ಅಮೆರಿಕನ್ನಡ
Amerikannada
ಗುಬ್ಬಿ
-ಜಯಪ್ಪ ಹೊನ್ನಾಳಿ, ಮೈಸೂರು
ಆ ಪುಟ್ಟ ಪಕ್ಕೆ ಪುರ್ರೆನಿಸಿ ರೆಕ್ಕಿ
ಎಲ್ಲಿಂದ ಬಂದೆ ಮರಳಿ!?
ಚಕಮಕ ಹೊರಳಿ ಕಸಕಡ್ಡಿ ಅರಳಿ
ಜೊತೆಗೆಂತು ತಂದೆ ತೆರಳಿ!?

ಎರಡು ಕಾಲು ಜೊತೆಗಿಟ್ಟು ಎಂತು
ಕುಪ್ಪುತಲಿ ನೆಡೆವೆ ನಿತ್ಯ!?
ಹಗ್ಗದಾಟ ಸ್ಪರ್ಧೆಯಲಿ ನಿನಗೆ
ಬಂಗಾರ ಪದಕ ಸತ್ಯ!

ಬೇಡನ ಗೂಡ ಮನೆಮಾಡಿಕೊಂಡ
ಅದ್ಭುತವು ನಿನ್ನ ಧೈರ್ಯ!
ಬ್ರಾಹ್ಮಣನ ಮನೆಯ ಗೂಡೆನಿಸಿಕೊಂಡ
ನಿನಗಿಂತ ಉಂಟೆ ಆರ್ಯ!?

ನೀನಮ್ಮ ಹಿರಿಯ ತಲೆಮಾರು ಅಂತೆ
ನನ್ನಜ್ಜಿ ಬಿಚ್ಚಿ ಕಂತೆ....
ಹೇಳಿದಳು ನನಗೆ ನೀನದಕೆ ನಮ್ಮ
ಮನೆ ಸೇರಿ ಬಾಳ್ವೆಯಂತೆ!

ಕರಿಕಾಗೆ ಹೇಗೆ ವೈರಿಯದು ನಿನಗೆ?
ಮನೆಯೊಳಗೆ ಬಿಡೆವು ಅದಕೆ!
ಬಾಯ್ತೆರೆದ ಬದುಕ ನಿನ ಚಿಂವ ಮರಿಗೆ
ನಿಜ ಕಾವ್ಯ ನಿನ್ನ ಗುಟುಕೆ!

ಕನ್ನಡಿಯ ಮೇಲೆ ನಿನಗೇಕೆ ನಿತ್ಯ
ಎಂತದೊ ಆ ಗುಮಾನಿ!?
ನಮ್ಮಂತೆ ನೀನು ಕಂಡಿಲ್ಲ ಅಲ್ಲಿ
ಎಂಬುವುದೆ ನಿನ್ನ ಬೇನಿ?

ತಾವಿರುವ ಗೂಡ ನಿಜಪಕ್ಷಿಯನ್ನು
ನೋಡಿಲ್ಲ ಇಲ್ಲಿ ಯಾರೂ
ಗುಬ್ಬಚ್ಚಿ ಹೊದ್ದ ನಿನ್ನೊಳಗೆ ನಮದು
ಬೇರಲ್ಲ ನಿನಗೆ ಯಾರೂ

ತೋರುವುದು ಅಲ್ಲಿ ಒಳಗಿರುವುದಲ್ಲ
ನೀನದಕೆ ಕೊರಗಬೇಡ
ನಿನ್ನಂತೆ ನಾನು ನನ್ನಂತೆ ನೀನು
ಒಳ ಹಕ್ಕಿ ಒಂದೆ ನೋಡ