ಅಮೆರಿಕನ್ನಡ
Amerikannada
ಜಿಂಕೆ-ಜಾನಕಿ
-ಸಂಧ್ಯಾ ರವೀಂದ್ರನಾಥ್, ಅಮೆರಿಕಾ
ಯಾವ ಭ್ರಮೆಯದು ಮರುಳು ಮಾಡಿತೋ? ಯಾಕೆ ಆಸೆಗಳ ಸುಳಿಗೆ ದೂಡಿತೋ? ರಘುಕುಲ ತಿಲಕನ ಮನದನ್ನೆಯನು, ಮಾಯಾ ಮೃಗದ ಕಾಮನೆ ಕಾಡಿತೋ!
ಮಿರಿಮಿರಿ ಮಿಂಚುವ ಜಿಂಕೆಯ ಬಣ್ಣ
ಸೆಳೆಯಿತೆ ತನ್ನೆಡೆ ಜಾನಕಿ ಕಣ್ಣ,
ಪಡೆಯಲು ಬಯಸಿ, ಮಿಡಿಯುತ ಮನಸು,
ಹೊಮ್ಮಿಸಿತೇ ಬಹು ಬಯಕೆಗಳನ್ನ!

ಪತಿಪಾದವೆ ಗುರಿಯಾಗಿರುವನಕ,
ಕಂಡಳು ವನವಾಸದಲೂ ಅತಿ ಸುಖ!
ಕಣ್ಣೋಟವು ಜಿಂಕೆಯ ಮೇಲೆರಗೆ,
ಅಗಲಿಕೆ, ತೆಗಳಿಕೆ ಉಸಿರಿರುವನಕ!

ಲಂಕಾಪುರಿಯ ಅಶೋಕವನದಿ,
ರಾಕ್ಷಸ ರಾಜನು ಪೀಡಿಸುತಿರಲು,
ವ್ಯಾಕುಲದಿಂದ, ಕಾತರಳಾಗಿ,
ರಾಮನಿಗಾಗಿ, ಹಲುಬುತಲಿಹಳು!

ಹೆದರಿಕೆ, ಬೆದರಿಕೆ ಕಾಡುತಲಿರಲು,
ವಿರಹದ ಉರಿಯಲಿ ಬೇಯುತಲಿಹಳು;
ಕಣ್ಣಿನ ಕಾಂತಿ, ಮನಸಿನ ಶಾಂತಿ,
ಕಾಣದೆ, ಭಯದಲಿ ಸೆರೆಯಾಗಿಹಳು!