ಅಮೆರಿಕನ್ನಡ
Amerikannada
ಕೊಲೆ
-ಡಾ. ಬಿ.ಎನ್. ಸತ್ಯನಾರಾಯಣರಾವ್, ಬೆಂಗಳೂರು
ದೇವಯ್ಯ ಚನ್ನಪಟ್ಟಣದಿಂದ ಬೆಂಗಳೂರಿಗೆ ರಾಜಹಂಸ ಬಸ್ಸಿನಲ್ಲಿ ಬಂದಿಳಿದ. ಆಗಲೆ ರಾತ್ರಿ ಎಂಟುವರೆ ಗಂಟೆಯಾಗಿತ್ತು. ತನ್ನ ಕೈಚೀಲಗಳನ್ನೆತ್ತಿಕೊಂಡು ಆಟೋರಿಕ್ಷ ಸ್ಟಾಂಡಿಗೆ ಬಂದು ಕ್ಯೂನಲ್ಲಿ ನಿಂತ. ಪೋಲೀಸಿನವನು ಇನ್ನೂ ಅಲ್ಲೇ ನಿಂತಿದ್ದರಿಂದ ಆಟೋಚಾಲಕರು ಗಿರಾಕಿಗಳ ಮೇಲೆ ತಮ್ಮ ಶೋಷಣೆಯ ಆಟ ಆಡುವ ಹಾಗಿರಲಿಲ್ಲ. ಮೀಟರ್ ಹಾಕಿ ಗಿರಾಕಿ ಕೇಳಿದ ಕಡೆ ಆಟೊ ಓಡಿಸಬೇಕಾಗಿತ್ತು. ಹಾಗಿಲ್ಲದಿದ್ದರೆ ಅನೇಕ ಆಟೊಗಳು ಹನುಮಂತನಗರ ಎಂದ ಕೂಡಲೆ ಕೈ ಅಲ್ಲಾಡಿಸಿ ಮುಂದಕ್ಕೆ ಹೋದ ಮೇಲೆ, ಹನುಮಂತನಗರಕ್ಕೆ ಹೋಗಲು ಒಪ್ಪುವ ಒಂದು ಆಟೊ ಬರುವ ತನಕ ಕಾದಿದ್ದು ಮೀಟರ್ ಮೇಲೆ ಇಷ್ಟು ಅಂತ ಅಂತ ಅವನನ್ನು ಒಪ್ಪಿಸಿ ಹೋಗ ಬೇಕಾಗಿತ್ತು. ಪೋಲೀಸಿನವನು ಇದ್ದಿದ್ದುದನ್ನು ನೋಡಿ ದೇವಯ್ಯನಿಗೆ ಸಧ್ಯ ಆಟೊಚಾಲಕನ ಹತ್ತಿರ ತರಲೆ ತಪ್ಪಿತಲ್ಲ ಎಂದು ನಿರಾಳವೆನಿಸಿತು. ತನ್ನ ಸರದಿ ಬಂದ ಮೇಲೆ ದೇವಯ್ಯ ಗತ್ತಿನಿಂದ ಆಟೊಚಾಲಕನಿಗೆ “ಹನುಮಂತನಗರ ೪ ನೇ ಕ್ರಾಸಿಗೆ ಹೋಗಪ್ಪ.” ಎಂದ. ಆಟೊಚಾಲಕನು ಮಾತಿಲ್ಲದೆ ಮೀಟರ್ ಹಾಕಿ ಹೊರಟು, ಬಸ್ ಸ್ಟಾಂಡಿನಿಂದ ಸ್ವಲ್ಪ ದೂರ ಬಂದ ಮೇಲೆ ಆಟೋ ನಿಲ್ಲಿಸಿದ. ಹಿಂದಕ್ಕೆ ತಿರುಗಿ “ಸ್ವಾಮಿ ನಿಮ್ಮನ್ನು ಮೆಜೆಸ್ಟಿಕ್ ಸರ್ಕಲ್ನಲ್ಲಿ ಬಿಡ್ತೀನಿ. ನನಗೆ ಮಿನಿಮಮ್ ಕೊಟ್ಟು, ಬೇರೆ ಆಟೋನೊ ಬಸ್ಸನ್ನೋ ಹಿಡೀರಿ.” ಎಂದ. ದೇವಯ್ಯನಿಗೆ ನಖಶಿಖಾಂತ ಕೋಪ ಉಕ್ಕಿತು. ಆಟೋಚಾಲಕ ಇನ್ನೂ ಇಪ್ಪತ್ತು ವರ್ಷದ ತರುಣ. ಗಟ್ಟಿಮುಟ್ಟಾಗಿದ್ದ. ದೇವಯ್ಯನದು ನಡುವಯಸ್ಸಿನ ಬಡಕಲು ಶರೀರ. ಆದರೂ ಹೆದರದೆ; “ಏನಯ್ಯಾ, ಅಲ್ಲಿ ಪೋಲೀಸಿನವನ ಮುಂದೆ ಏನೂ ಹೇಳದೆ, ಇಲ್ಲಿ ದಾರೀಲಿ ನಿಲ್ಲಿಸಿ ತರಲೆ ತೆಗೆದೆಯಲ್ಲ. ನಾನು ಯಾರು ಗೊತ್ತೋ.” ಎಂದು ಹುಸಿ ಬೆದರಿಕೆ ಹಾಕಿದ.
“ನೀವ್ಯಾರಾದರೇನು ಸ್ವಾಮಿ. ನಾನು ಹನುಮಂತನಗರಕ್ಕೆ ಬರೋದಿಲ್ಲ.”
“ಯಾಕ್‌ಬರೋದಿಲ್ಲ?”
“ನಂಗೆ ಗಿಟ್ಟೊಲ್ಲ ಸ್ವಾಮಿ. ಪೋಲೀಸಿನವರೇನೋ ಹೇಳ್ತಾರೆ- ಗಿರಾಕಿ ಹೇಳಿದ್ಕಡೆ ಕರ್ಕೊಂಡ್‌ಹೋಗು ಅಂತ. ಅವರ್ಗೇನ್ಸ್ವಾಮಿ ಸಂಬಳ ಲಂಚ ಎಲ್ಲ ಸಿಕ್ಕುತ್ತೆ. ಅವಮಾತ್ಕೇಳಿದ್ರೆ ನಾನ್ಬಿಕ್ಷೆ ಎತ್ಬೇಕಾಗುತ್ತೆ ಅಷ್ಟೆ.” ಆಗಲೆ ಒಂಬತ್ತು ಗಂಟೆ ಆಗಿದೆ. ಇನ್ನು ಮಾತಾಡಿ ಪ್ರಯೋಜನವಿಲ್ಲ ಎಂದು ದೇವಯ್ಯ ತಣ್ಣಗಾಗಿ “ಈಗ ನಿನಗೇನು ಕೊಡಬೇಕು, ಹೇಳಪ್ಪ?” “ಸ್ವಾಮಿ ಆಗಲೇ ಒಂಬತ್ತು ಗಂಟೆ ಆಯ್ತು. ಡಬಲ್ ಚಾರ್ಜ್ ಕೊಟ್ರೆ ಬರ್ತೀನಿ.” “ಆಯಿತು ಹೊರಡಪ್ಪ.” ಎಂದ ದೇವಯ್ಯ ನಿರ್ವಾಹವಿಲ್ಲದೆ “ಎಷ್ಟು ವರ್ಷದಿಂದ ಆಟೋ ಓಡಿಸ್ತಿದೀಯ?” “ಈಗೆರಡು ವರ್ಷದಿಂದ.” “ನಿನಗೆಷ್ಟು ವಯಸ್ಸು?” “ಬಡವರ ವಿಷ್ಯ ನಿಮಗ್ಯಾಕ್ಸ್ವಾಮಿ. ನೀವೇನು ನ್ಯೂಸ್ ಪೇಪರ್ ನವರಾ ಅಥ್ವ ಕಥೆ ಬಯೊ ಗೀಳ್ನೋರಾ?” “ನಿನ್ನ ನೋಡಿದರೆ ನನ್ನ ಮಗನ ನೆನಪಾಗತ್ತೆ. ಅದಕ್ಕೆ ಕೇಳಿದೆ. ಆಷ್ಟೆ.” “ನಂಗೆ ಇಪ್ಪತ್ವರ್ಷ ತುಂಬಿ ಇಪ್ಪತ್ತೊಂದ್ನಡಿತಾ ಇದೆ.” “ಅಪ್ಪ, ಅಮ್ಮ...?” “ಇದ್ದಾರೆ. ಅಪ್ಪಾನು ಆಟೋ ಓಡಿಸ್ತಾರೆ. ಅಮ್ಮ ಅವ್ರಿವ್ರ್ಮನೆ ಕೆಲ್ಸಮಾಡಿ ದುಡೀತಾಳೆ. ಒಬ್ಬ ತಮ್ಮ ಇಬ್ರು ತಂಗೀರಿದ್ದಾರೆ. ಇನ್ನೂ ಚಿಕ್ಕವ್ರು. ನಾನು ಶೇಶಾದ್ರಿಪುರಂ ಕಾಲೇಜ್ನಲ್ಲಿ ಬಿ.ಕಾಮ್ ಓದ್ತಾ ಇದೀನಿ. ರಾತ್ರಿ ಹೊತ್ತು ಆಟೊ ಓಡಿಸ್ತೀನಿ.”
ದೇವಯ್ಯನಿಗೆ ಅಯ್ಯೋ ಪಾಪ ಅನ್ನಿಸಿತು. “ಎಷ್ಟು ಕಷ್ಟದಲ್ಲಿದ್ದರೂ ಓದ್ಬೇಕು ಅನ್ನೊ ಛಲ ಇದೆ. ಪರವಾಗಿಲ್ಲ ಮುಂದಕ್ಕೆ ಬರ್ತಾನೆ.” ಏಂದುಕೊಂಡ. ಹನುಮಂತನಗರದಲ್ಲಿ ಅಲ್ಲಿ ಇಲ್ಲಿ ಸ್ವಲ್ಪ ಹುಡುಕಾಡಿದ ಮೇಲೆ ದೇವಯ್ಯ ಹುಡುಕುತ್ತಿದ್ದ ಮನೆ ಸಿಕ್ಕಿತು. ಆಟೊಚಾಲಕನಿಗೆ ಡಬಲ್ ಚಾರ್ಜ್ ಕೊಟ್ಟ, ಮೇಲೆ ಇನ್ನೂ ಹತ್ತು ರೂಪಾಯಿ ಕೊಟ್ಟು “ನೀನು ಓದೋದನ್ಮಾತ್ರ ಬಿಡ ಬೇಡ.” ಎಂದು ಹುರಿದುಂಬಿಸಿ ಕಳಿಸಿದ.
ದೇವಯ್ಯ ಅವನ ಮಿತ್ರ ಸಾಂಬಶಿವನನ್ನು ನೋಡಲು ಬಂದಿದ್ದ. ಸಾಂಬಶಿವ ಹನುಮಂತನಗರದಲ್ಲೇ ಒಂದು ಸಣ್ಣ ಅಂಗಡಿ ಇಟ್ಟಿದ್ದ. ವ್ಯಾಪಾರ ಚೆನ್ನಾಗಿಯೇ ನಡೆದಿದ್ದು, ಹನುಮಂತನಗರದಲ್ಲೇ ಒಂದು ಸೈಟ್ ಕೊಂಡುಕೊಂಡು ಎರಡಂತಸ್ತಿನ ಮನೆ ಕಟ್ಟಿಸಿದ್ದ. ಕೆಳಗಡೆ ಭಾಗವನ್ನು ಬಾಡಿಗೆಗೆ ಕೊಟ್ಟು ತಾನು ಮೇಲೆ ವಾಸವಾಗಿದ್ದ. ಮನೆ ಕಟ್ಟಿದ ಮೇಲೆ ದೇವಯ್ಯ ಮಿತ್ರನ ಮನೆಗೆ ಬಂದಿದ್ದು ಇದೇ ಮೊದಲ ಸಲ. ಗೃಹಪ್ರವೇಶಕ್ಕೆ ಬರಲು ಆಗಿರಲಿಲ್ಲ. ಬೆಂಗಳೂರಿನಲ್ಲಿ ಏನೋ ವ್ಯವಹಾರವಿದ್ದು, ಹಾಗೆಯೇ ಸಾಂಬುವನ್ನು ಮಾತನಾಡಿಸಿ ಸಾಧ್ಯವಾದರೆ ಅಲ್ಲೆ ರಾತ್ರಿ ತಂಗಬಹುದೆಂದು ಲೆಕ್ಕ ಹಾಕಿದ್ದ. ಸಾಂಬು ಮೇಲೆ ವಾಸವಾಗಿದ್ದು ಕೆಳಗಡೆ ಬಾಡಿಗೆಗೆ ಕೊಟ್ಟಿರುವುದು ದೇವಯ್ಯನಿಗೆ ಗೊತ್ತಿಲ್ಲ. ದೇವಯ್ಯ ಬರುವುದು ಸಾಂಬುಗೆ ಗೊತ್ತಿಲ್ಲ. ಮನೆ ಗೇಟನ್ನು ತೆಗೆದು ದೇವಯ್ಯ ನಾಲ್ಕು ಹೆಜ್ಜೆ ನಡೆದು ಮುಂಬಾಗಿಲಿಗೆ ಬಂದ. ರಾತ್ರಿ ಒಂಬತ್ತುಮುಕ್ಕಾಲು ಗಂಟೆಯಾಗಿತ್ತು. ಮುಂಬಾಗಿಲಿನ ದೀಪ ಹಾಕಿರಲಿಲ್ಲ. ಪಕ್ಕದಲ್ಲಿದ್ದ ಕಿಟಕಿಯಿಂದ ಬೆಳಕು ಬರುತ್ತಿದ್ದುದರಿಂದ ‘ಪರವಾಗಿಲ್ಲ ಇನ್ನು ಎದ್ದಿದ್ದಾರೆ’ ಅಂತ ಉತ್ಸುಕನಾಗಿ ದೇವಯ್ಯ ಬಾಗಿಲ ಹತ್ತಿರ ಬಂದು ಕರೆಗಂಟೆಯ ಸ್ವಿಚ್ಚಿಗೆ ತಡಕಾಡಿದ. ಅಷ್ಟರಲ್ಲೆ ಒಳಗಡೆ ಯಾರೋ ಗಟ್ಟಿಯಾಗಿ ಮಾತನಾಡುತ್ತಿದ್ದುದು ಅವನ ಕಿವಿಗೆ ಬಿದ್ದು ಕುತೂಹಲವನ್ನು ಕೆರಳಿಸಿತು.
ದೇವಯ್ಯ ಸ್ವತಃ ಪೋಲೀಸ್ ಅಥವ ಪತ್ತೇದಾರಿ ಕೆಲಸದಲ್ಲಿಲ್ಲದಿದ್ದರೂ ಬಲೇ ಕುತೂಹಲಶಾಲಿ. ಕಾಲೇಜಿನಲ್ಲಿ ಓದುತ್ತಿದ್ದುದು ಬರೀ ಪತ್ತೆದಾರಿ ಕಾದಂಬರಿಗಳನ್ನೇ. ಕೊನನ್‌ಡಾಯಲ್‌ನ ಷೆರ್ಲಾಕ್ ಹೋಮ್ಸ್, ಸ್ಟಾನ್ಲೆ ಗಾರ್ಡ್ನರ್‌ನ ಪೆರ್ರಿಮೇಸನ್, ಹಾರ್ಡಿ ಬಾಯ್ಸ್ ಕಥಾ ಸರಣಿಗಳನ್ನೆಲ್ಲ ಸಂಪೂರ್ಣವಾಗಿ ಓದಿ ಮೆಚ್ಚಿದ್ದ. ಐ.ಪಿ.ಎಸ್ ಮಾಡಿ ಪೋಲೀಸ್ ಆಫೀಸರ್ ಆಗೋ ಕನಸನ್ನೂ ಕಂಡಿದ್ದ. ಆದರೆ ಅದಾವುದೂ ನನಸಾಗದೆ ಉಳಿಯಿತು. ಒಂದು ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದು ಅದರಲ್ಲೇ ತೃಪ್ತಿಪಡಬೇಕಾಗಿತ್ತು. ಆದರೆ ಪತ್ತೆದಾರಿ ಹಂಬಲ ಮಾತ್ರ ಬಿಟ್ಟಿರಲಿಲ್ಲ.
ಆ ಮನೆ ಒಳಗಿಂದ ಒಂದು ಗಂಡು ಮತ್ತು ಒಂದು ಹೆಣ್ಣಿನ ಧ್ವನಿ ಗಟ್ಟಿಯಾಗಿ ಕೇಳಿಸುತ್ತಿತ್ತು. ಗಂಡಿನ ಧ್ವನಿ ಸಾಂಬುವಿನ ಧ್ವನಿಯಾಗಿರಲಿಲ್ಲ. ಇದು ಯಾವುದೋ ತಪ್ಪು ವಿಳಾಸಕ್ಕೆ ಬಂದೆ ಎಂದುಕೊಂಡು ಕರೆ ಗಂಟೆ ಒತ್ತಲು ಅರ್ಧ ನಿಮಿಷ ಅನುಮಾನಿಸಿದ.
“ನೀವು ಕಲಾವತಿಯನ್ನು ಕೊಂದುಬಿಡಿ. ಅದೇ ಇದಕ್ಕೆ ಸರಿಯಾದ ಉಪಾಯ.” ಹೆಣ್ಣು ಧ್ವನಿ. ದೇವಯ್ಯನಿಗೆ ಗಾಭರಿಯಾಯಿತು. ತಕ್ಷಣವೆ ಷೆರ್ಲಾಕ್ ಹೋಮ್ಸ್ ಅವನ ಮೇಲೆ ಅವತರಿಸಿಬಿಟ್ಟ. ಪೂಜಾರಿಗೆ ಮೈ ಮೇಲೆ ದೇವರು ಬರುತ್ತಲ್ಲ ಹಾಗೆ. ದೇವಯ್ಯ ಮೆಲ್ಲಗೆ ಕಿಟಕಿಯಿಂದ ಇಣುಕಿ ನೋಡಿದ. ಒಳಗೆ ಒಂದು ಸಣ್ಣ ಹಜಾರ. ಒಬ್ಬ ಗಂಡಸು ಕಿಟಕಿಗೆ ಬೆನ್ನು ಮಾಡಿಕೊಂಡು ಒಂದು ಸೋಫ ಮೇಲೆ ಕೂತಿದ್ದ. ಅವನ ಕುತ್ತಿಗೆ, ತಲೆಯ ಗಾತ್ರ ನೋಡಿದರೆ ಧಡೂತಿ ಆಸಾಮಿ ಎನ್ನಿಸಿತು. ಆಕಡೆ ಇನ್ನೊಂದು ಕುರ್ಚಿಯಲ್ಲಿ ಕುಳಿತಿದ್ದ ಹೆಂಗಸಿನ ಬಲತೋಳು ಮತ್ತು ಬಲ ಪಾರ್ಶ್ವ ಮಾತ್ರ ಕಾಣಿಸುತ್ತಿತ್ತು. ಆಕೆಯ ತಲೆಗೆ ಅಡ್ಡವಾಗಿ ಒಂದು ದೊಡ್ಡ ಹೂದಾನಿಯಿತ್ತು. ಒಳಗೆ ಅಡಿಗೆ ಮನೆಯಲ್ಲೊ, ಊಟದ ಮನೆಯಲ್ಲೊ ಇನ್ನೊಬ್ಬ ಹೆಂಗಸು ಓಡಾಡುತ್ತಿದ್ದಳು. ಸಾಂಬುವಂತೂ ಅಲ್ಲಿರಲಿಲ್ಲ. ದೇವಯ್ಯ ಮೈಯೆಲ್ಲಾ ಕಿವಿಯಾಗಿ ಆಲಿಸಿದ.
ಗಂಡು ಧ್ವನಿ: “ಅದು ಅಷ್ಟು ಸರಿಯಾಗೋದಿಲ್ಲ ಗೌರಿ. ಇಡೀ ಪ್ಲಾನೇ ಬದಲಾಯಿಸಬೇಕಾಗುತ್ತೆ.”
ಎಲಾ ಇವನ. “ಪ್ಲಾನ್” ಅಂತಾನಲ್ಲ. ಇವಳ ಹೆಸರು ಗೌರಿ ಬದಲು ಕಾಳಿ ಆಗಿರಬೇಕಾಗಿತ್ತು. ಯಾರೋ ಕಲಾವತಿ ಅನ್ನೋಳನ್ನ ಕೊಲೆ ಮಾಡಲು ಅವನನ್ನು ಚಿತಾಯಿಸುತ್ತಿದ್ದಾಳಲ್ಲ! ಅಂದುಕೊಂಡ ಷೆರ್ಲಾಕ್ ಹೋಮ್ಸ್ ಅಲ್ಲ ದೇವಯ್ಯ.
ಹೆಣ್ಣು ಧ್ವನಿ: “ಅದು ಹಾಗಲ್ಲ. ದಿನಕರನ ಜೊತೆ ಕಲಾವತೀನ ಕಳಿಸೊ ಬದಲು ಕಲಾವತಿಯೊಬ್ಳನ್ನೇ ಏನಾದರೂ ನೆವ ಹುಡುಕಿ ಆಗುಂಬೆಗೆ ಕಳಿಸಿ. ಅವಳಿಗೆ ಪ್ರಕೃತಿ ಅಂದರೆ ಹೇಗಿದ್ದರೂ ಇಷ್ಟ. ಘಾಟ್ ಸೆಕ್ಷನ್‌ನಲ್ಲಿ ಒಂದು ಲಾರೀಗೋ, ವ್ಯಾನಿಗೋ ಡಿಕ್ಕಿ ಹೊಡೆಸಿದರೆ ಆಯಿತು. ಒಂದು ಮೂಳೇನೂ ಸಿಕ್ಕುಲ್ಲ.”
ಗಂಡು ಧ್ವನಿ: “ಆಮೇಲೆ ದಿನಕರ್ ಉಳ್ಕೋತಾನಲ್ಲ?”
“ಅವನನ್ನ ಉಳಿಸೋದು. ಅವನು ಶಾಕ್ ಆಗಿ ಡಿಪ್ರೆಸ್ ಆಗ್ತಾನೆ. ಲಕ್ಷ್ಮಿ ಮಾಡೋ ಶುಶ್ರೂಷೆಯಿಂದ ಸರಿಯಾಗ್ತಾನೆ. ಹಾಗೇನೆ ಅವನ ಮನಸ್ಸು ಲಕ್ಷ್ಮಿ ಕಡೆ ವಾಲುತ್ತೆ. ಲಕ್ಷ್ಮಿಗೆ ಇರೋದು ಅಂದ್ರೆ ಅವಳ ಅಜ್ಜಿ ಒಬ್ರೆ ತಾನೆ. ಅಜ್ಜಿ ಹೆಸರಲ್ಲೇ ಎಲ್ಲಾ ಆಸ್ತಿ ಇರೋದು. ವೃದ್ಧಾಶ್ರಮದಲ್ಲಿರೋ ಅಜ್ಜಿ ಜೀವ ಇನ್ನೇನು ಈಗಲೋ ಆಗಲೋ ಅಂತ ಓಲಾಡ್ತಾ ಇದೆ. ದಿನಕರ್ ಹೇಗಿದ್ರೂ ಅನಾಥ. ಆಮೇಲೆ ನಿಧಾನವಾಗಿ, ಅವರ ಮದುವೆ ಕುದುರ್ಸಿ, ಆಸ್ತಿ ಅವರ ಕೈಗೆ ಬಂದ ಮೇಲೆ ಇಬ್ಬರನ್ನೂ ಮುಗಿಸಿದರೆ ಆಯ್ತು. ಆಮೇಲೆ ಆಸ್ತಿಯೆಲ್ಲ ಅವನ ಚಿಕ್ಕಪ್ಪನಿಗೇ ಸೇರಬೇಕಲ್ಲವೇ?”
ದೇವಯ್ಯ ಷೆರ್ಲಾಕ್ ಹೋಮ್ಸ್ನ ಸ್ಫೂರ್ತಿಯಿಂದ ತಕ್ಷಣವೇ ಯೋಚಿಸಿ ಊಹಿಸಿಬಿಟ್ಟ-ಇವರ ಪ್ಲಾನ್ ಏನಿರಬಹುದು ಎಂದು. ಧಡೂತಿ ವ್ಯಕ್ತಿಯ ಒಬ್ಬನೇ ಅಣ್ಣನ ಒಬ್ಬನೇ ಮಗ ದಿನಕರ ಇರಬಹುದು. ಅವನ ಪ್ರೇಯಸಿ ಕಲಾವತೀನ್ನ ಕೊಲ್ಲಲು ಇವರು ಹೊಂಚು ಹಾಕಿದ್ದಾರೆ. ಲಕ್ಷ್ಮಿ ಎಂಬ ಶ್ರೀಮಂತರ ಮನೆ ಹೆಣ್ಣನ್ನು ದಿನಕರನ ಜೊತೆ ಆಸ್ತಿ ಆಸೆಗೋಸ್ಕರ ಮದುವೆ ಮಾಡಿಸಲು ಧಡೂತಿ ಪ್ರಯತ್ನಿಸಿ ವಿಫಲನಾಗಿದ್ದಾನೆ. ದಿನಕರ ಕಲಾವತೀನಲ್ಲದೆ ಬೇರೆ ಯಾರನ್ನೂ ಮದುವೆಯಾಗೊಲ್ಲಾ ಅಂತ ಹಟ ಹಿಡಿದಿದ್ದಾನೆ. ದಿನಕರನಿಗೆ ಲಕ್ಷ್ಮಿ ಜೊತೆ ಮದುವೆ ಮಾಡಿಸಿ ಆಮೇಲೆ ಅವರನ್ನೂ ಮುಗಿಸಿ ಆಸ್ತಿ ಹೊಡೆಯೋದೇ ಇವರ ತಂತ್ರ. ವ್ಯವಸ್ಥಿತವಾಗಿ, ನಿಧಾನವಾಗಿ, ಸಹಜವಾಗಿ ಕಾಣುವಂತೆ ಮಾಡಲು ಈ ತಂತ್ರ ಮಾಡಿದ್ದಾಎ. ಷೆರ್ಲಾಕ್ ಹೋಮ್ಸ್ ಕೂಡ ಇಷ್ಟು ದೂರ ಯೋಚಿಸಿರಲಾರ. ದೇವಯ್ಯ ತನ್ನ ಪತ್ತೇದಾರಿ ಶಕ್ತಿಯ ಬಗ್ಗೆ ತಾನೇ ಹೆಮ್ಮೆಪಟ್ಟ. ಆಗಲಿ ನೋಡೋಣ. ನಾನು ಈಗಲೇ ಪೋಲೀಸ್ ಸ್ಟೇಶನ್‌ಗೆ ಹೋಗಿ ಹೇಳಿ, ಒಂದು ಹೆಣ್ಣಿನ ಜೀವ ಕಾಪಾಡುತ್ತೇನೆ. ಆದರೆ ಇವರು ಅಷ್ಟರಲ್ಲೆ ತಪ್ಪಿಸಿಕೊಂಡರೆ.?
ದೇವಯ್ಯ ಮನೆಯ ಮುಂಬಾಗಿಲು ಮತ್ತು ಹಿಂಬಾಗಿಲುಗಳ ಪ್ಯಾಡ್ ಲಾಕ್ ಹಾಕಿ, ಒಂದು ಕಡ್ಡಿ ಸಿಕ್ಕಿಸಿ, ಪೋಲೀಸ್ ಸ್ಟೇಶನ್ ಹುಡುಕಿಕೊಂಡು ಹೊರಟ. ಅವನ ಹುಮ್ಮಸ್ಸಿನಲ್ಲಿ ಅವನು ಸಾಂಬುವನ್ನು ನೋಡಲು ಬಂದ ವಿಷಯವನ್ನೇ ಮರೆತಿದ್ದ. ಹತ್ತೇ ನಿಮಿಷಗಳಲ್ಲಿ ಪೋಲೀಸ್ ಸ್ಟೇಶನ್ ತಲುಪಿ. ಪೋಲೀಸ್ ಇನ್‌ಸ್ಪೆಕ್ಟರ್‌ಗೆ ಈ ಕೊಲೆ ಪ್ಲಾಟ್‌ನ ಬಣ್ಣ ಬಣ್ಣವಾಗಿ ವಿವರಿಸಿದ. ಅವರು ಇವನ ಊಹೆಯನ್ನು ನಂಬದಿದ್ದರೂ ಅವನ ಕಾಟ ತಡೆಯಲಾರದೆ ಒಬ್ಬ ಕಾನ್ಸ್ಟೇಬಲ್‌ನ ತನಿಖೆಮಾಡಲು ಕಳಿಸಿದರು. ಮತ್ತೆ ಮನೆ ಹತ್ತಿರ ಬಂದಾಗ ಅಲ್ಲಿ ಕೋಲಾಹಲವಾಗುತ್ತಿತ್ತು. ಸಾಂಬು ಧಡೂತಿ ವ್ಯಕ್ತಿಗೆ ಸಮಾಧಾನ ಹೇಳುತ್ತಿದ್ದ.
“ನೀವು ಬರದೆ ಇದ್ದಿದ್ದರೆ, ನಾವು ಹೊರಗೆ ಬರೋ ಹಾಗೇ ಇರಲಿಲ್ಲ. ಯಾವನೋ ಪಾಪಿ, ಬಾಗಿಲ ಚಿಲಕ ಹಾಕಿ ಹೋಗಿದ್ದಾನೆ. ಯಾರೋ ನಮ್ಮನ್ನು ಕೂಡಿ ಹಾಕಿ ಮನೆಗೆ ಬೆಂಕಿ ಹಚ್ಚಿ ನಮ್ಮನ್ನು ಕೊಲೆ ಮಾಡಲು ನೋಡಿದ್ದರು ಅಂತ ಕಾಣುತ್ತೆ.” ಧಡೂತಿ ಕಿರುಚುತ್ತಿದ್ದ. ಅವನ ಜೊತೆ ಇದ್ದ ಇಬ್ಬರು ಹೆಂಗಸರು ಹೆದರಿ ನಡುಗುತ್ತಿದ್ದರು.
ದೇವಯ್ಯನ ಜೊತೆ ಬಂದ ಕಾನ್ಸ್ಟೇಬಲ್ ಕೇಳಿದ:
“ದೇವಯ್ಯ , ಯಾಈ ನೀವು ಹೇಳಿದ ವ್ಯಕ್ತಿಗಳು?”
“ಈ ಮೂವರು.” ಎಂದು ದೇವಯ್ಯ ತೋರಿಸಿದ.
“ನಿಮ್ಮ ಮೇಲೆ ಕಂಪ್ಲೈಂಟ್ ಬಂದಿದೆ. ನಡೀರಿ ಪೋಲೀಸ್ ಸ್ಟೇಶನ್‌ಗೆ. ನಮ್ಮ ಎಸ್. ಐ ಎಂಕ್ವೈರಿ ಮಾಡ್ಬೇಕು.”
“ಯಾಕಪ್ಪಾ ನಾವೇನು ತಪ್ಪು ಮಾಡಿದ್ದೀವಿ.” ಧಡೂತಿ
“ಕೊಲೇಗೆ ಪ್ಲಾನ್ ಹಾಕೋದು ತಪ್ಪಲ್ವೇನ್ರಿ. ಕ್ರಿಮಿನಲ್ ಕೇಸಾಗುತ್ತೆ.”
“ಏನ್ರೀ, ನೀವು ಹೇಳ್ತಿರೋದು. ನಾಲ್ಗೆ ಬಿಗಿ ಹಿಡಿದು ಮಾತಾಡಿ. ನಿಮ್ಮ ಹತ್ತಿರ ಏನು ದಾಖಲೆ ಇದೇರಿ?”
“ಈ ದೇವಯ್ಯನೋರೇ ನಿಮ್ಮ ಮೇಲೆ ಕಂಪ್ಲೈಂಟ್ ಕೊಟ್ಟಿದ್ದಾರೆ. ಕಲಾವತಿ ಎನ್ನೋರ ಕೊಲೆ ಪ್ಲಾನ್ ಬಗ್ಗೆ ಮಾತಾಡ್ತಿದ್ದಿದ್ದನ್ನ ಅವರು ಕಿವಿಯಾರೆ ಕೇಳಿ, ನಿಮ್ಮನ್ನ ತಪ್ಪಿಸ್ಕೊಳ್ದ್‌ಹಾಗೆ ಕೂಡ್‌ಹಾಕಿ ಪೋಲೀಸ್ ಸ್ಟೇಶನ್‌ಗೆ ಓಡ್ಬಂದು ಕಂಪ್ಲೈಂಟ್ ಕೊಟ್ಟಿದ್ದಾರೆ.”
ಒಂದು ನಿಮಿಷ ಯಾರಿಗೂ ಏನೂ ಅರ್ಥವಾಗಲಿಲ್ಲ. ಸಾಂಬು “ದೇವೂ ನೀನ್ಯಾವಾಗ್ಬಂದೆ. ಇದೆಲ್ಲ ಏನ್ಗಲಾಟೆ. ಪೋಲೀಸ್ ಸ್ಟೇಶನ್’ಗೆ ಯಾಕೆ ಹೋಗಿದ್ದೆ” ಎಂದ.
ಧಡೂತಿ ಮತ್ತು ಇಬ್ಬರು ಹೆಂಗಸರು ಗಹಗಹಿಸಿ ಹೊಟ್ಟೆ ಹುಣ್ಣಾಗುವಂತೆ ನಕ್ಕರು. ಕಾನ್ಸ್ಟೇಬಲ್ ರೇಗಿ “ಏನೀ ಇದು ಮಷ್ಕಿರಿ ನಿಮ್ದು. ಪೋಲೀಸ್ ಸ್ಟೇಶನ್’ಗೆ ನೀವೇ ನಡೀತೀರೋ ಇಲ್ಲ ಎಳಕೊಂಡ್‌ಹೋಗ್ಲೋ” ಅಂದ. ಸಾಂಬೂಗು ಪರಿಸ್ಥಿತಿ ಅರ್ಥವಾಗಿ ನಗಲು ಶುರು ಮಾಡಿದ. ಅಷ್ಟು ಹೊತ್ತಿಗೆ ಸಾಂಬು ಹೆಂಡತಿ, ಮಕ್ಕಳು, ಅಕ್ಕ ಪಕ್ಕದವರೆಲ್ಲ ಗಲಾಟೆ ಕೇಳಿ ಹೊರಗೆ ಬಂದು ನಿಂತಿದ್ದರು.

ಸಾಂಬು ಹೇಳಿದ “ನಾನು ಹತ್ತುವರೆಗೆ ಮನೆಗೆ ಬಂದೆ. ಇವರು ರಾಮಕೃಷ್ಣ ಅಂತ. ಇವರು ಅವರ ಹೆಂಡತಿ, ಅವರು ಇವರ ತಂಗಿ. ಈ ಮನೇಲಿ ಬಾಡಿಗೆಗಿದ್ದಾರೆ. ಬಾಗಿಲಿಗೆ ಯಾರೋ ಚಿಲಕ ಹಾಕಿ ಹೋಗಿದ್ದರಿಂದ ಹೊರಗೆ ಬರಲಾಗದೆ, ದಬ ದಬ ಅಂತ ಬಾಗಿಲು ಬಡೀತಿದ್ರು. ಅವರ ತಂಗೀನ ಅವರು ಅವಳ ಮನೇಗೆ ತಲುಪಿಸಬೇಕಾಗಿತ್ತು. ಆ ಸಮಯಕ್ಕೆ ಸರಿಯಾಗಿ ನಾನು ಬಂದೆ. ಬಾಗಿಲು ತೆಗೆದೆ. ಅವರು ಕೋಪದಿಂದ ಕಿರಿಚ್ತಾ ಇದ್ರು. ಅಷ್ಟರಲ್ಲಿ ನೀವು ಬಂದಿರಿ.”
“ಹಾಗಾದರೆ ಕೊಲೆ ಪ್ಲಾನ್?”
“ಕಾನ್ಸ್ಟೇಬಲ್ ಅವರೇ, ಒಂದೇ ಒಂದು ನಿಮಿಷ ಒಳಗೆ ಬನ್ನಿ. ನಿಮಗೇ ಎಲ್ಲ ಅರ್ಥವಾಗುತ್ತೆ” ಎಂದು ಧಡೂತಿ ಒಳಗೆ ಕರೆದುಕೊಂಡು ಹೋದ.
ರಾಮಕೃಷ್ಣ ಹೇಳಿದರು: “ನಾನೊಬ್ಬ ಕಿರಿ ಸಾಹಿತಿ. ಕಥೆ, ಕಾದಂಬರಿ ಬರೆಯೋ ಗೀಳಿದೆ. ಈಗ ಒಂದು ಕಾದಂಬರಿ ಬರೀತಿದ್ದೀನಿ. ನಾವು ಮಾತಾಡುತ್ತಿದ್ದುದೆಲ್ಲ ಈ ಕಾದಂಬರಿಯ ಪಾತ್ರಗಳ ವಿಷಯ. ಕಥೆಗೆ ಯಾವ ರೀತಿ ತಿರುವು ಕೊಟ್ಟರೆ ಉತ್ತಮ ಅಂತ ನನ್ನ ಹೆಂಡತಿ, ತಂಗಿ ಸಲಹೆ ಕೊಡುತ್ತಿದ್ದರು. ನನ್ನ ತಂಗಿ ’ಕಲಾವತಿ ಅನ್ನೋ ಪಾತ್ರವನ್ನು ಆಕ್ಸಿಡೆಂಟ್ನಲ್ಲಿ ಕೊಲ್ಲಿಸಿದರೆ ಉತ್ತಮ ಅಂತ ಹೇಳ್ತಾ ಇದ್ಳು, ಅಷ್ಟೆ” ಎಂದು ಕಾದಂಬರಿಯ ಹಸ್ತಪ್ರತಿಯನ್ನು ತೋರಿಸಿದರು.
“ಹೌದು. ಇವರು ಅನೇಕ ಕಾದಂಬರಿಗಳನ್ನು ಬರೆದಿದ್ದಾರೆ.” ಸಾಂಬು ಅವರನ್ನು ಸಮರ್ಥಿಸಿದ. ದೇವಯ್ಯನ ಷೆರ್ಲಾಕ್ ಹೋಮ್ಸ್ ಯಾವಾಗಲೋ ಓಡಿಹೋಗಿದ್ದ. ಸಪ್ಪೆ ಮುಖದಿಂದ ದೇವಯ್ಯ ನಡೆದಿದ್ದನ್ನೆಲ್ಲಾ ಹೇಳಿ “ಚಿಲಕ ಹಾಕಿದ ಪಾಪಿ ನಾನೇ. ಕ್ಷಮಿಸಿ.” ಎಂದ. ಎಲ್ಲರೂ ಹಾರ್ದಿಕವಾಗಿ ನಕ್ಕರು. ಕಾನ್ಸ್ಟೇಬಲ್ ಹೊರತು. “ನಿಮಗೆಲ್ಲ ಚೆಲ್ಲಾಟ, ನಮಗೆ ತಲೆನೋವು. ಇನ್ನು ಮೇಲೆ ಹುಷಾರಾಗಿರಿ, ಇಲ್ಲದಿದ್ದರೆ ನಿಮ್ಮ ಮೇಲೆ ಸುಳ್ಳು ಆಪಾದನೆ ಮಾಡಿದ ಕೇಸ್ ಹಾಕ ಬೇಕಾಗುತ್ತೆ” ಕಾನ್ಸ್ಟೇಬಲ್ ಗದರಿಸಿದ. ಅವನ ಕೈಗೆ ದೇವಯ್ಯ ಇಪ್ಪತ್ತು ರೂಪಾಯಿ ಹಾಕಿದ ಮೇಲೆ ಪ್ರಸನ್ನನಾಗಿ ಹೊರಟು ಹೋದ.
“ಏ ದೇವೂ, ಏನೋ ನಿನ್ನ ಅವಾಂತರ. ಒಂದು ಫೋನ್ ಕಾಲ್ ಮಾಡೋಕ್ಕೇನೋ ನಿನಗೆ. ಹೋಗಲಿ ಮೇಲೆ ಬಾ. ಊಟ ಮಾಡೋಣ. ನಾವಿರೋದು ಮೇಲ್ಗಡೆ. ಕೆಳಗೆ ಇವರಿಗೆ ಬಾಡಿಗೆಗೆ ಕೊಟ್ಟಿದ್ದೇವೆ.” ಸಾಂಬು ಹೇಳಿದ. ದೇವಯ್ಯ ಒಂದು ನಿಮಿಷ ತಾಳು ಎಂದು ಹೇಳಿ “ಕ್ಷಮಿಸಿ ರಾಮಕೃಷ್ಣ ಅವರೆ. ದೊಡ್ಡ ಅಭಾಸ ಮಾಡಿ ನಿಮಗೆ ತೊಂದರೆ ಕೊಟ್ಟೆ.”
ರಾಮಕೃಷ್ಣ “ಇಲ್ಲ. ನೀವೊಂದು ಒಳ್ಳೆ ಅನುಭವವನ್ನೇ ಕೊಟ್ಟಿರಿ. ಇದರ ಮೇಲೂ ಒಂದು ಕಥೆ ಬರೀತೀನಿ ನೋಡಿ.” ಎಂದರು ಸಾಹಿತಿ ಮಹಾಶಯರು.