ಅಮೆರಿಕನ್ನಡ
Amerikannada
ನುಡಿಯೆಂಬ ಮುತ್ತಿನ ಹಾರ
ಡಾ. ಬಿ.ಬಿ. ರಾಜಪುರೋಹಿತ
‘ನುಡಿದರೆ ಮುತ್ತಿನ ಹಾರದಂತಿರಬೇಕು; ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು; ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು.’ ಎಂದು ಸುಮಾರು ಎಂಟು ನೂರು ವರ್ಷಗಳ ಹಿಂದೆಯೇ ಹೇಳಿದ ಬಸವಣ್ಣನವರ ಮಾತು ಇಂದಿಗೂ ಪ್ರಸ್ತುತವಾಗಿವೆ. ಮಾತಾಡಿದರೆ ಮುತ್ತು ಸುರಿಸಿದಂತೆ ಇರಬೇಕು; ಮಾತಿನಿಂದ ಮನೆಯ ದೀಪ ಬೆಳಗಿದಂತಿರಬೇಕು; ಮಾತು ಸ್ವಚ್ಛ ಮತ್ತು ಪಾರದರ್ಶಕವಾಗಿರಬೇಕು ಎಂಬ ಮಾತು ಈಗಲೂ ಆಗೀಗ ಕೇಳಿ ಬರುತ್ತಲೇ ಇರುತ್ತವೆ. ಎಂದ ಮೇಲೆ ನುಡಿಯೆಂಬುದಲಂಕರಣಂ ಎಂಬ ಮಾತಿನ ಹಿಂದೆ ಒಡವೆಯಂತೆ ಹೊರಗೆ ಹಾಕಿಕೊಂಡ ನುಡಿಯನ್ನು ತೆಗೆದು ಇಡಬಹುದು ಎಂಬ ಅರ್ಥವು ಒಮ್ಮೊಮ್ಮೆ ಅಪಾರ್ಥ ಕೊಡಬಹುದು. ಆದರೆ ಮಾನವನಿಗೆ ಬೇರೆ ಅಲಂಕರಣ ಸಾಧನಗಳು ಇರದಿದ್ದರೂ ನಡೆಯುತ್ತದೆ ಆದರೆ ನುಡಿ ಇರದಿದ್ದರೆ ನಡೆಯುವದಿಲ್ಲ. ಮಾತೆಂಬ ಶಕ್ತಿಯನ್ನು ದೇವರೇ ಕಸಿದುಕೊಂಡಿದ್ದರೆ ಉಪಾಯವಿಲ್ಲ. ಆದರೆ ಮಾತು ಬಲ್ಲವನಿಗೆ ಅದೇ ಹೊಟ್ಟೆಗೆ ಹಾಕುತ್ತದೆ. ಆದರೆ ಮಾತನ್ನು ಬುದ್ಧಿವಂತಿಕೆಯಿಂದ ಪ್ರಯೋಗಿಸಬೇಕು. ಇಲ್ಲವಾದರೆ ಅದೇ ಜಗಳ ತರುತ್ತದೆ. ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ನುಡಿ ತಿಳಿದು ಮಾತಾಡಬೇಕು ಎಂಬುದನ್ನು ಒತ್ತಿ ಹೇಳುತ್ತದೆ. ಬರಹ ಮಾತಿನ ಇನ್ನೊಂದು ರೂಪ. ಮಾತು ಮತ್ತು ಬರಹ ಈ ಎರಡನ್ನೂ ಬಲ್ಲವನು ಪಂಡಿತ ಎನಿಸಿಕೊಳ್ಳುತ್ತಾನೆ.
ನುಡಿಯ ಲಕ್ಷಣಗಳು:
ನುಡಿಗೆ ಆರು ಪ್ರಧಾನ ಲಕ್ಷಣಗಳಿವೆ ಎಂದು ಹೇಳಲಾಗುತ್ತದೆ:
೧. ನುಡಿಯಲ್ಲಿ ಬಳಕೆಯಾಗುವ ಧ್ವನಿ ಯೋಜನೆಗೂ ಆ ಯೋಜನೆ ನೀಡುವ ಅರ್ಥಕ್ಕೂ ಏನೂ ಸಂಬಂಧ ಇರುವದಿಲ್ಲ. ಕನ್ನಡದಲ್ಲಿ ಗುಬ್ಬಿ ಎಂದು ಅಂದಾಗ ಆಗುವ ‘ಒಂದು ಪಕ್ಷಿವಿಶೇಷ’ ಎಂಬ ಅರ್ಥ ಪ್ರತೀತಿ ಹಿಂದಿಯಲ್ಲಿ ಚಿಡಿಯಾ ಅಂದಾಗಲೂ ಇಂಗ್ಲೀಷಿನಲ್ಲಿ ಸ್ಪ್ಯಾರೋ ಅಂದಾಗಲೂ ಆಗುತ್ತದೆ. ಅಂದ ಮೇಲೆ ಆ ವಿಶಿಷ್ಟ ಪಕ್ಷಿಗೆ ಗುಬ್ಬಿ, ಚಿಡಿಯಾ ಸ್ಪ್ಯಾರೋ ಎಂದು ವಿಭಿನ್ನ ರೀತಿಯಲ್ಲಿ ಧ್ವನಿ ಸಂಯೋಜನೆಯುಳ್ಳ ಪದಗಳು ಆಯಾ ಭಾಷೆಯಲ್ಲಿ ಅರ್ಥ ಸೂಚಕಗಳು ಎಂದು ಹೇಳಬೇಕಾಗುತ್ತದೆ. ಅಂದ ಮೇಲೆ ಆಯಾ ಭಾಷೆಯಲ್ಲಿ ವಿಶಿಷ್ಟ ಧ್ವನಿಸಂಯೋಜನೆಗೂ ಆ ಸಂಯೋಜನೆ ನಿರೂಪಿಸುವ ಅರ್ಥಕ್ಕೂ ಸರ್ವತ್ರೀಕರಿಸಬಹುದಾದ ಸಂಬಂಧವಿರುವದಿಲ್ಲ ಎಂಬುದು ಸಿದ್ಧವಾಗುತ್ತದೆ. ಇನ್ನು ಢಂ, ಧಡ್ ಮೊದಲಾದ ಕೆಲವು ಅನುಕರಣವಾಚಿ ಶಬ್ದಗಳಿಗೆ ಎಲ್ಲ ಭಾಷೆಗಳಲ್ಲಿಯೂ ಒಂದೇ ಅರ್ಥವಿರುತ್ತದೆ ಎಂದು ಹೇಳಬಹುದಾದರೂ ಕೆಲವೊಂದು ಭಾವಗಳನ್ನು ವ್ಯಕ್ತಪಡಿಸಲು ಆಯಾ ಭಾಷೆಗೇ ವಿಶಿಷ್ಟವಾದ ಅನುಕರಣವಾಚಿ ಶಬ್ದಗಳೂ ಇರುತ್ತವೆ ಎಂಬುದನ್ನು ಗಮನಿಸಬೇಕು.

೨. ಪ್ರತಿಯೊಂದು ಭಾಷೆಯಲ್ಲಿ ಅರ್ಥವುಳ್ಳ ಶಬ್ದ ಸಂಕೇತ, ಅರ್ಥಹೀನ ಶಬ್ದ ಸಂಕೇತ ಎಂದು ಇದ್ದೇ ಇರುತ್ತವೆ. ಮಕ್ಕಳು ಆಟದಲ್ಲಿ ಅನೇಕ ಅರ್ಥವಿಲ್ಲದ ಸಂಕೇತಗಳನ್ನು ಸೃಷ್ಟಿ ಮಾಡುತ್ತಿರುತ್ತಾರೆ. ಒಮ್ಮೊಮ್ಮೆ ಒಬ್ಬರ ಅರ್ಥವುಳ್ಳ ಸಂಕೇತ ಇನ್ನೊಬ್ಬರಿಗೆ ಅರ್ಥಹೀನವಾಗಿಯೂ ತೋರಬಹುದು. ಅನೇಕ ಕಾರಣಗಳಿಂದ ಸ್ಪಷ್ಟವಾಗಿ ಕೇಳಿಸದೇ ಇರಬಹುದು, ಅಥವಾ ತಿಳಿಯದೇ ಇರಬಹುದು. ‘ಆಂ, ಏನಂದಿರಿ?’ ‘ಓ. ಹಾಗೋ! ನಾನು ಹೀಗೆಂದು ತಿಳಿದಿದ್ದೆ’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸುವ ಸನ್ನಿವೇಶಗಳು ಬರುತ್ತಲೇ ಇರುತ್ತವೆ. ಬರಹದಲ್ಲಿಯಂತೂ ದ್ವಂದ್ವಾರ್ಥ ಅಥವಾ ಶ್ಲೇಷಾರ್ಥ ಬರುವಂಥ ಅನೇಕ ಪದಪ್ರಯೋಗಗಳನ್ನು ನೋಡಬಹುದು.
೩. ಯಾವುದೇ ಒಂದು ನುಡಿಯಲ್ಲಿ ಅರ್ಥಪೂರ್ಣ ಶಬ್ದಗಳಲ್ಲಿ ಅಡಕವಾದ ಧ್ವನಿಗಳಿಗೆ ಸ್ವತಂತ್ರವಾದ ಅರ್ಥಗಳಿರುವದಿಲ್ಲ. ಕ-, ಏನೂ ಅರ್ಥವಿಲ್ಲ; ಕಮ-, ಏನೂ ಅರ್ಥವಿಲ್ಲ; ಕಮಲ, ಅರ್ಥ ಪೂರ್ತಿಯಾಗುತ್ತದೆ. ಭಾರತೀಯ ಶಬ್ದಾರ್ಥಶಾಸ್ತ್ರದಲ್ಲಿ ಪದವಾದಿಗಳ ಸಿದ್ಧಾಂತವೂ ಇದೇ ಆಗಿದೆ. ಅರ್ಥವಿಲ್ಲದ ಧ್ವನಿಗಳನ್ನು ಒಂದು ವಿಧದಲ್ಲಿ ಬಳಸಿ ಅವುಗಳಿಗೆ ಮಂತ್ರಶಕ್ತಿಯನ್ನು ತಂದುಕೊಡುವ ತಾಂತ್ರಿಕರನ್ನೂ ಇದೆ ರೀತಿಯಲ್ಲಿ ವಿವರಿಸಬಹುದು.
೪. ಆಡುನುಡಿಯೇ ಇರಲಿ, ಬರಹವೇ ಇರಲಿ ಅಲ್ಲಿ ಪ್ರಯೋಗವಾದ ಪದಗಳಿಗೆ ಅರ್ಥದ ವಿವಿಧ ಆಯಾಮಗಳು ಇರುತ್ತವೆ. ಈ ಆಯಾಮಗಳು ಪೂರ್ವಸಿದ್ಧವಾದವು ಇರಬಹುದು ಅಥವಾ ಬೇರೆ ಬೇರೆ ಸನ್ನಿವೇಶಗಳಿಂದ ಪಡೆದುಕೊಂಡವುಗಳಿರಬಹುದು. ಪೂರ್ವಸಿದ್ಧ ಆಯಾಮದ ಶಬ್ದಗಳು ಪ್ರತಿಯೊಂದು ಭಾಷೆಯಲ್ಲಿ ಇದ್ದೇ ಇರುತ್ತವೆ. ಅಲ್ಲದೇ ಕೆಲವೊಂದು ಶಬ್ದಗಳು ಹೊಸ ಹೊಸ ಆಯಾಮಗಳನ್ನು ಸೇರಿಸಿಕೊಳ್ಳುತ್ತ ಹೋಗುತ್ತವೆ. ಈ ಪ್ರಕ್ರಿಯೆ ಸುಪ್ರಸಿದ್ಧವಾದುದಾದುದರಿಂದ ಇವುಗಳಿಗೆ ಉದಾಹರಣೆಗಳನ್ನು ಕೊಡುವ ಅವಶ್ಯಕತೆಯೇ ಇಲ್ಲ. ಆದರೆ ಇಂದಿನ ಸನ್ನಿವೇಶಗಳಿಗಾಗಿ ಬೇರೆ ಭಾಷೆಗಳಿಂದ ಎರವಲು ಪಡೆದುಕೊಂಡ ಪದಗಳ ಬಗ್ಗೆ ಗಮನ ಸೆಳೆಯಬೇಕು. ಉದಾಹರಣೆಗೆ ಕಾಂಡೋಮ್ ಎಂಬ ಶಬ್ದ. ಇದು ಬಹುಶಃ ಜಗತ್ತಿನ ಅನೇಕ ಭಾಷೆಗಳಲ್ಲಿ ಬಳಕೆಯಾಗುವ ಶಬ್ದ. ಗರ್ಭಧಾರಣೆಯನ್ನು ತಪ್ಪಿಸುವದಕ್ಕಾಗಿ ಬಳಸುವ ಈ ಸಾಧನದ ಹೆಸರಿನ ಉತ್ಪತ್ತಿ ಯಾರಿಗೂ ಗೊತ್ತಿಲ್ಲ. ೧೮ನೆಯ ಶತಮಾನಕ್ಕಿಂತಲೂ ಹಿಂದೆ ಈ ಶಬ್ದದ ಪ್ರಯೋಗ ಇತ್ತೆಂದು ಇದರ ಇತಿಹಾಸವಿದೆ. ಇಂಗ್ಲಂಡಿನಲ್ಲಿ ಡಾ.ಕಾಂಡೋಂ ಎಂಬ ರಾಜನೊಬ್ಬನಿದ್ದ ಎಂಬ ಹೇಳಿಕೆ ಇದೆ. ಆದರೆ ಇವನು ಕಿಂಗ್ ಚಾರ್ಲ್ಸ್-೨ ಎಂಬವನೇ ಹೌದೋ ಅಲ್ಲವೋ ಎಂಬ ಬಗ್ಗೆ ವಾದಗಳಿವೆ. ಅಂತೂ ಕಾಂಡೋಂನಷ್ಟು ಪ್ರಸಿದ್ಧರಾದವರು ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ.
೫. ನುಡಿಯಲ್ಲಿ ಇದುವರೆಗೆ ಕೇಳದೇ ಇದ್ದ, ಪದಗಳ ಉತ್ಪಾದನೆಗೆ ಅವಕಾಶವಿರುತ್ತದೆ. ಹೀಗೆ ಉತ್ಪಾದಿಸಲಾದ ಪದಗಳ ಅರ್ಥ ಅದು ಪ್ರಯೋಗವಾದ ಸಂದರ್ಭದಲ್ಲಿಯೇ ಸ್ಪಷ್ಟವಾಗುತ್ತದೆ. ಈ ಉತ್ಪಾದಕತೆ ನುಡಿಯ ಅತ್ಯಂತ ವಿಶಿಷ್ಟ ಗುಣಧರ್ಮ. ಇಂಗ್ಲೀಷಿನ ಕೆಲವು ನಿಘಂಟುಗಳು ಯಾವ ಶಬ್ದ ಯಾವ ಕಾಲದಲ್ಲಿ ಹುಟ್ಟಿತು, ಅದರ ಅರ್ಥ ಬಳಕೆಯ ಪರಿಮಿತಿ ಹೇಗೆ ಹೇಗೆ ಮತ್ತು ಯಾವ ಯಾವ ಕಾಲಕ್ಕೆ ಎಷ್ಟೆಷ್ಟು ವಿಸ್ತಾರವಾಗುತ್ತ ಬಂದಿತು ಎಂಬುದನ್ನು ನಮೂದಿಸುತ್ತವೆ. ಉದಾಹರಣೆಗೆ ಫಂಕ್ ಮತ್ತು ವ್ಯಾಗ್ನಲ್ ಅವರ ಇಂಗ್ಲೀಷ್ ಐತಿಹಾಸಿಕ ಶಬ್ದಕೋಶವನ್ನು ನೋಡಬಹುದು. ಕನ್ನಡದಲ್ಲಿ ಈ ಕೆಲಸ ಅತ್ಯಲ್ಪ ಪ್ರಮಾಣದಲ್ಲಿ ಆಗಿದೆ. ಅಂತಹ ನಿಘಂಟುವೊಂದು ನಿರ್ಮಾಣವಾದರೆ ಭಾಷೆಯಲ್ಲಿ ಪ್ರಯೋಗವಾಗುವ ಪದಗಳ ಸಂಪೂರ್ಣ ಜಾತಕ ಸಿಗುತ್ತದೆ. ಅಲ್ಲಿಯ ವರೆಗೆ ಈ ಪ್ರಕ್ರಿಯೆಯನ್ನು ಲಕ್ಷಿಸಿ ಮುಂದುವರಿಯಬೇಕು ಅಷ್ಟೇ.
೬. ವ್ಯವಹಾರದಲ್ಲಿ ಕಣ್ಣಿಗೆ ಕಾಣುವ ಪದಾರ್ಥಗಳನ್ನು ವಿವರಿಸಲು ಸಾಧ್ಯವಾಗುತ್ತದೆ. ಅನೇಕ ಸಲ ಅವುಗಳ ವಿವರಣೆಗೆ ಭಾಷೆ ಕೂಡ ಬೇಕಾಗುವದಿಲ್ಲ. ‘ಕಂಡಿತವೇ ಖಂಡಿತವು’ ಎಂಬ ತತ್ತ್ವ ಕೆಲಸ ಮಾಡುತ್ತಿರುತ್ತದೆ. ಆದರೆ ಭಾಷೆಯಲ್ಲಿ ಕಾಣದ್ದನ್ನೂ ವಿವರಿಸುವ ಸೌಲಭ್ಯವಿದೆ. ಈ ಸೌಲಭ್ಯವಿರದಿದ್ದರೆ ಕಥೆ, ಕಾದಂಬರಿ, ಕಾವ್ಯ ಎಂಬ ಸಾಹಿತ್ಯ ಸೃಷ್ಟಿ ಸಾಧ್ಯವೇ ಆಗುತ್ತಿರಲಿಲ್ಲ. ಭಾಷೆಗೆ ಸ್ಥಾನಿಕತೆಯನ್ನು ಮೀರುವ ಶಕ್ತಿಯೂ ಇದೆ.
ನುಡಿಯ ಹುಟ್ಟು ಮತ್ತು ವಿಶ್ಲೇಷಣೆ:
ನುಡಿ ಎಂಬುದು ಎಂದು ಹುಟ್ಟಿಕೊಂಡಿತು ಮತ್ತು ಹೇಗೆ ರೂಪಗೊಂಡಿತು ಎಂದು ಹೇಳುವದು ಸೃಷ್ಟಿಯ ಮೂಲವನ್ನು ಹುಡುಕಿದಷ್ಟೇ ಜಟಿಲವಾದ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಉತ್ತರವನ್ನು ಹುಡುಕಲು ಭಾರತದಲ್ಲಿಯೂ ಪರದೇಶಗಳಲ್ಲಿಯೂ ಶತಮಾನಗಳಿಂದ ಸತತ ಪ್ರಯತ್ನಗಳು ನಡೆದೇ ಇವೆ. ಆದರೂ ಇದುವರೆಗೆ ಸಮರ್ಪಕವಾದ ಉತ್ತರ ಸಿಕ್ಕಿಲ್ಲ.
ಪ್ರೊ. ದಿನೇಶಚಂದ್ರ ಭಟ್ಟಾಚಾರ್ಯ ಅವರು ‘ನವ್ಯ ನ್ಯಾಯ’ ಸಿದ್ಧಾಂತವನ್ನು ಆಧರಿಸಿ ಮಂಡಿಸಿದ ಕೆಲವು ವಿಚಾರಗಳು ಗಮನಾರ್ಹವಾಗಿವೆ: ಭಾಷೆಯೆಂಬುದು ಮಾನವನು ತನ್ನ ವಿಚಾರಗಳನ್ನು ಹೇಳಲು ಸೃಷ್ಟಿಸಿಕೊಂಡ ಮಾಧ್ಯಮ. ಈ ಮಾಧ್ಯಮ ಮಾನವನ ಕಂಠದಿಂದ ಹೊರಡುವ ಧ್ವನಿಗಳನ್ನಷ್ಟೇ ಅಲ್ಲದೇ ನಗಾರಿ ಮೊದಲಾದ ವಾದ್ಯಧ್ವನಿಗಳನ್ನೂ ತಂತುವಾದ್ಯಗಳಿಂದ ಹೊರಡುವ ಧ್ವನಿಗಳನ್ನೂ ಒಳಗೊಳ್ಳುತ್ತದೆ. ಅಷ್ಟೇ ಅಲ್ಲದೇ ಲಿಪಿಯನ್ನಾಧರಿಸಿ ರಚಿತವಾದ ‘ಕಟ್-ಕಡ-ಕಟ್, ಕಡಕಡ-ಕಟ್’ ಮೊದಲಾದ ಮೋರ್ಸ್ ಕೋಡನ್ನು ಆಧರಿಸಿದ ಸಂಜ್ಞೆಗಳನ್ನೂ ಒಳಗೊಳ್ಳುತ್ತದೆ. ಅಭಿಪ್ರಾಯದ ಸಂವಹನಕ್ಕಾಗಿ ಬಳಕೆಯಾಗುವ ಎಲ್ಲ ಮಾಧ್ಯಮಗಳೂ ಭಾಷೆಯ ಅವತಾರಗಳೇ. ಮೂಕರು ಸಂಜ್ಞೆಗಳನ್ನು ಬಳಸಿ ತಮ್ಮತಮ್ಮೊಳಗೆ ಅಥವಾ ಆ ಸಂಜ್ಞೆಗಳು ಅರ್ಥವಾಗುವವರೊಡನೆ ನಡೆಸುವ ಸಂಭಾಷಣೆಯೂ ಭಾಷೆಯೇ. ಪ್ರಾಣಿಗಳು, ಪಕ್ಷಿಗಳು ತಮ್ಮದೇ ಆದ ಭಾವ ಸಂವಹನ ಮಾಧ್ಯಮವನ್ನು ರೂಪಿಸಿಕೊಂಡಿರುತ್ತವೆ. ಮಧುವಿನ ಶೋಧ ಮಾಡಿ ಗೂಡಿಗೆ ಬಂದ ಜೇನ್ನೊಣಗಳು ವಿವಿಧ ಆಕೃತಿಯಲ್ಲಿ ಹಾರಾಡಿ ತಮ್ಮ ಶೋಧದ ಫಲವನ್ನು ಇತರ ಜೇನ್ನೊಣಗಳಿಗೆ ತಿಳಿಸುವದೂ ಅವುಗಳ ಭಾಷೆಯೇ. ಹೀಗೆ ಭಾಷೆಯ ಆಯಾಮ ಬಹುವಿಸ್ತಾರವಾದುದು. ಆದರೆ ಮನುಷ್ಯ ರಚಿಸಿಕೊಂಡ ಭಾಷೆಯ ಸ್ವರೂಪ ಅತ್ಯಂತ ಪ್ರಭಾವಶಾಲಿಯೂ ಶಕ್ತಿಯುತವೂ ಆಗಿದೆ. ಅಲ್ಲದೇ ಲಿಪಿಯ ಮುಖಾಂತರ ಸಾವಿರಾರು ವರ್ಷಗಳ ವರೆಗೆ ನಿಲ್ಲಬಲ್ಲುದಾಗಿದೆ. ಕಾಲ ಕಳೆದಂತೆ ಭಾಷೆಯ ಸ್ವರೂಪ ಬದಲಾಗುತ್ತದೆ ಎಂಬುದೂ ನಿಜ. ಆದರೂ ಅದು ತನ್ನ ಸಂವಹನ ಶಕ್ತಿಯನ್ನು ಕಳೆದುಕೊಳ್ಳುವದಿಲ್ಲ.
ಭಾಷೆ ಮೊದಲೋ ಲಿಪಿ ಮೊದಲೋ ಎಂಬ ವಿಷಯವನ್ನು ಕುರಿತೂ ಚರ್ಚೆ ನಡೆದಿದೆ. ಸಾಮಾನ್ಯ ತಿಳುವಳಿಕೆಯ ಪ್ರಕಾರ ಭಾಷೆ ಮೊದಲು ಹುಟ್ಟಿತು; ಅನಂತರ ಅದಕ್ಕೆ ಲಿಪಿಯ ರೂಪ ಕೊಡಲಾಯಿತು ಎಂಬುದಿದೆ. ಆದರೆ ಫ್ರೆಂಚ್ ತತ್ತ್ವಜ್ಞಾನಿ ಡೆರಿಡಾ ತನ್ನ Of Grammatology (೧೯೬೭) ಎಂಬ ಪುಸ್ತಕದಲ್ಲಿ ಫರ್ಡಿನಾಂಡ್ ಡಿ. ಸಸ್ಸೂರ್ ಮತ್ತು ಲೆವಿ ಸ್ತ್ರಾಸ್ ಮೊದಲಾದವರ ಭಾಷೆಯ ಬಗೆಗಿನ ವಾದವನ್ನು ಖಂಡಿಸುತ್ತ ಈ ವಾದವನ್ನು ಪ್ರತಿಪಾದಿಸುತ್ತಾನೆ. ಫರ್ಡಿನಾಂಡ್ ಡಿ. ಸಸ್ಸೂರ್ ತನ್ನ Course in General Linguistics (೧೯೧೬) ಎಂಬ ಪುಸ್ತಕದಲ್ಲಿ ಹೇಳುವಂತೆ language and writing are two distinct systems of signs: the second exists for the sole purpose of representing the first ಅಂದರೆ ಭಾಷೆ ಮತ್ತು ಬರವಣಿಗೆಗಳು ಪ್ರತ್ಯೇಕ ವ್ಯವಸ್ಥೆಗಳು. ಬರವಣಿಗೆ ಭಾಷೆಯನ್ನು ಪ್ರತಿನಿಧಿಸುತ್ತದೆ ಎನ್ನುತಾನೆ. ಮುಂದುವರಿದು ಸಸ್ಸೂರನು Language has an oral tradition that is independent of writing, and it is this independence that makes a pure science of speech possible. ಎನ್ನುತ್ತಾನೆ. ಅಂದರೆ ಲಿಪಿಯಿಂದ ಸ್ವತಂತ್ರವಾದ ಭಾಷೆಯ ಮೌಖಿಕ ಪರಂಪರೆ ಇದೆ. ಇದರಿಂದಲೇ ಭಾಷೆಯ ಅಧ್ಯಯನ ಸಾಧ್ಯವಾಗುತ್ತದೆ ಎನ್ನುತ್ತಾನೆ. ಸಸ್ಸೂರನ ಅಭಿಪ್ರಾಯದಲ್ಲಿ ನುಡಿ ಮೊದಲು ಹುಟ್ಟಿ ಆಮೇಲೆ ಬರವಣಿಗೆ ಹುಟ್ಟಿರಬೇಕು ಎಂಬುದು ಸ್ಪಷ್ಟವಾಗುತ್ತದೆ. ಆದರೆ ಡೆರಿಡಾ ಈ ಅಭಿಪ್ರಾಯವನ್ನು ಒಪ್ಪುವದಿಲ್ಲ. ಬರವಣಿಗೆ ಮೊದಲು ಹುಟ್ಟಿ ಆಮೇಲೆ ಭಾಷೆ ಬಂದಿತು ಎನ್ನುತ್ತಾನೆ. ಅವನಂತೆ ಇನ್ನೂ ಕೆಲವು ಪಂಡಿತರು ಲಿಪಿ ಮೊದಲು ಹುಟ್ಟಿತು ಎಂದು ಹೇಳುತ್ತಾರೆ. ಆದರೆ ಈ ವಾದವನ್ನು ಒಪ್ಪುವ ವಿದ್ವಾಂಸರು ವಿರಳ, ಅಥವಾ ಇಲ್ಲವೆಂದೇ ಹೇಳಬೇಕು.
ಭಾರತದಲ್ಲಿ ನವ್ಯ ನ್ಯಾಯ ಸಿದ್ಧಾಂತವೂ ಆಡು ಭಾಷೆಯೇ ಮೊದಲು ಹುಟ್ಟಿತು ಎಂದು ಹೇಳುತ್ತದೆ. ಅನಂತರ ಅದನ್ನು ಬರೆಯುವ ಲಿಪಿ ಸಂಕೇತ ಭಾಷೆ ಹುಟ್ಟಿತು. ಆಡುಭಾಷೆಯ ಅಸ್ತಿತ್ವ ಆ ಕ್ಷಣದಲ್ಲಿ ಮಾತ್ರ ಗೋಚರ ವಾಗುತ್ತದೆ ಆದುದರಿಂದ ಭಾಷೆಯನ್ನು ಚಿರಂತನಗೊಳಿಸುವ ಯತ್ನದಲ್ಲಿ ಲಿಪಿ ಹುಟ್ಟುತ್ತದೆ. ಆಡು ಭಾಷೆಯಲ್ಲದ ಯಾವ ಭಾಷೆಗೂ ಲಿಪಿ ಹುಟ್ಟಲು ಸಾಧ್ಯವೇ ಇಲ್ಲ. ಆದುದರಿಂದ ನವ್ಯನ್ಯಾಯವು ಆಡುಭಾಷೆಯೇ ಮೂಲದ್ರವ್ಯ ಎಂದು ಹೇಳುವಲ್ಲಿ ತರ್ಕಬದ್ಧತೆ ಇದೆ. ಆಡುಭಾಷೆ ಧ್ವನಿಯ ಮೂಲಕ ವ್ಯಕ್ತವಾಗುತ್ತದೆ. ಆ ಧ್ವನಿಯ ಹಿಂದೆ ಆಡುವವನು(ಳು) ಸಂವೇದ್ಯವಾಗುತ್ತಾನೆ(ಳೆ).
ಇಂದು ಪ್ರಪಂಚದಲ್ಲಿ ಸುಮಾರು ೫೦೦೦ ಭಾಷೆಗಳಿವೆ ಎಂದು ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಅಮೇರಿಕಾದ ಒಂದು ವರದಿ ಹೇಳುತ್ತದೆ. ಅವುಗಳನ್ನು ಹತ್ತು ಪ್ರಮುಖ ಗುಂಪುಗಳಲ್ಲಿ ವಿಭಾಗಿಸಲಾಗುತ್ತದೆ. ಜ್ಞಾತಿ ಸಂಬಂಧವನ್ನು ಆಧರಿಸಿ ಆ ಗುಂಪುಗಳನ್ನು ಮಾಡಲಾಗಿದೆ. ಈ ಪಟ್ಟಿಯಲ್ಲಿ ಅಳಿವಿನ ಅಂಚಿನಲ್ಲಿ ಇರುವ ಭಾಷೆಗಳು ಸೇರಿಕೊಂಡಿವೆಯಾದರೂ ಈಗಾಗಲೇ ಅಳಿದು ಹೋದಂತಹ ಭಾಷೆಗಳು ಸೇರಿಲ್ಲ. ಅಳಿವಿನ ಅಂಚಿನಲ್ಲಿರುವ ಭಾಷೆಗಳ ಬಗೆಗೆ ತೀವ್ರ ಚರ್ಚೆ ನಡೆಯುತ್ತಿದೆ. ಅಲ್ಲದೇ ಈ ಭಾಷೆಗಳನ್ನು ಗುರುತಿಸುವದಕ್ಕಾಗಿ ಬಳಸಿದ ಮಾನದಂಡಗಳ ಬಗೆಗೂ ವಿದ್ವಾಂಸರಲ್ಲಿ ಅಸಮಾಧಾನವಿದೆ. ಆ ಚರ್ಚೆ ಇಲ್ಲಿ ಅಪ್ರಸ್ತುತ.
ಪ್ರಪಂಚದ ಭಾಷಾವರ್ಗಗಳು ಮತ್ತು ಅವು ಇರುವ ತಾಣಗಳು ಹಾಗೂ ವಿಶ್ವದಲ್ಲಿ ಅವುಗಳ ಪ್ರತಿಶತ ಸಾಮರ್ಥ್ಯ ಇಂತಿವೆ:
೧. ಇಂಡೋ-ಯುರೋಪಿಯನ್ ಭಾಷೆಗಳು (೪೬%) ಯುರೋಪ್, ನೈರುತ್ಯ ಮತ್ತು ದಕ್ಷಿಣ ಏಶಿಯಾ, ಉತ್ತರ ಮತ್ತು ದಕ್ಷಿಣ ಅಮೇರಿಕಾ ಹಾಗೂ ಓಸಿಯಾನಿಯಾ.
೨. ಸಿನೋ-ಟಿಬೇಟನ್ ಭಾಷೆಗಳು (೨೧%) ಪೂರ್ವ ಏಶಿಯಾ.
೩. ನಿಗೇರ್-ಕಾಂಗೋ ಭಾಷೆಗಳು (೬.೪%) ಸಬ್-ಸಹಾರನ್ ಆಫ್ರಿಕಾ.
೪. ಆಫ್ರೋ-ಏಶಿಯಾಟಿಕ್ ಭಾಷೆಗಳು (೬%) ಉತ್ತರ ಆಫ್ರಿಕಾ, ನೈರುತ್ಯ ಏಶಿಯಾ.
೫. ಆಸ್ಟ್ರೋನೇಶಿಯನ್ ಭಾಷೆಗಳು (೫.೯%) ಓಸಿಯಾನಿಯಾ, ಮಾದಾಗಾಸ್ಕರ್, ಆಗ್ನೇಯ ಏಶಿಯಾ.
೬.. ದ್ರವಿಡಿಯನ್ ಭಾಷೆಗಳು (೩.೭%) ದಕ್ಷಿಣ ಏಶಿಯಾ.
೭. ಆಲ್ಟೇಯಿಕ್ ಭಾಷೆಗಳು (೨.೩%) ಮಧ್ಯ ಮತ್ತು ಉತ್ತರ ಏಶಿಯಾ, ಅನಟೋಲಿಯಾ, ಸೈಬೇರಿಯಾ.
೮. ಆಸ್ಟ್ರೋ-ಏಸಿಯಾಟಿಕ್ ಭಾಷೆಗಳು (೧.೭%) ಆಗ್ನೇಯ ಏಶಿಯಾದ ಮಧ್ಯಭಾಗ.
೯. ಟೈ-ಕಡೈ ಭಾಷೆಗಳು (೧.೩%) ಆಗ್ನೇಯ ಏಶಿಯಾ.
೧೦. ಇತರ ಭಾಷಾವರ್ಗಗಳು (೩.೫%) ಪ್ರಪಂಚದ ವಿವಿಧೆಡೆ.
ಇವೆಲ್ಲ ನುಡಿಯೆಂಬ ಮುತ್ತಿನ ಹಾರಗಳೇ!

ನುಡಿಯ ಶಕ್ತಿ ಮತ್ತು ಸಾಮರ್ಥ್ಯ:
ನುಡಿಯ ಬಗೆಗೆ ಒಂದು ಭಾಷೆಯ ಪರಿಮಿತಿಯೊಳಗೇ ತಿಳಿದುಕೊಳ್ಳಬೇಕಾದ ಅಂಶಗಳು ಸಾಕಷ್ಟಿವೆ. ಭಾಷೆಯನ್ನು ಮಾನವ ತನ್ನ ಬಾಲ್ಯದಲ್ಲಿ ಕಲಿತುಕೊಳ್ಳುತ್ತಾನೆ. ಅನುಕರಣೆಯಿಂದ, ವಸ್ತುವಿಗೂ ಅದರ ಹೆಸರಿಗೂ ಸಂಬಂಧ ಕಲ್ಪಿಸಿಕೊಳ್ಳುತ್ತ ತನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾನೆ.
ಭಾಷೆಯ ಆಂತರಿಕ ವ್ಯವಸ್ಥೆ ಎಂಬುದು ಆ ಭಾಷೆಯನ್ನು ಆಡುವ ಜನರಲ್ಲಿ ಆನುವಂಶಿಕವಾಗಿ ಹರಿದು ಬರುತ್ತದೆ ಎಂದು ಅನೇಕ ವಿದ್ವಾಂಸರು ನಂಬುತ್ತಾರೆ. ಅಂಥವರಲ್ಲಿ ಸುಪ್ರಸಿದ್ಧ ಭಾಷಾತಜ್ಞನಾದ ನೋಅಮ್ ಚೋಮ್‌ಸ್ಕಿಯೂ ಒಬ್ಬ. ಚೋಮ್‌ಸ್ಕಿಯು ‘ಮಾನವಭಾಷೆಯ ರಚನೆ ಹೇಗಿರುತ್ತದೆ, ಯಾವ ನಿಯಮಗಳು ಅದನ್ನು ನಿಯಂತ್ರಿಸುತ್ತವೆ ಎಂಬುದನ್ನು ಮಗು ಅರಿತುಕೊಳ್ಳುತ್ತ ಬೆಳೆಯುತ್ತದೆ’ ಎನ್ನುತ್ತಾನೆ. ಅಂದರೆ ಯಾವುದೇ ‘ಒಂದು ವಿಶಿಷ್ಟ ಭಾಷೆ’ ಎಂದಲ್ಲದಿದ್ದರೂ ‘ಮಾನವನ ಭಾಷೆ’ ಎಂಬುದರ ಆಂತರಿಕ ರಚನೆ ಆನುವಂಶಿಕವಾಗಿಯೆ ಬರುತ್ತದೆ. ಎಂದು ಅವನ ಅಭಿಮತ. ಅದೇ ಮನುಷ್ಯನನ್ನು ಇತರ ಪ್ರಾಣಿಗಳಿಂದ ಬೇರೆಯಾಗಿಸುತ್ತದೆ ಎಂಬ ಅಭಿಪ್ರಾಯವನ್ನು ಚೋಮ್‌ಸ್ಕಿ ವಿವಿಧ ಸಂದರ್ಭಗಳಲ್ಲಿ ವಿವಿಧ ಮಾತುಗಳಲ್ಲಿ ಹೇಳಿದ್ದಾನೆ. ಏನಿದ್ದರೂ ಇದು ಇನ್ನೂ ಹೆಚ್ಚಿನ ಸಂಶೋಧನೆಯಿಂದ ವಿಶಾಲ ಭೂಮಿಕೆಯ ಮೇಲೆ ಸಿದ್ಧವಾಗಬೇಕು.
ನುಡಿಯ ಶಕ್ತಿ ಮತ್ತು ಸಾಮರ್ಥ್ಯಗಳನ್ನು ವಿಶ್ಲೇಷಿಸಿ ನೋಡುವಲ್ಲಿ ಸಾವಿರಾರು ವರ್ಷಗಳಿಂದ ಪ್ರಪಂಚದ ಎಲ್ಲ ಭಾಗಗಳಲ್ಲಿ ಅನೇಕ ಪ್ರಯತ್ನಗಳು ನಡೆದಿವೆ ಮತ್ತು ಇಂದಿಗೂ ನಡೆಯುತ್ತಲೇ ಇವೆ. ಆದರೂ ಯಾವ ಪ್ರಯತ್ನವೂ ಕೊನೆಯ ಮಾತಾಗಿ ನುಡಿಯನ್ನು ವಿವರಿಸಿಲ್ಲ. ಈ ವರೆಗಿನ ಎಲ್ಲ ವಿವರಣೆಗಳೂ ನುಡಿಯ ಬಗೆಗಿನ ಸಾಮಾನ್ಯ ತಿಳುವಳಿಕೆಯನ್ನು ಬಲಗೊಳಿಸುತ್ತವೆ ಎಂದೇ ಹೇಳಬೇಕು.
ಡಾ. ಬಿ.ಬಿ. ರಾಜಪುರೋಹಿತ
೭೧೬, ೧೬ನೇ ಮುಖ್ಯ ರಸ್ತೆ,
ಸರಸ್ವತೀಪುರಂ, ಮೈಸೂರು-೫೭೦ ೦೦೯
ಕರ್ನಾಟಕ
ಮೊ:೯೮೪೫೪ ೫೪೭೫೦