ಅಮೆರಿಕನ್ನಡ
Amerikannada
ಇಲ್ಲೊಂದು ಲೋಕ ಉಂಟು: ‘ಕಥೆ, ಚಾವಡಿ’ಗಳುಂಟು!
-ಪ್ರೊ. ಸಿ.ವಿ. ಶ್ರೀಧರಮೂರ್ತಿ
ಡಾ. ಸಿಂದುವಳ್ಳಿ ಅನಂತಮೂರ್ತಿಯ ವರ ಕನಸಿನ ಕೂಸಾದ “ಕಲಾಸುರುಚಿ” ಹಾಗೂ ಅದರ ಪ್ರಯೋಗ ಕೇಂದ್ರ ‘ಸುರುಚಿರಂಗಮನೆ’ (ಕುವೆಂಪುನಗರ, ಮೈಸೂರು.) ತನ್ನ ಪ್ರಯೋಗಶೀಲತೆಯಿಂದ ಎಲ್ಲರ ಮೆಚ್ಚುಗೆಗಳಿಸಿದೆ. ನಾಟಕಗಳೊಂದಿಗೆ ಉಳಿದ ಎಲ್ಲ ‘ಕಲಾಪ್ರಕಾರ’ ಗಳಿಗೂ ಸಮಾನ ಪ್ರಾಶಸ್ತ್ಯ ನೀಡುತ್ತಾ ಬಂದಿರುವುದು ಇಲ್ಲಿನ ವಿಶೇಷ. ಇದು ದಿವಂಗತ ಸಿಂದುವಳ್ಳಿಯವರ ಆಸೆಯೂ ಆಗಿತ್ತು. ‘ಆತ್ಮೀಯಗೃಹರಂಗ’ದ ಕಲ್ಪನೆಯೊಂದಿಗೆ ಆರಂಭವಾದ ಇದರಲ್ಲಿ ಈವರೆಗೆ ೧೫೦ಕ್ಕೂ ಹೆಚ್ಚಿನ ಕಾರ್ಯಕ್ರಮಗಳು ಜರುಗಿವೆ.
ರಂಗಮನೆಯ ಇತ್ತೀಚಿನ ವಿಶಿಷ್ಟ ಕಾರ್ಯಕ್ರಮ “ಕಥೆ ಕೇಳೋಣ ಬನ್ನಿ” ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ನಡೆದು ಬರುತ್ತಿದೆ. ಪ್ರತಿ ಶನಿವಾರ ಸಂಜೆ ೪:೩೦ ರಿಂದ ೫:೩೦ ರವರೆಗೆ ಇದು ನಡೆಯುತ್ತದೆ. ಸಂಜೆ ನಾಲ್ಕೂವರೆ ಗಂಟೆ ಆಯಿತೆಂದರೆ ಸಾಕು, ನೂರಾರು ಮಕ್ಕಳು ತಪ್ಪದೇ ಹಾಜರಾಗುತ್ತಾರೆ ಮತ್ತೆ ಬರುವಾಗ ತಮ್ಮ ಗೆಳೆಯರನ್ನೂ ಕರೆತರುತ್ತಾರೆ! ಇವರೊಂದಿಗೆ ಆಸಕ್ತ, ಕಥಾ ಪ್ರಿಯರಾದ ಹಿರಿಯರೂ, ಪೋಷಕರು ಸಹಾ ಆಗಮಿಸುತ್ತಾರೆ. ಪ್ರತಿ ಶನಿವಾರ ಸಾಯಂಕಾಲ ಎಳೆಗಿಳಿಗಳ ಬಳಗದ ಚಿಲಿಪಿಲಿ ಸದ್ದು ರಂಗಮನೆ ತುಂಬಾ ತುಂಬಿಕೊಳ್ಳುತ್ತದೆ! ಕಾರ್ಯಕ್ರಮ ಶುರುವಾಯಿತೆಂದೊಡನೆ ಗಪ್ಪ್‌ಚಿಪ್ಪ್! ಸಂಪೂರ್ಣನೀರವ, ನಿಶ್ಯಬ್ದ! ಸೂಜಿ ಬಿದ್ದರೂ ಕೇಳುವಂತಹ ವಾತಾವರಣ! ಈ ಕಾರ್ಯಕ್ರಮ ಈವರೆಗೆ ಒಂದು ವಾರವೂ ತಪ್ಪಿಲ್ಲ, ನಿಂತಿಲ್ಲ! ಹಬ್ಬ ಹರಿದಿನಗಳು ಬಂದರೂ ಎಂದಿನಂತೆಯೇ ಜರುಗಿದೆ! ನಿಜವಾಗಿ ಇದೊಂದು ದಾಖಲಾರ್ಹ ಸಂಗತಿಯೇ ಸರಿ.
ಇದರ ಹಿಂದೆ ಹಲವರ ಶ್ರಮವಿದೆ: ಮೂಲರೂವಾರಿಗಳೆಂದರೆ ಶಶಿಧರ ಡೋಂಗ್ರೆ, ಸುಮನಾ ಡೋಂಗ್ರೆ, ಶ್ರೀಮತಿ ವಿದ್ಯಾಶಂಕರ್ ಹಾಗೂ ಡಾ. ಎಚ್.ಕೆ. ರಾಮನಾಥ್. ಇದಕ್ಕೆ ರಂಗಮನೆಯ ಸ್ಫೂರ್ತಿ ಶಕ್ತಿ ಹಾಗೂ ಸೂತ್ರಧಾರಿಣಿಯಾಗಿರುವ ಹಿರಿಯ ಸೋದರಿಯಂತಿರುವ ಶ್ರೀಮತಿ ವಿಜಯಾ ಸಿಂಧುವಳ್ಳಿ ಅವರ ಬೆಂಬಲ, ಮಾರ್ಗದರ್ಶನ ಸದಾ ಇದೆ. ರಂಗಮನೆ ಆಪ್ತಬಳಗದವರಾದ ಪ್ರೊ. ಸಿ.ವಿ. ಶ್ರೀಧರಮೂರ್ತಿ, ಯು.ಎಸ್. ರಾಮಣ್ಣ, ಭದ್ರಪ್ಪ-ಶಿ-ಹೆನ್ಲಿ, ಶಶಿಧರ ಸಿಂಹ, ರಂಗಮಿತ್ರ, ನಾಗರಾಜ್, ಶ್ರೀಮತಿ ಹರಿಪ್ರಸಾದ್- ಇವರೆಲ್ಲರ ಸಹಕಾರ ಇದ್ದೇ ಇದೆ. ಜೊತೆಗೆ ನೂರಾರು ಕೈಗಳ ದುಡಿಮೆ, ಮನಸ್ಸುಗಳ ಹಾರೈಕೆಗಳ ಶ್ರೀರಕ್ಷೆಯಿದೆ.
ಕೇವಲ ಕಥೆ ಹೇಳುವುದು ಇಲ್ಲಿನ ಉದ್ದೇಶವಲ್ಲ ಆ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಾಸ ಪ್ರಮುಖ ಧ್ಯೇಯ. ಮನರಂಜನೆಯೊಂದಿಗೆ “ಮನೋವಿಕಾಸ”ದ ಗುರಿ ಇಲ್ಲಿದೆ. ಕಥಾ ಮಾಧ್ಯಮದ ಮೂಲಕ ಮಕ್ಕಳಲ್ಲಿ ಕಲ್ಪನಾಶಕ್ತಿ, ವಾಕ್‌ಶಕ್ತಿ, ಆಲಿಕೆಯ ಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯಗಳನ್ನು ಬೆಳೆಸುವುದು ಪ್ರಧಾನ ಆಶಯವಾಗಿದೆ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದನ್ನು ನೆನಪಿನಲ್ಲಿರಿಸಿಕೊಂಡು ಅವರನ್ನು ಸತ್ಪ್ರಜೆಗಳನ್ನಾಗಿ, ಯೋಗ್ಯ ನಾಗರಿಕರನ್ನಾಗಿ ರೂಪಿಸುವುದೇ ಈ ಕಥಾ ಕಾರ್ಯಕ್ರಮದ ಹಿಂದಿನ ಉದ್ದೇಶವಾಗಿದೆ. ಹೀಗಾಗಿಯೇ ಯಾವುದೇ ಬೇದ-ಭಾವಗಳಿಲ್ಲದೇ ಸಾಮಾಜಿಕ, ವೈಜ್ಞಾನಿಕ, ಜನಪದ, ಐತಿಹಾಸಿಕ, ಪೌರಾಣಿಕ ಕಥೆಗಳನ್ನು ಹೇಳಲೂಗುತ್ತದೆ. ಕಥೆ ಮುಗಿದ ಮೇಲೆ ಮಕ್ಕಳು ಏನನ್ನಾದರೂ ಕೇಳಿ ತಿಳಿದುಕೊಳ್ಳಬಗುದು. ಡಾ. ಎಚ್.ಕೆ. ರಾಮನಾಥ್ ಕಾಗುಣಿತ ಹಾಗೂ ಭಾಷಾಭ್ಯಾಸವನ್ನೂ ಮಾಡಿಸುತ್ತಾರೆ. ಹೀಗಾಗಿ ಇದೊಂದು ಪ್ರಾಯೋಗಿಕ ಕಾರ್ಯಕ್ರಮವೂ ಆಗಿದೆ. ಇಂದಿನ ಮಕ್ಕಳು ಶುದ್ಧ ಹಾಗೂ ತಪ್ಪಿಲ್ಲದ ಕನ್ನಡವನ್ನು ಆಡಲು, ಬರೆಯಲು ಕಲಿಯ ಬಹುದಾಗಿದೆ. ಕಥೆಗಾರರಿಗೆ ನೀಡಿರುವ ಸಂಪೂರ್ಣ ಸ್ವಾತಂತ್ರ್ಯ ಅಭಿವ್ಯಕ್ತಿಗೆ ಬಹಳ ನೆರವಾಗಿದೆ, ಮಕ್ಕಳು ಕಥನ ಕಲೆ ಮತ್ತು ಕಥೆ ಹೇಳುವ ಶೈಲಿಗಳನ್ನು ತುಂಬ ಚೆನ್ನಾಗಿ ಗ್ರಹಿಸುತ್ತಿದ್ದಾರೆ.
‘ಕಥೆ ಕೇಳೋಣ ಬನ್ನಿ’ ಆರಂಭವಾದದ್ದು ೨೦೦೭ನೇ ಫೆಬ್ರವರಿ ೩ನೇ ತಾರೀಖಿನಂದು (ಶನಿವಾರ); ಇದೀಗ (ಫೆಬ್ರವರಿ ೨೦೧೨ಕ್ಕೆ) ಐದು ವರ್ಷ ತುಂಬುತ್ತಿದೆ. ಈವರೆಗೆ ೧೦೬ ಮಂದಿ ಪ್ರತಿಭಾವಂತರು ಕಥೆ ಹೇಳಿದ್ದಾರೆ. ಇವರಲ್ಲಿ ನಾಗಲಕ್ಷ್ಮಿ ಹರಿಹರೇಶ್ವರ, ಪ್ರೊ. ಎಚ್.ಎಸ್. ವೆಂಕಟೇಶಮೂರ್ತಿ, ಭಾರ್ಗವಿನಾರಾಯಣ್, ಪ್ರೊ. ಜೆ.ಆರ್.ಲಕ್ಷ್ಮಣರಾವ್, ಮೀರಾನಾಯರ್, ಆರ್.ಟಿ. ರಮಾ, ಯು.ಎಸ್. ರಾಮಣ್ಣ, ಭದ್ರಪ್ಪ-ಶಿ-ಹೆನ್ಲಿ, ಪ್ರೊ. ವಿದ್ಯಾಶಂಕರ್, ಪ್ರೊ. ನೀ. ಗಿರಿಗೌಡ, ಡಾ. ಎಚ್.ಕೆ. ರಾಮನಾಥ್, ಡಾ.ರಮಾಜಿಬೆನ್ನೂರ್, ಡಾ.ಮೈಲಹಳ್ಳ ರೇವಣ್ಣ, ಸಿ.ವಿ. ಕೇಶವಮೂರ್ತಿ ಮುಂತಾದವರಿದ್ದಾರೆ. ಈಚೆಗಷ್ಟೆ ಕಥಾ ಕಾರ್ಯಕ್ರಮಕ್ಕೆ ‘ನೂರು’ ತುಂಬಿದ ಸಂಭ್ರಮ ವಿಶೇಷವಾಗಿ ಜರುಗಿತು. ಅಂದು ರಂಗಮನೆಯಲ್ಲಿ ಹಬ್ಬದ ವಾತಾವರಾಣ, ಸಿಹಿ ಹಂಚಿಕೆ. ನಾಡಿನ ಪ್ರಸಿದ್ಧ ರಂಗಕರ್ಮಿ ಹಾಗೂ ಲೇಖಕ ಬಿ.ಎಸ್. ಕೇಶವರಾವ್ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶತಶತಮಾನಗಳ ಹಿನ್ನೆಲೆ ಇರುವ ಈ ಮೌಖಿಕ ಪರಂಪರೆಯನ್ನು ‘ಕಲಾಸುರುಚಿ’ ಸಾರ್ಥಕವಾಗಿ ಬಳಸಿಕೊಳ್ಳುತ್ತಿದೆ, ಹೊಸ ಆಯಾಮ ನೀಡುತ್ತಿದೆ.
‘ಸಾಹಿತ್ಯ ಚಾವಡಿ’:
ಇನ್ನೂ ಬೇರೊಂದು ಲೋಕವನ್ನೂ ಪ್ರವೇಶಿಸೋಣ! ಅದು ಮುದ್ದು ಮಕ್ಕಳ ಮುಗ್ಧ ಲೋಕವಲ್ಲ! ಕನಸಿನ ಕಲ್ಪನೆಗಳ ಕಾಮನ ಬಿಲ್ಲುಗಳ ರಂಗು ತುಂಬಿದ ಹೋಳಿ ಸಂಭ್ರಮದ ಜಗತ್ತಲ್ಲ! ಬದಲಾಗಿ ಬೆಳೆದ ಮನಸ್ಸುಗಳ, ಪರಿಪಕ್ವ ವಿಚಾರಧಾರೆಗಳ, ಚಿಂತನಶೀಲತೆಯ ಪ್ರಪಂಚ! ‘ಕಲಾಸುರುಚಿ’ ಇದಕ್ಕೂ ವೇದಿಕೆ ಕಲ್ಪಸಿದೆ! ಹೆಸರೇ ಹೇಳುವಂತೆ ಇದು ನಿಜವಾದ ಆಸಕ್ತರ ಸಭೆ. ಅದಕ್ಕೆ ಇದನ್ನೂ ‘ಚಾವಡಿ’ ಎನ್ನಲಾಗಿದೆ. ಪ್ರತಿ ತಿಂಗಳ ಕಡೇ ಭಾನುವಾರ ಈ ಕಾರ್ಯಕ್ರಮದ ಏರ್ಪಾಡು. ಸಾಹಿತ್ಯಕ್ಕೆ ಸಂಬಧಿಸಿದ ಚರ್ಚೆ, ಮುಕ್ತ ಮಾತುಕಥೆ, ನಿರೂಪಣೆಗಳಿರುತ್ತಬೆ. ಹೀಗಾಗಿ ಇದು ‘ಸಾಹಿತ್ಯಚಾವಡಿ’ ‘ಚಾವಡಿ’ ಎಂಬ ಶಬ್ದವೇ ವಿಶಿಷ್ಟ ಅನುಭವ ನೀಡುತ್ತದೆ. ಒಬ್ಬರು ಪ್ರಧಾನ ವ್ಯಕ್ತಿ ನಿರ್ದಿಷ್ಟ ವಿಷಯ ಅಥವಾ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಾರೆ. ನಂತರ ಆಸಕ್ತ ಸಹೃದಯರು ಅವರೊಂದಿಗೆ ‘ಸಂವಾದ’ ನಡೆಸುತ್ತಾರೆ. ಮ೦ಡನೆ ಹಾಗೂ ವಿನಿಮಯಗಳೆರಡೂ ನಡೆಯುತ್ತವೆ. ಗಂಭೀರ ಗೋಷ್ಠಿಗಳು ಹಾಗೂ ಚಿಂತನ ಸಭೆ ಸಮಾರಂಭಗಳು ಕಡೆಮೆಯಾಗುತ್ತಿರುವ, ಪ್ರೇಕ್ಷಕರ ಕೊರತೆ ಎದುರಿಸುತ್ತಿರುವ ಈ ಸಮಯದಲ್ಲಿ ಇಂತಹ ಕಾರ್ಯಕ್ರಮಕ್ಕೆ ವಿಶೇಷ ಮಹತ್ವವಿದೆ. ‘ಚೌದ್ಧಿಕವಲಯ’ವನ್ನೂ ಸದಾಜಾಗರೂಕವಾಗಿಡುತ್ತಾ, ವಿಚಾರ ಸಾರಗಳೆಲ್ಲಾ ನಿಲ್ಲದೇ ಪ್ರವಹಿಸುವಂತೆ ಮಾಡುವಲ್ಲಿ ಇದರ ಅಗತ್ಯ ಬಹಳವಿದೆ ಆಲೋಚನೆ, ಚಿಂತನೆ, ಮಂಡನೆಗಳ ರೂಪದಲ್ಲಿ “ಸಾರಸ್ವತ ಜಗತ್ತು ನಿದ್ರಿಸದಂತೆ” ನೋಡಿಕೊಳ್ಳುವಲ್ಲಿ ಈ ಬಗೆಯ ಕಾರ್ಯಕ್ರಮಗಳ ಪಾತ್ರವೂ ಮಹತ್ವವೆನ್ನಬಹುದು. ನಾಡಿನ ಸಾಹಿತ್ಯಾಸಕ್ತರ ‘ಪ್ರಜ್ಞಾವಲಯ’ದ ವಿಸ್ತರಣೆಗೆ ಇದು ತುಂಬ ನೆರವಾಗುತ್ತಿದೆ.

ಇದರ ಬೆನ್ನೆಲುಬಾಗಿ ಭದ್ರಪ್ಪ-ಶಿ-ಹೆನ್ಲಿ ಹಾಗೂ ಶ್ರೀಮತಿ ಹರಿಪ್ರಸಾದ್ ನಿಂತಿದದಾರೆ. ಉಳಿದವರೆಲ್ಲ ಕೈಜೋಡಿಸಿದ್ದಾರೆ. ಇದು ಆರಂಭವಾದದ್ದು ೨೦೦೮ನೇ ಮಾರ್ಚ್ ೩೦ರಂದು. ಈ ಕಾರ್ಯಕ್ರಮಗಳನ್ನು ನಾಡಿನ ಹೆಸರಾ೦ತ ಲೇಖಕರು, ವಿದ್ವಾಂಸರು ಇದನ್ನೂ ನಡೆಸಿ ಕೊಟ್ಟಿದ್ದಾರೆ. ಡಾ. ಡಿ.ಎ. ಶಂಕರ್, ಡಾ. ಪ್ರಧಾನ್ ಗುರುದತ್ತ, ಡಾ. ಟಿ.ಆರ್. ಸತ್ಯನಾರಾಯಣ, ಪ್ರೊ. ಹಿ.ಶಿ. ರಾಮಚಂದ್ರೇಗೌಡ, ಡಾ. ಶುಭಚಂದ್ರ, ಪ್ರೊ. ಎಚ್. ಎಸ್ ಉಮೇಶ್, ಕಡವಿನ ಕೋಟೆರಾಮಚಂದ್ರ, ಶ್ರೀಮತಿ ಮಾಲತಿ, ರಾಮಶೇಷು, ಶ್ರೀಮತಿ ಶಶಿಕಲಾ ಹಾಗೂ ಪ್ರೊ. ಕೆ. ಪ್ರಭುಶಂಕರ್- ಇವರೆಲ್ಲಾ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ಸಿಗೆ ಕಾರಣರಾಗಿದ್ದಾರೆ. ಅನುವಾದ, ಜನಪದ, ಕೆ.ವಿ. ಅಯ್ಯರ್, ಜಿ.ಪಿ. ರಾಜರತ್ನಂ, ನಾಟಕ ಜಗತ್ತು- ಹೀಗೆ ಹಲವು ಹನ್ನೊಂದು ವಿಚಾರಗಳು ಬಂದು ಹೋಗಿವೆ. ಆಸಕ್ತರ ಜ್ಞಾನದಿಗಂತವನ್ನೂ ವಿಸ್ತರಿಸಿವೆ.
ಒಟ್ಟಾರೆ ಈ ಎರಡು ಕಾರ್ಯಕ್ರಮಗಳು ‘ಕಲಾಸುರುಚಿ’ಯ ಕಿರೀಟಕ್ಕೆ ಸೇರಿಸಿದ ಚಿನ್ನದ ಗರಿಗಳಾತಿವೆ. ಸಿಂಧುವಳ್ಳಿಯವರ ಕನಸುಗಳು ಇಂದಿಗೂ ಈ ಮೂಲಕ ನನಸಾಗುತ್ತಿವೆ. ರಂಗಮನೆಯ ಘನತೆ, ಗೌರವಗಳನ್ನು ಹೆಚ್ಚೆಸಿವೆ. ಇಂತಹ ಇನ್ನೂ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಈ ಸಂಸ್ಥೆ ಹಮ್ಮಿಕೊಳ್ಳಲಿ ಕಲಾಜಗತ್ತಿಗೆ ಅಪೂರ್ವ ಕೊಡುಗೆ ನೀಡಲಿ.
ಇದಕ್ಕೆಲ್ಲಾ ಮೂಲಕಾರಣರಾಗಿರುತ್ತಾ, ತೆರೆಮರೆಯಲ್ಲೆ ನಿಂತು ಆಶೀರ್ವದಿಸುತ್ತಾ, ಮಾರ್ಗದರ್ಶನ ಮಾಡುತ್ತಿರುವ ಶ್ರೀಮತಿ ವಿಜಯಾ ಸಿಂಧುವಳ್ಳಿಯವರಿಗೆ ನಮ್ಮೆಲ್ಲರ ಕೃತಜ್ಞತಾಪೂರ್ವಕ ನಮನಗಳು ಸಲ್ಲುತ್ತವೆ.
ಪ್ರೊ. ಸಿ.ವಿ. ಶ್ರೀಧರಮೂರ್ತಿ
ಕನ್ನಡ ವಿಭಾಗ ಮುಖ್ಯಸ್ಥರು, ಸಂತಫಿಲೋಮಿನಾ ಪದವಿ ಕಾಲೇಜು, ಮೈಸೂರು
೧೨೨, ೧ನೇ ಮುಖ್ಯ ರಸ್ತೆ, ೮ನೇ ತಿರುವು ಕೆಸರೆ,
೩ನೇ ಹಂತ ಮೈಸೂರು-೫೭೦೦೦೭.
ದೂರವಾಣಿ ಸಂಖ್ಯೆ:(೦೮೨೧)೨೪೯೩೪೩೮