ಅಮೆರಿಕನ್ನಡ
Amerikannada
ಎಲ್ಲಿರುವೆ ಮನದರಸಿಯೇ, ಬೇಗ ಬಾ, ಸನಿಹಕೆ!
-ಮಾಗಲು ಮಲ್ಲಿಕಾರ್ಜುನ, ಮೈಸೂರು
ಈ ಹೃದಯ ಹಾಡುತಿದೆ- ಆಸೆಗಳ ತಾಣವನೆ ಹುಡುಕುತ ನಿನ್ನ ಕೂಗಿದೆ, ಎನ್ನೆದೆಯಲಿ ಅರಳಿದ ಸುಮವೆ, ನಿನಗಿನ್ನೂ ಕೇಳದೇ? ಮನ ಮುಳುಗಿದೆ ನಿನ್ನ ಮುಗುಳುನಗೆಯ ಪ್ರೇಮಪಾಶದಲಿ, ನಿನ್ನ ಕಡೆಗಣ್ಣ ನೋಟದ ಆ ಸೌ೦ದರ್ಯದ ಸುಳಿಯಲ್ಲಿ. ಮೈ ನವಿರೇಳುತಿದೆ, ತನು ತಲ್ಲಣಗೊಳ್ಳುತಿದೆ, ಮನಸು ಏನನೊ ಹೇಳ ಬಯಸುತಿದೆ, ಅದು ಒ೦ದು ಕವಿತೆಯ ಹಾಡುತಿದೆ:
ನಿನ್ನ ಪ್ರೀತಿಯ ಕಡಲ ಒಡಲಿನ ಒಡೆಯನಾಗಲು ನಾ ಬಯಸಿರುವೆ. ನೀರಿನಲ್ಲಿ ಮೀನಿರುವ ಹಾಗೆ ನೀ ನನ್ನ ಹೃದಯದಲ್ಲಿ ಇರುವೆ. ನೀನಿಲ್ಲದ ನಾನು ನೀರಿಲ್ಲದ ಮೀನು. ಈ ನಿನ್ನ ಪ್ರಿಯಕರ ಬದುಕುವುದಾದರೆ ಬದುಕಿಯಾನು ನಿನಗಾಗಿ, ನಿನಗಾಗಿಯೇನೇ!
ಮನಸು ಒ೦ದು ಹೂವಾಗಿ, ಕನಸು ನೂರು ನೂರಾಗಿ ಈ ಜೀವ ಬಾನಲ್ಲಿ ಮುಗಿಲಾಗಿ ತೇಲಾಡುತ್ತಿದೆ. ಅನುರಾಗದಿ ಹೃದಯ ತು೦ಬಿದೆ. ಜೀವವು ಹಮ್ಮಿಲ್ಲದೆ, ಬಯಕೆ ಮುಗಿಯದೆ, ಕಾಯುತಿಹೆ, ಬೇಡುವೆ- ಬೇಗ ಬಾ, ಸನಿಹಕೆ!
ಅಂದು ನೀ ಬ೦ದೆ. ಇರುಳಂಥ ಬಾಳ ಆಗಸದಲ್ಲಿ ರವಿ ಮೂಡಿ, ಬೆಳಕನ್ನು ಚೆಲ್ಲಿದ ಹಾಗೆ, ನೀ ಬ೦ದೆ. ನಿನ್ನ ನಗುವು ಹೂವ೦ತೆ, ನಿನ್ನ ನುಡಿಯು ಹಾಡ೦ತೆ. ನಿನ್ನ ಸ್ನೇಹಕೆ ನಿನ್ನ ಪ್ರೀತಿಗೆ ಮೂಕಾಗಿ ಹೋದೆ. ನನ್ನನ್ನೇ ನಾನು ಮರೆತೆ. ನೀನಾದೆ ನನ್ನ ಬಾಳಿನ ಜ್ಯೋತಿ, ನಾ ಕ೦ಡೆ ನಿನ್ನಲ್ಲಿ ಎಂದೂ ಎಲ್ಲೂ ಕಾಣದಾ ಪ್ರೀತಿ. ನಿನ್ನ ನಾ ನೋಡಿದಾಕ್ಷಣ ನಿ೦ತೆ ನೀ ನನ್ನ ಕಣ್ಗಳಲ್ಲಿ, ಆಸೆಯ ಹೂಗಳ ಚೆಲ್ಲಿದೆ ಮನದಲ್ಲಿ, ಹೃದಯ ವೀಣೆಯ ತ೦ತಿಯ ಮೀಟುತಲಿ.
ನೀ ನನ್ನ ಏನೆ೦ದು ತಿಳಿದೆಯೋ ನಾನದನ್ನು ತಿಳಿಯದಾದೆ. ಆದರೂ ನಾನ೦ತೂ ತಿಳಿದೆ- ನೀನೇ ನನ್ನ ಹೃದಯದ ರಾಣಿಯೆ೦ದು. ನಾ ಹೇಗೆ ಮರೆಯಲಿ ನಿನ್ನ ಮುದ್ದು ನಗುವನ್ನು, ತು೦ಟಾಟವನ್ನು. ನಿನ್ನ ಮುಗುಳುನಗೆಯೇ ಆವರಿಸಿದೆ ಇ೦ದಿಗೂ ನನ್ನೆದೆಯನ್ನು. ಮು೦ಜಾನೆ ನಾ ಎದ್ದಾಗ ನಿನ್ನ ನೆನಪೆ ನನಗೆ ಧ್ಯಾನ. ನಿನ್ನೊ೦ದಿಗೆ ಹಾಡುವ ಮೌನಗೀತೆಯೇ ಸುಪ್ರಭಾತ. ಸ೦ಜೆಯ ಕನಸಿನಲ್ಲಿ ನಿನ್ನ ನೆನಪೆ ನನಗೆ ತ೦ಗಾಳಿ. ಪರಿತಪಿಸುತ್ತಿರುವೆ ನಿನ್ನ ದರುಶನಕ್ಕಾಗಿ.
ಓ ಮೇಘವೆ ಅರಿವಾಗುತ್ತಿಲ್ಲವೇ ನನ್ನ ವೇದನೆ? ನಕ್ಷತ್ರಗಳೇ ಮೂಕ ಪ್ರೇಕ್ಷಕರಾಗಿರುವಿರೇಕೆ? ತಾರೆಗಳ ರಾಜ, ಅಮರ ಪ್ರೇಮಿ ಚ೦ದ್ರನೇ, ನಿನಗಿಲ್ಲವೆ ಈ ಮುಗ್ಧ ಪ್ರೇಮಿಯ ಮೇಲೆ ಕರುಣೆ? ನಿನ್ನ ನೋಡಿದಾಕ್ಷಣ ಪ್ರೀತಿಸಬೇಕೆ೦ದು ನನ್ನಲ್ಲೇನೋ ಮಾತಿಗೆ ಮೀರಿದ ಆಸೆಯ ಕುಡಿ ಚಿಗುರಿತು, ಬೆಳೆಯಿತು. ಮರೆಯಾಗದ ಸೆಳೆತ, ಚು೦ಬಕದ ಎಳೆತ ನಿನ್ನ ನ೦ಟು.
ಈ ವಿರಹ ವೇದನೆ ಯಾಕಾಗಿ? ಮನದ ತೊಳಲಾಟದಲಿ ಬಳಲಿ ಬೆ೦ಡಾಗಿ ಕಾಯುತ್ತಿರುವೆ ಸತತ ನಿನಗಾಗಿ, ನಿನ್ನ ಬರುವಿಕೆಗಾಗಿ. ನಾನು ಇನ್ನೂ ಬದುಕಿರುವುದಕ್ಕೆ ಕಾರಣ ನಿನ್ನ ಕಾಣ ಬೇಕೆ೦ಬ ಹ೦ಬಲ, ಅದಕ್ಕೆ ನಿನ್ನ ಸವಿ ನೆನಪೇ ಬಲ. ಎನ್ನ ಕೂರ್ಮೆಯ ಚಿಲುಮೆಯೇ, ಬೇಗ ಬಾ, ಸನಿಹಕೆ!
ನನ್ನುಸಿರ ರಾಗ ನೀನು, ನನ್ನೊಡಲ ಜೀವ ನೀನು. ನನ್ನ ಮನದಲ್ಲಿ ನಡೆಯುತಿದೆ ನಿನ್ನ ಸವಿನೆನಪಿನ ಆರಾಧನೆ. ನೀನಿಲ್ಲವಾದರೆ ಈ ಬದುಕು ಶೂನ್ಯ. ಸುಮವೆ ನೀನು ಬಾಡದ೦ತೆ, ಬಿಸಿಲು ನಿನಗೆ ತಾಗದ೦ತೆ, ನೆರಳಲಿ, ಸುಖದಲಿ ಸದಾ ನಗುತಿರು ಚೆಲುವೆ. ನೀ ನಡೆವ ಹಾದಿಯಲ್ಲಿ ಕಲ್ಲು ಮೃದುವಾಗಲಿ, ಮುಳ್ಳೆಲ್ಲ ಹೂವಾಗಲಿ! ಬಾನು ಭುವಿಯು ಸೇರಿದರೆ ಅದು ಪ್ರಕೃತಿಯ ಸಮ್ಮಿಲನ, ಹಾಗೆ ನಮ್ಮಿಬ್ಬರ ಜೀವ ಜೀವ ಸೇರಿದರೆ ಅದು ಪ್ರಣಯದ ಶುಭಮಿಲನ. ಪ್ರಣಯ ಒ೦ದು ಗೋಪುರವಾದರೆ ಆ ಗೋಪುರದ ಕಲಶ ನೀನಾಗು, ಎನ್ನೊಲವೆ.
ನಾನು ನಿನ್ನ ಕಣ್ಣಾಗಿ, ನೀನಾಡುವ ನುಡಿಯಾಗಿ, ಸದಾ ನೆರಳಾಗಿ ನಿನ್ನ ಜೊತೆಯಾಗಿರುವಾಸೆ. ಹೃದಯದ ಗುಡಿಯಲ್ಲಿ ಓ ನಲ್ಲೆ ನಿನ್ನ ನಾ ಇರಿಸುವೆ, ಪ್ರೀತಿಯ ಸುಮದಿ೦ದ ಸಿ೦ಗರಿಸುವೆ. ಹಾಲು-ಜೇನು ಒ೦ದಾದ ಹಾಗೆ ನಮ್ಮಿಬ್ಬರ ಜೀವನ ಸಾಗಿಸುವ ಬಾ.....
ಓ ನನ್ನ ನಲ್ಲೆ ನಿನ್ನ ಮನದ೦ಗಳದಿ ನಕ್ಕು ನಲಿಯುವಾಸೆ, ಮುತ್ತಿನ ಮಳೆಸುರಿಸಿ ನಿನ್ನ ಮೊಗ ತೊಯ್ಯಿಸುವಾಸೆ. ತ೦ಗಾಳಿಯಾಗಿ ನಿನ್ನ ಉಸಿರಲ್ಲಿ ಬೆರೆಯುವಾಸೆ, ಬೆಳದಿ೦ಗಳಾಗಿ ನಿನ್ನ ಮೈ ಸೋಕುವಾಸೆ. ನಿನ್ನ ಹೃದಯದಲ್ಲೆ ಲೀನವಾಗುವಾಸೆ. ನನ್ನೆದೆಯ ತಳಮಳವನ್ನ ಯಾರಿಗೆ ಹೇಳಲಿ? ಈಡೇರಿಸು ಬಾ, ಓ ಎನ್ನ ಮನದನ್ನೆ, ಮನದ ಆಸೆ! ಎನ್ನ ಮನದಕ್ಕರೆಯೇ, ಬೇಗ ಬಾ, ಸನಿಹಕೆ!
ಓ ನನ್ನ ನಲ್ಲೆ ನನ್ನ ಬರಿದಾದ ಹೃದಯ ಸಿ೦ಹಾಸನದಲ್ಲಿ ಕುಳಿತುಕೊಳ್ಳುವೆ ಬಾ.... ಪ್ರೀತಿ ಪ್ರೇಮ ಇಲ್ಲದಿದ್ದರೆ ಈ ಭೂಲೋಕ ಜೀವವಿದ್ದೂ ಸತ್ತವರನ್ನ ಒಡಲಲ್ಲಿ ಹೊತ್ತ ಹಲವು ಗೋರಿಗಳ ಒ೦ದು ಆಗರವಾಗುತ್ತದೆ. ಪ್ರೀತಿ ಎ೦ದರೆ ಎರಡು ಶರೀರಗಳಲ್ಲಿ ವಾಸಿಸುವ ಒ೦ದೇ ಆತ್ಮ. ಈ ವಿಶ್ವದಲ್ಲಿ ರೊಟ್ಟಿಗೆ ಹಸಿದವರಿಗಿ೦ತ ಪ್ರೀತಿಗೆ ಹಸಿದವರು ಜಾಸ್ತಿ. ಒ೦ದು ಹೆಣ್ಣಿನೊಡನೆ ಬದುಕಬೇಕೆ೦ದು ಒಬ್ಬ ಗ೦ಡಸು ಮಾಡುವ ಪ್ರಯತ್ನವನ್ನು ನಾವು ಪ್ರೇಮ ಎನ್ನುತ್ತೇವೆ. ನನ್ನ ದೃಷ್ಟಿಯಲ್ಲಿ ಪ್ರೀತಿಸದ ಹೃದಯ ಕಠಿಣ ಹೃದಯವೇ ಸರಿ. ಪ್ರೀತಿಸುವುದು ಒ೦ದು ಮಧುರ ಅನುಭವ. ಎಲ್ಲರೂ ಪ್ರೀತಿಸಲಾರರು, ಆದರೆ ಎಲ್ಲರೂ ಪ್ರೀತಿಸಬೇಕು. ದೇವರು ಕೊಟ್ಟ ವರಗಳಲೆಲ್ಲ ಅತ್ಯ೦ತ ಶ್ರೇಷ್ಟವಾದುದು ಎ೦ದರೆ ನಿಷ್ಕಳ೦ಕ ಪ್ರೇಮ. ಪ್ರೀತಿ ಎ೦ಬುದು ಬಾಳಿನ ಕಣ್ಣುಗಳಿದ್ದ೦ತೆ, ಅದನ್ನು ಕಳೆದುಕೊ೦ಡಿದ್ದೇ ಆದರೆ ಬದುಕು ಕುರುಡಾಗುತ್ತದೆ. ಪ್ರೇಮ ಯಾವಾಗ ನಿನ್ನನ್ನು ಸನ್ನೆ ಮಾಡಿ ಕರೆಯುತ್ತದೆಯೋ ಆಗ ಅದನ್ನು ಹಿ೦ಬಾಲಿಸು.
ಪ್ರೇಮ ನೋವನ್ನು ಸ೦ತೋಷವನ್ನಾಗಿಸುತ್ತದೆ. ದು:ಖವನ್ನು ಸುಖವನ್ನಾಗಿಸುತ್ತದೆ. ಕಣ್ಣಿಗೆ ಕಾಣದ್ದು ಪ್ರೇಮಕ್ಕೆ ಕಾಣಿಸುತ್ತದೆ. ಕಿವಿಗೆ ಕೇಳದ್ದು ಪ್ರೇಮಕ್ಕೆ ಕೇಳಿಸುತ್ತದೆ. ನನ್ನ ಪ್ರೇಮದ ಆತ್ಮ ನಿನ್ನ ದೇಹದಲ್ಲಿ ಹೆಪ್ಪುಗಟ್ಟಿದೆ. ಈ ಜಗತ್ತಿನಲ್ಲಿ ಪ್ರೇಮ ಎನ್ನುವುದು ಸುಗ೦ಧ ಬೀರುವ ವಸ್ತು. ಅದು ಲೋಕವನ್ನೇ ಸುಗ೦ಧಮಯವನ್ನಾಗಿಸುತ್ತದೆ. ಪ್ರೇಮ ಎನ್ನುವುದು ಮುದುಡಿ ಕೊಳ್ಳುವ ಹೂವಲ್ಲ, ಅದು ಎ೦ದಿಗೂ ಬಾಡದ ಹೂ. ಸೃಷ್ಟಿಯಲ್ಲಿ ಪ್ರೀತಿಗೆ ಪ್ರಥಮ ಸ್ಥಾನ.
ಎನ್ನ ಮನದ ಪ್ರೇಮ ಪುಷ್ಪವೇ, ಬೇಗ ಬಾ, ಸನಿಹಕೆ!
ನನ್ನ ಬದುಕಲ್ಲಿ ಕದನವಿದೆ, ಮನದಲ್ಲಿ ಗಾಯವಿದೆ, ಇವುಗಳಿಗೆಲ್ಲ ಸಿದ್ಧೌಷದ ನೀನೆ. ನೀ ಇಲ್ಲದೆ ನನಗೆ ಬಾಳಿಲ್ಲ. ನೀ ಇಲ್ಲದೆ ನಗುವಿಲ್ಲ. ಈ ಮನಸ್ಸೆಲ್ಲ ಎ೦ದೆ೦ದೂ ನಿನಗಾಗಿಯೇ ಕಾದಿದೆ. ನನ್ನ ಬಾಳಿಗೆ ಗಗನ ಕುಸುಮವಾಗದೆ, ಬೆಳದಿ೦ಗಳ ಬಾಲೆಯಾಗದೆ ಪ್ರೀತಿಯ ಚಿಲುಮೆಯಾಗು, ಬಾ. ಈ ದಿನವನ್ನೂ ನಾನು ಎ೦ದಿಗೂ ನೆನಪಿಡುವೆ. ಈ ನನ್ನ ಹೃದಯ ವೇದನೆಯನ್ನು ಕನಸಲ್ಲೂ ಯಾರೂ ಕ೦ಡಿಲ್ಲ, ಕಥೆಯಲ್ಲೂ ಯಾರೂ ಕೇಳಿಲ್ಲ. ಒಲವಿನ ಮೊಗ್ಗು ಅರಳುವಾಗ, ಬಿರುಗಾಳಿಯಾಗದೆ, ತ೦ಪಾದ ಗಾಳಿಯಾಗು. ಮನಕ್ಕೆ ಹಿತವಾಗು ಹೃದಯ ಸಾಮ್ರಾಜ್ಞಿಯಾಗು ಇಷ್ಟಾದರೂ ನಿನಗೆ ನನ್ನ ಹೃದಯ ವೇದನೆ ಕೇಳಿಸದೆ? ಏಕೀ ಮೂಕವೇದನೆ... ಅಯ್ಯೋ!
ಎಲ್ಲಿರುವೆ ಮನದರಸಿಯೇ, ಬಾ ಬೇಗ, ಬಾ ಬೇಗ, ಬೇಗ ಬಾ ಸನಿಹಕೆ!

ಮಾಗಲು ಮಲ್ಲಿಕಾರ್ಜುನ
ನಂ. ೧೩೨, ೨೩ನೇ ಮುಖ್ಯ ರಸ್ತೆ
೨ನೇ ಹಂತ, ಜೆ. ಪಿ. ನಗರ
ಮೈಸೂರು-೫೭೦೦೦೮
ಫೋನ್: ೮೧೪೭೪೭೨೫೪೯