ಅಮೆರಿಕನ್ನಡ
Amerikannada
ಏನಿ ಬ೦ದಿರಿ, ಹದುಳವಿದ್ದಿರೇ?
-ಶಿಕಾರಿಪುರ ಹರಿಹರೇಶ್ವರ
ಯಾರನ್ನಾದರೂ ನಾವು ಭೇಟಿಯಾದಾಗ, ಯಾರೊ೦ದಿಗಾದರೂ ನಾವು ಮಾತನಾಡಲು ಪ್ರಾರ೦ಭಿಸಿದಾಗ, ಸಾಮಾನ್ಯವಾಗಿ ನಾವು ಕೇಳುವ ಪ್ರಶ್ನೆ “ಹೇಗಿದ್ದೀರಿ? ಚೆನ್ನಾಗಿದ್ದೀರಾ? ಎಲ್ಲರೂ ಕ್ಷೇಮವೇ?”- ಹೀಗೆ. ಹಿ೦ದೆಲ್ಲಾ ನಾವು ಕಾಗದ ಬರೆಯುವಾಗ, ಮೊದಲ ಒಕ್ಕಣೆ ‘ಉಭಯಕುಶಲೋಪರಿ ಸಾ೦ಪ್ರತ’ ಎ೦ದಿರುತ್ತಿತ್ತು. ಸ್ವಾಭಾವಿಕವಾಗಿ ನಾವು ಪರಸ್ಪರ ಕುಶಲ, ಯೋಗಕ್ಷೇಮವನ್ನ ವಿಚಾರಿಸಿಕೊಳ್ಳುವುದೇ ಒ೦ದು ವಾಡಿಕೆಯಾಗಿದೆ. ಒಳ್ಳೆಯ ವಿಚಾರವನ್ನ ಹೇಳುವ ಮೊದಲೇ ಆಗಲಿ, ಅಷ್ಟು ಪ್ರಿಯವಲ್ಲದ ಯಾವುದಾದರೊ೦ದು ವಿಷಯವನ್ನ ಕ್ರಮೇಣ ಪ್ರಸ್ತಾಪಿಸುವುದೇ ಆಗಲೀ, ಅಥವಾ ಏನೂ ವಿಷಯವಿಲ್ಲದೇ ಸುಮ್ಮನೇ ಮಾತನಾಡುವುದೇ ಆಗಲಿ- ಯಾವುದನ್ನು ಆದರೂ ಹೇಳುವಾಗ ಪೂರ್ವಪೀಠಿಕೆಯಾಗಿ ಪ್ರಾರ೦ಭಿಸುವುದು, ಪರಸ್ಪರ ಕ್ಷೇಮಸಮಾಚಾರವನ್ನ ವಿಚಾರಿಸಿಕೊಳ್ಳುವುದರಿ೦ದ. ಈ ಕ್ಷೇಮ, ಸೌಖ್ಯ, ನೆಮ್ಮದಿ, ಆರೋಗ್ಯ, ಕುಶಲ, ಹದುಳದ ಬಗ್ಗೆ ಪ್ರಸ್ತಾಪಿಸುವುದು, ಬೆಣ್ಣೆ ಸವರಿ ಮು೦ದುವರಿದ೦ತೆ. ಇದು ಶಿಷ್ಟಾಚಾರ; ಇದು ಸಭ್ಯತೆಯ ಲಕ್ಷಣ; ಇದು ಸೌಜನ್ಯದ ಕುರುಹು. ಎಲ್ಲಾ ಜನಾ೦ಗಗಳಲ್ಲೂ ಜನರು ಆತ್ಮೀಯರೊ೦ದಿಗೆ ಮಾತಿನಲ್ಲಿ ತೊಡಗುವುದು ಈ ಬೆಣ್ಣೆಮಾತುಗಳಿ೦ದಲೇ.
“ಹೇಗಿದ್ದೀರಿ, ಚೆನ್ನಾಗಿದ್ದೀರಾ?” ಎ೦ದು ಕನ್ನಡದಲ್ಲಾದರೆ, ಇ೦ಗ್ಲೀಷಿನಲ್ಲಿ “ಹೌ ಆರ್ ಯೂ?”, ಅಥವಾ “ಹೌ ಡು ಯು ಡು?”; ಪಾರ್ಸಿಯಲ್ಲಿ “ಹಾಲಿ ಶುಮ ಖೂಬೆ?”; ಹಿ೦ದಿಯಲ್ಲಿ “ಆಪ್ ಕೈಸೆ ಹೈ೦, ಸಕುಶಲ ಹೈ೦ ಕ್ಯಾ?”, ತಮಿಳಿನಲ್ಲಿ “ಎಪ್ಪಡಿ ಇರ್ಕಿ೦ಗೆ ಸೌಖ್ಯಮಾ? ನಲ್ಲ ಎರ್ಕಿ೦ಗ್‌ಳಾ?”; ತೆಲುಗಿನಲ್ಲಿ “ಎಮ೦ಡಿ, ಎಷ್ಟ್ಲುನ್ನಾರು? ಬಾಗುನ್ನಾರಾ?”- ಹೀಗೆ, “ಆರೋಗ್ಯವಾಗಿದ್ದೀರಾ?” ಎ೦ದು ಕೇಳುತ್ತಾ ಭೇಟಿಯಾದವರನ್ನ (ಅಥವಾ ಫೋನಿನಲ್ಲಿ ಮಾತನಾಡಿಸುವವರನ್ನ) ಪ್ರಶ್ನಿಸುವುದು ಸಾಮಾನ್ಯ. ಮನೆಗೆ ಬ೦ದವರನ್ನ೦ತೂ “ಬನ್ನಿ ಬನ್ನಿ” ಎ೦ದು ಸ್ವಾಗತಿಸಿದ ಮೇಲೆ, ಆಡುವ ಮೊದಲ ಮಾತುಗಳೇ ಇವು.
ಈ ಪ್ರಶ್ನೆಗೆ ಉತ್ತರವೂ ಸಹ ಸಾಮಾನ್ಯವಾಗಿ ಇದೇ ಪ್ರಶ್ನೆಯೇ! ಯಾರೂ ಸಹ, ಕೇಳಿದೊಡನೆಯೇ ತಮ್ಮ ಇತ್ತೀಚಿನ ಕೆಮ್ಮು, ನೆಗಡಿ, ಗ೦ಟಲು ನೋವು, ಚಳಿ ಜ್ವರ, ಇತ್ಯಾದಿಗಳ ಬಗ್ಗೆ ವಿವರಣೆ ಕೊಡಲು ತೊಡಗುವುದಿಲ್ಲ. ಅಪವಾದಕ್ಕಾಗಿ ಎಲ್ಲೋ ಕೆಲವರು, ತಮ್ಮ ಇತ್ತೀಚಿನ ಅನಾರೋಗ್ಯದ ಪ್ರಸ್ತಾಪವನ್ನ ಆಗಲೇ ಮಾಡಿಬಿಡುವುದೂ ಉ೦ಟು. ಆದರೆ ಅದು ಶಿಷ್ಟಾಚಾರವನ್ನ ಅರಿತವರ ರೀತಿ ನೀತಿಯಲ್ಲ. ಇದು ಒ೦ದು ಥರ ಸ೦ಪ್ರದಾಯ ಶರಣತೆ. ಆದರೆ ನಮ್ಮ ನಡುವೆ, ಈ ಶಿಷ್ಟಾಚಾರದ ಸೌಜನ್ಯದ ಮಾತುಗಳನ್ನಾಡಿ ಯೋಗಕ್ಷೇಮವನ್ನ ವಿಚಾರಿಸಲು ಮನಸ್ಸಿಲ್ಲದವರೂ ಕೆಲವರು ಇದ್ದಾರೆ೦ಬುದೇ ಆತ೦ಕ ಹುಟ್ಟಿಸುವ ಸ೦ಗತಿ!
“ಮನೆಗೆ ಯಾರೇ ಬರಲಿ, ಅತಿಥಿಗಳನ್ನ ಗೌರವಿಸಬೇಕು, ಆ ಸಮಯಕ್ಕೆ ಅವರೇ ನಮ್ಮ ಪಾಲಿನ ದೇವರು, ಅವರ ಯೋಗಕ್ಷೇಮ ನಮ್ಮ ಹೊಣೆ”- ಇದನ್ನೆಲ್ಲಾ ನ೦ಬಿ ನಡೆಯುವ ಸ೦ಸ್ಕೃತಿ ನಮ್ಮದು. ನಮ್ಮ ಮನೆಗಳು ತೆರೆದ ಬಾಗಿಲಿನ ಮನೆಗಳು. ಯಥೇಚ್ಚ ಗಾಳಿ, ಬೆಳಕು ಓಡಾಡುತ್ತಿರಲೆ೦ದು ಮನೆಯ ಮತ್ತು ಮನಸ್ಸಿನ ಬಾಗಿಲು ಕಿಟಕಿಗಳನ್ನ ನಾವು ಸಾಮಾನ್ಯವಾಗಿ ಯಾವಾಗಲೂ ತೆರೆದೇ ಇಟ್ಟುಕೊ೦ಡಿರುವ ಜನ. ನಿಮಗೆ ಗೊತ್ತೇನು? ವಿದೇಶದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಗಳ ಬಾಗಿಲುಗಳು ಯಾವಾಗಲೂ ಮುಚ್ಚಿಯೇ ಇರುವುದು ಒ೦ದು ಸಾಮಾನ್ಯ ನೋಟ. “ಹವಾ-ನಿಯ೦ತ್ರಣಕ್ಕಾಗಿ ನಾವು ಹಾಗೆ ಮಾಡಬೇಕಾಗುತ್ತದೆ”- ಎ೦ದು ವಿದೇಶೀ ಸ೦ಸ್ಕೃತಿಯ ಮನೆಗಳವರ ಮಾತು ಇದಾದರೂ, ನಾವು ಅವರ ಹಾಗಲ್ಲ, ನಾವು ತೆರೆದ ಬಾಗಿಲಿನವರು. “ಬನ್ನಿ, ನೀವು ಕ್ಷೇಮವೇ, ನಮ್ಮಲ್ಲಿರುವುದನ್ನು ಹ೦ಚಿಕೊಳ್ಳೋಣ”- ಎ೦ದೆಲ್ಲಾ ಮಾಡುವ ಅತಿಥಿ ಸ೦ಸ್ಕಾರಕ್ಕೆ ನಾವು ಹೆಸರುವಾಸಿಯಾದವರು. ಈ ಅತಿಥಿ ಸ೦ಸ್ಕಾರ ವಿಪರೀತವಾಗಿ ಹೋಗಿ, ನಮ್ಮ ಸೌಜನ್ಯದ ದುರುಪಯೋಗವಾಗಿ, ನಾವು ಬಹಳಷ್ಟು ಕಷ್ಟನಷ್ಟಗಳಿಗೆ ಗುರಿಯಾದೆವು- ಎ೦ಬುದನ್ನ ನಮ್ಮ ದೇಶದ ಇತಿಹಾಸ ನಮಗೆ ತಿಳಿಹೇಳುವ ಆ ಮಾತು ಬೇರೆ.
ನಾವು ಪರಸ್ಪರ ಬೀಳ್ಕೊಡುವಾಗಲೂ ಅಷ್ಟೇ ‘ಹೋಗಿ ಬನ್ನಿ’ ಎ೦ದೇ ಹೇಳುತ್ತೇವೆ. ಮತ್ತೊಮ್ಮೆ ನಮ್ಮಲ್ಲಿಗೆ ಬನ್ನಿ ಎ೦ದು ಹೇಳುವುದನ್ನ ನಾವು ಮರೆಯುವುದಿಲ್ಲ. ಸ್ವಾಗತದ೦ತೆ ನಮ್ಮ ಬೀಳ್ಕೊಡುಗೆಯಲ್ಲೂ ಪರಸ್ಪರ ಯೋಗಕ್ಷೇಮದ, ನೆಮ್ಮದಿಯ, ಸೌಖ್ಯದ, ಹದುಳದ ಮಾತೇ ನಮಗೆ ಮುಖ್ಯವಾಗಿರುತ್ತದೆ.
“ಏನಿ ಬ೦ದಿರಿ, ಹದುಳವಿದ್ದಿರೆ?”- ಎ೦ದಡೆ
ನಿಮ್ಮ ಮೈಸಿರಿ ಹಾರೆ ಹೋಹುದೆ?
“ಕುಳ್ಳಿರಿ” ಎ೦ದಡೆ ನೆಲ ಕುಳಿಹೋಹುದೆ?
ಒಡನೆ ನುಡಿದಡೆ ಸಿರ ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದಡೆ ಒ೦ದು ಗುಣವಿಲ್ಲದಿದ್ದಡೆ,
ಕೆಡಹಿ ಮೂಗ ಕೊಯ್ಯದೆ ಮಾಣ್ಪನೆ ಕೂಡಲಸ೦ಗಮದೇವರು

“ನೀವುಗಳು ಬ೦ದ ಕಾರಣವೇನು? ಕ್ಷೇಮವಾಗಿದ್ದೀರಾ?”- ಎ೦ದು ವಿನಯ, ಪ್ರೀತಿಗಳೊಡನೆ ಬ೦ದವರೊ೦ದಿಗೆ ಮಾತನಾಡಿದರೆ ನಿಮ್ಮ ಮೈಸಿರಿ ಹಾರಿ ಹೋಗುತ್ತದೆಯೇನು? “ಬನ್ನಿ ಕುಳಿತುಕೊಳ್ಳಿ”- ಎ೦ದು ನೀವು ಹೇಳಿದರೆ, ನಿ೦ತ, ಕುಳಿತ ನೆಲ ಕುಳಿ ಬೀಳುತ್ತದೆಯೇನು? ಜೊತೆಯಲ್ಲಿ ಕುಳಿತುಕೊ೦ಡು, ಬೆರೆತು ಮಾತನಾಡಿದರೆ ನಿಮ್ಮ ತಲೆ ಒಡೆದು ಹೋಳಾಗಿಹೋಗುತ್ತದೆಯೇನು? ನಿಮ್ಮ ಬಳಿ ಕೊಡಲು ಏನೂ ಇಲ್ಲದೇ ಇರಬಹುದು; ಆದರೆ, ವಿನಯ ಸೌಜನ್ಯದ ಗುಣವಾದರೂ ನಿಮ್ಮಲ್ಲಿ ಇಲ್ಲದಿದ್ದರೆ, ಇ೦ತಹ ಸಭ್ಯ ವರ್ತನೆ ಇಲ್ಲದವರನ್ನ ದೇವರು (ಮೇಲಿನಿ೦ದ ಕೆಳಗೆ ತಳ್ಳಿ, ಮೂಗನ್ನು ಕೊಯ್ದು ಅವಮಾನ ಪಡಿಸುವ೦ಥ) ಶಿಕ್ಷೆ ಕೊಡದೆ ಇರುತ್ತಾನೆಯೇ?
ಇಲ್ಲಿ ಮತ್ತು ಮುಂದಿನ ಉಲ್ಲೇಖಗಳಲ್ಲಿ ಬರುವ ವಿಶೇಷ ಕನ್ನಡ ಪದ ‘ಏನಿ?’. ಇದರ ಬಗ್ಗೆ ಕಮ್ಮಟದ ಕಿಡಿಗಳು ಪ್ರಬುದ್ಧಕರ್ನಾಟಕದಲ್ಲಿ ಹಾರಾಡಿವೆ. ತೀನಂಶ್ರೀ ಅವರ ಒಂದು ಸೊಗಸಾದ ಲೇಖನವೂ ಈಗಾಗಲೇ ಬಂದಿದೆ. ಕೆಲವು ಮುದ್ರಣಗಳಲ್ಲಿ ಈ ‘ಏನಿ’ ಪದ ‘ಏನು’ ಆಗಿ, ತಪ್ಪಾಗಿ ಪರಿಷ್ಕೃತಗೊಂಡಿರುವುದೂ ಉಂಟು. ಹಂಪೆಯ ರಗಳೆಯ ಕವಿ ಹರಿಹರನಲ್ಲೂ ಈ ‘ಏನಿ’ ಪದಪ್ರಯೋಗವಿದೆ. ಅಲ್ಲೂ ಸಹ ಕ್ಷೇಮಸಮಾಚಾರ, ಉಭಯಕುಶಲೋಪರಿಗೆ ‘ಏನಿ’ ಬಳಕೆಯಾಗಿದೆ.
ನಡುವೆ ಮೂಡಿದನಲ್ಲಿ ಜಗಳದ ಮಹೇಶ್ವರ೦
ಕೊಡೆ ಪಾದರಕ್ಷೆ ನರೆದಲೆ ಗಡ್ಡದೀಶ್ವರ೦
ಬರುತೆ ಶಿವಶಿವ ಕುಶಲವೇ ರುದ್ರಭಟ್ಟರೇ
ಹರಹರ ಕ್ಷೇಮವೇ ಈಶಾನಭಟ್ಟರೇ
ಇವರಾರ್ ಸಹಸ್ರವೇದಿಗಳೇ ಮಹಾದೇವ
ಇವರಾರ್ ಶಿವಾನ೦ದರೇ ಶಿವ ಮಹಾದೇವ
ಏನಿ ಪಶುಪತಿಭಟ್ಟರೇ ಸುಖದೊಳಿರ್ದಿರೇ
ಏನಿ ಶ೦ಕರಭಟ್ಟರೇ ಹದುಳಿವಿರ್ದಿರೇ
ಎ೦ದವರ ಕುಲಗೋತ್ರದನ್ವಯ೦ಗಳು ವೆರಸಿ
ಬ೦ದು ನುಡಿವುತ್ತುಮಿರೆ ಸಭೆ ಕೌತುಕ೦ ಬೆರಸಿ

ಸತ್ತವರನ್ನು ಕರೆದೆಬ್ಬಿಸಲೂ ಹರಿಹರ ‘ಏನಿ’ ಬಳಸುತ್ತಿದ್ದಾನೆ: ಊರ ಹೊಱಗಣ ಮಸಣವಟ್ಟಿಗೆಯೊಳಿರಲ೦ದು
ಹಾರೈಸುತೆಮ್ಮ ಮಯ್ದುನನೊಲ್ದು ನಗುತ೦ದು
ಏನಿ ಶ್ಮಶಾನಶಯನರೆ ಎ೦ದು ಕರೆದ೦ದು
ತಾನಾಯ್ತು ಬಳಿಕವಾ ಪೆಸರೆಮಗೆ ಸಲೆ ಸ೦ದು

ನಡುಗನ್ನಡದ ಇನ್ನೊಬ್ಬ ಪ್ರಖ್ಯಾತಕವಿ ಗದುಗಿನ ನಾರಣಪ್ಪ ಸಹ ತನ್ನ ಕುಮಾರವ್ಯಾಸ ಭಾರತದಲ್ಲಿ, ದ್ರೌಪದೀ ಸ್ವಯಂವರದ ಸಂದರ್ಭದಲ್ಲಿ ‘ಏನಿ’ ಪ್ರಯೋಗ ಮಾಡಿದ್ದಾನೆ. ಪೂಜೆ ಪುರಸ್ಕಾರ ಪೌರೋಹಿತ್ಯ ಪ್ರವಚನಗಳಲ್ಲೇ ತೊಡಗಿದ್ದ ಜನ ಬಿಲ್ಲನ್ನೆತ್ತಿ ಹೆದೆಯೇರಿಸಿ ಗುರಿಗೆ ಬಾಣಬಿಡುವ ಸನ್ನಾಹ ಕಂಡು ಅವರವರಲ್ಲೇ ಆಡಿಕೊಳ್ಳುವ ವಿಡಂಬನೆಯ ಮಾತುಗಳು ಹೀಗಿವೆ:
ಏನಿ ಸಿದ್ಧಿಯುಪಾಧ್ಯರೆದ್ದಿರಿ
ದೇನು ಧನುವಿ೦ಗಲ್ಲಲೇ ತಾ
ನೇನು ಮನದ೦ಗವಣೆ ಬಯಸಿದಿರೇ ನಿತ೦ಬಿನಿಯ
ವೈನತೇಯನ ವಿಗಡಿಸಿದ ವಿಷ
ವೇನು ಸದರವೋ ಹಾವಡಿಗರಿಗಿ
ದೇನು ನಿಮ್ಮತ್ಸಾಹವೆ೦ಬುದು ಧೂರ್ತ ವಟುನಿಕರ

ಮತ್ತೊಂದು ಸನ್ನಿವೇಶದಲ್ಲಿ ಊರ್ವಶಿಯೊಡನೆ ಅರ್ಜುನನ ಸಾಮಾನ್ಯ ಮಾತುಕತೆಗಾಗಿ ನಾರಾಣಪ್ಪ ‘ಏನಿ’ಯಿಂದ ಇನ್ನೊಂದು ಪದ್ಯವನ್ನ ಹೆಣೆದಿದ್ದಾನೆ: ಏನಿ ಬಿಜಯ೦ಗೈದಿರಿತ್ತಲು
ಮಾನನಿಧಿ ಕುಳ್ಳೀರಿ ಸುರೇ೦ದ್ರನ
ಮಾನಿನಿಯರಭಿವ೦ದನೀಯರು ನಾವ್ ಕೃತಾರ್ಥರಲಾ
ಏನು ಬೆಸನೆನಗೇನು ಹದ ನಿಮ
ಗಾನು ಮಗನುಪಚಾರವೇಕೆ ಮ
ನೋನುರಾಗದಲಱುಹಿಯೆ೦ದನು ಪಾರ್ಥನುರ್ವಶಿಗೆ

ಇನ್ನು ‘ಏನಿಂ’ ಪದಪ್ರಯೋಗ. ನೇಮಿನಾಥ ಪುರಾಣದ ಕರ್ಣಪಾರ್ಯನಲ್ಲಿ ಇದನ್ನು ಕಾಣುತ್ತೇವೆ: ಏನಿ೦ ಗಳ ನೀಮಿನಿತ೦
ಪೀನ೦ ಗೞಪುತ್ತುಮಿರ್ಪಿರೀ ಹರಿ ಧುರದೊಳ್
ತಾನೆೞ್ದು ಗರ್ಜಿಸುತ್ತಿರ
ಲೇನಾ ಮಾಗಧಮದೇಭಮಿದಿರಾ೦ತಪುದೇ

ಹನ್ನೆರಡನೇ ಶತಮಾನದ ಉತ್ತರಾರ್ಧದಲ್ಲಿ ಇದ್ದ ನೇಮಿಚಂದ್ರ ಸಹ ‘ಏನಿಂ’ ಪದ ಬಳಸಿದ್ದಾನೆ. “ಏನದು? ಹಾಸುಗೆಯ ಹಾವೆ? ಅಸಾಧ್ಯವಾದ ಬಿಲ್ಲೆ? ಸಿಂಹ ಮುಖದ ಶಂಖವೆ?- ಏನಾದರಾಗಲಿ, ಅವುಗಳನ್ನ ನಾನು ಹತ್ತುವೆನು, ಎತ್ತುವೆನು, ಊದುವೆನು”- ಎಂದು ತುರುಪಟ್ಟಿಯಲ್ಲಿದ್ದ ಕೃಷ್ಣನು ಸೇವಕರು ಬಾರಿಸುತ್ತಿದ್ದ ಢಂಗುರದ ಆಹ್ವಾನವನ್ನು ಸವಾಲಾಗಿ ಸ್ವೀಕರಿಸಿದನು- ಎನ್ನುತ್ತಾ,
ಏನಿಂ ಪಾಸುರಗನೆ ಬಿ
ಲ್ತಾನದೃಶಂ ಗಜಮೆ ಶಂಖಮಯ್ವಾಯದೆಪೋ
ಗಾನೇಱುವೆನಾನೆತ್ತುವೆ
ನಾನೊತ್ತುವೆನೆಂದು ಪಿಡಿಸಿದಂ ಡಂಗುರಮಂ

ಬಹುಶಃ ಬಿಜಯಂಗೈಯುವಾಗಲೆಲ್ಲ ಹಿಂದಿನ ಕವಿಗಳಿಗೆ ‘ಏನಿ’ ಜ್ಞಾಪಕಕ್ಕೆ ಬರುತ್ತಿತ್ತೋ ಏನೋ? ಪದಗಳನ್ನು ಕುಣಿದಾಡಿಸುವ ನಡುಗನ್ನಡದ ಕವಿ ಲಕ್ಷ್ಮೀಶ ತನ್ನ ಜೈಮಿನಿಭಾರತದಲ್ಲಿ ‘ಏನಿ’ಯನ್ನು ನಡೆದಾಡಿಸಿದ್ದಾನೆ.
ಏನಿ ಬಿಜಯ೦ಗೈದಿರೆನ, ಲಟ್ವಹಾಸದಿ೦
ದಾನವ೦ಗೆ೦ದ; ನೇತಕೆ ಸುಮ್ಮನಿರ್ದಪೆ? ನಿ-
ಧಾನವನೆಡಹಿ ಕ೦ಡೊಲಾಯ್ತು; ನಿಮ್ಮಯ್ಯ ಬನ೦ ಕೊ೦ದ ಭೀಮನೆ೦ಬ
ಮಾನವನ ತಮನ್ನರ್ಜುನನೀಗ ಬ೦ದನಿದೆ-
ಕೋ ನಿನ್ನ ಪೊಲಸೀಮೆ;ಗಾತನ೦ ಪಿಡಿತ೦ದು
ನೀನುರುವ ನರಮೇಧಮ೦ ಮಾಡೆನ
ಲ್ಕವ೦ಗಸುರೇ೦ದ್ರನಿ೦ತೆ೦ದನು