ಅಮೆರಿಕನ್ನಡ
Amerikannada
ಮರೆಯಲಾಗದ ಆಟೋ ಡ್ರೈವರುಗಳು
-ನಳಿನಿ ಮೈಯ, ಅಮೆರಿಕಾ
ಆಟೋ ಡ್ರೈವರ್ ಅಂದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಏನು ಕಲ್ಪನೆ ಬರುತ್ತೆ ಅಂತ ನನಗೂ ಗೊತ್ತು. ಕೊಂಕಣ ಸುತ್ತಿಸಿ ಮೈಲಾರಕ್ಕೆ ಕರೆದುಕೊಂಡು ಹೋಗಿ ಒಂದಕ್ಕೆರಡು ದುಡ್ಡು ಕೀಳುವವರು, ಎಷ್ಟು ಬೇಡಿಕೊಂಡರೂ ನಮಗೆ ಬೇಕಾದಾಗ ನಿಲ್ಲಿಸದವರು, ನಿಲ್ಲಿಸಿದರೂ ಹೇಳಿದಕಡೆಗೆ ಕರೆದುಕೊಡು ಹೋಗೋಕೆ ಸಾಧ್ಯವಿಲ್ಲ ಅಂತ ಹೇಳಿ ಹೊರಟೇ ಬಿಡುವವರು ಹೀಗೇ ..... ಹಿಂದೆ ಅನುಭವಿಸಿದ್ದ ಕಷ್ಟಗಳೆಲ್ಲ ಒಮ್ಮೆಲೆ ನೆನಪಾಗುತ್ತವೆ! ದಿನದಿನದ ಬದುಕಿನಲ್ಲಿ ಅವರು ನಡೆಸಬೇಕಾದ ಪೈಪೋಟಿ, ಸಿಕ್ಕುವ ಪುಡಿಗಾಸಿನಲ್ಲಿ ಹೆಂಡತಿ ಮಕ್ಕಳನ್ನು ಸಾಕುವ ಬವಣೆ ಎಲ್ಲ ನೆನೆಸಿಕೊಂಡಾಗ ಅವರು ಹಾಗಿರಬೇಕಾದ್ದು ಅನಿವಾರ್ಯವೇನೋ ಅಂತಲೂ ಅನ್ನಿಸುತ್ತದೆ. ಆದರೂ ಅಲ್ಲೊಂದು ಇಲ್ಲೊಂದು ಪ್ರೀತಿ, ಅನುಕಂಪ, ನಯ, ವಿನಯ ಮುಂತಾದ ಒಳ್ಳೆಯ ಸಂಸ್ಕಾರಗಳನ್ನು ರೂಢಿಸಿಕೊಂಡ ಜೀವಿಗಳು ಸಿಕ್ಕುವುದೂ ಉಂಟು! “ಜೀವನದಲ್ಲಿ ನಾವು ಎಲ್ಲಿ ಹುಟ್ಟುತ್ತೇವೆ, ಸಮಾಜದಲ್ಲಿ ಯಾವ ಸ್ತರದಲ್ಲಿ ಬದುಕುತ್ತೇವೆ, ಯಾವುದೂ ನಮ್ಮ ಕೈಯಲ್ಲಿಲ್ಲ. ಆದರೆ ಸಂಸ್ಕಾರವಂತರಾಗಿ, ಗುಣಶೀಲರಾಗಿ ಬಾಳುವುದಂತೂ ನಮ್ಮ ಕೈಯಲ್ಲಿದೆಯಲ್ಲವೆ?” ಅನ್ನಿಸಿಬಿಡುತ್ತದೆ ಇಂಥವರನ್ನು ನೋಡಿದಾಗ! ಬೇಸಿಗೆಯಲ್ಲಿ ಅಪರೂಪವಾಗಿ ಬೀಸಿದ ತಂಗಾಳಿಯಂತೆ ಚೇತೋಹಾರಿ ಅವರ ಒಡನಾಟದ ನೆನಪು. ಅಂತಹ ಕೆಲವರು ಆಟೋ ಡ್ರೈವರುಗಳ ವಿಷಯ ನಿಮಗೆ ಹೇಳೋಣಾಂತಲೇ ನಾನು ಬರೆಯೋಕೆ ಹೊರಟಿದ್ದು.
ಮೈಸೂರಿನಲ್ಲಿ ಒಬ್ಬಳು ಹೆಣ್ಣು ಹೆಂಗಸು ಆಟೋ ನಡೆಸುತ್ತಾಳೆ ಅಂದರೆ ನಂಬುತ್ತೀರಾ? ಮೈಸೂರೇನು ಬೆಂಗಳೂರು ಕೆಟ್ಟು ಹೋಯಿತೆ? ಮೈಸೂರು ಹೆಂಗಸರು ಲಜ್ಜಾಶೀಲರು, ಜೊತೆಗೆ ನಯ, ಭಯ ಇಟ್ಟುಕೊಂಡಿರೋರು ಅಂತೀರಾ ಅಲ್ವಾ? ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಮೈಸೂರಲ್ಲೇ ನಾನು ಅವಳನ್ನು ನೋಡಿದ್ದು. ಜಗನ್ಮೋಹನ ಪ್ಯಾಲೆಸ್ಸಿನಿಂದ ಒಂಟಿಕೊಪ್ಪಲಿನ ತಂಗಿಯ ಮನೆಗೆ ಹೋಗಬೇಕು ಅಂತ ಆಟೊ ಕರೆದಾಗ ಕಂಡಿದ್ದು ಅವಳನ್ನು ನಾನು. ಡ್ರೈವರ್ ಸೀಟಿನಲ್ಲಿ ಕುಳಿತಿದ್ದಳು. ಮುಖದಲ್ಲಿ ಸೌಮ್ಯ ಮುಗುಳ್ನಗೆ. ಆಟೊ ಡ್ರೈವರುಗಳ ಯೂನಿಫಾರಂ ಆದ ಖಾಕಿ ಬಣ್ಣದ ಸೀರೆಯನ್ನೇ ನೀಟಾಗಿ ಉಟ್ಟಿದ್ದಳು. ಕೂದಲನ್ನು ಹಿಂದೆ ಸಡಿಲವಾಗಿ ಗಂಟು ಹಾಕಿದ್ದಳು.
“ಎಲ್ಲಿಗೆ ಓಗ್ಬೇಕಮ್ಮ?” ಎಂದ ಅವಳ ಹಳ್ಳಿ ಉಚ್ಚಾರಣೆಯೂ ಅಷ್ಟು ಆಪ್ತವೆನ್ನಿಸಿತು ನನಗೆ. ಒಂಟಿಕೊಪ್ಪಲು ಅಂತ ಹೇಳಿ ಹಿಂದಕ್ಕೆ ಒರಗಿ ಕೂತೆ. ಅವಳನ್ನು ನೋಡ್ತಾ ಇದ್ದ ಹಾಗೆ ರಫ್ ಅಂಡ್ ಟಫ್ ಗಂಡಸರ ಸಾಮ್ರಾಜ್ಯವಾದ ಈ ಆಟೊ ಡ್ರೈವರ್ ಜಗತ್ತಿನಲ್ಲಿ ಇವಳು ಸೌಮ್ಯ ಸ್ವಭಾವದ ಹೆಂಗಸು ಹೇಗೆ ನಿಭಾಯಿಸುತ್ತಾಳೋ? ಅನ್ನೋ ಪ್ರಶ್ನೆ ಮನಸ್ಸಿನಲ್ಲಿ ಬಂತು. ಕೇಳೇಬಿಟ್ಟೆ.
“ಅಲ್ಲ, ಎಷ್ಟು ವರ್ಷದಿಂದ ಆಟೋ ಓಡಿಸ್ತಾ ಇದ್ದೀಯಾಮ್ಮ?”
“ಯಳ್ಡು ವರ್ಸ ಆಯ್ತು ಕಣಮ್ಮ”
“ನಿಂಗೆ ಕಷ್ಟ ಅನ್ಸಲ್ವಾ ಬಾಕಿ ಡ್ರೈವರುಗಳೆಲ್ಲ ಗಂಡಸರಿರುವಾಗ ನೀನೊಬ್ಬಳೇ ಹೆಣ್ಣು ಹೆಂಗಸು ಆಟೊ ಓಡಿಸೋದು?”
“ಇಲ್ರಮ್ಮ. ಎಲ್ಲ ನಾವ್ ಮಡಿಕ್ಕಂಡಂಗ್ ಐತೆ. ನನ್ನನ್ ಎಲ್ರೂ ಮರ್ವಾದೀಲ್ ಕಾಣ್ತಾರೆ. ಆಟೊ ಕೆಟ್ ಗಿಟ್ ಓದ್ರೆ ಅಣ್ಣಂದೀರ್ ತರ ಯಲ್ಪ್ ಮಾಡ್ತಾವ್ರೆ. ನಾವು ಚಲ್ ಚಲ್ಲಾಗಿದ್ರೆ ಅವ್ರೂ ಅಂಗೇ ನಡ್ಕಂತಾರೆ. ನಾವು ಮರ್ವಾದೀಲಿದ್ರೆ ಅವ್ರೂ ಮರ್ವಾದೀಲೇ ಕಾಣ್ತಾರೆ.”
“ನೀನ್ಯಾಕೆ ಈ ಕೆಲ್ಸಕ್ ಬಂದೆ? ಬೇರೆ ಏನೂ ಸಿಕ್ಲಿಲ್ವಾ?”
“ಏನ್ ಮಾಡೋದ್ರಮ್ಮ. ಯಲ್ಡು ಮಕ್ಳು ಅದಾವೆ. ಅಪ್ಪ, ಅಮ್ಮ ಜತೇಲಿದಾರೆ. ವಟ್ಟೇ ವರೀಬೇಕಲ್ಲ.”
“ನಿನ್ ಗಂಡ ಏನ್ಮಾಡ್ತಾನೆ?”
“ಅಯ್ಯೋ ಬುಡಿ. ಕುಡ್ಕಂಡ್ ಬಂದ್ ಗಲಾಟಿ ಮಾಡೋದ್ ಬುಟೆ ಬೇರೆ ಏನೂ ಮಾಡಾಕಿಲ್ಲ”
ನನ್ನ ಮನಸ್ಸಿನಲ್ಲಿ ಯಾಕೊ ಅವಳ ಬಗ್ಗೆ ತುಂಬ ಮೆಚ್ಚಿಗೆ, ಗೌರವ, ಪ್ರೀತಿ ಎಲ್ಲ ಒಟ್ಟಿಗೆ ಉಕ್ಕಿ ಬಂತು. ಎಷ್ಟು ಧೀರೆ! ಎಂತಹ ದಿಟ್ಟತನ! ಅಮೆರಿಕಾದಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಬೀದಿ ಬೀದಿಗಳಲ್ಲಿ ಹೆಂಗಸರು ಮಾರ್ಚ್ ಮಾಡಿದರು, ಬ್ರಾ ಸುಟ್ಟರು. ಅಷ್ಟೆಲ್ಲ ಹೋರಾಡಿ ಮತ ಚಲಾಯಿಸುವ ಹಕ್ಕು, ಸಮಾನತೆಯನ್ನು ಪಡೆದರು. ಅವರೆಲ್ಲರಿಗೂ ನನ್ನ ಗೌರವಪೂರ್ವಕ ನಮನ. ಆದರೆ ಈ ಹೆಂಗಸೋ! ವಿದ್ಯೆ ಇಲ್ಲ, ಅಧಿಕಾರ ಇಲ್ಲ, ಹಣ ಇಲ್ಲ. ಒಬ್ಬಂಟಿಯಾಗಿ, ನಿಶ್ಶಬ್ದವಾಗಿ ತನ್ನದೇ ಆದ ರೀತಿಯಲ್ಲಿ ಸ್ತ್ರೀ ಸ್ವಾತಂತ್ರ್ಯ, ಸಮಾನತೆಯನ್ನು ಮೆರೆದಿದ್ದಾಳಲ್ಲ! ಅಂತ ಅನ್ನಿಸಿತು. ಅಷ್ಟರಲ್ಲಿ ಒಂಟಿಕೊಪ್ಪಲು ಬಂದಿತ್ತು. ಅವಳಿಗೆ ವಿದಾಯ ಹೇಳಿದೆ. ಆದರೆ ಅವಳ ನೆನಪಿಗೆ ಮಾತ್ರ ವಿದಾಯ ಹೇಳಲಾರದೆ ಹೋದೆ! ಜೋಪಾನವಾಗಿ ಹೃದಯದಲ್ಲಿ ಬಚ್ಚಿಟ್ಟುಕೊಂಡಿದ್ದೀನಿ ಇಂದಿಗೂ ಮೈಸೂರಿನ ದಿಟ್ಟ ಹೆಂಗಸಿನ ಆ ನೆನಪನ್ನು.
ಉಡುಪಿಯಿಂದ ರಾತ್ರಿ ಹೊರಟ ಬಸ್ಸು ಬೆಂಗಳೂರಿನ ಯಶವಂತ ಪುರ ಸರ್ಕಲ್ ತಲುಪಿದಾಗ ಬೆಳಿಗ್ಗೆ ಆರು ಗಂಟೆಯಾಗಿತ್ತು. ಇಳಿಯುತ್ತಲೇ ಆಟೊ ಡ್ರೈವರುಗಳು ಮುಗಿ ಬಿದ್ದರು. “ಎಲ್ಲೋಗ್ಬೇಕಮ್ಮಾ?” ಅಂತ. ಬೆಳಗಿನ ಆ ಹೊತ್ತಿನಲ್ಲಿ ಬೇರೆ ಟೈಮಿಗಿಂತ ಒಂದೂವರೆಯಷ್ಟು ಜಾಸ್ತಿ ದುಡ್ಡು! ದೂರ ಹೋದಷ್ಟೂ ಮತ್ತೂ ಜಾಸ್ತಿ. ಅವರೆಲ್ಲರ ತಲೆಗಳೂ ಒಟ್ಟಿಗೇ ಗುಣಾಕಾರ ಮಾಡ್ತಾ ಇದ್ದಿದ್ದು ನನಗೂ ಕಾಣಿಸಿತು! “ಆರ್.ಟಿ. ನಗರಕ್ಕೆ ಎಷ್ಟು ತಗೋತೀರಾ?” ಅಂದೆ. ‘ಎಂಭತ್ತು’, ‘ಎಪ್ಪತ್ತೈದು’, ‘ಓಗ್ಲಿ, ಎಪ್ಪತ್ತೆರಡು ಮಾಡ್ಕೊಳ್ಳಿ’ ಎಲ್ಲವೂ ಕೇಳಿ ಬಂತು. ಒಬ್ಬೊಬ್ಬರ ಗುಣಾಕಾರದಲ್ಲಿ ಅಷ್ಟೇ ದೂರಕ್ಕೆ ಬೇರೆ ಬೇರೆ ಉತ್ತರ ಬಂದಿದ್ದು ನೋಡಿ ಇವರನ್ನೆಲ್ಲ ಪುನಃ ಶಾಲೆಗೆ ಕಳಿಸಬೇಕೇನೋ ಅನ್ನಿಸಿತು! ಅಷ್ಟರಲ್ಲಿ ‘ಅರವತ್ತೈದು’ ಅಂತ ಒಂದು ಸಣ್ಣ ಕುಗ್ಗಿದ ದನಿ ಕೇಳಿಸಿ ಆ ಕಡೆ ನೋಡಿದೆ. ಸುಮಾರು ಅರವತ್ತು ವರ್ಷ ಇರಬಹುದು ಅವನಿಗೆ. ಸುತ್ತುವರಿದ ಅವನ ಮಕ್ಕಳ ಪ್ರಾಯದ ಯುವಕ ಡ್ರೈವರುಗಳ ತಂಡದಲ್ಲಿ ಅವನು ಒಂದು ತರಹ ಅನಾಮಲಿ ಅನ್ನಿಸಿತು. ಅಮೆರಿಕಾದಲ್ಲಿದ್ದರೂ, ಆ ಕಾಲಕ್ಕೆ ಒಂದು ಡಾಲರಿಗೆ ಐವತ್ತು ರೂಪಾಯಿ ಅಂತ ಗೊತ್ತಿದ್ದರೂ ಆದಷ್ಟು ಕಡಿಮೆ ದುಡ್ಡಿಗೆ ಕೆಲಸ ನಡೆಸಬೇಕು ಅನ್ನೋ ಮನುಷ್ಯ ಸಹಜವಾದ ಜಿಪುಣ ಬುದ್ಧಿ ನನಗೂ ಇದೆ ಅಂತ ಒಪ್ಪಿಕೋತೀನಿ. ‘ಸರೀಪ್ಪ’ ಅಂತ ಅವನ ಆಟೊ ಹತ್ತಿ ಕೂತೆ. ಬೇರೆ ಡ್ರೈವರುಗಳೆಲ್ಲ ಅವನನ್ನು ತಿನ್ನೋ ಹಾಗೆ ಸಿಟ್ಟಿನಲ್ಲಿ ನೋಡ್ತಾ ಇದ್ದರು. ಕೆಲವರು ಏನೋ ಬೈದಿದ್ದೂ ಕೇಳಿಸಿತು. ಅವನು ಮಾತ್ರ ಏನೂ ಆಗಿಲ್ಲ ಅನ್ನೋತರ ಹೊರಟೇಬಿಟ್ಟ.
ಅವನೇ ಮಾತಿಗೆ ಶುರುವಿಟ್ಟುಕೊಂಡ. “ಒಬ್ಬರೇ ಬಂದ್ರಾಮ್ಮ?” ಅಂತ.
“ಹೌದು. ಉಡುಪೀಲಿ ಯಾವುದೋ ಮದುವೆ ಇತ್ತು. ಮನೆಯವರಿಗೆ ಬರೋಕಾಗ್ಲಿಲ್ಲ.” ಅಂದೆ.
ನಾನು ಅಮೆರಿಕಾದವಳು, ನನ್ನವರು ಈಗಲೂ ಅಮೆರಿಕಾದಲ್ಲೇ ಇದ್ದಾರೆ ಅಂತ ಆದಷ್ಟೂ ತೋರಿಸಿಕೊಳ್ಳದಿದ್ದರೇ ಒಳ್ಳೇದು ಅನ್ನೋ ಸಿದ್ಧಾಂತಕ್ಕೆ ಯಾವತ್ತೋ ಬಂದಿದ್ದೆ ನಾನು. ಅವನು ಸುಮ್ಮನಾದ. ಆದರೆ ನಾನು ಸುಮ್ಮನಾಗಬೇಕಲ್ಲ! ನನಗೋ ಮಾತಿನ ಚಪಲ. ಅಷ್ಟಕ್ಕೇ ಸಂಭಾಷಣೆ ಮುಗಿಯೋಕೆ ಬಿಡ್ತೀನಾ! ಮುಂದುವರಿಸಿದೆ.
“ಏನಪ್ಪಾ. ಉಳಿದ ಡ್ರೈವರುಗಳೆಲ್ಲ ಚಿಕ್ಕವರು. ನೀನೊಬ್ಬನೇ ಸ್ವಲ್ಪ ವಯಸ್ಸಾದೋನು. ಅವರುಗಳ ಜೊತೆ ಹೇಗೆ ಏಗ್ತೀಯಾ?”
“ಏನು ಮಾಡೊದಮ್ಮ. ಜೀವನ ನಡೀಬೇಕಲ್ಲ. ಒಂದು ಕಾಲದಲ್ಲಿ ಈ ಆಟೊ ತಗೊಂಡು ಇಡೀ ಬೆಂಗಳೂರು ಸುತ್ತುತ್ತಾ ಇದ್ದೆ ನಾನು. ಈಗ ಅಷ್ಟೆಲ್ಲ ಮಾಡೋಕಾಗಲ್ಲ. ಇಲ್ಲೇ ಹತ್ತಿರ ಏನಾದರೂ ಸಿಕ್ಕಿದರೆ ಓಡಿಸ್ತೀನಿ.”
“ನಿಂಗೆ ಮಕ್ಕಳು ಯಾರೂ ಹೆಲ್ಪ್ ಮಾಡಲ್ವಾ?”
“ಅದಕ್ಕೂ ಪಡಕೊಂಡು ಬಂದಿರಬೇಕಮ್ಮ. ಒಬ್ಬ ಮಗ , ಒಂದು ಮಗಳು ನಂಗೆ. ಮಗಳು ಮದುವೆಯಾಗಿ ಹೋದಳು. ಮಗ ತನ್ನ ಪಾಡಿಗೆ ತಾನಿದಾನೆ. ನಮ್ಮನ್ನು ವಿಚಾರಿಸಿಕೊಳ್ಳೋದೂ ಇಲ್ಲ. ಬಂದು ಹೋಗಿ ಮಾಡೋದಿಲ್ಲ.”
ಅವನ ದನಿಯಲ್ಲಿದ್ದ ನೋವು ನನ್ನ ಮನಸ್ಸನ್ನು ಮೀಟಿತು. ಅಯ್ಯೋ ಪಾಪ ಅನ್ನಿಸಿತು. ಅವನೇ ಮುಂದುವರಿಸಿದ. “ನಂಗೂ ವಯಸ್ಸಾಯ್ತು. ಎಷ್ಟು ದಿನ ಹಿಂಗೆ ಗಾಡಿ ಓಡಿಸೋಕಾಗುತ್ತೋ ಕಾಣೆ. ಹಗಲು ಹೊತ್ತು ಜನ ಹುಚ್ಚರ ತರ ಗಾಡಿ ಓಡಿಸ್ತಾರೆ. ನಂಗೆ ದಿಗಿಲಾಗುತ್ತೆ. ಏನಿದ್ದರೂ ಹಿಂಗೆ ಬೆಳಗಿನ ಜಾವ, ಆಮೇಲೆ ಸಾಯಂಕಾಲ ಏಳು ಗಂಟೆ ಮೇಲೆ ಸ್ವಲ್ಪ ಟ್ರಾಫಿಕ್ ಕಡಿಮೆ ಇರೋವಾಗ ಮಾತ್ರ ಓಡಿಸ್ತೀನಿ. ಎಷ್ಟು ಬಂದರೆ ಅಷ್ಟು. ಹಾಸಿಗೆ ಇದ್ದಷ್ಟು ಕಾಲು ಚಾಚೋದು.”
ಯಾಕೋ ನನ್ನ ಮಾತಿನ ಚಪಲ ಎಲ್ಲೋ ತಲೆ ಮರೆಸಿಕೊಂಡು ಹೋಯಿತು. ಆಗ ತಾನೆ ಕಣ್ಣು ತೆರೆಯುತ್ತಿರುವ ಬೆಂಗಳೂರಿನ ದೃಶ್ಯಗಳನ್ನು ನೋಡುತ್ತಾ ಸುಮ್ಮನೆ ಕೂತೆ. ಮತ್ತೆ ಅವನೇ ಹೇಳಿದ.
“ಎಲ್ಲರಿಗೂ ಜೀವನದಲ್ಲಿ ಏನಾರಾ ಕಷ್ಟ ಇದ್ದೇ ಇರುತ್ತಮ್ಮ. ಈಗ ನೀವು ಒಳ್ಳೆ ದೊಡ್ಡ ಮನುಷ್ಯರ ಮನೆಯೋರ ತರ ಕಾಣಿಸ್ತೀರಾ. ಆದ್ರೂ ನಿಮಗೂ ಏನಾರಾ ಕಷ್ಟ ದೇವರು ಕೊಟ್ಟೇ ಇರ್ತಾನೆ. ಕಷ್ಟ ಇಲ್ಲದೋರೇ ಇಲ್ಲ ಪ್ರಪಂಚದಲ್ಲಿ.”
ಅವನ ಮಾತುಗಳು ನನ್ನನ್ನ ಅವಾಕ್ಕಾಗಿಸಿದವು. ಅಬ್ಬ! ಯಾವ ದಾರ್ಶನಿಕ ನನ್ನೆದುರು ಆಟೊ ಡ್ರೈವರ್ ರೂಪದಲ್ಲಿ ಕೂತಿದ್ದಾನೆ! ಅನ್ನಿಸಿ ಬಿಟ್ಟಿತು. ಎಷ್ಟು ನಿಜ ಅವನ ಮಾತು! ನನ್ನ ತವರು ಮನೆಯವರು ಸಾಕಷ್ಟು ಅನುಕೂಲಸ್ಥರು. ಸೇರಿದ ಮನೆಯವರಂತೂ ಶ್ರೀಮಂತರೇ! ಉಳಿದ ನನ್ನ ಎಲ್ಲ ಸ್ನೇಹಿತರೂ ಸ್ಥಿತಿವಂತರೇ. ಅದರೂ ನನಗೆ ಗೊತ್ತಿದ್ದ ಹಾಗೆ ಎಲ್ಲರ ಮನೆಯಲ್ಲೂ ಏನೋ ತಾಪತ್ರಯ. ಖಾಯಿಲೆ, ಕಸಾಲೆ, ಮಕ್ಕಳಲ್ಲಿ ಏನೋ ಕುಂದು, ಕೊರತೆ, ಬಂಧು ಬಾಂಧವರಲ್ಲಿ ಕಲಹ....ಒಂದೆರಡಲ್ಲ. ಪ್ರತಿ ಬೆಳಿಗ್ಗೆ ನೆಮ್ಮದಿಯಿಂದ ಕಣ್ದೆರೆಯುವವರು, ಪ್ರತಿ ರಾತ್ರಿ ತೃಪ್ತಿಯಿಂದ ಹಾಸಿಗೆ ಸೇರುವವರು ಯಾರೂ ಇಲ್ಲ ಅನ್ನಿಸಿತು! ದುಡ್ಡು ಕಾಸಿಗೂ, ಮನಸ್ಸಿನ ನೆಮ್ಮದಿಗೂ ಸಂಬಂಧವೇ ಇಲ್ಲ ಅಲ್ವಾ!

ಯೋಚನೆಯಲ್ಲಿ ಮುಳುಗಿರುವಾಗ ಬಂದೇ ಬಿಟ್ಟಿತು ನಮ್ಮ ಮನೆ. ಇಳಿದು “ಬರ್ತೀನಪ್ಪಾ” ಅಂದೆ. ತನ್ನ ಕೈಯಲ್ಲಿ ಬಿದ್ದ ನೂರು ರೂಪಾಯಿ ನೋಟು ನೋಡಿ ಆಶ್ಚರ್ಯವಾಯಿತು ಅವನಿಗೆ.
“ಚಿಲ್ರೆ ಇಲ್ಲ ಕಣಮ್ಮ ನನ್ನತ್ರ.” ಅಂದ.
“ಚಿಲ್ರೆ ಬೇಡಪ್ಪಾ. ಇಟ್ಕೊ.” ಅಂದೆ.

ತನ್ನ ಎರಡೂ ಕೈಗಳನ್ನು ಜೋಡಿಸಿ ತಲೆಯವರೆಗೂ ಕೊಂಡು ಹೋಗಿ ನಮಸ್ಕಾರ ಮಾಡಿದ. ಮುಚ್ಚಿ ತೆರೆದ ಅವನ ಕಣ್ಣು ತೇವವಾಗಿತ್ತು! ಅವನ ಭಾವಾರ್ದ್ರ ಮುಖ ನೋಡಿ ನನ್ನ ಮನಸ್ಸು ಮಮ್ಮಲ ಮರುಗಿತು. ಅಲ್ಲಿ, ಆ ಕ್ಷಣದಲ್ಲಿ ಮಾತಿನ ದನಿಯನ್ನು ಮೀರಿದ ಹೃದಯದ ದನಿ ಇತ್ತು. ಎಲ್ಲ ನೋಟಗಳನ್ನು ದಾಟಿದ ಒಳ ನೋಟವಿತ್ತು. ಒಂದು ಸಾರಿ ಅವನ ಕಣ್ಣೀರನ್ನು ಒರೆಸಿ ಸಾಂತ್ವನ ನೀಡಬೇಕೆಂಬ ಮನಸ್ಸಾಯಿತು. ಆದರೆ ನಾನು ಹಾಗೆ ಮಾಡಲಿಲ್ಲ. ಸಮಾಜದ ಕಟ್ಟುಕಟ್ಟಳೆಗಳು ಅಡ್ಡ ಬಂದವು. ಎಷ್ಟೊಂದು ಗೋಡೆಗಳು ಮನುಷ್ಯ ಮನುಷ್ಯನ ಮಧ್ಯೆ! ಬಡವ-ಬಲ್ಲಿದರ ನಡುವೆ, ಹೆಣ್ಣು-ಗಂಡಿನ ನಡುವೆ, ಆ ಭಾಷೆ-ಈ ಭಾಷೆಯ ನಡುವೆ, ದೇಶ-ದೇಶಗಳ ನಡುವೆ .....ಗೋಡೆಗಳೋ ಗೋಡೆಗಳು. ಕಣ್ಣಿಗೆ ಕಾಣದ, ಸಹ ಮಾನವನನ್ನು ಮುಟ್ಟಲು ಚಾಚಿದ ಕೈಗಳನ್ನು ಬಿಡದೆ ತಡೆಯುವ ಗೋಡೆಗಳು!
ಮನುಷ್ಯತ್ವ ಎಂಬ ಸೂತ್ರ ಒಂದು ನಮ್ಮೆಲ್ಲರನ್ನೂ ಬಾಂಧವ್ಯದಲ್ಲಿ ಕಟ್ಟಿ ಹಾಕಿದೆ. ಆದರೆ ಆ ಎಳೆ ನಮ್ಮ ಅರಿವಿಗೆ ಬರುವುದು ಕಷ್ಟದಲ್ಲಿದ್ದಾಗ. ಅದಕ್ಕೇ ಭೂಕಂಪ, ಪ್ರವಾಹ ಮುಂತಾದ ಪ್ರಕೃತಿಯ ವೈಪರೀತ್ಯಗಳು ನಡೆಯುವಲ್ಲಿ, ಯುದ್ಧ ಭೂಮಿಯಲ್ಲಿ ಬಿದ್ದ ಗಾಯಾಳುಗಳ ನೆರವಿನಲ್ಲಿ ಇರುವಾಗ ನಮ್ಮ ನಡುವೆ ಗೋಡೆಗಳು ಇರುವುದಿಲ್ಲ. ಕೇವಲ ಬಾಂಧವ್ಯದ ಎಳೆ ಇರುತ್ತದೆ. ಆದರೆ ಸುಖದಲ್ಲಿ! ಅದರ ಕಥೆಯೇ ಬೇರೆ! ಮನುಷ್ಯತ್ವವನ್ನು ಮರೆಸುವ ದುಷ್ಟ ಶಕ್ತಿ ಇದೆಯಾ ಅದಕ್ಕೆ? ಮತ್ತೆ ಶ್ರೀಮಂತರ ಮನೆಗಳಲ್ಲೇ ಅಲ್ಲವಾ ಕೋರ್ಟು, ಕಛೇರಿ, ರಂಪ ರಾದ್ಧಾಂತ ನಡೆಯೋದು!
ಈಗ ನಾನು ಹೇಳೋಕೆ ಹೊರಟಿರೋ ಆಟೊ ಡ್ರೈವರ್ ವಿಷಯ ಈ ಮುಂಚೆ ಬರೆದಿದ್ದೆನಲ್ಲ “ಚೇತೋಹಾರಿ” ಅಂತ ...ಹಾಗಿದ್ದೇನೂ ಅಲ್ಲ. ಆದರೂ ಅವನೂ ನನಗೆ ಮರೆಯಲಾರದ ನೆನಪನ್ನು ಉಳಿಸಿ ಹೋಗಿದ್ದಾನೆ. ಒಂದು ಕಾಲಘಟ್ಟದಲ್ಲಾಗುತ್ತಿರುವ ಬದಲಾವಣೆಗಳನ್ನೆಲ್ಲ ಈ ಒಂದು ಘಟನೆಯಲ್ಲೇ ನೀವು ಕಾಣುತ್ತೀರಿ!
ಮನೆಯಿಂದ ಆಚೆ ಬರುತ್ತಲೇ ಎದುರಿಗೆ ಸಿಕ್ಕಿದ ಖಾಲಿ ಆಟೊ ನೋಡಿ ಸಂತೋಷವೇ ಆಯಿತು. ಕರೆದು ನಿಲ್ಲಿಸಿದೆ. “ಬಸವನ ಗುಡೀಲಿ ಒಬ್ಬರ ಮನೇಗೆ ಹೋಗ್ಬೇಕು.” ಅಂದೆ. “ಓ ಬುಲ್ ಟೆಂಪಲ್ಲಾ” ಅಂದಿದ್ದು ಕೇಳಿ ನನಗೆ ಸಿಟ್ಟು ಬಂದರೂ ತೋರಿಸಿಕೊಳ್ಳಲಿಲ್ಲ. ಬೆಂಗಳೂರಲ್ಲೇ ಹುಟ್ಟಿ ಬೆಳೆದೋರೇ ಹೀಗೆ ಮಾಡಿದರೆ ಹೇಗೆ? ಅಂತ! ಬಸವನ ಗುಡಿ ಹತ್ತಿರ ಬಂದಾಗ “ಎಲ್ರಮ್ಮಾ?” ಅಂದ. “ಇಲ್ಲೇ ಸ್ವಲ್ಪ ಮುಂದೆ ಎಡಕ್ಕೆ ತಿರುಕ್ಕೋ.” ಅಂದೆ. ತಲೆ ಅಲ್ಲಾಡಿಸಿದ ನಮ್ಮ ಇಂಗ್ಲಿಷ್ ಶೂರ. ಆದರೆ ಹೋಗಿ ಹೋಗಿ ಎಡಕ್ಕೆ ಬಂದ ತಿರುವನ್ನೂ ದಾಟಿ ಮುಂದೆ ಹೋಗೇಬಿಟ್ಟ! “ಅಯ್ಯೋ, ನಾನು ಎಡಕ್ಕೆ ತಿರುಗು ಅಂತ ಹೇಳ್ಳಿಲ್ವಾ? ಯಾಕೆ ಮುಂದೆ ಹೋಗಿಬಿಟ್ಟೇಪ್ಪಾ!” ಅಂದೆ. “ಸರಿಯಾಗಿ ಲೆಫ್ಟು, ಇಲ್ಲ ರೈಟು ಅಂತ ಯೇಳೋದು ಬಿಟ್ಟು ಎಡ, ಬಲ ಅಂದರೆ ಯಾರಿಗೆ ಗೊತ್ತಾಗುತ್ತೆ!” ಅಂತು ನಮ್ಮ ಇಂಗ್ಲಿಷ್ ಮರಿ! ಸುಸ್ತಾಗಿ ಹೋದೆ ನಾನು! ಇತಿ ಆಟೊ ಡ್ರೈವರ್ ಕಥಾ ಪ್ರಸಂಗಂ ಸಂಪೂರ್ಣಂ.