ಅಮೆರಿಕನ್ನಡ
Amerikannada
ಸಂತೋಷಕ್ಕೆ ಸರಳ ಮಾರ್ಗ
-ಜಿ.ಆರ್. ವಿದ್ಯಾರಣ್ಯ
ನವಜಾತ ಶಿಶುಗಳು ನಿದ್ದೆಯಲ್ಲಿ ಮುಗುಳ್ನಗುತ್ತಿರುವುದನ್ನು ನೀವು ಕಂಡಿದ್ದೀರಾ? ಇದು ಗಗನ ಸಖಿಯರು ನಿಮ್ಮನ್ನು ವಿಮಾನದಿಂದ ಬೀಳ್ಕೊಡುವಾಗ ನೀಡುವ ಮುಗುಳ್ನಗೆಯಲ್ಲ; ಸಂಪೂರ್ಣ ಸಂತೃಪ್ತಿಯ ಮತ್ತು ಆನಂದದ ಅಭಿವ್ಯಕ್ತತೆ. ಇಂತಹ ಆನಂದ ಸಹಜವಾಗಿ ಕೇವಲ ಒಳಗಿನಿಂದ ಬಂದರೆ ಮಾತ್ರ ನೀವು ಅದನ್ನು ಅನುಭವಿಸಬಹುದೇ ಹೊರತು ನೀವು ಎಷ್ಟೇ ಒಳ್ಳೆಯ ನಟ-ನಟಿಯರಾಗಿದ್ದರೂ ಸಹ ಇದನ್ನು ನಿಮ್ಮ ಮುಖಾರವಿಂದದಲ್ಲಿ ಅಭಿನಯಿಸಿ ತೋರಿಸಲು ಸಾಧ್ಯವಿಲ್ಲ. ಇನ್ನೂ ಹುಟ್ಟುವ ಮುಂಚೆ, ತಾಯಿಯ ಗರ್ಭದಲ್ಲಿರುವ ಮಕ್ಕಳು ಸಹ ಈ ರೀತಿ ಸಂತೋಷವಾಗಿರುವುದನ್ನು ವೈದ್ಯಕೀಯ ತಂತ್ರಜ್ಞರು ಸೆರೆಹಿಡಿದಿದ್ದಾರೆ. ಇದಕ್ಕೆ ಕಾರಣವೆಂದರೆ ‘ಆನಂದ’ ನಮ್ಮ ಆತ್ಮದ ಪ್ರಥಮ ಸಹಜ ಗುಣ. ಹಾಗಾದರೆ ನಾನೇಕೆ ಸಂತೋಷವಾಗಿಲ್ಲ, ನನ್ನ ಜೀವನ ಏಕೆ ಕೇವಲ ಅಸಂತೋಷ ಮತ್ತು ಅತೃಪ್ತಿಯಲ್ಲಿ ಕಳೆಯುತ್ತಿದೆ ಎಂದು ನೀವು ಕೇಳಬಹುದು. ಅಸಂತೋಷ ಮತ್ತು ಅತೃಪ್ತಿಯಿಂದ ಬದುಕುವುದನ್ನು ಕಲಿತು ಅದನ್ನು ಜೀವನದಲ್ಲಿ ನೀವು ಅಳವಡಿಸಿಕೊಂಡಿರುವುದೇ ಅದಕ್ಕೆ ಕಾರಣ. ನಿಮ್ಮ ಮಾರುದ್ದದ ಪಟ್ಟಿಯಲ್ಲಿರುವ ಈಡೇರದ ಆಸೆ-ಆಕಾಂಕ್ಷೆಗಳು, ಭಾವೋದ್ವೇಗದ ಸಂಬಂಧಗಳು ನಿಮ್ಮ ಇಚ್ಛಾನುಸಾರ ನಡೆಯದೆ ತಮ್ಮದೇ ಹಾದಿಯಲ್ಲಿ ಸಾಗುತ್ತಿರುವುದು, ಇನ್ನ್ಯಾರೋ ನಿಮಗಾಗಿ ಹಾಕಿರುವ ಹಣದ, ಕೆಲಸದ ಮತ್ತು ಕಾಲಮಿತಿಗಳ ಒತ್ತಡ ಇತ್ಯಾದಿಗಳು ನಿಮ್ಮನ್ನು ಅತೃಪ್ತಿ ಮತ್ತು ಅಸಂತೋಷದತ್ತ ದೂಡುತ್ತಿವೆ. ಕಾರಣಗಳನ್ನು ನೀವು ಅರಿತು ಅವನ್ನು ಬಗೆಹರಿಸಲು ಪ್ರಯತ್ನಿಸಿದಷ್ಟೂ ಸಮಸ್ಯೆ ಇನ್ನಷ್ಟು ಜಟಿಲಗೊಳ್ಳುತ್ತಿರುವಂತೆ, ಜೀವನವೇ ಕೈ ತಪ್ಪುತ್ತಿರುವಂತೆ ನಿಮಗೆ ಅನಿಸುತ್ತಿರುತ್ತದೆ.
ನಂದ ಒಂದು ಮಾನಸಿಕ ಸ್ಥಿತಿ. ಇದು ದೈಹಿಕ ಸ್ಥಿತಿಯೂ ಆಗಿರಲೇಬೇಕಿಲ್ಲ. ದೈಹಿಕವಾಗಿ ಅನೇಕ ತೊಂದರೆಗಳನ್ನು ಹೊಂದಿರುವವರೂ ಸಹ ಮಾನಸಿಕವಾಗಿ ಆನಂದವಾಗಿರಬಹುದು. ಎಲ್ಲರಿಗೂ ತಿಳಿದಿರುವಂತೆ ಮನಸ್ಸು ಚಂಚಲ; ಒಂದೇ ಕ್ಷಣದಲ್ಲಿ ನವರಸಗಳನ್ನೂ ಒಳಹೊಕ್ಕು ಹೊರಹಾಸಿ ಬರುವ ಸಾಮರ್ಥ್ಯವಿರುವ ನಿಮ್ಮ ಮನಸ್ಸು ಅಸಂತೋಷದ ನಿಲ್ದಾಣಕ್ಕೆ ಅಡಿಗಡಿಗೆ ಬಂದು ನಿಲ್ಲುತ್ತಿದ್ದಲ್ಲಿ ಈ ಲೇಖನ ನಿಮಗಾಗಿ ಬರೆದಿದ್ದು ಎಂದು ಭಾವಿಸಿದರೆ ತಪ್ಪಾಗಲಾರದು.
ಈಗ ಸಂತೋಷ ಎಂದರೆ ಏನೆಂದು ತಿಳಿಯೋಣ. ಮನುಷ್ಯನಿಗೆ ದಣಿವಾರಿಸಲು ನಿದ್ದೆಗಿಂತ ಚೇತೋಹಾರಿ ಮತ್ತು ಸಂಪೂರ್ಣ ಉಚಿತ ಪರಿಹಾರ ಇನ್ನೊಂದಿಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯ. ಕೆಲವು ದಿನ ನೀವು ಚೆನ್ನಾಗಿ ನಿದ್ದೆ ಮಾಡಬಹುದು ಕೆಲವು ರಾತ್ರಿಯಿಡೀ ಹೊರಳಾಡಿ ಕಳೆಯಬಹುದು; ಕೆಲವೊಮ್ಮೆ ಕೆಟ್ಟ ಕನಸುಗಳನ್ನು ಅನುಭವಿಸಿದರೆ ಇನ್ನು ಕೆಲವೊಮ್ಮೆ ಸುಂದರ ಕನಸಿನ ಲೋಕದಲ್ಲಿ ತೇಲಾಡಬಹುದು. ಆದರೆ ಕೆಲವೊಮ್ಮೆ ನೀವು ಕನಸುಗಳಿಲ್ಲದ ಸಂಪೂರ್ಣ ಗಾಢನಿದ್ರೆಯ ಆನಂದ ಪಡೆಯುತ್ತೀರಿ. ಅಂತಹ ಗಾಢನಿದ್ರೆಯ ನಂತರ ನಿಮಗೆ ಎಚ್ಚರವಾದಾಗ ನಿಮಗೆ ಚೆನ್ನಾಗಿ ನಿದ್ದೆ ಮಾಡಿದ ಅನುಭವ, ದೇಹ ಮತ್ತು ಮನಸ್ಸು ಪ್ರಫುಲ್ಲಿತವಾಗಿರುವುದು ಬಿಟ್ಟರೆ ಇನ್ನೇನೂ ನೆನಪಿರುವುದಿಲ್ಲ. ಅದೇ ನೀವು ನಿದ್ದೆ ಮಾತ್ರೆಯ (ಅಥವಾ ಇನ್ನಿತರ ನಿದ್ದೆ ಬರಿಸುವ ವಸ್ತುಗಳ) ಸಹಾಯದಿಂದ ದೀರ್ಘ ಕಾಲ ಮಲಗಿದ್ದೇ ಆದರೆ ಎಚ್ಚರವಾದ ನಂತರ ಬಹುಶಃ ನಿಮ್ಮ ದೇಹ ಹಗುರವಾಗಿರಬಹುದು ಆದರೆ ಮನಸ್ಸು ಪ್ರಫುಲ್ಲಿತವಾಗಿರುವುದಿಲ್ಲ. ಸ್ವಾಭಾವಿಕವಾಗಿ ಬಂದ ಇಂತಹ ಗಾಢನಿದ್ರೆಯ ಗುಟ್ಟೇನು? ನಿಮ್ಮ ಇಚ್ಛಾನುಸಾರ ಇಂತಹ ಆನಂದದ ನಿದ್ರೆಯ ಅನುಭವ ಪಡೆಯಲು ಸಾಧ್ಯವೇ?
ಇನ್ನೊಂದು ಉದಾಹರಣೆ: ನೀವು ಎಲ್ಲಿಗೋ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ನಿಮಗೆ ಕಂಡ ಯಾವುದಾದರೂ ರಮಣೀಯ ದೃಶ್ಯ, ವರ್ಣರಂಜಿತ ಕಾಮನಬಿಲ್ಲು, ಎತ್ತರದಿಂದ ಧುಮುಕುತ್ತಿರುವ ನೀರಿನ ಝರಿ, ಸೂರ್ಯೋದಯ ಅಥವಾ ಸೂರ್ಯಾಸ್ತದ ದೃಶ್ಯ ನಿಮಗೆ ನೆನಪಿದೆಯೇ? ಅದು ನಿಮಗೆ ಕಂಡಕೂಡಲೆ ಸಮಯದ ಅರಿವಿಲ್ಲದಂತೆ ಎಷ್ಟು ಹೊತ್ತಿನವರೆಗೆ ಅದರ ಆನಂದ ಅನುಭವಿಸಿದಿರಿ ಹೇಳಬಲ್ಲಿರಾ? ಇದರ ಬಗೆ ಸ್ವಲ್ಪ ಯೋಚಿಸಿ; ಅದರ ವಿಷಯಕ್ಕೆ ನಂತರ ಬರುತ್ತೇನೆ. ಎಂದೋ ಕಂಡ ಆ ದೃಶ್ಯವನ್ನು ನೆನಪಿಸಿಕೊಂಡು ಆ ಕ್ಷಣದ ಆನಂದವನ್ನು ಮತ್ತೊಮ್ಮೆ ಅನುಭವಿಸಬೇಕಾದರೆ ನೀವು ನಿಮ್ಮ ಆತ್ಮವನ್ನು ಸಂಪರ್ಕಿಸಬೇಕು. ಆದರೆ ನಿಮ್ಮ ಮನಸ್ಸು ಸಂಸಾರದ ಜಾಲದಲ್ಲಿ ಸಿಲುಕಿ, ಆತ್ಮದೊಂದಿಗೆ ಸಂಪರ್ಕ ಮಾಡಲಾಗದೆ ತೊಳಲಾಡುತ್ತಿರುತ್ತದೆ. ಈ ಜಾಲವನ್ನು ಭೇದಿಸದೆ ಮನಸ್ಸನ್ನು ಆನಂದಮಾರ್ಗದತ್ತ ಕೊಂಡೊಯ್ಯಲು ಸಾಧ್ಯವಿಲ್ಲ.
ಹಿಂದು ಆಧ್ಯಾತ್ಮವಾದದ ಪ್ರಕಾರ ‘;ಆತ್ಮ’ ಎಂಬುದು ಪಂಚಕೋಶಗಳೆಂಬ ಶಕ್ತಿಯುತ, ಒಳಸಂಪರ್ಕ ವಿರೋಧಿ ಹೊದಿಕೆಗಳಲ್ಲಿ ಮರೆಯಾಗಿರುತ್ತದೆ. ಪ್ರತಿಯೊಂದು ಹೊರ ಕೋಶ ಅದರ ಒಳಗಿನ ಕೋಶಕ್ಕಿಂತ ಕಠಿಣ; ಭೇದಿಸಲು ಕಷ್ಟ, ಆದರೆ ಅಸಾಧ್ಯವಲ್ಲ.
ಅತ್ಯಂತ ಹೊರಗಿನ ಕೋಶವನ್ನು ‘ಅನ್ನಮಯಾಕೋಶ’ ಎನ್ನುತ್ತಾರೆ. ಇದು ಜೀವನಕ್ಕೆ ಅತ್ಯವಶ್ಯಕವಾದ ಅನ್ನ, ನೀರು, ಸೂರು, ಕೌಟುಂಬಿಕ ಸಂಬಂಧ ಮತ್ತು ಅವಶ್ಯಕತೆಗಳ ಮಾಯಾಜಾಲ. ಇವುಗಳೇ ಸರಿಯಿಲ್ಲದೆ ಹೊಟ್ಟೆ ಹಸಿಯುತ್ತಿರುವಾಗ, ಇನ್ನ್ಯಾವ ಚಿಂತನೆಯೂ ಸಾಧ್ಯವಿಲ್ಲ. ಆದರೆ ಲೇಖನದ ಓದುಗರು ಈ ಪ್ರಥಮ ಜಾಲದಿಂದ ಈಗಾಗಲೇ ಹೊರಗೆ ಬಂದಿದ್ದಾರೆಂಬ ಭಾವನೆಯಲ್ಲಿ ಮುಂದುವರೆಯುತ್ತಿದ್ದೇನೆ.
ಎರಡನೆಯದು ‘ಪ್ರಾಣಮಯಾಕೋಶ’ -ಇದು ನಿಮ್ಮನ್ನು ಬೆಳಿಗ್ಗೆ ಎಬ್ಬಿಸಿ, ನಿಮ್ಮನ್ನು ದಿನನಿತ್ಯದ ಕೆಲಸದಲ್ಲಿ ತೊಡಗುವಂತೆ ಮಾಡುತ್ತದೆ. ಸುಮ್ಮನೆ ಕೂರಲು ಬಿಡದೆ ಹೊಸ ಕೆಲಸಕ್ಕೆ, ಬೇರೆ ಸ್ಥಳಗಳಿಗೆ ಹೋಗಲು, ಹೊಸ ಸಂಬಂಧವನ್ನು ಅರೆಸಲು ಪ್ರಚೋದಿಸುತ್ತದೆ. ಈ ಕೋಶದ ಶಕ್ತಿ ಕಡಿಮೆಯಾದಲ್ಲಿ ನಿಮಗೆ ಹಾಸಿಗೆ ಬಿಟ್ಟು ಏಳಲೂ ಮನಸ್ಸಿರುವುದಿಲ್ಲ ಎಂದು ಬೇರೆ ಹೇಳಬೇಕಾಗಿಲ್ಲ. ಈಗಾಗಲೇ ಇದನ್ನೆಲ್ಲ ಅನುಭವಿಸಿ ಮುಗಿಸಿದ್ದರೆ ನೀವು ನಿಮ್ಮ ಎರಡನೆಯ ಕೋಟೆಯನ್ನು ಭೇದಿಸಿದ್ದೀರೆಂದು ಭಾವಿಸಲು ಅಡ್ಡಿಯಿಲ್ಲ.
ಮೂರನೆಯದು ‘ಮನೋನ್ಮಯಾಕೋಶ’ -ಸಾಮಾನ್ಯವಾಗಿ ನಿಮ್ಮ ಮನಸ್ಸು ಈ ಕೋಶದಿಂದ ಕಾರ್ಯ ನಿರ್ವಹಿಸುತ್ತದೆ; ನಿರ್ವಹಿಸಬೇಕು. ಆದರೆ ಅನೇಕ ಬಾರಿ ಮನಸ್ಸು ಇಲ್ಲಿಂದ ಜಾರಿ ಹೊರಗಿನ ಎರಡು ಕೋಶಗಳಾದ ಅನ್ನಮಯಾಕೋಶ ಮತ್ತು ಅಥವಾ ಪ್ರಾಣಮಯಾಕೋಶಗಳ ಸಂಪರ್ಕಜಾಲದಲ್ಲಿ ಸಿಲುಕಿ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಮನೋವಿಕಾರಗಳಿಗೆ ಬಲಿಯಾಗುತ್ತದೆ. ಈ ಮನೋವಿಕಾರದ ಜಾಲಕ್ಕೆ ಸಿಲುಕದೆ ಮನಸ್ಸನ್ನು ತನ್ನ ಸ್ವಸ್ಥಾನಕ್ಕೆ ಎಳೆದು ತರಬೇಕಾದರೆ ಅಷ್ಟಾಂಗ ಯೋಗ ಸೂತ್ರದಲ್ಲಿ ತಿಳಿಸಿರುವಂತೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ ಇವುಗಳ ಅವಶ್ಯಕತೆ ಬೀಳುತ್ತದೆ. ಆದರೆ ನಾನು ಅದರ ಬಗ್ಗೆ ನಿಮಗೆ ತಿಳಿಸಲು ಹೊರಟಿಲ್ಲ. ಮೇಲೆ ತಿಳಿಸಿದಂತೆ ಮೊದಲ ಎರಡು ಕೋಶಗಳನ್ನು ನೀವು ಗೆದ್ದಿದ್ದ ಪಕ್ಷದಲ್ಲಿ ನಿಮ್ಮ ಮನಸ್ಸು ಮನೋನ್ಮಯಾಕೋಶದ ‘ಅಹಂಕಾರ’ವೆಂಬ ಜಾಲದಲ್ಲಿ ಸಿಲುಕಿ, ನಾನು ಹೀಗೆ ಮಾಡಿದೆ, ಇಂತಹ ಪ್ರಶಸ್ತಿ ಗೆದ್ದಿದ್ದೆ ಎಂಬ ನಿಮ್ಮ ಸಾಧನೆಗಳ ಬಗ್ಗೆ ಬೇರೆಯವರ ತಲೆಯನ್ನು ನೀವು ಕೊರೆಯುತ್ತಿರುತ್ತೀರಿ. ಈ ತರಹದ ಅನೇಕ ವ್ಯಕ್ತಿಗಳನ್ನು ತಾವು ಕಂಡಿರಬಹುದು. ಬಹು ಜಾಗರೂಕತೆಯಿಂದ, ಈ ಅಹಂಕಾರದ ಹಳ್ಳಕ್ಕೆ ಬೀಳದೆ, ಮೂರನೆಯ ಕೋಟೆಯನ್ನು ಭೇದಿಸಿ ಬಂದರೆ ಮಾತ್ರ ನೀವು ಮುಂದಿನ ಕೋಶದೊಂದಿಗೆ ಸಂಪರ್ಕ ಕಲ್ಪಿಸಬಹುದು.
ನಾಲ್ಕನೆಯದು ‘ಜ್ಞಾನಮಯಾಕೋಶ’ -ಇಲ್ಲಿ ನಿಮ್ಮ ಸ್ವಂತ ಬುದ್ಧಿಶಕ್ತಿ, ತರ್ಕ, ವಿವೇಕ, ವಿಚಕ್ಷಣೆ, ನೀವು ಓದಿ- ಕೇಳಿ ತಿಳಿದಂತಹ ಇತರರ ವ್ಯಾಖ್ಯಾನ ಇವುಗಳ ನಡುವೆ ನಿಮ್ಮೊಳಗೆ ವಾಗ್ವಾದ ಸದಾಕಾಲ ನಡೆಯುತ್ತಿರುತ್ತದೆ. ಮನಸ್ಸಿನ ಈ ಅಲ್ಲೋಲ ಕಲ್ಲೋಲದಿಂದಾಗಿ ನಿಮ್ಮಲ್ಲಿ ಸಂದೇಹಗಳ ಮಹಾಪರ್ವತವೇ ಎದ್ದು ನಿಲ್ಲುತ್ತಿರುತ್ತದೆ; ಕರಗುತ್ತಿರುತ್ತದೆ. ಯುದ್ಧಭೂಮಿಯಲ್ಲಿ ಅರ್ಜುನ ಸಂದೇಹಕ್ಕೆ ಸಿಲುಕಿದಂತೆ ನೀವೂ ಅಡಿಗಡಿಗೆ ದಾರಿ ಕಾಣದಂತೆ ಅಧೀರರಾಗುವುದೂ ಸಹಜ. ಇದೂ ಸಹ ಒಂದು ಮಾಯಾಜಾಲ, ನಿತ್ಯನವೀನ, ಕ್ಷಣಿಕ ಮತ್ತು ಮನೋಕಲ್ಪಿತ.
ಅದು ಹೇಗೆ ‘ಮನೋಕಲ್ಪಿತ’ ಆಗಲು ಸಾಧ್ಯ? ನನ್ನ ಪಂಚೇಂದ್ರಿಯಗಳು ನಾನು ಅಸಂತುಷ್ಟವಾಗಿರುವುದನ್ನು ಸಾರಿ ಹೇಳುತ್ತಿದೆ ಎಂದು ನೀವು ಕೇಳಬಹುದು. ಉದ್ರೇಕಗೊಳ್ಳಬೇಡಿ. ನೀವು ನಿಮ್ಮ ಜೀವನವನ್ನು ಸ್ವಲ್ಪ ಸಮಯ ಹಿಂದಕ್ಕೆ ಕೊಂಡು ಹೋಗ ಬಲ್ಲಿರಾ? ನಿಮ್ಮ ಸ್ವಂತ ಜೀವನ ಪ್ರಾರಂಭಿಸಿದಾಗ ನಿಮ್ಮ ಬಳಿ ಏನೂ ಇರಲಿಲ್ಲ. ಸಂತೋಷಮಯ ಜೀವನಕ್ಕೆ ಏನೇನು ಬೇಕು ಎಂಬ ಪಟ್ಟಿ ನಿಮ್ಮ ತಲೆಯಲ್ಲಿತ್ತು; ಅದನ್ನು ಹೇಗೆ ಪಡೆಯಬಹುದು ಎಂಬ ಸ್ಥೂಲ ದಾರಿಚಿತ್ರವೂ ನಿಮ್ಮಲ್ಲಿತ್ತು. ಅದರ ಪ್ರಯತ್ನವನ್ನೂ ನೀವು ಮಾಡಿದಿರಿ. ಈಗ ಆ ಪಟ್ಟಿಯಲ್ಲಿದ್ದ ಸುಮಾರಷ್ಟು ವಸ್ತುಗಳು ನಿಮ್ಮಲ್ಲಿದೆ; ಹೊಸ ಕೆಲಸ ಅಥವಾ ಕೆಲಸದಲ್ಲಿ ಬಡ್ತಿ, ಹೊಸ ಮನೆ, ಹೊಸ ವಾಹನ, ಹೊಸ ಕುಟುಂಬ, ಎಲ್ಲವೂ ನಿಮ್ಮದಾಗಿದೆ, ಆದರೆ ಜೀವನ ಮಾತ್ರ ಸಂತೋಷಮಯವಾಗಲಿಲ್ಲ, ಅಲ್ಲವೇ? ಅದಕ್ಕೆ ನೀವೇನು ಮಾಡಿದಿರಿ - ನಿಮ್ಮ ಪಟ್ಟಿಯಲ್ಲಿದ್ದ ಬೇಕು-ಬೇಡಗಳನ್ನು ಬದಲಾಯಿಸಿ ಅಥವಾ ಹೊಸ ವಸ್ತುಗಳನ್ನು ಪಟ್ಟಿಗೆ ಸೇರಿಸಿ ಮರುಪ್ರಯತ್ನಕ್ಕೆ ಮುಂದಾದಿರಿ ಅಲ್ಲವೇ? ಈ ನಿಮ್ಮ ಹೊಸ ಬೇಡಿಕೆಗಳ ಪೂರೈಕೆಯಾದರೂ ಸಹ ನಿಮ್ಮ ಜೀವನ ಸಂತೋಷಮಯವಾಗುವುದು ಸಂದೇಹ. ಏಕೆಂದರೆ ಈ ಬೇಕು-ಬೇಡಗಳ ಪೂರೈಕೆಯಲ್ಲಿ ಯಾವ ಆನಂದವೂ ಅಡಗಿಲ್ಲ ಹಾಗಾಗಿ ಆ ಆನಂದ ನಿಮಗೆ ಸಿಗುವುದೂ ಇಲ್ಲ. ಹಾಗಾದರೆ ಸಂತೋಷವನ್ನು ಎಲ್ಲಿ ಅರಸಬೇಕು ಎಂಬುದು ತಾನೆ ನಿಮ್ಮ ಮುಂದಿನ ಪ್ರಶ್ನೆ?
ಲೌಕಿಕ ದೃಷ್ಟಿಯಿಂದ ಈಗಿನ ನಿಮ್ಮ ಅಸಂತೋಷದ ಪರಿಸ್ಥಿತಿಗೆ ನೀವು ಹೇಗೆ ತಲುಪಿದಿರಿ ಎಂಬುದನ್ನು ಗಮನಿಸೋಣ. ಇದುವರೆಗೆ ನೀವು ಹಲವಾರು ವಸ್ತುಗಳ ಪಡೆಯುವಿಕೆ ಮತ್ತು ಅಥವಾ ಸಂಬಂಧಗಳ ಸ್ಥಿರತೆಯೇ ನಿಮ್ಮ ಸಂತೋಷದ ಗುರಿಯೆಂದು ಭಾವಿಸಿ, ಪರಿಣಾಮವನ್ನು ಲಕ್ಷವಾಗಿಟ್ಟುಕೊಂಡು ಅದರ ಸಾಧನೆಗೆ ಮುಂದಾದಿರಿ, ಅಲ್ಲವೇ? ಇದರಿಂದ ಆದದ್ದೇನು? ನಿಮ್ಮ ಲಕ್ಷವೆಲ್ಲವೂ ಪರಿಣಾಮದ ಮೇಲಿದ್ದುದರಿಂದ ಮಾರ್ಗದ ಮೇಲೆ ನಿಮ್ಮ ಗಮನ ಕಡಿಮೆಯಾಯಿತು. ಉದಾಹರಣೆಗೆ, ಕೆಲಸದ ಒತ್ತಡದಿಂದಾಗಿ ಮನೆಯ ಕಡೆ ಹೆಚ್ಚು ಗಮನ ಹರಿಸಲಾಗುತ್ತಿಲ್ಲ ಎಂಬುದನ್ನು ಮನಗಂಡು, ಈ ಬಾರಿ ಮನೆಗೆ ಹೋಗುವ ಮುನ್ನ ಮಡದಿ-ಮಕ್ಕಳಿಗೆ ಒಳ್ಳೆಯ ದುಬಾರಿ ಸೀರೆ/ಬಟ್ಟೆ (ಅಥವಾ ಮತ್ತೊಂದು) ತೆಗೆದುಕೊಂಡು ಹೋಗೋಣ, ಅದನ್ನು ನೋಡಿದ ಕೂಡಲೇ ಅವರು ಸಂತೋಷಗೊಳ್ಳುತ್ತಾರೆಂದು ಭಾವಿಸಿ, ಅದನ್ನು ಖರೀದಿಸಿ ನೀವು ಮನೆಗೆ ಹೋಗಿ ಅವರಿಗೆ ನೀಡಿದ ನಂತರ ನಿಮಗೆ ತಿಳಿದದ್ದು ಅವರಿಗೆ ನೀವು ಆರಿಸಿದ ಬಣ್ಣ ಅಥವಾ ವಿನ್ಯಾಸ ಸುತರಾಂ ಇಷ್ಟವಿಲ್ಲವೆಂದು. ನಿಮ್ಮ ಪ್ರಯತ್ನಪೂರ್ವಕ ಕೆಲಸ ಯಾರ ಸಂತೋಷಕ್ಕೂ ಕಾರಣವಾಗಲಿಲ್ಲ. ಇನ್ನೊಂದು ಉದಾಹರಣೆ ನೋಡೋಣ: ನೀವು ಕ್ರಿಕೆಟ್, ಬ್ಯಾಡ್ಮಿಂಟನ್ ಅಥವಾ ಫುಟ್‌ಬಾಲ್ ಆಡುವುದು ಏಕೆ - ದೇಹಕ್ಕೆ ಒಳ್ಳೆಯ ವ್ಯಾಯಾಮ ಸಿಗಲಿ, ನಿಮ್ಮ ಆಟದ ಕೌಶಲ್ಯ ಎಲ್ಲರಿಗೂ ತಿಳಿಯಲಿ, ಸಮಯದ ಸದುಪಯೋಗವಾಗಲಿ ಎಂದು. ಇವಷ್ಟನ್ನು ಮಾತ್ರ ಮನಸ್ಸಿನಲ್ಲಿಟ್ಟುಕೊಂಡು ಆಟ ಆಡಿದ್ದರೆ, ಆಟ ಮುಗಿದ ನಂತರ ನಿಮ್ಮ ದೇಹ ಸಾಕಷ್ಟು ಬೆವರಿ, ಸುಸ್ತಾಗಿರುತ್ತದೆ ಆದರೆ ಮನಸ್ಸು ಪ್ರಫುಲ್ಲಿತವಾಗಿರುತ್ತದೆ. ಆದರೆ ನಿಮ್ಮ ಲಕ್ಷದಲ್ಲಿ ನೀವು ಪಂದ್ಯ ಗೆಲ್ಲಲೇಬೇಕು ಎಂಬುದನ್ನು ಸಹ ಸೇರಿಸಿಕೊಂಡಿದ್ದರೆ ಬಹುಶಃ ಅಂದಿನ ಆಟದ ಪರಿಣಾಮ ನಿಮ್ಮನ್ನು ಅಸಂತೋಷಕ್ಕೀಡುಮಾಡಿರುತ್ತದೆ. ಆಡಿದ ಆಟ ನಿಮಗೆ ವ್ಯರ್ಥವಾಗಿರುತ್ತದೆ. ಪರಿಣಾಮವನ್ನು ಲಕ್ಷದಲ್ಲಿಟ್ಟುಕೊಂಡು ‘ಎಲ್ಲಿ ಸೋಲುತ್ತೇನೋ’ ಎಂಬ ಮನಸ್ಸಿನಿಂದ ಮಾಡಿದ ಕೆಲಸ ಮತ್ತು ಅದರ ಪರಿಣಾಮಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎಂಬುದನ್ನು ಮರೆಯಬೇಡಿ.
ಪರಿಣಾಮಕ್ಕಾಗಿ ಕೆಲಸ ಮಾಡಬೇಡಿ, ಬಡ್ತಿಗಾಗಿ ಹಾತೊರೆದು ಕೆಲಸ ಮಾಡಬೇಡಿ; ನಿಷ್ಟೆಯಿಂದ ಮಾಡುವ ಕೆಲಸದ ಆನಂದಕ್ಕಾಗಿ ಪರಿಶ್ರಮಿಸಿ. ನಿಮ್ಮ ಶ್ರಮ ವ್ಯರ್ಥವಾಗುವುದಿಲ್ಲ. ಭಗವದ್ಗೀತೆಯಲ್ಲಿ ಪರಮಾತ್ಮ ನುಡಿದಂತೆ ಕರ್ಮಣ್ಯೇವಾಧಿಕಾರಸ್ತೇ.... ಎಂಬ ನುಡಿಯನ್ನು ನೆನಪಿಡಿ. ಪರಿಣಾಮವನ್ನು ಅವನಿಗೆ ಸಮರ್ಪಿಸಿ. ಕೆಲಸವನ್ನು ನೀವು ಸಂಪೂರ್ಣ ಮನಸ್ಸಿನಿಂದ ಮಾಡಿದ್ದೇ ಆದರೆ ಅದರ ಪರಿಣಾಮವೂ ಒಳ್ಳೆಯದೇ ಆಗಿರುತ್ತದೆ.
ಈಗ ಇದನ್ನು ಇನ್ನೊಂದು ದೃಷ್ಟಿಕೋಣದಿಂದ ನೋಡೋಣ. ನೀವು ಹಠಾತ್ತನೆ ಕಂಡ ರಮಣೀಯ ದೃಶ್ಯ ನೆನಪಿಸಿಕೊಳ್ಳಿ. ಅದನ್ನು ಕಂಡಕೂಡಲೇ ನೀವು ಅದನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಸಮಯದ ಪರಿವೆಯಿಲ್ಲದೇ ಕೆಲಕಾಲ ಅದರ ಅನಿರ್ಭಂದಿತ ಆನಂದ ಪಡೆದಿರಿ. ಅದರಲ್ಲಿ ತಪ್ಪನ್ನು ಹುಡುಕಲು ಮುಂದಾಗಲಿಲ್ಲ. ಕಾಮನಬಿಲ್ಲು ಸರಿಯಾಗಿ ಮಧ್ಯದಲ್ಲಿಲ್ಲ, ಸ್ವಲ್ಪ ಓರೆಯಾಗಿದೆ, ಇನ್ನೂ ಹೆಚ್ಚು ನೀಲಿ ಬಣ್ಣ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಥವಾ ಸೂರ್ಯಾಸ್ತ ಬಿಂಬದ ಮುಂದೆ ಇರುವ ಮರ ವಕ್ರವಾಗಿದೆ; ನನ್ನ ಕೈಯಲ್ಲಿ ಒಂದು ಕೊಡಲಿ ಕೊಟ್ಟು ಹದಿನೈದು ನಿಮಿಷ ಕಾಲಾವಕಾಶ ನೀಡಿದ್ದರೆ ಅದನ್ನು ಸರಿಪಡಿಸಬಹುದಾಗಿತ್ತು ಎಂದು ನೀವು ಯೋಚಿಸಲಿಲ್ಲ. ದೇವರು ನೀಡಿದ್ದನ್ನು ನೀವು ಸಂಪೂರ್ಣ ಪ್ರಸಾದ ಭಾವದಿಂದ ಸ್ವೀಕರಿಸಿದುದೇ ನಿಮ್ಮ ಸಂತೋಷಕ್ಕೆ ಕಾರಣವಾಯಿತು. ಜೀವನದಲ್ಲಿ ನಿಮಗೆ ದೊರೆತುದನ್ನು ಪ್ರಸಾದವೆಂದು ಸ್ವೀಕರಿಸಿ ಅದರಲ್ಲಿ ತಪ್ಪು-ನೆಪ್ಪುಗಳನ್ನು ಹುಡುಕದೇ ಇರುವುದೇ ನಿಜವಾದ ಆನಂದದ ರಹಸ್ಯ. ಮಾನವ ಸಂಬಂಧಗಳಿಗೂ ಇದು ಅನ್ವಯಿಸುತ್ತದೆ. ಇತರರಲ್ಲಿ ತಪ್ಪು ಹುಡುಕಬೇಡಿ; ಮಾತು ಕಡಿಮೆ ಮಾಡಿ; ಇತರರು ಹೇಳಿದ್ದನ್ನು ಸರಿಯಾಗಿ ಕೇಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಬೇರೆಯವರ ಬಗ್ಗೆ ನೀವು ತೀರ್ಮಾನ ನೀಡುವುದನ್ನು ನಿಲ್ಲಿಸಿ. ಸಾಧ್ಯವಾದಲ್ಲಿ ನಿಮ್ಮನ್ನು ನೀವೇ ಬದಲಾಯಿಸಿಕೊಳ್ಳಿ. ನಿಮ್ಮಲ್ಲಿ ಬದಲಾವಣೆಯಾದ ಕೂಡಲೇ ಇತರರಲ್ಲಿಯೂ ಬದಲಾವಣೆಯಾದಂತೆ ನಿಮಗೆ ತೋರುತ್ತದೆ. ಸಂಬಂಧಗಳು ಸುಧಾರಿಸುತ್ತವೆ.
ಈಗ ಪಾರಮಾರ್ಥಿಕ ದೃಷ್ಟಿಯಿಂದ ಮತ್ತೊಮ್ಮೆ ನಿಮ್ಮ ಅಸಂತೋಷದ ಕಾರಣವನ್ನು ನೋಡೋಣ. ನಾಲ್ಕನೆಯ ಕೋಶದಲ್ಲಿ ಇನ್ನೂ ತೊಳಲಾಡುತ್ತಿರುವ ನೀವು ವಸ್ತುಗಳ ಶೇಖರಣೆ ಅಥವಾ ಸಂಬಂಧಗಳ ಸ್ಥಿರತೆಯಲ್ಲಿ ಸಂತೋಷ ಎಂಬ ಮರೀಚಿಕೆಯ ಬೆನ್ನಟ್ಟುವುದನ್ನು ಯಾವಾಗ ಬಿಡುತ್ತೀರೋ ಆಗಲೇ ನಿಮ್ಮ ಮನಸ್ಸು ಹಗುರವಾಗಲು ಪ್ರಾರಂಭಿಸುತ್ತದೆ. ಸಂಬಂಧಗಳ ಮೇಲೆ ಒತ್ತಡ ಹೇರಿ ನಿಮ್ಮ ಆದೇಶದಂತೆ ಅವರು ನಡೆಯಬೇಕೆಂಬ ಫರ್ಮಾನ್ ರದ್ದುಗೊಳಿಸಿ. ಒತ್ತಡ ಮಾಯವಾದ ಕೂಡಲೇ ಸಂಬಂಧಗಳು ಉತ್ತಮಗೊಳ್ಳುತ್ತವೆ. ನೀವು ಕೂಡಲೇ ಸನ್ಯಾಸಿ ಆಗಬೇಕಿಲ್ಲ, ಆಗುವುದೂ ಇಲ್ಲ. ಬೇಡದ ವಸ್ತುಗಳನ್ನು ಕಡಿಮೆ ಮಾಡಿ. ವಸ್ತುಗಳನ್ನು ಶೇಖರಿಸುವ ಬದಲು ಅವನ್ನು ಇತರರಿಗೆ ನೀಡುವುದನ್ನು ಪ್ರಾರಂಭಿಸಿ. ಪಡೆಯುವದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಆನಂದವಿರುವುದನ್ನು ಮನಗಾಣುತ್ತೀರಿ. ನಿಮ್ಮ ಮನೆಯ ಪ್ರದರ್ಶನ (ಶೋಕೇಸ್) ಪೆಟ್ಟಿಗೆಯಲ್ಲಿರುವ ವಸ್ತುಗಳಿಗೂ ಅಟ್ಟದ ಮೇಲಿರುವ ಬೇಡದ ವಸ್ತುಗಳಿಗೂ ವ್ಯತ್ಯಾಸ ತೀರ ಕಡಿಮೆಯೆಂದು ಮನವರಿಕೆಯಾಗುತ್ತದೆ. ಸಣ್ಣ ಪುಟ್ಟ ಸಂಗತಿಗಳು ನಿಮ್ಮನ್ನು ಆಗ ಕಾಡುವುದಿಲ್ಲ. ನೀವು ನಿಮ್ಮ ವಾತಾನುಕೂಲಿತ ವಾಹನದಲ್ಲಿ ಹೋಗುತ್ತೀರೋ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುತ್ತೀರೋ ನಿಮಗೆ ಏನೂ ವ್ಯತ್ಯಾಸವಾಗುವುದಿಲ್ಲ. ನೀವು ಬೆಲೆಬಾಳುವ ಉತ್ತಮ ಪೋಷಾಕು ಧರಿಸಿದ್ದೀರೋ ಅಥವಾ ಸಾಮಾನ್ಯವಾದ ಉಡುಪಿನಲ್ಲಿದ್ದೀರೋ ಯಾರೂ ಗಮನಿಸುವುದಿಲ್ಲ. ಬದಲಾಗಿ ನಿಮ್ಮ ಸರಳತೆಯನ್ನು ಇತರರು ಮೆಚ್ಚಬಹುದು. ಇತರರ ಆಡಂಬರದ ಆಟಗಳಲ್ಲಿ, ನಡೆ-ನುಡಿಗಳಲ್ಲಿ ನಿಮ್ಮ ನಿರ್ಲಿಪ್ತತೆಯನ್ನು ಗಮನಿಸಿ ಅವರೂ ಸಹ ಹುಡುಗಾಟವನ್ನು ಬಿಟ್ಟು ನಿಮ್ಮೊಂದಿಗೆ ಸರಿಯಾಗಿ ನಡೆದುಕೊಳ್ಳಲು ಪ್ರಾರಂಭಿಸುತ್ತಾರೆ. ಅದೇ ರೀತಿ ನಿಮ್ಮ ತಲೆಯಲ್ಲಿರುವ ಭಾವನಾತ್ಮಕ ತ್ಯಾಜ್ಯವನ್ನೂ ಸಹ ಕಡಿಮೆಗೊಳಿಸಿ. ಇತರರ ಬಗ್ಗೆ ನಿಮ್ಮಲ್ಲಿರುವ ಅಭಿಪ್ರಾಯಗಳನ್ನು ಅಳಿಸಿ, ಬೇರೆಯವರು ಮಾಡಿದ ಅನ್ಯಾಯ, ಅತ್ಯಾಚಾರಗಳನ್ನು ಮರೆತು ಅವರನ್ನು ಕ್ಷಮಿಸಿ ಅವರ ಹೆಸರನ್ನು ಹೊಡೆದು ಹಾಕಿ. ವಿನಮ್ರತೆ ಕಲಿಯಿರಿ, ನೀವು ಯಾರೆಂಬುದನ್ನು ಮರೆತು, ಅಹಂಕಾರವನ್ನು ಮೆಟ್ಟಿ ನಿಜವಾದ ಸಮಾಜ ಸೇವಕರಾಗಿ. ಹೊರಗಿನ ಕೋಶಗಳಿಂದ ಮನಸ್ಸನ್ನು ಒಳಸೆಳೆದು ಅಂತರ್ಮುಖಿಯಾಗಲು ಪ್ರಯತ್ನಿಸಿ. ಅವುಗಳಲ್ಲಿರುವ ವಸ್ತುಗಳ ಮತ್ತು ಕಷ್ಟಕರ ಸಂಬಂಧಗಳ ಮೇಲಿದ್ದ ನಿಮ್ಮ ಮೋಹ ಕಡಿಮೆಯಾಗುತ್ತದೆ; ಒಂದೊಂದಾಗಿ ಅವುಗಳು ಮಾಯವಾಗತೊಡಗುತ್ತವೆ. ನಿಮ್ಮ ಮುಂದಿದ್ದ ಮಾಯಾಜಾಲ ಕರಗಿದಂತಾಗಿ ನಿಮ್ಮಲ್ಲಿದ್ದ ಸಂದೇಹಗಳೆಲ್ಲವೂ ಕ್ಷಣಿಕ ಮತ್ತು ಮನೋಕಲ್ಪಿತ ಎಂಬುದರ ಅರಿವು ನಿಮಗಾಗುತ್ತದೆ.
ಒಂದೊಂದಾಗಿ ಕರಗಿದ ಈ ನಾಲ್ಕು ಪದರಗಳ ಮಾಯಾಜಾಲದ ಒಳಗಿರುವುದೇ ‘ಆನಂದಮಯಾಕೋಶ’. ಈ ಕೋಶದೊಂದಿಗೆ ನೀವು ಸಂಪರ್ಕ ಕಲ್ಪಿಸಿದಕೂಡಲೇ ಆನಂದದ ಅನುಭವ ನಿಮ್ಮದಾಗುತ್ತದೆ. ಹಿಂದೆ ನೀವು ನೋಡಿದ ರಮಣೀಯ ದೃಶ್ಯದ ಆನಂದ ಮತ್ತೊಮ್ಮೆ ನೀವು ಪಡೆಯಲು ಈ ಕೋಶದ ಸಂಪರ್ಕದ ಅವಶ್ಯಕತೆ ನಿಮಗಾಯಿತು. ಅದೇ ರೀತಿ ನೀವು ಕನಸಿಲ್ಲದ ಗಾಢನಿದ್ರೆಯಲ್ಲಿದ್ದಾಗ ನಿಮ್ಮ ಒಳಗಿನ ಎಲ್ಲಾ ಕೋಶಗಳು ತಾವಾಗಿಯೇ ಮಾಯವಾಗಿ ನಿಮ್ಮ ಆತ್ಮದ ಬೆಳಕು ನಿಮ್ಮ ದೇಹ ಮತ್ತು ಮನಸ್ಸಿನ ಮೇಲೆ ಪ್ರಭಾವ ಬೀರುತ್ತಿತ್ತು. ಆದರೆ ಗಾಢನಿದ್ರೆಯಲ್ಲಿದ್ದಾಗ ನಿಮ್ಮ ಮನೋನ್ಮಯಾಕೋಶವೂ ಕೂಡ ಅಚೇತನಗೊಂಡಿದ್ದರಿಂದ ನಿಮಗೆ ಆನಂದದ ಅನುಭವವೊಂದು ಬಿಟ್ಟರೆ ಇನ್ನೇನೂ ನೆನಪಿರುವುದಿಲ್ಲ; ಕಾರಣ, ಆನಂದ ಆತ್ಮದ ಪ್ರಥಮ ಸಹಜ ಗುಣ. ಆನಂದಮಯಾಕೋಶದಲ್ಲಿರುವುದು ಕೇವಲ ಆನಂದವಲ್ಲ, ಅಪರಿಮಿತ ಪರಮಾನಂದ. ಇದನ್ನು ಸವಿಯಬೇಕಾದರೆ ನೀವು ನಿಮ್ಮ ಮನಸ್ಸನ್ನು ಅದರ ಸಾಮಾನ್ಯ ಕಾರ್ಯಸ್ಥಾನವಾದ ಮನೋನ್ಮಯಾಕೋಶದಿಂದ ಆನಂದಮಯಾಕೋಶಕ್ಕೆ ಯೋಗಸೂತ್ರದ ಸಹಾಯದಿಂದ ವರ್ಗಾಯಿಸಬೇಕು. ಕನಸಿಲ್ಲದ ಗಾಢನಿದ್ರೆ ನೀವೂ ಪಡೆಯಬಹುದು. ಅದಕ್ಕೆ ಯೋಗಸೂತ್ರದಲ್ಲಿ ಹೇಳಿದಂತೆ ಕೆಲವು ಪೂರ್ವ ಸಿದ್ಧತೆ ಅತ್ಯಗತ್ಯ. ಮನೋನ್ಮಯಾಕೋಶ ಜಾಗೃತವಾಗಿರುವಾಗ ಪಡೆಯಬಹುದಾದ ಇಂತಹ ಗಾಢನಿದ್ರೆಗೆ ‘ಸಮಾಧಿ’ ಎನ್ನುತ್ತಾರೆ. ಈ ಸಮಾಧಿಯ ಸ್ಥಿತಿಯಲ್ಲಿ ನಿಮಗೆ ಸಿಗುವ ಆನಂದದ ಅನುಭವ ಸ್ವಾಭಾವಿಕ ಗಾಢನಿದ್ರೆಗಿಂತಲೂ ಅಧಿಕ. ಆದರೆ ಈ ಆನಂದಮಯಾಕೋಶವೂ ಕೇವಲ ಒಂದು ಪದರ ಎಂಬುದನ್ನು ನೆನಪಿಡಿ. ಇದನ್ನು ದಾಟಿದ ನಂತರವೇ ನಿಮಗೆ ಕಾಣ ಸಿಗುವುದು ನಿಮ್ಮ ನಿಜವಾದ ಆತ್ಮ. ಅದರಲ್ಲಿ ಲೀನವಾಗುವುದೇ ಮುಕ್ತಿ. ಸಂತೋಷದ ಈ ಸರಳ ಮಾರ್ಗಕ್ಕೆ ನಿಮ್ಮನ್ನು ಸೇರಿಸಿದ ನಂತರ ನನ್ನ ಕೆಲಸ ಮುಗಿಯಿತು. ಮುಂದಿನ ನಿಮ್ಮ ಪ್ರಯಾಣ ಸುಖಕರವಾಗಲಿ ಎಂಬುದು ನನ್ನ ಆಶಯ.
ಜಿ. ಆರ್. ವಿದ್ಯಾರಣ್ಯ
ಎಂ.ಐ.ಜಿ. – 891, ಸಿ.ಐ.ಟಿ.ಬಿ.
2ನೇ ಹಂತ, ಕುವೆಂಪುನಗರ
ಮೈಸೂರು-570023
ಫೋನ್: 97310 61861
ಇ-ಮೇಲ್: g..r.vidyaranya@gmail.com