ಅಮೆರಿಕನ್ನಡ
Amerikannada
ಒಲವು ಸಂಧ್ಯಾ ರವೀಂದ್ರನಾಥ್
ಚಂದ್ರನ ಬೆಳದಿಂಗಳಂತೆ ಕೋಮಲ;
ಸೂರ್ಯನ ನವಕಿರಣದಂತೆ ಉಜ್ವಲ;
ಇದುವೆ ಒಲವು, ಬೇರೆ ಅಲ್ಲ....ಕೇಳಿರಿ,
ಕೇವಲ ಒಲವಿದು...ಕೇವಲ ಒಲವಿದು!

ಉತ್ತುಂಗದ ಗಿರಿಶಿಖರದಂತೆ ಎತ್ತರ;
ವಿಸ್ತಾರದಾಳದ ಕಡಲಿನಂತೆ ಗಂಭೀರ;
ಇದುವೆ ಒಲವು, ಬೇರೆ ಅಲ್ಲ....ಕೇಳಿರಿ,
ಕೇವಲ ಒಲವಿದು...ಕೇವಲ ಒಲವಿದು!

ದಳ ತೆರೆದು ನಗುವ ಹೂವಿನಂತೆ ಸುಂದರ;
ಬೆಲ್ಲ ಸಕ್ಕರೆ ಜೇನಿನಂತೆ ಸುಮಧುರ;
ಇದುವೆ ಒಲವು, ಬೇರೆ ಅಲ್ಲ....ಕೇಳಿರಿ,
ಕೇವಲ ಒಲವಿದು...ಕೇವಲ ಒಲವಿದು!

ಶುಭ್ರ ಧವಳ ಮಂಜಿನಂದದಿ ನಿರ್ಮಲ;
ಮುಗಿಲ ಮಳೆಯ ಜೀವಜಲದಂತೆ ಅಸದಳ;
ಇದುವೆ ಒಲವು, ಬೇರೆ ಅಲ್ಲ....ಕೇಳಿರಿ,
ಕೇವಲ ಒಲವಿದು...ಕೇವಲ ಒಲವಿದು!