ಅಮೆರಿಕನ್ನಡ
Amerikannada
ಸೆಲ್ ಫೋನ್ ಮಹಿಮೆ!
-ಸಂಧ್ಯಾ ರವೀಂದ್ರನಾಥ್
ನೀನಾರಿಗಾದೆಯೋ ಡೆಸ್ಕ್ ಫೋನೇ?
ಹರಿಹರಿ ಸೆಲ್ ಫೋನ್ ನಾನು!
ವೈರ್‌ಲ್‌ಸ್ ಫೋನು ನಾನು!

ಬೀಪ್ ಆದ್ರೆ ಪೇಜರ್ ಆದೆ;
ವಿಡಿಯೋ ಗೇಮ್ ಆದೆ;
ಟೆಕ್ಸ್ಟ್ ಮೆಸೇಜ್ ಓದಲು,
ಪಿ ಡಿ ಏ ನಾನಾದೆ;
ಸೈಲೆಂಟ್-ಮೋಡಲಿ,
ವಾಯ್ಸ್ ಮೆಸೇಜ್ ರಿಸೀವ್ ಮಾಡ್ವೆ,
ಮೀಟೀಂಗ್ ಬಾದರ್ ಮಾಡದೆ!

ಹಾಡನು ಕೇಳಲು ನಾನೇ ಬಾನುಲಿಯೂ ಆದೆ;
ಟಿ.ವಿ.ಯ ರೀತಿ ನಾನೇ ವಿಡಿಯೋ ಡಿಸ್‌ಪ್ಲೇ ಮಾಡ್ವೆ;
ಚಂದದ ನೋಟ ಹಿಡಿವ ಡಿಜಿಟಲ್ ಕ್ಯಾಮೆರವಾದೆ!
ಇಂಟರ‍್ನೆಟ್ ಆಕ್ಸೆಸ್‌ಗೆ, ಕಿಟಕಿಯು ನಾನಾದೆ,
ಬ್ರೌಸರ್ ವಿಂಡೋ ಆದೆ!

ಹೈವೇಲಿ ಕಾರನು ಬಿಡುವಾ, ಅಮ್ಮನ ಕೈಯಲಿ ಮೆರೆವೆ;
ಶಾಪಿಂಗ್-ಲಿಸ್ಟ್ ಮನೆಯಲಿ ಮರೆತ, ಗಂಡನ ಬಚಾವ್ ಮಾಡ್ವೆ!
ಅಡಿಗೆ ಮಾಡುವಾಗ ಅಜ್ಜಿಗೆ ಹರಟಲು ಸಾಧನವಾದೆ;
ಮಕ್ಕಳ ಹೋಮ್‌ವರ್ಕ್‌ಗೆ, ಹಾಟ್‌ಲೈನ್ ನಾನಾದೆ,
ರಂಗು ರಂಗು ‘ರಿಂಗಾ’ದೆ!

ಸೊಂಟದಿ ಸೆಲ್ ಫೋನ್ ಇದ್ರೆ, ಮಾಹಿತಿ ಕೈತುದಿಯಲ್ಲೇ;
ಎಲ್ಲೆಡೆ ಹೇಗೇ ಇರಲಿ, ನೆನದದ್ದು ಕಣ್ಣೆದುರಲ್ಲೇ;
ಜಗವಿದು ಆಗಿದೆ ಪುಟ್ಟದೊಂದು ನಗರಿಯಂತೆ!
ಸೆಲ್ ಫೋನ್ ಮಹಿಮೆಯ ಬಲ್ಲವರೇ ಬಲ್ಲಿದರಂತೆ,
ಅವರೇ ಗೆಲ್ಲುವರಂತೆ!