಿಕೊಂಡಿದ್ದುವು. ನಾನು ಕತೆ ಹೇಳುತ್ತಾ ಅವರಿಗೆ ಊಟ ಮಾಡಿಸುತ್ತ್ತಿದ್ದುದನ್ನು ಅವರು ಮರೆತಿರಲಿಲ್ಲ. ಹೊರದೇಶದಲ್ಲಿ ಅವರು ಮಕ್ಕಳಿಗೆ ತಟ್ಟೆಯಲ್ಲಿ ಊಟ, ತಿಂಡಿ ಹಾಕಿ ಟೇಬಲಿನ ಮೇಲೆ ಇಟ್ಟುಬಿಡುತ್ತಾರೆ ; ಮಕ್ಕಳೇ ತಮಗೆ ಎಷ್ಟು ಬೇಕೋ ತೆಗೆದುಕೊಂಡು ತಿನ್ನಬೇಕು. ಅಷ್ಟೆ. ಯಾರೂ ಅವರಿಗೆ ಬಲವಂತ ಮಾಡಿಯೋ, ಕಥೆ ಹೇಳುತ್ತಲೋ ತಿನ್ನಿಸುವುದಿಲ್ಲ. ಇದು ಅಲ್ಲಿಯ ಸಂಸೃತಿ.
ನಾವು ಅವರೊಟ್ಟಿಗೆ ಹೊರಟಾಗ ನಮ್ಮ ಭಾವನವರು, “ನೋಡಮ್ಮಾ, ಅದು ಒಂದು ಪಕ್ಕಾ ಇಂಗ್ಲಿಷ್ ಕುಟುಂಬ. ಸ್ವಲ್ಪ ಅಕ್ಕಿ, ಬೇಳೆ ಸಾರಿನಪುಡಿಯನ್ನಾದರೂ ತೆಗೆದುಕೊಂಡು ಹೋಗು” ಎಂದರು. ಅದಕ್ಕೆ ನಾವು ಬಹಳ ಜಂಭದಿಂದ “ಪ್ರತಿದಿನಾ ಅನ್ನ ಸಾರು ತಿನ್ನುವುದು ಇದ್ದೇ ಇದೆ. ನಾವು ಅವರು ಯಾವ ಶಾಖಾಹಾರಿ ಅಡುಗೆ ಮಾಡುವರೊ ಅದನ್ನೇ ತಿನ್ನುತ್ತೇವೆ” ಎಂದು ಅವರ ಸಲಹೆಯನ್ನು ಖಡಾಖಂಡಿತವಾಗಿ ನಿರಾಕರಿಸಿದೆವು.
ಮಗ ಸೊಸೆ ಪೀಟರ್ ಮತ್ತು ಲಾರಾ ; ಮಕ್ಕಳು ಸೆರಿಯನ್, ಆಶಾ. ಅವರು ನಮಗಾಗಿ ಒಂದು ಕೋಣೆಯನ್ನು ತೆರವುಮಾಡಿಕೊಟ್ಟರು. ಮನೆಯೊಳಗೆ ಹೋದ ತಕ್ಷಣ ಅವರ ನಾಯಿಗೆ ನಮ್ಮ ಪರಿಚಯ ಮಾಡಿಕೊಟ್ಟರು. ಅದರ ಹೆಸರು ‘ರಸಂ’. ಏಕೆಂದರೆ ಅದರ ಬಣ್ಣ ನಮ್ಮ ಸಾರಿನ ಬಣ್ಣವನ್ನು ಹೋಲುತ್ತಿತ್ತು! ಮಕ್ಕಳು ಕೋಡಲೇ ಅಕ್ಕ ಪಕ್ಕದಲ್ಲಿರುವ ತಮ್ಮ ಸ್ನೇಹಿತರೆನ್ನಲ್ಲಾ ಕರೆದು ಭಾರತದಿಂದ ಬಂದಿರುವ ತಮ್ಮ ಚಿಕ್ಕತಾತ, ಚಿಕ್ಕಜ್ಜಿಯ ಪರಿಚಯ ಮಾಡಿಕೊಟ್ಟರು. ಅವರು ನಮ್ಮನ್ನು ‘ತಾತ ಟೂ’ ‘ಪಾಟಿ ಟೂ’ ಎಂದು ಕರೆಯುತ್ತಾರೆ. ಇಲ್ಲಿ ಒಂದು ವಿಷಯವನ್ನು ತಿಳಿಸದೇ ಮುಂದಕ್ಕೆ ಹೋಗುವ ಹಾಗಿಲ್ಲ. ಆ ದೇಶದಲ್ಲಿ ಹೀಗೆ ನೆಂಟರು ಬಂದು, ಇದ್ದು, ಕೆಲವು ದಿನಗಳನ್ನು ಕಳೆಯುವುದು ಬಹಳ ಅಪರೂಪ. ಕೇವಲ ಭೇಟಿಮಾಡಿ ಹೊಗುತ್ತಾರೆ ಅಷ್ಟೆ. ಅಲ್ಲಿಯ ಸಂಸೃತಿಯಲ್ಲಿ ಹೀಗೆ ಹೋಗುವುದು, ಅವರೊಟ್ಟಿಗೆ ಇರುವುದು ಇವೆಲ್ಲಾ ಕಂಡು ಕೇಳದ ವಿಷಯಗಳು.
ಪೀಟರನ ಹೆಂಡತಿ ಲಾರಾಗೆ ಶಾಖಾಹಾರಿ ಅಡುಗೆ ತಯಾರಿಸಲು ಬರುತ್ತಿರಲಿಲ್ಲ. ಅವರು ಮನೆಯಲ್ಲಿ ಅಡುಗೆ ಮಾಡುವುದೇ ಕಡಮೆ ಎನ್ನುವ ವಿಷಯ ನಮಗೆ ನಿಧಾನವಾಗಿ ತಿಳಿಯಿತು. ಮೊದಲ ದಿನ ಬ್ರೆಡ್ಡು ಹಣ್ಣು ತಿಂದು ಮಲಗಿದೆವು. ನಮ್ಮಿಂದ ಅವರಿಗೂ ಅರೆ ಹೊಟ್ಟೆ ಊಟವಾಯಿತೇನೋ ಎನ್ನಿಸಿತು. ಹಾಲು, ಹಣ್ಣು ಮತ್ತು ಅವರು ಸಲಾಡ್‌ಗೆ ಉಪಯೋಗಿಸುವ ತರಕಾರಿಗಳು ಇದ್ದೇ ಇದ್ದುವು. ಮುಂಜಾನೆ breakfastಗೆ ಪುನಃ crossants ಎನ್ನುವ ಒಂದು ರೀತಿಯ ಬ್ರೆಡ್ಡಿನ ಸೇವನೆಯಾಯಿತು. ಉಪಾಹಾರದ ನಂತರ ನಮ್ಮನ್ನು ಕರೆದುಕೊಂಡು ಸಿನಿಮಾ ನೋಡಲು ಹೊರಟರು. ಒಂದು ಗಂಟೆಯ ಪ್ರಯಾಣದ ನಂತರ ನಾವು ಆ ಥಿಯೇಟರ್ ತಲುಪಿದೆವು. ಅಷ್ಟುಹೊತ್ತಿಗಾಗಲೇ ಬರೀ ಬ್ರೆಡ್ ಬನ್ ತಿಂದ ನಮ್ಮ ಹೊಟ್ಟೆ ಚುರುಗುಡುತ್ತಿತ್ತು. ಸಿನಿಮಾ ಪ್ರಾರಂಭವಾದ ನಂತರ ಪೀಟರ್ ಹೊರಗಡೆ ಹೋಗಿ ದೊಡ್ಡ ದೊಡ್ಡ ಒಂದಡಿ ಉದ್ದದ ರಟ್ಟಿನ ಪೊಟ್ಟಣಗಳಲ್ಲಿ ಪಾಪ್‌ಕಾರನ್ ಒಬ್ಬರಿಗೊಂದೊಂದರಂತೆ ತಂದ. ಅದನ್ನು ನೋಡಿ ನಾವು ಸಂತೋಷಗೊಂಡೆವು.. ಏಕೆಂದರೆ ಅಷ್ಟು ಪಾಪ್‌ಕಾರನ್ ತಿಂದು ಜ್ಯೂಸ್ ಕುಡಿದರೆ ನಮ್ಮ ಹಸಿವೆ ಹಿಂಗಬಹುದೆಂದು. ಅದರ ಒಂದು ಕಾಳನ್ನು ಬಾಯಿಗೆ ಹಾಕಿಕೊಂಡ ಕೂಡಲೇ ತಿಳಿಯಿತು, ಅದು ಉಪ್ಪು ಅಥವಾ ಖಾರದ ಪಾಪ್ ಕಾರನ್ ಅಲ್ಲ, ಸಿಹಿಯದು ಎಂದು. ಅವರಿಗೇನು ಗೊತ್ತು ನಮ್ಮ ನಾಲಿಗೆಯ ಉಪ್ಪು ಖಾರದ ಬಯಕೆ? ಅತ್ಯಂತ ನಿರಾಸೆಯಾದರೂ very nice, very nice ಎಂದು ಅದನ್ನೇ ತಿಂದೆವು.
ಆ ಮಕ್ಕಳ ಚಲನಚಿತ್ರ ಮುಗಿದ ನಂತರ ರಾತ್ರಿಯ ಊಟಕ್ಕೆ ಒಂದು ದೊಡ್ಡ ಹೋಟಲಿಗೆ ಹೋದೆವು. ಅಲ್ಲಿ ಶಾಖಾಹಾರವೆಂದರೆ pizza ಮತ್ತು saladಗಳು ಮಾತ್ರ. ಆಹಾರ ಪದಾರ್ಥಗಳನ್ನು ಆಕರ್ಷಕವಾಗಿ ಜೋಡಿಸಿದ್ದರು. ಅದು ನಮಗೆ ಕಣ್ಣಿಗೆ ಹಬ್ಬ ಮಾತ್ರ! ಪಿಜ್ಜಾಗೆ ಖಾರದ ಪುಡಿಯನ್ನು ಉದುರಿಸಿಕೊಂಡು ತಿಂದೆವು. ಇಂತಹ ಪರಿಸ್ಥಿತಿಯಲ್ಲಿ ನಮಗೆ ರಕ್ಷಣೆ ಕೊಟ್ಟಿದ್ದು, ವಿಧ ವಿಧವಾದ ಹಣ್ಣಿನರಸಗಳು. ಮಾರನೆಯ ಪ್ರಾತಃಕಾಲವೂ ಬೇರೆ ರೀತಿಯ ಬ್ರೆಡ್ಡುಗಳ ಪುನರಾವರ್ತನೆ? ಸಂಜೆ ಪುನಃ ಹೋಟೆಲ್‌ಗೆ ಪಯಣ; ಅಲ್ಲಿ ಬೇಯಿಸಿ, ಉಪ್ಪು ಹಾಕಿದ ತರಕಾರಿಗಳ ಮೆರವಣಿಗೆ. ಸೊಸೆಗೆ ನಾನು ಎಷ್ಟು ಹೇಳಿದರೂ ಅವಳು ಮನೆಯಲ್ಲಿ ಅಡುಗೆ ಮಾಡಲೇ ಇಲ್ಲ. ಅವಳಿಗೆ ಹೆದರಿಕೆಯಂತೆ! ಆದರೆ ನಿಜವಾದ ಕಾರಣ ನಂತರ ತಿಳಿಯಿತು; ಅವರ ಮನೆಯಲ್ಲಿ ಅಕ್ಕಿ, ಬೇಳೆ ಎಂಬ ಪದಾರ್ಥಗಳೆ ಇರಲಿಲ್ಲವಂತೆ? ಓಹೋ! ಅದಕ್ಕೇ ಇರಬೇಕು ನಾವು ಹೊರಡುವಾಗಲೇ ನಮ್ಮ ಭಾವನವರು ಸ್ವಲ್ಪ ಅಕ್ಕಿ ಬೇಳೆ ಸಾರಿನಪುಡಿ ತೆಗೆದುಕೊಂಡುಹೋಗಿ ಎಂದು ಹೇಳಿದ್ದು! ಈಗ ಅರ್ಥವಾಯಿತು. ಸೊಸೆಯ ತವರು ಮನೆಯವರೆಲ್ಲ ಬಂದು ನಮ್ಮನ್ನು ಭೇಟಿಮಾಡಿದರು. ನನಗೆ ಅನ್ನ ಸಾರು, ಖಾರದ ಅವಲಕ್ಕಿ, ಪುಳಿಯೋಗರೆ ಎಲ್ಲ ನೆನಪಿಗೆ ಬರಲು ಪ್ರಾರಂಭವಾಯಿತು. ಈ ಸಮಯದಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನೆಲಸಿರುವ ನಮ್ಮ ನೆಂಟರು ನಮ್ಮನ್ನು ಕರೆದು ಕೊಂಡುಹೋಗಲು ಬರುವುದೆಂದು ಏರ್ಪಾಡಾಯಿತು. ಅವರಿಬ್ಬರೂ ವೃತ್ತಿಯಲ್ಲಿ ವೈದ್ಯರು. ನಾವಿದ್ದ ಊರಿನಿಂದ ಅವರ ಊರಿಗೆ ನಾಲ್ಕು ಗಂಟೆಗಳ ಪ್ರಯಾಣ. ಪೀಟರನ ಮಕ್ಕಳು ನಾವು ಹೋಗಲೇಬಾರದೆಂದು ಹಠ ಹಿಡಿದು ಅಳಲು ಪ್ರಾರಂಭ ಮಾಡಿದರು. ಅವರನ್ನು ಬಿಟ್ಟು ಅಲ್ಲಿಂದ ಹೊರಡುವುದು ಪ್ರಯಾಸವೇ ಆಯಿತು. ಆ ಪ್ರೀತಿ, ಮಮತೆಗೆ ಬೇರೆ ಏನೂ ಸಾಟಿ ಇಲ್ಲ ಎನ್ನಿಸಿತು.
ಬರ್ಮಿಂಗ್‌ಹ್ಯಾಮ್ ತಲುಪಿದ ತಕ್ಷಣ ನಾವು ಅನಂತರಾಮ್ ಮತ್ತು ಕಲ್ಯಾಣಿಯ ಮನೆಯ ಮುಂದೆ ಇದ್ದ ರಂಗವಲ್ಲಿಯನ್ನು ಗಮನಿಸಿದೆವು. ಒಳಗೆ ಹೋಗುವ ಮೊದಲೇ ಸಾರು, ಹುಳಿಗಳ ಪರಿಮಳ ನಮ್ಮ ಮೂಗಿಗೆ ‘ಘಂ’ ಎಂದು ಬಡಿಯಿತು. ಅವರ ಮನೆಯಲ್ಲಿ ಒಂದು ಕೋಣೆಯಲ್ಲಿ ಮುಕ್ಕಾಲು ಭಾಗ ಊಟದ ಮೇಜು ; ಅದರ ತುಂಬಾ ಹರಡಿದ್ದ ವಿಧ ವಿಧವಾದ ತಿನ್ನುವ ಪದಾರ್ಥಗಳು. ಹಪ್ಪಳ ಸಂಡಿಗೆಯೊದಿಗೆ ಪುಷ್ಕಳ ಭೋಜನವಾಯಿತು. ನಾವು ಭಾರತೀಯರು, ಊಟ, ತಿಂಡಿಗಳಿಗೇ ಹೆಚ್ಚು ಮಹತ್ವ ಕೊಡುತ್ತೇವೆಂದು ಎನ್ನಿಸಿತು. ಅತಿಥಿಗಳಿಗೆ ಉಣಬಡಿಸು ವುದರಲ್ಲಿಯೇ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುವವರು ನಾವು!
ಮರುದಿನ ಮಹಾನ್ ನಾಟಕಕಾರರೂ, ವಿಶ್ವದಲ್ಲೇ ಅತಿ ಪ್ರಾಮುಖ್ಯತೆ ಪಡೆದ ಶೇಕ್ಸ್‌ಪಿಯರರು ಹುಟ್ಟಿ, ಬಾಳಿ, ಬದುಕಿದ ಸ್ಥಳದ ವೀಕ್ಷಣೆಗೆ ಹೊರಟೆವು. ಬ್ರಿಟಿಷ್ ಸರಕಾರ ಆ ಸ್ಥಳವನ್ನು ಅತಿ ಜಾಗರೂಕತೆಯಿಂದ ಕಾದಿರಿಸಿದೆ. ಅವರು ಉಪಯೋಗಿಸುತ್ತಿದ್ದ ಎಲ್ಲಾ ಸಾಮಾನುಗಳನ್ನೂ ಅತಿ ಜಾಗರೂಕತೆಯಿಂದ ಜೋಪಾನ ಮಾಡಿದೆ. ಆ ಮಹಾನ್ ಕವಿಯ ಲೇಖಣಿ, ಪುಸ್ತಕಗಳು, ಅವರು ಉಪಯೋಗಿಸುತ್ತಿದ್ದ ವಸ್ತ್ರಗಳು, ಮತ್ತು ಪಾತ್ರೆಗಳನ್ನೂ ಸಹಾ ಜನರ ವೀಕ್ಷಣೆಗೆಂದು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇದನ್ನೆಲ್ಲಾ ವೀಕ್ಷಕರಿಗೆ ವಿವರಿಸಿ ಹೇಳಲು ಸಿಬ್ಬಂದಿ ಬೇರೇ ಇದೆ. ವಸ್ತು ಚಿಕ್ಕದೇ ಇರಲಿ, ದೊಡ್ಡದೇ ಇರಲಿ ಅದನ್ನು ಬೃಹತ್ ರೂಪ ಮಾಡಿ ತೋರಿಸಿ, ಪ್ರದರ್ಶಿಸುವುದು ಪಾಶ್ಚಾತ್ಯರಿಗೆ ಕರಗತವಾಗಿ ಬಂದಿರುವ ವಿದ್ಯೆ. ಅಗತ್ಯಕ್ಕಿಂತ ಹತ್ತು ಪಟ್ಟು ಹೆಚ್ಚು ಅದನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ. ವೈಭವೀಕರಿಸು ತ್ತಾರೆ. ಇದನ್ನು ಪ್ರವಾಸಿಗರೂ ಮೆಚ್ಚುತ್ತಾರೆ. ಬರ್ಮಿಂಗ್‌ಹ್ಯಾಮಿನ ವಸ್ತು ಸಂಗ್ರಹಾಲಯದಲ್ಲಿ ನಮ್ಮ ಭಾರತದ ಅನೇಕಾನೇಕ ಶಿಲ್ಪ ಕಲಾಕೃತಿಗಳು ಸ್ಥಾಪನೆಯಾಗಿ ಪ್ರದರ್ಶಿತಗೊಳ್ಳುತ್ತಿವೆ. ಅವು ಇಲ್ಲಿಂದ ಅಲ್ಲಿಗೆ ಪಯಣಿಸಿದ್ದಾದರೂ ಹೇಗೆ? ಇದೊಂದು ಯಕ್ಷ ಪ್ರಶ್ನೆ. ನಾಲ್ಕಡಿ ಎತ್ತರದ ಗಣೇಶ, ವಿಷ್ಣು, ಶಿವ ಲಿಂಗ, ಶಿಲಾ ಬಾಲಿಕೆಯರು ಹೀಗೆ ಒಂದೇ ಎರಡೇ?
ನಾವು ಹಿಂತಿರುಗಿ ಭಾವನವರ ಮನೆಗೆ ಬರುವ ವೇಳೆಗೆ ಅವರು ತಮ್ಮ ವಿಹಾರವನ್ನು ಮುಗಿಸಿಕೊಂಡು ಬಂದು, ನಮ್ಮ ಮುಂದಿನ ಕಾರ್ಯಕ್ರಮಗಳನ್ನು ಏರ್ಪಾಡುಮಾಡುತ್ತಿದ್ದರು. ಮುಂದಕ್ಕೆ ಎರಡನೇ ಮಗನಾದ ಅಶೋಕ ಮತ್ತು ಸೊಸೆ ಮ್ಯಾಂಡಿಯ ಮನೆಗೆ ಲಂಡನ್ನಿಗೆ ಹೋಗುವುದೆಂದೂ, ಅಲ್ಲಿಂದ ಪ್ಯಾರಿಸ್ಸಿಗೆ ಹೋಗುವುದೆಂದೂ ತೀರ್ಮಾನವಾಯಿತು. ಸಮುದ್ರದ ತಳದಲ್ಲಿ ಹಾಕಿರುವ ರೈಲ್ವೇ ಹಳಿಗಳಮೇಲೆ ಹಾಯ್ದಾಡುವ ‘ಯೂರೋಸ್ಟಾರ್’ ಎನ್ನುವ ‘channel express’ ನಲ್ಲಿ ನಮ್ಮ ಫ್ರಾನ್ಸ್ ದೇಶದ ಪ್ರಯಾಣ ಪ್ರಾರಂಭವಾಯಿತು. ಸಮುದ್ರದ ತಳದಲ್ಲೂ, ಮಧ್ಯೆ ಮಧ್ಯೆ ಭೂಮಿಯ ಮೇಲೂ ಅಚ್ಚರಿಯಿಂದ ಪಯಣಿಸಿದೆವು. ರೈಲು ನಿಲ್ದಾಣದಿಂದ ನಮಗಾಗಿ ಕಾದಿರಿಸಿದ ಹೋಟೆಲ್‌ನ ಕೋಣೆಗಳನ್ನು ಆಕ್ರಮಿಸಿಕೊಂಡೆವು. ಆದೇಶದಲ್ಲಿ ಕೇವಲ ತಮ್ಮದೇ ಆದ ಫ್ರೆಂಚ್ ಭಾಷೆಗೆ ಮಾತ್ರ ಆದ್ಯತೆ. ಸಂಭಾಷಣೆ, ಅಂಗಡಿ ಮುಂಗಟ್ಟುಗಳ ವ್ಯವಹಾರ, ಭಿತ್ತಿ ಪತ್ರಗಳು, ಸೂಚನೆಗಳು ಎಲ್ಲವೂ ಫ್ರೆಂಚ್ ಬಾಷೆ ಯಲ್ಲಿಯೇ ಆಗಬೇಕು. ಆಂಗ್ಲಭಾಷೆ ಅರಿತವರು ಬಹಳ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಹೋಟೆಲ್ ನವರು. ನಾಗರಿಕರು ಎಲ್ಲರೂ ಫ್ರೆಂಚ್ ಮಾತ್ರ ಮಾತನಾಡುವವರು. ರಸ್ತೆಗಳಲ್ಲಿ, ರೈಲ್ವೇ ನಿಲ್ದಾಣದಲ್ಲಿ ಎಲ್ಲ ಸೂಚನಾ ಫಲಕಗಳನ್ನೂ ಅದೇ ಭಾಷೆಯಲ್ಲಿ ನೋಡಿ ಆಶ್ಚರ್ಯವಾಯಿತು. ಇಂಗ್ಲಿಷಿನ ಛಾಯೆ ಸಹಾ ಇಲ್ಲ. ಈ ವಿಷಯ ಮೊದಲೇ ತಿಳಿದಿದ್ದರಿಂದ ನಾವು ಒಂದು ಇಂಗ್ಲಿಷ್ ಟು ಫ್ರೆಂಚ್ ಕೈಪಿಡಿಯನ್ನು ತೆಗೆದುಕೊಂಡು ಹೋಗಿದ್ದೆವು. ಅತಿ ಮುಖ್ಯವಾದ, ದಿನಬಳಕೆಯ ಪದಗಳನ್ನೂ, ಚಿಕ್ಕವಾಕ್ಯಗಳನ್ನೂ ಕಂಠಪಾಟ ಮಾಡಿದ್ದೆವು. ‘ಧನ್ಯವಾದಗಳು’, ‘ನೀರುಬೇಕು’, ‘ಹೋಗಿಬರುತ್ತೇವೆ’, ‘ಶಾಖಾಹಾರಿ ಊಟ ಇದೆಯೆ?’ ಇತ್ಯಾದಿ
ಫ್ರಾನ್ಸ್‌ನ ಜಗದ್ವಿಖ್ಯಾತ ‘ಐಫಿಲ್ ಟವರ್’ ವೀಕ್ಷಿಸಿದೆವು. ಅದರಲ್ಲಿ ಎತ್ತರಕ್ಕೆ ಪಯಣಿಸಿ ನಗರದ ಅಂದ ಚೆಂದಗಳನ್ನು ನೋಡಿ ಆನಂದಿಸಿದೆವು. ರಾತ್ರಿ ವಿವಿಧ ಬಣ್ಣಗಳ ದೀಪಗಳಿಂದ ಅಲಂಕೃತವಾದ ದೋಣಿಗಳಲ್ಲಿ ‘ಸೆನ್’(sein) ನದಿಯ ವಿಹಾರಮಾಡಿದೆವು. ಮರುದಿನ ಜಗದ್ವಿಖ್ಯಾತ lourve ವಸ್ತು ಸಂಗ್ರಹಲಯದಲ್ಲಿ ದಿನ ಕಳೆದದ್ದೇ ತಿಳಿಯಲಿಲ್ಲ. ಅಲ್ಲಿ ಒಂದೊಂದು ಶಿಲ್ಪ ಕೃತಿಯೂ, ಒಂದೊಂದು ಚಿತ್ರವೂ ಮತ್ತು ಅಲ್ಲಿಯ ಪ್ರತಿಯೊಂದು ವಸ್ತುವೂ ಆಯಾ ಯುಗದ ಚರಿತ್ರೆಯನ್ನು ಸಾರಿ ಹೇಳುತ್ತಿತ್ತು. ಒಂದೆರಡು ದಿವಸಗಳಲ್ಲ, ವಾರಗಟ್ಟಲೆ ನೋಡಿದರೂ ತಣಿಯದ ಮಾಯಾ ನಗರಿ ಅದು. ‘ಮೊನಲಿಸ’ಳನ್ನು ಎದುರಿಗೆ ಕಂಡೆವು. ಆಕೆಯು ಮುಗುಳ್ನಗೆಯೊಡನೆ ನಮ್ಮ ಉಭಯ ಕುಶಲೋಪರಿ ವಿಚಾರಿಸಿದಂತೆ ಭಾಸವಾಯಿತು. ಅದರ ಬಗ್ಗೆ ಕೇಳಿದಷ್ಟೇ ಆ ಚಿತ್ರ ಸುಂದರವಾಗಿತ್ತು. ಪ್ಯಾರಿಸ್ಸಿನಲ್ಲಿ Notre-dame ( church of lady) ವೀಕ್ಷಿಸಿದೆವು. ನಾವು ಈ ದೇಶದಲ್ಲಿ ದೇವಸ್ಥಾನಗಳಿಗೆ ಹೋದರೆ ಎಣ್ಣೆಯ ದೀಪಗಳನ್ನು ಹಚ್ಚುತ್ತೇವೆ. ಅದೇ ರೀತಿ ಈ ಚರ್ಚಿನಲ್ಲಿ ಮಾರುತ್ತಿದ್ದ ಕ್ಯಾಂಡಲ್‌ಗಳನ್ನು ಕೊಂಡು, ಅದನ್ನು ಬೆಳಗಿಸಿ ಇಟ್ಟು ಪ್ರಾರ್ಥಿಸಿದೆವು. ಅಲ್ಲಿ ಬಂದ ಎಲ್ಲರೂ ಇದೇ ರೀತಿ ಮಾಡುತ್ತಿದ್ದರು.
ರಾತ್ರಿಯಾಗುತ್ತಿದ್ದಂತೆ ಹೊಟ್ಟೆಯ ಯೋಚನೆ ಕಾಡಿತು. ಮುಂಜಾನೆ ಸ್ವೀಕರಿಸಿದ್ದ ಪುಷ್ಕಳ ಉಪಾಹಾರ ಅದಾಗಲೇ ಕರಗಿತ್ತು! ಪ್ಯಾರಿಸ್ಸಿನಲ್ಲಿ ಶಾಖಾಹಾರವೆಂದರೆ ಚಿಕನ್, ಮೀನು ಇತ್ಯಾದಿ. ನಮ್ಮ ಭಾವನವರು ನಮಗಾಗಿ ಒಂದು ಶಾಖಾಹಾರ ಸಿಗುವಂತಹ ಸ್ಥಳಕ್ಕಾಗಿ ನಮ್ಮೆಲ್ಲರ ಕಾಲುಗಳು ಕುಸಿಯುವವರೆಗೂ ಹುಡುಕಾಡಿದರು. ಪ್ಯಾರಿಸ್ಸನ್ನು ರೆಸ್ಟೋರೆಂಟ್‌ಗಳ ನಗರವೆಂದೇ ಕರೆಯುತ್ತಾರೆ. ಆದರೆ ಶಾಖಾಹಾರ ಮಾತ್ರ ಸಿಗುವುದೇ ಇಲ್ಲ. ನನ್ನ ಮೇಲೆ ಕರುಣೆತೋರಿ ಒಬ್ಬ ಹೋಟೆಲ್‌ನವನು ‘ಸರಿ, ಯಾವುದಾದರೂ ಶಾಖಾಹಾರಿ ಪದಾರ್ಥವನ್ನು ತಯಾರಿಸಿಕೊಡು ತ್ತೇನೆ’ ಎಂದನು. ಇವರೆಲ್ಲ ಆಮ್ಲೆಟ್ ತಿನ್ನುತ್ತಿರುವಾಗ ನನ್ನ ಮುಂದೆ ಒಂದು ಬೃಹದಾಕಾರದ ತಟ್ಟೆಯಲ್ಲಿ ‘ಸ್ಪೆಗೆಟಿ’ ಎನ್ನುವ ದೊಡ್ಡ ಶಾಮಿಗೆಯ ಗಂಟನ್ನು ತಂದಿಟ್ಟ! ಅದನ್ನು ತಿನ್ನಲು ಮುಳ್ಳು ಚಮಚಗಳೂ, ಜೊತೆಗೆ ಚಾಕುವೂ ಇದ್ದಿತು. ಇವನ್ನೆಲ್ಲ ನನ್ನ ಮುಂದೆ ಇಟ್ಟ ಆ ಪರಿಚಾರಕನು ದೂರದಲ್ಲಿ ಹೋಗಿ ನಿಂತು ನನ್ನನ್ನೇ ಗಮನಿಸುತ್ತಿದ್ದುದನ್ನು ನಾನು ನೋಡಿಬಿಟ್ಟೆ! ನನಗೆ ಮೋದಲೇ ಈ ಚಾಕು, ಚೂರಿಗಳಲ್ಲಿ ತಿನ್ನಲುಬಾರದು; ಅವನು ನೋಡುತ್ತಿದ್ದಾನೆಂಬ ಸಂಕೋಚ ಬೇರೆ! ಆ ಶಾಮಿಗೆಯನ್ನು ಕಷ್ಟಪಟ್ಟು ಮುಳ್ಳು ಚಮಚದಲ್ಲಿ ಸುತ್ತಿ ಬಾಯಿಗೆ ತೆಗೆದುಕೊಂಡು ಹೋದರೆ ಸರಿ, ಅದು ‘ಟಪಕ್’ ಎಂದು ಪುನಃ ತಟ್ಟೆಗೇ ಬೀಳುತ್ತಿತ್ತು. ‹ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎನ್ನುವ ಗಾದೆಯನ್ನು ನನಗಾಗಿಯೇ, ಆ ಕ್ಷಣಕ್ಕಾಗಿಯೇ ಮಾಡಿದ್ದರೇನೊ ಎನ್ನಿಸಿತು! ಏನೋ ತಿಂದ ಶಾಸ್ತ್ರ ಮಾಡಿದ್ದಾಯಿತು. ಆ ದೇಶದ ಇನ್ನೊಂದು ಕೌತುಕವೇನೆಂದರೆ ಅಲ್ಲಿ ಯಾರೂ ನೀರು ಕುಡಿಯುವವರೇ ಇಲ್ಲ! ಹೌದು. ನೀರು ವಿಪರೀತ ದುಬಾರಿ. ನೀರು ಬೇಕಾದರೆ ಪದೇ ಕೇಳಿ ಕೊಂಡುಕೊಂಡು ಕುಡಿಯಬೇಕು. ಅದೂ ಆಯಿತು. ಆ ಹೋಟೆಲ್‌ನ ಎದುರಿಗೇ ರಾಜಕುಮರಿ ಡಯಾನಾ ಸಾವನ್ನಪ್ಪಿದ ಸ್ಥಳ. ಆ ಜಾಗದಲ್ಲಿ ಒಂದು ಸ್ಮಾರಕ ಸ್ತಂಭವನ್ನು ನಿರ್ಮಿಸಿದ್ದಾರೆ. ಅಲ್ಲಿ ಅನೇಕರು ಕಣ್ಣ್ಣೀರಿಡುತ್ತಾ ಬರೆದ ಫಲಕಗಳೂ, ಪುಷ್ಪಗುಚ್ಛಗಳು ಇದ್ದುವು. ಎಂತಹ ಸುಂದರಿಗೆ ಎಂತಹ ದಾರುಣ ಸಾವು ಎಂದು ಮಿಡಿಯುತ್ತಾ ಮುಂದೆ ಸಾಗಿದೆವು.
ಪ್ಯಾರಿಸ್ಸಿನ ಸುರಂಗದ ರೈಲು ನಿಲ್ದಾಣಗಳು ಬಹು ವಿಸ್ತಾರವಾದವು. ಆ ದೇಶದಲ್ಲಿ ಯಾರೂ ಯಾರನ್ನೂ ಗಮನಿಸುವುದಿಲ್ಲ ; ಹಲೋ ಎನ್ನುವುದಂತು ದೂರವೇ ಉಳಿಯಿತು. ಒಂದು ದಿವಸ ರಾತ್ರಿ ನಾವು ನಮ್ಮ ತಂಗುದಾಣಕ್ಕೆ ಹಿಂತಿರುಗಿ ಬರುತ್ತಿದ್ದಾಗ, ಸುಮಾರು ಹತ್ತೂವರೆಯ ಸಮಯ ಇರಬಹುದು. ನಾವೆಲ್ಲರೂ ಸುgಂಗ ಮಾರ್ಗದ ರೈಲಿನಲ್ಲಿ ಪಯಣಿಸುತ್ತಿದ್ದೆವು. ನನ್ನ ಪತಿಯ ಕೈಯಲ್ಲಿ ಇದ್ದ ವಿಡಿಯೋ ಕ್ಯಾಮೆರಾವನ್ನು ಅಪಹರಿಸಿ ಓಡುವ ಆ ಕಳ್ಳರ ಪ್ರಯತ್ನ ವಿಫಲವಾಯಿತು. ಈ ಪ್ರಯತ್ನದಲ್ಲಿ ಆ ಕಳ್ಳರು ರೈಲು ನಿಂತಾಗ ಇವರನ್ನೇ ರೈಲಿನಿಂದ ಕೆಳಗೆ ಬೀಳಿಸಲು ಯತ್ನಿಸಿದ್ದು ಜ್ಞಾಪಿಸಿಕೊಂಡರೆ ಈಗಲೂ ಭಯವಾಗುತ್ತದೆ. ಆ ಸಮಯದಲ್ಲಿ ನಮ್ಮ ಸಹಾಯಕ್ಕೆ ಯಾರೂ ಬರುವುದಿಲ್ಲ ; ನಾನು ಹೆದರಿ ಕಂಗಾಲಾದೆ ; ಯಾವ ಸಹ ಪ್ರಯಾಣಿಕನೂ ಮುಂದೆ ಬರಲಿಲ್ಲ; ಆಗ ನಾವು ಇಳಿಯುವ ತಾಣ ಬಂದಿತು. ನಾವು ನಾಲ್ಕು ಜನರೂ ತಕ್ಷಣ ಕೆಳಗೆ ಧುಮುಕಿದೆವು; ಅಷ್ಟರಲ್ಲಿ ರೈಲು ಚಲಿಸಲು ಪ್ರಾರಂಭಿಸಿಬಿಟ್ಟಿತು; ಆ ರೈಲುಗಳು ಚಲಿಸಿದ ತಕ್ಷಣ ಅದರ ಬಾಗಿಲುಗಳು ತಾನಾಗಿಯೇ ಮುಚ್ಚಿಕೊಂಡು ಬಿಡುತ್ತವೆ; ಮತ್ತೆ ರೈಲು ನಿಲ್ಲುವವರೆಗೂ ಬಾಗಿಲು ತೆರೆಯುವುದು ಸಾಧ್ಯವಿಲ್ಲ. ಹೀಗಾಗಿ ಕಳ್ಳರು ರೈಲಿನಲ್ಲೇ ಉಳಿಯ ಬೇಕಾಯಿತು. ಅದು ಭರದಿಂದ ಮುಂದಕ್ಕೆ ಚಲಿಸಿತು ನಾವು ಗಂಡಾಂತರದಿಂದ ಪಾರಾದೆವು. ಆ ದೇವರೇ ನಮ್ಮನ್ನು ಆ ದುರುಳರಿಂದ ಪಾರುಮಾಡಿದ. ನಾವು ‘ಬದುಕಿದೆಯಾ ಬಡಜೀವವೇ’ ಎಂದೆನ್ನುತ್ತಾ ರೈಲುನಿಲ್ದಾಣದಿಂದ ಹೊರಗಡೆಗೆ ಬಂದೆವು. ಈ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಂದ ಒಂದು ವಿಸ್ಮಯಕಾರಿ ವಿಷಯವೇನೆಂದರೆ, ಅಲ್ಲಿ ಎಲ್ಲೂ ನಮಗೆ ಪೊಲೀಸಿನವರಾಗಲೀ, ಕಾವಲು ಪಡೆಯ ಯಾವುದೇ ಸಿಬ್ಬಂದಿಯವರಾಗಲೀ ಗೋಚರಿಸದಿದ್ದುದು. ಹಾಗಾದರೆ ಅಪಾರ ಸಂಖ್ಯೆಯಲ್ಲಿ, ಸಾಗರದಂತೆ ಹರಿದು ಬರುವ ಪ್ರವಾಸಿಗರ ಭದ್ರತೆಗೆ ಯಾರು ಹೊಣೆ? ಅಲ್ಲಿ ಯಾವುದೇ ಭದ್ರತಾ ಸೌಲಭ್ಯವೂ ಕಾಣಬರದಿರಲು ಕಾರಣವೇನು? ಈ ಬೃಹತ್ ಪ್ರಶ್ನೆಗಳು ನಮ್ಮನ್ನು ಅಲ್ಲಿ ಇರುವಷ್ಟು ದಿನಗಳೂ ತೀವ್ರವಾಗಿ ಕಾಡಿದುವು.
ಅಪೂರ್ವ, ಅತ್ಯಾಧುನಿಕ, ಸುಪ್ರಸಿದ್ಧ ‘ಫ್ಯಾಷನ್ ನಗರ’ ವಾದ ಪ್ಯಾರಿಸ್‌ನಲ್ಲಿ ‘ವಿಂಡೋ ಶಾಪಿಂಗ್’ ಮಾಡುವವರೇ ಹೆಚ್ಚು ; ಅಂದರೆ ಸುಮ್ಮನೆ ಅಂಗಡಿಗಳ ಮುಂದೆ, ಅಂಗಡಿಗಳೊಳಗೆ ಸುತ್ತಾಡುವುದು, ಎಲ್ಲವನ್ನು ಕಣ್ಣಿನಲ್ಲಿ ತುಂಬಿಕೊಳ್ಳೂವುದು. ಇದಕ್ಕೆ ಕಾರಣ ಸರಕುಗಳ ದುಬಾರಿ ಬೆಲೆ. ಪ್ಯಾರಿಸ್‌ನಿಂದ ನಾವು ಪುನಃ ಲಂಡನ್‌ಗೆ ನಮ್ಮ ಭಾವನವರ ಎರಡನೆಯ ಮಗನ ಮನೆಗೆ ಬಂದೆವು.
ಅಶೋಕ್, ಮ್ಯಾಂಡಿ ಇಬ್ಬರೂ ಸುಸಂಸೃತ ದಂಪತಿಗಳು. ಅವಳು ಅಪ್ಪಟ ಇಂಗ್ಲಿಷ್ ಹುಡುಗಿ. ಅವರು ವಾಸವಿದ್ದುದು, ಒಂದು ಹಳೆಯಕಾಲದ ಚರ್ಚಿನ ಒಂದು ಭಾಗ. ಅಂದರೆ ಆ ಚರ್ಚನ್ನು ೮ ಅಪಾರ್ಟಮೆಂಟ್ ಗಳನ್ನಾಗಿ ಪರಿವರ್ತಿಸಿದ್ದರು. ಆದರೆ ಅದರಲ್ಲಿ ಎಲಿವೇಟರನ್ನು ಅಳವಡಿಸುವುದು ಅಸಾಧ್ಯವಾದ್ದರಿಂದ ಇವರ ಮನೆಯೊಳಗೆ ಹೋಗಲು ಪ್ರತಿಸಲವೂ ೫೨ ಮೆಟ್ಟಿಲುಗಳನ್ನು ಹತ್ತಿ, ೫ನೆಯ ಮಹಡಿಗೆ ಹೋಗಬೇಕಿತ್ತು. ಇದೊದು ಸರ್ಕಸ್! ಇವರ ಮನೆಯಲ್ಲಿ ಎಲ್ಲರೂ ಚಪ್ಪಲಿ, ಬೂಟುಗಳನ್ನು ಮುಂದಿನ ಒಂದು ಚಿಕ್ಕ ವೆರಾಂಡದಲ್ಲಿ ಅವಕ್ಕೆಂದೇ ಇರುವ ಕಾರ್ಪೆಟ್‌ನಮೇಲೆ ಬಿಡಬೇಕು. ಇದು ನಮ್ಮ ದೇಶದ ಆಚರಣೆಯಾದ್ದರಿಂದ ಮನಸ್ಸಿಗೆ ಮುದ ನೀಡಿತು. ಅವರಿಬ್ಬರಿಗೂ ಶಾಖಾಹಾರದ ಅಡುಗೆ ಎಂದರೆ ಪ್ರೀತಿ. ಅದ್ದರಿಂದ ನಮಗಾಗಿ ತೊಂದರೆ ತೆಗೆದುಕೊಂಡು, ಅನ್ನ, ಹೆಸರು ಕಾಳಿನ ಪಲ್ಯ, ಬೀನ್ಸ್ ಹುಳಿಯನ್ನು ತಯಾರಿಸಿದ್ದರು. ಮಾರನೆಯ ದಿನ ಲಂಡನ್ನಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಮುಗಿಸಿದೆವು. ನಾವು ಹಿಂದೆ ೧೯೮೨ ನೆಯ ಇಸವಿಯಲ್ಲಿ ಇಂಗ್ಲೆಂಡಿಗೆ ಬಂದಿದ್ದಾಗಲೇ ಹಲವಾರು ಸ್ಥಳಗಳನ್ನು ನೋಡಿದ್ದೆವು. ಈ ಸಲ ಥೇಮ್ಸ್ ನದಿಯ ನೌಕಾಯಾನ ಆಯಿತು. ಅರಮನೆ, ಅಂಗಡಿಗಳು, ರಾಣಿಯ ರಜೆ ಕಳೆಯುವ ಅರಮನೆ, ವಸ್ತು ಸಂಗ್ರಹಾಲಯಗಳು, ಮ್ಯಾಡಮ್ ಟುಸ್ಸಾಡ್ಸ್ ಎನ್ನುವ ಮೇಣದ ಪುತ್ಥಳಿಗಳಿರುವ ವಸ್ತು ಸಂಗ್ರಹಾಲಯ ಹಿಗೆ ಒಂದೇ ಎರಡೇ?. Tower of England ನಲ್ಲಿ crown jewels ನೋಡುವಾಗ ಅಚ್ಚರಿಯಾಗದಿರಲಿಲ್ಲ. ನಮ್ಮ ಭಾರತದ ಅನೇಕ ವಜ್ರ, ವೈಢೂರ್ಯಗಳು, ರತ್ನಖಚಿತ ಸಿಂಹಾಸನಗಳು ಎಲ್ಲವನ್ನೂ ಕೊಂಡೊಯ್ದು ಅಲ್ಲಿ ಸ್ಥಾಪಿಸಿಕೊಂಡಿದ್ದಾರೆ. ನಾನು ನಮ್ಮ ಓರಗಿತ್ತಿಯೊಂದಿಗೆ ‹ನಾನು ನಮ್ಮ ದೇಶದ್ದೆಲ್ಲವನ್ನೂ ಪುನಃ ಭಾರತಕ್ಕೆ ಕೊಡೊಯ್ಯುತ್ತೇನೆ” ಎಂದು ತಮಾಷೆಯಾಗಿ ಹೇಳಿದೆ. ಆದರೆ ಒಳಮನಸ್ಸಿನಲ್ಲಿ ಇದು ನಿಜವಾಗುವುದಾದರೆ ಎನ್ನಿಸುತ್ತಿತ್ತು. ಆಕೆ ಬ್ರಿಟಿಷ್ ಹೆಣ್ಣಲ್ಲವೇ? ಸುಮ್ಮನಿದ್ದಳು.
Madame Tussauds ಎನ್ನುವುದು ಜಗದ್ವಿಖ್ಯಾತ ಮೇಣದ ಆಕೃತಿಗಳ ಸಂಗ್ರಹಾಲಯ. ಅಲ್ಲಿಯ ಪ್ರತಿಷ್ಠಿತ ವ್ಯಕ್ತಿಗಳ ಆಕೃತಿಗಳನ್ನು ನೋಡಿದಾಗ ಅವರೇ ಎದುರು ಬಂದು ನಿಂತಂತೆ ಭಾಸವಾಗುತ್ತದೆ. ಆ ವ್ಯಕ್ತಿಯು ಅಲ್ಲಿ ಜೀವಂತ ನಿಂತಿರುವಂತೆ ತೋರುತ್ತದೆ. ನಾವು ಮುಂಜಾನೆಯ ಬ್ರೇಕ್ ಫಾಸ್ಟ್ ಮುಗಿಸಿ ಹೊರಗಡೆ ಸುತ್ತಾಡಲು ಹೊರಟರೆ ಹಿಂತಿರುಗುತ್ತಿದ್ದುದು ಸಂಜೆಯೇ. ಅಶೋಕ ಮತ್ತು ಅವನ ಪತ್ನಿಗೆ ಅಡುಗೆ ಏನು ಮಾಡುವುದು ಎನ್ನುವುದೇ ಒಂದು ದೊಡ್ಡ ಚಿಂತೆ. ಅವರು ಭಾರತಕ್ಕೆ ಬಂದಾಗಲೆಲ್ಲ ನಾನು ಅವರಿಗೆ ವಿವಿಧ ತಿಂಡಿ ತಿನಿಸುಗಳನ್ನು ಮಾಡಿ ಬಡಿಸುತ್ತಿದ್ದೆ. ಪಾಶ್ಚಾತ್ಯ ಸಂಸೃತಿಯ ಪ್ರಕಾರ ಅವರ ಮನೆಗಳಲ್ಲಿ ಅತಿಥಿಗಳು ಸಾಮಾನ್ಯವಾಗಿ ಏನೂ ಕೆಲಸ ಮಾಡುವುದಿಲ್ಲ ; ಅಂದರೆ ಅವರ ಸಹಾಯಕ್ಕೂ ಅವರ ಅಡುಗೆ ಮನೆಯೊಳಗೆ ಹೋಗುವುದು ಶಿಷ್ಟಾಚಾರವಲ್ಲ. ಅದೇ ನಮ್ಮ ದೇಶದಲ್ಲಿಯಾದರೆ ಹಿರಿಯರು ಒಳಗಡೆ ಏನಾದರೂ ತಯಾರಿಸಲು ಹೋದರೆ ನಾವೂ ಜೊತೆಯಲ್ಲಿ ಹೋಗಿ ಸಹಾಯ ಮಾಡುವುದು ಅತ್ಯಂತ ಸಹಜ. ಆದರೆ ಈ ಸಂಸೃತಿಯಲ್ಲಿ ಹಾಗಲ್ಲ. ಅತಿಥಿಗಳು ಎನೂ ಮಾಡಬೇಕಾಗಿಲ್ಲ. ಸುಮ್ಮನೇ ಕುಳಿತು ಅವರ ಆದರಾತಿಥ್ಯವನ್ನು ಸ್ವೀಕರಿಸುವುದಷ್ಟೆ! ಆದರೆ ಆ ಹುಡುಗರ ಪರದಾಟವನ್ನು ನೋಡಿ ನನಗೆ ಸುಮ್ಮನೇ ಕುಳಿತುಕೊಳ್ಳುವುದಾಗಲಿಲ್ಲ. “ನಾನೇ ಅಡುಗೆ ಮಾಡುತ್ತೇನೆ ಏನೇನು ಸಾಮಾನಿದೆ?” ಎಂದು ಕೇಳಿದೆ. ಇದನ್ನು ಕೇಳಿದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರ ಜೊತೆಗೆ ನಾನೂ ಪುನಃ ೫೨ ಮೆಟ್ಟಿಲುಗಳನ್ನಿ ಇಳಿದು ಒಂದು ಭಾರತೀಯರ ಅಂಗಡಿಗೆ ಹೋಗಿ ಉಪ್ಪಿಟ್ಟು, ನಿಂಬೆ ಚಿತ್ರಾನ್ನ, ಬಿಸಿಬೇಳೆ, ಪುಳಿಯೋಗರೆ, ಹುಳಿ, ಸಾರು ಮುಂತಾದ ನಮ್ಮ ಅಡುಗೆಗಳಿಗೆ ಬೇಕಾದ ಸಾಮಾನುಗಳನ್ನು ತಂದೆವು. ಮನೆಗೆ ಬಂದವರೇ “ಆಂಟೀ, ಎಲ್ಲವನ್ನು ಸ್ವಲ್ಪ ಹೆಚ್ಚಿಗೇನೇ ಮಾಡಿಬಿಡುತ್ತೀರಾ? ನಾವು ಅವನ್ನು ಫ್ರೀಙ ಮಾಡಿ ಇಟ್ಟುಕೊಂಡು ಬಿಡುತ್ತೇವೆ” ಎಂದರು.. ಹಾಗೆಯೇ ಆಗಲಿ ಎಂದ ನಾನು ಎಲ್ಲವನ್ನು ಹೆಚ್ಚು ಹೆಚ್ಚು ತಯಾರಿಸಿದೆ.
ಮೊದಲು ನಾನು ಸೊಸೆಗೆ ಹೇಳಿದೆ, “ನೀನು ಅಡುಗೆ ಕಟ್ಟೆಯನ್ನು ಕನ್ನಡಿಯಂತೆ ಇಟ್ಟಿರುತ್ತೀಯ. ಫಳ ಪಳನೆ ಹೊಳೆಯುತ್ತಿದೆ. ಆದರೆ ನಮ್ಮ ಅಡುಗೆಯನ್ನು ಮಾಡಿದರೆ ಈ ಸ್ಥಳ ಕೊಳೆಯಾಗುವುದರಲ್ಲಿ ಸಂದೇಹವೇ ಇಲ್ಲ. ನೀನದನ್ನು ಅನಂತರ ಪರಿಶುಭ್ರಪಡಿಸಿಕೊಳ್ಳಬೇಕು” ಎಂದೆ “ಓಹೋ, ಆಗಲಿ” ಎಂದಳು. ನಾವು ಅಡುಗೆಗೆ ಉಪಯೋಗಿಸುವ ಎಣ್ಣೆ, ಅರಿಶಿನ, ಖಾರದ ಪುಡಿ ಇವುಗಳಿಂದ ನಾವು ಅಡುಗೆ ಮಾಡು ಸ್ಥಳ ಸ್ವಲ್ಪ ಹೆಚ್ಚಾಗಿ ಕೊಳೆ ಆಗಬಹುದೆಂಬುದು ನನ್ನ ಭಾವನೆ. ಎಲ್ಲವನ್ನು ಹೆಚ್ಚು ಪ್ರಮಾಣದಲ್ಲಿ ತಯಾರಿಸಿ ತಂಗಳು ಪೆಟ್ಟಿಗೆಯಲ್ಲಿ ಶೇಖರಿಸಿ ಇಟ್ಟುಕೊಂಡರು. ನಾವು ಅಲ್ಲಿಂದ ಭಾರತಕ್ಕೆ ಮರಳಿದಮೇಲೂ ಇ-ಮೇಲ್‌ನಲ್ಲಿ ಆ ತಿನಿಸುಗಳ ವರ್ಣನೆಯಾಗುತ್ತಿತ್ತು.
ಮೂರನೆಯ ಮಗನಾದ ಅನಿಲ್ ಮ್ಯಾಂಚೆಸ್ಟರ್ ನಲ್ಲಿ ಹೊಸ ಮನೆ ತೆಗೆದುಕೊಂಡಿದ್ದ. ಅವನು ಮದುವೆ ಯಾಗಲು ಅದೇಕೋ ಯೊಚಿಸುತ್ತಿರುವಂತೆ ತೋರುತ್ತುತ್ತು. ನಾನು ಭಾವ, ಓರಗಿತ್ತಿಯನ್ನು ಕೇಳಿದಾಗ ಅವರು ಈ ದೇಶದಲ್ಲಿ ನಾವು ಯಾರನ್ನೂ, ಅವನು ಸ್ವಂತ ಮಗನೇ ಆದರೂ ಸರಿ ಈ ಪ್ರಶ್ನೆಗಳನ್ನು ಕೇಳುವುದಿಲ್ಲ. ಅವರವರಿಗೆ ಬೇಕೆನಿಸಿದಾಗ ಮದುವೆ ಮಾಡಿಕೊಳ್ಳುತ್ತಾರೆ ಎಂದುಬಿಟ್ಟರು. ಹೀಗೂ ಉಂಟೆ? ನಮ್ಮ ಸ್ವಂತ ಮಕ್ಕಳಿಗೆ ನೀನು ಮದುವೆ ಮಾಡಿಕೊಳ್ಳಬೇಕು ಎಂದು ಹೇಳುವ ಅಕ್ಕರೆ ಅಥವಾ ಅಧಿಕಾರವನ್ನೂ ನಾವು ಕಳೆದುಕೊಂಡು ಬಿಡುತ್ತೇವೆಯೆ? ಇದೇನು ಸಂಸೃತಿ? ಎನ್ನಿಸಿತು. ಮನಸ್ಸು ಭಾರವಾಯಿತು. ಅಲ್ಲಿ ಎರಡು ದಿವಸಗಳನ್ನು ಕಳೆದ ನಂತರ ಭಾವನವರ ಮಗಳು ಶಾರದ ಅಳಿಯ ಜಾನ್ ಇವರ ಊರಾದ ಬ್ಯಾಂಗರ್‌ಗೆ ಹೊರಟೆವು. ಈ ಪಟ್ಟಣ ಉತ್ತರ ವೇಲ್ಸ್ ನಲ್ಲಿದೆ.ಒಂದು ದೊಡ್ಡ ಬೆಟ್ಟದ ತಪ್ಪಲಿನಲ್ಲಿರುವ ಸುಂದರವಾದ ಊರು. ಎತ್ತ ನೋಡಿದರೂ ಕಾಡು, ಮರಗಳು, ಬೆಟ್ಟಗಳು. ಪ್ರಕೃತಿ ಮಾತೆ ಹಸಿರುಟ್ಟು ನಲಿದಾಡುತ್ತಿದ್ದಳು. ಊರಿನ ಪಕ್ಕದಲ್ಲಿ ಸುಂದರವಾದ ಸರೋವರ. ಪ್ರಕೃತಿಯ ಸೌಂದರ್ಯವನ್ನು ಸವಿಯಲು ಅತ್ಯುತ್ತಮವಾದ ತಾಣ. ಇವರ ಮನೆ ಇದ್ದುದೂ ಪಟ್ಟಣದಿಂದ ದೂರದಲ್ಲಿ; ಬೆಟ್ಟದ ತಪ್ಪಲಿನಲ್ಲಿ. ಅಲ್ಲಿ ಪೂರಾ ಹಳ್ಳಿಯ ವಾತಾವರಣ. ಇವರು ಹಿಂದಿನಕಾಲದ ರೈತನ ಮನೆ ಒಂದನ್ನು ಖರೀದಿಸಿದ್ದರು. ಅಲ್ಲಿ ಅನೇಕ ಕೌತುಕಕಾರಿ ಸಂಗತಿಗಳು ನಮಗಾಗಿ ಕಾದಿದ್ದುವು.
ಶಾರದಾ ಮತ್ತು ಜಾನ್ ಇಬ್ಬರೂ ಸಂಪೂರ್ಣ ಶಾಖಾಹಾರಿಗಳು ! ಅವರ ಮನೆಯ ನಾಯಿ ‘ರವಿ’; ಅದೂ ಶಾಖಾಹಾರಿ! ಇದಲ್ಲವೇ ಸೋಜಿಗ. ಅದಕ್ಕಾಗಿ ಡಬ್ಬದಲ್ಲಿಸಿಗುವ ನಾಯಿಯ ಆಹಾರವನ್ನು ತಂದಿಟ್ಟುಕೊಂಡಿದ್ದರು. ಇಲ್ಲಿ ಕಂಡು ಬಂದ, ಹೇಳಬೇಕೆನ್ನಿಸುವ, ಒಂದು ವಿಷಯ. ನಾವು ಗಮನಿಸಿದಂತೆ ಭಾರತದ ಸಂಪರ್ಕ ಇರುವ ಪಾಶ್ಚಾತ್ಯರ ಮನೆಗಳಲ್ಲಿ ನಾಯಿಯ ಹೆಸರು ‹ರವಿ,’ ‘ರಸಂ’ ಇತ್ಯಾದಿ. ಈ ದೇಶದಲ್ಲಿ ನಾವು ನಾಯಿಗಳನ್ನು ಜಿಮ್ಮಿ, ಟಾಮಿ, ಸ್ವೀಟಿ ಎಂದೆಲ್ಲ ಅಲ್ಲಿಯ ಹೆಸರುಗಳನ್ನು ಇಟ್ಟು ಕರೆಯುವುದಿಲ್ಲವೇ? ಆ ರೀತಿ! ನಾವು ಇಂಗ್ಲಿಷಿನವರ ಹೆಸರುಗಳನ್ನು ಬಳಸುತ್ತೇವೆ; ಅವರು ನಮ್ಮ ಹೆಸರುಗಳನ್ನು ಇಟ್ಟು ಅದನ್ನು ಕರೆಯುತ್ತಾರೆ ಅಷ್ಟೆ!
ಶಾರದಾ ಚಿಕ್ಕವಳಾಗಿದ್ದಾಗಿನಿಂದಲೂ ಭಾರತಕ್ಕೆ ಬಂದು ಅವಳಿಗೆ ಅಭ್ಯಾಸವಾಗಿತ್ತು. ನಮ್ಮೊಡನೆ ಬೆರೆತು ಹೋಗಿದ್ದಳು. ಅವಳ ಗಂಡನಾದ ಜಾನ್ ಸಹಾ ಮದುವೆಗೆ ಮೊದಲೇ ಅನೇಕ ಸಲ ಭಾರತಕ್ಕೆ ಬಂದಿದ್ದುಂಟು. ಇಲ್ಲಿ ಸಂಸೃತಿ ಮತ್ತು ಸಂಪ್ರದಾಯಗಳು ಅವರಮೇಲೆ ತಮ್ಮ ಪ್ರಬಾವವನ್ನು ಬೀರಿದ್ದುವು. ಇದಕ್ಕೆ ಅವರ ಮನೆಯೇ ಸಾಕ್ಷಿ. ಮನೆಯ ಮುಂದುಗಡೆ ರಂಗವಲ್ಲಿಯನ್ನು ಹೋಲುವಂತಹ ಒಂದು ಸ್ಟಿಕರನ್ನು ಮುಂಬಾಗಿಲಿಗೆ ಅಂಟಿಸಿದ್ದಳು. ಮನೆಯ ಒಳಗೆ ಹೋದರೆ ಭಾರತದ ಯಾವುದೋ ವಸ್ತುಪ್ರದರ್ಶನಕ್ಕೆ ಭೇಟಿ ಕೊಟ್ಟಂತೆ ಇತ್ತು. ಇಲ್ಲಿಂದ ಕೊಂಡುಹೋದ ಎಲ್ಲ ವಸ್ತುಗಳನ್ನು ಅತ್ಯಂತ ಸುಂದರವಾದ ರೀತಿಯಲ್ಲಿ ಅಂದವಾಗಿ ಜೋಡಿಸಿದ್ದಳು. ಅವರ ಮನೆಯ ಒಂದು ಸೋಜಿಗವೆಂದರೆ, ಕಲ್ಲಿದ್ದಿಲಿನಲ್ಲಿ ನಡೆಯುವ ‘cooking range’ ಅಥವಾ ಕಲ್ಲಿದ್ದಿಲು ಒಲೆಯಲ್ಲಿ ಅಡುಗೆ ತಯಾರಾಗುತ್ತಿತ್ತು. ಈ ಶತಮಾನದಲ್ಲಿ ಇದೊಂದು ಸೋಜಿಗವಲ್ಲದೇ ಮತ್ತೇನು?. ಇದೇ ಒಲೆಯಿಂದ ಇಡೀ ಮನೆಗೆ ಬಿಸಿನೀರಿನ ಸರಬರಾಜಾಗುತ್ತಿತ್ತು; ಚಳಿಗಾಲದಲ್ಲಿ ಮನೆಯನ್ನು ಶಾಖ ಸಹಿತ ಇಡಲು ಇದೇ ಒಲೆ ಉಪಯೋಗವಾಗುತ್ತಿತ್ತು. ಈ ಒಲೆ centrl heating system ನಂತೆ ಕೆಲಸ ಮಾಡುತ್ತಿತ್ತು. ಅಲ್ಲಿಯ ಫಯರ್ ಪ್ಲೇಸ್ ಗೆ ಕಾಡಿನ ಸೌದೆಯನ್ನು ಉಪಯೋಗಿಸಲಾಗುತ್ತಿತ್ತು. ಅನಂತರದ ದಿನಗಳಲ್ಲಿ ಮನೆಗೆ ವಿದ್ಯುತ್ ಸರಬರಾಜನ್ನು ಅಳವಡಿಸಿಕೊಂಡಿದ್ದರೂ ಅವರು ಅದನ್ನು ಉಪಯೋಗಿಸುತ್ತಿರಲಿಲ್ಲ. ಈಗ ಒಂದು ವಿಷಯ ನನ್ನ ನೆನಪಿಗೆ ಬಂದಿತು. ಅದೇನೆಂದರೆ, ಶಾರದಾ ಇಂಡಿಯಾಗೆ ಬಂದಾಗಲೆಲ್ಲ ‘I like the smell of the wood burning’ ಎಂದು ಹಂಡೆಯ ಬಿಸಿನೀರಿನಲ್ಲಿ ಸ್ನಾನ ಮಾಡುತ್ತಿದ್ದಳು; ಬಾಯ್ಲರ್ ನೀರನ್ನು ತೆಗೆದು ಕೊಳ್ಳುತ್ತಿರಲಿಲ್ಲ.
ಅವರ ಮನೆಯ ಸುತ್ತ ಮುತ್ತ ಕೊಬ್ಬಿದ ಕುರಿಗಳು ಹುಲುಸಾಗಿ ಬೆಳೆದ ಹುಲ್ಲನ್ನು ಮೇಯುತ್ತಿದ್ದವು. ಮನೆಯ ತರಕಾರಿ, ಹಣ್ಣಿನ ಸಿಪ್ಪೆಗಳು ಅವಕ್ಕೆ ಆಹಾರವಾಗುತ್ತಿತ್ತು. ಮನೆಯ ಎಲ್ಲ ಕಿಟಕಿಗಳಿಂದಲೂ ಹೊರಗಿನ, ಪ್ರಕೃತಿಯ ರಮಣೀಯ ದೃಶ್ಯ ಕಾಣಿಸುತ್ತಿತ್ತು. ನಾವು ಬೆಟ್ಟದ ಮೇಲಕ್ಕೆ ಹೋದಾಗ ನಮಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಇವರಮನೆಯ ನೀರಿನ ಸರಬರಾಜು ಬೆಟ್ಟದಮೇಲಿಂದ ಹರಿಯುವ ಹೊಳೆಯನೀರಿನ ಝರಿಗಳಿಂದ! ಅವು ರೋಮನರ ಕಾಲದಲ್ಲಿ ತೋಡಿದ್ದ ಕಾಲುವೆಗಳಂತೆ ! ಶುದ್ಧವಾದ ಹರಿಯುವ spring water ಎಂದರೆ ಏನೆಂದು ತಿಳಿಯಿತು. ಶಾರದಳ ಪತಿ ಜಾನ್ ಬ್ರಿಟನ್‌ನ National Trust ನಲ್ಲಿ ಕೆಲಸ ಮಾಡುತ್ತಾರೆ. ಕಾಡಿನಲ್ಲಿ ಉದ್ಯೋಗವಾದ್ದರಿಂದ ದಿನಪೂರ್ತಿ ಪ್ರಕೃತಿಯ ಮಡಿಲಲ್ಲಿ ದುಡಿಯುವ ಸುಯೋಗ. ಇವರ ನಾಯಿ ರವಿ, ಸಂಪೂರ್ಣ ಕುರುಡು ! ಇವರು ಬೇಕೆಂದೇ ಕುರುಡು ನಾಯಿಯನ್ನು ತಂದು ಸಾಕಿಕೊಂಡಿದ್ದರು. ಹೀಗಾದರೂ ಸಹ ಅದು ಸಹಜವಾಗಿ ಓಡಿಯಾಡಿಕೊಂಡಿರುತ್ತಿತ್ತು. ರವಿಯೂ ಜಾನ್ ಕೆಲಸಕ್ಕೆ ಹೋಗುವಾಗ ಅವರಜೊತೆ ತಾನೂ ಜೀಪಿನಲ್ಲಿ ಹೋಗಿ, ಅಲ್ಲಿ ದುಡಿಯುವವರ ಜೊತೆ ಇರುತ್ತಿತ್ತು. ಜಾನ್ ತಾನೇ ಕೆಲಸಗಾರರೊಂದಿಗೆ ಖುದ್ದಾಗಿ ನಿಂತು, ತಯಾರಿಸಿದ ಒಂದು ಪಕ್ಷಿನೋಟದ ಕೋಣೆಯನ್ನು ತೋರಿಸಿದರು. (bird watching house). ಅವರು ತಮ್ಮದೇ ಆದ ಒಂದು ಮೆಷಿನ್ ಬೋಟಿನ ಒಡೆಯರು. ಇವರೊಬ್ಬ ಸಾಹಸೀ ಯುವಕ. ತಿಂಗಳುಗಟ್ಟಲೆ ಅದನ್ನು ಚಲಾಯಿಸುತ್ತಾ ಸಾಗರದಲ್ಲಿ ಪಯಣಿಸಿ ಅನೇಕ ಊರುಗಳನ್ನು ನೋಡುವ ಸಾಹಸ. ಇವರು ತಮ್ಮ ಮನೆಯ ಎಲ್ಲ ಮರಗೆಲಸವನ್ನೂ ತಾವೇ ಮಾಡಿಕೊಳ್ಳುತ್ತಾರೆ. ಇವರ ಮನೆಯ ಎಲ್ಲ ಪೀಠೋಪಕರಣಗಳನ್ನೂ ತಾವೇ ತಯಾರಿಸು ತ್ತಾರೆ. ಮನೆಯ ಹಿಂದುಗಡೆ ಒಂದು ಪುಟ್ಟ ಕಾರ್ಯಾಲಯವಿದೆ. ಅಲ್ಲಿ ಎಲ್ಲ ಉಪಕರಣಗಳನ್ನು ಇಟ್ಟುಕೊಂಡಿರು ತ್ತಾರೆ. ಸಮಯ ಸಿಕ್ಕಿದಾಗ, ಬಿಡುವಾದಾಗ ಅಲ್ಲಿ ಕುಳಿತು ತಮಗೆ ಬೇಕಾದ ಮರದ ವಸ್ತುವನ್ನು ತಯಾರಿಸಿ ಕೊಳ್ಳುತ್ತಾರೆ.! ಆದಿನ ನಾನು ನೋಡ ನೊಡುತ್ತಲೇ ಇರುವಾಗ ನನಗಾಗಿ ಒಂದು mug stand ಅನ್ನು ತಯಾರಿಸಿಯೇಬಿಟ್ಟರು ! (ಗಾಜಿನ ಕಪ್ಪುಗಳನ್ನು ಸಿಕ್ಕಿಸಿಡುವ ಒಂದು ಉಪಕರಣ) ಆಗ ಅವರು ಏಪ್ರನ್ ನಂತಹ ಯಾವುದೇ ವಸ್ತ್ರವನ್ನೂ ತಮ್ಮ ಜೀನ್ಸ್ ನಮೇಲೆ ಧರಿಸಿರಲಿಲ್ಲ. ಅಕ್ಕೆ ನಾನು “ಇದೇನಿದು? ನೀವು ನಿಮ್ಮ ಬಟ್ಟೆಗಳಮೇಲೆಯೇ ಮರದ ತುಂಡನ್ನಿಟ್ಟುಕೊಂಡು ಗರಗಸದಿಂದ ಕುಯ್ಯುತ್ತಿದ್ದೀರಲ್ಲ? ಮರದ ಪುಡಿ ನಿಮ್ಮ ಬಟ್ಟೆಗಳ ಮೇಲೆಲ್ಲ ಉದುರುತ್ತಿದೆ” ಎಂದೆ. ಅದಕ್ಕವರು ಕೊಟ್ಟ ಉತ್ತರ ನನ್ನನ್ನು ಅಚ್ಚರಿಗೊಳಿಸಿತು. “ನಾನು ಯಾವಾಗಲೂ ಪ್ರಕೃತಿಗೆ ಹತ್ತಿರವಾಗಿರಲು ಪ್ರಯತ್ನಿಸುತ್ತೇನೆ ; ಇಷ್ಟಪಡುತ್ತೇನೆ. ಏಪ್ರನ್ ಹಾಕಿಕೊಂಡರೆ ನನ್ನ ಮತ್ತು ಪ್ರಕೃತಿಯ ಮಧ್ಯೆ ಒಂದು ದಟ್ಟವಾದ ಗೋಡೆ ಎದ್ದಿರುವಂತೆ ಭಾಸವಾಗುತ್ತದೆ” ಎಂದರು! ಈ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಗುಂಯ್‌ಗುಡುತ್ತಿವೆ. ಇದೆಂತಹ ನವಿರಾದ, ಸುಂದರವಾದ ಮನೋಭಾವನೆ ಎನಿಸಿತು. ಅವರು ತಯಾರಿಸಿಕೊಟ್ಟ ಮಗ್ ಸ್ಟ್ಯಾಂಡ್ ಈಗಲೂ ನನ್ನ ಅಡುಗೆಯ ಮನೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದು, ಆ ಸುಂದರ ದಿನವನ್ನು ನೆನಪಿಗೆ ತರುವಂತೆ ನಿಂತಿದೆ. ಅವರಿಬ್ಬರಿಗೂ ಪ್ರಕೃತಿಚಿಕಿತ್ಸೆ, (naturo therapy) ಸುಗಂಧ ಚಿಕಿತ್ಸೆ(aroma therapy) meditation ಇವುಗಳ ಬಗ್ಗೆ ಪಾರ ಆಸಕ್ತಿ ಮತ್ತು ನಂಬಿಕೆ. ನಮ್ಮಗಳ ನಡುವೆ ಈ ಕುರಿತಾದ ಚರ್ಚೆಗಳು ನಡೆದು, ಪರಸ್ಪರ ವಿಚಾರ ವಿನಿಮಯ ನಡೆಯಿತು. ಈ ಬಗ್ಗೆ ಹಲವು ಪುಸ್ತಕಗಳ ವಿನಿಮಯವೂ ನಡೆಯಿತು. ಅನೇಕ ವಿಶೇಷವಾದ ವಿಷಯಗಳನ್ನು ಈ ಎಳೆಯರಿಂದ ಕಲಿತು ಬಂದೆ. ವಾಯುವಿಹಾರಕ್ಕೆಂದು ಅಲ್ಲಿದ್ದಷ್ಟು ದಿನಗಳೂ ಅವರಜೊತೆ ಬೆಟ್ಟ ಹತ್ತಿ, ಹೋಗಿಬರುತ್ತಿದ್ದುದು ಅವರಿಗೆ ಅಪಾರ ಸಂತೋಷವಾಗಿತ್ತು.
ಅದೊಂದು ದಿನ ಜಾನ್ ನಮ್ಮನ್ನೆಲ್ಲ ಕೂರಿಸಿ ತಾವೇ ಖುದ್ದಾಗಿ ಮೆಕ್ಸಿಕನ್ ರೀತಿಯ ಅಡುಗೆಯನ್ನು ಮಾಡಿ ಬಡಿಸಿದರು. ಅಲ್ಲಿದ್ದಷ್ಟು ದಿನವೂ ಪಾಶ್ಚಾತ್ಯ ರೀತಿಯ ಅನೇಕ ಶಾಖಾಹಾರಿ ವ್ಯಂಜನಗಳ ರುಚಿ ನೋಡಿದೆವು. ಒಂದು ದಿನ ನಾನು ಭಾರತೀಯ ಅಡುಗೆ ಮಾಡುವುದಾಗಿ ಘೋಷಿಸಿದೆ! ಆದುದರಿಂದ ಜಾನ್ ತನ್ನ ತಂದೆ ತಾಯಿಯರನ್ನು ಆದಿನ ಔತಣಕ್ಕೆಂದು ಕರೆದು ಬಿಟ್ಟರು. ಇದರ ಕಾರಣವೇನೆಂದರೆ ಅಲ್ಲಿಯ ಜನರಿಗೆ ಭಾರತೀಯ ಅಡುಗೆ ಹೇಗಿರುತ್ತದೆ ಎಂದು ವಿಪರೀತ ಕುತೂಹಲ ಇರುತ್ತದೆ; ಅದಕ್ಕಾಗಿ. ಅವರ ಸಂಸೃತಿಯಲ್ಲಿ ತಂದೆ ತಾಯಿಯರು ಮಗ ಸೊಸೆಯರ ಜೊತೆಯಲ್ಲಿ ಒಟ್ಟಿಗೆ ವಾಸಿಸುವುದಿಲ್ಲ. ಬೇರೆ ಇದ್ದುಕೊಂಡು ಆಗಾಗ್ಗೆ ಹೋಗಿ ಬಂದು ಮಾಡುತ್ತಾರೆ. ವೃದ್ಧಾಪ್ಯದಲ್ಲೂ, ಜೀವನದಲ್ಲಿ ಒಬ್ಬಂಟಿಗರಾದಾಗಲೂ ಸಹ ಅವರು ಒಂಟಿಯಾಗಿರಲು ಇಚ್ಛಿಸುತ್ತಾರೆ. ಹಾಗೆ ಒಬ್ಬಂಟಿಗರಾಗಿರುವವರಿಗೆ ಅನಾರೋಗ್ಯವೇನಾದರೂ ಉಂಟಾದಲ್ಲಿ ಬ್ರಿಟಿಷ್ ಸರಕಾರವು ಅವರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ.
ಈಗ ಔತಣದ ವಿಷಯಕ್ಕೆ ಬರೋಣ. ಜಾನ್ ತಂದೆತಾಯಿಯರು ಊಟಕ್ಕೆ ಬಂದಾಗ ಪೂರಿ, ಪಲ್ಯ, ಹೆಚ್ಚು ಖಾರವಿಲ್ಲದ ಸಾರು, ಆಲುಗೆಡ್ಡೆ ಬೋಂಡ ಇವಿಷ್ಟನ್ನು ಮಾಡುವುದೆಂದು ತಿರ್ಮಾನಿಸಿದೆ. ನಾನು ಕೆಳಗೆ ಕುಳಿತು ಪೂರಿಯ ಹಿಟ್ಟನ್ನು ಕಲೆಸುವುದು ನೋಡಿ ಅವರಿಗೆ ಆಶ್ಚರ್ಯ. ಆಕೆ ತಾವೂ ಕಷ್ಟಪಟ್ಟುಕೊಂಡು ಕೆಳಗಡೆ ಕುಳಿತರು.. ತಾವೂ ಪೂರಿಯನ್ನು ಲಟ್ಟಿಸುವುದರಲ್ಲಿ ನನಗೆ ಸಹಾಯ ಮಾಡಿದರು. ಒಂದು ದೊಡ್ಡ ಚಪ್ಪಾತಿಯಗಲದ ಪೂರಿಯನ್ನಿ ಲಟ್ಟಿಸಿ, ಒಂದು ಮುಚ್ಚಳದ ಸಹಾಯದಿಂದ ಅದನ್ನು ಚಿಕ್ಕ ಚಿಕ್ಕ ಪೂರಿಗಳನ್ನಾಗಿ ಕೊರೆದು ತೆಗೆಯುವ ಪರಿ ಆಕೆಗೆ ಬಹಳ ಇಷ್ಟವಾಯಿತು. ಅವರ ಮಟ್ಟಿಗೆ ಇದೊಂದು ಮಹಾ ಚಾಕಚಕ್ಯತೆಯ ಕಾರ್ಯ! ಆಕೆಯೇ ಪೂರಿಗಳನ್ನು ಕರಿಯಲು ನಿಂತರು. ಪೂರಿಗಳಲ್ಲಿ ಹೇಗೆ ಗಾಳಿ ತುಂಬಿಕೊಳ್ಳುತ್ತದೆ ಎಂಬ ವಿಚಾರಕ್ಕೆ ನಾನು ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಅದೇ ರೀತಿ ಬೋಂಡಗಳಲ್ಲಿ ಪಲ್ಯ ಹೇಗೆ, ಹೊರಬೀಳದೆ ಇರುತ್ತದೆ ಎಂದು ಕೌತುಕ ಪಡುತ್ತಿದ್ದರು. ಕೇಸರೀ ಬಾತು ಸ್ಯಾಫರನ್ ಪುಡ್ಡಿಂಗ್ ಆಯಿತು! ಅಂತೂ ಪುಷ್ಕಳ ಭೋಜನದ ನಂತರ ಅವರು ತೃಪ್ತರಾಗಿ ಹೊರಟರು.
ಬ್ಯಾಂಗರ್ ಸಮುದ್ರದ ತೀರದಲ್ಲಿರುವ ಒಂದು ಊರು ; ಸಮುದ್ರ ತಟದಲ್ಲಿ ಒಂದು ಪುರಾತನ ಅರಮನೆ. ನಾವು ಅಲ್ಲಿಗೆ ಹೋಗಿದ್ದುದು ಬೇಸಿಗೆಕಾಲವಾದ್ದರಿಂದ ಆ ಸಮಯದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಆ ದಿನ ಒಂದು ಜನಪದ ಉತ್ಸವ ನಡೆಯುತ್ತಿತ್ತು. ಆ ಊರಿನ ಮಹಿಳೆಯರು, ಪುರುಷರು, ಪುಟಾಣಿ ಮಕ್ಕಳೆಲ್ಲರೂ ಸೇರಿ ಅರಮನೆಯ ಹೊರಗಡೆ ಪ್ರಕೃತಿಯ ಮಡಿಲಲ್ಲಿ ಸಮೂಹ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಎಲ್ಲರೂ ಬಣ್ಣ ಬಣ್ಣದ ಗ್ರಾಮೀಣ ಉಡುಪುಗಳನ್ನು ಧರಿಸಿ ಸಂತೊಷದಿಂದ ನರ್ತಿಸುತ್ತಿದ್ದರು. ನೋಡಲು ಎರಡು ಕಣ್ಣುಗಳು ಸಾಲವು ಎಂಬಂತೆ ಇತ್ತು ಆ ಕಾರ್ಯಕ್ರಮ. ಹುಲ್ಲುಗಾವಲಿನಮೇಲೆ ಕುಳಿತು ಪ್ರಕೃತಿಯ ರಮಣೀಯ ದೃಶ್ಯವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಾ, ಜೊತೆಗೆ ಐಸ್‌ಕ್ರೀಂ, ಆಲೂಗೆಡ್ಡೆ ಉಪ್ಪೇರಿ ಸವಿಯುತ್ತಾ ಆನಂದಿಸಿದ ಆ ದಿನವನ್ನು ಮರೆಯುವಹಾಗಿಲ್ಲ. ಅಲ್ಲಿದ್ದ ದಿನಗಳ ರಾತ್ರಿಯ ಸಮಯದಲ್ಲಿ ಜಾನ್ ತಾನು ನುಡಿಸುತ್ತಿದ್ದ ಗಿಟಾರ್, ಮೌತ್‌ಆರ್ಗನ್ ವಾದ್ಯಗಳನ್ನು ನುಡಿಸಿ ತೋರಿಸಿದರು. ಅವರ ಮನೆಯ ಮುಂದುಗಡೆಯ ಕಾಂಪೌಂಡ್ ಕೇವಲ ದೊಡ್ಡ ದೊಡ್ಡ ಕಲ್ಲುಗಳಿಂದ ಕಟ್ಟಿದ್ದು. ಆ ದೇಶದಲ್ಲಿ ಅದಕ್ಕೆಂದೇ ತರಗತಿಗಳಿವೆಯಂತೆ ; ಪರೀಕ್ಷೆಗಳೂ ನಡೆಯುತ್ತವಂತೆ. ಅವರು ಏನು ಮಾಡಿದರೂ ಅದರಲ್ಲಿ ಒಂದು ರೀತಿಯ ಅಚ್ಚುಕಟ್ಟುತನವನ್ನು ಗುರುತಿಸಲೇಬೇಕು.
ಪ್ರಕೃತಿಯ ಸುಂದರ ಮಡಿಲಿನಿಂದ ಮುಂದಕ್ಕೆ ನಾವು ಲಿಂಕನ್‌ಶೈರ್‌ಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದೆವು. ದಾರಿ ಉದ್ದಕ್ಕೂ ಸಮುದ್ರದ ತಟ ; ವಿಧವಿಧವಾದ ಬೀಚುಗಳನ್ನು ನೋಡುತ್ತಾ ಪ್ರಯಾಣ ಬೆಳೆಸಿದೆವು. ಅಲ್ಲಿ ನಮ್ಮ ನೆಂಟರು ವಾಸವಾಗಿದ್ದಾರೆ. ನಮ್ಮ ಕಸಿನ್ ಡಾಕ್ಟರ್ ಅವಳ ಪತಿ ಸಿ.ಎ. ವಿಸ್ತಾರವಾದ ಬಂಗಲೆ ; ಸುತ್ತಲೂ ಹುಲ್ಲುಗಾವಲು. ಇಬ್ಬರಿಗೆ ಮನೆ ಬಹಳ ದೊಡ್ಡದು ಎನ್ನಿಸಿತು. ಅವರೊಟ್ಟಿಗೆ ಅಲ್ಲಿಯ ವಿಶ್ವವಿಖ್ಯಾತ ‘ಲಿಂಕನ್ ಮೆಮೋರಿಯಲ್’ ವೀಕ್ಷಿಸಿದೆವು. ಅಲ್ಲಿ ಪುರಾತನಕಾಲದ, ಅತ್ಯಂತ ಜಾಗರೂಕತೆಯಿಂದ ಕಾದಿರಿಸಿರುವ ‘ಮ್ಯಾಗ್ನಾಕಾರ್ಟಾ’ ವನ್ನು ನೊಡಿದೆವು. ಎಷ್ಟು ಕಾಳಜಿಯಿಂದ ಅದನ್ನು ಜೋಪಾನಮಾಡಿದ್ದಾರೆ ಎನ್ನಿಸಿತು. ಅಲ್ಲಿಂದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯವನ್ನು ವೀಕ್ಷಿಸಿದೆವು. ಪ್ರತಿಷ್ಟಿತ ವ್ಯಕ್ತಿಗಳಾದ ನೆಹರೂ ಮೊದಲಾದವರು ಅಧ್ಯಯನ ನಡೆಸಿದ ಪ್ರಖ್ಯಾತ ಟ್ರಿನಿಟಿ ವಿದ್ಯಾಲಯದಲ್ಲಿ ಸುತ್ತಾಡಿದೆವು ; ಧನ್ಯರಾದೆವು ಅಂದುಕೊಂಡೆವು. ಆ ಊರಿನ ಮಧ್ಯೆ cam ನದಿ ಹರಿಯುತ್ತದೆ. (ಕ್ಯಾಮ್)ವಿಹಾರಕ್ಕಾಗಿ ಅಲ್ಲಿಗೆ ಬಂದವರು ಆ ನದಿಯಲ್ಲಿ ದೊಣಿಗಳಲ್ಲಿ ವಿಹರಿಸುತ್ತಾರೆ. ಅಲ್ಲಿ ಓದುವ ವಿದ್ಯಾರ್ಥಿಗಳು ಈ ದೊಣಿಗಳಿಗೆ ಹುಟ್ಟುಹಾಕಿ, ದೋಣಿ ನಡೆಸಿ ತಮ್ಮ ಜೇಬು ಖರ್ಚಿಗೆ ಬೇಕಾದ ಹಣವನ್ನು ಸಂಪಾದಿಸುತ್ತಾರೆ. ಇವೆಲ್ಲ ನೋಡಿದಾಗ ಒಂದು ವಿಷಯ ಗೋಚರಿಸುತ್ತದೆ. ವಿದೇಶದಲ್ಲಿ ಹಣ ಸಂಪಾದಿಸಲು ಯಾವುದೇ ಕೆಲಸವನ್ನು ಮಾಡಬಹುದು; ಇದು ಕೀಳು, ಇದು ಮೇಲೆಂಬ ತಾರತಮ್ಯವಿರುವುದಿಲ್ಲ. ಅಲ್ಲಿ ಓದಿದ ನಮ್ಮ ಮಕ್ಕಳೂ ಸಹ ಈ ಪಾಠವನ್ನು ಕಲಿತು ಎಲ್ಲ ತರಹದ ಕೆಲಸ ಮಾಡಲು ಮುಂದಾಗುತ್ತಾರೆ. ಹೀಗೆಯೇ ಅಲ್ಲಿಯ ವಿದ್ಯಾರ್ಥಿನಿಲಯಗಳಲ್ಲೂ ಅಷ್ಟೆ. ಅವರಿಗೆ ಕೇವಲ ವಸತಿ ಸೌಲಭ್ಯ ಮಾತ್ರ ಸಿಗುತ್ತದೆ. ಊಟ ತಿಂಡಿಗಳನ್ನು ಮಾಡಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳದ್ದೇ ಆಗಿರುತ್ತದೆ. ಎಲ್ಲರಿಗೂ ಸೇರಿದಂತಹ ಒಂದು ಅಡುಗೆ ಕೋಣೆ; ಅದರಲ್ಲಿ ಪಾತ್ರೆಗಳು, ಅಡುಗೆಗೆ ಇಂಧನ ಸೌಕರ್ಯ ಮಾತ್ರ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ತಮ್ಮ ದಿನಸಿಯ ಸಾಮಾನುಗಳನ್ನು ತಂದು ತಮಗೆ ಬೇಕಾದ ಅಡುಗೆಯನ್ನು ತಯಾರಿಸಿಕೊಳ್ಳುತ್ತಾರೆ. ತಮ್ಮ ಪಾತ್ರೆಗಳನ್ನು ತಾವೇ ಶುಭ್ರಮಾಡಿಕೊಳ್ಳಬೇಕು, ಬಟ್ಟೆಗಳನ್ನು ಶುಚಿಮಾಡಿಕೊಳ್ಳಬೇಕು! ಅಧ್ಯಯನದ ಸಂಗಡ ಜೀವದ ಈ ದಿನನಿತ್ಯದ ಕೆಲಸಗಳನ್ನು ಮಾಡಿ ಅದರಲ್ಲೂ ಉತ್ತಿರ್ಣರಾಗಿ ಬರಬೇಕು! ಈ ರೀತಿಯ ಜೀವನ ಶೈಲಿ ನಮ್ಮ ವಿದ್ಯಾರ್ಥಿಗಳಿಗೂ ಇರಬಾರದೇಕೆ ಅನ್ನಿಸಿತು.
ಅಲ್ಲಿಂದ ನಾವು ಪುನಃ ನಮ್ಮ ಭಾವನವರ ಮನೆಗೆ ಬರುವ ವೇಳೆಗೆ ನಾವು ತಾಯ್ನಾಡಿಗೆ ಹಿಂತಿರುಗುವ ದಿನವೂ ಹತ್ತಿರ ಬರುತ್ತಿತ್ತು. ಈಗ ನ್ನ ಪತಿಯ ಅಣ್ಣ ಮತ್ತು ಅತ್ತಿಗೆ ಮತ್ತು ಅವರ ಮನೆಯ ಬಗ್ಗೆ ತಿಳಿಸಲೇಬೇಕು. ಅವರು ಸ್ವದೇಶ ಬಿಟ್ಟು ತೆರಳಿ ಅಲ್ಲಿಯ ಹೆಣ್ಣನ್ನು ಮದುವೆಯಾಗಿ ನಾಲ್ಕು ದಶಕಗಳಿಗಿಂತಲೂ ಹೆಚ್ಚಾಗಿತ್ತು. ಪಾಶ್ಚಾತ್ಯ ಸಂಸೃತಿಯಲ್ಲಿ ಸಂತೃಪ್ತಿಯ ಜೀವನ ನಡೆಸಿದವರು. ಅವರ ಮೂವರು ಗಂಡು ಮಕ್ಕಳೂ ಒಬ್ಬಳು ಮಗಳೂ ತಮ್ಮ ಜೀವನ ಸಂಗಾತಿಗಳನ್ನು ಆರಿಸಿಕೊಂಡು ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಇವರಿಬ್ಬರು ಬಾಳ ಸಂಧ್ಯೆಯನ್ನು ಜೊತೆಯಲ್ಲಿ ಕಳೆಯುತ್ತಿರುವರು. ನಮ್ಮ ಭಾವನವರು ರೋಟರಿ ಸಂಸ್ಥೆಯ ಗವರ್ನರ್ ಆಗಿ ಕಾರ್ಯಭಾರ ನಿರ್ವಹಿಸಿ, ಆ ಊರಿನ ಪ್ರತಿಷ್ಠಿತ ವ್ಯಕ್ತಿ ಎಂದು ಹೆಸರು ಗಳಿಸಿದ್ದಾರೆ. ಇವರ ಮನೆ ಒಂದು ವ್ಯವಸ್ತಿತ ವಸ್ತು ಸಂಗ್ರಹಾಲಯ. ಎಲ್ಲಿಯ ವಸ್ತುಗಳು ಅಲ್ಲಲ್ಲಿಯೇ ಇರಬೇಕೆನ್ನುವ ಶಿಸ್ತು ಆಕೆಯದು. ನಮಗಾಗಿ, ನಾವು ಅಲ್ಲಿರುವಷ್ಟು ದಿವಸಗಳೂ ಕೇವಲ ಶಾಖಾಹಾರ. ನಾನು ತಯಾರಿಸುತ್ತಿದ್ದ ಭಾರತೀಯ ವ್ಯಂಜನಗಳನ್ನು ಅವರು ಚಪ್ಪರಿಸಿ ಉಣ್ಣುತ್ತಿದ್ದರು. ನಾವು ಅಲ್ಲಿ ಇದ್ದಾಗ ಅವರ ಸ್ನೇಹಿತರನ್ನು ಭೋಜನಕ್ಕೆ ಆಹ್ವಾನಿಸಿದ್ದರು. ನಾಲ್ಕು ಸಂಸಾರಗಳು ಈ ಭಾರೀ ಔತಣಕೂಟಕ್ಕೆ ಆಗಮಿಸುವವರಿದ್ದರು. ಆ ದಿನದ ವಿಶೇಷ ‘ಭಾರತೀಯ ಅಡುಗೆ’ ಅವುಗಳನ್ನು ತಯಾರಿಸಲು ಮನೆ ಮಂದಿಯೆಲ್ಲ ಸಹಾಯ ಮಾಡಿದರು. ಶಾರದಾಳ ಅತ್ತೆ ಕೇಳಿದ ಪ್ರಶ್ನೆಗಳೇ ಇಲ್ಲೂ ಪುನರಾವರ್ತನೆಯಾಯಿತು. ಅಂದರೆ, ಪೂರಿಯನ್ನು ನೋಡಿ ಈ ರೊಟ್ಟಿಯೊಳಗೆ ಹೇಗೆ ಗಾಳಿಯನ್ನು ತುಂಬಿಸಿದ್ದೀರಿ? ಇದು ಅವರ ಪೂರಿಯ ವರ್ಣನೆ. ಬೋಂಡದಲ್ಲಿ ಪಲ್ಯ ಹೇಗೆ ಹೊರಗಡೆಗೆ ಬರದೇ ಒಳಗಡೆಯೇ ಕುಳಿತಿದೆ? ಇಡ್ಲಿಯಂತೂ ಅಚ್ಚು ಮೆಚ್ಚಿನ ಆಹಾರವಾಯಿತು, ಸಾಸರ್ ಪ್ಲೇಟಿನಂತೆ ಅದೆಷ್ಟು ಗುಂಡಗಿದೆ ಎಂದರು. ಕೇಸರೀ ಬಾತು safforn rice pudding ಎಂದು ಹೊಗಳಿಸಿಕೊಂಡಿತು. ನಿಂಬೆ ಚಿತ್ರಾನ್ನವಂತೂ ಮೃಷ್ಟಾನ್ನವಾಯಿತು. ಪಾಯಸದ ಶಾಮಿಗೆಯನ್ನು ಭಾರತದಲ್ಲಿ ರವೆಯಿಂದ ತಯಾರಿದ್ದು, ಅದೂ ಕೈಯಲ್ಲಿ ತಯಾರಿಸಿದ್ದು ಎಂದರೆ ಯಾರೂ ನಂಬಲು ಸಿದ್ಧರಿರಲಿಲ್ಲ! ಕೂದಲೆಳೆ ಯಂತಹ ಆ ಶಾಮಿಗೆಯನ್ನು ಕೈಯಲ್ಲಿ ಎಳೆಯಲು ಹೇಗೆ ಸಾಧ್ಯ? ಎನ್ನುವುದು ಅವರ ವಾದ. ಪೂರಿಗಾಗಿ ತಯಾರಿಸಿದ ಪಲ್ಯವೇ ಕೆಲವರ ಮುಖ್ಯ ಆಹಾರವಾಯಿತು? ಊಟ ಮುಗಿಸಿ ಹೊರಡುವಾಗ ಅಭಿನಂದನೆಗಳ ಸುರಿಮಳೆಯಾಯಿತು.
ನಾವು ಸ್ವದೇಶಕ್ಕೆ ಹೊರಡುವ ಮೊದಲು ರೋಟರಿ ಹೆಂಗೆಳೆಯರ ಬಳಗದ ಒಂದು ಸಮಾರಂಭಕ್ಕೆ ನಾನು ನನ್ನ ಓರಗಿತ್ತಿಯೊಡನೆ ಹೋಗಬೇಕಾಗಿ ಬಂದಿತು. ಅಲ್ಲಿ ಎಲ್ಲರೂ ಮಹಿಳೆಯರೇ. ನಮ್ಮ ಭಾವನವರು ಆ ಸಂಸ್ಥೆಯ ಗವರ್ನರ್ ಆದ್ದರಿಂದ ಅವರು ಆಹ್ವಾನಿತರಾಗಿ ಬಂದರು. ಅಲ್ಲಿ ಅವರು ನಂದಗೋಕುಲದಲ್ಲಿ ಕೃಷ್ಣನಂತೆ ಕಂಗೊಳಿಸಿ ದರು. ಆ ಸಮಾರಂಭದಲ್ಲಿ ನಾನು ಅನೇಕ ಮುಖ್ಯ ವಿಷಯಗಳನ್ನು ಕಂಡುಕೊಂಡೆ. ೯೨ ಜನ ಸದಸ್ಯೆಯರು ಜನ ವಿವಿಧ ರೋಟರಿಕ್ಲಬ್‌ಗಳಿಂದ ಆಗಮಿಸಿದ್ದರು. ಅದೇ ಊರಿನ ಮತ್ತು ಹತ್ತಿರದ ಊರುಗಳ ಸದಸ್ಯೆಯರು ಆ ದಿನದ ಆತಿಥ್ಯದ ಸಂಪೂರ್ಣ ಉಸ್ತುವಾರಿಯನ್ನು ವಹಿಸಿಕೊಂಡು, ಅದನ್ನು ನಡೆಸಿದ ರೀತಿ ಅತ್ಯಂತ ಶ್ಲಾಘನೀಯವಾಗಿತ್ತು. ಸುಮಾರು ೨೮ ಮೇಜುಗಳನ್ನು ಜೋಡಿಸಿದ್ದರು. ಒಂದೊಂದು ಮೇಜನ್ನೂ ಸುಂದರವಾದ lace table cloth ಗಳಿಂದ ಅಲಂಕರಿಸಿ, ಅದರ ಮೇಲೆ ಆದಾಗತಾನೇ ಗಿಡಗಳಿಂದ ಕುಯ್ದು ತಂದ ಹೂಗಳಿಂದ ಜೋಡಿಸಿದ ಸುಂದರ ಹೂದಾನಿಗನ್ನು ಇಟ್ಟಿದ್ದರು. ಪ್ರತಿಯೊಂದು ಮೇಜಿನ ಮೇಲೂ ಕಾಫಿಗಾಗಿ ಬೆಲೆಬಾಳುವ ಕಪ್ಪು ಬಸಿಗಳನ್ನೂ, ಊಟದ ತಟ್ಟೆ ಗ್ಲಾಸುಗಳನ್ನೂ ಅಂದವಾಗಿ ಜೋಡಿಸಿದ್ದರು. ಇಲ್ಲಿಯ ವಿಶೇಷ ಎಂದರೆ ಒಬ್ಬೊಬ್ಬ ಸದಸ್ಯೆಯು ಒಂದು ಮೇಜನ್ನು ತನ್ನದಾಗಿಸಿಕೊಂಡು ಅದನ್ನು ಅಲಂಕರಿಸುವ ಜವಾಬುದಾರಿಯನ್ನಿ ಹೊತ್ತಿದ್ದಳು. ಇದರಿಂದ ಯಾರೋ ಒಬ್ಬರಿಗೆ ಕೆಲಸದ ಒತ್ತಡ ಬೀಳದೆ ಎಲ್ಲರೂ ಸಮನಾಗಿ ಭಾಗವಹಿಸುವಂತಾಯಿತು. ಎಷ್ಟು ಉತ್ತಮವಾದ ನಿರ್ವಹಣೆ ಎನ್ನಿಸಿತು. ತಮ್ಮ ತಮ್ಮ ವಸ್ತುಗಳನ್ನು ತರುವುದೂ ತೆಗೆದುಕೊಂಡು ಹೋಗುವುದೂ ಅವರದ್ದೇ ಜವಾಬ್ದಾರಿ. ಇಬ್ಬರು ಮೂವರು ಮಹಿಳೆಯರು ಒಂದೊಂದು ಖಾದ್ಯ ಪದಾರ್ಥವನ್ನು ತಯಾರಿಸಿ ತರುವ ಹೊಣೆ ಹೊತ್ತಿದ್ದರಿಂದ ಆಹಾರವು ಯಥೇಷ್ಟವಾಗಿತ್ತು. ವಿವಿಧರೀತಿಯ ಹಣ್ಣುಗಳು, ಹಣ್ಣಿನ ರಸಗಳೂ ಇದ್ದುವು. ಆ ದಿನ ನಾನು ಭಾರತದಿಂದ ಬಂದ ಒಬ್ಬ ವಿಶಿಷ್ಟ ಅತಿಥಿಯಾಗಿ ಮೆರೆದೆ. ಎಲ್ಲರೂ ನನ್ನ ಸೀರೆಯನ್ನು ಹೊಗಳುತ್ತಾ, ಅದರ ಅಂದ ಚೆಂದವನ್ನು ವಿಮರ್ಶಿಸುತ್ತಾ ನನ್ನನ್ನು ಉಪಚರಿಸುತ್ತಿದ್ದರು. ೯೨ ಜನ ವಿದೇಶೀ ಮಹಿಳೆಯರ ಗುಂಪಿನಲ್ಲಿ ನಾನು ಪರಕೀಯಳು ಎಂದು ನನಗೆ ಅನ್ನಿಸಲಿಲ್ಲ. ಎಲ್ಲರೂ ಅಷ್ಟು ಸೌಜನ್ಯದಿಂದ ನಡೆದುಕೊಂಡರು. ಅಲ್ಲಿ ನಾನು ನೋಡಿದ ಮತ್ತೊಂದು ಸೋಜಿಗ. ಔತಣ ಮುಗಿದ ಕೂಡಲೇ ಎಲ್ಲರೂ ತಮ್ಮ ತಮ್ಮ ಮನೆಗಳಿಂದ ತಂದಿದ್ದ ಪಿಂಗಾಣಿ ತಟ್ಟೆ ಬಟ್ಟಲುಗಳನ್ನು ತಾವೇ ತೊಳೆದು, ಶುಭ್ರವಾಗಿ ಒರೆಸಿ ಅಚ್ಚುಕಟ್ಟಾಗಿ ತಾವು ತಂದಿದ್ದ ಡಬ್ಬಗಳಲ್ಲಿ ಜೋಡಿಸಿ ಇಟ್ಟುಕೊಂಡರು. ನಾನು ಇದನ್ನೆಲ್ಲ ಬೆಕ್ಕಸ ಬೆರಗಾಗಿ ನೋಡಿದೆ. ಅಲ್ಲಿ ಕೆಲಸದವರು ಎನ್ನುವ ಒಂದು ಪಂಗಡವೇ ಇಲ್ಲವಾದ್ದರಿಂದ ಎಲ್ಲರೂ ಸ್ವಾವಲಂಬಿಗಳು. ಅಡುಗೆಯವರು, ಪರಿಚಾರಕರು, ಕೆಲಸದವರಿಗೆ ಹೊಂದಿಕೊಂಡಿರುವ ನಾವು ಅಲ್ಲಿಯವರಿಂದ ಕೆಲವು ಪಾಠಗಳನ್ನು ಕಲಿಯಬಹುದಾಗಿದೆ. ಅನೇಕ ಛಾಯಾಚಿತ್ರಗಳನ್ನು ತೆಗೆದು ಅವರಿಂದ ಬೀಳ್ಕೊಂಡು ಮನೆಗೆ ಬಂದೆವು.
ನಾವು ಹೊರಡುವ ಎರಡು ದಿನಗಳ ಮೊದಲೆ ಪುನಃ ಮಕ್ಕಳೆಲ್ಲರೂ ಬಂದು ಮನೆಯನ್ನು ತುಂಬಿದರು. ನಮ್ಮನ್ನು ಬೀಳ್ಕೊಡಲು ಬಂದವರು ನಮಗೆ ವಿಧ ವಿಧವಾದ ಉಡುಗೊರೆಗಳನ್ನು ತಂದಿದ್ದರು. ನನ್ನ ಓರಗಿತ್ತಿಯಂತೂ ನಾವು ಹೊರಡುವ ಸಮಯದವರೆಗೂ ಚಿಕ್ಕ ಪುಟ್ಟ ಸಾಮಾನುಗಳನ್ನು ತಂದು ಪೆಟ್ಟಿಗೆಗೆ ತುಂಬುತ್ತಲೇ ಇದ್ದಳು. ಮೊಮ್ಮಕ್ಕಳಂತೂ ನಾವು ಹೊರಡುತ್ತಿದ್ದೇವೆಂಬ ವಿಷಯವನ್ನು ನಂಬಲಾರದೇ ಹೊದರು. ನೀವು ಎಂದಿನಂತೆ ಎಲ್ಲೆಲ್ಲೋ ಸುತ್ತಾಡಿಕೊಂಡು ಪುನಃ ಬಂದು ಬಿಡುತ್ತಿರಲ್ಲವೇ? ಎಂದರು. ಈ ಪ್ರಶ್ನೆಗೆ ಉತ್ತರಿಸುವಾಗ ಕಣ್ಣು ತುಂಬಿ ಬಂದಿತ್ತು. ನಮ್ಮನ್ನು ಬಿಗಿದಪ್ಪಿ ಬಿಡುವುದಿಲ್ಲ ಎಂದರು. ಈ ವಾಂಛಲ್ಯದ ಸಂಕೋಲೆಯನ್ನು ಕಳಚಿಕೊಂಡು ಬರುವಾಗ ಕಣ್ಣೀರಿನ ಕಟ್ಟೆಯೊಡೆದಿತ್ತು. ಎಲ್ಲರಿಂದ ಬೀಳ್ಕೊಂಡು ಅತ್ಯಂತ ಭಾರವಾದ ಮನಸ್ಸಿನಿಂದ ತಾಯ್ನಾಡಿನತ್ತ ಪ್ರಯಾಣ ಬೆಳೆಸಿದೆವು . . .
*-ಜಯಂತಿ ಅಮೃತೇಶ್
‘ಕೃತ್ತಿಕ’, ನಂ. 40, 6ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು 570 009
(0821) 2543472
08453 12952
email: jayanthiamrutesh@gmail.com