ಅಮೆರಿಕನ್ನಡ
Amerikannada
ಕನ್ನಡದಲ್ಲಿ ಒಂದು ಪ್ರಮುಖ ಘಟ್ಟವಾಗಿ ನವ್ಯ ಸಾಹಿತ್ಯ
-ಶ್ವೇತಾ ಶರ್ಮ, ಮೈಸೂರು
೧೯೫೦-೧೯೮೦ರವರೆಗಿನ ಮೂರು ದಶಕಗಳ ಕಾಲ ಕನ್ನಡಸಾಹಿತ್ಯದಲ್ಲಿ ಒಂದು ಪ್ರಮುಖ ಘಟ್ಟವಾಗಿ ನವ್ಯಸಾಹಿತ್ಯ ವೆಂದು ನಿರ್ದೇಶಿಸಲ್ಪಟ್ಟು ಸಾಂಸ್ಕೃತಿಕವಾಗಿ ಮಹತ್ವದ ಕೊಡುಗೆಯನ್ನು ನೀಡಿದ ನವ್ಯಮಾರ್ಗದ ಒಂದು ಬಗೆ ಈಗ ನಿರ್ದಿಷ್ಟ ದೂರದಲ್ಲಿ ನಿಂತು ಬೆಲೆ ಕಟ್ಟುವ ಕೆಲಸ ಆರಂಭವಾಗಿದೆಯೆನ್ನಬಹುದು.
ನವ್ಯಸಾಹಿತ್ಯದ ಲೇಖಕರಲ್ಲಿ ಪ್ರಮುಖರಾದವರು ವಿನಾಯಕ ಕೃಷ್ಣ ಗೋಕಾಕರು. ತಮ್ಮ ಸಮುದ್ರ ಗೀತಗಳು, (೧೯೪೦) ಸಂಕಲನದಲ್ಲಿಯೇ ಹೊಸ ರೀತಿಯ ಪ್ರಯೋಗ ಮಾಡಿದ್ದಾರೆ. ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನ್ನು ಎನ್ನುವ ಮೂಲಕ ಮುಕ್ತ ಛಂದಸ್ಸನ್ನು ಬಳಸಿ ಹೊಸತನವನ್ನು ತರಲು ಪ್ರಯತ್ನಿಸಿದರು. ಅಭ್ಯುದಯ (೧೯೪೬)ದ ವೇಳೆಗೆ ಹೋಗಿಬರುವೆನು ನನ್ನ ಎಳೆಗನಸುಗಳೆ! ನಿಮ್ಮ ತಳಿರ್ಗೆಂಪು ಹೂಗಂಪು ತಂಗಾಳಿ ಮುಗಿದು! ಸಮರವನು ಸಾರಿಹುದು ಅಮರಶಕ್ತಿಯದೊಂದು ಎಂದು ಹೇಳಿ ನವೋದಯ ಕಾವ್ಯ ಪರಂಪರೆಗೆ ಒಂದು ರೀತಿಯ ಬೀಳ್ಕೊಡುಗೆ ಹೇಳಿದರು. ನವ್ಯ ಕವಿತೆಗಳು (೧೯೫೦) ಸಂಕಲನದ ಕವಿತೆಗಳು ಗೋಕಾಕರ ಹೊಸರೀತಿಯ ಕಾವ್ಯ ಪ್ರಯತ್ನಗಳಾಗಿವೆ. ಆದರೂ ಮೂಲತಃ ಅವರ ಮನೋಧರ್ಮ ನವೋದಯ ಕಾವ್ಯ ಸಂಪ್ರದಾಯಕ್ಕೆ ಹತ್ತಿರವಾದುದು. ಇಂಗ್ಲೆಂಡಿನಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಪ್ರಚಲಿತವಿದ್ದ ಮಾಡರ್ನಿಸ್ಟ್ ಪೊಯೆಟಿಯಿಂದ ಪ್ರಭಾವಿತರಾಗಿ ಕನ್ನಡದಲ್ಲಿ ನವ್ಯತೆಯನ್ನು ತಂದರೂ ಅವರು ನವೋದಯದಲ್ಲೇ ಬದುಕಿದರು. ಅರವಿಂದರ ಗಾಢ ಪ್ರಭಾವಕ್ಕೊಳಗಾದ ಇವರಿಗೆ ಅನುಭಾವ ಸಹ ಉತ್ಕಟ ಅನುಭವದ ಸ್ಥಿತಿಯಾಗದೆ, ನಿಜದ ಶೋಧನೆಯ ನೆಲೆಯೂ ಆಗದೆ ಅವರ ವಿಚಾರಕ್ಕೆ ಒಂದು ವಸ್ತುವಾಗಿಬಿಟ್ಟಿತು. ಇವರ ಭಾರತಸಿಂಧುರಶ್ಮಿ ಇವರ ನಿರಂತರ ಪ್ರಯೋಗಶೀಲತೆಗೆ ಮತ್ತೊಂದು ಸಾಕ್ಷಿ.
ಗಂಗಾಧರ ಚಿತ್ತಾಲ, ಸು.ರಂ.ಎಕ್ಕುಂಡಿ, ವಿ.ಜಿ.ಭಟ್ಟ, ಎಂ.ಅಕಬರ ಅಲಿ, ಶಂಕರ ಮೊಕಾಶಿ ಪುಣೇಕರ, ಅರವಿಂದ ನಾಡಕರ್ಣಿ ಮೊದಲಾದವರು ತಮ್ಮ ಕಾವ್ಯ ಜೀವನದ ಆರಂಭ ಘಟ್ಟದಲ್ಲಿ ಗೋಕಾಕರ ಚಿಂತನೆ, ಕಾವ್ಯಗಳಿಂದ ಪ್ರಭಾವಿತರಾದರು. ನಂತರದಲ್ಲಿ ತಮ್ಮದೇ ಆದ ದನಿಯನ್ನು ಗುರ್ತಿಸಿಕೊಂಡವರು. ನವ್ಯ ಸಂವೇದನೆಯ ಎಕ್ಕುಂಡಿ ಅವರಿಗೆ ಭಾವಗೀತಾತ್ಮಕತೆಯ ಬಗ್ಗೆ, ಬದುಕಿನ ಚೆಲುವಿನ ಬಗ್ಗೆ ವಿಶೇಷ ಆಸಕ್ತಿ; ಗಂಗಾಧರ ಚಿತ್ತಾಲರದು ಧೀರೋದಾತ್ತ ಚೇತನವನ್ನು ನವ್ಯ ಕಾವ್ಯ ಸಂದರ್ಭದಲ್ಲಿ ಸೃಷ್ಟಿಸಿದ ವಿಶಿಷ್ಟ ಪ್ರತಿಭೆ. ವಿಧಿಯ ಆಕ್ರಮಣವನ್ನು ವಿವಿಧ ಹಂತಗಳಲ್ಲಿ ಎದುರಿಸುತ್ತ ಕಾವ್ಯಸೃಷ್ಟಿಯ ಮೂಲಕವೇ ಉತ್ತರ ನೀಡಿದ ಚಿತ್ತಾಲರದು ಗಮನಾರ್ಹ ಸಾಧನೆ. ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದಾಗಿ, ಭಿನ್ನ ಆಲೋಚನೆಗಳಿಂದಾಗಿ ಸಮಕಾಲೀನ ಸಾಹಿತ್ಯದಲ್ಲಿ ಮುಖ್ಯರಾಗಿರುವ ಶಂಕರ ಮೊಕಾಶಿ ಪುಣೇಕರ ಅವರು ಕಾದಂಬರಿಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಅವರ ಗಂಗಮ್ಮ ಗಂಗಾಮಾಯಿ (೧೯೫೬) ನವ್ಯಸಾಹಿತ್ಯದ ಒಂದು ವಿಶಿಷ್ಟ ಪ್ರಯೋಗ. ವಿ.ಜಿ. ಭಟ್ಟರಲ್ಲಿ ಸಮರ್ಥ ವಿಡಂಬನೆಯಿದ್ದರೆ, ಅರವಿಂದ ನಾಡಕರ್ಣಿಯವರಲ್ಲಿ ನಗರ ಪ್ರಜ್ಞೆಯ ಯಶಸ್ವೀ ಅಭಿವ್ಯಕ್ತಿಯನ್ನು ನಾವು ಕಾಣಬಹುದು.
ತಮ್ಮ ಮೊದಲ ಸಂಕಲನ ಭಾವತರಂಗ (೧೯೪೬)ದಲ್ಲಿಯೇ ಸ್ವಂತಿಕೆಯ ಹಂಬಲವನ್ನು ದಟ್ಟವಾಗಿ ಪ್ರಕಟಿಸಿದ ಗೋಪಾಲಕೃಷ್ಣ ಆಡಿಗರು, ನಡೆದು ಬಂದ ದಾರಿ (೧೯೫೨) ಸಂಕಲನದ ವೇಳೆಗೆ ತಮ್ಮ ನಿಲುವಿನಲ್ಲಿ ಹೆಚ್ಚು ಸ್ಪಷ್ಟರಾಗಿದ್ದು, ಹೊಸ ಕಾವ್ಯ ಮಾರ್ಗದ ಅಗತ್ಯವನ್ನು ಪ್ರತಿಪಾದಿಸಿ ಭಿನ್ನರೀತಿಯ ಕಾವ್ಯರಚನೆ ಆರಂಭಿಸಿದರು. ಆಡಿಗರ ಕಾವ್ಯದುದ್ದಕ್ಕೂ ಕಂಡುಬರುವ ಬಹುಮುಖ್ಯ ಅಂಶ ಆಧುನಿಕ ಮಾನವನ ಸಂಘರ್ಷಸ್ಥಿತಿ, ದೇಹ ಮನಸ್ಸುಗಳ ಘರ್ಷಣೆಗೆ ಸಿಕ್ಕ ಮಾನವನ ಸ್ಥಿತಿಯೂ ಆಗಿದೆ. ಸಾಮಾನ್ಯ ಮನುಷ್ಯನಾಗಿ ಹುಟ್ಟಿ ಪುರುಷೋತ್ತಮನಾಗಿ ಬೆಳೆದ ರಾಮನ ಬದುಕಿನಲ್ಲಿ, ಆತನ ವ್ಯಕ್ತಿತ್ವ ವಿಕಾಸದಲ್ಲಿ ಆಸಕ್ತಿ ಹೊಂದಿದ ಅಡಿಗರಿಗೆ ಪ್ರತಿಯೊಬ್ಬ ವ್ಯಕ್ತಿಯು ತನಗೆತಾನೇ ವಿಕಾಸವಾಗಬೇಕು, ಈ ನೆಲದ ಪ್ರಜ್ಞೆ ಹೀರಿಯೇ ಬೆಳೆದು ದೊಡ್ಡವನಾಗಬೇಕು, ಉನ್ನತ ಚೇತನವಾಗಿ ರೂಪುಗೊಳ್ಳಬೇಕು ಎಂಬ ಹಂಬಲ. ಇದೇ ಅವರ ಕಾವ್ಯದ ಕೇಂದ್ರ. ಇವರ ಸಮಗ್ರಕಾವ್ಯ (೧೯೭೬)ವನ್ನು ಅವಲೋಕಿಸಿದಾಗ ಒಂದು ನಿರ್ದಿಷ್ಟ ಬೆಳವಣಿಗೆಯನ್ನು ನಾವು ಗುರುತಿಸಬಹುದಾಗಿದೆ. ವ್ಯವಸ್ಥೆ ಒಡೆಯುತ್ತಿರುವುದರ ಪ್ರಜ್ಞೆ, ವ್ಯಕ್ತಿವಿಶೇಷದ, ಮೂಲ ಸ್ವಾತಂತ್ರ್ಯಗಳ ಬಗ್ಗೆ ಆಳವಾದ ಕಾಳಜಿ, ಬದುಕಿನ ನಿರಂತರತೆಯ ಅರಿವು, ಕಾವ್ಯ ವಾಚಾಳಿಯಾಗಬಾರದು ಕೃತಿಯಾಗಬೇಕೆಂಬ ಹಂಬಲ, ಯಾಂತ್ರಿಕತೆಯಲ್ಲಿ ಕಳೆದುಹೋಗುತ್ತಿರುವ ನಮ್ಮ ಸಂಸ್ಕೃತಿಯ ತಿರುಳನ್ನು ಭೇದಿಸಿ ಮೂಲ ಬೀಜವನ್ನು ಹೊರತೆಗೆದು ಅದಕ್ಕೆ ಇಂದಿಗೆ ತಕ್ಕ ರೂಪ ನೀಡಬೇಕೆಂಬ ಆಕಾಂಕ್ಷೆ, ತೀವ್ರವಾದ ರಾಜಕೀಯ ಪ್ರಜ್ಞೆ ಈ ಎಲ್ಲವನ್ನೂ ಅವರ ಚಂಡೆಮದ್ದಳೆ (೧೯೫೪), ಭೂಮಿ ಗೀತ(೧೯೫೯), ವರ್ಧಮಾನ (೧೯೭೨), ಚಿಂತಾಮಣಿಯಲ್ಲಿ ಕಂಡ ಮುಖ (೧೯೮೨), ಸುವರ್ಣ ಪುತ್ಥಳಿ (೧೯೯೦) ಸಂಕಲನದ ಕವಿತೆಗಳಲ್ಲಿ ನಾವು ಕಾಣಬಹುದು.
ಅಡಿಗರ ಪ್ರಖರ ನವ್ಯಪ್ರತಿಭೆಯ ಎದುರು ಕಾವ್ಯದ ಮೂಲಕವೇ ಉತ್ತರ ಕೊಟ್ಟು ನವ್ಯಕಾವ್ಯ ಮಾರ್ಗದಲ್ಲೂ ಮಹತ್ವದ ಕೃಷಿ ಮಾಡಿದ ಕೆ.ಎಸ್. ನರಸಿಂಹ ಸ್ವಾಮಿ ಕಾವ್ಯ ಸಂದರ್ಭಗಳನ್ನು ತಮ್ಮ ಬೆಳವಣಿಗೆಗೆ ಸೂಕ್ತವಾಗಿ ಬಳಸಿಕೊಂಡು ಬೆಳೆದ ಕವಿ. ಮೈಸೂರು ಮಲ್ಲಿಗೆ (೧೯೪೨)ಯ ಮೂಲಕ ಕನ್ನಡ ನಾಡಿನಲ್ಲಿ ಮನೆಮಾತಾದ ಕೆ.ಎಸ್.ನ. ನವೋದಯ ಕಾವ್ಯಮಾರ್ಗದಲ್ಲಿ ದಾಂಪತ್ಯದ ಒಂದು ಹಂತದ ಬದುಕಿನ ಸುಕುಮಾರಮುಖವನ್ನು ಅದ್ಭುತವಾಗಿ ಚಿತ್ರಿಸಿದವರು. ಶಿಲಾಲತೆ (೧೯೫೦) ಸಂಕಲನದಲ್ಲಿ ಸುಕುಮಾರ ಜಗತ್ತಿನಿಂದ ಹೊರಬಂದು ವಾಸ್ತವ ಜಗತ್ತಿನೊಡನೆ ಮುಖಾಮುಖಿಯಾದರು. ತೆರೆದ ಬಾಗಿಲು (೧೯೭೬) ಸಂಕಲನ ಅವರ ಕಾವ್ಯ ಬೆಳವಣಿಗೆಯ ಇನ್ನೊಂದು ತಿರುವು. ಕೆ.ಎಸ್.ನ. ಅವರ ಕಾವ್ಯ ಆಧುನಿಕ ಮನುಷ್ಯನ ಹತಾಶೆಯ ಸ್ಥಿತಿಯಲ್ಲಿ ಭರವಸೆ ತುಂಬುವ ಕಾವ್ಯವಾಗಿದೆ.
ನವ್ಯಕಾವ್ಯದ ಆರಂಭದ ದಿನಗಳಲ್ಲಿ ಅಡಿಗರ ಜೊತೆಜೊತೆಗೇ ಕೇಳಿಬರುತ್ತಿದ್ದ ಮತ್ತೊಂದು ಪ್ರಮುಖ ಹೆಸರು ಬಿ.ಸಿ.ರಾಮಚಂದ್ರಶರ್ಮ ಅವರದು. ಆದರೆ ನಂತರದಲ್ಲಿ ಅಡಿಗರು ಸಾಂಸ್ಕೃತಿಕ ಆಸಕ್ತಿಗಳ ಮೂಲಕ ಹೆಚ್ಚು ಗಟ್ಟಿಯಾಗುತ್ತಾ ಹೋದರೆ, ಶರ್ಮರು ವೈಯಕ್ತಿಕ ವಲಯದಲ್ಲೇ ತಮ್ಮನ್ನು ತೊಡಗಿಸಿಕೊಂಡು ಕಾವ್ಯಗಡಿಗಳನ್ನು ನಿರ್ಮಿಸಿಕೊಂಡರು. ಆಧುನಿಕ ಕನ್ನಡ ಕಾವ್ಯದ ಮೊದಲ ನಿರೀಶ್ವರವಾದಿ ಕವಿ ಎಂದು ಗುರುತಿಸಲ್ಪಟ್ಟಿರುವ ಶರ್ಮರು ಸಣ್ಣಕತೆಯ ಕ್ಷೇತ್ರದಲ್ಲೂ ಮೊದಲಿಗೆ ನವ್ಯತೆಯನ್ನು ತಂದವರು. ಸಾಮಾಜಿಕ ಆಸಕ್ತಿಗಳು ಕನ್ನಡಸಾಹಿತ್ಯವನ್ನು ಆಳುತ್ತಿದ್ದ ಕಾಲದಲ್ಲಿ ಸಾಹಿತ್ಯ ಮನುಷ್ಯನ ಮನಸ್ಸು ಮತ್ತು ಮೂಲ ಪ್ರವೃತ್ತಿಗಳ ಕಡೆ ಹೊರಳುವಂತೆ ಮಾಡಿದವರಲ್ಲಿ ಶರ್ಮರ ಪಾತ್ರ ಮಹತ್ವದ್ದು.
ನವ್ಯಕಾವ್ಯ ಅಡಿಗರ ದಟ್ಟ ಪ್ರಭಾವದಲ್ಲಿದ್ದಾಗ ಅದಕ್ಕೊಂದು ವಿಶಿಷ್ಟನಡೆ ಕೊಟ್ಟವರು ಎ.ಕೆ.ರಾಮಾನುಜನ್. ಆವೇಶದ ಧಾಟಿಯಿಲ್ಲದೆ, ಗಂಟಲೆತ್ತಿ ಕೂಗದೆ ಲವಲವಿಕೆಯ ಆಧುನಿಕ ಬದುಕಿನ ವಿಷಾದವನ್ನು ಅಭಿವ್ಯಕ್ತಿಸುವ ಇವರ ಕಾವ್ಯವಿನ್ಯಾಸ ವಿಶಿಷ್ಟವಾದುದು. ಪ್ರಖರ ಬುದ್ಧಿ ಶಕ್ತಿಯ ರಾಮಾನುಜನ್ನರ ಪ್ರತಿಭೆ ಮಧ್ಯಮವರ್ಗದ ಸಾಮಾನ್ಯರ ಅನುಭವಗಳ ಮೂಲಕವೇ ಉಂಟುಮಾಡುವ ದಟ್ಟ ಕಾವ್ಯಾನುಭವ ಅಭ್ಯಾಸ ಯೋಗ್ಯವಾದುದು.
ಬೇಂದ್ರೆ ಮತ್ತು ಅಡಿಗರ ನಂತರ ಸಹಜ ಪ್ರತಿಭೆ ಹಾಗೂ ಸಮೃದ್ಧ ಸೃಜನಶೀಲ ಶಕ್ತಿಯಿಂದಾಗಿ ಗಮನ ಸೆಳೆದವರು ಚಂದ್ರಶೇಖರ ಕಂಬಾರರು. ಭಾಷೆಯ ಜೊತೆ ಆಟವಾಡುವ ಶಕ್ತಿ ಹಾಗೂ ಉತ್ತರ ಕರ್ನಾಟಕದ ದೇಸಿಯ ಬಗೆಗಿರುವ ಇವರ ಪ್ರಭುತ್ವವನ್ನು ವಿಮರ್ಶಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಆಧುನಿಕ ಸಂವೇದನೆಯನ್ನು ಜಾನಪದ ಆವರಣದ ಮೂಲಕ ಅಭಿವ್ಯಕ್ತಿಸುವಲ್ಲಿ ಇವರು ಗಂಭೀರ ಪ್ರಯತ್ನ ನಡೆಸುತ್ತಿದ್ದಾರೆ. ಕಾದಂಬರಿ, ನಾಟಕ, ಕಾವ್ಯ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಕಳೆದು ಹೋಗುತ್ತಿರುವ ನಮ್ಮ ಸಾರ್ಥಕ ಬದುಕಿನ ಜೀವಶಕ್ತಿಯನ್ನು ಸಮಕಾಲೀನ ಬದುಕಿನ ಗತಿಗೆ ಆವಾಹಿಸುವ ಸೃಜನಶೀಲ ಪ್ರಯತ್ನವನ್ನು ಕಂಬಾರರು ಯಶಸ್ವಿಯಾಗಿ ಮಾಡುತ್ತಿದ್ದಾರೆ.
ನವ್ಯಕಾವ್ಯ ಮಾರ್ಗದಲ್ಲಿ ಗಮನಿಸಲೇಬೇಕಾದಂಥ ಸಾಧನೆ ಮಾಡಿರುವ ಕೆ.ವಿ.ತಿರುಮಲೇಶ್, ಸುಬ್ರಾಯ ಚೊಕ್ಕಾಡಿ, ಎಚ್.ಎಸ್.ವೆಂಕಟೇಶಮೂರ್ತಿ, ಸುಮತೀಂದ್ರ ನಾಡಿಗ, ಎಚ್.ಎಂ.ಚನ್ನಯ್ಯ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಕ.ವೆಂ.ರಾಜಗೋಪಾಲ, ಜಿ.ಎಸ್.ಸಿದ್ಧಲಿಂಗಯ್ಯ, ದೇಶಕುಲಕರ್ಣಿ, ವೇಣುಗೋಪಾಲ ಸೊರಬ, ಸಿದ್ಧಲಿಂಗ ಪಟ್ಟಣ ಶೆಟ್ಟಿ, ಬಿ.ಆರ್.ಲಕ್ಷ್ಮಣರಾವ್, ಜಯಂತಕಾಯ್ಕಿಣಿ ಮೊದಲಾದವರನ್ನು ಕಾಣಬಹುದು.
ನವ್ಯಮಾರ್ಗದ ಜೊತೆ ಕ್ರಿಯಾತ್ಮಕ ಸಂಬಂಧವಿಟ್ಟುಕೊಂಡೂ, ಅದಕ್ಕಿಂತ ಭಿನ್ನವಾದ ಕಾವ್ಯ ರಚಿಸಿದ ಇಬ್ಬರು ಕವಿಗಳು ಜಿ.ಎಸ್.ಶಿವರುದ್ರಪ್ಪ ಮತ್ತು ಚೆನ್ನವೀರ ಕಣವಿ. ಕನ್ನಡ ಸಾಹಿತ್ಯದ ಬೆಳವಣಿಗೆಯ ಹಂತಗಳನ್ನು ಎಚ್ಚರದಿಂದ ಗಮನಿಸುತ್ತ, ಅವುಗಳಿಗೆ ಸ್ಪಂದಿಸುತ್ತಲೇ ಇವರು ತಮ್ಮ ಕಾವ್ಯ ಮಾರ್ಗವನ್ನು ರೂಪಿಸಿಕೊಂಡವರು.
ನಿರಂಜನರ ಕೊನೆಯ ಗಿರಾಕಿ, ತ.ರಾ.ಸು. ಅವರ ೦-೦=೦ ಹಾಗೂ ಶ್ರೀರಂಗರ ಕಾದಂಬರಿ ವಿಶ್ವಾಮಿತ್ರ ಸೃಷ್ಟಿ ಮೊದಲಾದವುಗಳಲ್ಲಿಯೇ ಕನ್ನಡ ಕಥಾಸಾಹಿತ್ಯ ಹೊಸ ರೂಪ ಪಡೆಯುವ ಹವಣಿಕೆಯಲ್ಲಿದ್ದುದನ್ನು ಗಿರಡ್ಡಿ ಗೋವಿಂದರಾಜ ಗುರುತಿಸುತ್ತಾರೆ. ವ್ಯಾಸರಾಯ ಬಲ್ಲಾಳ, ರಾಮಚಂದ್ರ ಕೊಟ್ಟಲಗಿಯವರಲ್ಲೂ ನವ್ಯತೆ ಕಥಾವಸ್ತುವಿನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಕಥಾಸಾಹಿತ್ಯ ನವ್ಯತೆಯ ಸ್ಪಷ್ಟರೂಪ ಪಡೆದುಕೊಂಡದ್ದು ಅನಂತಮೂರ್ತಿ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ, ಲಂಕೇಶ, ಸದಾಶಿವ ಮೊದಲಾದವರ ಪ್ರವೇಶದ ನಂತರ.
ಯು.ಆರ್.ಅನಂತಮೂರ್ತಿ ಅವರು ತಮ್ಮ ವಿಸ್ತಾರವಾದ ಅಧ್ಯಯನ ಆಳವಾದ ಚಿಂತನೆ ಹಾಗೂ ಸೂಕ್ಷ್ಮ ಒಳನೋಟಗಳ ಮೂಲಕ ನವ್ಯಸಾಹಿತ್ಯಕ್ಕೆ ಒಂದು ಗಟ್ಟಿಯಾದ ನೆಲೆಗಟ್ಟನ್ನು ಒದಗಿಸಿಕೊಟ್ಟವರು. ಸಂಸ್ಕೃತಿಯ ಮೌಲ್ಯಶೋಧನೆ ಅನಂತಮೂರ್ತಿಯವರ ಸಾಹಿತ್ಯದ ಪ್ರಮುಖ ಕಾಳಜಿಯಾಗಿದೆ. ತಮ್ಮ ಕಥೆ, ಕಾದಂಬರಿಗಳಲ್ಲಿ ಆಧುನಿಕ ವೈಚಾರಿಕತೆಯನ್ನು ಕೃತಿಯ ಚೌಕಟ್ಟಿನಲ್ಲಿ ಒಂದು ದಟ್ಟ ಅನುಭವವಾಗಿಸುವ ಅನಂತಮೂರ್ತಿಯವರ ಕಲಾತ್ಮಕ ಯಶಸ್ಸು ಅಪೂರ್ವವಾದುದು. ಅನಂತಮೂರ್ತಿಯವರ ಕಥಾಸಾಹಿತ್ಯ ಹಾಗೂ ಅವರ ಕಾದಂಬರಿಗಳು ನವ್ಯಸಾಹಿತ್ಯ ಸಂದರ್ಭದಲ್ಲಿ ಹೆಚ್ಚು ಚರ್ಚೆಗೊಳಗಾಗಿವೆ. ತಮ್ಮ ರಾಜಕೀಯ ಸಾಮಾಜಿಕ, ಸಾಂಸ್ಕೃತಿಕ ಚಿಂತನೆಗಳ ಮೂಲಕ ಕನ್ನಡಸಾಹಿತ್ಯದ ಮೇಲೆ ಅನಂತಮೂರ್ತಿ ದಟ್ಟ ಪ್ರಭಾವ ಬೀರಿದ್ದಾರೆ.
ಕಾವ್ಯ, ಸಣ್ಣ ಕಥೆ, ಕಾದಂಬರಿ, ನಾಟಕ, ಚಲನಚಿತ್ರ, ಪತ್ರಿಕೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಲಂಕೇಶರ ಬಿರುಕು (೧೯೬೭) ಕಾದಂಬರಿ ನವ್ಯಸಾಹಿತ್ಯದ ಒಂದು ಹೊಸ ಪ್ರಯೋಗ. ಅವರ ಅಸಂಗತ ನಾಟಕಗಳು ಕನ್ನಡ ರಂಗಭೂಮಿಗೆ ಜೀವತುಂಬಲು ಪ್ರಯತ್ನಿಸಿದಂಥವು. ಸಂಕ್ರಾಂತಿ (೧೯೭೩) ಕನ್ನಡದ ಮಹತ್ವದ ನಾಟಕಗಳಲ್ಲೊಂದು. ತನ್ನ ಮಾತೃಪರಿಸರದಿಂದ ದೂರವಾಗಿ, ಬಂದು ಸೇರಿದ ಪರಿಸರದಲ್ಲಿ ಒಂದಾಗದ ವ್ಯಕ್ತಿತ್ವದ ಬಿರುಕಿನ ಸ್ಥಿತಿ ಇವರ ಕೃತಿಗಳ ಕೇಂದ್ರ. ಮನುಷ್ಯನ ಸಣ್ಣತನ ಗೋಸುಂಬೆತನಗಳನ್ನು ಇವರಂತೆ ಬಯಲುಮಾಡಿದ ಕತೆಗಾರ ಕನ್ನಡದಲ್ಲಿ ಮತ್ತೊಬ್ಬರಿಲ್ಲವೆನ್ನಬಹುದು. ದಟ್ಟ ಜೀವನ ಪ್ರೀತಿಯ ಲಂಕೇಶ್ ನವ್ಯ ಮಾರ್ಗದಿಂದ ಸಿಡಿದು ನಿಂತದ್ದು ಅವರ ನಂತರದ ಬೆಳವಣಿಗೆ.
ಲಂಕೇಶರಂತೆಯೆ ನವ್ಯಮಾರ್ಗದಲ್ಲಿ ಉತ್ತಮ ಕೃಷಿ ಮಾಡಿ ನಂತರದಲ್ಲಿ ಆ ಮಾರ್ಗದಿಂದ ಸಿಡಿದು ನಿಂತವರು ಪೂರ್ಣಚಂದ್ರ ತೇಜಸ್ವಿ ಹಾಗೂ ಚಂದ್ರಶೇಖರ ಪಾಟೀಲ. ಅಪ್ಪಟ ನವ್ಯ ಸಂವೇದನೆಯ ಸ್ವರೂಪ (೧೯೬೬), ಯಮಳ ಪ್ರಶ್ನೆ ಕೃತಿಗಳನ್ನು ನೀಡಿದ ತೇಜಸ್ವಿ ಅಬಚೂರಿನ ಪೋಸ್ಟಾಫೀಸು (೧೯೭೩) ಕಥಾಸಂಕಲನದಲ್ಲಿ ಕನ್ನಡದ ನವ್ಯ ಸಂಪ್ರದಾಯವನ್ನು ಸಂಪೂರ್ಣವಾಗಿ ತೊರೆದು ಹೊಸದಿಕ್ಕಿನ ಅನ್ವೇಷಣೆಗೆ ಆರಂಭಿಸಬೇಕೆಂದು ಕರೆಕೊಟ್ಟರು. ಚುರುಕುತನಕ್ಕೆ ಹೆಸರಾದ ಚಂದ್ರಶೇಖರ ಪಾಟೀಲರು ತಮ್ಮ ಅಸಂಗತ ನಾಟಕಗಳ ಮೂಲಕ ನವ್ಯ ಸಾಹಿತ್ಯದಲ್ಲಿ ಪ್ರಸಿದ್ಧರಾಗಿದ್ದಾರೆ.
ಒಂದು ಬಗೆಯ ವ್ರತನಿಷ್ಠೆಯಿಟ್ಟುಕೊಂಡು ಸಾಹಿತ್ಯ ರಚನೆ ಮಾಡುವ ಯಶವಂತ ಚಿತ್ತಾಲರ ಮುಖ್ಯಕಾಳಜಿ ಮನುಷ್ಯಸ್ವಭಾವದ ನಿಗೂಢತೆಯ ಶೋಧ ಎನ್ನಬಹುದು. ಹುಟ್ಟಿಬೆಳೆದ ಪರಿಸರದ ಭಾವಕೋಶ ಹಾಗೂ ನಂತರದ ಬದುಕಿನ ಬೌದ್ಧಿಕ ಜಗತ್ತು ಇವೆರಡನ್ನು ಒಂದು ಕೇಂದ್ರದಲ್ಲಿ ಹಿಡಿಯಲು ಪ್ರಯತ್ನಿಸುವ ಚಿತ್ತಾಲರು ಕೃತಿಯಿಂದ ಕೃತಿಗೆ ಬೆಳೆಯುತ್ತ ಬಂದವರು. ಆಧುನಿಕ ಬದುಕಿನ ಕ್ರೌರ್ಯ ಮತ್ತು ಮಾನವ ಸಂಬಂಧದ ಸಹಜ ಪ್ರೀತಿ ಇವುಗಳ ಘರ್ಷಣದಲ್ಲಿ ಚಿತ್ತಾಲರ ಸೃಜನಶೀಲತೆ ಕೆಲಸಮಾಡುತ್ತದೆ. ಆಟ, ಮೂರುದಾರಿಗಳು, ಸಿದ್ಧಾರ್ಥ, ಶಿಕಾರಿ, ಪುರುಷೋತ್ತಮ ಇವು ಇವರ ಕೃತಿಗಳು.
ಕನ್ನಡಕ್ಕೆ ಮೊದಲ ನವ್ಯ ಕಾದಂಬರಿ ಮುಕ್ತಿ (೧೯೬೧)ಯನ್ನು ಕೊಟ್ಟವರು ಎಂದು ಪ್ರಸಿದ್ಧರಾಗಿರುವ ಶಾಂತಿನಾಥ ದೇಸಾಯಿಯವರು ಆಧುನಿಕ ಬದುಕಿನ ವಿಕ್ಷಿಪ್ತಸ್ಥಿತಿಯನ್ನು, ನೆಲೆಯಿಲ್ಲದ ಬದುಕಿನ ದಾರುಣತೆಯನ್ನು ತಮ್ಮ ಕೃತಿಗಳಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದಾರೆ. ರೂಢಗ್ರಸ್ತ ಸಂವೇದನೆಗಳನ್ನು ಒರೆಗೆ ಹಚ್ಚುತ್ತಾ ಮನುಷ್ಯನನ್ನು ಅವನ ನೈತಿಕ ಬಿಕ್ಕಟ್ಟಿನ ಸ್ಥಿತಿಯಲ್ಲಿ ಅರ್ಥೈಸಲು ಪ್ರಯತ್ನಿಸುವ ದೇಸಾಯಿಯವರದು ಒಂದು ರೀತಿಯ ಅವಸರವಿಲ್ಲದ ಬರವಣಿಗೆ. ನಿರ್ಲಿಪ್ತವೆನ್ನಬಹುದಾದ ಶೈಲಿಯ ಮೂಲಕವೇ ದಟ್ಟ ಅನುಭವ ಸೃಷ್ಟಿಸುವ ಇವರ ಕಥಾ ಸಂವಿಧಾನದ ರೀತಿ ಕನ್ನಡದಲ್ಲಿ ವಿಶಿಷ್ಟವಾದುದು.
ಆಧುನಿಕ ಪಶ್ಚಿಮ ಮತ್ತು ಸಮಕಾಲೀನ ಭಾರತ ಇವೆರಡನ್ನೂ ಏಕೀಕೃತ ಸ್ಥಿತಿಯಲ್ಲಿ ಸೃಜನಶೀಲವಾಗಿ ಬಳಸಿಕೊಂಡು ಮಹತ್ವದ ನಾಟಕಗಳನ್ನು ರಚಿಸಿದವರು ಗಿರೀಶ್ ಕಾರ್ನಾಡರು. ಜಾನಪದ, ಪುರಾಣ, ಇತಿಹಾಸಗಳಿಂದ ಗಟ್ಟಿಮುಟ್ಟಾದ ಕಥಾವಸ್ತುವನ್ನಾರಿಸಿಕೊಂಡು ಅವುಗಳ ಮೂಲಕ ಆಧುನಿಕ ಸಮಕಾಲೀನ ಸ್ಥಿತಿಯನ್ನು ಸಾಧಿಸುವ ಕಾರ್ನಾಡರ ಪ್ರತಿಭೆ ಅಸಾಮಾನ್ಯವಾದುದು. ತುಘಲಕ್(೧೯೬೪) ಅವರ ಈ ರೀತಿಯ ಪ್ರತಿಭೆಯ ಅತ್ಯುತ್ತಮ ನಿದರ್ಶನ. ಮಹಿಳಾ ಸಾಹಿತ್ಯದಲ್ಲಿ ನವ್ಯ ಶೈಲಿಯಲ್ಲಿ ಬರೆದವರಲ್ಲಿ ಪ್ರಮುಖರಾದವರೆಂದರೆ ರಾಜಲಕ್ಷ್ಮಿ ಎನ್. ರಾವ್ ಮತ್ತು ವೀಣಾ ಶಾಂತೇಶ್ವರ ಅವರು. ಲೇಖಕಿಯರ ಸಾಹಿತ್ಯಕ ಬೆಳವಣಿಗೆಯಲ್ಲಿ ಸ್ಪಷ್ಟವಾಗಿ ಮಗ್ಗುಲನ್ನು ಬದಲಿಸಿ ಅದಕ್ಕೊಂದು ಹೊಸ ಚಾಲನೆಯನ್ನು ತಂದುಕೊಟ್ಟವರು ರಾಜಲಕ್ಷ್ಮಿ. ಇವರ ಸಂಗಮ ಕಥಾಸಂಕಲನದಲ್ಲಿ ನವ್ಯದ ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.ಅನಂತರ ನವ್ಯ ಚಳವಳಿಯ ಉತ್ಕರ್ಷದ ಸಂದರ್ಭದಲ್ಲಿ ತಮ್ಮ ಮುಳ್ಳುಗಳು ಕಥಾಸಂಕಲನದ ಮೂಲಕ ಗಮನ ಸೆಳೆದವರು ವೀಣಾ ಶಾಂತೇಶ್ವರ. ನವ್ಯಲೇಖಕಿಯರಲ್ಲಿ ಇವರಂತೆ ದಿಟ್ಟವಾಗಿ ಬರೆಯುವ ಲೇಖಕಿಯರು ಅಪರೂಪ ಎನ್ನಬಹುದು. ಟಿ.ಜಿ.ರಾಘವ, ಕೆ.ಸದಾಶಿವ, ರಾಘವೇಂದ್ರ ಖಾಸನೀಸ, ಗಿರಿ, ಜಿ.ಎಸ್.ಸದಾಶಿವ, ಶ್ರೀಕೃಷ್ಣ ಆಲನಹಳ್ಳಿ, ಎಸ್. ದಿವಾಕರ್, ರಾಮಚಂದ್ರ ದೇವ - ಮೊದಲಾದವರ ಕಥಾಸಾಹಿತ್ಯದ ಸಾಧನೆಯನ್ನು ಗಮನಿಸಬಹುದು.
ಶ್ವೇತಾ ಶರ್ಮ, ಎಂ.ಎ. (ಕನ್ನಡ)
ನಂ. ೨, ಮೊದಲನೇ ಮಹಡಿ,
ಮೂರನೇ ಮುಖ್ಯರಸ್ತೆ, ೫ನೇ ಅಡ್ಡರಸ್ತೆ,
ಸರಸ್ವತೀಪುರಂ, ಮೈಸೂರು- ೫೭೦ ೦೦೯
ಫೋನ್: ೯೩೪೩೨ ೧೯೮೮೯
ಇ-ಮೈಲ್: