ಅಮೆರಿಕನ್ನಡ
Amerikannada
ನೈದಿಲೆಯ ನಾಟ್ಯ
-ಪ್ರೊ. ಎಚ್.ಜಿ. ಸುಬ್ಬರಾವ್, ಮೈಸೂರು
ಬೆಟ್ಟ ಕಣಿವೆಯ ದಾಟಿ ಮೇಲೇರಿ ವಿಹರಿಸುತಿದೆ
ಒಂಟಿ ಮೋಡವು ತಾನು ತೇಲುತ್ತ ಸಾಗುತಿದೆ
ಆಕಾಶಗಂಗೆಯಲಿ ತಾರೆಗಳು ಮಿರುಗುತಿವೆ
ಮುಂಜಾನೆ ಪರ್ಯಟನ ಸಾರ್ಥಕವು ಎನಿಸುತಿದೆ.

ಆ ಕೊಳದ ತಡಿಯಲ್ಲಿ ವೃಕ್ಷಗಳ ಬುಡದಲ್ಲಿ
ನೂರಾರು ನೈದಿಲೆ ಹೂವು ಹಳದಿ ಹಚ್ಚಡ ಹೆಣೆದು
ಸುಖವಾಗಿ ಪವಡಿಸಿವೆ ಭವಯೋಗ ನಿದ್ರೆಯಲಿ
ನನ್ನ ಕವಿ ಹೃದಯಕ್ಕೆ ತಂಪನ್ನು ಎರೆಯುತಿವೆ.

ಸುಳಿಗಾಳಿ ಚುಂಬನಕೆ ಸ್ಪಂದಿಸಿದ ಪುಷ್ಪಗಳು
ನಾಚಿ ನೀರಾಗಿ ನಲಿದಾಡಿ ನರ್ತಿಸುತ
ಉದಯರವಿ ಕಿರಣದಲಿ ಮಿಂದು ನಿರ್ಮಲವಾಗಿ
ಧನ್ಯತಾ ಭಾವದಲಿ ಪಳಪಳನೆ ಹೊಳೆಯುತಿವೆ.

ಮೆತ್ತನೆಯ ತಲ್ಪದಲಿ ಬೆಚ್ಚನೊರಗಿರುವಾಗ
ಆ ನೋಟ ಮರುಕಳಿಸಿ ಮನಕೆ ಮುದ ನೀಡುತಿದೆ
ಪ್ರಕೃತಿಯಾ ಸೊಬಗನ್ನು ಸೃಷ್ಟಿ ಸೋಜಿಗವನ್ನು
ಹುಲು ಮನುಜ ನಿರ್ಮಿಸಲು ಶಕ್ತನಹುದೇ?

ಪರಿಸರವ ಕೆಡಿಸದಿರು ವನಸಿರಿಯ ಕದಿಯದಿರು
ಅಣುರೇಣು ತೃಣಕಾಷ್ಠದಲಿ ಹಾಸುಹೊಕ್ಕಾಗಿಹನು
ಮನದ ಕಣ್ಣಿಗೆ ಮಾತ್ರ ಗೋಚರನು ಭಗವಂತ
ಅದನರಿತು ಬಾಳುವವ ಬಲು ಭಾಗ್ಯವಂತ!

ವಿಲಿಯಂ ವರ್ಡ್ಸ್ ವರ್ತ್ ನ The Daffodilsಪದ್ಯದ ಭಾವಾನುವಾದ
ಪ್ರೊ. ಎಚ್.ಜಿ. ಸುಬ್ಬರಾವ್
‘ಇಂಚರ’, ನಂ. ಎ/೫, ಜೆ ಬ್ಲಾಕ್,
ರಮಣಮಹರ್ಷಿ ರಸ್ತೆ, ಕುವೆಂಪುನಗರ,
ಮೈಸೂರು-೫೭೦ ೦೨೩,
ಫೋನ್: ೦೮೨೧-೨೫೪೬೮೮೬