ಅಮೆರಿಕನ್ನಡ
Amerikannada
ಈ ಪ್ರೀತಿ ಒಂಥರಾ ಕಚಗುಳಿ...
-ಭವಾನಿ ಲೋಕೇಶ್, ಮಂಡ್ಯ
ಜಗತ್ತಿಗೆ ಮತ್ತೊಮ್ಮೆ ಪ್ರೇಮಿಗಳ ದಿನ ಕಾಲಿರಿಸಿದೆ. ವಿಶ್ವದಲ್ಲೆಡೆ ಫೆಬ್ರವರಿ ೧೪ಕ್ಕೆ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಅದಕ್ಕೆ ಪೂರಕವಾಗಿ ಪ್ರೀತಿಯ ಕೊಂಚ ಮಾತುಗಳನ್ನು ಹಂಚಿಕೊಳ್ಳಬೇಕೆನಿಸಿತು.
ಬಹುಶಃ ಈ ಪ್ರೀತಿಯ ಬಗ್ಗೆ ಅಕ್ಷರ ತೋರಣ ಕಟ್ಟದ ಬರಹಗಾರರೇ ಇಲ್ಲವೆನ್ನಿಸುತ್ತೆ. ಯಾರೇ ಆಗಲಿ ಯಾವುದಾದರೂ ಸಮಯದಲ್ಲಿ ತಮ್ಮ ಜೀವಮಾನದ ಒಂದಷ್ಟು ಕ್ಷಣಗಳನ್ನಾದರೂ ಪ್ರೀತಿಯ ಪದಪುಂಜಗಳನ್ನು ಜೋಡಿಸಲು ಕುಳಿತಿರುತ್ತಾರೆ. ಅದರಲ್ಲೂ ಚಂದದ ಬರಹವಿದ್ದವರಿಗೆ ಒಮ್ಮೆಯಾದರೂ ತಮ್ಮನ್ನು ಪ್ರೀತಿಸುವವರಿಗೆ ನಾಲ್ಕು ಸಾಲಿನ ಪತ್ರವನ್ನೋ ಅಥವಾ ಆರು ಸಾಲಿನ ಕವನವನ್ನೋ ಬರೆಯಬೇಕೆನ್ನಿಸುವುದು ಸಹಜ. ಹಾಗೆ ಬರೆಯುತ್ತಾರೆ ಕೂಡ.
ಈ ಪ್ರೀತಿಯೆನ್ನುವುದೇ ಹಾಗೆ. ಕನಸುಗಳ ಮೋಡ ಕಟ್ಟಿ ಆಸೆಗಳ ಮಳೆ ಸುರಿಸುತ್ತದೆ. ಅದೊಂದು ವಾತ್ಸಲ್ಯದ ಅಮೂರ್ತಭಾವ ಸದಾ ಬಾಂಧವ್ಯಕ್ಕೆ ಹಾತೊರೆಯುವ ಭಾವನೆ. ಅದನ್ನು ಯಾಕಾದರೂ ಒಂದೇ ಒಂದು ವರ್ಗದಡಿಯಲ್ಲಿ ಬಂಧಿಸಿಡುತ್ತಾರೋ ತಿಳಿಯದು. ಪ್ರೇಮಿಗಳ ದಿನವೆಂದ ಕೂಡಲೇ ಕೆಲವು ಸಂಪ್ರದಾಯವಾದಿಗಳ ಕಣ್ಣು ಕಿವಿ ನೆಟ್ಟಗಾಗುತ್ತದೆ. ಆ ಆಚರಣೆಯ ವಿರುದ್ಧದ ಅಲೆಯೊಂದು ಅತ್ಯಂತ ವೇಗವಾಗಿ ರಾಕ್ಷಸ ಸ್ವರೂಪವನ್ನು ಪಡೆಯುತ್ತದೆ. ಹಾಗೆ ಮಾಡು ವವರಲ್ಲಿಯೂ ಪ್ರೀತಿಗೊಂದು ಭದ್ರವಾದ ಸ್ಥಾನವಿದ್ದೇ ಇರುತ್ತದೆ. ಯಾಕೆಂದರೆ ಜಗತ್ತಿನಲ್ಲಿರುವ ಎಲ್ಲ ಸಂಬಂಧಗಳ ಮೂಲ ಸೆಲೆಯೇ ಪ್ರೀತಿ. ಪ್ರೀತಿಯೊಂದಿಲ್ಲದಿದ್ದರೆ ಈ ಜಗತ್ತು ಇಷ್ಟು ಸೊಗಸಾಗಿರುತ್ತಿರಲಿಲ್ಲ ವೇನೋ. ಅದು ಯಾವುದರ ಮೇಲಿನ ಪ್ರೀತಿಯಾದರೂ ಆಗಿರಬಹುದು. ನಮ್ಮಲ್ಲಿನ ಹಸಿವು, ನೀರಡಿಕೆ, ನಿದ್ರೆ ಎಲ್ಲವೂ ಮಾನವ ಸಹಜ ವಾಂಛೆ ಹೇಗೋ, ಹಾಗೆಯೇ ಪ್ರೀತಿಯೂ ಕೂಡ ಮನುಷ್ಯನಲ್ಲಿ ಹುಟ್ಟುವ ಸಹಜವಾದ ಭಾವನೆ, ಅತಿಯಾದ ಪ್ರೀತಿಯಿಂದ ಮೋಹಪರವಶನಾಗುವನ್ನು ಮಾನಸಿಕ ರೋಗಿ ಎಂದು ಕರೆಯುವ ಹಾಗೆಯೇ ಮನಸ್ಸಿನಲ್ಲೊಂದಷ್ಟೂ ಪ್ರೀತಿ ಹುಟ್ಟದವನು ಕೂಡ ಮಾನಸಿಕ ರೋಗಿಯೇ. ಯಾಕೆಂದರೆ ಅವನಿಗೆ ಯಾವುದರ ಬಗ್ಗೆ ಆಸೆಯಾಗಲೀ, ಆಸಕ್ತಿಯಾಗಲೀ ಇರುವುದಿಲ್ಲ. ವಾಸ್ತವವಾಗಿ ಬದುಕಿನ ಬಗೆಗಿನ ಪ್ರೀತಿಯೇ ನಮ್ಮನ್ನು ಇನ್ನಷ್ಟು ಉತ್ಸಾಹದಿಂದಿರುವಂತೆ ಮಾಡುತ್ತದೆ.
ಮನಃಶಾಸ್ತ್ರ ಹೇಳುವ ಪ್ರಕಾರ ಪ್ರೀತಿ ಅದೊಂದು ಸಂವೇದನೆಯ ಸಾಮಾಜಿಕ ವಿದ್ಯಮಾನ. ರಾಬರ್ಟ್ ಸ್ಟೆನ್‌ಬರ್ಗ್ ಎಂಬ ಮನಃಶಾಸ್ತ್ರ ಬಾಂಧವ್ಯ, ಆರೈಕೆ ಮತ್ತು ಅನ್ಯೋನ್ಯತೆ ಎನ್ನುವ ಮೂರು ಅಂಶಗಳು ಪ್ರೀತಿಯನ್ನು ರೂಪಿಸುತ್ತವೆ ಎನ್ನುತ್ತಾನೆ. ಪ್ರೀತಿ ಹುಟ್ಟಿಕೊಂಡ ಮರುಕ್ಷಣವೇ ಅವರೊಂದಿಗಿನ ಬಾಂಧವ್ಯ ಬಲವಾಗಲಿ ಅಂತ ಮನಸ್ಸು ಹಾತೊರೆಯುತ್ತದೆ. ಅವರ ಕಷ್ಟ ಸುಖ ನೋವು ನಲಿವುಗಳಲ್ಲಿ ಇನ್ನಿಲ್ಲದ ಆಸ್ಥೆ ತೋರಿಸಿ, ಅದರಲ್ಲಿ ಪಾಲ್ಗೊಂಡು ಹಾರೈಸುವತ್ತ ಮನವಾಲುತ್ತದೆ. ಅಂತಹ ಪಾಲ್ಗೊಳ್ಳುವಿಕೆಯೇ ಅವರ ಜೊತೆಗಿನ ಅನ್ಯೋನ್ಯತೆಗೆ ಕಾರಣವಾಗುತ್ತದೆ. ‘ಲವ್ ಅಟ್ ಫಸ್ಟ್ ಸೈಟ್’ ಅನ್ನುವುದು ನಿಜವೇ ಆದರೂ ಮೊದಲ ನೋಟದ ಪ್ರೀತಿ ಬಲವಾಗುವುದು ಆ ವ್ಯಕ್ತಿಯ ವರ್ತನೆಯ ಕಾರಣದಿಂದ. ಬಾಹ್ಯ ಸೌಂದರ‍್ಯ ತಕ್ಷಣಕ್ಕೆ ಸೆಳೆತವನ್ನುಂಟು ಮಾಡುವುದಾದರೂ ಆ ವ್ಯಕ್ತಿಯ ವ್ಯಕ್ತಿತ್ವದ ಪರಿಚಯವಾಗುತ್ತಾ ಆಗುತ್ತ ಅವರೊಂದಿಗಿನ ಬಾಂಧವ್ಯ ಗಟ್ಟಿಯಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲವೊಮ್ಮೆ ಪ್ರೀತಿಸಲ್ಪಡುವ ವ್ಯಕ್ತಿಯ ತಪ್ಪು ನಡವಳಿಕೆಯೂ ಪ್ರೀತಿಸುವವರಿಗೆ ಸಹ್ಯವಾಗಿಬಿಡಬಹುದು, ಅದು ಕುರುಡು ಪ್ರೀತಿ ಮಾತ್ರ. ತಾನು ಆರಾಧಿಸುವ ವ್ಯಕ್ತಿ ಏನೇ ಮಾಡಿದರೂ ಅದು ಸರಿ ಎನ್ನುವುದು ಪ್ರೀತಿಯ ವಿಲಕ್ಷಣತೆಯನ್ನು ಸೂಚಿಸುತ್ತದೆ.
ಪ್ರೀತಿಗಿರುವ ಕವಲುಗಳು ಹಲವಾರು. ಸ್ನೇಹ ಆದಷ್ಟು ಬೇಗ ಪ್ರೀತಿಗೆ ತಿರುಗುವ ಹಾಗೆಯೇ ಪ್ರೀತಿಯನ್ನೊಮ್ಮೆ ಆರಾಧನೆಯೆಡೆಗೂ, ಭಕ್ತಿಯೆಡೆಗೂ ತಿರುಗುವ ಸಂಭವವಿರುತ್ತದೆ. ಚನ್ನಮಲ್ಲಿಕಾರ್ಜುನನೇ ತನ್ನ ಗಂಡನೆಂದುಕೊಂಡ ಅಕ್ಕಮಹಾದೇವಿಯಲ್ಲಿದ್ದುದು ಆತನೆಡೆಗೆ ಇದ್ದ ಭಕ್ತಿಯ ಪರಾಕಾಷ್ಠೆ. ಅಲ್ಲಿ ಬೇರಾವ ವಾಸನೆಗೂ ಅವಕಾಶವಿಲ್ಲ. ಕೃಷ್ಣನನ್ನು ಆರಾಧಿಸಿದ ಮೀರಾ, ಕಾಳಿಮಾತೆಯನ್ನು ಒಲಿಸಿಕೊಂಡ ಕಾಳಿದಾಸ ಇವರೆಲ್ಲರೂ ದೇವರೆಡೆಗಿನ ಪ್ರೀತಿಯನ್ನು ಭಕ್ತಿಯ ಶಿಖರಕ್ಕೆ ಕೊಂಡೊಯ್ದವರು.
ಇನ್ನು ಸಾಹಿತ್ಯಿಕ ಸಂದರ್ಭಗಳಲ್ಲಂತೂ ಬಹುಶಃ ಪ್ರೀತಿಯೆಂಬ ಪದವಿಲ್ಲದ ಪುಸ್ತಕಗಳೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಸಾಹಿತ್ಯದ ಎಲ್ಲ ಪ್ರಕಾರಗಳೂ ಪ್ರೀತಿಯನ್ನು ಅಪ್ಪಿಕೊಂಡಿವೆ. ಶೇ. ೭೦ರಷ್ಟು ಕಾದಂಬರಿಗಳು, ಶೇ. ೯೦ರಷ್ಟು ಧಾರವಾಹಿಗಳು ಪ್ರೀತಿಯ ವಿವಿಧ ಮುಖಗಳನ್ನೇ ಇಟ್ಟುಕೊಂಡು ಕಥೆ ಹೆಣೆಯುತ್ತವೆ. ಕವಿಯಾದವನು ಕೂಡ ತನ್ನ ಮೊದಲ ಮೊದಲ ಸಾಲುಗಳನ್ನು ಪ್ರೀತಿಯ ಮೇಲೆಯೇ ಬರೆದಾನು. ಯಾವುದೇನೆ ಇರಲಿ ಪ್ರೀತಿಯೆಂಬ ಮಾಯೆ ಇಡೀ ಜಗತ್ತನ್ನು ಆವರಿಸಿರುವುದಂತೂ ಸತ್ಯ ಸತ್ಯ ಸತ್ಯ ಅಲ್ಲವೇ.