ಅಮೆರಿಕನ್ನಡ
Amerikannada
ಶಿಲ್ಪಿ ಕಲೆಯ ಬೆಳೆಸಿಕೊ
ಡಾ. ಕೆ.ಆರ್.ಎಸ್. ಮೂರ್ತಿ
ಇಲ್ಲಿ ಬನ್ನಿರಿ, ಮನವಿಟ್ಟು ದಿಟ್ಟಿಸಿ ನೋಡಿರಿ, ಕಾಣುವುದಿಲ್ಲವೇ ನಿಮಗೆ ದೇವತೆಗಳು ಮುಕ್ಕೋಟಿ
ಕಲ್ಲಿನಲ್ಲಿ ಕಂಡಂತೆ, ಕಲ್ಪಿಸಿದನು ಕದೆವೆನಾ ಶಿಲ್ಪಿ ಉಳಿಯಲ್ಲಿ ಕೆತ್ತುವೆನು ಸುತ್ತಿಗೆಯನೆ ಕುಟ್ಟಿ ಕುಟ್ಟಿ
ಬಂಡೆಯದು ಬಿಳಿಯಾದರೇನು? ಕಪ್ಪೋ, ಕೆಂಪೋ, ಹಾಲಿನಂತೆಯೇ ಕಾಣುವ ಅಮೃತ ಶಿಲೆಯೋ
ಕಂಡೆ, ಕಣ್ಣು ಹಾಯಿಸಿದ ಎಡೆಯಲ್ಲಿ, ಎದೆಯಲ್ಲಿ ತುಡಿದಂತೆ, ಅಶರೀರ ವಾಣಿಯು ನುಡಿದಂತೆಯೋ

ಮನಹಾಯಿಸಿದ ತಾಣದಲೆಲ್ಲಾ ಕುಣಿಯುವುದೋ ದೇವತೆಗಳ ಕೂಟ; ಕೈಬೀಸಿ ಕರೆವರೋ ಬೇಡಿ
ಘನರೂಪವೆನಗೆ ಸಾದೃಶವೋ; ಶಿಲೆಯಲ್ಲಿ ಅಡಗಿ ಯುಗಗಳೇ ಕಳೆದಿಹವು ಬಿಡಿಸು ಆತುರ ಮಾಡಿ
ಉಳಿಗುಂಟು ಶ್ರೀ ರಾಮಚಂದ್ರನ ಮಹಿಮೆಯನೆ ಮೀರಿಸುವ ವಿಮೋಚನಾ ಶಕ್ತಿ; ಶಿಲೆಯಾಗಿದ್ದರೇನು?
ಬಳಿಬಂದು ಅಮೃತ ಹಸ್ತವನು ಸ್ಪರ್ಶಿಸಿದಾಗ ಶಾಪ ಗ್ರಸ್ತ ಅಹಲ್ಯೆಯು ಕಲ್ಲಿನಿಂದ ಎದ್ದು ಬರಲಿಲ್ಲವೇನು?

ದಿನವಲ್ಲ, ವಾರವಲ್ಲ, ಮಾಸಗಳಷ್ಟೇ ಅಲ್ಲ; ವರುಷಗಳೇ ಕಳೆದರೇನಂತೆ? ಆಯಸ್ಸು ಪೂರ್ತಿಯಾದರೆನಂತೆ?
ಧ್ಯಾನಕ್ಕೆ ಮಾನದ ಕಟ್ಟುನಿಟ್ಟು ಏನಾದರೂ ಉಂಟೆ? ಕಲೆಯ ಆರಾಧನೆಗೆ ಕಾಲದ ಅಳತೆಯಾದರೂ ಉಂಟೆ?
ನಿನ್ನೊಳಗಡೆಯೇ ಅಡಗಿರುವ ಬ್ರಹ್ಮಾಂಡದ ರೂಪವನ್ನು ಬಿಡಿಸಿವುದೇ ಧ್ಯಾನ; ಅದಿಲ್ಲದಿಲ್ಲವೋ ಆ ಮಹಾ ತ್ರಾಣ
ನಿನ್ನುಳಿಯೂ ನಿನ್ನೊಳಗೆ ಬಚ್ಚಿಟ್ಟುಕೊಂಡಿದೆಯೋ; ಅರಿತದೆಲ್ಲವನು ಅರಿತಿರುವೆಯೆಂದು ಅರಿಯುವುದೇ ಧ್ಯಾನ;