ಅಮೆರಿಕನ್ನಡ
Amerikannada
‘ಮಾತಿನ ಮಂಟಪ’ದಲ್ಲೊಂದು ಜಗಲಿ!
-ಎಚ್. ಗಿರಿಧರ ಹತ್ವಾರ್
ಎಲ್ಲ ಭಾರತೀಯರ ಗ್ರಹಿಕೆಗೆ ಎಸ್. ಕೆ. ಹರಿಹರೇಶ್ವರ ಅಮೆರಿಕಾದಲ್ಲಿರುವವರು. ಅವರ ಹೆಸರು ಆಗಾಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತದೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ನುಡಿಯಾಗಿ ಅವರು ತಮ್ಮನ್ನು ಪ್ರಕಟಪಡಿಸಿಕೊಳ್ಳುತ್ತ ಬಂದಿದ್ದಾರೆ. ಅಮೆರಿಕನ್ನಡಿಗರ ಕೃತಿಗಳನ್ನು ಪ್ರಕಟಿಸುತ್ತಾ, ಅಲ್ಲಿ ಬರೆಯುವವರಿಗೆ ಒಂದು ರೀತಿಯ ಸ್ಫೂರ್ತಿಯ ಸೆಲೆಯಾಗಿ ಕೆಲಸ ಮಾಡಿದ್ದಾರೆ.
ಮಾತಿನ ಮಂಟಪ ಅವರ ಮೊದಲ ಪ್ರಬಂಧ ಸಂಕಲನ. ಹಾಗಂತ ಊಹಿಸುವುದಕ್ಕೆ ಸಾಕಷ್ಟು ಕಾರಣಗಳು ಕೃತಿಯಲ್ಲೇ ಇವೆ. ಪ್ರತಿಯೊಬ್ಬ ಲೇಖಕನ ಮೊದಲ ಸಂಕಲನವೂ ಲವಲವಿಕೆಯಿಂದ ಓದಿಸಿಕೊಳ್ಳುತ್ತದೆ ಎಂಬ ಹಳೆಯ ಆರೋಪ ಇಲ್ಲೂ ನಿಜವಾಗಿದೆ. ಲೇಖಕ ತನ್ನೆಲ್ಲ ಯೋಚನೆಗಳನ್ನೂ ಮೊದಲ ಪ್ರಬಂಧದಲ್ಲೋ ಕತೆಯಲ್ಲೋ ಕಾದಂಬರಿಯಲ್ಲೋ ದಾಖಲಿಸುತ್ತಾನೆ ಎನ್ನುವುದಕ್ಕೆ ಮಾತಿನ ಮಂಟಪನ ಮತ್ತೊಂದು ನಿದರ್ಶನ.
ಮಾತಿನ ಮಂಟಪ ಎನ್ನುವ ಹೆಸರೇ ಆಕರ್ಷಕವಾಗಿದೆ. ಮಾತಿನಲ್ಲೇ ಮನೆ ಕಟ್ಟುತ್ತಾನೆ ಎನ್ನುವುದು ಹೊಗಳಿಕೆ ಮತ್ತು ತೆಗಳಿಕೆಗಳೆರಡನ್ನೂ ಸೇರಿಸಿದ ಗಾದೆ. ಮಾತಲ್ಲಿ ಮಂಟಪ ಕಟ್ಟುವುದು ಎಷ್ಟು ಆಕರ್ಷಕವೋ, ಅಷ್ಟೇ ಅಪಾಯಕಾರಿ ಕೂಡ ಎನ್ನುವ ಭಾವನೆ ಜನರಲ್ಲಿದೆ. ಅಂಥ ಹೊತ್ತಲ್ಲಿ ಮಾತಿನ ಮಂಟಪ ಎಂಬ ಹರಿಹರೇಶ್ವರರ ಸಂಕಲನವನ್ನು ಓದುತ್ತಿದ್ದರೆ, ಅದು ಅನುಭವ ಮಂಟಪವೂ ಹೌದಲ್ಲ ಅನ್ನಿಸುತ್ತದೆ. ಒಂದು ಕೃತಿ ಅನುಭವವೋ ಅನುಭಾವವೋ ಆಗದೇ ಹೋದಾಗ ಪಠ್ಯವಾಗುತ್ತದೆ. ಇವೆರಡರಲ್ಲಿ ಯಾವುದಾದರೊಂದು ಆಗಿದ್ದಾಗ ಸಾಮಾನ್ಯ ಕೃತಿಯಾಗುತ್ತದೆ. ಇವೆರಡೂ ಆಗಿದ್ದಾಗ ಆತ್ಮೀಯವಾಗುತ್ತದೆ. ಆ ಮಟ್ಟಿಗೆ ಮಾತಿನ ಮಂಟಪ ಆತ್ಮೀಯವಾಗುವ ಕೃತಿ. ಉದಾಹರಣೆಗೆ ನೀರಿನ ಬಗ್ಗೆ ವಿಚಾರ ಲಹರಿ. ಆ ಲಹರಿ ಕೇವಲ ಲಹರಿಯಷ್ಟೇ ಅಲ್ಲದೆ ಚಕ್ರತೀರ್ಥವೂ ಆಗುವುದಿದೆ. ಓದುಗನನ್ನು ಅಂಥ ನಿರಾಸಕ್ತ ಸಂಗತಿಗಳತ್ತ ಸೆಳೆಯುವುದಿದೆ ನೋಡಿ, ಅದು ಕಷ್ಟದ ಕೆಲಸ. ಅದು ಸಾಧ್ಯವಾಗುವುದು ಅನುಭವ ಆಳವಾಗಿದ್ದಾಗ. ‘ಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ’.
ಹರಿಯುವ ಸ್ವಭಾವ ನೀರಿಗೆ ಇಲ್ಲದೇ ಇದ್ದಿದ್ದರೆ, ಯೋಚನೆ ಮಾಡಿ. ಬದುಕಲು ಸಾಧ್ಯವಿತ್ತೇ? ಎಂದು ಕೇಳುತ್ತಾರೆ ಹರಿಹರೇಶ್ವರ. ಎಷ್ಟು ಸರಳ ಮತ್ತು ಸಂಕೀರ್ಣ! ಒಂದು ವೇಳೆ ಮಣ್ಣಿನಂತೆ ಮರಳಿನಂತೆ ನೀರೂ ಹರಿಯದೇ ಇರುತ್ತಿದ್ದರೆ ? ಊಹೆಗೂ ನಿಲುಕದ ಸಂಗತಿ ಅದು.
ಅಡಿಗರ ‘ನನ್ನ ಅವತಾರ’ ಕವಿತೆ ಹರಿಹರೇಶ್ವರ ಅವರಿಗೆ ಇಷ್ಟವಾದದ್ದಾದರೂ ಯಾಕೆ? ಅದು ಅಡಿಗರ ಪ್ರಾತಿನಿಧಿಕ ಕವಿತೆಯಲ್ಲ. ಅತ್ಯಂತ ಸಂಕೀರ್ಣ ಕವಿತೆಯೂ ಅಲ್ಲ. ಅಡಿಗರಿಗೇ ಒಲ್ಲದ ಉಪದೇಶ ನೀಡುವ ಗುಣ ಮತ್ತು ಕೆಟ್ಟ ಹಳಹಳಿಕೆ ಕವಿತೆಯೊಳಗೆ ಹೆಪ್ಪುಗಟ್ಟಿದೆ ಎಂದು ನಾನಂದುಕೊಂಡಿದ್ದೆ. ನಾನು ಅವರ ಜೊತೆಗಿದ್ದೆ, ಇವರ ಜೊತೆಗಿದ್ದೆ, ಆದರೆ ಅವರಂತಾಗಲಿಲ್ಲ ಎಂಬ ವಿಷಾದ ಮತ್ತು ವಿಷಮನಸ್ಥಿತಿಯ ಪ್ರತೀಕದಂತೆ ಕಂಡ ಕವಿತೆಯ ಕುರಿತ ಅಭಿಪ್ರಾಯ ಬದಲಾಗುವುದಕ್ಕೆ ಹರಿಹರೇಶ್ವರ ಕಾರಣರಾಗಿದ್ದಾರೆ. ಉದಾಹರಣೆಗೆ ಎಲ್ಲರೂ ಹತ್ತುತ್ತಾರೆ ಎಂದಲ್ಲ, ಎಲ್ಲರೂ ಹತ್ತಬೇಕೆಂದು ಕೂಗಿ ಹೇಳುತ್ತದೆ ಬೆಟ್ಟ ಎನ್ನುವ ಮಾತು ಮನುಷ್ಯ ಪುರುಷೋತ್ತಮನಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ಅಂಥ ಸಾಧ್ಯತೆಯ ಕಲ್ಪನೆಯನ್ನು ಅಡಿಗರು ಮಾಡಿಕೊಟ್ಟಿದ್ದರು. ಅದು ಸ್ಪಷ್ಟವಾದದ್ದು ಹರಿಹರೇಶ್ವರ ಅವರ ಪ್ರಾಯೋಗಿಕ ವಿಮರ್ಶೆಯನ್ನು ಓದಿದ ನಂತರವೇ. ಪ್ರಾಯೋಗಿಕ ವಿಮರ್ಶೆ ಎಂಬ ಪದವನ್ನು ಒಪ್ಪದವರು ಕುರಿತೋದು ಎಂದು ಬದಲಾಯಿಸಿಕೊಳ್ಳಬಹುದು.
ಕಾರಂತರ ಕವನ ಸಂಕಲನದ ಬಗ್ಗೆ ಹರಿಹರೇಶ್ವರ ಬರೆದು ಸಾಲುಗಳಂತೂ ಕೇವಲ ಪರಿಚಯಾತ್ಮಕ ಅಲ್ಲವೇ ಅಲ್ಲ. ಅವರು ಹಾಗೆ ಹೇಳಿಕೊಂಡಿದ್ದರೂ. ಅದು ಅಡಿಗರು ಕವನವನ್ನೇಕೆ ಬರೆದರು ಎಂಬ ಪ್ರಶ್ನೆಯಿಂದ ಸದಾ ಸಿಟ್ಟಲ್ಲಿರುತ್ತಿದ್ದ ಅಡಿಗರು ಒಮ್ಮೊಮ್ಮೆ ತಮಗೆ ತಾವೇ ಮಾರು ಹೋಗುತ್ತಿದ್ದರು ಅನ್ನುವುದನ್ನೂ ಸೂಚಿಸುತ್ತದೆ.
ವಿದೇಶದಲ್ಲಿ ಕುಳಿತು ಕನ್ನಡ ಬರೆಯುವವರ ಅನುಕೂಲ ಮತ್ತು ಅನಾನುಕೂಲಗಳನ್ನೇ ಗಮನಿಸಿ. ಆತ ಕ್ರಿಟಿಕಲ್ ಇನ್‌ಸೈಡರ್ ಅಲ್ಲ. ಎಲ್ಲದರಿಂದ ಹೊರಗೆ ಕುಳಿತು ಬರೆಯುತ್ತಿರುವವನು. ಆದರೆ ಅವನೊಳಗೇ ಒಂದು ಕನ್ನಡ ವಿಶ್ವ ನಿರ್ಮಾಣವಾಗಿರುತ್ತೆ. ಅದು ತಾನು ಹುಟ್ಟಿದ ನೆಲದ ಪ್ರತಿಬಿಂಬವಲ್ಲ ಎನ್ನುವುದರಲ್ಲೇ ಆ ಲೇಖಕನ ಶಕ್ತಿಯಿದೆ.
ಉದಾಹರಣೆಗೆ ಭಾರತದ ಪುಟ್ಟ ಹಳ್ಳಿಯೊಂದರಲ್ಲಿ, ಸಂತೆಬೆನ್ನೂರು ಅಂತಿಟ್ಟುಕೊಳ್ಳಿ, ಹುಟ್ಟಿದ ಲೇಖಕ ಆರಂಭದಲ್ಲಿ ಸಂತೆಬೆನ್ನೂರಿನಲ್ಲಿ ಕುಳಿತು ಸಂತೆಬೆನ್ನೂರಿನ ಬಗ್ಗೆ ಬರೆಯುತ್ತಾನೆ. ನಂತರ ಒಂದು ದಿನ ಅಮೆರಿಕಾಕ್ಕೆ ಹೊರಟುಹೋಗುತ್ತಾನೆ. ಆದರೆ ಅವನೊಳಗಿನ ಸಂತೆಬೆನ್ನೂರು ಬದಲಾಗಿರುವುದಿಲ್ಲ, ಬದಲಾಗಿ ಬೆಳೆದಿರುತ್ತದೆ. ಆ ಬೆಳವಣಿಗೆ ನಡೆಯುವುದು ಅವನ ಒಳಗೇ ಆದ್ದರಿಂದ ಆತ ಬರೆಯುವುದು ಸಂತೇಬೆನ್ನೂರಿನ ಓದುಗರಿಗೂ ಮೆಚ್ಚುಗೆಯಾಗುತ್ತದೆ. ಆಪ್ತವಾಗುತ್ತದೆ.
ಆದರೆ ಕೆಲವರ ಒಳಗೆ ಜಗತ್ತು ಬೆಳೆಯುವುದಿಲ್ಲ. ಅವರು ಹುಟ್ಟಿದ ಜಗತ್ತನ್ನು ಕಳಕೊಳ್ಳುತ್ತಾ ಹೋಗುತ್ತಾರೆ. ಹೊಸ ಜಗತ್ತನ್ನು ಸ್ವೀಕರಿಸುವ ಶಕ್ತಿ ಮತ್ತು ಚೈತನ್ಯ ಅವರಿಗಿರುವುದಿಲ್ಲ. ಅಂಥವರು ಗೊಡ್ಡಾಗುತ್ತಾ ಹೋಗುತ್ತಾರೆ.
ಹರಿಹರೇಶ್ವರ ಹಾಗಲ್ಲ. ಅವರ ಸ್ಮೃತಿಯೊಳಗೆ ಜಗನ್ನಾಥ-ಲವಂಗಿಯರ ಕತೆಯಿದೆ. ನಿಮಿಷ- ಅನಿಮೇಷರ ಸನ್ನಿವೇಶವಿದೆ. ವಚನದಿಂದ ನಿರ್ವಚನದ ತನಕ ಅವರ ಬರಹದ ಹರಹಿದೆ. ಆಗಾಗ ಪಾ. ವೆಂ. ಆಚಾರ್ಯರಂತೆ ಪದಾರ್ಥ ಚಿಂತಾಮಣಿಯನ್ನೂ ಹುಡುಕುತ್ತಾರೆ ಅವರು. ಉದಾಹರಣೆಗೆ ಕಣ್ಣಿನ ಮೇಲೆ ಅವರು ಕಣ್ಣಾಡಿಸಿರುವ ಪರಿಯನ್ನೇ ಗಮನಿಸಿ.
ಹರಿಹರೇಶ್ವರ ಅವರ ಬರಹಗಳನ್ನು ಓದುತ್ತಿದ್ದರೆ ಅವರ ಓದಿನ ವಿಸ್ತಾರವೂ ಗೊತ್ತಾಗುತ್ತದೆ. ಪ್ರತಿಯೊಂದು ಬರಹದಲ್ಲೂ ಅವರು ಸಾಕಷ್ಟು ಸೋದಾಹರಣೆಗಳನ್ನು ಕೊಡುತ್ತಾರೆ. ಲಕ್ಷ್ಮಿ ಎಲ್ಲಿದ್ದಾಳೆ ಎಂಬ ಲೇಖನದಲ್ಲಿ ಗದಾಯುದ್ಧದ ಪ್ರಸ್ತಾಪ ವಿವರವಾಗಿಯೇ ಬರುತ್ತದೆ. ಭಗವದ್ಗೀತೆಯನ್ನು ಅವರು ಉದಾಹರಿಸುತ್ತಾರೆ. ಶ್ರೀ ಸೂಕ್ತದ ಲಕ್ಪ್ಮೀ ವರ‍್ಣನೆಯನ್ನು ಕಣ್ಣಿಗೆ ಕಟ್ಟುವಂತೆ ನೀಡುತ್ತಾರ
ಹಾಗಂತ ಈ ಸಂಕಲನದಲ್ಲಿ ನೀರಸವಾದ ಪ್ರಬಂಧಗಳಿಲ್ಲ ಎಂದೇನಲ್ಲ. ಆಚಾರ್ಯ ಶ್ರೀ ರಾಮಾನುಜರು ಕಂಡು ವರ್ಣಿಸುವ ಭಗವಂತನ ದಿವ್ಯ ಮಂಗಳ ಮೂರ್ತಿ ಎಂಬ ದೇವರ ದೇಹದ ಮೇಲಿನ ಪಿಎಚ್‌ಡಿ ಪ್ರಬಂಧದಂತಿದೆ. ಇರದವನ, ಎಂದೂ ತೋರಿಸಿಕೊಳ್ಳದವನ ದೇಹವನ್ನು ಅಷ್ಟೊಂದು ವರ್ಣಿಸಿದರೆ ರಾಮಾನುಜರ ಭ್ರಮೆ ಯಾವ ಹಂತ ತಲುಪಿರಬಹುದೆಂದು ನಾಸ್ತಿಕರು ನಗಬಹುದು. ಅಂಥದ್ದನ್ನು ಬರೆಯುವುದು ತಪ್ಪಲ್ಲ, ಆದರೆ ಮಾತಿನ ಮಂಟಪದಂಥ ಕೃತಿಯ ನಡುವೆ ತೂರಿಸುವುದನ್ನು ತಪ್ಪಿಸಬಹುದು. ವ್ಯಂಗ್ಯವನ್ನ ಬದಿಗಿಟ್ಟು ನೋಡಿದಾಗಲೂ ಅದೊಂದು ಒಳನೋಟಗಳಿಲ್ಲದ ಕೃತಿಯೇ.
ಒಳನೋಟ ಬೇಕಿದ್ದರೆ ನೀವು ಸಮಯ ಪದದ ಬಗ್ಗೆ ವಿವೇಚನೆ ಎಂಬ ಲೇಖನವನ್ನು ನೋಡಬೇಕು. ಶಿವರಾಂ ಅವರ ಕಾಲ ಎಂಬ ಕೃತಿ ಕಾಲವನ್ನು ವೈಜ್ಞಾನಿಕವಾಗಿ ನೋಡಲೆತ್ನಿಸಿದರೆ ಸಾಹಿತ್ಯವೇದಪುರಾಣಗಳ ಮೂಲಕ ಪ್ರವೇಶಿಸುತ್ತಾರೆ ಹರಿಹರೇಶ್ವರ.
ನಿಜಕ್ಕೂ ಹರಿಹರೇಶ್ವರರ ಕೃತಿ ಮನನಾರ್ಹ. ಕೇವಲ ಗಮನಾರ್ಹವಷ್ಟೇ ಅಲ್ಲ. ವಿದೇಶದಲ್ಲಿ ಕನ್ನಡ ಉಳಿಸುವ ಬೆಳೆಸುವ ಬಗೆ ಎಂಬ ಲೇಖನವನ್ನು ಅವರೇ ಬರೆದಿದ್ದಾರೆ. ಆದರೆ ಇಂಥ ಪುಸ್ತಕಗಳು ಸ್ವದೇಶಿ ಕನ್ನಡವನ್ನೂ ಬೆಳೆಸುತ್ತವೆ ಎಂದರೆ ಅದು ಅವರಿಗೆ ಸಲ್ಲಿಸುವ ಗೌರವ ಮತ್ತು ಪ್ರೀತಿ ಮಾತ್ರ.