ಅಮೆರಿಕನ್ನಡ
Amerikannada
ಯೂಸುಫ್
-ಬಿ.ಎನ್.ವಿಶ್ವನಾಥರಾವ್, ಮೈಸೂರು
ಕಾರಿರುಳಲೊಂದು ದಿನ ಯೂಸುಫನ ಡೇರೆಯೆಡೆ
ಆಗಂತುಕನೊಬ್ಬ ಬಂದಿಂತು ಮೊರೆಯಿಟ್ಟ:
“ಕಾಪಾಡಿ, ನಾನೋರ್ವ ಭಯಭೀತ, ಬಹಿಷ್ಕೃತ.
ಆಡಳಿತಶಾಹಿಯಿಂದೆನ್ನ ಪ್ರಾಣಕೆರವಹುದು.
ಜೀವಭಯದಿಂದೋಡುತಲೆ ನಿನ್ನ ಬಳಿ ಬಂದಿಹೆನು,
ಎಮ್ಮ ಜನತೆಯ ದೈವಾಂಶ ಸಂಭೂತ ಯೂಸುಫನ ಬಳಿಗೆ,
ಪ್ರಾಣರಕ್ಷಣೆಗಂತು ಜಠರಾಗ್ನಿ ಶಮನಕ್ಕೆ.“

ಇದ ಕೇಳಿ, ಯೂಸುಫನಿಂತೆಂದ: “ಈ ಡೇರೆ ಎನ್ನ-
ದೆನುವುದಕಿಂತ ಭಗವದನುಗ್ರಹವಲ್ತೆ!
ಜೀವಭಯವನು ತೊರೆದು, ಶಾಂತಿಯಲಿ ವಿಶ್ರಮಿಸು.
ನಿರ್ಭಿಡೆಯಿಂದಿರುವ ಆಹಾರದಲಿ ನಿನ್ನ ಹಸಿವನು ಹಿಂಗಿಸು.
ಇರುಳು ಹಗಲೆಂಬ ಸೂರನ್ನು ಕರುಣಿಸಿಹ ಸೃಷ್ಟಿಕರ್ತನ
ಸೇವಕನು ನಾನು. ಅವನ ದ್ವಾರದ ಮುಂದೆ
ಹಾದುಹೋದವರಾರು ‘ಇಲ್ಲ’ವೆಂಬ ಸೊಲ್ಲು ಕೇಳಿಲ್ಲ!”

ಇಂತೆಂದು ಆ ರಾತ್ರಿ ಅತಿಥಿಗಾಶ್ರಯವಿತ್ತು ಯೂಸುಫನು
ಸತ್ಕರಿಸಿದನು. ಮರುದಿನ ಕೋಳಿ ಕೂಗುವ ಮುನ್ನ
ಅವನನೆಬ್ಬಿಸಿ ಇಂತೆಂದ: “ಇಗೋ ಹೊನ್ನು, ಎನ್ನ ತೇಜವಾಜಿಯು
ನಿನ್ನ ಪಲಾಯನಕೆ ಸಿದ್ಧವಾಗಿಹುದು. ಬೆಳಕು ಹರಿಯುವ ಮುನ್ನ
ಇಲ್ಲಿಂದ ಹೊರಡು.” ಜ್ಯೋತಿ ಜ್ಯೋತಿಯ ಬೆಳಗೆ ತಾನದು ಕುಂದದು;
ಅಂತೆ, ಸದ್ಗುಣವಿನ್ನೊಬ್ಬರಲಿ ಸದ್ಗುಣವ ಬೆಳಗಿಪುದು.

ಆಗಂತುಕಗೆ ಜ್ಞಾನೋದಯವಾಗಿ, ಮನದೊಳಗೆ ಪರಿತಪಿಸಿ,
ಮಂಡಿಯೂರಿ, ಶಿರವ ಬಾಗಿಸಿ, ಯೂಸುಫನ ಹಸ್ತವ ಪಿಡಿದು,
ಕಂಬನಿಗರೆಯುತಿಂತೆಂದ: “ಓ ದೊರೆಯೆ, ಈ ತೆರದಿ ನಿಮ್ಮಿಂದ ಬೀಳ್ಕೊಳ್ಳಲಾರೆ.
ನೀವೆನಗೆ, ಇವಗೆ, ನಿಮ್ಮ ಕುವರನ ಕೊಲೆಗೈದ ಕಡುಪಾಪಿ ಇಬ್ರಾಹಿಮ್‌ಗೆ,
ತೋರಿದ ಕರುಣೆಗೆ, ಮಾಡಿದುಪಕಾರಕ್ಕೆ ಪ್ರತ್ಯುಪಕಾರ ಎಸಗುವೆನು, ನನ್ನಾಣೆ!”

“ಮೂರ್ಪಟ್ಟು ಹೊನ್ನ ತೆಗೆದುಕೋ,” ಯೂಸುಫ್ ಮಾರುತ್ತರಿಸಿದ,
“ಇದ ಕೊಂಡು ಮರುಭೂಮಿಯಲಿ ದೂರ ನಡೆ, ಹೋಗು ಮರಳಿ ಬಾರದೆಡೆ!
ನನ್ನ ಕೆಟ್ಟ ಯೋಚನೆಯೊಂದು ನಿನ್ನೊಡನೆ ತೊಲಗುವುದು.
ಓ ನನ್ನ ಜೇಷ್ಠಪುತ್ರನೇ, ನಿನಗಾಗಿ ಹಗಲಿರುಳು ಪರಿತಪಿಸುತಿರುವೆ.
ನಿನ್ನ ಮರಣವು ದೈವೇಚ್ಛೆಯಲ್ತೆ! ಇಂದು ನಿನ್ನ ಸಾವಿನ ಸೇಡು ತೀರಿತು.
ಓ ಕುವರ, ಚಿರಶಾಂತಿಯಲಿ ನಿದ್ರಿಸು!”

(ಇಂಗ್ಲೀಷ್ ಮೂಲ: ಐ. ಆರ್. ಲೋವೆಲ್ ಬರೆದ “ಯೂಸುಫ್”)