ಅಮೆರಿಕನ್ನಡ
Amerikannada
“ಅಂತರಂಗದ ಮೃದಂಗ ಅಂತು ತುಂತ ನಾನಾ”
ದ.ರಾ. ಬೇಂದ್ರೆಯವರ ಕವನದ ಒಂದು ನೋಟ

ವಿಶ್ವ, ಸ್ಯಾನ ರಮೋನ್, ಕ್ಯಾಲಿಫೋರ್ನಿಯ
ಬೇಂದ್ರೆಯವರ “ಅಂತರಂಗದ ಮೃದಂಗ ಅಂತು ತುಂತು ನಾನಾ” ಯೋಗಿಯೊಬ್ಬನ ಅಧ್ಯಾತ್ಮ ಪ್ರಯಾಣವನ್ನು ವಿವರಿಸುವ ಸುಂದರ ಕವನ. ಆದಿಯಿಂದ ನಾದದ ಉಗಮ, ನಾದದಿಂದ ಜಗ ಹಾಗು ಜೀವಿಯ ಉಗಮ, ಆದಿಯನ್ನು ಮರೆಯುವ ಜೀವಿಯ ಲೋಕ ವ್ಯಾಪಾರದಾಟ, ಯೋಗ ಮಾರ್ಗದಲ್ಲಿ ಆದಿಯನ್ನು ಮತ್ತೆ ಸೇರಲು ಯತ್ನಿಸುತ್ತಿರುವಾಗ ಅಂತರಂಗದಲ್ಲಿ ಯಾರೋ ಮೃದಂಗ ಬಾರಿಸಿದಂತೆ ಕೇಳುವ ನಾದಗಳು, ಈ ವಿಷಯಗಳನ್ನೊಳಗೊಂಡ ಭಾರತೀಯ ಅಖಂಡ ಯೋಗ ಶಾಸ್ತ್ರದ ಸಂಕ್ಷಿಪ್ತ ಪದ್ಯವಿದು.
ಈ ಕವನ ಜಗದ ಹಾಗು ನಮ್ಮ ಉಗಮ ನಿರ್ಗಮನ ಈ ಎರಡು ಹಂತಗಳಿಗೂ ಅನ್ವಯಿಸುವ ಅರ್ಥಗಳನ್ನು ಕೊಡುತ್ತದೆ. ರೂಢಾರ್ಥದಲ್ಲಿ ಒಗಟಾಗಿ ಕಂಡುಬರುತ್ತದೆ. ಆದರೆ ಅರ್ಥವನ್ನು ಅಧ್ಯಯನ ಮಾಡಿ ತಿಳಿದರೆ ಅದು ನಮ್ಮ ಜೀವನಕ್ಕೂ, ಆಧ್ಯಾತ್ಮ ಸಾಧನೆಗೂ ಉಪಯುಕ್ತ ಮಾರ್ಗವಾಗುತ್ತದೆ. ಲೋಕದ ಎಲ್ಲದೇಶಗಳ ಎಲ್ಲಮತಗಳ ಪ್ರಸಿದ್ಧ ಕವಿಗಳು ಈ ರೀತಿಯ ಅನುಭವ ಪದಗಳನ್ನು ರಚಿಸಿದ್ದಾರೆ. ಇಲ್ಲಿ ಅಲ್ಲಮ, ಅಕ್ಕ ಮಹದೇವಿಯಕ್ಕ, ಸರ್ವಜ್ಞ, ಪುರಂದರ ದಾಸ ಶಿಶುನಾಳ ಶರೀಫ ಡಿವಿಜಿ ಅಡಿಗ ಮತ್ತು ಇತರ ನಮ್ಮ ತಾಯ್ನುಡಿಯ ಕವಿಗಳ ಅನುಭವ ಪದ್ಯಗಳನ್ನು ಉದಾಹರಣೆಯಲ್ಲಿ ವಿಚಾರ ಮಾಡೋಣ. ಪದ್ಯನನ್ನು ವಿಮರ್ಶಿಸುವ ಮೊದಲು, ಈ ಪದ್ಯ ತಿಳಿಸುವ ಯೋಗ ಶಾಸ್ತ್ರದ ವಿಷಯಗಳನ್ನು ಸಂಕ್ಷಿಪ್ತವಾಗಿ ವಿಚಾರಿಸೋಣ.
ಋಗ್ವೇದದ ಹತ್ತನೇ ಮಂಡಲದ ನಾಸದೀಯ ಸೂಕ್ತದಲ್ಲಿ ಆದಿಯ ವಿಷಯ ಹೇಳಿದೆ. ಆದಿ ಎಂದರೆ ಅನಾದಿ. ಅದಕ್ಕಿಂತ ಮೊದಲಾದ ಇನ್ನಾವ ವಸ್ತುವೂ ಇರವುದಿಲ್ಲ. ಋಗ್ವೇದದ ಪ್ರಕಾರ ಮೊದಲಿಗೆ ಅದು ಏಕವಾಗಿತ್ತು, ಬೆಳಕು ಇರಲಿಲ್ಲ, ಲೋಕವಿರಲಿಲ್ಲ. ಹುಟ್ಟು ಸಾವುಗಳಿರಲಿಲ್ಲ, ಅಮರತ್ವವಿರಲಿಲ್ಲ. ವಾಯುವಿರದ ಉಸಿರಿನಲಿ ಉಸಿರಾಡುತಿತ್ತು. ಕತ್ತಲ ಪರದೆಯೊಳು ಕತ್ತಲು ಸುತ್ತಲೂ ಹರಡಿತ್ತು. ಅಲ್ಲಿ ಗಹನವಾದ ಗಭೀರವಾದ ಅಂಭಸವೆನ್ನುವ ನೀರಿನಂತಹ ದ್ರವ್ಯವಿತ್ತು. ಈ ಅಂಭಸವನ್ನು ಹಿಡಿದಿಡುವ ಪಾತ್ರೆಯ ಆಧಾರವಿರಲಿಲ್ಲ. ಆದಿ ಆಣೊರಣಿಯನ್ ಸ್ಥಿತಿಯಲ್ಲಿತ್ತು (ಅಣುಗಿಂತ ತೃಣದ ಗಾತ್ರವಾಗಿತ್ತು). ತಮಸಿಕ ಸ್ಥಿತಿಯಲ್ಲಿದ್ದ ಆದಿ ತನ್ನ ತಾಪ ಶಕ್ತಿಯಿಂದ ಎಚ್ಚೆದ್ದಿತು. ಅದಕ್ಕೆ “ಬಹುಸ್ಯಾಂ ಪ್ರಜಾಯೇಯೇತಿ” ಅಂದರೆ ಅನೇಕವಾಗುವ ಅಥವಾ ಸೃಷ್ಟಿಯ ಇಚ್ಛೆಯುಂಟಾಯಿತು. ಸೃಷ್ಟಿ ಕಾರ್ಯ ಪ್ರಾರಂಭವಾಯಿತು. ಆಣುಗಿಂತ ತೃಣವಾದ ಆದಿ, ವಿಶ್ವಾಕಾರದ ಅಂಡವಾಯಿತು ಅಂದರೆ ಬ್ರಹ್ಮಾಂಡ ವಾಯಿತು. ಮಹತೋರ್ ಮಹೀಯನ್, ಅಂದರೆ, ನಮ್ಮ ಊಹೆಗೂ ಮೀರಿದ ಮಹತ್ತಿಗಿಂತ ಮಹತ್ತಾದ ಮಹತ್ ಆಗುವ ಶಕ್ತಿಯಿಂದ ಅದಿ “ಅತ್ಯತಿಷ್ಟದ್ದಶಾನ್ಗುಲಂ” ಎನ್ನುವಂತೆ ಸೃಷ್ಟಿಯಲ್ಲಿ ಸರ್ವವನ್ನೂ ಹತ್ತು ಅಂಗುಲದಿಂದ ಆವರಿಸಿತು. ಈ ವಿಷಯಗಳನ್ನು ಅನುಭವಿಗಳು ಹೀಗೆ ಹಾಡಿದ್ದಾರೆ.
ದಿಯಿಂದತ್ತತ್ತ ನೀನೇ ಅಯ್ಯಾ
ಅನಾದಿಯಿಂದತ್ತತ್ತ ನೀನೇ ಅಯ್ಯಾ
ಈ ಎರಡನೂ ಮೀರಿದ ಅತ್ಯತಿಷ್ಠದ್ದಶಾಂಗುಲನಾದೆಯಯ್ಯಾ
-ಚನ್ನಬಸವಣ್ಣ

ಅದ ನೋಡು ನೀ ಅದ ನೋಡು
ಬ್ರಹ್ಮಾನಂದದಿ ಮುಣಿ ಮುಣಿಗಾಡುವುದದ ನೋಡು
ಸುತ್ತಲೂ ವ್ಯಾಪಿಸಿಕೋಂಡಿದೆ ನೋಡು
ಅತ್ತಲು ದಶಕಾಂಗುಲಿಯಿದೆ ನೋಡು
ಅರಿವಿನ ಜಾಲದಿ ತೊಡೆಕಿದೆ ನೋಡು
ಗುರುವಿನ ಕೀಲ ಹಾಕಿದೆ ನೋಡು
ನೋಡೆಂದರೆ ಕಾಣುವುದಿಲ್ಲ
ನೋಡಿದ ಮೇಲೆ ಬಿಡುವುದಿಲ್ಲ
ಹರಿಯೂ ಅಲ್ಲ ಹರನೂ ಅಲ್ಲ
ಅರಿವಿದ ಶಿಶುನಾಳನೆ ಬಲ್ಲ.
-ಶಿಶುನಾಳ ಶರೀಫ

ಆದಿ ಏಕೆ ಲೋಕ ಸೃಷ್ಟಿ ಮಾಡುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಆದಿಯನ್ನು ಮಹಾವಿಷ್ಣು, ಅಥವಾ ಮಹೇಶ್ವರ ಅಥವಾ ಪರಬ್ರಹ್ಮ ಎನ್ನಬಹುದು, ಆ ಆದಿಯಿಂದ ಬ್ರಹ್ಮ ವಿಷ್ಣು ಈಶ್ವರು ಜನಿಸುತ್ತಾರೆ.
ಅರಿವಿನಾ ಅರಿವು ತಾ ಧರೆಯೊಳಗೆ ಮೆರೆದಿಹುದು
ಅರಿವಿನ ಅರಿವ ಹರಿಬೊಮ್ಮರೂ
ಅರಿಯರೈ ಕಾಣ ಸರ್ವಜ್ಞ.

ಸರ್ವಜ್ಞ ಎನ್ನುವಂತೆ ನಾಸದೀಯ ಸೂಕ್ತದ ಪ್ರಕಾರ ಬ್ರಹ್ಮ ವಿಷ್ಣು ಈಶ್ವರ ದೇವಾದಿ ದೇವತೆಗಳೆಲ್ಲ ಆದಿಯಿಂದ ಬಂದವರು. ಆದ್ದರಿಂದ ಅವರೂ ಸೃಷ್ಟಿಯ ಕಾರಣವನ್ನು ಅರಿಯರು.
ಏಕ ಅನೇಕವಾಗುವುದೇ ಸೃಷ್ಟಿ. ಆದಿಗೆ ಅನೇಕವಾಗುವ ಇಚ್ಛೆಯಾದಾಗ ಸೃಷ್ಟಿ ಕಾರ್ಯ ಹಂತ ಹಂತಗಳಾಗಿ ಮುಂದುವರೆಯುವುದು. ಮೊದಲಿಗೆ ಆದಿಯಿಂದ ಶಕ್ತಿ ಜನಿಸುತ್ತದೆ. ಅಂದರೆ ಮೊದಲು ಕಾಣದ ಆದಿಯಲ್ಲೇ ಹುದುಗಿದ್ದ ಶಕ್ತಿಯು ಆದಿಗಿಂತ ಬೆರೆಯಾಗಿ ಕಾಣುತ್ತದೆ. ಆದಿಯನ್ನು ನಾರಯಣ (ನರರ ಮೂಲ) ಎಂದರೆ ಅದರಿಂದ ಉದ್ಭವಿಸುವ ಶಕ್ತಿಯು ಲಕ್ಷ್ಮೀ ಆಗುತ್ತಾಳೆ, ಹಾಗೆಯೇ ಅದನ್ನು ಪರಮ ಶಿವ ಎಂದರೆ ಶಕ್ತಿಯು ಪಾರ್ವತಿ, ಪುರುಷ ಎಂದರೆ ಶಕ್ತಿಯು ಪ್ರಕೃತಿ. ಇಲ್ಲಿ ನಾರಾಯಣ ಲಕ್ಷ್ಮೀ ಎನ್ನೋಣ.
ಪುರುಷ ಸೂಕ್ತದ ಪ್ರಕಾರ, ಆದಿಯನ್ನು ನಾಲಕ್ಕು, ಪಾದಗಳಾಗಿ ಗಣಿಸಿದರೆ, ಒಂದು ಪಾದ (ಅಂದರೆ ೧/೪) ಲೋಕವಾಗುತ್ತದೆ. ಮೂರು ಪಾದ ಶೇಷವಾಗಿ ಉಳಿಯುತ್ತದೆ. ಇದೇ ಆದಿಶೇಷನ ಮೇಲೆ ಮಲಗಿರುವ ಮಹಾವಿಷ್ಣು ಮತ್ತು ಎದ್ದು ಕುಳಿತಿರುವ ಲಕ್ಷ್ಮೀ (ಸದಾ ಲಕ್ಷಿಸುವಳು). ಆದಿ ಅವರ್ಣನೀಯ. ಆದಿ ಕಾಣಬರದಿದ್ದರೂ ಆದಿ ಶೇಷನನ್ನು ಕಾಣಬಹುದು. ಇದಕ್ಕೆ ಸುದರ್ಶನ (ಒಳ್ಳೆಯ ದರ್ಶನ) ಎನ್ನುತ್ತಾರೆ. ಎಚ್ಚೆದ್ದು ಕುಳಿತಿರುವ ಶಕ್ತಿ ಲೋಕದ ಸೃಷ್ಟಿಯನ್ನು ಮುಂದುವರೆಸುತ್ತಾಳೆ.
ಆದಿಯ (ಆದ್ದರಿಂದ ಅದರ ಶಕ್ತಿಯ) ಇಚ್ಛೆಯನ್ನು ಚಿತ್ತ ಅಹಂಕಾರ ಮನಸ್ಸು ಬುದ್ಧಿ ಎಂಬ ಚತುರ್ಮುಖಗಳಾಗಿ ವಿಂಗಡ ಮಾಡಬಹುದು. ಇವು ಬ್ರಹ್ಮನ ನಾಲ್ಕು ಮುಖಗಳು. ಮನಸ್ಸನ್ನು ಸುದರ್ಶನ ಚಕ್ರದಿಂದಲೂ, ಬುದ್ಧಿಯನ್ನು ಶಂಖದಿಂದಲೂ ಸಾಂಕೇತಿಕವಾಗಿ ತೋರಿಸುತ್ತಾರೆ. ಇತರ ಆಯುಧಗಳಿಗೂ ಇದೇ ರೀತಿಯ ಸಂಕೇತಗಳಿವೆ ಮಹತ್ಗೆ-ಗದೆ ಸಂಕೇತ, ಅಹಂಕಾರಕ್ಕೆ ಖಡ್ಗ ಸಂಕೇತ ಇತ್ಯಾದಿ, ಮಹತ್ ಎನ್ನುವುದೊಂದು ಸ್ವಾರಸ್ಯ ವಿಷಯ. ಲಕ್ಷ್ಮೀ ಗದೆ ಹಿಡಿದರೆ ಅವಳ ಮಹತ್ ಶಕ್ತಿ ನಾರಯಣ, ಅದನ್ನು ನಾರಯಣ ಹಿಡೆದರೆ ಮಹತ್ ಶಕ್ತಿ ಲಕ್ಷ್ಮೀ.
ಯೋಗ ಸೂತ್ರದಲ್ಲಿ ಆದಿಯ ಅಂಕಿತ ಓಂಕಾರವೆನ್ನುತ್ತಾರೆ. ಇದು ಏಕದ ನಾದ. ಸೃಷ್ಟಿಯ ಹಂತ ಹಂತದಲ್ಲಿ ಹತ್ತುಬಗೆಯ ನಾದಗಳ ಉಗಮವಾಗುತ್ತವೆ. ಇವುಗಳ ಲಹರಿ ತಮಗೆ ತಾವೆ ಸದಾ ಹರಿಯುವುದರಿಂದ ಅನಾಹತ ಎಂದು ಕರೆಯುತ್ತಾರೆ. ಹತ ನಾದ ಎಂದರೆ ಮೃದಂಗವನ್ನು ತಟ್ಟಿ ಮಾಡುವಂತ, ನಾದ. ನಮಗೆ ಬೇಕಾದಾಗ ಆಡುವ ಮಾತು ಸಹ ಈ ರೀತಿ ಹತ ನಾದ. ಆದಿ, ನಾದಾತೀತವಾದುದರಿಂದ ಅದು ವರ್ಣನೆಗೆ ಬರದ ವಸ್ತು. ಆದ್ದರಿಂದ ಅದನ್ನು ನಾದಾತೀತ ವೆಂದು ಮಾತ್ರ ಹೇಳಬಹುದು. ಇದನ್ನು ಕವಿಗಳು ಈರೀತಿ ಹಾಡುತ್ತಾರೆ
ಆದಿ ಅನಾದಿ ಮೇಲಿಪ್ಪುದೇ ಪರಮ ಪ್ರಣವ
ಆ ಪರಮ ಪ್ರಣವ ಪರಮ ಚಿಚ್ಛಕ್ತಿ
ಆ ಚಿಚ್ಛಕ್ತಿಯ ಸುವರ್ಣ ಪ್ರಭೆಯ ಮೇಲಣ ಪರಮನಾದವೇ ಸುನಾದಬ್ರಹ್ಮ
-ಚನ್ನಬಸವಣ್ಣ

ಬೋಧ ಒಂದೇ ಬ್ರಹ್ಮ ನಾದ ಒಂದೇ
ಸಾದನ ಮಾಡುವ ಹಾದಿ ಒಂದೇ
ಆದಿ ಪದ ಒಂದೇ
-ಶಿಶುನಾಳ ಶರೀಫ

ಆದಿಯಿಂದ ವೇದೋಪನಿಷತ್ಗಳಲ್ಲಿ ಹೇಳುವಂತೆ ಆಕಾಶ, ವಾಯು, ಅಗ್ನಿ, ಜಲ, ಪೃಥಿವಿ ತತ್ತ್ವಗಳ ಉತ್ಪತ್ತಿ ಯಾಗುತ್ತದೆ. ನಂತರ ಸಸ್ಯ ಆಹಾರ ಉತ್ಪತ್ತಿಯಾಗಿ, ಆಹಾರದಿಂದ ಜೀವಿಯ ಉತ್ಪತ್ತಿ ಯಾಗುತ್ತದೆ. ಹಾಗೆ ಜನಿಸಿದ ನರ ಜೀವಿ ಬ್ರಹ್ಮಾಂಡವನ್ನು ಹೋಲುವ ಪಿಂಡಾಂಡ ವಾಗುತ್ತವೆ. ಜಡ, ಜೀವಿತ, ಚರ, ಅಚರ ವಸ್ತುಗಳು ತುಂಬಿದ ನಾಮ ರೂಪದ ಲೋಕ ಉಗಮವಾಗುತ್ತದೆ. ಅಂದರೆ ಪುರುಷ ಪ್ರಕೃತಿ ಈ ಇಬ್ಬರ ಮೂಲದಿಂದ ಈ ಲೋಕ ಹಾಗು ನಾವು, ನೀವು ಜನಿಸುತ್ತೇವೆ. ಆದ್ದರಿಂದ ಆದಿ ಮತ್ತು ಆದಿಯ ಶಕ್ತಿ ಲೋಕದ ಮಾತಾ ಪಿತೃಗಳು.
ಪ್ರಪಂಚವೆಂದರೆ (ಪ್ರ-ಪಂಚ) ಪಂಚ ತತ್ತ್ವಗಳ ನಾನಾ ರೀತಿಯ ಮಿಶ್ರಣದಿಂದ ವಿಸ್ತಾರವದದ್ದು. ಸೃಷ್ಟಿಕಾರ್ಯವನ್ನು ಇದರಿಂದ ಪಂಚೀಕರಣ ಎನ್ನುತ್ತಾರೆ. ಜಗತ್ತಿನಲ್ಲಿ ವಿಷಯಗಳು ಪಂಚ ಭೂತಗಳ ಗುಣಗಳಾದ ಶಬ್ದ ಸ್ಪರ್ಶ ರೂಪ ರಸ ಗಂಧಮಯವಾಗಿದೆ. ಇವುಗಳು ಕ್ರಮವಾಗಿ ಆಕಾಶ, ವಾಯು, ಅಗ್ನಿ (ತೇಜಸ್ಸು) ಜಲ, ಪೃಥ್ವಿ ತತ್ತ್ವಗಳಿಂದ ಬಂದಿವೆ. ಗಂಧದಲ್ಲಿ ಎಲ್ಲ ತತ್ವಗಳು ಇವೆ. ರಸದದಲ್ಲಿ ಗಂಧ ಬಿಟ್ಟು ಮಿಕ್ಕೆಲ್ಲಾ ತತ್ತ್ವಗಳಿವೆ. ಶಬ್ದವನ್ನು, ಮುಟ್ಟಲು, ನೋಡಲೂ, ರುಚಿಸಲೂ ಮೂಸಲೂ ಆಗುವುದಿಲ್ಲ ಕೇಳಲು ಮಾತ್ರ ಸಾಧ್ಯ. ವಾಯುವನ್ನು ಕೇಳಲೂ ಹಾಗೂ ಮುಟ್ಟಲು ಸಾಧ್ಯ- ಇತ್ಯಾದಿ. ಅಂದರೆ ತತ್ತ್ವಗಳು ಹಾಗು ತತ್ತ್ವಗಳ ಗುಣಗಳು ಒಂದು ಸೋಪಾನದ ರೀತಿ ಇರುತ್ತವೆ. ಕಿವಿ, ಚರ್ಮ (ತೊಗಲು), ಕಣ್ಣು, ನಾಲಿಗೆ, ಮತ್ತು ಮೂಗು ಈ ಪಂಚೇಂದ್ರಿಯಗಳ ಮೂಲಕ ಕೇಳುವ, ಸೋಂಕುವ, ರುಚಿಸುವ ಹಾಗೂ ಮೂಸುವ ಅನುಭವಗಳಿಂದ ಪ್ರಪಂಚವನ್ನು ಗ್ರಹಿಸುತ್ತೇವೆ. ಇಂದ್ರಿಯಗಳಿಂದ ವಾಸ್ತವಿಕವಾಗಿಯೂ, ಹಾಗೂ ಕಾಲ್ಪನಿಕವಾಗಿಯೂ ಈ ತತ್ತ್ವಗಳ ಮೂಲಕ ಜಗತ್ತನ್ನು ಅನುಭವಿಸುತ್ತೇವೆ. ಕಾವ್ಯಗಳೂ ಸಹ ಕಾಲ್ಪನಿಕ ಅನುಭವಕ್ಕೆ ಒಂದು ಕಾರಣ. ಈ ಕಾವ್ಯಗಳನ್ನು, ಸ್ಥೂಲ, ರಸ, ದರ್ಶನ, ಸ್ಪರ್ಶ, ನಾದ ಕಾವ್ಯಗಳೆಂದು ವಿಂಗಡಿಸಬಹುದು.
ಕಾಮ, ಕ್ರೋದ, ಮದ ಮಾತ್ಸರ್ಯ ಲೋಭ ಮೋಹ ಎನ್ನುವ ಅರಿಶಡ್ವರ್ಗಗಳು ಸೃಷ್ಟಿಗೆ ಸಹಜ ಲಕ್ಷಣ. ಇದಕ್ಕೆ ಒಳಗಾದ ಜೀವಿಗೆ ವಿಷಯಗಳ ಅಭಾವದಿಂದ ಅತೃಪ್ತಿಯುಂಟಗುತ್ತದೆ.
ಭೂತ ಭೂತವ ಕೂಡಿ ಅದ್ಭುತವಾಯಿತ್ತು
ಕಿಚ್ಚು ಕೋಡಿತ್ತು, ನೀರು ನೀರಡಿಸಿತ್ತು
ಉರಿ ಪವನ ದೋಷದೊಳಗಿರ್ದು
ವಾಯು ಇಮ್ಮಡಿಸಿತ್ತ ಕಂಡೆ ಗುಹೇಶ್ವರಾ

{{ಭೂತ ಭೂತಗಳ ಮಿಶ್ರಣದಲ್ಲಿ ಅದ್ಭುತ ಲೋಕವಾಯಿತು ಜೀವಿಯಲಿ ತನ್ನಮೂಲದರಿವು ತಣ್ಣಗಾಗಿತ್ತು (ವಿಷಯಗಳ ಬಯೆಕೆಯ) ಅತೃಪ್ತ ದಾಹದಿಂದ ದೇಹ ಬಳಲಿತ್ತು ತಾಪತ್ರಯ (ಮನ ಪಕ್ಷಿ ವಿಷಯವ ತಡುಕಿ ಹಾರುವ) ಉಸಿರಿನ ದೋಷದಿಂದ ಇಮ್ಮಡಿಸುವುದ ಕಂಡರು}}
ಈ ದಾಹಗಳ ಮದ್ಯೆ ಸಮರಸವಾಗಿ ಜೀವನ ಮಾಡಬೇಕೆಂದರೆ ಧರ್ಮ ಮಾರ್ಗವನ್ನು ಅನುಸರಿಸಬೇಕು. ನಿಸರ್ಗಕ್ಕೆ ಸಮರಸವಾಗಿ ನಮಗೆ ಹಿತವಾಗಿ ಜೀವನ ಮಾಡುವುದನ್ನೂ ಪರಕ್ಕೆ ಸೇರುವ ದಾರಿಯನ್ನೂ ತಿಳಿಸುವ ಗ್ರಂಥಗಳೇ ನಮ್ಮ ಶಾಸ್ತ್ರಗಳು. ನಿಸರ್ಗದೊಡನೆ ಸಮರಸ ಜೀವನಕ್ಕೆ ‘ಸತ್ಯ’ ಎನ್ನುತ್ತಾರೆ. ಉಪನಿಷತ್ತುಗಳ ಪ್ರಕಾರ, ಈ ಸತ್ಯ ಪದ ಸತ್-ತೀ-ಯಂ ಎನ್ನುವ ಮೂರು ವರ್ಣಗಳ ಸಂಯೋಗದಿಂದ ಆದುದು. ಸತ್ ಎಂದರೆ ಆಮರತ್ವ ತತ್ತ್ವ, ತೀ ಎಂದರೆ ನಶಿಸುವ ನಾವು, ನೀವು, ಯಂ ಎಂದರೆ ನಶ್ವರ ಮತ್ತು ಅಮರತ್ವದ ಸಮರಸ ಸೇತು. ಈ ಸೇತುವಿನಲ್ಲೇ ಅಥವಾ ಸಮರಸ ಪಥದಲ್ಲಿ ನಡೆಯುವುದು, ಸಾಮರಸ್ಯ ಜೀವನ ಅಥವಾ ಸತ್ಯ ಜೀವನ. ಈ ಸತ್ಯ ಮಾರ್ಗವೇ ‘ಸತ್ಯಮೇವ ಜಯತಿ’ ಎನ್ನುವಂತೆ ಈ ಲೋಕದಲ್ಲೂ ಹಾಗೂ ಪರದಲ್ಲೂ ಜಯ ಪ್ರದಾಯಕವಾಗುವುದು.
ಪ್ರಕೃತಿ ಲೋಕವನ್ನು ಒಂದು ನಿಯತಿಯಲ್ಲಿ ಅಥವಾ ಶಾಸನದ ಪ್ರಕಾರ ನಡೆಸುತ್ತದೆ. ಈ ಶಾಸನವನ್ನು ಯಾರೂ ಬಸಲಾಯಿಸಲಾಗುವುದಿಲ್ಲ. ಲೋಕದ ನಿಯತಿಯನ್ನು ತಿಳಿಸುವ ವಿದ್ಯೆಗಳಿಗೆ ಅಪರ ವಿದ್ಯೆ (ವಿಜ್ಞಾನ) ಎನ್ನುತ್ತಾರೆ. ಅಪರ ವಿದ್ಯೆ ನಿಸರ್ಗಕ್ಕೆ ಸಮರಸವಾಗಿ, ನಮಗೆ ಹಿತವಾಗಿ ಜೀವಿಸುವುದಕ್ಕೆ ಅನುಕೂಲವಾಗುತ್ತದೆ. ಭ್ರೂಣದಿಂದ ಬೆಳೆದ ನಮ್ಮ ಉಗುರು, ಆ ಭ್ರೂಣವನ್ನು ಮರೆತಿರುವಂತೆ, ಈ ಲೋಕದಲ್ಲಿ ಜನಿಸಿದ ನಾವು ನಮ್ಮ ಮೂಲವನ್ನು ಮರೆಯುತ್ತೇವೆ. ಜೀವಿಗೆ ತನ್ನ ಮೂಲವನ್ನು ಹುಡುಕುವುದು, ಮೂಲಕ್ಕೆ ಸೇರುವ ಆಸೆಬರುವುದು, ಸ್ವಾಭಾವಿಕ ಲಕ್ಷಣ. ಅ ಮೂಲವನ್ನು ಹುಡುಕುವ ವಿದ್ಯೆಗೆ ಪರವಿದ್ಯೆ (ಜ್ಞಾನ) ಎನ್ನುತ್ತಾರೆ. ಪರವಿದ್ಯೆ ಮೂಲವನ್ನು ಅರಿಯುವ ಕ್ರಮವನ್ನು ತೋರಿಸುತ್ತದೆ. ನಾವು ಎರಡು ವಿದ್ಯೆಗಳಲ್ಲೂ, ಒಂದಕ್ಕೆ ಇನ್ನೊಂದು ಅಡ್ದಿಬರದಂತೆ, ಪ್ರಗತಿಯಾಗಬಹುದು. ಜ್ಞಾನ (ಪರ) ವಿಕಸಿಸಿದರೆ ವಿಜ್ಞಾನ (ಅಪರ).
ನಾವು ಈ ಅದಿಯಿಂದಲೇ ಜನಿಸಿದ್ದರೂ ನಮಗೆ ಅದರ ಅರಿವಿಲ್ಲ. ಇದು ಅಪಸ್ಮಾರ. ನಮ್ಮ ಅಪಸ್ಮಾರದ ಮರೆವಿನ ಸ್ಥಿತಿಯಿಂದ ಪರವನ್ನು ತಿಳಿಯಬೇಕೆನಿಸಿದಾಗ ನಾವು ಬಂದಿರುವ ಮೂಲಕ್ಕೆ ವಾಪಸ್ಸು ಹೋಗಬೇಕು. ಸ್ಥೂಲ ಪೃಥಿವಿ ಸ್ಥಿತಿಯಿಂದ ಅತಿ ಸೂಕ್ಷ್ಮವಾದ ಪರವನ್ನು ಕಾಣಬೇಕು. ಯೋಗಶಾಸ್ತ್ರದ ಪ್ರಕಾರ ಹಾಗೆ ಹೋಗಲು ದೇಹದಲ್ಲಿ ಎಡೆಯಿದೆ. ಆದರೆ ಹಾಗೆ ವಾಪಸ್ಸು ಹೋಗುವ ದ್ವಾರ ಮುಚ್ಚಿರುತ್ತದೆ. ಆ ದ್ವಾರವನ್ನು ತೆರೆಯಬೇಕು. ನಂತರ ಪಂಚ ತತ್ತ್ವ ಕೇಂದ್ರಗಳನ್ನು ಕ್ರಮವಾಗಿ ಹತ್ತಬೇಕು, ಪೃಥಿವಿಯಿಂದ, ಜಲ, ಅಗ್ನಿ, ವಾಯು ಮತ್ತು ಆಕಾಶ ತತ್ತ್ವವನ್ನು ದಾಟಬೇಕು. ಮಣ್ಣಿನ (ಮೂಲಾಧಾರ ತತ್ತ್ವ) ಗಣಪತಿಯನ್ನು ಚಿಕ್ಕ (ಸ್ವಾಧಿಷ್ಟಾನ ತತ್ತ್ವ) ಕೆರೆಯಲ್ಲಿ ಬಿಟ್ಟು ದೊಡ್ಡಕೆರೆಯಲ್ಲಿ ಏಳು ಎಂದು ಕೇಳಬೇಕು. ತೈಲವನ್ನು ಅಗ್ನಿಗೆ (ಮಣೀ ಪುರ ತತ್ವ) ಸುರಿದು ಹೋಮದ ಹೊಗೆಯಂತೆ (ಆನಾಹತ ತತ್ತ್ವ) ಹೊಗೆಯಾಗಬೇಕು. ಆ ಹೊಗೆ ಅಂತರಿಕ್ಷದಲ್ಲಿ (ವಿಶುದ್ಧ ತತ್ತ್ವ ಮತ್ತು ಮುಂದೆಹೋಗಿ) ಲಯವಾಗಬೇಕು. ನಂತರ ಸೂಕ್ಷ್ಮವಾದ ನಾದ ಜ್ಯೋತಿಗಳನ್ನು ದಾಟಿ, ಲಕ್ಷ್ಮೀ ನಾರಯಣರನ್ನು ನೋಡಬಹುದು. ಆದರೆ ಕೊನೆಗೆ ಆದಿಯನ್ನು ಕಾಣ ಬೇಕಾದರೆ, ಈ ಲಕ್ಷ್ಮಿಯನ್ನೂ ಸಹ ದಾಟಬೇಕು. ಆಗ ಸಿಗುವುದು ನಾರಯಣನೊಬ್ಬನೆ. ಅಲ್ಲಿ ನಾವು ಮತ್ತೆ ಐಕ್ಯವಾಗಬಹುದು. ಪುರಾಣದಲ್ಲಿ ಆದಿಯನ್ನು ಸೇರುವ ವಿವರವನ್ನು ಶ್ರಿ ರಾಮ, ಸೀತೆಯನ್ನು ತ್ಯೆಜಿಸುವು ಕಥೆ, ಲಕ್ಶ್ಮೀ ಕೋಪಮಾಡಿಕೊಂಡು ತಿರುಪತಿಬೆಟ್ಟದ ಕೆಳಗೆ ಇರುವ ಕಥೆ ಇತ್ಯಾದಿ ಕಥೆಗಳಲ್ಲಿ ಸರಳವಾಗಿ ವಿವರಿಸುತ್ತವೆ. ಈ ಕಥೆಗಳು ಮೇಲೆ ಹೇಳಿದಂತೆ ಆದಿಯನ್ನು ತಲುಪುವ ದೃಷ್ಟಾಂತ. ಅದಕ್ಕೋಸ್ಕರ ನಾವು ರಾಮನನ್ನು ಸೀತೆಯನ್ನು ಬಿಟ್ಟನೆಂದು ತೆಗಳಬೇಕಾಗಿಲ್ಲ. ತಿರುಪತಿ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತುವಾಗ ಆದಿಯನ್ನು ಮತ್ತೆ ಸೇರುವ ಎಷ್ಟು ಕಷ್ಟ ಸಾದ್ಯವಾದ ವಿಷಯವನ್ನು ನೆನಯಬಹುದು.
ಸೃಷ್ಟಿಯಲ್ಲಿ ನಾವಿರುವ ನರರ ಸ್ಥಿತಿಯಿಂದ ಆದಿಯೆಡೆಗೆ ಹಿಂತಿರುಗಿ ಹೋಗುವುದೇ ಆಧ್ಯಾತ್ಮ ಪ್ರಯಾಣ. ಮೇಲೆ ಹೇಳಿದ ಲೋಕ ಉತ್ಪತ್ತಿಯಾಗುವ ಹಂತಗಳು ಲೋಕದಿಂದ ಹಿಂತಿರುಗಿ ಹೋಗುವಾಗ ಕಾಣುತ್ತವೆ. ಆಂದರೆ ನಾವು ಪರವನ್ನು ಅರಸಿ ಹೋಗುವಾಗ ನಾನಾ ರೀತಿಯ ನಾದ ಜ್ಯೋತಿಗಳ ಅನುಭವಗಳಾಗುತ್ತವೆ. ಈ ಪ್ರಯಾಣದ ವಿವರಗಳನ್ನು ತಿಳಿಸುವ ಕವನಗಳು ಅಧ್ಯಾತ್ಮ ಕವನಗಳು. ಯೋಗೋಪನಿಷತ್ಗಳಲ್ಲಿ ಈ ಅನುಭವಗಳ ವಿವರಗಳನ್ನು ಕಾಣಬದುದು.
ನಾವೆಲ್ಲರೂ ಕವಿಗಳಂತೆ ಆಧ್ಯಾತ್ಮ ವಿಷಯಗಳ ಅನುಭವಿಗಳಾಗಿರುವುದಿಲ್ಲ. ಆದ್ದರಿಂದ ನಾವು ಅನುಭವಿಸಿದ ಜೀವನದ ವಿಷಯಗಳ ಹೊಲಿಕೆಯಲ್ಲಿ ಅನುಭವಗಳನ್ನು ಆಧ್ಯಾತ್ಮ ಪ್ರಯಾಣವನ್ನು ವಿವರಿಸುತ್ತಾರೆ. ಡಿವಿಜಿಯವರು ಅನ್ನುವಂತೆ ಈ “ಅಳೆದು ಬಗೆದಾಡುವಾ” ಕವನಗಳಿಗೆ ”ರೂಢಾರ್ಥ ಒಂದುಂಟು, ಗೂಢಾರ್ಥ ಒಂದುಂಟು“. ಯೋಗಿಗಳು ಈ ಕಾವ್ಯ ವಿದ್ಯೆಯನ್ನು ಕರಗತ ಮಾಡಿಕೊಂಡಿರುವುದು ಅವರ ಕವನಗಳಲ್ಲಿ ತೋರಿಬರುವುದು. ಅಂತರಂಗದ ಮೃದಂಗದ ಪದ್ಯವೂ ಈ ತರಹದ ಆಧ್ಯಾತ್ಮ ಪ್ರಯಾಣದ ಪದ್ಯ.
ಅಂತರಂಗದ ಮೃದಂಗದ ಪದ್ಯ
(ಮೈಸೂರು ಅನಂತ ಸ್ವಾಮಿಯವರು ಹಾಡಿರುವ ಭಾಗಗಳು ಮಾತ್ರ)
ಆಂತರಂಗದ ಮೃದಂಗ ಅಂತು ತುಂತ ನಾನಾ,
ಚಿತ್ತ ತಾಳ ಬಾರಿಸುತಲಿತ್ತು ಜಣ್ ಜಣಣಣಾಣ,
ನೆನೆಹು ತಂತಿ ಮೀಟುತ್ತಿತ್ತು ತಂ ತನನತಾನ

ಹಲವು ಜನುಮದಿಂದ ಬಂದ ಯಾವುದೋನುಜ್ಞಾನ
ಏಕನಾದಂದದೊಂದು ಕಾಣಾದ ವಿತಾನ
ತನಗೆ ತಾನು ಕಾಣುತಿಹುದು ನೂಲುತಿಹುದು ಗಾನ
{{ತನಗೆ ತಾನು ಸೋಲುತಿಹುದು ನೂಲುತಿಹುದು ಗಾನ ||}}

ಕಲ್ಪದಾದಿಯಲ್ಲೇ ನನ್ನ ನಿನ್ನ ವಿರಹವಾಗಿ,
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ,
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣುತಾಗಿ

ಕತ್ತಲಲ್ಲಿ ಬೆಳಕು ಮಿಂಚಿ ಅಡಗಿತೇಳು ಬಣ್ಣ,
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿತಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ

ವಿಮರ್ಶೆ: ಮೇಲೆ ಹೇಳಿದ ವಿಚಾರ ಧಾರೆಯಲ್ಲಿ ಕವನವನ್ನು ವಿಮರ್ಶಿಸೋಣ
“ಆಂತರಂಗದ ಮೃದಂಗ ಅಂತು ತುಂತ ನಾನಾ,
ಚಿತ್ತ ತಾಳ ಬಾರಿಸುತಲಿತ್ತು ಜಣ್ ಜಣಣಣಾಣ,
ನೆನೆಹು ತಂತಿ ಮೀಟುತ್ತಿತ್ತು ತಂ ತನನತಾನ”
ಆಂತರಂಗದ ಮೃದಂಗ ಅಂತು ತುಂತ ನಾನಾ

ಅಂತರಂಗ ವೆಂದರೆ ನಮ್ಮ ಪ್ರಜ್ಞೆಯ ಹಾಗೂ ಭಾವಗಳ ವೇದಿಕೆ. ಈ ರಂಗದ ಮೃದಂಗವನ್ನು ಅಂತರಂಗದ ಮೃದಂಗ ವೆಂದಿದ್ದಾರೆ. ಆಂದರೆ ಇದು ಅಂತರಂಗದ ವಾದ್ಯಗಳ ನಾದ ಲಹರಿ. ಹಲಸಿನ ಮರದ ಕಾಂಡವನ್ನು ಕೊಳವೆಯಂತೆ ಟೊಳ್ಳು ಮಾಡಿ ಎರಡೂ ಕಡೆಗಳಲ್ಲಿ ಚರ್ಮವನ್ನು ಹೊದಿಸಿ ಬಿಗಿಯಾಗಿರುವಂತೆ ಹುರಿಯಿಂದ ಕಟ್ಟಿದರೆ ವಾಡಿಕೆಯಲ್ಲಿರುವ ಮೃದಂಗ ವಾಗುತ್ತದೆ. ಹಲಸಿನ ಮರದ ಬದಲು ಮೃತ್ತಿಕೆಯನ್ನು (ಮಣ್ಣನ್ನು) ಘಟದಂತೆ ಮಾಡಿ ಮೃದಂಗ ಮಾಡುತ್ತಾರೆ. ಆಂತಹ ವಾದ್ಯವನ್ನು ಮೃತ್ತಂಗ ಎಂದು ಕರೆಯುತ್ತಾರೆ. ಮೃದಂಗ ಈ ಮೃತ್ತಂಗದ ಪರ್ಯಾಯ ಪದ.
ಈ ಅಂತರಂಗದ ಮೃದಂಗಕ್ಕೆ ಹೊರಲೋಕದ ಮೃದಂಗದ ಹೋಲಿಕೆಯಿದೆ. ಆಂತರಂಗ ವೆಂದರೆ ನಮ್ಮ ದೇಹದ ಒಳ ಭಾಗ. ಪಂಚ ಭೂತಗಳಿಂದ ಆದದ್ದು. ಇಲ್ಲೂ ಪೃಥಿವಿಯ (ಮಣ್ಣಿನ) ತತ್ತ್ವವಿದೆ, ಸ್ನಾಯುಗಳ ಮತ್ತು ಇತರ ಕೊಳವೆಗಳಿವೆ. ಚರ್ಮವಿದೆ ಹಾಗೂ ಉಸಿರಾಟವಿದೆ. ಆ ಉಸಿರು ದೆಹದಿಂದ ಹೊರಕ್ಕೆ ಹೋಗುವಾಗ ಹಾಗೂ ಒಳಕ್ಕೆ ಬರುವಾಗ, ಹಂ ಸಃ ಎಂದು ಶಬ್ದ ಮಾಡುತ್ತದೆ. ಇದು ಯೋಗದ ದೃಷ್ಟಿಯಲ್ಲಿ ಸರಸ್ವತಿಯ ವಾಹನ ಹಂಸ. ಉಸಿರಾಟವಿರುವವರೆಗೆ ನಮ್ಮ ಬದುಕು. ಆದ್ದರಿಂದ ಪ್ರತಿಜೀವಿಯೂ ಜೀವಂತ ಅಜಪ ಜಪ ಮಾಡುತ್ತವೆ ಎನ್ನುತ್ತಾರೆ. ಆಂದರೆ ಮತ್ತೇನನ್ನು ಮಾಡುತ್ತಿದ್ದರೂ ಪ್ರತ್ಯೇಕವಾದ ಪ್ರಯತ್ನವಿಲ್ಲದೇ ಈ ಹಂಸ ಜಪದ ಉಸಿರಾಟ ನಡೆಯುತ್ತಿರುತ್ತದೆ. ಇದು ಜೀವಿಯ ಅಜಪ ಜಪ. ಆದಿಯೆಡೆಗೆ ಹಿಂತಿರುಗಿ ಹೋಗಿ ಸೇರಿದಾಗ ಹಂಸವೂ ತಿರುಗಿ ಸೋಹಂ ಆಗುತ್ತದೆ ಎನ್ನುತ್ತಾರೆ.
ಮುಂದುವರೆಯುವುದು.....