ಅಮೆರಿಕನ್ನಡ
Amerikannada
ಚೈತ್ರ ಗೀತ
-ಡಾ. ಸಂಧ್ಯಾ ಕೇಶವ್, ಮೈಸೂರು
ಚೈತ್ರ ಬಂದಿತು
ಹರುಷ ತಂದಿತು
ಮನೆ ಮನಗಳ ಅಂಗಳದಿ
ಸದಾ ಹಸಿರು ನಲಿಯುವಂತೆ

ಮಾಮರದ ರೆಂಬೆಗಳಲಿ
ಕೋಕಿಲದ ಸರಿಗಮ
ಹೊಂಗೆ ಬೇವುಗಳಲ್ಲಿ
ಹೂ ಗೊಂಚಲು ಅನುಪಮ

ಮೂಡಣದೆ ಮೂಡಿರಲು
ದಿನಕರನ ಹೊಂಗಿರಣ
ನಲಿದಿದೆ ಮನೆ ಬಾಗಿಲಲಿ
ಮಾಮರದಾ ತೋರಣ

ಋತುರಾಜನ ಆಗಮನಕೆ
ಹಸಿರಿನ ನಡೆಮುಡಿಯು
ನಾಚಿ ನಲಿವ ಹೆಂಗಳೆಯರ
ಹೆರಳ ತುಂಬ ಮಲ್ಲಿಗೆಯು

ಬೇವು ಬೆಲ್ಲ ತರಲಿ ಸದಾ
ಸುಖ ಶಾಂತಿಯ ಬಾಳಿಗೆ
ಯುಗಯುಗಾದಿಯಲ್ಲೂ ಅರಳುತಿರಲು
ಬಾಳ ಮಲ್ಲಿಗೆ

ಸಮರಸದ ಸಂಕೇತಕೆ
ಬೇವು ಬೆಲ್ಲವು
ಹರಿಯುತಿರಲಿ ನಿರಂತರ
ಚೈತ್ರ ಗೀತವು