ಅಮೆರಿಕನ್ನಡ
Amerikannada
ಎಂಥ ಸುಂದರಿಯಪ್ಪಾ ಸಾಹಿತ್ಯ ದೇವಿ?
-ಡಾ. ಕೆ.ಆರ್.ಎಸ್. ಮೂರ್ತಿ
ಸೌಂದರ್ಯ ಎಂದರೇನು? ಜೀವನ ಎಂದರೇನು? ನ್ಯಾಯ ಎಂದರೇನು? ಉತ್ತರ ಸಾವಿರಾರು
ನಿಮ್ಮದೊಂದು ಉತ್ತರ; ನನ್ನದೇ ಬೇರೆ; ಅವರದೇ ಮತ್ತೊಂದು ಬೇರೆ. ಸರಿಯೇ, ಅವರವರಿಗವರು
ಕೋಟಿ ಹದಿನಾಲ್ಕು ಕಣ್ಣುಗಳು ಜಗತ್ತಿನಲ್ಲಿ; ಕುರುಡರಿಗೂ ಇದೆಯಪ್ಪಾ ಕಣ್ಣುಗಳು! ಆದರೆ ಕಿವುಡರು
ಈ ಪಾಟಿ ಕಣ್ಣುಗಳು ಇದೆಯೆಂದು ಗೊತ್ತಪ್ಪಾ ನಮ್ಮ ಸಾಹಿತಿಗಳಿಗೂ, ಆದರೆ ಮಾತ್ರ ಸ್ವಲ್ಪ ಕುರುಡರು

ದೊಡ್ಡ ಸಾಹಿತಿಗಳಿಗೆ ಕುರುಡು ದೊಡ್ಡದು. ಅವರ ಮೂಗಿನ ನೇರ; ಅತ್ತಿತ್ತ ಇಲ್ಲ, ಕಾಣುವುದು ಅವರಿಗೆ
“ಸಾಹಿತ್ಯ ಅಂದ್ರೆ ಏನ್ರೀ?” ಅಂತ ನೀವು ಕೇಳ ಬೇಕಾಗಿಯೇ ಇಲ್ಲ; ತಮ್ಮ ಮೂಗಿನ ನೇರಕ್ಕೆ ನಾಲಿಗೆ
ಸಾಹಿತ್ಯ ರಾಣಿಗೆ ಸಾವಿರಾರು ರೂಪ; ಅವಳ ಬಣ್ಣದ ಸಿರಿ ಸಂಪತ್ತು ನಮ್ನಿಮ್ಮ ಕಣ್ಣಿಗೆ ಕಾಣದು ಪೂರ
ನಾಟ್ಯ ಅವಳದು ಕೋಟಿ; ರಾಗ ತಾಳ ವೈವಿಧ್ಯತೆಯನ್ನು ಅಳೆಯುವರಾರೂ ಇಲ್ಲ; ಹೊಸ ಹೊಸ ಅವತಾರ

ನಾನೀಗ ಬರೆಯುವ ಮುನ್ನ ಅವಳ ಬೇಡಿ ಬೇಡಿ ಕೈಮುಗಿದು ಕರೆದೆ. ಕಾವ್ಯ ಮೋಹಿನಿ ನನಗೆ ಮುತ್ತಿಟ್ಟಳು
“ಯಾಕಮ್ಮಾ ಇಷ್ಟೊಂದು ಒಲವು ಇಂದು ಮಾತ್ರ?” ಎಂದೆ. ನಕ್ಕು ಪ್ರಾಸದ ರೆಕ್ಕೆ ಕಚಕ್ ಮಾಡಿಬಿಟ್ಟಳು!
ಈ ಚೆಲುವೆಗೆ ಬೇಕಪ್ಪಾ ಬೇರೆ ಬೇರೆ ರೂಪ; ಹತ್ತೋ, ಇಪ್ಪತ್ತೋ ವರುಷಕ್ಕೆ ಅವಳ ಗುರುತೇ ಬೇರೆ ಆದೀತು
ಈಚೆ ನಾಡಿನಲೊಂದು; ಹೊರನಾಡಿನಲ್ಲಿ ಎಂತೋ ಆ ಬೀಡಿನವರಿಗೆ ಮಾತ್ರ ಗೊತ್ತಂತೆ. ಆಡಿದಂತೆ ಮಾತು

ಕಂಡಂತೆಯೇ ಕಾಣು; ಮಾಡಬೇಡ ಸುಂದರಿಯ ರೂಪಕ್ಕೆ ಕಾನೂನು. ತಾಳದ ಲಾಳ ಬ್ಯಾಡಪ್ಪ ಬ್ಯಾಡ;
ಕುಣಿಯಲಿ ಅವಳ ಮನ ಬಂದಂತೆಯೇ; ಹೆಜ್ಜೆ ಹಾಕುವುದು ಅವಳಿಗೇ ಬಿಟ್ಟು ಬಿಡಿ, ಕಟ್ಟುವುದಂತೂ ಬ್ಯಾಡ