ಅಮೆರಿಕನ್ನಡ
Amerikannada
ಯುಗಾದಿ
-ಡಾ. ಕೆ. ಲೀಲಾಪ್ರಕಾಶ್, ಮೈಸೂರು
ಹೊಸ ಮಳೆಯು ಬಂದು
ಹಳೆ ಕೊಳೆಯ ತೊಳೆದು
ಇಳೆಯಲ್ಲ ನಳನಳಿಸಿತು

ಹಳೆಕಸವು ದೂರಾಗಿ
ಹೊಸರಸವು ಹೊನಲಾಗಿ
ಜೀವನದಿ ರಾಗ ನವಿರಾಗಿ

ಹಳೆಯುಗವು ಸಾಗಿ
ಹೊಸ ಯುಗವು ಆಗಿ
ತಲೆ ಎತ್ತಿತ್ತು ಸಂಪೂರ್ಣ ಮಾಗಿ

ಮಾವಿನ ತಳಿರಿಗೆ
ಬೇವಿನ ಥಳುಕದು
ಸಿಹಿ-ಕಹಿಯ ಸಮ್ಮಿಶ್ರ ಭಾವವದು

ಜೀವನದ ನೋವೆಲ್ಲ
ನಲಿವಾಗಿ ಬದಲಾಗಿ
ತರಲಿ ನವೋತ್ಸಾಹ ಎಲ್ಲರಿಗೂ

ವೈಶಾಖದ ದಿನಗಳಲಿ
ಕಪ್ಪಾದ ಕಾರ್ಮೋಡ ಕರಗಿ
ತಿಳಿ ಮಳೆಯ ಸುರಿಯುವಂತೆ

ನಲ್ಲನ ವಿರಹವದು ಮರೆಯಾಗಿ
ನಲ್ಲೆಯಪ್ಪುಗೆಯಲಿ ಸೇರುವಂತೆ
ಹಳೆ ವರುಷವಡಗಿ ಹೊಸತಾನ ಉದಿಯಿಸಿತಿಂದು

ಬೇವು-ಬೆಲ್ಲದ ನಂಟು
ನೋವು-ನಲಿವಿನ ಇಡಗಂಟು
ಕಷ್ಟ ಸುಖಗಳ ಮೇಳೈಸುವ ಕಾಮನ ಬಿಲ್ಲದು