ಅಮೆರಿಕನ್ನಡ
Amerikannada
ಮತ್ತೆ ಮತ್ತೆ ಕಾಡುವ ಪೆದ್ದ ಮಾರಾ....
-ಭವಾನಿ ಲೋಕೇಶ್, ಮಂಡ್ಯ
ಮಂಕುತಿಮ್ಮ ಅನ್ನುವ ಶಬ್ಧ ಕೇಳಿದಾಗಲೆಲ್ಲ ಕಗ್ಗ ಬರೆದ ಡಿ.ವಿ. ಗುಂಡಪ್ಪನವರ ನೆನಪಾಗುವುದು. ಒಬ್ಬ ಪತ್ರಕರ್ತರಾಗಿ ವೃತ್ತಿ ಜೀವನವನ್ನು ನಡೆಸಿದ ಡಿವಿಜಿ ಕೊಟ್ಟ ಕಗ್ಗದ ಗಂಟು ಮಾತ್ರ ಅತ್ಯಮೂಲ್ಯವಾದುದು.
ಸರ್ವರೊಳಗೊಂದೊಂದು ನುಡಿ ಕಲಿತು ಸರ್ವಜ್ಞ ಕವಿ ಬದುಕಿನ ಎಲ್ಲ ದಿಕ್ಕುಗಳಿಂದಲೂ ಅನುಭವದ ಸಾರವನ್ನು ಹೆಕ್ಕಿ ತೆಗೆದು ತ್ರಿಪದಿಗಳಲ್ಲಿ ಇಟ್ಟ ಹಾಗೆ ಡಿ.ವಿ.ಜಿ. ತಮ್ಮದೇ ಧಾಟಿಯಲ್ಲಿ ಕಗ್ಗಗಳನ್ನು ಕೈಗಿತ್ತವರು. ಇವತ್ತು ಡಿ.ವಿ.ಜಿ.ಯವರನ್ನು ನೆನೆದು ಅವರ ಬಗ್ಗೆ ನಾಲ್ಕಾರು ಸಾಲು ಬರೆಯಲಿಕ್ಕೆ ಕಾರಣವಿದೆ. ಅದೆಂದರೆ ಡಿ.ವಿ.ಜಿ.ಯವರ ಕಗ್ಗಗಳೋಪಾದಿಯಲ್ಲಿ ಮಂಡ್ಯದ ನೆಲದೊಳಗೊಂದು ಪದ್ಯ ಪುಸ್ತಕ ಜಗತ್ತಿಗೆ ಕಣ್ತೆರೆದಿದೆ. ಅಲ್ಲಿ ಜಗತ್ತಿನ ಜನರಿಗೆ ಕಿವಿ ಹಿಂಡಿ ಉಪದೇಶ ಕೊಟ್ಟವನು ಮಂಕುತಿಮ್ಮನಾದರೆ ಇಲ್ಲಿವನು ಪೆದ್ದಮಾರ ಹೌದು! ಡಾ. ಪ್ರದೀಪಕುಮಾರ ಹೆಬ್ರಿ, ಯುಗಾವತಾರಿಯಂತಹ ಮಹಾಕಾವ್ಯವನ್ನು ತಮ್ಮ ಲೇಖನಿಯಿಂದ ಒಡಮೂಡಿಸುತ್ತಲೇ, ಕಗ್ಗದಂತಹ ೧೧೩೪ ಪದ್ಯಗಳನ್ನು ಪೆದ್ದಮಾರನ ಪದ್ಯವಾಗಿ ನಮ್ಮ ಕೈಗಿತ್ತಿದ್ದಾರೆ.
ಬೇಸರವಾದಾಗಲೆಲ್ಲ ಪುಟತಿರುವಿ ಹಾಕಿ ಅಲ್ಲಿ ನಿಮಗೊಂದು ಸಾಂತ್ವನ ಸಿಗುತ್ತದೆ. ನೆನಪಾದಾಗಲೆಲ್ಲ ಕಣ್ಣಾಡಿಸಿ ನಿಮಗೊಂದು ಸಭ್ಯ ಓದಿನ ಅನುಭೂತಿ ಸಿಗುತ್ತದೆ. ಖಷಿಯಾದಾಗ ಒಮ್ಮೆ ಹಾಳೆ ತೆರೆದು ಓದಿ, ಆ ಖುಷಿಯ ಹಿಂದೆಯೇ ಬಂದೊದಗಲಿರುವ ದುಃಖಕ್ಕೆ ಒಂದು ಪರಿಹಾರ ಸಿಗುತ್ತದೆ. ಹೀಗೆ.... ಅಲ್ಲಿ ಯಾವುದುಂಟು ಯಾವುದಿಲ್ಲ ಅಂತ ಹೇಳುವ ಹಾಗಿಲ್ಲ. ಸುಮ್ಮನೇ ಕೇಳಿಸಿಕೊಳ್ಳಿ, ‘ಬದುಕು ಸಾಯುವ ಮುನ್ನ ಗಮನಿಸುತ ಎಲ್ಲವನು ವ್ಯರ್ಥವೆನಿಸದ ರೀತಿ ಬದುಕ ಸಾಗಿಸಬೇಕು ಇಂದಿದ್ದು ಹೋದವನ ನೆನೆಯಲಾರರು ಜನರು ನಾಳೆಗಿರಬೇಕು ನೀನು-ಪೆದ್ದಮಾರಾ!’
ಜಗತ್ತಿನಲ್ಲಿ ನಾವೆಲ್ಲರೂ ಜನ್ಮ ತಳೆದಿದ್ದಾಗಿದೆ. ಯಾವುದೋ ಪುಣ್ಯ, ಯಾರದೋ ಹರಕೆ ನಾವಿಲ್ಲಿ ಮನುಷ್ಯರಾಗಿ ಹುಟ್ಟಿದ್ದೇವೆ. ಆದರೆ ನಿಜ ಅರ್ಥದಲ್ಲಿ ಮನುಜರಾಗಿ ಬಾಳುವೆ ನಡೆಸಬೇಕಾಗಿದೆ. ಸಾಯುವ ಮೊದಲೊಮ್ಮೆ ಯೋಜಿಸಿ, ಯೋಚಿಸಿ ಜೀವನದ ಹಾದಿಯನ್ನು ನಾವೇ ನಿರ್ಮಿಸಿಕೊಳ್ಳಬೇಕಿದೆ. ಛೇ! ನಾವಿರೋದೇ ದಂಡ ಅಂತ ಯಾವತ್ತಿಗಾದರೂ ಯಾರಿಗಾದರೂ ಅನಿಸಬಾರದು. ಅಷ್ಟೇ ಯಾಕೆ ನಮಗೇ ಹಾಗನ್ನಿಸಕೂಡದು. ಬದುಕು ಮುಗಿದು ನಾವು ಮಣ್ಣು ಸೇರಿದರೂ ನಮ್ಮ ಕೆಲಸದಿಂದ ನಡೆಯಿಂದ, ನುಡಿಯಿಂದ, ಸತ್ವಪೂರ್ಣವಾಗಿ ಬದುಕಿದ ನೆನಪುಗಳಿಂದ ಎಷ್ಟು ವರ್ಷವಾದರೂ ನಾವು ಈ ಜಗತ್ತಿನಲ್ಲಿ ಉಳಿಯಬೇಕೆಂಬ ಸತ್ಯವನ್ನು ಹೆಬ್ರಿ ತಣ್ಣಗೆ ಬಿಚ್ಚಿಡುತ್ತಾ ಹೋಗುತ್ತಾರೆ. ‘ಓದದಿದ್ದರೆ ನೀನು ಯಾವ ಫಲವಿದೆ ಹೇಳು? ಓದು ಒಯ್ಯುವುದು ದಿವ್ಯತೆಯ ಭಾವಕ್ಕೆ, ನೋವನೆಲ್ಲವ ಮರೆಸಿ ಹೊಸಲೋಕದನುಭಾವ ಓದೆಂಬುದನನ್ಯತೆಯು-ಪೆದ್ದಮಾರಾ!’
ದೇಶ ಸುತ್ತು ಇಲ್ಲ ಕೋಶ ಓದು ಅನ್ನುವುದೊಂದು ಸೂಕ್ತಿಯಿದೆ. ನಾಲ್ಕು ಗೋಡೆಯ ಮಧ್ಯೆ ಕುಳಿತರೆ ಮೂರ್ಖರಾಗುವುದು ಹೇಗೋ ಹಾಗೆ, ನಮ್ಮದೇ ಲೋಕದಲ್ಲಿ ನಾವಿದ್ದು ಕೂಪಮಂಡೂಕಗಳಾಗುವುದಕ್ಕಿಂತ ದೇಶ ಸುತ್ತಿ ಅನುಭವ ಪಡೆಯಬೇಕು ಅಥವಾ ಓದಿನ ಮೂಲಕ ಜ್ಞಾನ ಪಡೆಯಬೇಕು. ಓದೆನ್ನುವುದು ನೀಡುವ ಸಂತಸವನ್ನು ವರ್ಣಿಸಲು ಅಸಾಧ್ಯ. ಏಕಾಂಗಿಯಾಗಿ ಕೂತವನ ಜೊತೆಗಾರನಾಗಿ ಬರುವುದೇ ಓದು. ಅದೊಂದು ಸಮ್ಮೋಹನ ಕ್ರಿಯೆ. ಓದಿಗೆ ಕೂತಾಗಲೆಲ್ಲ ಊಟ, ತಿಂಡಿ, ನಿದ್ರೆ ಮರೆತೇ ಹೋಗುವ ಹಾಗೆ ಓದು ನಮ್ಮ ಮೇಲೆ ಮಾಡುವ ಯಕ್ಷಿಣಿ ಅನನ್ಯವಾದುದು. ಅದೊಂದು ದಿವ್ಯ ಅನುಭೂತಿ. ಸಾವಿರ ಚಿಂತೆಯಿರಲಿ. ಅದನ್ನೆಲ್ಲ ಗಂಟು ಕಟ್ಟಿ ಬಿಸಾಕುವ ಹಾಗೆ ಒಂದು ಒಳ್ಳೆಯ ಓದು ನಮ್ಮ ಮನಸ್ಸನ್ನು ಪರಿವರ್ತನೆ ಮಾಡುತ್ತದೆ. ಅಂಥಾ ಓದನ್ನೇ ನಾವು ಕಡೆಗಣಿಸಿಬಿಟ್ಟರೆ ನಮಗ್ಯಾವ ಫಲವಿದೆ ಅನ್ನುತ್ತಾರೆ ಹೆಬ್ರಿ. ಅಂಥಾ ಅನನ್ಯವಾದ ಓದನ್ನು ಸಿದ್ದಿಸಿಕೊಂಡ ಮಾತ್ರಕ್ಕೇ ಅವರಿಲ್ಲಿ ನಮ್ಮ ಕೈಗೆ ಒಂದು ಸಿದ್ಧಪಾಕದಂತಿರುವ ಕೃತಿಯೊಂದನ್ನು ಕೈಗಿತ್ತಿದ್ದಾರೆ.
ಇಂತಹ ಸಾವಿರಕ್ಕೂ ಹೆಚ್ಚು ಪದ್ಯಗಳು. ನಿಮ್ಮ ಮನ ತಣಿಸಲಿಕ್ಕೇ ಸನ್ನದ್ಧವಾಗಿ ಪುಸ್ತಕವಾಗಿ ಹೊರ ಬಂದಿದೆ. ಹೊಸ ವರ್ಷದ ಮೊದಲ ದಿನ ನಮ್ಮೆಲ್ಲರಿಗೊಂದು ಕೊಡುಗೆಯಾಗಿ ಸಿಕ್ಕಿದ್ದು ಪೆದ್ದಮಾರನ ಪದ್ಯ.