ಅಮೆರಿಕನ್ನಡ
Amerikannada
ಶಿವ ಶಿವ ಎಂದರೆ ಭಯವಿಲ್ಲಾ.....
-ಭವಾನಿ ಲೋಕೇಶ್, ಮಂಡ್ಯ
ದೇವಾಲಯದ ಪ್ರಾಂಗಣದಲ್ಲಿ ನಿಶ್ಯಬ್ಧವಾಗಿ ಕುಳಿತ ಭಕ್ತಾದಿಗಳು, ಒಳಗೆ ನಿರಂತರವಾಗಿ ಸಾಗುತ್ತಿದ್ದ ಪೂಜೆ, ಮಂತ್ರಘೋಷ, ಗಂಟೆಯ ನಿನಾದ, ಆಗಾಗ ಭಕ್ತಾದಿಗಳ ಗೌಜು ಗದ್ದಲ. ದೇವಾಲಯದ ಮುಂದೆ ನೂರಾರು ತಾವರೆಗಳರಳಿದ ದೊಡ್ಡದೊಂದು ಕೆರೆ. ಕೆರೆಯ ಮಧ್ಯದಲ್ಲಿ ಊರಿನ ಹುಡುಗರೇ ನಿಂತು ಮಾಡಿದ ಪುಟ್ಟದೊಂದು ದಿಬ್ಬ. ಅಲ್ಲೊಂದಷ್ಟು ಕೊಕ್ಕರೆ, ನವಿಲು, ಗಿಳಿ, ಮೊಲಗಳು ಇತ್ಯಾದಿ. ರಾತ್ರಿಯಿಡೀ ಬೆಳಗುವ ದೀಪ ಸಾಮ್ರಾಜ್ಯ. ಆವತ್ತಿಗೆಂದೇ ವಿಶೇಷವಾಗಿ ಕರೆಸಿದ ಹರಿಕಥೆ ದಾಸರಿಂದ ಭಕ್ತ ಮಾರ್ಕಂಡೇಯನ ಕಥಾ ಪ್ರಸಂಗ, ಸಾವಿನಂಚಿನಲ್ಲಿ ನಿಂತ ಮಾರ್ಕಂಡೇಯ ಶಿವನನ್ನು ಅಪ್ಪಿನಿಂತ ಘಳಿಗೆಗೆ ಕಥೆಯನ್ನು ಆಲಿಸುತ್ತಾ ಕುಳಿತ ಎಲ್ಲರ ಕಣ್ಣಲ್ಲೂ ಜಿನುಗಿದ ನೀರು. ಅದು ಮಾರ್ಕಂಡೇಯನ ಭಕ್ತಿಯ ಪರಾಕಾಷ್ಠೆ. ಕೊನೆಗೂ ವಿಧಿಯನ್ನು ಮೆಟ್ಟಿ ನಿಂತವನ ಮಹಿಮೆ ಕಂಡು ಎಲ್ಲರ ಮೊಗದಲ್ಲೂ ಮಂದಹಾಸ. ದಾಸರ ಬಾಯಲ್ಲಿ ಇಡೀ ಪ್ರಸಂಗ ವಿಶೇಷ ಸ್ಥಾನವನ್ನು ಪಡೆಯುತ್ತಾ ಸಾಗಿತ್ತು. ಅಂದು ಬೆಳಿಗ್ಗೆಯಿಂದಲೇ ಉಪವಾಸದಲ್ಲಿ ನಿರತರಾಗಿ ರಾತ್ರಿ ಹೊತ್ತಿಗೆಲ್ಲ ಶಿವಪೂಜೆಯನ್ನು ಸಾಂಗವಾಗಿ ನೆರವೇರಿಸಿ ಜಾಗರಣೆಯಲ್ಲಿ ತೊಡಗಿದ ಭಕ್ತಾದಿಗಳ ಮನದಲ್ಲಿದ್ದುದು ಒಂದೇ. ಶತಾಯಗತಾಯ ದೇವರ ಕೃಪೆಗೆ ಪಾತ್ರರಾಗಬೇಕು. ನಮ್ಮ ಭಕ್ತಿಯ ಪಾರಮ್ಯ ಎಲ್ಲಿಯವರೆಗೂ ಮುಟ್ಟುತ್ತದೆ ಎಂದರೆ, ಮಸಣದ ಬೂದಿಯನ್ನು ಬಳಿದುಕೊಂಡು, ನಾಗನನ್ನೇ ಆಭರಣವನ್ನಾಗಿಸಿ, ಢಮರುಗವನ್ನು ಕೈಯಲ್ಲಿ ಹಿಡಿದ ನಿರಲಂಕಾರಪ್ರಿಯ ಲಯಕಾರಕನಾದ ಶಿವನಿಗೆ ಆಭರಣಗಳನ್ನು ತೊಡಿಸುವ ಮೂಲಕ ವಿವಿಧ ಹೂವುಗಳಿಂದ ಅಲಂಕಾರ ಮಾಡುವುದರ ಮೂಲಕ ಮೆಚ್ಚಿಸುವ ಪ್ರಯತ್ನ ಮಾಡುತ್ತೇವೆ. ನಾವು ಹಾಕಿದ ಯಾವುದೋ ಇಂಡೆಂಟನ್ನು ಶಿವ ದಯಪಾಲಿಸಿದರೆ ಆಗ ನಮಗಿನ್ನೂ ಖುಷಿ. ಮಕ್ಕಳಿಗೆ ಚಾಕೋಲೇಟಿನ ಆಸೆ ತೋರಿಸಿದ ಹಾಗೆ ಶಿವನಿಗೂ ಉಡುಗೊರೆಯ ಆಸೆ ತೋರುತ್ತೇವೆ! ಇವೆಲ್ಲವುಗಳ ಹೊರತಾಗಿ ಸ್ವಾರ್ಥರಹಿತ ಭಕ್ತಿ ನಮ್ಮದಾಗಬೇಕು.
ಶಿವರಾತ್ರಿ ಎಂದ ಕೂಡಲೇ.... ಅಷ್ಟೇ ಯಾಕೆ ಹಬ್ಬಗಳೆಂದ ಕೂಡಲೇ ವರ್ಷಗಳ ಹಿಂದೆ ಹಬ್ಬಗಳನ್ನು ಆಚರಣೆ ಮಾಡುತ್ತಿದ್ದ ದಿನಗಳಿಗೆ ಮನಸ್ಸು ಓಡುತ್ತದೆ. ಆಗ ಇದ್ದ ಸಂಭ್ರಮ, ಸಡಗರ, ಹೊಸ ಬಟ್ಟೆಯನ್ನುಟ್ಟು ಅಲಂಕರಿಸಿಕೊಂಡು ನೆಂಟರಿಷ್ಟರ ಮನೆಗಳಿಗೆ ಓಡಿಯಾಡುತ್ತಿದ್ದ ಸೊಗಸು, ಮನೆಯಲ್ಲೇ ತಯಾರಿಸಿದ ಭಕ್ಷ್ಯ ಭೋಜನಕ್ಕೆ ಬಾಯಲ್ಲಿ ನೀರು ಸುರಿಸಿ ಸವಿಯುತ್ತಿದ್ದ ಪರಿ, ಊರಿಗೇ ಊರೇ ಹಬ್ಬದ ಸಂಭ್ರಮದಲ್ಲಿ ತೊಡಗುತ್ತಿದ್ದುದು ಎಲ್ಲವೂ ಮನಸಿನ ಮುಖ ಪುಟದಲ್ಲಿ ಚಲನಚಿತ್ರದ ರೀಲಿನಂತೆ ಹಾದುಹೋಗುತ್ತದೆ.
ಶಿವರಾತ್ರಿಯಲ್ಲಂತೂ ನನ್ನೂರು ಈಶ್ವರನ ಗುಡಿಯೇ ಪ್ರಾಧಾನ್ಯವಿರುವ ಊರಾದ್ದರಿಂದ ಬಸ್‌ನಿಲ್ದಾಣದಿಂದ ಹಿಡಿದು ದೇವಾಲಯದವರೆಗೂ ವಿದ್ಯುದ್ವೀಪಗಳಿಂದ ಅಲಂಕೃತಗೊಂಡು ಸಜ್ಜಾಗಿ ಬಿಡುತ್ತದೆ. ಒಂದಷ್ಟು ಉತ್ಸಾಹಿ ಯುವಕರು ಊರಿನವರೆಲ್ಲರ ಬಳಿಯೂ ಒಂದಷ್ಟು ಹಣ ಸಂಗ್ರಹಿಸಿ ಊರಿನ ಹಬ್ಬದ ಬಹುಪಾಲು ಖರ್ಚನ್ನು ನೋಡಿಕೊಳ್ಳುತ್ತಾರೆ. ನಮ್ಮೂರಿನ ಗುಡಿಗೆ, ಈಶ್ವರನಿಗೆ ನಡೆದುಕೊಳ್ಳುವ ಒಕ್ಕಲಿನ ಜನ ಈಗಂತೂ ಎಲ್ಲೆಲ್ಲೋ ದೂರದೂರುಗಳಲ್ಲಿ, ವಿದೇಶಗಳಲ್ಲಿ ನೆಲೆಯನ್ನು ಕಂಡುಕೊಂಡಿದ್ದರೂ ಸಹ ವರ್ಷಕ್ಕೊಮ್ಮೆ ಬಂದು ಪೂಜೆ ಮಾಡಿಸುವ ಪರಿಪಾಠವನ್ನಿಟ್ಟುಕೊಂಡಿದ್ದಾರೆ. ತಾವೇ ಬಂದು ನಿಲ್ಲಲಿಕ್ಕಾಗದಿದ್ದರೂ ದೇವಾಲಯಕ್ಕೊಂದಷ್ಟು ಸೇವೆಯ ರೂಪದಲ್ಲಿ ಹಣವನ್ನೋ, ಇತರೆ ವಸ್ತುಗಳಲ್ಲೋ ನೀಡುವವರಿದ್ದಾರೆ. ವಿಜ್ಞಾನ ಓದಿ, ವಿಚಾರವಂತರಾಗಿ, ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಿರುವವರೂ ಸಹ ಊರಿನ ದೇವತೆಗೆ ಹರಕೆ ಮಾಡಿಕೊಂಡು ಶಿವರಾತ್ರಿಯ ದಿನ ಬಾಯಿಬೀಗ ಎಂಬ ವಿಶಿಷ್ಟ ಆಚರಣೆಯನ್ನು ಮಾಡುತ್ತಾರೆ. ಅಂದು ಬೆಳಗ್ಗೆಯಿಂದಲೇ ಮಡಿಯನ್ನುಟ್ಟು ಹಸಿದು ಬಂದ ಭಕ್ತಾದಿಗಳ ಬಾಯಿಯ ಇಕ್ಕೆಲಗಳಲ್ಲೂ ಸಣ್ಣ ಲೋಹದ ತುಂಡೊಂದನ್ನು ಚುಚ್ಚುತ್ತಾರೆ. ಹರಸಿಕೊಂಡವರೆಲ್ಲರಿಗೂ ಬಾಯಿಬೀಗವಾದ ನಂತರ ಊರಿನ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗುತ್ತಾರೆ. ಉದ್ದಕ್ಕೂ ಮಡಿಯನ್ನು ಹಾಸುತ್ತಾ, ತಮಟೆಯ ನಾದದೊಂದಿಗೆ ಕಳಸ ಹಿಡಿದ ಭಕ್ತರನ್ನು ದೇವಾಲಯದ ಬಳಿಗೆ ಕೊಂಡೊಯ್ಯುತ್ತಾರೆ. ಹಾಗೆ ಸಾಗುವಾಗ ಬೆಳಿಗ್ಗೆಯಿಂದ ಹಸಿದಿದ್ದ ಕೆಲವರು ನಿತ್ರಾಣರಾಗಿ ಕುಸಿಯುವುದೂ ಉಂಟು. ಅಂಥವರನ್ನು ನೋಡಿಕೊಳ್ಳಲಿಕ್ಕೆಂದೇ ಪಕ್ಕದಲ್ಲಿ ಅವರ ಸಂಬಂಧಿಕರ ದಂಡೂ ಸಾಗುತ್ತಿರುತ್ತದೆ. ಹೀಗೆ ಸಾಗಿ ದೇವಸ್ಥಾನವನ್ನು ತಲುಪಿದ ನಂತರ ಅಲ್ಲಿನ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಧನ್ಯರಾಗುತ್ತಾರೆ. ಇನ್ನು ರಾತ್ರಿಯವರೆಗೂ ಉಪವಾಸ ವ್ರತವನ್ನು ಕೈಗೊಂಡವರು. ಪೂಜೆ ಮುಗಿಸಿ ರಾತ್ರಿ ಪ್ರಸಾದ ಸ್ವೀಕರಿಸಿ ಜಾಗರಣೆ ಮಾಡುತ್ತಾರೆ. ಮಾರನೆಯ ದಿನ ಬೆಳಗಿನವರೆಗೂ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳೋ, ಹರಿಕಥೆಯೋ ಇರುತ್ತದೆ. ಕೆಲವೊಮ್ಮೆ ತಿಂಗಳುಗಳ ಹಿಂದಿನಿಂದಲೇ ನಾಟಕದ ಅಭ್ಯಾಸ ಮಾಡಿ ಶಿವರಾತ್ರಿಗೆಂದೇ ಆಡಿದ್ದೂ ಉಂಟು. ಹೀಗೆ ಹಳ್ಳಿಗಳಲ್ಲಿ ಹಬ್ಬ ಒಂದು ವಿಶಿಷ್ಟ ಅರ್ಥವನ್ನು ಪಡೆಯುತ್ತದೆ. ಸಾರ್ಥಕ್ಯವನ್ನೂ ಹೊಂದುತ್ತದೆ.
ಇವತ್ತಿಗೆ ಈ ಬೆಲೆಯೇರಿಕೆಯ ನಡುವೆ ಯಾಂತ್ರಿಕ ಜೀವನದ ಸಾಗಾಟದ ಮಧ್ಯೆ ಹಬ್ಬಗಳಿಗೆ ಮಹತ್ವವೇ ಇಲ್ಲದಂತಾಗಿ ಹೋಗಿದೆ. ಕೆಲವರಿಗಂತೂ ಹಬ್ಬವೆಂದರೆ ಅದು ಸರ್ಕಾರಿ ರಜೆಯೋ, ಮನೆಯಲ್ಲಿನ ಪುಲ್ ರೆಸ್ಟೋ ಆಗಿಬಿಟ್ಟಿದೆ. ಮನೆಯ ಜನರೆಲ್ಲರೂ ದುಡಿಯುವ ಅನಿವಾರ್ಯತೆ, ವಿಶ್ರಾಂತಿ ಸಿಕ್ಕಿದರೆ ಸಾಕು ಅನ್ನುವ ಹಾಗಿರುವುದರಿಂದ ಇವೆಲ್ಲ ಸಹಜವೇ.
ಏನೇ ಆಗಲಿ ಹಬ್ಬಗಳು ನಮ್ಮ ಬದುಕಿನಲ್ಲಿ ತಂದುಕೊಡುವ ಸಂಭ್ರಮವೇ ಬೇರೆ. ಮನಸಿಗೆ ಮುದಕೊಡುವ ಅದರ ಖುಷಿಯೇ ಬೇರೆ. ಅಂಥ ಎಲ್ಲ ಸಂಭ್ರಮ, ಖುಷಿ ನಮ್ಮೆಲ್ಲರಿಗೂ ಸಿಗಲಿ ಅಂತ ಹಾರೈಸುವುದೊಂದೇ....