ಅಮೆರಿಕನ್ನಡ
Amerikannada
ಜ್ಞಾಪಕಶಕ್ತಿಯನ್ನು ವರ್ಧಿಸಲು ಕೆಲವು ಸೂಚನೆಗಳು
-ಜಯಂತಿ ಅಮೃತೇಶ್, ಮೈಸೂರು
ನನ್ನ ಪತಿ ಟೆಡ್ ನಮ್ಮ ಕಾರನ್ನು ಕಳೆದುಕೊಂಡಾಗ ನನಗೆ ಕಳವಳ ಪ್ರಾರಂಭವಾಗಿತ್ತು. ಅವರಿಗೆ ೩೦ ಅಥವಾ ನಲವತ್ತು ವರ್ಷಗಳ ವಯಸ್ಸಾದಾಗ ಅಂಗಡಿಯಿಂದ ಅಥವಾ ನಾಟಕಶಾಲೆಯಿಂದ ಹೊರಗಡೆ ಬಂದಾಗ ತೊಂದರೆಯಿಲ್ಲದೆ ಸೀದಾ ನಮ್ಮ ಗಾಡಿಗೆ ಹೋಗುತ್ತಿದ್ದರು. ಅವರ ಐವತ್ತನೆಯ ಹುಟ್ಟು ಹಬ್ಬದನಂತರ ಅಂಗಡಿಯ ಮುಂದಿನ ಕಾರು ನಿಲ್ದಾಣಕ್ಕೆ ಬಂದು ತಲೆ ಕೆರೆದುಕೊಳ್ಳುತ್ತಾ “ನಾನು ಗಾಡಿಯನ್ನು ಎಲ್ಲಿ ನಿಲ್ಲಿಸಿದ್ದೆ?” ಎಂದು ಯೋಚಿಸುತ್ತಿದ್ದರು.
ಮುಂದಿನ ದಿನಗಳಲ್ಲಿ ನಮ್ಮ ಯಜಮಾನರು ತಮ್ಮ ಕನ್ನಡಕ, ಬೀಗದ ಕೈ ಗೊಂಚಲು, ಹಣದಚೀಲ ಇವುಗಳನ್ನು ಎಲ್ಲಿ ಇಟ್ಟಿರುದ್ದರೆಂಬುದನ್ನು ಮರೆತು ಬಿಡುತ್ತಿದ್ದರು. ಒಂದು ದಿನ ಒಂದು ಖಾನಾವಳಿಯ ಮುಂದೆ ಹಾದು ಹೋಗುತ್ತಿದ್ದಾಗ “ನಾವು ಇಲ್ಲಿ ಅತ್ಯುತ್ತಮವಾದ ಭೋಜನವನ್ನು ಮಾಡಿದ್ದೆವು ನೆನಪಿದೆಯೆ?” ಎಂದು ಕೇಳಿದರು. ನಾನು ಆ ಖಾನಾವಳಿಗೆ ಯಾವತ್ತೂ ಹೋಗಿಲ್ಲವೆಂದು ಹೇಳಿದೆ. ಆದರೆ ಅವರು ಹಠ ಹಿಡಿದು ನಾವು ಏನೇನು ತಿಂದೆವೆಂದೂ ಮತ್ತು ಇದೊಂದು ಅತ್ಯುತ್ತಮವಾದ ಭೋಜನಗೃಹವೆಂದು ಇಬ್ಬರೂ ಒಪ್ಪಿದ್ದವೆಂದೂ ತಿಳಿಸಿದರು.
ನನ್ನ ಪತಿದೇವರ ಮರೆವು ತೊಂದರೆಯನ್ನು ಮಾಡುತ್ತಿದೆಯೆಂದು ನನಗೆ ಅನ್ನಿಸಿದರೂ ಅನೇಕ ತಜ್ಞರು ಈ ರೀತಿಯ ಮರೆವಿನಿಂದ ಅಪಾಯವೇನೂ ಆಗಲಾರದೆಂದು ಹೇಳಿದರು. ಮರೆಗುಳಿತನವು ಹೆಚ್ಚಾಗಿ ಉದ್ಯೋಗದಲ್ಲಿ ತೊಂದರೆ ಕೊಡುವುದಿಲ್ಲವಾದರೆ ಈ ಮರೆವಿನ ಬಗ್ಗೆ ಹೆಚ್ಚು ಯೋಚಿಸಬೇಕಾಗಿಲ್ಲವೆಂದು ಮನೋವಿಜ್ಞಾನಿಗಳು ತಿಳಿಸುತ್ತಾರೆ; ಆದರೆ ಈ ಸಮಯದಲ್ಲಿ ವೈದ್ಯರನ್ನು ನೋಡುವುದು ಅವಶ್ಯ ಎಂದೂ ಹೇಳುತ್ತಾರೆ.
ಅನೇಕರಿಗೆ ಈ ತರಹದ ಲೋಪಗಳು ಸಾಮಾನ್ಯವಾಗಿ ಕಾಣುತ್ತವೆ. ಇದು ಜೀವನವು ಒಂದು ವ್ಯಕ್ತಿಯನ್ನು ಕಾಡಿಸುವ ಬಗೆ ಎಂದು ಹೇಳಬಹುದು. ನೆನಪಿನ ಶಕ್ತಿಯ ಲೋಪಗಳು ೪೦ ಅಥವಾ ೫೦ ನೆಯ ವರ್ಷದಲ್ಲಿ ಕಾಣಿಸಿಕೊಂಡರೂ ಮುಂದಿನ ವರ್ಷಗಳಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ಒತ್ತಡ, ಆಯಾಸ ಮತ್ತು ಗಮನಿಸುವ ಶಕ್ತಿಯಲ್ಲಿ ಇಳಿತ ಇವೆಲ್ಲವೂ ತಾತ್ಕಾಲಿಕವಾಗಿ ಎಲ್ಲ ವಯಸ್ಸಿನವರಲ್ಲೂ ನೆನಪಿನ ಲೋಪವನ್ನು ಉಂಟುಮಾಡುತ್ತದೆ.
ಈ ರೀತಿಯ ತೊಂದರೆಗಳನ್ನು ನಿವಾರಿಸಿಕೊಳ್ಳಲು ಕೆಲವು ಸಾಧಾರಣವಾದ ಉಪಾಯಗಳಿವೆ.
“ಇದು ನನ್ನ ನಾಲಿಗೆಯ ತಿದಿಯಲ್ಲಿದೆ” ನೀವು ನಿಮ್ಮ ಹಳೆಯ ಸ್ನೇಹಿತನನ್ನು ಬೇರೊಬ್ಬರಿಗೆ ಪರಿಚಯಿಸು ತ್ತಿರುವಾಗ ಇದ್ದಕ್ಕಿದ್ದ ಹಾಗೆ ಆ ವ್ಯಕ್ತಿಯ ಹೆಸರು ನನೆನಪಿಗೆ ಬರುವುದಿಲ್ಲ. ಅವರ ಹೆಸರು ನಿಮ್ಮ ನೆನಪಿನ ಶಕ್ತಿಯಲ್ಲಿ ಇರುತ್ತದೆಯಾದರೂ ಅದು ಆ ಶಕ್ತಿಯನ್ನು ಮೀರಿ ಇರುತ್ತದೆ. ಹಾಗೆಯೇ ಅದೇತಾನೇ ನೋಡಿದ ಚಲನ ಚಿತ್ರದ ಹೆಸರನ್ನು ನೆನಪಿಸಿಕೊಳ್ಳುವುದೂ ಸಾಧ್ಯವಾಗುವುದಿಲ್ಲ. ಡೆಬೋರಾ ಬರ್ಕ್ ಎನ್ನುವ ಮಾನಸಿಕ ತಜ್ಙರು ಹೇಳುವಂತೆ ಈ ರೀತಿಯ ಸನ್ನಿವೇಶಗಳು ನಾಲಗೆಯ ತುದಿಯಲ್ಲಿದ್ದರೂ ಸಹಾ ಹೇಳಲು ಸಾಧ್ಯವಾಗದೇ ಹೋಗುತ್ತದೆ. ಈ ರೀತಿಯ ಅನುಭವ ಎಲ್ಲರಿಗೂ ಆಗಿರುತ್ತದೆ.
ಈ ದೋಷಗಳಿಗೂ ಮತ್ತು ಹೆಸರನ್ನು ನೆನಪಿಸಿಕೊಳ್ಳುವುದಕ್ಕೂ ಯಾವರೀತಿಯ ಸಂಬಂಧವೂ ಇಲ್ಲ. ಆದರೆ ಆ ಪದದ ಉಚ್ಛಾರಣೆಗೂ, ನೆನಪಿಗೂ ಸಂಬಂಧ ಉಂಟು. ಸಾಧಾರಣವಾಗಿ ಒಂದು ಪದದ ಶಬ್ದವು ಪ್ರಮಾಣವಿಲ್ಲದ್ದೂ ಮತ್ತು ಕೇವಲ ಅಭಿಪ್ರಾಯದಿಂದ ಹುಟ್ಟಿದ್ದೂ, ಅರ್ಥಹೀನವೂ ಆಗಿರುತ್ತದೆ. ಆದರೆ ಶಬ್ದಗಳ ಈ ಗುಣವು ಹೆಸರನ್ನು ನೆನಪಿಸಿಕೊಳ್ಳಲು ಸವಾಲಾಗಿ ಪರಿಣಮಿಸಬಹುದು, ಒಂದು ಹೆಸರನ್ನು ನೆನಪಿಸಿಕೊಳ್ಳಲು ತೊಂದರೆ ಯಾದಾಗ ಒಂದು ಉತ್ತಮವಾದ ದಾರಿಯಿದೆ! ಅದೇನೆಂದರೆ ಆ ವ್ಯಕ್ತಿಯ ಹೆಸರನ್ನು ಪದೇ ಪದೇ ಹೇಳುವುದು. ಮನೋಶಾಸ್ತ್ರಜ್ಷ ಲಿಜ್ ಹೇಳುವುದೇನೆಂದರೆ ವಸ್ತುಗಳ ಮಾರಾಟಗಾರರು ಮಾಡುವಂತೆ ನಾವು ನೋಡಲಿರುವವರ ಹೆಸರನ್ನು, ನಾವು ಹೋಗುವುದಕ್ಕೆ ಮೊದಲು ಪದೇ ಪದೇ ಪುನರುಚ್ಛಾರಣೆ ಮಾಡುವುದರಿಂದ ಆ ಹೆಸರುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು.
ಕೆಲವು ಸಲ ನಾಲಿಗೆಯ ತುದಿಯಲ್ಲಿರುವ ಹೆಸರನ್ನು ಹೇಳಲಿಕ್ಕಾಗದೇ ಹೋಗಿ ಅದೇ ತರಹ ಶಬ್ದದ ಬೇರೆ ಪದವು ನಮ್ಮ ತಲೆ ಹೊಕ್ಕು ಅಲ್ಲಿಯೇ ಉಳಿಯುತ್ತದೆ. ಈ ತರಹ ಆದಾಗ ನಾವು ಕಿರಿ ಕಿರಿಗೊಳ್ಳುವುದನ್ನು ನಿಲ್ಲಿಸಿದರೆ ಆ ಸರಿಯಾದ ಪದವು ತಾನಾಗಿಯೇ ನಮಗೆ ಹೊಳೆಯುತ್ತದೆ. “ನನ್ನ ಬೀಗದ ಕೈ ಎಲ್ಲಿಟ್ಟಿರುವೆನು?” ಮರೆಗುಳಿತನದ ಅನೇಕ ಉಪಕಥೆಗಳು–ಅಂದರೆ ಒಂದು ವಸ್ತುವನ್ನು ಎಲ್ಲಿಟ್ಟಿದ್ದೆವೆಂದು ಮರೆಯುವಿಕೆ ಮತ್ತು ಏತಕ್ಕಾಗಿ ಈ ಕೋಣೆಯೊಳಗೆ ಬಂದೆವು? ಎಂದು ಚಿಂತಿಸುವಿಕೆ-ಇವೆಲ್ಲವೂ ಕೇವಲ ಗಮನಿಸುವಿಕೆಯ ಕೊರತೆಯಿಂದ ಸಂಭವಿಸುತ್ತದೆ. ಅಂದರೆ ನಾವು ಏನನ್ನೋ ಜ್ಞಾಪಿಸಿಕೊಳ್ಳಲು ಹೊರಡುತ್ತೇವೆ- ಆದರೆ ಅದನ್ನು ಸಾಮಾನ್ಯ ಭಾಷೆಯಲ್ಲಿ ಅರ್ಥಮಾಡಿಕೊಂಡಿರುವುದಿಲ್ಲ.
ನಾವು ಒಂದು ಘಟನೆಯನ್ನು ಮನಸ್ಸಿಟ್ಟು ಗಮನಿಸುವುದರಿಂದ, ಅದನ್ನು ಮತ್ತೆ ಜ್ಞಾಪಿಸಿಕೊಳ್ಳುವುದು ಸುಲಭವಾಗುತ್ತದೆ. ಎಲ್ಲವನ್ನೂ ಕ್ರೋಢೀಕರಿಸುವುದು ಅಸಾಧ್ಯವಾಧರೆ ಇದರಿಂದ ತೊಂದರೆಗಳಾಗುತ್ತವೆ. ನಾವು ಮೊಬೈಲ್ ಟೆಲಿಫೋನಿನಲ್ಲಿ ಯಾರೊಂದಿಗೋ ಮಾತನಾಡುತ್ತಾ, ಗಮನಕೊಡದೇ ಅದನ್ನು ಜೇಬಿನಲ್ಲಿ ಇಡುತ್ತೇವೆ. ಅನಂತರ ಅದು ನಮ್ಮ ಬಟ್ಟೆಯ ಕಪಾಟಿನಲ್ಲಿ ಜೋತಾಡುತ್ತಿರುತ್ತದೆ. ಇಲ್ಲಿ ನಮ್ಮ ಜ್ಞಾಪಕಶಕ್ತಿಯು ನಮ್ಮನ್ನು ಮೋಸಗೊಳಿಸುತ್ತಿಲ್ಲ. ನಾವು ನಮ್ಮ ನೆನಪಿನ ಮಂಡಲಕ್ಕೆ ಸರಿಯಾದ ಮಾಹಿತಿಯನ್ನು ಒದಗಿಸಿಲ್ಲ. ಆಸಕ್ತಿಯ ಕೊರತೆಯೂ ಮರಗುಳಿತನಕ್ಕೆ ಕಾರಣವಾಗಿರಬಹುದು. ಒಬ್ಬ ವ್ಯಕ್ತಿಯು ಮುವ್ವತ್ತು ವರ್ಷಗಳ ಹಿಂದೆ ನಡೆದ ಕ್ರಿಕೆಟ್ ಪಂದ್ಯದ ಸ್ಕೋರುಗಳನ್ನು ತಪ್ಪಿಲ್ಲದೇ ಉಚ್ಛರಿಸುತ್ತಿದ್ದರೂ, ಅದೇ ವ್ಯಕ್ತಿಯು ಪತ್ರವನ್ನು ಅಂಚೆಯಲ್ಲಿ ಹಾಕಲು ಮರೆಯಬಹುದು. ಪುರುಷರಿಗಿಂತ ಮಹಿಳೆಯರಲ್ಲಿ ಜ್ಞಾಪಕ ಶಕ್ತಿಯು ಹೆಚ್ಚಾಗಿರುತ್ತದೆ. ಏಕೆಂದರೆ ಇವರು ತಮ್ಮ ಸುತ್ತಮುತ್ತಲಿನ ವಾತಾವರಣಕ್ಕೆ ಹೆಚ್ಚು ಗಮನ ಕೊಡುತ್ತಾರೆ. ಹೀಗೆ ಜ್ಞಾಪಕಶಕ್ತಿಯು ಈ ಗಮನದ ಮೇಲೆಯೇ ಆಧರಿಸಿದೆ. ಮರಗುಳಿತನವನ್ನು ತಡೆಯಲು ದೃಷ್ಟಿಗೆ ಸಂಬಂಧಪಟ್ಟ ಸೂಚನೆಗಳು ಸಹಾಯ ಮಾಡುತ್ತವೆ. ಆದರೆ ಸೂಚನೆಯು ಸ್ವಚ್ಛವಾಗಿಯೂ, ಸಮಯಕ್ಕೆ ಒದಗುವಂತೆಯೂ ಇರಬೇಕು. ಭೋಜನದ ಸಮಯದಲ್ಲಿ ಒಂದು ಮಾತ್ರೆಯನ್ನು ತೆಗೆದುಕೊಳ್ಳಬೇಕೆಂದಿದ್ದರೆ, ಆ ಒಂದು ಮಾತ್ರೆಯನ್ನು ಊಟದ ಮೇಜಿನ ಮೇಲೆ ಇಟ್ಟಿರಬೇಕು. ಆ ಗುಳಿಗೆಯನ್ನು ಕಪಾಟಿನಲ್ಲಿಟ್ಟು ಅದರ ಬಗ್ಗೆ ಒಂದು ಚೀಟಿ ಬರೆದು ಇಟ್ಟರೆ ಏನೂ ಪ್ರಯೋಜನವಾಗುವುದಿಲ್ಲ.
ಮರೆಗುಳಿತನಕ್ಕೆ ಮತ್ತೊಂದು ಉಪ ಕಥೆ ಇದೆ. ಕೋಣೆಯೊಳಗೆ ಪ್ರವೇಶಿಸಿದ ಮೇಲೆ ‘ಅಲ್ಲ್ಲೇಕೆ ಬಂದೆವೆಂದು’ ಆಲೋಚಿಸುವುದು. ಈ ಸಮಯದಲ್ಲಿ ನಾವು ಬೇರೆ ಯಾವುದರ ಬಗ್ಗೆಯೋ ಯೋಚಿಸುತ್ತಿರುವುದರಿಂದ ಹೀಗೆ ನಡೆಯುತ್ತದೆ. ಪ್ರತಿಯೊಬ್ಬರಿಗೂ ಯಾವಾಗಲಾದರೂ ಒಂದು ಸಲ ಈ ರಿತಿಯ ಅನುಭವ ಆಗುತ್ತದೆ. ಈ ಸಮಯದಲ್ಲಿ ಮಾಡಬಹುದಾದ ಅತ್ಯತ್ತಮವಾದ ಕೆಲಸವೇನೆಂದರೆ ಕೋಣೆಯನ್ನು ಪ್ರವೇಶಿಸುವ ಮೊದಲು ಯಾವ ಜಾಗದಲ್ಲಿ ಇದ್ದೆವೋ ಅದೇ ಜಾಗಕ್ಕೆ ಹೋಗಿ ನಿಂತರೆ ಬಹುಶಃ ನಾವು ಅಲ್ಲಿಗೆ ಹೋದದ್ದೇಕೆ ಎಂದು ಜ್ಞಾಪಿಸಿಕೊಳ್ಳಬಹುದು.
ನಾನು ಜ್ಞಾಪಿಸಿಕೊಳ್ಳುವುದು ಈ ರೀತಿಯಲ್ಲಿ: ನಮ್ಮಲ್ಲಿ ಅನೇಕರು ಕೆಲವು ಸಲ ನೆನಪುಗಳನ್ನು ತಪ್ಪಾಗಿ ಸಂಯೋಜಿಸುತ್ತೇವೆ. ನಡೆದ ಘಟನೆಯು ನಮಗೆ ಸರಿಯಾಗಿಯೇ ಜ್ಞಾಪಕಕ್ಕೆ ಬಂದಿರುತ್ತದೆ. ಆದರೆ ಇದನ್ನು ನಾವು ಬೇರೊಂದು ಮೂಲಕ್ಕೆ ಸಂಬಂಧ ಕಲ್ಪಿಸುತ್ತೇವೆ. ಉದಾಹರಣೆಗೆ, ಸ್ನೇಹಿತನೊಂದಿಗೆ ಒಂದು ಕಥೆಯನ್ನು ಹೇಳಿಕೊಳ್ಳುತ್ತೇವೆ ಮತ್ತು ಇದನ್ನು ಆತನೊಂದಿಗಿನ ಪರಿಚಯಕ್ಕೆ ದಾಖಲಿಸುತ್ತೇವೆ. ಇದನ್ನು ‘ಉದದ್ದೇಶಪೂರ್ವಕವಲ್ಲದ ಅನುಕರಣೆ’ ಎನ್ನುತ್ತ್ತಾರೆ.
ಒಂದು ದಿನ ರಾತ್ರಿಯ ಭೋಜನ ಕೋಟದಲಿ ನನ್ನ ಸ್ನೇಹಿತೆಯು ಅಂಗಡಿಯಲ್ಲಿ ತನ್ನ ಇತ್ತೀಚಿನ ಅನುಭವವನ್ನು ಹೇಳಿದಳು-ಅಂಗಡಿಯಲ್ಲಿ ಒಬ್ಬ ತಾಯಿಯು ತನ್ನ ಮಗುವನ್ನು ಬೆನ್ನಿನ ಚೀಲದಲ್ಲಿ ಹಾಕಿಕೊಂಡು ಹೋಗುತ್ತಿದ್ದಾಗ ಆ ಮಗುವಿನ ಮುಷ್ಠಿಯಲ್ಲಿದ್ದ ಬೊಂಬೆಯನ್ನು ನನ್ನ ಗೆಳತಿಯು ಎಷ್ಟು ಚೆನ್ನಾಗಿದೆ ಎಂದಳು. ತಕ್ಷಣ ಆ ತಾಯಿಯು “ಅಯ್ಯೋ ಇದು ಅವಳದ್ದಲ್ಲ. ಅವಳು ಇದನ್ನು ಅಂಗಡಿಯಿಂದ ತೆಗೆದು ಬಿಟ್ಟಿರಬೇಕು” ಎಂದಳು. ಆಗ ನನ್ನ ಗೆಳತಿಯ ಮಗಳು ಉದ್ಗರಿಸಿದಳು, “ಅಮ್ಮ, ಇದೇ ನನಗೂ ಆಗಿತ್ತು.; ಈ ಬಗ್ಗೆ ನಾನು ನಿನಗೆ ಹಿಂದಿನ ತಿಂಗಳೇ ತಿಳಿಸಿದ್ದೆ”!
ಮನಸ್ಸು ಆಡುವ ಮತ್ತೊಂದು ಆಟವೆಂದರೆ, ಸುಳ್ಳು ಜ್ಞಾಪಕ ಶಕ್ತಿ. ಇದು ತಪ್ಪು ಸಂಯೋಜನೆಯಂತಹ ಮತ್ತೊಂದು ಮೋಡಿ ಅಥವಾ ಮಂತ್ರ.. ಹಡಗಿನ ಇಳಿದಾಣದಿಂದ ಕೆಳಗಡೆ ಬಿದ್ದು ಬಿಟ್ಟಂತೆ ನಾವು ಜ್ಞಾಪಿಸಿಕೊಳ್ಳಬಹುದು. ಆದರೆ ವಾಸ್ತವದಲ್ಲಿ ಇಂತಹ ಒಂದು ಘಟನೆಯನ್ನು ನಾವು ಕೆಲವು ವರ್ಷಗಳ ಹಿಂದೆ ಒಂದು ಚಲನಚಿತ್ರದಲ್ಲಿ ನೋಡಿರಬಹುದು.
ಇಷ್ಟೊಂದು ಕಿರಿಕಿರಿ ಮಾಡುವ ನೆನಪಿನ ಲೋಪದೋಷಗಳಿಗೂ ಒಂದು ವಾಸ್ತವವಾದ ಅಸ್ಥಿತ್ವವಿದೆ. ಒಂದು ವೇಳೆ ನಾವು ನೋಡಿದ್ದು, ನಾವು ಕೇಳಿದ್ದು, ಓದಿದ್ದು ಎಲ್ಲವನ್ನೂ ನಮ್ಮ ಮಿದುಳಿನಲ್ಲಿ ಶೇಖರಿಸಿ ಇಡುವುದಾಗಿದ್ದರೆ ನಾವು ಅದರಲ್ಲಿಯೇ ಮುಳುಗಿಬಿಡುತ್ತಿದ್ದೆವು. ಮುಖ್ಯವಾದ ಸುದ್ದಿಯ ತುಣುಕುಗಳನ್ನು ಜೋಡಿಸುವ ಮತ್ತು ಉಳಿದವುಗಳನ್ನು ಹೊರ ಚೆಲ್ಲುವ ನಮ್ಮ ಈ ಶಕ್ತಿಯು ಉತ್ತಮ ಚಿಂತನೆಗೆ ಬಹು ಮುಖ್ಯ. ಈ ಸಿದ್ಧಾಂತವು ಆಶ್ವಾಸನೆ ಕೊಡುವಂತಹುದು.
ಈಗ ನಮ್ಮ ವಾಹನವನ್ನು ಎಲ್ಲಿ ಬಿಟ್ಟಿದ್ದೇನೆಂದು ನನ್ನ ಪತಿದೇವರು ಮರೆತರೆ ಅವರು ಸಮಾಚಾರಗಳನ್ನು ಶೇಖರಿಸಿಡುವುದರಲ್ಲಿಯೂ ಮತ್ತು ಅವನ್ನು ಆಯ್ದುಕೊಳ್ಳುವುದರಲ್ಲಿಯೂ ನಿರತರಾಗಿರುವರೆಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ. ಆ ಸಮಾಚಾರವು ಒಂದು ಪಂದ್ಯದ ಟಿಕೆಟ್ ಕೊಳ್ಳುವುದೇ ಆಗಿರಬಹುದು. ಯಾವುದೋ ಸಾಧಾರಣ ವಿಷಯಕ್ಕೆ ಗಮನವಿಡುವುದಕ್ಕಿಂತ ಇದೇ ಮೇಲು.
ನಾವು ಅಲ್ಲೇ ಕೆಲವು ವರ್ಷಗಳ ಹಿಂದೆ ಭೋಜನವನ್ನು ಮಾಡಿದ್ದೆವೆಂದು ಹೇಳುವ ಖಾನಾವಳಿಯ ಮುಂದೆ ಹಾಯ್ದು ಹೋದಾಗ ನಾನು ಮುಗುಳ್ನಗೆ ನಕ್ಕು, ಅವರು ಆ ರುಚಿಯಾದ ಭೋಜನದ ಆಹ್ಲಾಧಕರ ನೆನಪನ್ನು ಆಸ್ವಾದಿಸಲು ಬಿಡುತ್ತೇನೆ. ಇದು ನಿಜವಾಗಲೂ ಮರೆಯಲಾಗದಂತಹ ಭೋಜನವಲ್ಲವೇ?
ನೆನಪಿನ ವರ್ಧನೆಗೆ ಸೂತ್ರಗಳು:
೧. ಕೆಫೀನ್:- ನಾವು ಮನಸ್ಸಿನಲ್ಲಿ ಬಾಯಿಪಾಠಮಾಡಿಕೊಳ್ಳುವಂತಹ ಕೆಲಸದಲ್ಲಿ ತೊಡಗಿದ್ದಲ್ಲಿ ಒಂದು ಅಥವಾ ಎರಡು ಲೋಟ ಕಾಫಿ ಸಹಾಯ ಮಾಡಬಲ್ಲುದು
೨. ನಿದ್ರೆ:- ಅತಿ ಕಡಿಮೆ ನಿದ್ರೆಯು ಆಲಸ್ಯವನ್ನುಂಟುಮಾಡುತ್ತದೆ. ಇದರಿಂದ ಮರೆಗುಳಿತನವು ಬರಬಹುದು. ಆದರೆ ನಿದ್ರೆಯ ಮಾತ್ರೆಯನ್ನು ನುಂಗಿದರೆ ಅದು ಮರುದಿನ ಮರೆವನ್ನು ಮತ್ತು ಅಸ್ಥಿರತೆಯನ್ನೂ ಉಂಟುಮಾಡಬಹುದು.
೩. ವ್ಯಾಯಾಮ:- ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರಯೋಗಶಾಲೆಯಲ್ಲಿ ತೀವ್ರ ವ್ಯಾಯಾಮವನ್ನು ಮಾಡಿಸಿದ ಪ್ರಾಣಿಗಳ ಮೆದುಳಿನಲ್ಲಿ ಸಸಾರಜನಕದ ಅಂಶವು ಹೆಚ್ಚು ಕಂಡು ಬಂದಿತು. ಇದು ಜ್ಞಾಪಕಶಕ್ತಿಯ ವೃದ್ಧಿಗೆ ಅತಿ ಮುಖ್ಯವಾದದ್ದು. ಆದುದರಿಂದ ನಿಯಮಿತವಾಗಿ ವ್ಯಾಯಾಮ ಮಾಡುವವರು ಅನೇಕ ವರ್ಷಗಳು ಉತ್ತಮವಾದ ನೆನಪಿನ ಶಕ್ತಿಯನ್ನು ಉಳಿಸಿಕೊಳ್ಳಬಲ್ಲರು.
-ಜಯಂತಿ ಅಮೃತೇಶ್
‘ಕೃತ್ತಿಕ’, ನಂ. 40, 6ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು 570 009
(0821) 2543472
08453 12952
email: jayanthiamrutesh@gmail.com