ಅಮೆರಿಕನ್ನಡ
Amerikannada
ನಂದನ ಸಂವತ್ಸರ
ವಿಶ್ವ, ಸ್ಯಾನ್ ರಮೋನ್, ಕ್ಯಾಲಿಫೋರ್ನಿಯಾ
ಉಗಾದಿಯಂದರೆ ಬೇವು ಬೆಲ್ಲದ ಹಬ್ಬ. ಬೇವು ಬೆಲ್ಲಗಳು ಜೀವನದ ಸಿಹಿ ಕಹಿಗಳ ಅಥವಾ ನೋವು ನಲಿವುಗಳ ಸಂಕೇತವೆನ್ನುತ್ತಾರೆ. ಉಗಾದಿಯೆಂಬ ಹೆಸರು ಸಂಸ್ಕೃತದ “ಯುಗಸ್ಯ ಆದಿಃ” (“ಯುಗದ ಆದಿ”) ಎಂಬ ಪದದಿಂದ ಬಂದಿದೆ. ಅಂದರೆ ಬ್ರಹ್ಮನಿಂದ ಜಗತ್ತು ಮತ್ತು ಕಾಲ ಪ್ರಾರಂಭವಾದ ದಿನ. ಗ್ರಹಗಳನ್ನು ಒಂದು ಸ್ಥಾನದಿಂದ ಅವಲೋಕಿಸಿದಾಗ ಅವು ಸೂರ್ಯನ ಸುತ್ತಲೂ ಸುತ್ತಿ ಮತ್ತೆ ಅವಲೋಕಿಸುವ ಸ್ಥಾನಕ್ಕೆ ಹಿಂದಿರುಗುತ್ತವೆ. ಈ ರೀತಿಯ ಗ್ರಹಗಳ ಚಲನೆಯು ನಿರಂತರವಾಗಿ ನಡೆಯುತ್ತದೆ. ಈ ಚಲನೆಗೆ ಒಂದು ವರ್ಷ ಕಾಲ ಬೇಕಾಗುವುದು.
ಸೌರಮಾನ (ಸೂರ್ಯನನ್ನು ಅನುಸರಿಸಿದ ಕಾಲದ ಅಳತೆ) ಹಾಗೂ ಚಂದ್ರಮಾನ (ಚಂದ್ರನನ್ನು ಅನುಸರಿಸಿದ ಕಾಲದ ಅಳತೆ) ಎಂದು ಎರಡು ವಿಧದ ಕಾಲಮಾನ (ಕಾಲವನ್ನು ಅಳೆಯುವ) ಗಣಿತಗಳಿವೆ. ಈ ಗಣಿತದಲ್ಲಿ ಪಂಚ (ಐದು) ‘ಅಂಗ’ಗಳಿವೆ. ಇವು ತಿಥಿ, ವಾರ, ನಕ್ಷತ್ರ, ಯೋಗ, ಮತ್ತು ಕರಣಗಳು. ಈ ಐದು ಅಂಗಳ ಗಣಿತ ಶಾಸ್ತ್ರವನ್ನು ಪಂಚಾಂಗ ಎನ್ನುತ್ತಾರೆ. ಈ ಪಂಚಾಂಗ ಅರವತ್ತು ವರ್ಷಗಳ ಕಾಲದ ಅವಧಿಯನ್ನು ಅಳೆಯುತ್ತವೆ. ಅರವತ್ತು ವರ್ಷದ ನಂತರ ಪಂಚಾಂಗ ಮೊದಲ ವರ್ಷಕ್ಕೆ ಹಿಂತಿರುಗುತ್ತದೆ. ಈ ಚಕ್ರ ಗತಿಯ ವಿಶ್ವ ಭ್ರಮಣೆಗೆ ಭಾರತದ (ಸನಾತನ ಧರ್ಮದ) ಶಾಸ್ತ್ರಗಳು ‘ಕಾಲಚಕ್ರ’ ಎನ್ನುತ್ತವೆ. ಈ ಕಾಲಚಕ್ರವನ್ನು ಅರವತ್ತು ವರ್ಷದ ಗಡಿಯಾರಕ್ಕೆ ಹೋಲಿಸಬಹುದು.
ಪಂಚಾಂಗದ ಪ್ರತಿವರ್ಷದ ಮೊದಲ ದಿನ ಯುಗಾದಿ. ಈ ಸೌರಮಾನ ಉಗಾದಿ ದಿನಕ್ಕೆ ‘ವಿಷುವ’ ಎಂದು ಹೇಳುತ್ತಾರೆ. ವಿಷು ಎಂದರೆ ಹಗಲು ಮತ್ತು ರಾತ್ರಿಕಾಲಗಳು ಸಮವಾಗಿರುವ ದಿನ. ಇಂತಹ ದಿನಕ್ಕೆ ಆಂಗ್ಲ ಭಾಷೆಯಲ್ಲಿ ‘ವರ್ನಲ್ ಈಕ್ವಿನಾಕ್ಸ್’ ಎನ್ನುತ್ತಾರೆ. ಯುಗಾದಿ ದಿನವೇ ಮತ್ಸ್ಯಾವತಾರ ಜಯಂತಿ, ಮತ್ತು ರಾಮ ನವರಾತ್ರಿ, ವಸಂತ ನವರಾತ್ರಿ, ಚೈತ್ರ ನವರಾತ್ರಿ ಪ್ರಾರಂಭವಾಗುವ ದಿನ. ಇರಾನ್ ದೇಶದಲ್ಲಿ ಈ ದಿನ “ನೌ ರೋಜ್” ಎಂದು ಆಚರಿಸುತ್ತಾರೆ. ಈಗಿನ ಪಂಚಾಂಗದ ಉಗಾದಿ ದಿನಕ್ಕೂ ವೇದವಿಧಿತವಾದ ವಿಷು (ವರ್ನಲ್ ಈಕ್ವಿನಾಕ್ಸ್) ದಿನಕ್ಕೂ ವ್ಯತ್ಯಾಸವಿದೆ. ಹಿಂದಿನ ಕಾಲದಲ್ಲಿ ಅರವತ್ತು ವರ್ಷಕೊಮ್ಮೆ ಕಾಲಚಕ್ರ ಗಣಿತವನ್ನು ಹೊರಜಗತ್ತಿಗೆ ಸಂಘಟಿಸುತ್ತಿದ್ದರು. ಹಲವಾರು ಶತಮಾನಗಳಿಂದಲೂ, ಈ ಸಂಘಟನಾ ಕಾರ್ಯ ನಿಂತು ಹೋಗಿದೆ. ಆದ್ದರಿಂದ ವಿಷು ದಿನಕ್ಕೂ, ಉಗಾದಿ ದಿವಸಕ್ಕೂ ವ್ಯತ್ಯಾಸಗಳು ಕಂಡು ಬರುತ್ತವೆ.
ಯೋಗ ಶಾಸ್ತ್ರದ ಪ್ರಕಾರ ಗ್ರಹ ಎಂದರೆ ಹೊರಜಗತ್ತಿನ ಗ್ರಹಗಳು ಮಾತ್ರವಲ್ಲ. ಆ ಪದಕ್ಕೆ ಹಿಡಿದುಕೊಳ್ಳುವುದು ಅಥವಾ ಆಕರ್ಷಿಸುವುದು ಎಂಬ ಅರ್ಥವೂ ಇದೆ. ಹೊರಜಗತ್ತಿನಲ್ಲಿ ಗ್ರಹಗಳಿರುವಂತೆಯೇ ನಮ್ಮೆಲ್ಲರ ಅಂತರಾಕಶದಲ್ಲಿ ಸೂರ್ಯ ಚಂದ್ರರಿದ್ದಾರೆ, ನವಗ್ರಹಗಳಿವೆ. ಹಾಗೂ ಅವುಗಳನ್ನು ಚಲಿಸುವ ಕಾಲಚಕ್ರವಿದೆ. ಈ ಓಳ ಜಗತ್ತಿನ ಕಾಲವನ್ನೂ ಸಹ ಹೊರ ಪ್ರಪಂಚದ ಪಂಚಾಂಗದಂತೆ ಅಳತೆ ಮಾಡಬಹುದು. ಜಾಬಾಲ ಉಪನಿಷತ್ತಿನಲ್ಲಿ ಅಂತಾರಾಕಾಶದಲ್ಲಿ ನಡೆಯುವ ಗ್ರಹಣ, ಅಮಾವಾಸ್ಯೆ ಇತ್ಯಾದಿ ವಿಶಯಗಳನ್ನು ವಿವರಿಸಿದ್ದಾರೆ.
ಪ್ರತಿ ಜೀವಿಯಲ್ಲಿರುವ ಒಳ ಗ್ರಹಗಳು ಸನಾತನ ಧರ್ಮದ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ಮರ್ಮ. ಈ ಪ್ರಾಚಿನ ಯೊಗ ರಹಸ್ಯವನ್ನು, ಇತ್ತೀಚಿನ ವಿಜ್ಞಾನದ ‘ಬಯೊಲಾಜಿಕಲ್ ಕ್ಲಾಕ್’ ಅಥವಾ ‘ಸರ್ಕೇಡಿಯನ್ ರಿದಮ್’ ಇವುಗಳ ವಿವರಣೆಯಿಂದ ಅರ್ಥ ಮಾಡಿಕೊಳ್ಳಬಹುದು. ಈ ರಹಸ್ಯ ಕೆಲವು ಜನಾಂಗಕ್ಕೆ ಮಾತ್ರ ಮೀಸಲಾಗಿ ಅಡಗಿಸಿಟ್ಟ ವಿದ್ಯೆಯಲ್ಲ. ಯೋಗವು ಲೋಕದ ಎಲ್ಲ ಜನರ ಜನ್ಮ ಸಹಿತವಾದ ಹಕ್ಕು. ‘ರಹಸ್ಯ’, ‘ಮರ್ಮ’ ಎಂಬ ಪದಗಳಿಗೆ ಎಲ್ಲರಿಗೂ ಸಾಮಾನ್ಯವಾಗಿ ಕಾಣದಿರುವ ಸತ್ಯ ಎನ್ನುವ ಅರ್ಥವಿದೆ. ಅಂದರೆ, ರಹಸ್ಯ, ಮರ್ಮ ವಿಚಾರಗಳ ಸೂಕ್ಷ್ಮಗಳು ಎಲ್ಲರಿಗೂ ತಿಳಿಯುವುದಿಲ್ಲ. ಈ ಅರ್ಥವನ್ನು ತೀಳಿದುಕೊಳ್ಳಲು, ಆ ಸೂಕ್ಷ್ಮವನ್ನು ತಿಳಿದವರ (ಗುರುವಿನ) ಸಹಾಯವಿರಬೇಕು.
ಉಗಾದಿ ದಿನದಲ್ಲಿ ಹೊರ ಜಗತ್ತಿನಂತೆ, ನಮ್ಮ ಒಳ ಜಗತ್ತಿನಲ್ಲೂ ಹೊಸವರ್ಷ ಶುರುವಾಗುತ್ತದೆ. ಈ ಸಮಯ ಸಹಜವಾಗಿ ಶಾಂತವಾಗಿದ್ದು, ದೃಡ ಸಂಕಲ್ಪ, ಕಾರ್ಯರಂಭ ಇತ್ಯಾದಿ ಕಾಮ್ಯಸಿದ್ಧಿ ಗಳಿಗೆ ಅನುಕೂಲವಾಗಿರುತ್ತದೆ. ಅದ್ದರಿಂದ, ಉಗಾದಿ ಹಬ್ಬದ ಆಚರಣೆ ಈ ದಿನ ಮಾಡುತ್ತಾರೆ. ಇದೇ ರೀತಿ ಪ್ರತಿ ಹಬ್ಬಗಳಿಗೂ, ಸಂದ್ಯಾಕಾಲದ ಧ್ಯಾನ, ಪೂಜೆಗಳಿಗೆ ಯೋಗ ಶಾಸ್ತ್ರದ ಅರ್ಥವಿದೆ. ಈ ಓಳ ಹೊರ ಜಗತ್ತಿನ ಸಂಧಿ, ಸಂಗಮ, ಗ್ರಹಣಗಳು ನಮ್ಮ ದೇಹದ ಮೇಲೆ ಮಾಡುವ ಪರಿಣಾಮಗಳನ್ನು ನಾಡೀ ವಿಜ್ಞಾನದ ಸಹಾಯದಿಂದ ಪ್ರಯೋಗಗಳ ಮೂಲಕವೂ ತೋರಿಸಬಹುದು.
ಈ ದಿನ ಬ್ರಹ್ಮ ಮತ್ತು ಕಾಲಪುರುಷನಿಗೆ ಪೂಜೆಮಾಡಿ, ಪಂಚಾಂಗವನ್ನು ಓದುತ್ತಾರೆ. ಬೇವು ಬೆಲ್ಲ ಮಿಶ್ರಿತ ‘ಕಲ್ಕ’, ಎನ್ನುವ ಚಂದನದಂತಹ ಲೇಪನವನ್ನು ನೈವೇದ್ಯ ಮಾಡುತ್ತಾರೆ. ಕಲ್ಕ (ಬೇವು ಬೆಲ್ಲ) ಪ್ರಸಾದವನ್ನು ತೆಗೆದು ಕೊಳ್ಳುವಾಗ ಕೆಳಗಿನ ಸ್ತೋತ್ರವನ್ನು ಹೇಳಿಕೊಳ್ಳುತ್ತಾರೆ.
ಶತಾಯುರ್-ವಜ್ರ ದೇಹಾಯ ಸರ್ವ-ಸಂಪತ್-ಕರಾಯ ಚ | ಸರ್ವ-ಅರಿಷ್ಟ ವಿನಾಶಾಯ ನಿಂಬಕಮ್-ದಳ ಭಕ್ಷಣಮ್ ||
ನೂರು ವರ್ಷ ಆಯಸ್ಸು, ಆರೋಗ್ಯ, ಸಂಪತ್ತು ಗಳು ಒದಗಿ ಬಂದು, ಎಲ್ಲ ಅರಿಷ್ಟಗಳು ನಾಶವಾಗಲೆಂದು ಬೇವು ಬೆಲ್ಲವನ್ನು ತಿನ್ನುತ್ತಾರೆ. ಈ ಕಲ್ಕ ಎನ್ನುವ ಪದಕ್ಕೆ ಮತ್ತೊಂದು ಅರ್ಥವೂ ಸಹ ಇದೆ. ಈ ಕೆಳಗಿನ ಪುರಾಣ ಕಥೆ ಅದನ್ನು ವಿವರಿಸುತ್ತದೆ. ಈ ಕಥೆಯ ಹಿನ್ನೆಲೆಯಲ್ಲೂ ಉಗಾದಿ ದಿನದ ಮಹತ್ವವನ್ನು ನೋಡಬಹುದು.
ಮಧು ಕೈಟಭರ ಸಂಕ್ಷಿಪ್ತ ಕಥೆ:
‘ಕಲ್ಕ’ ಪದಕ್ಕೆ, ‘ಕಿವಿಯ ಗುಗ್ಗೆ, ಕೊಳಕು, ಅಸತ್ಯ, ಮೋಸ, ಪಾಪ’ ಎಂಬ ಅರ್ಥಗಳೂ ಇವೆ. ದೇವೀ ಭಾಗವತದಲ್ಲಿ ಹಾಗೂ ಮತ್ಸ್ಯಾವತಾರದಲ್ಲಿ ಬರುವ ಮಧು ಕೈಟಭರ ಕತೆಯಿಂದ ಈ ಕಲ್ಕದ ವಿವರ ತಿಳಿದು ಕೊಳ್ಳಬಹುದು. ಆ ಕಥೆಯ ಸಾರಾಂಶ ಹೀಗಿದೆ.
ಮಹಾವಿಷ್ಣುವಿನ ನಾಭಿಯಿಂದ ಚತ್ರುಮುಖ ಬ್ರಹ್ಮ ಜನಿಸಿದನು. ಅವನ ಕಾರ್ಯ ಜಗತ್ತನು ಸೃಷ್ಟಿಸುವುದು. ಜಗತ್ತಿನ ಬುದ್ಧಿ, ಮಮಕಾರ (ಅಹಂಕಾರ), ನೆನಪು (ಚಿತ್ತ), ಮನಸ್ಸು ಅವನ ಚತುರ್ಮುಖಗಳು. ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವೀ ಎಂಬ ಶುದ್ಧ ತತ್ವಗಳ (ತನ್ಮಾತ್ರಗಳ) ಸೃಷ್ಟಿಯಾದ ನಂತರ ಈ ಕಾರ್ಯದಲ್ಲಿ ಹೇಗೆ ಮುಂದುವರೆಯುವುದೆಂದು ಗಾಡವಾಗಿ ಆಲೋಚಿಸುತ್ತಿದ್ದನು (ತಪಸ್ಸು ಮಾಡುತ್ತಿದ್ದನು). ಆಗ, ಮಹಾವಿಷ್ಣುವಿನ ಕಿವಿಯಿಂದ ಮಧು ಕೈಟಭರೆಂಬ ರಾಕ್ಷಸರು ಜನಿಸಿದರು.
ಮಧು ಕೈಟಭರು ಬ್ರಹ್ಮನಿಗೆ ಜಗತ್ತನ್ನು ಸೃಷ್ಟಿ ಮಾಡುವುದಕ್ಕೆ ಆಗದಂತಹ ಅಡಚಣೆಗಳನ್ನು ಉಂಟುಮಾಡಿದರು. ಅದನ್ನು ಕಂಡು ಮಹಾಲಕ್ಷ್ಮಿಯು, ಮಹಾವಿಷ್ಣುವನ್ನು ಯೋಗನಿದ್ರೆಯಿಂದ ಎಚ್ಚರಿಸಿದಳು. ಅವನು ಮಧು ಕೈಟಭರನ್ನು ಯುದ್ದದಲ್ಲಿ ಸೋಲಿಸಿದನು. ಆದಿ-ಜಲದಲ್ಲಿ (‘ಕಂ’, ‘ಪ್ರೈಮಲ್ ವಾಟರ್’) ಮುಳುಗಿದ್ದನ್ನು ತಿಳಿಯದ ಮಧು ಕೈಟಭರ ಕೋರಿಕೆಯಂತೆ ನೀರಿಲ್ಲದ ಜಾಗದಲ್ಲಿ (ಅವನ ತೊಡೆಯ ಮೇಲೆ) ಅವರನ್ನು ಪುಡಿಮಾಡಿ ಸಂಹರಿಸಿದನು. ಬ್ರಹ್ಮ ಅವನ ಸೃಷ್ಟಿಕಾರ್ಯ ಮುಂದುವರೆಸಿದನು. ಶುದ್ದ ತತ್ವಗಳೊಡನೆ ಪುಡಿಯದ ರಾಕ್ಷಸರನ್ನೂ ಸೇರಿಸಿ ಪ್ರಪಂಚವನ್ನು ಸೃಷ್ಟಿಮಾಡಿದನು. ಇದಕ್ಕೆ ಪಂಚೀಕರಣ ವೆನ್ನುತಾರೆ. ಪಂಚೀಕರಣವೆಂದರೆ ಐದು ತತ್ವಗಳನ್ನು ಒಂದರೊಡನೆ ಮತ್ತೊಂದನ್ನು ಮಿಶ್ರ ಮಾಡುವುದು. (ಚಿನ್ನವನ್ನು ತಾಮ್ರದೊಡನೆ ಮಿಶ್ರ ಮಾಡಿ ಆಭರಣಗಳನ್ನು ಮಾಡುವ ರೀತಿಯಲ್ಲಿ). ಈ ಪಂಚ ತತ್ವಗಳಿಂದ ಸೃಷ್ಟಿಯಾದ್ದರಿಂದ ಜಗತ್ತಿಗೆ ‘ಪ್ರ-ಪಂಚ’ ಎಂದು ಹೇಳುತ್ತಾರೆ.
ತಂತ್ರ ಶಾಸ್ತ್ರಗಳಲ್ಲಿ ಲೋಕ ಸೃಷ್ಟಿಯನ್ನು ಮಾಹೇಶ್ವರ ಸೂತ್ರದಿಂದ ವಿವರಿಸುತ್ತಾರೆ. ಶಿವನ ಡಮರುವಿಂದ ಬಂದ ಸ್ವರಗಳು ಲೋಕ ಸೃಷ್ಟಿಯ ಹಂತಗಳನ್ನು ತಿಳಿಸುತ್ತವೆ. ಅ, ಇ, ಉ, ಣ್ ಇಂದ ಸೃಷ್ಟಿ ಶುರುವಾಗತ್ತದೆ. ಸ್ವಲ್ಪ ಕಾಲ ಈ ಕಾರ್ಯ ನಿಲ್ಲುತ್ತದೆ. ಇದನ್ನು ‘ಋ ಲೃಕ್’ ಸ್ವರಗಳು ತೋರಿಸುತ್ತವೆ. ಈ ಸ್ವರಗಳನ್ನು, ನಪುಂಸಕ ಕಾಲ (ಏನನ್ನೂ ಸೃಷ್ಟಿ ಮಾಡದ ಕಾಲ) ಎನ್ನುತ್ತಾರೆ. ಮತ್ತೆ ಸ್ವಲ್ಪ ಕಾಲದನಂತರ ಸೃಷ್ಟಿ ಮುಂದುವರಿಯುತ್ತದೆ. ‘ಏ, ಓನ್ಗ್’ ಇತ್ಯಾದಿ ಸ್ವರಗಳು ಇದನ್ನು ತೋರಿಸುತ್ತವೆ. ‘ಹ, ಯ, ವ, ರ ಟ್, ಲಣ್’ ಪಂಚ ತತ್ವಗಳನ್ನೂ, ‘ಝ, ಭ, ಯ್’ ಇಂದ ‘ಹಲ್’ ವರೆಗಿನ ವ್ಯಂಜನಗಳು ಪಂಚೀಕರಣದಿಂದ ಉತ್ಪತ್ತಿಯಾದ ಪ್ರಪಂಚವನ್ನು ವಿವರಿಸುತ್ತವೆ.
ರಾಕ್ಷಸಾಂಶ ಮಿಶ್ರಿತವಾದ ತತ್ವಗಳ ಓಳ ಅರ್ಥವೇನೆಂದರೆ – ನಮ್ಮಲ್ಲಿರುವ ದೋಷಗಳು ಸೃಷ್ಟಿಗೆ ಸಹಜವಾದದ್ದು. ಅದನ್ನು ಅರಿತು ಎಚ್ಚರಿಕೆಯಿಂದ ಬಾಳಿದರೆ ಸುಖ ಸಂತೋಷಗಳು ಒದಗುತ್ತವೆ. ಹಾಗೆ ಬಾಳುವುದು ಸಾನತನ ಧರ್ಮದ ಪಥ. ನಮ್ಮ ಒಳ್ಳೆಗುಣಗಳಿಂದ, ವಿವೇಚನಾಶಕ್ತಿಯಿಂದ ದೋಷಗಳನ್ನು ಗೆಲ್ಲುವುದು ಅದರ ಧ್ಯೇಯ.
ಪುರಾಣಗಳಲ್ಲಿ ಬರುವ ದೇವ ದಾನವ ಯುದ್ಧಗಳು ಸಹ ಓಳ ಜಗತ್ತಿನ ಯೋಗ ಯುದ್ಧವನ್ನು ವಿವರಿಸುತ್ತವೆ. ಪ್ರಪಂಚದಲ್ಲೂ, ಹಾಗು ನಮ್ಮೆಲ್ಲರ ದೇಹದಲ್ಲೂ ಹದಿನಾಲ್ಕು ಲೋಕಗಳಿವೆ. ದೇಹದಲ್ಲಿ, ಬುದ್ಧಿ, ಮಮಕರಣ (ಅಹಂಕಾರ, ಅಂದರೆ ಜಂಭವಲ್ಲ ಅದು ವಿಶ್ವದ ಆಗುಹೋಗುಗಳನ್ನು ತಮ್ಮ ಅನುಭವ ಎನ್ನಿಸುವ ತತ್ವ. ಉದಾಹರಣೆಗೆ,ನಾನು ಜಗತ್ತಿನ ಸೂರ್ಯನನ್ನು ನನ್ನ ದೇಹದಲ್ಲಿ ಅನುಭವಿಸಿದೆ ಎನ್ನುವುದು ಅಥವಾ ಮಮ ಕರಣ) ಮನಸ್ಸು, ಚಿತ್ತ ಈ ನಾಲಕ್ಕು ಅಂತಃಕರಣಗಳು, ಹಾಗೂ ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ ಈ ಐದು ಜ್ಞಾನೇಂದ್ರಿಯಗಲೂ, ಹಾಗೂ ಕಾಲು, ಕೈ, ಹಾಗೂ ಮಲ, ಮೂತ್ರ, ರತಿಯ ಐದು ಕಾರ್ಮೇಂದ್ರಿಯಗಳೂ್ ಸೇರಿ, ಹದಿನಾಲಕ್ಕು ಲೋಕಗಳಾಗುತ್ತವೆ. ಓಳ ದೇಹದ ಲೋಕವನ್ನು ಇಂದ್ರಾದಿ ದೇವತೆಗಳು ಆಳುತ್ತಾರೆ. ದೇವತೆಗಳು ಸಾತ್ವಿಕ ವರ್ಗ.
ನಮ್ಮ ದೇಹದ ಲೋಕಗಳಲ್ಲಿ ರಾಕ್ಷಸ ಮಿಶ್ರಿತ ತತ್ವಗಳು, “ಆಸೆ, ದುರಾಸೆ, ಮದ, ಮೋಹ, ಕೋಪ, ಮತ್ತು ಅಸೂಯೇ” ಎಂಬ ಅರಿಷಡ್ವರ್ಗಗಳಿಗೆ ಕಾರಣವಾಗುತ್ತದೆ. ಮಹಿಷ, ರಸಿಲೋಮ, ರುದ್ರಗ, ಇತ್ಯಾದಿ ರಾಕ್ಷಸರು ಇವುಗಳ ಸ್ವರೂಪ. ಇವರಿಗೆ ನಿಶಾಚರರು ಎನ್ನುತ್ತಾರೆ (ಅಂದರೆ ಅಜ್ಞಾನದಲ್ಲಿ ಚರಿಸುವ ಸ್ವಭಾವಗಳು). ಇವು ತಾಮಸಿಕ ಮತ್ತು ರಾಜಸಿಕ ವರ್ಗಗಳು.
ಈ ನಿಶಾಚರರು ನಮ್ಮ ಒಳ ದೇವೆತೆಗಳನ್ನು ಕಾಡುತ್ತವೆ. ಕೆಲವೊಮ್ಮೆ ಗೆದ್ದು, ದೇವತೆಗಳನ್ನು ಸೆರೆಮಾಡಿ, ಒಳ ಲೋಕಗಳನ್ನು ಅನೀತಿಮಾರ್ಗದಲ್ಲಿ ನಡೆಸುತ್ತವೆ. ಇದು ಪಾಪಕರ್ಮ. ಇದರಿಂದ ಪುನರ್ಜನ್ಮ, ಕಷ್ಟ ನಷ್ಟಗಳ ಅನುಭವ ವಾಗುತ್ತದೆ. ಅದನ್ನು ತಪ್ಪಿಸಿಕೊಳ್ಳಲು, ದೇಹದ ದೇವತೆಗಳು (ಸಾತ್ವಿಕ ಗುಣಗಳು) ನಮ್ಮಲ್ಲಿಯೂ ಹಾಗೂ ಲೋಕದಲ್ಲಿಯೂ ಇರುವ ಬ್ರಹ್ಮ, ವಿಷ್ಣು, ಮಹೇಶ್ವರರ ಸಹಾಯವನ್ನು ಕೋರುತ್ತಾರೆ. ಈ ತ್ರಿಮೂರ್ತಿಗಳಿಗೆ ಸ್ತ್ರೀ ರೂಪವೂ ಇವೆ. ಆ ರೂಪಗಳನ್ನೇ ಮಹಾ ಕಾಳಿ, ಮಹಾ ಲಕ್ಷ್ಮೀ, ಮಹಾ ಸರಸ್ವತೀ ಎನ್ನುತ್ತಾರೆ. ಇವರು ಕಾಲ ಪರಿಪಕ್ವವಾದಾಗ ಒಲಿದುಬಂದು, ರಾಕ್ಷಸರನ್ನು ವಧಿಸಿ, ದೇವತೆಗಳನು ಸೆರೆಯಿಂದ ಬಿಡುಗಡೆ ಮಾಡುತ್ತರೆ.
ನವರಾತ್ರಿಯಲ್ಲಿ ಮೂರು ದೇವಿಯರನ್ನೂ ಅರಿಷಡ್ವರ್ಗಗಳನ್ನು ಸಂಹರಿಸಿ, ಸಾತ್ವಿಕಥೆಯನ್ನು ಶಾಶ್ವತವಾಗಿಸೀ ಎಂದು ಪೂಜೆ ಮಾಡುತ್ತೇವೆ. ಅಥವಾ, ನಮ್ಮ ಸ್ವಭಾವದಲ್ಲಿ, ಕಹಿಯನ್ನು ತೆಗೆದು ಸಿಹಿಯನ್ನು ಮಾಡು ಎಂದು ಕೋರುತ್ತೇವೆ. ಮಹಾ ಕಾಳಿಯು ತಾಮಸಿಕ ಅಸುರರನ್ನೂ, ಮಹಾಲಕ್ಷ್ಮಿ ರಾಜಸಿಕ ಅಸುರರನ್ನೂ ಮತ್ತು ಮಹಾ ಸರಸ್ವತಿ ಅಂದಕಾರವನ್ನು (ಅಜ್ಞಾನವನ್ನು) ಸಂಹರಿಸುತ್ತಾರೆ. ಮಧು ಜೇನುತುಪ್ಪವನ್ನೂ (ಬೆಲ್ಲವನ್ನೂ), ಕೈಟಭ ಜೇನು ದುಂಬಿಯನ್ನೂ (ಜಿಪುಣತನ, ಸ್ವಾರ್ಥತೆಯ ಕಹಿ ಜೀವನ ಅಥವ ಬೇವನ್ನೂ) ಸಂಕೇತಿಸುತ್ತಾರೆ. ಹೀಗೆ ನಾನ ತರದಲ್ಲಿ ಉಗಾದಿಯ ದಿನ ಸಿಹಿ, ಕಹಿ, ಮತ್ತು ಕಲ್ಕಗಳ ಹಬ್ಬ.
ಆಧಾರ ಗ್ರಂಥಗಳು:
ಮೇಲೆ ಹೇಳಿರುವ ವಿಷಯಕ್ಕೆ ಈ ಗ್ರಂಥಗಳನ್ನು ಸಂಪೂಣವಾಗಿ ಉಪಯೋಗಿಸಿ ಕೊಂಡಿದ್ದೇನೆ.
೧) ಭಾರತೀಯರ ಹಬ್ಬ-ಹರಿದಿನಗಳು, ಶ್ರೀ ಶ್ರೀ ರಂಗಪ್ರಿಯ ಶ್ರೀ ಶ್ರೀಃ, ಪ್ರಕಾಶಕರು, ಅಷ್ಟಾಂಗಯೋಗ ವಿಜ್ಞಾನ ಮಂದಿರಂ, ನಂ. ೬೨೫,೪ನೇ ಕ್ರಾಸ್, ಹನುಮಂತನಗರ, ಬೆಂಗಳೂರು, ೫೬೦ ೦೧೯
೨) ಅಮರವಾಣೀ, ಶ್ರೀ ರಂಗಮಹಾಗುರುಗಳ ಪ್ರವಚನಗಳ ಸಂಕಲನ, ವೇದಾಂಗಗಳು - ದರ್ಶನ - ಇತಿಹಾಸಪುರಾಣ, ಅಷ್ಟಾಂಗಯೋಗವಿಜ್ಞಾನಮಂದಿರಂ, ೯೫೭, ಶೇಷಾದ್ರಿ ಅಯ್ಯರ್ ರಸ್ತೆ, ಲಕ್ಷ್ಮೀಪುರಂ, ಮೈಸೂರು - ೪
೩) ಶ್ರೀ ದೇವಿ ಮಹತ್ಮೆಯ ಟಿಕಾ ಸಹಿತ ಗ್ರಂಥವು, ಶ್ರೀ ಬ್. ಕ. ಪಾಟೀಲ ಮಾಸ್ತರ ಬ್ಯಾಹಟ್ಟಿ, ಪಿ. ಸಿ. ಶಬಾದಿಮಠ ಬುಕ್, ಗದಗ, ಕರ್ನಾಟಕ.
೪) ನಂದಿಕೇಶ್ವರ ಕಾಶಿಕಾ