ಅಮೆರಿಕನ್ನಡ
Amerikannada
ಎಲ್ಲಿ ಹೋಯ್ತ ನಿನ್ನ ಪ್ರೀತಿ?
-ಜಯಪ್ಪ ಹೊನ್ನಾಳಿ, ಮೈಸೂರು
ಎಲ್ಲಿ ಹೋಯ್ತ ನಿನ್ನ ಪ್ರೀತಿ?
ಇತ್ತಿತ್ತಲಾಗ...
ಎಲ್ಲೋ ಯಾಕ ನೋಡ್ತ ಕುಂತಿ?
ಅತ್ತತ್ತಲಾಗ....

ಸೂರ್ಯನಂತೆ ಉರಿಯುತ್ತಿದ್ದಿ
ಚಂದ್ರನಂತೆ ಮೆರಿಯುತ್ತಿದ್ದಿ
ಚಿಕ್ಕಿಯಂತೆ ಕಣ್ಣ ಮಿಟುಕಿ
ಜೇನು ಮಳೆಯ ಸುರಿಯುತ್ತಿದ್ದಿ
ಇಂದ್ಯಾಕ ಎಲ್ಲ ನಿಧನ?
ಚಿಂತಿ ತುಂಬಿದಂಥ ವದನ

ನಿನ್ನ ಕಣ್ಣ ದೀಪದುರಿಗೆ
ಮನ ಚಿಟ್ಟೆ ಚಡಪಡಿಸೈತಿ
ಹಿಮ ಬಂಡೆ ನಿನ್ನ ಸ್ಥಿತಿಗೆ
ಸುಮ ದಂಡೆ ಬಾಡುತೈತಿ
ನಿನ ಪ್ರೇಮ ನನ್ನ ನಿಧಾನ
ಇಲ್ಯಾಕ ನನ್ನೆಡೆ ಧ್ಯಾನ?

ಜನುಮದಿಂದ ಜಾರದ ಮೈತ್ರಿ
ತಂತ್ಯಾಕ ತಣ್ಣನೆ ರಾತ್ರಿ?
ಹಾಲ್ದಿಂಗಳ ತೀರದಲ್ಲಿ
ನಿಟ್ಟುಸಿರೆ ದೂರದಲ್ಲಿ?
ಚಿತ್ತ ಚಿತ್ತಾಗದೆ ಇಲ್ಲಿ!?
ಗುಲ್‌ಮೊಹರ ಗಲ್ಲಿಯಲ್ಲಿ!

ವೈರಾಗ್ಯ ಎಂಥ ನೀತಿ?
ದೈವದೂರ ದಾರಿ ಪ್ರೀತಿ!
ದೇವರಿಲ್ಲ ದೂರದಲ್ಲಿ
ಹುಡುಕಬೇಡ ಅಲ್ಲಿ ಇಲ್ಲಿ
ಇರುವುದಿಲ್ಲೆ ಪ್ರೀತಿಯಲ್ಲಿ
ಇತ್ತಲ್ಯಾಕ ನೋಡಲೊಲ್ಲಿ!?