ಅಮೆರಿಕನ್ನಡ
Amerikannada
ನಾಲ್ಕು ಬಗೆಯ ಜನಗಳು
-ಶಿಕಾರಿಪುರ ಹರಿಹರೇಶ್ವರ
ಹಿಂದೆ ಒಬ್ಬ ಸಂತ ಇದ್ದ. ಯಾರೋ ಶಿಷ್ಯರು ಅವನನ್ನ ಕೇಳಿದರಂತೆ: ಗುರುಗಳೇ, ತಾನೆ ಗೂಡು ಕಟ್ಟಿಕೊಂಡು ವಾಸಮಾಡಬಹುದಾದ ಯಾವ ಹಕ್ಕಿಯೂ, ಬೇರೆ ಇನ್ನೊಂದು ಹಕ್ಕಿ ಕಟ್ಟಿದ ಗೂಡಿನೊಳಗೆ ಹೋಗಿ ವಾಸಿಸುವುದಿಲ್ಲ, ಅಲ್ಲವೇ? ಆದರೆ, ಈ ಜಗತ್ತಿನಲ್ಲಿ ಇರುವ ಕೆಲವು ಜನ ಹಾಗಲ್ಲವಲ್ಲ, ಏಕೆ? ಈ ಪ್ರಪಂಚದಲ್ಲಿ ಎಷ್ಟೊಂದು ಜನ ಇದ್ದಾರಲ್ಲ, ಅವರಲ್ಲಿ ಹೆಚ್ಚಿನ ತಿಳಿವಳಿಕೆ ಬೇಕು ಎನ್ನುವವರು, ಯಾವುದು ಯಾವುದೋ ಬೇರೆ ಬೇರೆ ಹಳೆಯ ಸವೆದ ಅಥವಾ ಯಾರೂ ನುಸುಳದ ಹೊಸ ಬಿಸಿ ಹಾದಿ ಬೀದಿ ದಾರಿ ಹೆದ್ದಾರಿಗಳಲ್ಲಿ ಹೋಗುತ್ತಾರಲ್ಲ, ಅದು ಯಾಕೆ?
ಆವಾಗ, ಆ ಸಂತ ಹೇಳುತ್ತಾನೆ: ನಿಮ್ಮ ಪ್ರಶ್ನೆಗೆ ಒಂದು ಕತೆಯ ರೂಪದಲ್ಲಿ ಉತ್ತರ ಹೇಳುತ್ತೇನೆ, ಕೇಳಿ. ಅಕ್ಷರಶಃ ನೇರವಾಗಿ ಅಲ್ಲದಿದ್ದರೂ, ಸ್ವಲ್ಪ ಹೆಚ್ಚು ಕಡಿಮೆ, ಜನರ ಸ್ವಭಾವ ಹೇಗೆ ಇದ್ದೀತು ಅನ್ನುವುದನ್ನ ತಿಳಿದುಕೊಳ್ಳಲಿಕ್ಕೆ ಇದು ಸಹಾಯ ಆಗಬಹುದು. ಸತ್ಯವನ್ನ ಪ್ರೀತಿಸುತ್ತ, ಅದನ್ನೇ ಹುಡುಕಿಕೊಂಡು ಹೋದವರು ಹೇಳುವ ಪುರಾಣದ ರೀತಿಯ, ಸಂಪ್ರದಾಯದ ಕತೆ ಇದು. ಆದರೂ ಯೋಚಿಸಿದಷ್ಟೂ ಹೆಚ್ಚು ಹೆಚ್ಚು ಅರ್ಥ ಸ್ಫುರಿಸಬಲ್ಲ ಕತೆ, ಕೇಳಿ:
“ಈ ಪ್ರಪಂಚದಲ್ಲಿ ನೀವು ನಿಂತ ನೀರಾಗ ಬೇಡಿ; ಹರಿವ ಹೊನಲಿನ ಹಾಗೆ ಸದಾ ಕಾಲ ಚಲಿಸುತ್ತಿರಿ. ಆ ರೀತಿ ನೀವು ಸಂಚರಿಸುತ್ತ ಇರುವುದಕ್ಕೆ ನಿಮಗೆ ಏನೇನು ಅನುಕೂಲಗಳು ಬೇಕು? ಹೇಳಿ” ಅಂತ.
ಆಗ, ತಮ್ಮ ತಮ್ಮಲ್ಲಿ ಮಾತಾಡಿಕೊಂಡು, ಆತ್ಮಗಳು ನಾಲ್ಕು ಗುಂಪುಗಳಾಗಿ ಅವನ ಬಳಿ ಬಂದವಂತೆ, ನಿಂತವಂತೆ, ಒಂದೊಂದಾಗಿ ನಿವೇದಿಸಿಕೊಂಡವಂತೆ:
ಮೊದಲನೆಯ ಗುಂಪು ಕೇಳಿತಂತೆ: ನಮಗೆ ಒಳ್ಳೆಯ ಕಾಲುಗಳು ಬೇಕು. ಅದೇ ತುಂಬಾ ಸುರಕ್ಷಿತವಾದದ್ದು. ನಾವು ಸ್ವಾವಲಂಬಿಗಳಾಗಿರಬೇಕು. ನಮಗೆ ಅವೇ ಸಾಕು. ಅದನ್ನ ಉಪಯೋಗಿಸಿಕೊಂಡು, ಎಲ್ಲಿಗೆ ಬೇಕೋ ಅಲ್ಲಿಗೆ ನಾವು ಹೋಗಿ ಬರುತ್ತೀವಿ.
ಎರಡನೆಯ ಗುಂಪು ಹೇಳಿತಂತೆ: ಸವಾರಿ ಮಾಡಲು ನಮಗೆ ಒಳ್ಳೆ ಒಳ್ಳೆಯ ಕುದುರೆಗಳನ್ನ ಕೊಡು. ನಾವು ಆಗ ನಡೆಯಬೇಕಾಗುವುದಿಲ್ಲ, ನಮ್ಮ ಕೆಲಸ, ನಮ್ಮ ಶ್ರಮ ಎಷ್ಟೋ ಕಡಿಮೆ ಆಗಿ ಹೋಗುತ್ತೆ. ಅವುಗಳ ಮೇಲೆ ಹೋಗಬೇಕೆಂದ ಕಡೆ ನಾವು ಬೇಗ ಬೇಗ ಹೋಗಿ ಬಂದು ಬಿಡಬಹುದು. ತುಂಬಾ ಅನುಕೂಲವೂ ಆಗುತ್ತೆ.
ಮೂರನೆಯ ಗುಂಪು ಕೋರಿತಂತೆ: ನಾವು ಗಾಳಿಮೇಲೆ ಸಂಚರಿಸುವ ಹಾಗೆ ಮಾಡು. ಆಗ, ನಮಗೆ ಏನೂ ಅಡೆ ತಡೆ ಇರುವುದಿಲ್ಲ, ಎಲ್ಲಿಗೆ ಬೇಕಾದರಲ್ಲಿಗೆ ವೇಗವಾಗಿ ಹೋಗಬಹುದು, ನಾವು ನುಗ್ಗ ಬಹುದು, ನುಸುಳ ಬಹುದು, ತೂರ ಬಹುದು, ಸೇರಬಹುದು.
ನಾಲ್ಕನೆಯ ಗುಂಪು ಬೇಡಿಕೊಂಡಿತಂತೆ: ನಮಗೆ ಬೆಳಕಿನ ಶಕ್ತಿ ಕೊಡು. ಆವಾಗ, ಎಲ್ಲಕ್ಕಿಂತ ಹೆಚ್ಚು ವೇಗವಾಗಿ ನಾವು ಹೋಗಲೂ ಬಹುದು, ಹೋಗಿ ಮುಟ್ಟಿದ್ದನ್ನ ಏನು, ಎತ್ತ ಅಂತ ತಿಳಿದುಕೊಳ್ಳಲೂ ಬಹುದು. ಆದ್ದರಿಂದ ಬೆಳಕಿನ ಜೊತೆಯೇ ಪ್ರವಹಿಸುವ ಹಾಗೆ ನಮ್ಮನ್ನು ಅನುಗೊಳಿಸು.
ನೋಡಿ, ಅವತ್ತಿನಿಂದ ಇವತ್ತಿನವರೆಗೂ ಆ ನಾಲ್ಕು ಬಗೆಯವರೇ ಈ ಜಗತ್ತಿನಲ್ಲಿ ಇರುವವರು. ಜನಗಳಲ್ಲಿ ಸಾಮಾನ್ಯವಾಗಿ ಆ ಗುಣಗಳನ್ನೇ ನಾವು ನೋಡುತ್ತಾ ಇರುವುದು. ಅವರಲ್ಲಿ ಈ ಗುಣಗಳ ಪ್ರಮಾಣ ಹೆಚ್ಚು ಕಡಿಮೆ ಇರಬಹುದು; ಇದೊಂದು ಚೂರು, ಅದೊಂದು ಚೂರು ಅಂತ ಮಿಶ್ರಣವೂ ಇಲ್ಲಿ ಅಲ್ಲಿ ಆಗಿರಬಹುದು. ಒಬ್ಬರಲ್ಲೇ ಕೆಲವು ಸಮಯ ಆ ಗುಣ, ಇನ್ನು ಕೆಲವು ಸಲ ಈ ಗುಣ ಎದ್ದು ಮೆರೆಯಬಹುದು. ಅಂತೂ ಒಟ್ಟಾರೆ, ಈ ನಾಲ್ಕೇ ತರಹ ಗುಣಗಳನ್ನ ಎಲ್ಲೆಲ್ಲೂ ನಾವು ನೋಡಬಹುದು.
ಪಾದಚಾರಿಗಳು ಇದ್ದಾರಲ್ಲ, ಪಾಪ, ಅವರು ಜಾಗ ಮತ್ತು ವೇಗದ ಮಿತಿಯೊಳಗೆ ಮಾತ್ರ ಓಡಾಡಬಲ್ಲರು. ಹಿಂದಿನವರು ಯಾರೋ ಹಾಕಿಕೊಟ್ಟ ಹಾದಿಯಲ್ಲಿ ನಡೆಯಬಲ್ಲ, ಹೋಗಬಲ್ಲ, ಸಾಗಬಲ್ಲ ಸಾಮರ್ಥ್ಯವುಳ್ಳವರು. ಇವರು ‘ಜೈ’ಕಾರಿಗಳು, ಅನುಯಾಯಿಗಳು, ಅನುಸರಣ ಇಲ್ಲವೇ ಅನುಕರಣ ಮಾಡುವಷ್ಟಿನವರು.
ಕುದುರೆ ಸವಾರರಿದ್ದಾರಲ್ಲ, ಇವರಿಗೆ ಈಗಾಗಲೇ ಬಂದ, ಹಿಂದಿನವರು ಬರೆದಿಟ್ಟ ಗ್ರಂಥಗಳ, ಶಾಸ್ತ್ರ ಸಾಹಿತ್ಯದ ಊರುಗೋಲು ಬೇಕೇ ಬೇಕು. ಬೇರೆಯವರ ಅನುಭವದ ಬೆಂಬಲ ಅವಶ್ಯ ಬೇಕು. ಅಜ್ಜನ ಹೆಗಲೇರಿಯೇ ಇಂಥ ಮೊಮ್ಮಕ್ಕಳ ಸಂಚಾರ. ಪೂರ್ವಸೂರಿಗಳ ಜ್ಞಾನಭಂಡಾರವನ್ನ ನಂಬಿ, ಅದರ ತಳಪಾಯದ ಮೇಲೆ ತಮ್ಮ ಕಮಾನು ಕಟ್ಟಡ ಉಪ್ಪರಿಗೆ ಗೋಪುರಗಳನ್ನ ಕಟ್ಟುವ ಹುನ್ನಾರ ಇವರದು. ಬುನಾದಿಯ ಭದ್ರತೆಯನ್ನು ಕಾಪಾಡಿಕೊಳ್ಳುವದೂ ಇವರ ಹೊಣೆಯೇ. ಏಕೆಂದರೆ, ಅಡಿಗಲ್ಲೇನಾದರೂ ಕೊಂಚ ಅಲ್ಲಾಡಿತೋ, ಅಲ್ಲಿ ಬಿರುಕು ತಲೆದೋರಿತೋ, ಕುಸಿಯಿತು ಇವರ ದಂತಗೋಪುರ.
ಇನ್ನು ಗಾಳಿಯಂತೆ ಮುನ್ನುಗ್ಗುವವರು ಪ್ರಚಾರಪ್ರಿಯರು. ಇಷ್ಟೋ ಅಷ್ಟೋ ತಿಳಿದುಕೊಂಡೊಡನೆ, ‘ತಿಳಿದುಹೋಯಿತು’, ‘ತಿಳಿದುಕೊಂಡೆ’- ಎಂದು ತಿಳಿದುದೆಲ್ಲವನ್ನು ಬೇಗ ಬೇಗ ಎಲ್ಲ ಕಡೆ ಹರಡಿ ಬಿಡಬೇಕೆಂಬ ಚಪಲ, ತವಕ, ಕಾತರ ಇವರದು. ಕಂಪು ಸೆಳೆದ ಕಂಡ ಕಂಡ ಹೂವುಗಳತ್ತ ಹಾರಿ, ಮಕರಂದವನ್ನ ಹೀರಿ, ತೂರಾಡುವ, ಗುಂಜಾರವದ ದುಂಬಿಯ ಪ್ರವೃತ್ತಿಯವರು ಇವರು. ಅಲ್ಲಲ್ಲಿ ಜೇನುಗೂಡುಗಳನ್ನೂ ಕಟ್ಟಬಲ್ಲವರು.
ಬೆಳಕನ್ನ ಬಯಸಿ, ಅರಸಿ ಹೊರಟವರು ಮಿಕ್ಕ ಎಲ್ಲರಿಗಿಂತ ಭಿನ್ನರು, ಅಸಾಮಾನ್ಯರು. ಇವರು ಎಲ್ಲ ತಾವೇ ತಿಳಿದುಕೊಳ್ಳಬೇಕೆಂಬ, ಸ್ವಂತ ಅನುಭವಕ್ಕೇ ಹಾತೊರೆಯುವ ಹಂಬಲಿಗರು. ಈ ಆನೆಗಳು ಹಿಡಿದಿದ್ದೇ ಹಾದಿ, ನಡೆದಿದ್ದೇ ದಾರಿ, ಅದೇ ಮುಂದೆ ಆದೀತು ಹೆದ್ದಾರಿ. ಇವರು ತೀಕ್ಷ್ಣಪ್ರಜ್ಞೆಯುಳ್ಳವರು, ಇಂದ್ರಿಯಾತೀತ ಕಾಣ್ಕೆಯಲ್ಲಿ ಮುಳುಗೇಳುವ ಅನುಭಾವಿಗಳು.
ಅಧ್ಯಯನಶೀಲತೆಯ ದೃಷ್ಟಿಯಿಂದ ನೋಡಿದಾಗ, ಮೊದಲ ಸಮೂಹದವರು ಪೂಜೆ ಆರಾಧನೆ ಆಚರಣೆ ವಿಧಿ ನಿಷೇಧ-ಗಳಿಗೇ ಆದ್ಯತೆ ಕೊಡುವ, ಸುಲಭವಾಗಿ ಆಕರ್ಷಿಸುವ ಜಾತಿ ಮತ ಪಥ ಪಂಥ ಸಮುದಾಯಗಳ ಕಟ್ಟಾ ಸಾಂಪ್ರದಾಯಿಕರು. ಪ್ರಪತ್ತಿಯೇ ಆಪತ್ತುಗಳನ್ನು ಎದುರಿಸುವ ಶಕ್ತಿ ಎಂದುಕೊಳ್ಳುವವರು. ನಾರದ ಭಕ್ತಿಸೂತ್ರಗಳು ಇಂಥವರ ಜೀವನ ಗಾಥೆ. ಭಕ್ತಿಯೊಂದೇ ಸಾಕು ಮುಕ್ತಿಗೆ- ಹಾದಿ ಹಿಡಿದವರು, ನಡೆವವರು.
ಎರಡನೆಯ ಪಂಗಡದವರು, ತಾವು ನಂಬಿದ ನೆಲೆಗಳನ್ನ ದೃಢವಾಗಿ ಅಪ್ಪಿಕೊಂಡಿರುವವರು, ಅದೇ ‘ಎಲ್ಲ ಕಾಲಕ್ಕೂ ಸರಿ’ ಎಂದುಕೊಂಡಿರುವವರು, ಹಿಡಿದುದನ್ನ ಬಿಡದೆ ಮುನ್ನಡೆವವರು. ಆ ಚೌಕಟ್ಟಿನಲ್ಲೇ ಕೊರಡನ್ನು ಕೊನರಿಸಲು, ಬರಡನ್ನು ಹಯನಿಸಲು, ನಂಜನ್ನು ಅಮೃತವಾಗಿಸಲು ಬಯಸುವವರು. ಹಳೇ ಬೇರು ಹೊಸ ಚಿಗುರನ್ನ ಸಮನ್ವಯಗೊಳಿಸುವವರು, ತಮ್ಮ ನಂಬಿಕೆಯಲ್ಲೇ ದೈವವನ್ನು ಕಾಣುವವರು. ಯಾವುದು ಭಕ್ತಿ, ಹೇಗೆ ಭಕ್ತಿ? ಜ್ಞಾನ ಮೇಲೋ, ಭಕ್ತಿಮೇಲೋ- ಎಂದೆಲ್ಲ ಭಕ್ತಿಯನ್ನು ವಿಶ್ಲೇಷಿಸುವ ಶಾಂಡಿಲ್ಯ ಭಕ್ತಿಸೂತ್ರಗಳು ಇವರ ಮೆಚ್ಚಿನ ಕುಚ್ಚುಗಳು.
ಮೂರನೆಯ ವೃಂದದವರು ಒಂದುಗೂಡಿಸುವ ಮಂದಿಗಳು. ಇಲ್ಲಿಂದ ಅಲ್ಲಿಂದ ಎಲ್ಲೆಡೆಯಿಂದ ತಂಗಾಳಿ ತಂದ, ಬಂದ, ಒಳ್ಳೆಯದೆಲ್ಲವನ್ನ ಆಯ್ದು ತಯಾರಿಸಿದ, ಕಾಲಕ್ಕೆ ತಕ್ಕ ಹೊಸತಾದ ರಸಭರಿತ ದ್ರಾಕ್ಷಾಸವಕ್ಕೊಂದು ಹೊಸ ರೂಪ, ಹೊಸ ಹೆಸರು ಇಡುವವರು, ಹೊಸಪಾತ್ರೆಯಲ್ಲಿರಿಸಿ ತಮ್ಮದಾಗಿಸಿ ಕೊಳ್ಳುವವರು. ಸರ್ವೋಪನಿಷತ್ಸಾರ ಗೀತಾಮೃತಕ್ಕೆ ಹಾತೊರೆಯುವವರು, ಈ ಬುದ್ಧಿಜೀವಿಗಳು ಜ್ಞಾನಪಿಪಾಸುಗಳು, ಜಿಜ್ಞಾಸೆಯಲ್ಲೇ ಸಂತೋಷ ಪಡುವವರು, ಆದರೆ ಅತೃಪ್ತರು.
ನಾಲ್ಕನೆಯ ಗುಂಪಿನವರು ಚಿಂತಕರು, ಶರಣರು, ಜ್ಞಾನಿಗಳು, ಯೋಗಿಗಳು, ಸೂಫಿಗಳು. ತಮ್ಮ ಮಹಾಪ್ರಸ್ಥಾನದ ಕೊನೆಯ ಹಂತದಲ್ಲಿ ಆಸೆಯನ್ನ ಸುಟ್ಟವರು, ‘ಬೇಕ’ನ್ನೇ ಬಿಟ್ಟವರು, ಆ ದಡವ ಮುಟ್ಟಿದವರು, ಸತ್ಯವನ್ನ ಕಂಡವರು, ಕುಂದಿಲ್ಲದ ಪರಮಾನಂದ ಹೊಂದಿದವರು.
ಮೊದಲನೆಯವರು ‘ಇದೇ ತಕ್ಕ ವಿಧಾನ’ ಎಂದುಕೊಂಡ ಆಚರಣೆಗಳ ಆಟದಲ್ಲೇ ಆಸಕ್ತರು; ಎರಡನೆಯವರು ಸ್ವತಃಸಿದ್ಧ ಪ್ರಮಾಣ ಗ್ರಂಥ, ಉಪದೇಶಾವಳಿಗಳ ಸೂಕ್ತಿ ಆದೇಶ ಅನುಶಾಸನಗಳಲ್ಲೇ ಅನುರಕ್ತರು. ಮೂರನೆ ಯವರು ಈಗಿರುವುದರಿಂದ ಇನ್ನೊಂದಕ್ಕೆ ಜಿಗಿಯುತ್ತ, ಜಾರುತ್ತ, ಒಳ್ಳೆಯದೆನಿಸಿ ಕೊಂಡ ಎಲ್ಲದುದರಲ್ಲಿ ಇದ್ದೂ ಇಲ್ಲದಂತಿದ್ದು, ಮಗ್ನರಾಗಿರುವವರು, ಕೊನೆಯವರೇ ಸತ್ಯಾನ್ವೇಷಿಗಳು, ‘ಅವನ’ನ್ನು ಸಾಕ್ಷಾತ್ಕರಿಸಿ ಕೊಳ್ಳುವವರು, ಪರಮಾನಂದದಲ್ಲಿ ಲಗ್ನವಾಗುವವರು, ಯೋಗಿಗಳು, ಸೂಫಿಗಳು. ಪಲ್ಲಕ್ಕಿಯನ್ನು ಹೊರುವವರು, ಪಲ್ಲಕ್ಕಿಯನ್ನು ಹತ್ತಿದವರು, ಪಲ್ಲಕ್ಕಿಯನ್ನು ಕೆತ್ತಿ ಜೋಡಿಸಿ ಕೂಡಿಸಿ ನಿರ್ಮಿಸಿದವರು, ತಾವೇ ಪಲ್ಲಕ್ಕಿಯಾಗಿ ಬಿಟ್ಟವರು- ಹೀಗೆ ನಾಲ್ಕು ಬಗೆಯವರು. ಇವರನ್ನ ಹೇಗೆ ಗುರುತಿಸುವುದು? ಬಹು ಸುಲಭ; ಅವರವರು ಬಳಸುವ, ಉಪಯೋಗಿಸುವ, ಅವಲಂಬಿಸುವ ಸಾಧನ ಉಪಕರಣವೇ ಅವರ ಸಂಚರಣ ಸಾಮರ್ಥ್ಯಗಳ ಅಳತೆಗೋಲು, ಸಿದ್ಧಿಮಾಪಕ.