ಅಮೆರಿಕನ್ನಡ
Amerikannada
ಅವಲಂಬನೆಯೇ ದುಃಖ; ಸ್ವಾವಲಂಬನೆಯೇ ಸುಖ
-ನಾಗಲಕ್ಷ್ಮೀ ಹರಿಹರೇಶ್ವರ
ಕನ್ನಡದಲ್ಲಿ ಒ೦ದು ಗಾದೆ ಇದೆ. “ತಾ ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯಮ; ಆಳು ಮಾಡುವುದು ಹಾಳು” ಅ೦ದರೆ ತನ್ನ ಕೆಲಸನಾ ತಾನೇ ಮಾಡಿಕೊಳ್ಳೋದು ಬಹಳ ಶ್ರೇಷ್ಠ ಅ೦ತ. ಇ೦ಗ್ಲಿಷ್‌ನಲ್ಲಿ ಇದಕ್ಕೆ ಸ೦ವಾದಿಯಾಗಿ “ಸೆಲ್ಫ್ ಹೆಲ್ಪ್ ಈಸ್ ದ ಬೆಸ್ಟ್ ಹೆಲ್ಪ್” ಅ೦ತ ಇದೆ. ಬೇರೊಬ್ಬರು ಯಾರ ಸಹಾಯವನ್ನೂ ಅವಲ೦ಬಿಸದೇ ತಮ್ಮ ಕಾಲ ಮೇಲೆ ತಾವು ನಿಲ್ಲೋದು ಸ್ವಾವಲ೦ಬನೆ. ಇದು ನಮಗೆ ಕೊಡೋ ಸುಖ ಏನಿದೇ, ಅದಕ್ಕೆ ಸಮನಾದದ್ದು- ಬೇರೆ ಏನೂ ಇಲ್ಲ!
“ಬೇರೆಯವರ ಸಹಾಯದಿಂದ ಆಗುತ್ತೆ ಅಂದುಕೊಳ್ಳುವುದೆಲ್ಲವೂ ದುಃಖಕ್ಕೆ ಕಾರಣವಾದೀತು; ತನ್ನಿಂದಲೇ ಆದದ್ದು, ತಾನೇ ಮಾಡಿದ್ದು ನಿಜವಾದ ಸುಖ. ಇದೇ ಸುಮ್ಮಾನ ದುಮ್ಮಾನಗಳ ಲಕ್ಷಣ, ಚಹರೆ. ಇದನ್ನು ಚೆನ್ನ್ನಾಗಿ ತಿಳಿದುಕೊಳ್ಳಿ!”- ಅನ್ನುತ್ತದೆ, ಮನುಸ್ಮೃತಿ. (ಸರ್ವಂ ಪರವಶಂ ದುಃಖಮ್, ಸರ್ವಂ ಆತ್ಮವಶಂ ಸುಖಮ್|)
ಹೌದು, ಹಾಗೆ ಕ್ರಿಯಾಶೀಲನಾಗಿದ್ದರೇನೇ ಲಕ್ಷ್ಮಿ ಆ ವ್ಯಕ್ತಿಯನ್ನ ಆಶ್ರಯಿಸುತ್ತಾಳೆ. “ಉದ್ಯೋಗಿನಂ ಹಿ ಉಪೈತಿ ಲಕ್ಷ್ಮೀಃ” ಬೇರೆಯವರನ್ನು ಆಶ್ರಯಿಸಿಕೊಂಡು, ಹಿಡಿದ ಕೆಲಸ ಫಲಿಸಲಿಲ್ಲ ಎಂಬುದಕ್ಕೆ, ಬೇರೆ ಯಾರು ಯಾರನ್ನೋ ಹೊಣೆ ಮಾಡುವುದು ಆತ್ಮವಂಚನೆ ಮಾತ್ರ. ಮಾಡಿದರೆ ತಾನು ಮಾಡಬೇಕು; ಸೋಲಿಗೂ ಗೆಲುವಿಗೂ ತಾನೇ ಹಕ್ಕುದಾರ ಎಂಬ ಭಾವನೆ ಇಟ್ಟುಕೊಂಡಿರಬೇಕು.
ಬೇರೆಯವರ ಸಹಾಯವನ್ನೇ ಅವಲಂಬಿಸಿಕೊಂಡಿರುವ ವಿಚಾರ ಹಾಗಿರಲಿ, ಕೆಲವರು “ಅದು ನನ್ನ ಹಣೆಯ ಬರಹ, ನನ್ನ ಪೂರ್ವಾರ್ಜಿತ ಕರ್ಮ”- ಅಂತ ಏನೇನೋ ಸಬೂಬು ಹೇಳಿ, ‘ವಿಧಿ’ ಯನ್ನೇ ದೂರುವುದೂ ಉಂಟು. ಅಥವಾ ‘ದೇವರು ಕರುಣಿಸಲಿಲ್ಲ! ಏನು ಮಾಡುವುದು?’- ಎಂದು ಕೈ ಚೆಲ್ಲಿ ಕುಳಿತು ಬಿಡುವುದು. ಇದು ಆತ್ಮವಿಶ್ವಾಸವಿಲ್ಲದವರ ಕಾಪುರಷರ ಲಕ್ಷಣ. (‘ದೈವಮ್ ನ ದೇಯಮ್ ಇತಿ ಕಾಪುರುಷಾಃ ವದನ್ತಿ|’)
ನಮ್ಮ ಬದುಕಿಗೆ ನಾವೇ ನಾಯಕರಾಗಬೇಕು; ಬೇರೆಯವರಲ್ಲ. ವಿಧಿ ಆಗಬಾರದು, ಪರಾವಲಂಬನೆಯೂ ಹಾಗೇನೇ. ನೀರಮೇಲಣ ಗುಳ್ಳೆ ಇದ್ದ ಹಾಗೆ. ನಮ್ಮ ಪೌರುಷ, ನಮ್ಮ ಆತ್ಮಬಲ, ನಮ್ಮ ಆತ್ಮಸ್ಥೈರ್ಯ, ನಮ್ಮ ಆತ್ಮಗೌರವ-ಗಳೇ ಬಾಳಿನಲ್ಲಿ ನೆಮ್ಮದಿಗೆ, ಸುಖಕ್ಕೆ ಮೂಲ ಕಾರಣ.
ನಮ್ಮ ಸುತ್ತಮುತ್ತಾನೇ ನೋಡಿಕೊಳ್ಳೋಣ ಮನುಷ್ಯರನ್ನ ಬಿಟ್ಟು ಬಿಡಿ. ಪ್ರಾಣಿಗಳನ್ನು ನೋಡಿ; ಹುಟ್ಟಿದ ಸ್ವಲ್ಪ ಕಾಲ ಆದಕೂಡಲೇ ತಮ್ಮ ಕಾಲ ಮೇಲೆ ತಾವೇ ನಿ೦ತುಕೊ೦ಡು ತಮ್ಮ ಕೆಲಸಾನ ತಾವೇ ಮಾಡಿಕೊಳ್ಳುತ್ತವೆ. ಆದರೆ ಮನುಷ್ಯ ಹಾಗಲ್ಲ. ನಿಜ, ಈಗಿನ ಪ್ರಪ೦ಚದಲ್ಲಿ ಪರಸ್ಪರ ಸಹಾಯ ಅವಲ೦ಬನೆ ಹಿತಮಿತವಾಗಿ ಬೇಕು. ಆದರೆ ಎಲ್ಲದಕ್ಕೂ ಬೇರೊಬ್ಬರನ್ನೇ ಆಶ್ರಯಿಸಿಕೊ೦ಡಿದ್ದರೆ, ಅದರಿ೦ದ ಬರಬಹುದಾದ ಕಷ್ಟ, ದುಃಖ ಅಷ್ಟಿಷ್ಟಲ್ಲ.
“ಆಳಾಗಬಲ್ಲವನು ಅರಸನಾಗಬಲ್ಲ”- ಅನ್ನೋ ಮಾತಿದೆ. ಇದರರ್ಥ ಏನು? ಅರಸನಾಗಿದ್ದರೂ ಸಹ ತಾನು ಯಾರನ್ನೆಲ್ಲಾ ಆಳುತ್ತಾ ಇರುತ್ತಾನೋ ಅವರೆಲ್ಲರ ಕೆಲಸಾನೂ ತಾನೂ ಮಾಡಬಲ್ಲವನಾಗಿರಬೇಕು- ಅಂತ.
ನೀವು ಒ೦ದು ಉದ್ಯಮ ನಡೆಸುತ್ತಿದ್ದೀರಿ- ಅ೦ದುಕೊಳ್ಳಿ. ಚಿಕ್ಕ ಪ್ರಮಾಣದ್ದಿರಬಹುದು ಅಥವಾ ದೊಡ್ಡ ಅಗಾಧ ಗಾತ್ರದ್ದಿರಬಹುದು. ಅದಕ್ಕೆ ಅನುಗುಣವಾಗಿ, ಹಲವಾರು ಕೆಲಸಗಾರರನ್ನ ನಿಯಮಿಸಿಕೊಳ್ಳಬೇಕಾದದ್ದು ಅವಶ್ಯಕ. ಇದು ಪರಾವಲ೦ಬನೆ ಅಲ್ಲ. ಹಿತಮಿತವಾಗಿ ತನ್ನ ಕೆಲಸವನ್ನ ಬೇರೊಬ್ಬರೊ೦ದಿಗೆ ಹ೦ಚಿಕೊಳ್ಳುವ ಒ೦ದು ವಿಧಾನ. ಆ ಕೆಲಸಗಾರರಲ್ಲಿ, ಏನೋ ಕಾರಣಕ್ಕೆ, ಯಾರೋ ಒಬ್ಬ ಒಂದು ದಿನ ಬರಲಿಲ್ಲ ಅಂದಾಗ ಅಂದುಕೊಳ್ಳಿ, ಆ ಕೆಲಸವನ್ನ ನೀವು ಮಾಡೋದಕ್ಕೆ ನೀವೇ ಸಿದ್ಧರಿರಬೇಕು!
ಸರಿ ಜೀವನವೇ ಒ೦ದು ಯುದ್ಧ. ಒಂದು ಸ್ಪರ್ಧೆ! ಈ ಸಮರಾ೦ಗಣದಲ್ಲಿ, ಇನ್ನೊಬ್ಬರನ್ನ ಅವಲ೦ಬಿಸಿ ತಾನು ಗೆಲ್ಲುತ್ತೀನಿ, ತಾನು ಉಳಿತೀನಿ ಅನ್ನೋ ಮಾತು ಸುಳ್ಳು!
ಸೋಜಿಗದ ವಿಷಯ ಅ೦ದರೆ ಪ್ರತಿಯೊಬ್ಬ ವ್ಯಕ್ತಿಗೂ ತು೦ಬಾ ಸಾಮರ್ಥ್ಯ ಇರುತ್ತೆ. ಆದರೆ ಅದನ್ನ ಆ ವ್ಯಕ್ತಿ ಪೂರ್ತಿ ಉಪಯೋಗಿಸಿಕೊಳ್ತಾ ಇರೋದಿಲ್ಲ. ಉದಾಹರಣೆಗೆ ನೋಡಿ ಪ್ರಾಣಕ್ಕೆ ಅಪಾಯ ಒದಗಿದಾಗ, ಇದು ಜೀವನ್ಮರಣ ಪ್ರಶ್ನೆ ಆದಾಗ, ಜನಗಳು ಎಷ್ಟೊ೦ದು ಆಶ್ಚರ್ಯಕರವಾಗಿ ಹಿಂದೆಂದೂ ಮಾಡಿರದ ಕೆಲಸ ಮಾಡಿಬಿಡುತ್ತಾರೆ!
ಸ್ವಾವಲ೦ಬನೆಗೆ ಅ೦ತಃಸತ್ವ ಮುಖ್ಯ. ಬೇರೆ ಉಪಕರಣಗಳೆಲ್ಲಾ ನೆಪ ಮಾತ್ರ. ಬಹಳ ಜನ ಯಶಸ್ಸನ್ನು ಗಳಿಸಿಕೊ೦ಡಿರೋದು ತಮ್ಮ ಅ೦ತಃಸತ್ವದಿ೦ದಲೇ. ಅದಕ್ಕೆ ಹೇಳ್ತಾರೆ: “ಕ್ರಿಯಾ ಸಿದ್ಧಿಃ ಸತ್ವೇ ಭವತಿ ಮಹತಾ೦ ನ ಉಪಕರಣೇ” ಅ೦ತ.
ಪ್ರಯತ್ನದಿಂದಲೇ ಎಲ್ಲಾ ಕಾರ್ಯಗಳು ಸಿದ್ಧಿಸುತ್ತವೆ. ಮಂತ್ರಿಸಿದರೆ ಮಾವಿನಕಾಯಿ ಉದುರುವುದಿಲ್ಲ. ಬರಿಯ ಬಯಕೆಯಿಂದ ಬಾಯಿ ಚಪ್ಪರಿಸಲಾಗುವುದಿಲ್ಲ; ಪ್ರಯೋಜನವಿಲ್ಲ. ಕಾಡಿನಲ್ಲಿ ಮಲಗಿದ ಸಿಂಹದ ಬಾಯಲ್ಲಿ ಮೃಗಗಳು ತಾವಾಗಿಯೇ ಹೋಗಿ ಬೀಳುವುವೇನು? ಆಹಾರ ಬೇಕಿದ್ದರೆ, ತಾನೇ ಎದ್ದು ಹೋಗಿ ಬೇಟೆಯಾಡಬೇಕು. “ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶನ್ತಿ ಮುಖೇ ಮೃಗಾಃ” ಸುಖ ಬೇಕಿದ್ದರೆ ಸ್ವಾವಲಂಬಿಗಳಾಗಿ!