ಅಮೆರಿಕನ್ನಡ
Amerikannada
ಅಮೆರಿಕದ ಬ್ರಹ್ಮಚಾರಿಗಳ ಗೂಡು
-ಜಯಂತಿ ಅಮೃತೇಶ್, ಮೈಸೂರು
ನಾವು ೨೦೦೨ ರಲ್ಲಿ ಅಮೆರಿಕಕ್ಕೆ ಹೋದಾಗ ನಮಗೆ ಬ್ರಹ್ಮಚಾರಿಗಳ ಗುಡಾರವೆಂದರೆ ಏನೆಂದು ತಿಳಿಯಿತು, ಇದನ್ನು ‘ಬ್ಯಾಚುಲರ‍್ಸ್ ಡೆನ್’ ಎನ್ನುತ್ತಾರೆ. ನನ್ನ ಮಗ ಬೋಸ್ಟನ್ ನಲ್ಲಿ ವಾಸವಾಗಿದ್ದುದರಿಂದ ಅವನ ಇಚ್ಛೆಯಂತೆ ಅಲ್ಲಿ ಹೋಗಿ ಕೆಲವು ದಿನಗಳಿರುವ ಪರಿಸ್ಥಿತಿ ಬಂದೊದಗಿತು. ಅವನೊಟ್ಟಿಗೆ ಹೋಗಿರಲು ನಾವು ಅನುಮಾನಿಸುತ್ತಿದ್ದುದರ ಕಾರಣ, ಅವನು ಇತರ ೩ ಜನ ವಿದ್ಯಾರ್ಥಿಗಳೊಂದಿಗೆ ಒಂದು ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದುದು. ಆ ಹುಡುಗರು ಅದಾವ ದೇಶದವರೋ ಏನೋ? ವಿದೇಶದಲ್ಲಿ ಈ ಹುಡುಗರು ಹೇಗೆಲ್ಲ ಇರುತ್ತಾರೋ? ಯಾವ ಚಟಗಳನ್ನು ಬೆಳೆಸಿಕೊಂಡಿರುತ್ತಾರೋ? ನಾವು ಹಿರಿಯರಾಗಿ ಅವರ ಮಧ್ಯೆ ಹೋಗಿರುವುದು ಸರಿಯೆ? ಇದರಿಂದ ಪರಸ್ಪರ ತೊಂದರೆ ಅನಾನುಕೂಲಗಳು ಉಂಗುವುದಿಲ್ಲವೇ? ಈ ಎಲ್ಲ ಸಂಶಯಗಳೂ ನಮ್ಮ ಮನಸ್ಸನ್ನು ಆವರಿಸಿಕೊಂಡಿದ್ದುವು. ಆದರೆ ಅಲ್ಲಿ ಹೋಗಿ ಸೇರಿನಂತರ ನಮ್ಮ ಎಲ್ಲ ಭ್ರಮೆಗಳೂ ಚದುರುವ ಮೋಡಗಳಂತೆ ಮಾಯವಾದುವು.
ನನ್ನ ಮಗ ಕಾರ್ತಿಕ್‌ನ ಅಪಾರ್ಟ್‌ಮೆಂಟ್ “ಒಂದು ಪುಟ್ಟ ಭಾರತ“ದಂತೆ ಇತ್ತು. ನಮ್ಮ ದೇಶದ ನಾನಾ ಪ್ರಾಂತಗಳಿಂದ ಬಂದು ಸೇರಿದ ಆ ಹುಡುಗರು ಶ್ರಮವಹಿಸಿ ಓದಿ ಮುಂದಕ್ಕೆ ಬರಬೇಕೆನ್ನುವ ಮಹತ್ವಾಕಾಂಕ್ಷೆ ಹೊತ್ತವರು. ಅವರ ಕ್ಯಾಂಪಸ್ಸಿನ ರೆಸ್ಟೊರೆಂಟ್‌ಗಳಲ್ಲಿ, ಲ್ಯಾಬ್‌ಗಳಲ್ಲಿ ಪಾರ್ಟ್ ಟೈಮ್ ಕೆಲಸವನ್ನೂ ನಿರ್ವಹಿಸುತ್ತಾ ಓದನ್ನು ಮುಂದುವರಿಸುತ್ತಿರುವವರು. ಹಣಕ್ಕಾಗಿ ಅವರೆಲ್ಲರೂ ನಾನಾ ರೀತಿಯ ಹಲವು ಕೆಲಸಗಳನ್ನು ತೆಗೆದುಕೊಳ್ಳಬೇಕಾಗುತ್ತಿತ್ತು.
ಅದೊಂದು ಸುಸಜ್ಜಿತ ಮನೆ ; ೪ ಮಲಗುವ ಕೋಣೆಗಳು, ಒಂದು ಹಜಾರ, ಅಡುಗೆ ಮನೆ, ಬಾಥ್ ರೂಂ ಎಲ್ಲವೂ ಅಲ್ಲಿತ್ತು. Refrigerator, mixer, microwave oven, cooking range, toaster ಇತ್ಯಾದಿಯಾಗಿ ಎಲ್ಲವೂ ಅಲ್ಲಿ ಇದ್ದುವು. ಫ್ರಿಜ್ ನಲ್ಲಿ ಹಣ್ಣು ತರಕಾರಿಗಳು, ಹಾಲು, ಗಿಣ್ಣು, ಬ್ರೆಡ್ ಎಲ್ಲವನ್ನೂ ತುಂಬಿ ಇರಿಸಿದ್ದರು. ಎತ್ತನೋಡಿದರೂ ಸೀರಿಯಲ್ ಡಬ್ಬಿಗಳು, ತಯಾರಿಸಿದ ಆಹಾರ ಪದಾರ್ಥದ ಡಬ್ಬಿಗಳೂ ತಲೆ ಎತ್ತಿ ನಿಂತಿದ್ದುವು. ಎಲ್ಲ ಕಡೆ ತಿನ್ನುವ ಪದಾರ್ಥಗಳು ಅಡ್ಡಾದಿಡ್ಡಿಯಾಗಿ ಹರಡಿದ್ದುವು. ಒಪ್ಪ, ಓರಣ ಗಂಡು ಹುಡುಗರಿಗೆ ತಿಳಿಯದಲ್ಲ? ಇವರು ಭಾರತದಿಂದ ತಂದಿದ್ದ ಕುಕ್ಕರ್ ಬಾಣಲಿ ಇತ್ಯಾದಿಗಳು ಸೀದು ಕಪ್ಪು ಹಿಡಿದು ಕುಳಿತಿದ್ದುವು. ಅಡ್ಡಾದಿಡ್ಡಿಯಾಗಿ ರಾಶಿ ಹಾಕಿದ್ದ ಸಾಮಾನುಗಳನ್ನು ಸವರಿಸಿ, ಅಚ್ಚುಕಟ್ಟಾಗಿ ಜೋಡಿಸಿ ಇಟ್ಟು ಅಡುಗೆ ಕೋಣೆಯನ್ನು ಶುಭ್ರಮಾಡುವುದರಲ್ಲಿ ಎರಡು ದಿನ ಕಳೆಯಿತು. ಸಂಜೆ ಮನೆಗೆ ಬಂದ ಹುಡುಗರಿಗೆ ಅಚ್ಚುಕಟಾಗಿ ಸಾಮಾನುಗಳನ್ನು ಡಬ್ಬಿಗಳಿಗೆ ಹಾಕಿದ್ದು, ಅಂದವಾಗಿ ಜೋಡಿಸಿದ ಪಾತ್ರೆ ಅಡಗಗಳು, ಇವನ್ನೆಲ್ಲ ನೋಡಿ ಅಚ್ಚರಿಯೂ, ಆನಂದವೂ, ಸಂಕೋಚವೂ ಒಮ್ಮೆಲೇ ಉಂಟಾಯಿತು.
ಆ ಮನೆಯಲ್ಲಿ, ಒಬ್ಬ ಆಂಧ್ರದ ಹುಡುಗ, ತಮಿಳು ನಾಡಿನವನೊಬ್ಬ, ಉತ್ತರಕರ್ನಾಟಕದವನು ಒಂದು ಹುಡುಗನಾದರೆ, ನಮ್ಮ ಸುಪುತ್ರ ಮೈಸೂರಿನವನು, ಅಲ್ಲೊಂದು ಪುಟ್ಟ ಭಾರತವೇ ಅಡಗಿತ್ತು. ಅವರ ಪದ್ಧತಿ ಏನೆಂದರೆ ಅವರೆಲ್ಲರೂ ಸರದಿಯ ಪ್ರಕಾರ ಎರಡೆರಡು ದಿನಗಳು ಅಡುಗೆ ಮಾಡಬೇಕು. ಅವರೇ ಹಿಂದಿನ ದಿವಸದ, ಸಿಂಕ್‌ನಲ್ಲಿ ರಾಶಿ ಹಾಕಿದ್ದ ಪಾತ್ರೆಯನ್ನೂ ತೊಳೆಯಬೇಕು. ಅಡುಗೆ ತಯಾರಿಸುವವನು chief cook ಆದರೆ ಆದಿನ ಉಳಿದ ನಾಲ್ಕು ಜನರೂ ಅವನ assistantಗಳು. ನಾವು ಅಲ್ಲಿದ್ದಷ್ಟು ದಿನಗಳೂ ಅವರ ಜೀವನದ ವೈಖರಿನೋಡಿ ಮನದಲ್ಲೇ ಹರ್ಷಿಸಿದೆವು.
ಆ chief cook ಆದವನು ಸಂಜೆ ಕೆಲಸದಿಂದ ಬಂದಕೂಡಲೇ ಈರುಳ್ಳಿ, ಆಲೂಗೆಡ್ಡೆ, ಟೊಮಾಟೋ, ಹಸಿಮೆಣಿಸನಕಾಯಿ ಇವನ್ನು ಹೆಚ್ಚಿಕೊಳ್ಳುತ್ತಾ ಏನು ಅಡುಗೆ ತಯಾರಿಸಬೇಕು ಎಂದು ಯೋಚಿಸುತ್ತಾನೆ. ಅನಂತರ ಮತ್ತೆ ಬೇಕಾದ ತರಕಾರಿಯನ್ನು ಈ ಹೆಚ್ಚಿದ ತರಕಾರಿಯನ್ನು ಸೇರಿಸಿ ನಿಜಾದ ನಳಪಾಕವನ್ನು ತಯಾರಿಸುತ್ತಾನೆ. ಒಂದು ಪಲ್ಯ, ಹುಳಿಯಂತೂ ತಯಾರಾಗುತ್ತದೆ. ಕುಕ್ಕರ್‌ನಲ್ಲಿ ಅನ್ನ ರೆಡಿಯಾಗುತ್ತದೆ; ತಯಾರಿಸಿದ ಚಪ್ಪಾತಿಗಳನ್ನು ತಂದು ಫ್ರಿಜ್‌ನಲ್ಲಿ ತಂದು ಇಟ್ಟುಕೊಂಡೇ ಇರುತ್ತಿದ್ದರು. ಚಪ್ಪಾತಿ ಬಿಸಿಮಾಡಿಕೊಂಡು, ಗಟ್ಟಿ ಮೊಸರಿನೊಂದಿಗೆ ನಾಲ್ಕು ಜನರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಆ ದಿನದ ಅವರವರ ಅನುಭವಗಳನ್ನು ಹಂಚಿಕೊಳ್ಳುತ್ತಾ, ಒಬ್ಬರನ್ನೊಬ್ಬರು ಕೀಟಲೆ ಮಾಡುತ್ತಾ ಊಟಮಾಡುತ್ತಿದ್ದರು. ಇದನ್ನೆಲ್ಲ ನೋಡುವುದೇ ಒಂದು ರಮಣೀಯ ದೃಶ್ಯ.
ಬೇರೆ ಬೇರೆ ಪ್ರಾಂತದವರಾದ, ಭಿನ್ನಮತೀಯರಾದ ಈ ಹುಡುಗರು ತಮ್ಮ ತಮ್ಮ ಪಾತ್ರೆಗಳ ಜೊತೆಗೆ ತಮ್ಮದೇ ಆದ ಮಸಾಲೆ ಪುಡಿಗಳನ್ನೂ ತಂದಿರುತ್ತಿದ್ದರು. ಆ ದಿನ ಯಾರು ಅಡುಗೆ ಮಾಡುತ್ತಾರೋ ಅವರ ಮನೆಯಿಂದ ಬಂದ ಮಸಾಲೆಪುಡಿಯ ಉಪಯೋಗವಾಗುತ್ತಿತ್ತು. ತಮಿಳುನಾಡಿನ ಹುಡುಗನ ‘ವೇಪ್ಪೆಲೈ ಕಟ್ಟಿ’, ಆಂಧ್ರದವನ ‘ಅಚ್ಚಕಾರದಪುಡಿ’, ಬಿಜಾಪುರದವನ ‘ಗುರೆಳ್ಳು ಪುಡಿ’ ಮತ್ತು ‘ಶೇಂಗಾ ಚಟ್ನಿಪುಡಿ’ ನನ್ನ ಮಗ ಕಾರ್ತಿಕ್ ತೆಗೆದುಕೊಂಡುಹೋಗಿದ್ದ ‘ಚಟ್ನಿಪುಡಿ’ ಮತ್ತು ವಾಂಗೀಬಾತಿನ ಪುಡಿ ಇವೆಲ್ಲವೂ ಯಾವ ವಂಚನೆಯೂ ಇಲ್ಲದೇ ಉಪಯೋಗವಾಗುತ್ತಿತ್ತು. ಆದರೆ ಆ ಹುಡುಗರು ತರಕಾರಿಗೆ ಪುಡಿಯನ್ನು ಬೆರೆಸುವಾಗ ಎಲ್ಲ ಡಬ್ಬಿಗಳನ್ನೂ ತೆಗೆದಿಟ್ಟುಕೊಂಡು ಯಾವ ಪುಡಿಯನ್ನು ಹಾಕುವುದೆಂದು ಪರದಾಡುವ ಪರಿಸ್ಥಿತಿ ಶೋಚನೀಯ! ನೋಡಿದರೆ ಕನಿಕರ ಉಕ್ಕಿ ಬರುತ್ತಿತ್ತು.
ನಾವು ಅರ ಜೊತೆಯಲ್ಲಿ ೩ ವಾರಗಳನ್ನು ಕಳೆಯುವುದೆಂದು ತೀರ್ಮಾನವಾಯಿತು. ಅವರು ಕೆಲಸದಿಂದ ಬಂದಮೇಲೆ ಅಡುಗೆ ಮಾಡಿ ನಮಗೆ ಉಣಲು ಬಡಿಸುವುದನ್ನು ನಾನು ಒಪ್ಪಲಿಲ್ಲ. ಅವರುಗಳು, ನನ್ನ ಮಗ ಕಾರ್ತಿಕನ ಅಡುಗೆಯ ಪಾಳಿ ಇರುವ ದಿನ ಮಾತ ನಾನು ಅಡುಗೆ ಮಾಡಬಹುದು ಎಂದು ಎಣಿಸಿದ್ದರಂತೆ. ಆದರೆ ಅವರೆಲ್ಲರೂ ನನ್ನ ಮಗನ ತರಹವೇ ಅಲ್ಲವೇ? “ಹಾಗಲ್ಲ; ನಾನು ಪ್ರತಿದಿನವೂ ನೀವು ಹಿಂತಿರುಗುವ ವೇಳೆಗೆ ಅಡುಗೆಯನ್ನು ಮಾಡಿ ಇಟ್ಟಿರುತ್ತೇನೆ” ಎಂದು ಘೋಷಿಸಿದೆ! ಅವರ ಅಪಾರ ಆನಂದಕ್ಕೆ ಎಣೆಯೇ ಇಲ್ಲವಾಯಿತು! ಅಲ್ಲಿಂದ ಪ್ರತಿದಿನವೂ ಮಧ್ಯಾಹ್ನ ೨ ಗಂಟೆಗೆಲ್ಲಾ ನಾನು ಅಡುಗೆ ಮಾಡಲು ಪ್ರಾರಂಭಿಸುತ್ತಿದ್ದೆ. ವಯಸ್ಸಿನ ಹುಡುಗರು, ಚೆನ್ನಾಗಿಯೇ ಊಟಮಾಡುತ್ತಿದ್ದರು, ಒಂದೇ ವೇಳೆ ಊಟತಾನೇ? ದೊಡ್ಡ ಪಾತ್ರೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಮಾಡಬೇಕಿತ್ತು. ರುಚಿಯಾಗಿ ಇರುತ್ತಿದ್ದ ಅಡುಗೆ ಹೆಚ್ಚಾಗಿಯೇ ಖರ್ಚಾಗುತ್ತಿತ್ತು. ಅಲ್ಲಿ ಇನ್ನೊಂದು ವಿಷಯ ನಡೆಯುತ್ತಿತ್ತು. ಈ ಹುಡುಗರ ಸ್ನೇಹಿತರು ಕೆಲವರು ಸಂಜೆ ಆಗಾಗ್ಗೆ ಬಂದು ನಮ್ಮನ್ನು ವಿಚಾರಿಸಿಕೊಲ್ಳುವಂತೆ ಬರುತ್ತಿದ್ದರು. “ಹಲೋ, ಅಂಕಲ್, ಆಂಟಿ ಹೇಗಿದ್ದಿರಾ? ಎಲ್ಲಿಗಾದರೂ ಹೋಗಿದ್ದಿರಾ? ಏನೇನು ಮಾಡಿದಿರಿ?” ಎಂದು ಲೋಕಾಭಿರಾಮವಾಗಿ ವಿಚಾರಿಸುವಂತೆ ಬರುತ್ತಿದ್ದರು. ಆದರೆ ಇದು ಕೇವಲ ತೋರಿಕೆಗೆ ; ಅವರು ಬರುತ್ತಿದ್ದುದು ಹಸಿವೆಯಿಂದ; ಅದಲ್ಲದೇ ನಾನು ಅಲ್ಲಿ ಅಡುಗೆ ಮಾಡುತ್ತಿದ್ದೇನೆಂದು ತಿಳಿದುಕೊಂಡಿದ್ದ ಅವರು ಆ ದಿನ ಏನಾದರೂ ಪುಷ್ಕಳ ಭೋಜನ ಇರಬಹುದೇನೋ ಎಂದೇ ಬರುತ್ತಿದ್ದರಂತೆ! ಇದೆಲ್ಲ ನಂತರ ಅವರು ಹೇಳಿಯೇ ಗೊತ್ತು. ನಾನು ಮಾಡುತ್ತಿದ್ದ ಅಡುಗೆಯ ಪರಿಮಳ ಅಕ್ಕ ಪಕ್ಕಗಳಲ್ಲಿ ವಾಸವಾಗಿದ್ದ ಇತರ ಭಾರತೀಯ ವಿದ್ಯಾರ್ಥಿಗಳ ಮೂಗಿಗೂ ಬಡಿದಿತ್ತಂತೆ!
ಒಂದು ದಿನ ಅವರ ಮಾತುಗಳಿಂದ ನನಗೆ ತಿಳಿದ ವಿಷಯವೇನೆಂದರೆ ಆ ಹುಡುಗರು ಪೂರಿ ಪಲ್ಯ ತಿಂದು ವರ್ಷಗಳೇ ಕಳೆದಿದ್ದುವು ಎಂಬುದು. ಸರಿ, ಎಂದು ನಾನು ಪೂರಿಪಲ್ಯಮಾಡಿ ಎಲ್ಲರಿಗೂ ತೃಪ್ತಿಯಾಗಿ ಬಡಿಸಬೇಕೆಂದು ನಿರ್ಣಯಿಸಿದೆ. ನೂರಾರು ಪೂರಿಗಳನ್ನು ಲಟ್ಟಿಸಬೇಕಾಗಬಹುದೆಂಬುದನ್ನು ಮನಗಂಡ ನಾನು ಅವರುಗಳ ಸಹಾಯವನ್ನೇ ಅಪೇಕ್ಷಿಸಿದೆ. ಖುಷಿಯಾದ ಅವರು ತಾವು ಎಲ್ಲ ಸಹಾಯ ಮಾಡುವುದಾಗಿಯೂ ಏನೇನು ಕೆಲಸ ಎಂದು ಹೇಳಿದರೆ ಸಾಕೆಂದರು. ಸರಿ, ಪುಟ್ಟದೊಂದು ಬೆಟ್ಟದಷ್ಟು ಹಿಟ್ಟನ್ನು ಅವರೇ ಹದವಾಗಿ ಕಲೆಸಿದರು. ಒಬ್ಬನು ಈರುಳ್ಳಿ ಹೆಚ್ಚಿದರೆ, ಮತ್ತೊಬ್ಬನು ಪೂರಿ ಲಟ್ಟಿಸಲು ನಿಂತ ; ದೊಡ್ಡ ಪಾತ್ರೆಯ ತುಂಬಾ ಪಲ್ಯ ತಯಾರಾಯಿತು. ಸರದಿಯ ಪ್ರಕಾರ ಎಲ್ಲರೂ ಪೂರಿ ಲಟ್ಟಿಸಿ ಅವನ್ನು ಎಣ್ಣೆಯಲ್ಲಿ ಹಾಕಿ ಕರಿದರು. ಪೂರಿಯ ಜೊತೆಗಿರಲೆಂದು ಮಧ್ಯಾಹ್ನವೇ ರವೆ ಸಜ್ಜಿಗೆಯನ್ನು ನಾನೇ ಮಾಡಿ ಇಟ್ಟಿದ್ದೆ. ಇವರೆಲ್ಲರೂ ಕುಕಿಂಗ್ ರೇಂಜ್ ಹತ್ತಿರ ನಿಂತುಬಿಟ್ಟರೆ ನನಗೆಲ್ಲಿ ಸ್ಥಳ? ಎಲ್ಲರೂ ಮನದಣಿಯ ತಿಂದರು. ಪರಸ್ಪರ ಉಪಚಾರ ಮಾಡಿಕೊಂಡರು! ಅವರ ಜೊತೆಗೆ ನಾವೂ ಕುಳಿತೆವು. ಆ ದಿನದ ಪೂರಿ ಪಲ್ಯಕ್ಕೆ ಅದೇನೋ ಒಂದು ಹೊಸರುಚಿ ಇದ್ದಂತೆ ನನಗೆ ಭಾಸವಾಯಿತು. ಮಾಮೂಲಿನಂತೆ ಅವರ ಸ್ನೇಹಿತರೂ ಬಂದರು. ಕೆಲವರನ್ನು ಫೋನ್ ಮಾಡಿ ಕರೆದದ್ದೂ ಆಯಿತು. ಶುಚಿರುಚಿಯಾದ ತಿಂಡಿಯನ್ನು ಅವರು ಎಲ್ಲರೊಡನೆ ಹಂಚಿಕೊಂಡು ತಿನ್ನುತ್ತಿದ್ದ ದೃಶ್ಯ ನೋಡಿ ನನ್ನ ಮನತುಂಬಿ ಬಂದಿತ್ತು. ಆದಿನ ಎಷ್ಟು ಪೂರಿ ತಿಂದಿರಬಹುದೆಂದು ಅವರು ಲೆಕ್ಕ ಮಾಡುವುದನ್ನು ನಾನು ತಡೆದೆ ; ದೃಷ್ಟಿಯಾದೀತೆಂದು?
ಆ ದಿನ ಆಹುಡುಗರು ತೊಳೆದ ಪಾತ್ರೆಗಳಿಗೆ ಲೆಕ್ಕವೇ ಇಲ್ಲ. ಪಾಪ! ವಿದ್ಯಾಭ್ಯಾಸದ ಒತ್ತಡ, ಕೆಲಸದ ಜವಾಬುದಾರಿ ಇವೆಲ್ಲ ಸಾಲದೆಂದು ಇವರಿಗೆ ಈ ಪಾತ್ರೆ ತೊಳೆಯುವ ಕೆಲಸಬೇರೆ? ಎಂದು ನಾವು ಪೇಚಾಡಿ ಕೊಂಡೆವು. ಆದರೇನು ಆ ದೇಶಕ್ಕೆ ಹೋದ ನಂತರ ಇವೆಲ್ಲ ಮಾಡದೇ ವಿಧಿ ಇಲ್ಲವಲ್ಲ? ಅದೇ, ನಮ್ಮ ಊರಿನಲ್ಲಾದರೆ ವಿದ್ಯಾರ್ಥಿಗಳಿಗೆ ಓದುವ ಕೆಲಸ ಒಂದು ಬಿಟ್ಟರೆ ಮತ್ಯಾವ ಯೋಚನೆಯೂ ಇರುವುದಿಲ್ಲ. ಕೆಲವು ಮನೆಗಳಲ್ಲಿ ಆಹಾರ ಮತ್ತು ಪಾನೀಯಗಳು ಸಹಾ ಓದಿನ ಮೇಜಿಗೇ ಬರುತ್ತದೆ. ಮಕ್ಕಳು ಚೆನ್ನಾಗಿ ಓದಿ ಉತ್ತಮ ಶ್ರೇಣಿಯಲ್ಲಿ ಪಾಸುಮಾಡಲೆಂದು ತಂದೆ ತಾಯಿಯರು ಅವರನ್ನು ಎಲ್ಲ ಒತ್ತಡಗಳಿಂದ ದೂರ ಇಡುತ್ತಾರೆ. ಆದರೆ ವಿದೇಶದಲ್ಲಿ ಓದುತ್ತಿರುವ ಮಕ್ಕಳು ಮನೆಯಲ್ಲಿ ಅಡುಗೆ ತಯಾರಿಸಿಕೊಂಡು, ಮನೆಯ ಶುಚಿತ್ವವನ್ನೂ ಕಾಪಾಡಿಕೊಂಡು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕಾಗುತ್ತದೆ; ಇಷ್ಟೇ ಅಲ್ಲದೇ ಹಣ ಸಂಪಾದಿಸಲು ಹಲವಾರು ಕಡೆಗಳಲ್ಲಿ ದುಡಿಯಲೂ ಬೇಕಾಗುತ್ತದೆ. ಅವರಿಗೆ ಇವು ತಮ್ಮ ವಿದ್ಯಾರ್ಥಿ ಜೀವನದ ಅತೀ ಒತ್ತಡದ ದಿನಗಳು. ಇಷ್ಟೆಲ್ಲ ಸಂಕಷ್ಟಗಳ ನಡುವೆ ಅವರು ಓದಿ ಉತ್ತೀರ್ಣರಾಗಿ, ಒಂದು ಉತ್ತಮ ಉದ್ಯೋಗವನ್ನು ಗಳಿಸಿಬಿಟ್ಟರೆ, ಹಿಮಾಲಯಾ ಪರ್ವತವನ್ನೇರಿದಂತಹ ವಿಜಯೀ ಭಾವನೆ ಅವರಲ್ಲಿ ಉಂಟಾಗುವುದರಲ್ಲಿ ಆಶ್ಚರ್ಯ ವೇನಿದೆ?
ಈ ಯುವಕರ ಕೋಣೆಗಳ ಬಗ್ಗೆ ಹೇಳಲೇ ಬೇಕು. ಇವರೆಲ್ಲ ಬೇರೆ ಬೇರೆ ಪ್ರಾಂತದವರು, ಭಿನ್ನಮತೀಯರು ಎಂದು ಹಿಂದೆಯೇ ಹೇಳಿದ್ದೇನೆ. ಕೇರಳದ ಹುಡುಗನಾದ ಮಹೇಶನು, ಅಯ್ಯಪ್ಪ, ಗುರುವಾಯೂರಪ್ಪ ಮತ್ತು ಶ್ರೀ ಕೃಷ್ಣನ ಪರಮ ಭಕ್ತ. ಈ ದೇವರುಗಳ ಪಟ ಮತ್ತು ವಿಗ್ರಹಗಳನ್ನು ಜೋಡಿಸಿಕೊಂಡು ಪ್ರತಿದಿನವೂ ದೀಪ ಹಚ್ಚಿಟ್ಟು, ಊದಿನಕಡ್ಡಿಯ ಆರತಿಮಾಡಿ ‘ನಾರಾಯಣೀಯಂ’ ಹೇಳುತ್ತಾ ಪೂಜೆ ನಡೆಸುತ್ತಿದ್ದ. ಉತ್ತರ ಕರ್ನಾಟಕದ ಬಿಜಾಪುರದ ಹುಡುಗನಾದ ಪೂರ್ಣಪ್ರಜ್ಞನು, ಶಿವಲಿಂಗ, ಬಸವಣ್ಣ ಇವರುಗಳಿಗೆ ಶ್ರದ್ಧಾ, ಭಕ್ತಿಯಿಂದ ಮಣಿಯುತ್ತಿದ್ದ. ಆಂಧ್ರದ ಹುಡುಗನಾದ, ಸುನಿಲ್ ರೆಡ್ಡಿಯು ‘ಏಡುಕೊಂಡಲವಾಡ’ ಎನ್ನುತ್ತಾ ವೆಂಕಟರಮಣಸ್ವಾಮಿಯ ಪಟವನ್ನು ಪೂಜಿಸುತ್ತಿದ್ದ. ನನ್ನ ಮಗನಾದ ಕಾರ್ತಿಕನು ಮನೆ ದೇವರಾದ ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡುತ್ತಾ ಅಜ್ಜಿ ತಾತಂದಿರ ಫೋಟೋಗಳಿಗೂ ನಮಿಸುತ್ತಿದ್ದ. ಇವೆಲ್ಲವನ್ನೂ ವೀಕ್ಷಿಸಿದಾಗ ಆನಂದವೂ, ಆಶ್ಚರ್ಯವೂ ಆಗದಿರುತ್ತದೆಯೇ? ನನಗೆ ಆಗ ಅನಿಸಿದ್ದೇನೆಂದರೆ, ನಮ್ಮ ದೇಶದಿಂದ ದೂರ ಹೋದರೆ ನಮ್ಮ ಮೌಲ್ಯಗಳು ಮತ್ತೂ ಬೃಹತ್ತಾಗಿ ಕಾಣಬಹುದು; ಪರದೇಶದಲ್ಲಿ ಇಲ್ಲದಿರುವುದು ಏನೋ ನಮ್ಮಲ್ಲಿ ಇದೆ ಎಂದು ಅನಿಸುವುದು, ಇವೆಲ್ಲ ಸಹಜ. ಉಪಾಕiವನ್ನು ನೆರವೇರಿಸಲು ಆ ಚಳಿಯಲ್ಲಿ ಅನೇಕ ಮಲಿ ದೂರ ಕಾರಿನಲ್ಲಿ ಪ್ರಯಾಣ ಮಾಡಿಕೊಂಡು ಹೋಗಿಬಂದುದು ತಿಳಿದಾಗ ನಾನು ಆಶ್ಚರ್ಯಪಟ್ಟಿದ್ದೆ. ನಮ್ಮ ಹಿರಿಮೆ ಏನಿದೆ ಎಂದು ತಿಳಿಯಲೋಸುಗವಾದರೂ ನಮ್ಮ ಮಕ್ಕಳು ಕೆಲವು ದಿವಸಗಳಾದರೂ ಪರದೇಶದಲ್ಲಿದ್ದು ಬರಬೇಕು. ಭಾರತದಲ್ಲಿ ಏನೋ ಒಂದು ಕಡ್ಡಾಯಕ್ಕೆ ಒಳಪಟ್ಟು ದೇವಸ್ಥಾನಕ್ಕೆ ಹೋಗಿಬರುವ ಈ ಹುಡುಗರು ವಿದೇಶದಲ್ಲಿ ಪ್ರತಿ ೧೫ ದಿನಗಳಿಗೊಮ್ಮೆಯಾದರೂ ದೇವಸ್ಥಾನಗಳಿಗೆ ಹೋಗಿ ಪೂಜೆ, ಅರ್ಚನೆಗಳನ್ನು ಮಾಡಿಸುತ್ತಾರೆ. ತಾಯ್ನಾಡಿನಿಂದ ಬಲುದೂರ ನಡೆದಾಗ ನಮ್ಮ ಸಂಸೃತಿ, ಸಂಪ್ರದಾಯಗಳ ಹಿರಿಮೆ ನಿಚ್ಚಳವಾಗಿ ತೋರಿಬರುವುದೋ ಏನೋ?
ನಾವು ಅಲ್ಲಿ ಇರುವಾಗ ಆ ಹುಡುಗರು ಪ್ರತಿ ಶನಿ, ಭಾನುವಾರಗಳಳ್ಲಿ ನಮ್ಮನ್ನು ಸುತ್ತ ಮುತ್ತ ಇರುವ ಅನೇಕ ಪ್ರೇಕ್ಷಣೀಯ ತಾಣಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ಕೆಲಸವನ್ನು ನನ್ನ ಮಗನ ಪಾಲಿಗೆ ಮಾತ್ರ ಬಿಡದೇ ತಾವೂ ಇದರ ಜವಾಬ್ದಾರಿ ಹೊತ್ತಿದ್ದರು.
ಭಾರತದ ಅತ್ಯುತ್ತಮ ಪ್ರಜೆಗಳಾಗಬೇಕಾದ ಈ ಯುವಕರು ವಿದೇಶದಲ್ಲಿಯೇ ನೆಲಸಿಬಿಡುವರೇನೋ ಎನ್ನುವ ಸಂಶಯ ನಮ್ಮಲ್ಲಿ ಮೂಡುತ್ತಿತ್ತು. ಭಾರತಕ್ಕೆ ಹಿಂತಿರುಗಿ, ಏನೇನೋ ಸಾಧನೆಗಳನ್ನು ಮಾಡಬೇಕೆನ್ನುವ ಕನಸು ಕಾಣುತ್ತಾ ಅಲ್ಲಿಯ ಚಕ್ರವ್ಯೂಹದಲ್ಲಿ ಸಿಲುಕಿ ಬಿಡುವ ಸಂಭವಗಳೇ ಹೆಚ್ಚು. ಆದೇಶದಲ್ಲಿ ಸಿಗುವಂತಹ ವೇತನ, ಅಲ್ಲಿಯ ಸೌಕರ್ಯಗಳು, job opportunities ಇವುಗಳ ಸುಳಿಯಲ್ಲಿ ಸಿಲುಕುವವರೇ ಹೆಚ್ಚು. ಆದರೆ ಈ ಎಲ್ಲ ಸಂಕೋಲೆಗಳನ್ನು ಕಳಚಿಕೊಂಡು ತಾಯ್ನಾಡಿಗೆ ಹಿಂತಿರುಗಿ ಬರುವವರ ಸಂಖ್ಯೆ ಏನೂ ಕಡಮೆ ಇಲ್ಲ! ಇಂತಹ ಯುವಕರ ಸಂಖ್ಯೆ ದಿನೇ ದಿನೇ ವರ್ಧಿಸಲಿ ಎಂದು ಹಾರೈಸುವುದೇ ಹಿರಿಯರಾದ ನಮ್ಮ ಕರ್ತವ್ಯ.
*-ಜಯಂತಿ ಅಮೃತೇಶ್
‘ಕೃತ್ತಿಕ’, ನಂ. 40, 6ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು 570 009
(0821) 2543472
08453 12952
email: jayanthiamrutesh@gmail.com