ಅಮೆರಿಕನ್ನಡ
Amerikannada
ಜನನಿಯಿ೦ದ ಪಾಠ ಕಲಿತ ಆ ಜನರೇ ಧನ್ಯರು
-ನಾಗಲಕ್ಷ್ಮೀ ಹರಿಹರೇಶ್ವರ
‘ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ!’ ಎ೦ದು ನ೦ಬಿ ಬ೦ದ ಸ೦ಸ್ಕೃತಿ ನಮ್ಮದು. ದೇವರನ್ನು ವಿವಿಧ ರೂಪದಲ್ಲಿ ನಾವು ನೋಡುತ್ತೇವೆ. ಆದರೆ, ಮೊದಲ ಸ್ಥಾನ ತಾಯಿಗೆ. ಮನೆಯೇ ಮೊದಲ ಪಾಠಶಾಲೆ -‘ಜನನಿಯೇ ಮೊದಲ ಗುರು. ಜನನಿಯಿ೦ದ ಪಾಠ ಕಲಿತ ಆ ಜನರೇ ಧನ್ಯರು!’- ಅಲ್ಲವೇ? ‘ನೂಲಿನ೦ತೆ ಸೀರೆ ತಾಯಿಯ೦ತೆ ಮಗಳು’ಎ೦ಬ ಗಾದೆಯ ಮಾತನ್ನು ನಾವು ಕೇಳಿದ್ದೇವೆ. ನಾವು ಏನು ಮಾಡುತ್ತೇವೆಯೋ ಮಕ್ಕಳು ಅದನ್ನೇ ಮಾಡುತ್ತಾರೆ.... ಹಾಗಾಗಿ ಮನೆಯ ಪರಿಸರ ಚೆನ್ನಾಗಿರಬೇಕು. ನಮ್ಮ ಮನೆಯಲ್ಲಿ ಸದಾಚಾರ ಇದ್ದರೆ ಮಕ್ಕಳು ಬೆಳೆದು ಸಮಾಜದಲ್ಲಿ ಗಣ್ಯ ನಾಗರೀಕರಾಗುತ್ತಾರೆ. ಡಾಕ್ಟರ್, ಇ೦ಜಿನಿಯರ್ ಆಗುವ ಮೊದಲು ದೇಶದ ಸತ್ಪ್ರಜೆ, ದೇಶದ ಉತ್ತಮ ಅಣ್ಣ, ಒಳ್ಳೆಯ ಅಕ್ಕ - ತಮ್ಮ - ತ೦ಗಿ - ಪತ್ನಿ - ಪತಿ ಆಗುವುದು ಮನೆಯ ಪರಿಸರದಿ೦ದ. ವ್ಯಕ್ತಿಯೋರ್ವನ ವಿಕಸನ ಮನೆಯ ಪರಿಸರದಿ೦ದ ಆಗುವ ಕಾರಣ ಮಕ್ಕಳೊ೦ದಿಗೆ ನಾವು ಹೆಚ್ಚು ಕಾಲವನ್ನು ಕಳೆಯಬೇಕು.
ನಮ್ಮ ಮಕ್ಕಳೊ೦ದಿಗೆ ನಾನು ಕಳೆದ ರಸನಿಮಿಷಗಳ ಬಗ್ಗೆ ಸ್ವಂತ ಅನುಭವದ ಒಂದೆರಡು ಸಂಗತಿಗಳನ್ನು ಹೇಳುತ್ತೇನೆ, ಕೇಳಿ: ನಾನು ಪ್ರತಿನಿತ್ಯ ನನ್ನ ಮಕ್ಕಳೊ೦ದಿಗೆ ೩೦ - ೪೫ ನಿಮಿಷಗಳಷ್ಟು ಕಳೆಯುತ್ತಿದ್ದೆ. ಮಕ್ಕಳು ಶಾಲೆಯಿ೦ದ ಮನೆಗೆ ಬ೦ದೊಡನೆ ಅವರಿಗೆ ತಿ೦ಡಿಯನ್ನು ಕೊಟ್ಟು “ಇವತ್ತು ಶಾಲೆಯಲ್ಲಿ ನೀನು ಏನು ಮಾಡಿದೆ? ಯಾವ ಪಾಠ ಇಷ್ಟವಾಯಿತು? ಯಾವ ಪಾಠ ಕಷ್ಟವಾಯಿತು? ಯಾವ ಟೀಚರ್, ಯಾವ ಮೇಸ್ಟ್ರು ಇಷ್ಟವಾದರು?”- ಎ೦ದು ಕೇಳುತ್ತಿದ್ದೆ. ಬರೀ ಬೇಡ ಬೇಡ.... ಅ೦ತ ಮಕ್ಕಳಿಗೆ ಹೇಳುವುದು ಬೇಡ. ನಾವು ಮಕ್ಕಳಿಗೆ ‘ಅದು ಬೇಡ, ಇದು ಬೇಡ, ಇದೂ ಬೇಡ’- ಎಂದು ಎಲ್ಲದಕ್ಕೂ ‘ಮಾಡಬೇಡ, ಮುಟ್ಟಬೇಡ, ನೋಡಬೇಡ’-ಎಂದು ಯಾವಾಗಲೂ ಹೇಳುತ್ತಿದ್ದರೆ, ‘ಅದೇ ಬೇಕು’- ಎನ್ನಿಸಿಬಿಡುತ್ತದೆ.... ಈ ರೀತಿಯ ಋಣಾತ್ಮಕ ಧೋರಣೆಯಿಂದ (ನೆಗೆಟಿವ್ ಅಪ್ರೋಚ್‌ನಿ೦ದ) ಮಕ್ಕಳಲ್ಲಿ ಕೆಟ್ಟ ಹಠ, ಛಲ ಹುಟ್ಟುತ್ತದೆ. ಅದರ ಬದಲು, “ನಮ್ಮ ಅಪ್ಪ ಅಮ್ಮ ಮತ್ತು ಹಿರಿಯರು ಹೇಳಿದ್ದನ್ನು ಮಾಡಬೇಕು”- ಅನ್ನುವ ಮನೋಭಾವನೆ ಮಕ್ಕಳಲ್ಲಿ ಮೂಡಬೇಕು, ಬೆಳೆಯಬೇಕು, ಉಳಿಯಬೇಕು. ಹೆತ್ತವರಿಗೂ ಸಹನೆ ಇರಬೇಕು; ಮಕ್ಕಳ ಕಷ್ಟ ಸುಖಗಳಲ್ಲಿ ನಾವು ಭಾಗಿಯಾಗಬೇಕು; ಅವರ ಆಸಕ್ತಿ-ನಿರಾಸಕ್ತಿಗಳನ್ನು ತಿಳಿದುಕೊ೦ಡು, ಒಳ್ಳೆಯದರ ಬಗ್ಗೆ ಆಸಕ್ತಿ ಕಡಿಮೆ ಇದ್ದ ಕಡೆ, ಅತ್ತ ಆಸಕ್ತಿಯೇ ಇಲ್ಲದ ಕಡೆ ಅವರನ್ನು ಒಲಿಸುವ ಪ್ರಯತ್ನವನ್ನು ನಾವು ಮಾಡಬೇಕು.
ನಮ್ಮ ಮನೆ, ನಮ್ಮ ನಡತೆ, ನಮ್ಮ ಪರಿಸರ, ನಮ್ಮ ಜ್ಞಾನ ಹಾಗೂ ನಮ್ಮ ಮಿಲನ- ಇವು ಬಹಳ ಮುಖ್ಯವಾದುದು. ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಬೇಕು. ಮನೆಯಲ್ಲಿ ಚೆನ್ನುಡಿಗಳೊ೦ದಿಗೆ ನಾವು ಮಾತನಾಡುತ್ತಿದ್ದರೆ ಮಕ್ಕಳು ಅದನ್ನೇ ಅನುಸರಿಸುತ್ತಾರೆ. ನಾವು ತಂದೆತಾಯಂದಿರು ಬಿರುನುಡಿಗಳಿಂದ ದಿನವೂ ಜಗಳವಾಡುತ್ತಿದ್ದರೆ, ಮಕ್ಕಳೂ ಅದನ್ನೇ ಅನುಸರಿಸುತ್ತಾರೆ. ನಮ್ಮ ಮಕ್ಕಳ ಎಲ್ಲಾ ಬಗೆಯ ಚಟುವಟಿಕೆಗಳಿಗೆ ಪೋಷಕರು ಪ್ರೋತ್ಸಾಹವನ್ನು ನೀಡಬೇಕು. ಅವರ ಆಟಪಾಠಗಳಲ್ಲಿ ಹೆತ್ತವರು ಭಾಗವಹಿಸಿ ಉತ್ತೇಜನವನ್ನು ನೀಡಬೇಕು. ಪೋಷಕರು ಅಧ್ಯಾಪಕರಾಗಿದ್ದರೆ, ಇನ್ನೊ೦ದು ರೀತಿಯ ಅನುಕೂಲವಿದೆ. ಮಕ್ಕಳ ದೈನ೦ದಿನ ಪ್ರಗತಿಯನ್ನು ತಿಳಿದುಕೊಳ್ಳಬಹುದು. ಮಕ್ಕಳಿಗೆ ಹಾಲು ಕೊಡಿ, ತಿ೦ಡಿ ಕೊಡಿ, ಊಟ ಕೊಡಿ; ಜೊತೆಗೆ ಪ್ರೀತಿಯನ್ನೂ ಕೊಡಿ!
ಓದುತ್ತಿರುವ ನಮ್ಮ ಮಕ್ಕಳು ದಿನದ ಹೆಚ್ಚಿನ ವೇಳೆಯನ್ನು ಶಾಲೆಯಲ್ಲಿ ಕಳೆಯುತ್ತಾರೆ. ಶಾಲೆಯ ಉಪಾಧ್ಯಾಯರನ್ನು ನಂಬಿ, ಅವರ ಜವಾಬ್ದಾರಿಗೆ ಓದುವ ಮಕ್ಕಳನ್ನು ನಾವು ಪೋಷಕರು ಬಿಟ್ಟು ಕೊಟ್ಟಿರುತ್ತೇವೆ. ಉಪಾಧ್ಯಾಯ ವೃತ್ತಿ ಬಹಳ ಜವಾಬ್ದಾರಿಯುತವಾದದ್ದು, ಅವರ ಹೊಣೆ ಅತೀವ ಗುರುತರವಾದುದು, ಕೂಡ. ಈ ಕಾರಣ, ಅವರ ಮಾತುಗಳನ್ನು ಪೋಷಕರು ಪರಿಗಣಿಸಬೇಕು. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಉಪಧ್ಯಾಯರೊ೦ದಿಗೆ ಆಗಾಗ್ಗೆ ವಿಚಾರ ವಿನಿಮಯವನ್ನು ಮಾಡುತ್ತಿರಬೇಕು. ಸಾಮೂಹಿಕ ವಿಚಾರ ವಿನಿಮಯ ಕಷ್ಟಕರ. ಪ್ರತಿಯೊಬ್ಬರಿಗೂ ಅವರದೇ ಆದ ಸಮಸ್ಯೆಗಳಿರುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೂ ಒ೦ದೇ ಪರಿಹಾರ ಇರುವುದಿಲ್ಲ. ಎಲ್ಲಕ್ಕೂ ಒಂದೇ ಸೂತ್ರ ಅನ್ವಯಿಸಲಾರದೇ ಹೋಗಬಹುದು. ಒಬ್ಬ ವಿದ್ಯಾರ್ಥಿ ಗಣಿತದಲ್ಲಿ ಹಿ೦ದುಳಿದಿದ್ದರೆ, ಮತ್ತೊಬ್ಬ ವಿಜ್ಞಾನದಲ್ಲಿ ಹಾಗಿರಬಹುದು. ಒಂದು ವಿಷಯದಲ್ಲಿ ಮಿಂಚುತ್ತಿರಬಹುದು, ಇನ್ನೊಂದರಲ್ಲಿ ಆಸಕ್ತಿ ಕುಂದಿರಬಹುದು. ಹಾಗಾಗಿ, “ಪೋಷಕರು ಉಪಾಧ್ಯಾಯರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ತಮ್ಮ ಮಕ್ಕಳ ಅಭಿವೃದ್ಧಿಯ ಬಗ್ಗೆ ಆಗಾಗ್ಗೆ ಚರ್ಚೆ ನಡೆಸಿದಾಗ ಮಾತ್ರ ಮಕ್ಕಳ ಸರ್ವಾಂಗೀಣ ಶ್ರೇಯೋಭಿವೃದ್ಧಿ ಸಾಧ್ಯ”- ಎಂಬ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ.
ಸಾಮಾನ್ಯವಾಗಿ, ಶೇಕಡಾ ೯೯ ರಷ್ಟು ಮಂದಿ ಉಪಾಧ್ಯಾಯರು ನಿಷ್ಪಕ್ಷಪಾತಿಗಳಾಗಿರುತ್ತಾರೆ. “ಈ ಮಗು ನೋಡಲು ಬಲು ಚೆನ್ನಾಗಿದೆ.... ಬ೦ದ ಪರಿಸರ ಚೆನ್ನಾಗಿದೆ... ಓದು ಬರಹ ಹೇಗೇ ಇರಲಿ, ನಡತೆ ಮಾತ್ರಾ ಚೆನ್ನಾಗಿದೆ”- ಎ೦ಬ ಕಾರಣಕ್ಕೇ ಯಾರೂ ವಿದ್ಯಾರ್ಥಿಗೆ ಹೆಚ್ಚು ಅ೦ಕಗಳನ್ನು ಕೊಡುವುದಿಲ್ಲ. ಪ್ರಗತಿ ವಿದ್ಯಾರ್ಥಿಯ ಕಾರ್ಯಸಾಧನೆಯನ್ನೇ ಅವಲಂಬಿಸಿರುತ್ತೆ. ನಿಜಕ್ಕೂ ಉಪಾಧ್ಯಾಯರ ವೃತ್ತಿ ಬಲು ಶ್ರೇಷ್ಠವಾದುದು, ಉದಾತ್ತವಾದದ್ದು, ಆದರೆ ಕಷ್ಟತರವಾದದ್ದೂ ಹೌದು. ಉಪಾಧ್ಯಾಯರುಗಳ ತೊ೦ದರೆ ಪೋಷಕರಿಗೆ ಗೊತ್ತಾಗುವುದಿಲ್ಲ. ಎಷ್ಟೋ ಬಾರಿ, ತೊಂದರೆಗೊಳಗಾದಾಗಾದ, ‘ತಮ್ಮ ಮಕ್ಕಳು ಹೇಳುತ್ತಿರುವುದೇ ಸತ್ಯ’- ಎ೦ದು ಮಕ್ಕಳ ನಿಲುವಿಗೇ ಪೋಷಕರು ಸಾಮಾನ್ಯವಾಗಿ ಅ೦ಟಿಕೊಳ್ಳುತ್ತಾರೆ. ಹೀಗಾಗಬಾರದು. ಪೋಷಕರು ಮತ್ತು ಉಪಾಧ್ಯಾಯರು ಆಗಾಗ್ಗೆ ವಿಚಾರ ವಿನಿಮಯ ಮಾಡಿಕೊ೦ಡು, ಮಕ್ಕಳು ನಿರ್ವಹಿಸುತ್ತಿರುವ ಕೆಲಸದ ಫಲಿತಾ೦ಶ, ಸಾಧನೆಯ ಮಟ್ಟ -ಇವುಗಳನ್ನು ಕಾಲ ಕಾಲಕ್ಕೆ ತಿಳಿದುಕೊಳ್ಳುತ್ತಿರಬೇಕು.
ಸಂಪರ್ಕ ಸಭೆಗಳು: ಎಲ್ಲಾ ಶಾಲೆಗಳಲ್ಲಿ ಈ ರೀತಿಯ ಪೋಷಕರ ಮತ್ತು ಉಪಾಧ್ಯಾಯರ ಸಮಾವೇಶ ನಿಯತಕಾಲಿಕವಾಗಿ ನಡೆಯುತ್ತಿದೆಯೇ? ಬಹುಶಃ ಇಲ್ಲ. ನಡೆದರೂ ವರ್ಷಕ್ಕೊಮ್ಮೆ ನಡೆದರೆ ಸಾಲದು, ಹೆಚ್ಚು ಹೆಚ್ಚಾಗಿ ನಡೆಯಬೇಕು, ಎಲ್ಲಾ ಶಾಲೆಗಳಲ್ಲೂ ಇದು ಅವಶ್ಯ ನಡೆಯಬೇಕು. ತಂದೆತಾಯಿಗಳು, ಪೋಷಕರು ತಪ್ಪದೆ ಭಾಗವಹಿಸಿ, ಕುಂದುಕೊರತೆಗಳನ್ನು ಚರ್ಚಿಸ ಬೇಕು; ಸಲಹೆ ಸೂಚನೆಗಳನ್ನು ಕೊಡಬೇಕು. ಈ ಸಂಪರ್ಕಸಭೆಗಳ ಮಹತ್ವವನ್ನು ಪೋಷಕರು ಮುಖ್ಯವಾಗಿ ಅರಿತುಕೊಳ್ಳಬೇಕು.
ಸಮಯ ಪ್ರಜ್ಞೆ: ಸಮಯ ಪ್ರಜ್ಞೆಯನ್ನು ಪೋಷಕರು ಮೊದಲು ಅಳವಡಿಸಿಕೊ೦ಡರೆ, ಮಕ್ಕಳು ಖಂಡಿತಾ ಅನುಸರಿಸುತ್ತಾರೆ, ಅದನ್ನು ಅಳವಡಿಸಿಕೊಳ್ಳುತ್ತಾರೆ. ಸಮಯ ಪ್ರಜ್ಞೆ ಬಹಳ ಮುಖ್ಯವಾದುದು. ಇನ್ನೊಂದು ಮಾತು: ಈಗಿನ ಮಕ್ಕಳು ಟಿ.ವಿ. ನೋಡುತ್ತಾ ತಿಂಡಿ ತಿನ್ನುತ್ತಾರೆ; ಟಿ.ವಿ. ನೋಡುತ್ತಾ ಊಟ ಮಾಡುತ್ತಾರೆ; ಟಿ.ವಿ. ನೋಡುತ್ತಾ ಹೋಮ್‌ವರ್ಕ್ ಮಾಡುತ್ತಾರೆ. ಎಷ್ಟೋ ಮಕ್ಕಳಿಗೆ ಅಪ್ಪ ಅಮ್ಮ ಅಕ್ಕ ಅಣ್ಣ ಅಲ್ಲ, ಟಿ.ವಿ. ಯೇ ‘ಬೇಬಿ ಸಿತ್ತರ್’! ಹಾಗಾದರೆ ಮಕ್ಕಳಿಗೆ ವಿದ್ಯೆ ತಲೆಗೆ ಹತ್ತುವುದಾದರೂ ಹೇಗೆ? ಟಿ. ವಿ. ನೋಡಬೇಕು.... ಭಾನುವಾರ ಮಕ್ಕಳ ಕಾರ್ಯಕ್ರಮಗಳಿರುತ್ತವೆ. ಮಕ್ಕಳೊ೦ದಿಗೆ ಭಾನುವಾರ ನೀವೂ ಟಿ.ವಿ. ನೋಡಿ. ಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊ೦ಡು ಹೋಗಿ. ವಾಚನಾಲಯಕ್ಕೆ ಕರೆದುಕೊ೦ಡು ಹೋಗಿ, ಪುಸ್ತಕಭಂಡಾರಕ್ಕೆ ಕರೆದುಕೊ೦ಡು ಹೋಗಿ..... ನಾಲ್ಕು ಸಲ ನೀವು ಈ ರೀತಿ ಮಾಡಿದಾಗ ಮಕ್ಕಳೇ ದೇವಸ್ಥಾನಕ್ಕೆ ಕರೆದೊಯ್ಯುವ೦ತೆ ನಿಮಗೆ ಹೇಳುತ್ತಾರೆ. ಮಕ್ಕಳೇ ಪುಸ್ತಕಭಂಡಾರಕ್ಕೆ ಕರೆದೊಯ್ಯುವ೦ತೆ ನಿಮಗೆ ಹೇಳುತ್ತಾರೆ. ಅದು ಬಿಟ್ಟು, ನೀವು ನಿಮ್ಮ ಪಾಡಿಗೆ, ಮಕ್ಕಳು ಅವರ ಪಾಡಿಗೆ- ಹಾಗಾದರೆ ಮಕ್ಕಳು ನಿಮ್ಮ ಮಾತನ್ನು ಯಾಕೆ ಕೇಳುತ್ತಾರೆ? ಹೇಳಿ, ಯಾಕೆ ಕೇಳಬೇಕು? ಮಕ್ಕಳಿಗೆ ಚಿಕ್ಕ೦ದಿನಿ೦ದಲೇ ಸದಾಚಾರಗಳನ್ನು ಕಲಿಸಬೇಕು. ಯಾಕೆ೦ದರೆ ಚಿಕ್ಕ೦ದಿನಲ್ಲಿ ಕಲಿತದ್ದು ಕೊನೆಯ ತನಕ ಇರುತ್ತದೆ. ಮಕ್ಕಳು ಮಣ್ಣಿನ ಮುದ್ದೆ ಇದ್ದ೦ತೆ. ಇತರರ ಕಷ್ಟ ಸುಖಗಳಿಗೆ ಸ್ಪ೦ದಿಸುವ ಗುಣವನ್ನು ಅಳವಡಿಸಿಕೊ೦ಡ ಸತ್‌ಪ್ರಜೆಯನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ, ಅಲ್ಲವೇ?
ಅಮೆರಿಕಾದಿಂದ ಬ೦ದ ನನ್ನ ಮಗಳನ್ನು ಮೊನ್ನೆ ಇಲ್ಲಿ, ಮೈಸೂರಿನಲ್ಲಿ ಚಾಮು೦ಡಿ ಬೆಟ್ಟಕ್ಕೆ ಕರೆದುಕೊ೦ಡು ಹೋಗಿದ್ದೆ. ದೇವರ ದರ್ಶನವನ್ನು ಮಾಡಿಕೊ೦ಡು ದೇವಸ್ಥಾನದ ಹೊರಗೆ ಬ೦ದ ನ೦ತರ ಮಗಳು ನನ್ನ ಬಳಿ ಬ೦ದು, “ಒ೦ದ್ನಿಮಿಷ ನಿ೦ತ್ಕೋ ಅಮ್ಮ, ನಾನು ನಿನ್ನ ಕಾಲು ಮುಟ್ಟಿ ನಮಸ್ಕಾರ ಮಾಡಬೇಕು”- ಎ೦ದು ಹೇಳಿದಳು. ನಾನು ಆಶ್ಚರ್ಯದಿ೦ದ, “ಯಾಕೆ?”- ಎ೦ದು ಕೇಳಿದೆ. ಅದೂ ಇಲ್ಲಿ ಇರುವ ಇಷ್ಟು ಜನರ ಎದುರಿನಲ್ಲಿ? ನನಗೆ ಅರ್ಥವಾಗಲಿಲ್ಲ. ಆಗ, ನನ್ನ ಮಗಳು ಉತ್ತರಿಸಿದಳು- “ಬಿಡಮ್ಮಾ, ಅಲ್ಲಿ ಒಳಗಿರುವುದು ಕಲ್ಲಿನ ವಿಗ್ರಹ. ನನ್ನ ಪಾಲಿಗೆ ನೀನೇ ಲಿವಿ೦ಗ್ ಗಾಡ್, ಜೀವಂತ ದೇವರು!”- ಎ೦ದು ಅವಳು ಹೇಳಿದಳು. ಇದನ್ನು ನೆನಪಿಸಿಕೊಂಡಾಗಲ್ಲೆಲ್ಲಾ ನಾನು ಭಾವುಕಳಾಗಿಬಿಡುತ್ತೇನೆ. ಇದಕ್ಕೆ ಕಾರಣ ಏನು? ನಾನು ನನ್ನ ಮಗಳೊ೦ದಿಗೆ ಕಳೆದ ಆತ್ಮೀಯವಾದ ಆ ರಸ ನಿಮಿಷಗಳು. ನನ್ನ ಮತ್ತು ಅವಳ ಹೃತ್ಪೂರ್ವಕ ಮಿಲನ!
ಇನ್ನೊಂದು ಘಟನೆಯನ್ನು ಕೇಳಿ: ನಾವು ಆಗ ವಿದೇಶದಲ್ಲಿದ್ದೆವು. ಒ೦ದು ದಿನ ಮಧ್ಯ ರಾತ್ರಿ ಹನ್ನೊ೦ದು ಮುವತ್ತಕ್ಕೆ, ದೂರದ ಊರಿನಲ್ಲಿದ್ದ ನನ್ನ ಇನ್ನೊಬ್ಬಳು ಮಗಳ ಫೋನು ಕರೆ ಬ೦ತು. ಏನೆ೦ದು ವಿಚಾರಿಸಿದೆ. “ನಾಳೆ ನೀನು ಹೇಗೂ ನಮ್ಮೂರಿಗೆ ಬರುತ್ತೀಯಲ್ಲ, ಹಾಗೆ ಬರುವಾಗ, ನಿನ್ನ ಹತ್ತಿರ ಇದೆಯಲ್ಲ, ಆ ಗಣೇಶನ ವಿಗ್ರಹವನ್ನು ತೆಗೆದುಕೊ೦ಡು ಬಾ”- ಎ೦ದು ಅವಳು ಹೇಳಿದಳು. ಚಕಿತಳಾದ ನಾನು ಯಾಕೆ೦ದು ವಿಚಾರಿಸಿದೆ; “ನನಗೊಬ್ಬ ಕ್ರಿಶ್ಚಿಯನ್ ಫ್ರೆ೦ಡ್ ಇದ್ದಾನೆ. ಬಹಳ ಒಳ್ಳೆಯವನು. ಅವನಿಗೆ ವಿಪರೀತ ಜ್ವರ. ಅವನು ಒಂದು ಮುಖ್ಯವಾದ ಪರೀಕ್ಷೆಯನ್ನ್ನ ಬರೆಯಬೇಕಾಗಿದೆ. ನೀನು ಹೇಳುತ್ತ ಇರುತ್ತೀಯಲ್ಲಾ- ಗಣೇಶ ವಿಘ್ನ ನಿವಾರಕ- ಅಂತ. ನನ್ನ ಬಳಿ ಗಣೇಶನ ವಿಗ್ರಹವಿಲ್ಲ. ನೀನು ತೆಗೆದುಕೊ೦ಡು ಬ೦ದರೆ ನಾನು ನನ್ನ ಫ್ರೆ೦ಡಿಗೆ ಅದನ್ನು ಕೊಟ್ಟು, ಅವನ ಜ್ವರ ಬೇಗ ಮಾಯವಾಗಿ, ಅವನಿಗೆ ಆರೋಗ್ಯ ದೊರಕುವಂತೆ ಪ್ರಾರ್ಥಿಸುತ್ತೇನೆ” -ಎ೦ದು ಅವಳು ಹೇಳಿದಳು. ಮುಗ್ಧಭಾವದಿಂದ ಆಡಿದ ಮಾತು ಅದು. ಆದರೆ, ಅದು ಒಂದು ನಂಬಿಕೆಯಿಂದ, ನೊಂದವರಿಗೆ ಏನಾದರೂ ಸಹಾಯ ಮಾಡುವ ಭಾವನೆಯಿಂದ ಆಡಿದ ಮಾತೂ ಸಹ ಹೌದು. ನೋಡಿ, ಇತರರ ಕಷ್ಟ ಸುಖಗಳಿಗೆ ಸ್ಪ೦ದಿಸುವ ಗುಣವನ್ನು ನಮ್ಮ ಮಕ್ಕಳು ಅಳವಡಿಸಿಕೊಳ್ಳುವ೦ತೆ ಅವರನ್ನು ನಾವು ಬೆಳೆಸಬೇಕಾಗಿದೆ. ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಅಥವಾ ಸಮಾಜ ಕ೦ಟಕರನ್ನಾಗಿ ರೂಪಿಸುವ ಕೆಲಸ ನಮ್ಮನ್ನೇ ಅವಲಂಬಿಸಿದೆ!
(ಶ್ರೀಮತಿ ನಾಗಲಕ್ಷ್ಮಿ ಹರಿಹರೇಶ್ವರ ಅವರು ಭಾರತದಲ್ಲಿ ಮತ್ತು ಅಮೆರಿಕಾದಲ್ಲಿ ಉಪಾಧ್ಯಾಯಿನಿ ಆಗಿದ್ದವರು, ಅಮೆರಿಕದಲ್ಲಿ ಕನ್ನಡ ಶಾಲೆ ನಡೆಸಿದವರು. ಇತ್ತೀಚೆಗೆ ನಡೆದ, ಮೈಸೂರಿನ ಶಾರದಾ ದೇವಿ ನಗರದ ಸುಪ್ರೀಮ್ ಕಾನ್ವೆ೦ಟ್‌ನ ಐದನೇ ವರ್ಷದ ವಿದ್ಯಾರ್ಥಿಗಳ ಪೋಷಕ-ಉಪಾಧ್ಯಾಯರ ಸಭೆಯಲ್ಲಿ ಪೋಷಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಇದು ಆ ಭಾಷಣದ ಬರಹದ ರೂಪ.)