ಅಮೆರಿಕನ್ನಡ
Amerikannada
ದೇಶಭಕ್ತಿ
ಪ್ರೊ. ಎಚ್.ಜಿ. ಸುಬ್ಬರಾವ್, ಮೈಸೂರು
ಎಲ್ಲೆಲ್ಲೊ ಅಂಡಲೆದು ಬಸವಳಿದು ಬೆಂಡಾಗಿ
ಸುಸ್ತಾಗಿ ಮನೆಕಡೆಗೆ ಬರುವಾಗ ಹಿಂತಿರುಗಿ
ಇದು ನನ್ನ ತಾಯ್ನಾಡು ನಾನು ಹುಟ್ಟಿದ ನೆಲವು
ಎಂದು ತುಡಿಯದ ಜೀವ ಬದುಕಿರಲು ಅಸದಳವು

ಅಂಥ ನಿರಭಿಮಾನಿ ಇದ್ದರವ ಜೀವನವ
ಎಚ್ಚರದಿ ಪರಿಕಿಸಲು ಆಗ ಅರಿವಾಗುವುದು
ಅವನ ಜೀವನ ವ್ಯರ್ಥ ಧನ ಕೀರ್ತಿ ವೈಭವವು
ಸರ್ವಸಂಪದವೆಲ್ಲ ನಿರ್ನಾಮ ಹೊಂದುವುದು.

ಯಾವ ಕವಿಗೂ ಅವನ ಗುಣಗಾನ ಬೇಕಿಲ್ಲ
ಸುತ್ತಮುತ್ತಲ ಜನರು ಬಹುಬೇಗ ಮರೆಯುವರು
ಹಸಿದವಗೆ ಉಣಬಡಿಸಿ ತಾನುಂಡು ನಲಿಯದವ
ಇದ್ದರೂ ಸತ್ತಂತೆ ಇದಕೆ ಸಂಶಯವಿಲ್ಲ.

ಕೂಡಿಟ್ಟು ಸಾಯುವುದು ಕೃಪಣ ಜೀವಿಯ ಕರ್ಮ
ಉಂಡುಟ್ಟು ಬದುಕುವುದು ಪುಣ್ಯಪುರುಷನ ಧರ್ಮ
ಮಣ್ಣಿನಿಂದಾದವನು ಮಣ್ಣಿಗೇ ಮರಳುವನು
ಅಶ್ರುತರ್ಪಣವಿರದೆ ಮಸಣಕ್ಕೆ ತೆರಳುವನು

ಸರ್ ವಾಲ್ಟರ್ ಸ್ಕಾಟ್ ಕವಿಯ The Lay of the Last Minstrel ಪದ್ಯದ ಭಾವಾನುವಾದ
ಪ್ರೊ. ಎಚ್.ಜಿ. ಸುಬ್ಬರಾವ್
‘ಇಂಚರ’, ನಂ. ಎ/೫, ಜೆ ಬ್ಲಾಕ್,
ರಮಣಮಹರ್ಷಿ ರಸ್ತೆ, ಕುವೆಂಪುನಗರ,
ಮೈಸೂರು-೫೭೦ ೦೨೩,
ಫೋನ್: ೦೮೨೧-೨೫೪೬೮೮೬