ಅಮೆರಿಕನ್ನಡ
Amerikannada
“ಆಂತರಂಗದ ಮೃದಂಗ ಅಂತು ತುಂತ ನಾನಾ”
ದ.ರಾ. ಬೇಂದ್ರೆಯವರ ಕವನದ ಒಂದು ನೋಟ
ಭಾಗ-೨

ವಿಶ್ವ, ಸ್ಯಾನ ರಮೋನ್, ಕ್ಯಾಲಿಫೋರ್ನಿಯ
ಹೊರಲೋಕದಲ್ಲಿ ಮೃದಂಗ ಬಾರಿಸುವರು, ಮೃದಂಗವನ್ನು ಅಡ್ಡಲಾಗಿಟ್ಟುಕೊಂಡು ಎಡಬಲದ ಚರ್ಮಗಳನ್ನು ಬೆರಳುಗಳನ್ನು ನಿಪುಣತನದಿಂದ ತಟ್ಟಿ ನಾನಾ ವಿಧವಾದ ನಾದ ಮಾಡುತ್ತಾರೆ. ಅಂತರಂಗದ ಮೃದಂಗದಲ್ಲೆ ವಾದ್ಯ ಬಾರಿಸುವರು ಬೇರೆಯಾಗಿ ಯಾರು ಇಲ್ಲ. ನಮ್ಮ ದೇಹದ ಎಡ ಬಲ ಭಾಗಗಳು ಅರ್ಧನಾರಿಶ್ವರನಂತೆ. ಎಡಭಾಗಶಕ್ತಿಯಂತೆ ನಾರೀಮಯ ಬಲಭಾಗ ಶಿವನಂತೆ ನರಮಯ, ಈ ಶಿವ ಶಕ್ತಿಗಳಿಗೆ ಅನುಗುಣವಾಗೆ ಪ್ರಾಣ ಅಪಾನ ವಾಯುಗಳಿವೆ.
ಅಷ್ಟದಳ ಕಮಲದಲಿ ಕಟ್ಟಿತಿರುಗುವ ಹಂಸ
ಮೆಟ್ಟುವ ದಳದ ನಡುವಿನಲಿ ಇರುವುದನ್ನು
ಮುಟ್ಟುವನೆ ಯೋಗಿ ಸರ್ವಜ್ಞ,

ಯೋಗ ಶಾಸ್ತ್ರದ ಪ್ರಕಾರ ದೇಹದಲ್ಲಿ ಅನೇಕ ಶಕ್ತಿ ಕೇಂದ್ರಗಳಿವೆ. ಅಷ್ಟದಳ ಪದ್ಮವಿರುವುದೂ ಅಂತಹ ಒಂದು ಶಕ್ತಿ ಕೇಂದ್ರ. ಮೇಲಿನ ಸರ್ವಜ್ಞ ಪದದಲ್ಲಿ ಗೂಟಕ್ಕೆ ಕಟ್ಟಿರುವಂತೆ ತಿರುಗುತಿರುವ ಹಂಸ (ಮೇಲೆಹೇಳಿದಂತೆ ಪ್ರಾಣ ವಾಯು) ಮೆಟ್ಟುವ ದಳದ ನಡುವೆ ಇರುವುದು, ಅಂದರೆ ಸುಷುಮ್ನ ನಾಳ. ಅದನ್ನು ಮುಟ್ಟುವನೇ ಯೋಗಿಯೆನ್ನುತ್ತಾರೆ.
ವೇದವೇ ಮೊಲೆ ನಾಲ್ಕು ನಾದವೇ ನೊರೆಹಾಲು
ಸಾಧನೆ ಎಂಬುದು ಶಿವಯೋಗಿಗಲ್ಲದೆ
ವಾದಿಗಳಿಗುಂಟೆ ಸರ್ವಜ್ಞ.

ಆಂತಹ ಯೋಗಿಗೆ ಕೇಳುವ ನಾದವೇ ನೊರೆಹಾಲು ಎನ್ನುತ್ತಾರೆ. ಯೋಗಾಭ್ಯಾಸದಲ್ಲಿ ಮುಂದುವರೆದು ಯೋಗ ಕ್ರಿಯೆಯಲ್ಲಿ ಶಿವ ಶಕ್ತಿಯ ಸಂಯೋಗದಿಂದ (ಅಂದರೆ ಶಿವ ಪಾರ್ವತಿಯರ ಕಲ್ಯಾಣವಾದಾಗ) ಯೋಗಿಗೆ ಕೇಳುವ ನಾದಗಳಿಗೆ ಅನಾಹತ ನಾದ ಎನ್ನುತ್ತಾರೆ. ಅವರಿಗೆ ಅಂತರಂಗದಲ್ಲಿ ಹತ್ತು ನಾದಗಳು ಕೇಳುತ್ತವಂತೆ. ಇವು: ಚಿಣ್, ಚಿ೦ಚಿಣ್, ಘಂಟ, ಶಂಖ, ತಂತ್ರಿ, ತಾಳ, ವೇಣು, ಭೇರಿ, ಮೃದಂಗ, ಮೇಘ ನಾದಗಳು (ಇವನ್ನೇ ದೇವಾಲಯದಲ್ಲಿ ಮಂಗಳಾರತಿಯಾಗುವಾಗ ಉಪಯೋಗಿಸುವುದು).
ಅಂಡದೊಳಗೆ ಆಡುತಾನೆ ಭಾನು
ಮಂಡಲದೊಳು ನಾರಾಯಣನೆಂಬುವನೆ
ಕುಂಡಲಿತುದಿಯೊಳಿದಾನೆ ನಮ್ಮ ಪು-
ರಂದರ ವಿಟ್ಟಲ ಪಾಲಿಸುತಾನೆ || -ದಾಸರ ಕವನ

ಮೂಲಾಧಾರ ಕುಂಡಲಿಯ ಸ್ಥಾನ. ನಾರಯಣ ಅದರ ತುದಿಯಲ್ಲಿದ್ದಾನೆ. ಆಂತರಂಗ ಮೇಲೆ ಹೇಳಿದಂತೆ ನಾರಾಯಣ ಆಡುವ ರಂಗ. ಶಿವಶಕ್ತಿಯರಾಡುವ ಅಂತರಂಗವೇ ಈ ಕವನದ ವೇದಿಕೆ. ಆವೇದಿಕೆಯಲ್ಲಿ ಕೇಳುವ ನಾದವೇ ಅಂತರಂಗದ ಮೃದಂಗ ನಾದ.
ಚಿತ್ತ ತಾಳ ಬಾರಿಸುತಲಿತ್ತು ಜಣ್ ಜಣಣಣಾಣ,
ನೆನೆಹು ತಂತಿ ಮೀಟುತ್ತಿತ್ತು ತಂ ತನನತಾನ

ಸೃಷ್ಟಿಗೆ ಮನಸ್ಸು ಅಹಂಕಾರ ಚಿತ್ತ ಬುದ್ಧಿ ಇವು ಚತುರ್ಮುಖಗಳು. ನಮ್ಮ ಒಳಪ್ರಪಂಚದಲ್ಲೂ ಈ ಚತುರ್ಮುಖಗಳಿವೆ. ಇವಕ್ಕೆ ಅಂತಃ ಕರಣ ಎನ್ನುತ್ತಾರೆ. ಇಲ್ಲಿ ಅಹಂಕಾರ ಎಂದರೆ ರೂಢಾರ್ಥದ ಹೆಮ್ಮೆ, ಕೊಬ್ಬಲ್ಲ. ಅದು ದುರಂಹಾರ. ಇದು ಏಕ ಅನೇಕವಾದಾಗ, ನಾನು ನೀನು ಎನ್ನುವ ಬೇಧ ಬಾವನೆಯಲ್ಲಿ ನನ್ನದು ಎನ್ನುವುದು. ಉದಾಹರಣೆಗೆ ಎಲ್ಲರಿಗೂ ಕಾಣುವ ಸೂರ್ಯನ ಬೆಳಕನ್ನು “ನನಗೆ” ಕಾಣುತ್ತದೆ ಎನ್ನುವ ಅಹಂ ಬಾವನೆ. ಇವುಗಳು ಸದಾಕಾಲ ಕೆಲಸಮಾಡುತ್ತಿರುತ್ತವೆ.
ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ!
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ!
ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ!
ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ!
ಚೆನ್ನಮಲ್ಲಿಕಾರ್ಜುನ, ನೀನೊಡ್ಡಿದ ಮಾಯೆಯನಾರೂ ಗೆಲಬಾರದು

ಅಕ್ಕಮಹದೇವಿಯಕ್ಕ ಹೇಳುವಂತೆ ಪ್ರಾಣಕ್ಕೂ ಮನಸ್ಸಿಗೂ, ನೆನಪಿಗೂ ನಿಕಟವಾದ ಸಂಬಂಧವಿದೆ. ನಾವಾಡುವ ಉಸಿರು ನಮ್ಮ ಮನ ಪಕ್ಷಿಯ ರೆಕ್ಕೆಗಳು ಎನ್ನುತ್ತಾರೆ. ಈ ರೆಕ್ಕೆಗಳನ್ನು ಉಪಯೋಗಿಸಿ ಮನಸ್ಸು ಪಕ್ಷಿಯಂತೆ ಸದಾಕಾಲ ಹಾರಾಡುತ್ತದೆ. ಆದು ಹುಡುಕುವುದು ವಿಷಯಗಳನ್ನು. ಅಂತರಂಗದಲ್ಲಿ ಚಿತ್ತದ ತಾಳ, ನೆನಹಿನ ತಂತಿಯ ಶೃತಿ. ಇವು ಅಂತರಂಗದ ವೇದಿಕಯ ಪಕ್ಕವಾದ್ಯಗಳು. ಅದನ್ನು ಹದದಲ್ಲಿ ಇಟ್ಟು ಕೊಳ್ಳುವುದು ಗೆಲ್ಲಲಾರದ ಆಟ. ಚಿತ್ತಶುದ್ಧಿ ಯಾದರೆ ಯೋಗದಲ್ಲಿ ಮುಂದುವರೆಯಬಹುದು. ಆ ಚಿತ್ತಶುದ್ಧಿಗಾಗಿ ಪ್ರಾಣಾಯಾಮ ಮಾಡಿದರೆ ಈ ಹಕ್ಕಿಯ ರೆಕ್ಕೆಗಳನ್ನು ಕತ್ತರಿಸಿದಂತಾಗಿ ಮನವು ಒಂದೆಡೆಯಲ್ಲಿ ಸೇರುತ್ತದೆ.
ಎವೆಯ ಹಾಕದೆ ಮೇಲೆ ನೋಡು ಮುಂದೆ
ತವಕದಿಂದ ವಾಯು ಬಂಧನ ಮಾಡು
ಸವಿದು ನಾದವ ಪಾನ ಮಾಡು ಅಲ್ಲಿ
ನವ ವಿಧ ಭಕ್ತಿಲಿ ನಲಿ ನಲಿದಾಡು || -ಮೇಲಿನ ದಾಸರ ಕವನದ ಮೊದಲಭಾಗ

ಆ ಆಂತರಂಗದಲ್ಲಿ ಪ್ರಾಣಾಯಾಮ ಮಾಡಿ ಏಕಾಗ್ರತೆಯಿಂದ ನೋಡಿದರೆ, ನಾದಗಳ ಪಾನ ಮಾಡಬಹುದು. ಆ ನೋಟದಲ್ಲಿ ಮಗ್ನರಾದವರಿಗೆ ಒಂಬತ್ತು ವಿಧ ಭಕ್ತಿ ರಸ ಹರಿಯುತ್ತದೆ.
ನೆನಪು ಚಿತ್ತಗಳ ಕುಣಿತದ ಮಧ್ಯದಲ್ಲಿ ಅಂತರಂಗದ ಮೃದಂಗ ನಾದ ಕೇಳುವುದಂತೆ. ಆಂದರೆ ಯೋಗದಲ್ಲಿ ಮುಂದುವರೆದಂತೆ ನಿತ್ಯಜೀವನದ ಮಧ್ಯೆ ಮೃದಂಗ ನಾದ ಸದಾ ತೈಲಧಾರೆಯಂತೆ ಹರಿಯುವುದು. ಅದು ಶುದ್ಧಿಯಾಗುವಾಗ ಯೋಗದ ನಾದ ಕೇಳುತ್ತ ಚಿತ್ತದ ಹಳೆಯ ಖಡತಗಳನ್ನೆಲ್ಲ ಹೊರಗೆ ಹಾಕಿ, ನೆನೆಪುಗಳು ಕಾರಣವಾದ ಚಿತ್ತ ಶುದ್ಧಿಯಾಗುತ್ತದೆ. ಆಗ ನಾದದ ಸವಿಗೆ ಭಕ್ತಿರಸಗಳ ರಸಕ್ಕೆ ಕುಣಿಯುವ ದೃಷ್ಯವನ್ನು ಇಲ್ಲಿ ವಿವರಿಸಿದಂತಿದೆ.
“ಕಲ್ಪದಾದಿಯಲ್ಲೇ ನನ್ನ ನಿನ್ನ ವಿರಹವಾಗಿ,
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ,
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣುತಾಗಿ”

ಕಲ್ಪದಾದಿಯಲ್ಲೇ ನನ್ನ ನಿನ್ನ ವಿರಹವಾಗಿ, ಇದು ಜೀವಿಯ ಕಥೆ - ಕಲ್ಪಕಾಲದಲ್ಲಿ ಆದಿಯಿಂದ ಬೆರೆಯಾಗಿ ನಾನಾಗಿ ಬೆಳೆದು, ಜೀವನದಲ್ಲಿ ಆದಿಯ ಸಂಬಂಧವನ್ನು ಮರೆಯುವುದು ವಿರಹ ಅಥವಾ ವಿಯೋಗ. ಇದಕ್ಕೆ ಮೇಲೆಹೇಳಿದಂತೆ ಅಪಸ್ಮಾರ ವೆನ್ನುತ್ತಾರೆ. ಸಾಂಕೇತಿಕವಾಗಿ ನಾವು ಅಚರಿಸುವ ಹಬ್ಬ ಹರಿದಿನಗಳು ನಮ್ಮಲ್ಲಿ ನಾವು ಆದಿಯಿಂದ ಬಂದ ಅಭಿಜ್ಞಾನವನ್ನು ತೀಡುವುದಂತೆ. ಆಗ “ಅಲ್ಲಿದೇ ನಮ್ಮನೆ ಇಲ್ಲಿ ಬಂದೆ ಸುಮ್ಮನೆ” ಎನ್ನುವ ದಾಸರ ಪದ ವಿವರಿಸುವಂತೆ ನಮ್ಮ ಮನೆಯ ಅರಿವಾಗಿ ನಾವು ಮನೆಗೆ ವಾಪಸ್ಸು ಹೋಗಲು ತವಕಿಸುತ್ತೇವಂತೆ. ಯೋಗ ಮಾರ್ಗವನ್ನು ಹುಡುಕುತ್ತೇವಂತೆ. ಆಡಿಗರು ಈ ಕಲ್ಪದಾದಿಯ ವಿರಹ ಹಾಗೂ ಕಾಣುವ ಕಣ್ಣು ಹೋಗುವುದನ್ನು ಈ ರೀತಿ ವಿವರಿಸುತ್ತಾರೆ.
ಮೊದಲನರಿಯದಾದಿಯಿಂದ ಆದಿತಿಮಿರದುದರದಿಂದ ಮೂಡಿಬಂದೆನೋ .. ...
ಹುಟ್ಟು ಬಾಳು ಸಾವನುಂಡು ಕಲ್ಪಹೋದವೋ

ಶರಣು ಶರಣಾರ್ಥಿ ಎಲೆ ತಾಯೆ,
ಧರೆ ಆಕಾಶ ಮನೆಗಟ್ಟದಂದು,
ಹರಿವನಲ ಅಗ್ನಿ ಜಲ ಮಳೆದೋರದಂದು ಹುಟ್ಟಿದಳೆಮ್ಮವ್ವೆ,
ಅದಕೆ ಮುನ್ನಲೆ ಹುಟ್ಟದೇ ಬೆಳದ ನಮ್ಮಯ್ಯ,
ಈ ಇಬ್ಬರ ಬಸುರಿನಲಿ ಬಂದೆ ನಾನು..

ಅಲ್ಲಮರ ವಚನದಲ್ಲಿ ‘ಹುಟ್ಟದೇ ಬೆಳದ ನಮ್ಮಯ್ಯ’ ಆದಿ ಹಾಗೂ ಆದಿಯಿಂದ ಉಗಮವಾದ ಲೋಕ. ಹರಿವನಲ ಅಗ್ನಿ ಜಲ ಆದಿಯಿಂದ ಪಂಚ ಭೂತಗಳ ಉಗಮ. ಅದ್ದಕ್ಕಿಂತ ಮುಂಚೆಯ ಹುಟ್ಟಿದವಳು ಶಕ್ತಿ. ಆ ಇಬ್ಬರ ಬಸುರಿನಲಿ ಬಂದ ನಾನು ಕಲ್ಪದಾದಿಯಿಂದ ಆದ ನನ್ನ ನಿನ್ನ ವಿರಹ.
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ, ಮೂಲವನ್ನು ಹುಡುಕುವುದು ಅಷ್ಟು ಸುಲಭ ಸಾದ್ಯವಲ್ಲ. ಮೇಲೆ ಹೇಳಿದಂತೆ ಅಕ್ಕಮಹದೇವಿಯ ಗೆಲಲಾರದ ಮಾಯೆ. “ತಸ್ಯ ಧೀರ ಪರಿಜಾನಂತಿ ಯೋನಿಮ್ ” ಎನ್ನುವಂತೆ ಬಹಳ ಧೀರರು ಮಾತ್ರ ದಾಟಿ ಮೂಲವನ್ನು ಅರಿಯ ಬಲ್ಲ ಕಣಿವೆ “ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ” ನಮಗೆ ಮೊದಲು ಜ್ಞಾನ ದೃಷ್ಟಿಯಿದ್ದು, ಆ ಜ್ಞಾನ ದೃಷ್ಟಿ ಕಳೆದು ಹೋಗಿರುವುದೆಲ್ಲಿ ಎಂದು ಹೇಳಬರುವುದಿಲ್ಲ.
ಗಗನದ ಮೇಲೊಂದಭಿನವ ಗಿಳಿ ಹುಟ್ಟಿ
ಸಯ ಸಂಭ್ರಮದಲಿ ಮನೆಯ ಮಾಡಿತ್ತು
ಒಂದು ಗಿಳಿ ಇಪ್ಪತ್ತೈದು ಗಿಳಿಯಾಗಿತ್ತು
ಬ್ರಹ್ಮನಾ ಗಿಳಿಗೆ ಹಂಜರವಾದ
ವಿಷ್ಣುವಾ ಗಿಳಿಗೆ ಕೊರೆ ಕೂಳಾದ
ರುದ್ರನಾ ಗಿಳಿಗೆ ತಾ ಕೋಳುವಾದ
ಇಂತೀ ಮೂವರ ಮುಂದಣ ಕಂದನ ನುಂಗಿ
ದೃಷ್ಟನಾಮ ನಷ್ಟವಾಯಿತ್ತು ಇದೆಂತೋ ಗುಹೇಶ್ವರ

ಆಲ್ಲಮರು ಮೇಲಣ ಪದ್ಯದಲ್ಲಿ ಹೇಳುವಂತೆ ಅದಿಯಿಂದ ಗಿಳಿ ಹುಟ್ಟಿ, ಇಪ್ಪತ್ತೈದು ತತ್ತ್ವರೂಪವಾಗಿ ಬ್ರಹ್ಮಗುಣ ಪಂಜರವಾಗಿ, ವಿಷ್ಣುಗುಣ ವಿಷಯಭೋಗದ ಇಂದ್ರಿಯಗಳ ತಾಮಸಿಕ ರುದ್ರಗುಣ ಆವರಿಸಿದ ದೇಹವಾಗುವುದು. ದೇಹವೇ ತಾನು ಎನ್ನುವ ಮನುಜ ಸ್ಥಿತಿ ಯಲ್ಲಿ, ತನ್ನ ಆದಿಯನ್ನು ಮರೆವುದು. ದೃಷ್ಟನಾಮ ನಷ್ಟವಾಗುವುದು.
“ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣುತಾಗಿ” ಇಲ್ಲಿಯ ಮಣ್ಣು ಭೂಲೋಕ (ಪೃಥಿವಿ). ಬೀಳುವುದು ತಲೆ ಮೊದಲಾಗಿ ಹೊರಬರುವ ಶಿಶು ಜನನದ ವಿವರ. ಗರ್ಭ ಉಪನಿಷತ್ ನಲ್ಲಿ ಹೇಳುವಂತೆ, ಶಿಶು ೭-೯ ನೇ ತಿಂಗಳಲ್ಲಿ ಗರ್ಭದಲ್ಲಿ ಜ್ಯೋತಿಕಂಡು ಆದಿಯನ್ನು ನೆನೆದರೂ, ಹುಟ್ಟಿದಾಕ್ಷಣ ‘ಶತವಾಯು’ ಜೀವವನ್ನು ಧರಿಸಿ ಗರ್ಭದಲ್ಲಿ ಕಂಡ ಆದಿಯನ್ನು ಮರೆಯುತ್ತದಂತೆ. ಇದೂ ಸಹ ಸೃಷ್ಟಿ ಸಹಜ. ‘ಮರೆವು’ ನಟರಾಜ ತುಳಿದಿರುವ ‘ಅಪಸ್ಮಾರ’. ಅದನ್ನು ಗೆಲ್ಲಲು ನಟರಾಜ ತೋರುವ ಯೋಗ ಮಾರ್ಗ ತುಳಿಯಬೇಕು. ದುಶ್ಯಂತನಿಗೆ ಶಕುಂತಲೆಯ ಜ್ಞಾಪಕ ಮುದ್ರೆಯುಂಗುರ ತಂದಂದೆ ಈ ಕಳೆದು ಹೋದ ಜ್ಞಾನ ದೃಷ್ಟಿಯನ್ನು ನಮ್ಮಲ್ಲಿ ಸದಾಕಾಲ ಜ್ಞಾಪಿಸುವುದೇ ನಮ್ಮ ಧಾರ್ಮಿಕ ಅಚಾರಗಳ ಉದ್ದೇಶ.
ಹಲವು ಜನುಮದಿಂದ ಬಂದ ಯಾವುದೋನುಜ್ಞಾನ
ಏಕನಾದಂದದೊಂದು ಕಾಣಾದ ವಿತಾನ
ತನಗೆ ತಾನು ಕಾಣುತಿಹುದು ನೂಲುತಿಹುದು ಗಾನ ||
{{ತನಗೆ ತಾನು ಸೋಲುತಿಹುದು ನೂಲುತಿಹುದು ಗಾನ ||}}

ಅನುಜ್ಞಾನ ಎಂದರೆ ಹಿಂದಿನ ವಿಷಯ ಜ್ಞಾಪಕದಲ್ಲಿ ಅಥವಾ ಚೇತನದಲ್ಲಿ ಸ್ತಬ್ಧ ವಾಗಿರುವುದು. ಹಲವು ಜನುಮಗಳಿಂದ ಬಂದ ಸುಪ್ತ ಪ್ರಜ್ಞೆ. ಯೋಗ ಶಾಸ್ತ್ರಗಳಲ್ಲಿ ನಾವು ಹಿಂದೆಮಾಡಿದ ಯೋಗ ಅಭ್ಯಾಸದ ಮುಟ್ಟಿದ ಘಟ್ಟ ಆಳಿಸಿಹೋಗುವುದಿಲ್ಲ. ಜನ್ಮ ಜನ್ಮಕ್ಕೂ ನಮ್ಮೊಂದಿಗೆ ಬರುತ್ತದೆ. ನಮ್ಮಲ್ಲೇ ಕಾಣಬರದ ಹಾಗೆ ಅಚ್ಚುಗೊಂಡಿರುತ್ತದೆ. ಇದು ಗುಪ್ತ ಚಿತ್ರ. ಆಥವಾ ಚಿತ್ರಗುಪ್ತರು ಬರೆಯುವ ದಾಕಲೆ. ನಾವು ಯಾವಘಟ್ಟದಲ್ಲಿ ಸಾಧನೆಯನ್ನು ನಿಲಿಸಿದ್ದೆವೋ ಅಲ್ಲಿಂದ ಈ ಜನ್ಮದಲ್ಲಿ ಯಾವುದೋ ಕಾರಣದಿಂದ ಯೋಗದಲ್ಲಿ ಮುಂದುವರೆಯುತ್ತೇವೆ. ಹಾಗೆ ಜನ್ಮ ಜನ್ಮಗಳಲ್ಲಿ ಯೋಗದಲ್ಲಿ ಮುಂದುವರೆದಾಗ ಅನಾಹತ ನಾದ ಕೇಳುವುದು.
ಭವಭವದಲ್ಲಿ ತೊಳಲಿ ಬಳಲಿತ್ತೆನ್ನ ಮನ
ಆನೇವೆನಯ್ಯ ಹಸಿದುಂಡೊಡೆ
ಉಂಡು ಹಸಿವಾಗಿತ್ತು ಇಂದು ನೀನೊಲಿದೆಯಾಗಿ
ಎನಗೆ ಆಮೃತದ ಅಪಾನಯನವಾಯಿತ್ತು
ಇದು ಕಾರಣ ನೀನಿಕ್ಕಿದ ಮಾಯೆಯನಿನ್ನು ಮುಟ್ಟಿದೆನಾದೊಡೆ
ಆಣೆ ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ

ಹಲವು ಜನುಮವನ್ನು ಇಲ್ಲಿ ಭವಭವಎಂದು ಬಣ್ಣಿಸಿದ್ದಾರೆ ಅಕ್ಕಮಹದೇವಿ. ಯಾವುದೋ ಅನುಜ್ಞಾನದಿಂದ ಇಂದು ಉಂಡರೂ ಹಸಿವಾಗಿ ಅರೆಸುತ್ತಿದ್ದಾಗ ಅವರ ದೇವ ಒಲಿಯುತ್ತಾನೆ. ಯೋಗದ ಅಮೃತಪಾನ ಮಾಡುತ್ತಾರೆ. ಮಾಯೆ ಇನ್ನು ಅವರನ್ನು ತಟ್ಟಲಾರದೆ, ಅವರು ಜೀವನ ಮುಕ್ತರಾಗುತ್ತಾರೆ.
ಕುರುಹುದೊರೆಯಿತು ದೇಹ ಅರಿವನರಿತು ಪ್ರಾಣ
ಹುರುವಾಗಿ ಹೋಯ್ತು ಭವಪಾಶ ಮುಕ್ತಿಯ
ಇರವು ನಿರವಯವು ಸರ್ವಜ್ಞ.

ಆದಿಯಿಂದ ವಿಕಾಸವಾದ ಜಗತ್ತಿನ ದೇಹವೆಂಬ ಅರಿವಾಗಿ, ನಮ್ಮ ಪ್ರಾಣ ಆದಿಯ ಜ್ಞಾನ ಪಡೆದು ಮುಕ್ತಿ ಸಿಕ್ಕಿತು.
ಒಳಗಣ್ಣ ಜ್ಯೋತಿಯ ಬೆಳೆಗನರಿದಾತಂಗೆ
ಬೆಳಗಾದುದೇಳು ಬೇಹಾರಬೇಕೆಂದೆಂಬ
ಕಳವಳವದೇಕೆ ಸರ್ವಜ್ಞ.

ಒಳ ಜ್ಯೋತಿ ತನುವಿನೊಳ ಬಾನು- ದಹರಾಕಾಶದ (ಅಂತರಾಕಶದ) ಸೂರ್ಯ. ಇದನ್ನು ಕಂಡವರಿಗೆ, ಲೋಕದಲ್ಲಿ ಬೆಳಗಾದಾಗ ಏಳುವ ಬೇಹಾರದ (ವ್ಯಾಪರ) ಆತಂಕಗಳಿಲ್ಲ. ಅಂದರೆ ಜಪ ತಪ ಗಳ ಅವಶ್ಯಕತೆಯಿಲ್ಲ. ಸದಾ ಸಾನಿದ್ಯ ಅವರಿಗೆ.
ಹತ್ತು ಅನಾಹತ ನಾದಗಳು ಓಂಕಾರದಿಂದ ಅಥವಾ ಏಕಾನಾದಿಂದ ವಿಕಾಸವಾಗುವ ಗುಂಪು (ವಿತಾನ = ಗುಂಪು); ಹೀಗೆ ಏಕನಾದದಿಂದ ವಿಕಾಸವಾದ ನಾದದ ಗುಂಪು ಸೃಷ್ಟಿಯ ಅಗೋಚರ ನಿಯಮ. ನೂಲುವ, ಸೋಲುವ ನಾದಗಳು ಒಂದು ಚಿಣ್‌ನಿಂದ ಮೇಘನಾದದ ವರೆಗಿನ ಒಂದಕ್ಕೊಂದು ಹೆಣೆದಿರುವ ಗಾನ. ನಾದದೊಂದಿಗೆ ಬೆಳಕು ಸೇರಿದರೆ ತನಗೆ ತಾನೇ ಕಾಣುವುದು. ಇದು ಅಂತರಂಗದ ದೀಪ. ಇಲ್ಲಿ ಹೊರಗಿನ ಲೋಕದ ದೀಪಬೇಕಿಲ್ಲ.
ವೇದಗಳು ಶಾಸ್ತ್ರಗಳು ಲೋಕನೀತಿಗಳೆಲ್ಲ
ಹಾದಿತೋರಲು ನಿಶಿಯೊಳುರಿವ ಪಂಜುಗಳು
ಸೌಧವೇರಿದವಂಗೆ, ನಭವ ಸೇರಿದವಂಗೆ
ಬೀದಿಬೆಳಕಿಂದೇನೋ? ಮಂಕುತಿಮ್ಮ

ಇಲ್ಲಿ ಯೋಗಿ ಸೌಧವೇರಿ ನಭವ ಸೇರಿದ ಅನುಭವಿ. ಅವರಿಗಿನ್ನು ಶಾಸ್ತ್ರ ಪಥದ ಬೆಳಕು ಬೇಕಿಲ್ಲ. ಶಾಸ್ತ್ರದ ಮೂಲವನ್ನು ಯೊಗಿ ಮುಟ್ಟಿದ್ದಾರೆ.
ಕತ್ತಲಲ್ಲಿ ಬೆಳಕು ಮಿಂಚಿ ಅಡಗಿತೇಳು ಬಣ್ಣ,
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿತಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ

“ಕತ್ತಲಲ್ಲಿ ಬೆಳಕು ಮಿಂಚಿ ಅಡಗಿತೇಳು ಬಣ್ಣ” ಈ ಕತ್ತಲು ಆದಿಯ ಕತ್ತಲು (ತಿಮಿರ). ಈ ಕತ್ತಲಿನ ಆದಿಯಿಂದ ಜಗದ ಉಗಮವಾಗುವಾಗ ನಾನಾ ಜ್ಯೋತಿ (ಬಣ್ಣ) ಗಳಿಂದ ಜಗತ್ತನ್ನು ಮೆರಗಿಸುತ್ತದೆ. ಮೂಲದಿಂದ ಜ್ಯೋತಿ ಬಂದು ಏಳು ಬಣ್ಣಗಳಾಗಿ ಬೆಳಗಿ, ಹಿಂತಿರುವಾಗ ಆದಿಯ ಕತ್ತಲಲ್ಲಿ ಆ ಬಣ್ಣಗಳು ಆಡಗುವುದು (ಲಯವಾಗುದು).
ಆದಿಯನ್ನು ಉಪನಿಷತ್ ಈ ರೀತಿ ವಿವರಿಸುತ್ತದೆ.
ನ ತತ್ರ ಸೂರ್ಯೋ ಭಾತಿ ನ ಚನ್ದ್ರತಾರಕಮ್
ನೇಮಾ ವಿದ್ಯುತೋ ಭಾನ್ತಿ ಕುತೋಯಮಗ್ನಿ
ತಮೇವ ಭಾನ್ತಮ್ ಅನುಭಾತಿ ಸರ್ವಂ
ತಸ್ಯ ಭಾಸಾ ಸರ್ವಮಿದಂ ವಿಭಾತಿ

ಬೆಳಗದಲ್ಲಿ ರವಿ ಶಶಿ ತಾರೆಗಳ ಬೆಳಕಿಲ್ಲ
ಬೆಳಗದಲ್ಲಿ ವಿದ್ಯುತ್ ಸಹ ಬೆಳಗುವುದೇನಗ್ನಿ
ಬೆಳಗದೇ ತಾ ಎಲ್ಲವನು ಬೇಳಗಿಸುವುದೋ
ಬೆಳಗುವುದು ಈ ಸಕಲವದರ ಬೆಳಕಿಂದ || -ವಿಶ್ವನ ಅನುವಾದ

“ಮೂಕ ಮೌನ ತೂಕ ಮೀರಿ ಧನಿಯು ಹುಟ್ಟಿತಣ್ಣ”
ಅನಾಹತಸ್ಯ ಶಬ್ದಸ್ಯ ತಸ್ಯ ಶಬ್ದಸ್ಯ ಯೋ ಧ್ವನಿಃ
ಧ್ವನೇರನ್ತರ್ಗತಮ್ ಜ್ಯೋತಿಃ ಜ್ಯೋತಿರನ್ತರ್ಗತಮ್ ಮನಃ
ತನ್ಮನೋ ವಿಲಯಂ ಯಾತಿ ತದ್ವಿಷ್ಣೋಃ ಪರಮಂಪದಮ್

“ನಾದಾಂತೆ ಜ್ಯೋತಿಃ”
ಕವಿ, ಯೋಗಿ ಅಲ್ಲಮರ ವಚನದಲ್ಲಿ ಇದು
“ಎಲೆ ಮನವೇ
ನೀ ನಿನ್ನ ನಿಜವ ತಿಳಿವಡೆ
ಆ ನಿನ್ನ ನಿಜವ ಹೇಳುವೆ ಕೇಳು
ಅದು ಕೇವಲ ಜ್ಯೋತಿ. ಅದು ವರ್ಣಾತೀತ..”

ಇಲ್ಲಿ ವರ್ಣಾತೀತವಾದ ಕೇವಲ ಜ್ಯೋತಿ ಮನದ ನಿಜ ಎಂದು ಸಾಂದರ್ಭಿಕವಾಗಿ ವರ್ಣಾತೀತ ಆದಿಯಿಂದ ಉಗಮವಾದ ಮನದ ಸತ್ಯರೂಪವನ್ನು ಹೇಳಿದೆ.
ನರಭಾಷೆ ಬಣ್ಣಿಪುದೆ ಪರಸತ್ತ್ವ ರೂಪವನು?
ಅರಿಯದದು ನಮ್ಮೆದೆಯ ಭಾವಗಳನೊರೆಯೆ
ಪರಮಾನುಭವಗಳ ಉಲಿಯು ಅನುಭವಿಗಳ ಒಳಕಿವಿಗೆ
ಒರಟುಯಾನವೊ ಭಾಷೆ ಮಂಕುತಿಮ್ಮ

ಇಲ್ಲಿ ಒಳಕಿವಿ, ಅನುಭವ, ಪರಸತ್ತ್ವ ಮತ್ತು ಅದರ ಬಣ್ಣಿಸಲಾರದ ರೂಪ ಇವಗಳು ಸಾಂದರ್ಭಿಕವಾಗಿ ಪ್ರಪಂಚದ ಉಗಮ ಹಂತಗಳನ್ನು ಹೇಳಿದೆ. ಹಿಂತಿರುಗುವಾಗ ಅನಾಹತ ನಾದಗಳು ಕೇಳುತ್ತವೆ, ಬೆಳಕುಗಳು ಕಾಣುತ್ತವೆ, ಎಂದು ಯೋಗ ಶಾಸ್ತ್ರಗಳು ಹೇಳುತ್ತವೆ. ಮೊದಲಿಗೆ ಬರಿ ನಾದ ಕೇಳಿ, ನಂತರ ನಾದದೊಂದಿಗೆ ಬೆಳಕು ಕಂಡು, ನಂತರ ನಾದನಿಂತು ಬೆಳಕು ಮಾತ್ರ ಕಾಣುತ್ತದೆ ಎನ್ನುತ್ತಾರೆ. ಆಗ ಮನ ಜ್ಯೋತಿಯಲ್ಲಿ ಲಯವಾಗುತ್ತದೆ (ಮೇಲೆ ಅಲ್ಲಮರು ಹೇಳುವಂತೆ ಅದು ಮನದ ನಿಜ ಮೂಲ, ಕೇವಲ ಜ್ಯೋತಿ). ಆದಿಯು ನಾದಾತೀತ. ಆದ್ದರಿಂದ ಅದು ಮೂಕ ಮೌನಿ (ಅದ್ದರಿಂದ ದೇವರಪೂಜೆ, ಕೊನೆಗೆ ಮಂತ್ರವಿಲ್ಲದ ಮೌನವಾಗುತ್ತದೆ). ಆದಿ ಗಹನ ಹಾಗು ಗಭೀರವಾದದ್ದು. ಅಂದರೆ ತೂಕವಾದದ್ದು. ಆದಿಯಿಂದ ಮೊದಲು ಹುಟ್ಟುವುದು ಅನಾಹತ ನಾದ, ಅದು ದನಿ. ಹಿಂತಿರುವಾಗ ಧ್ಯಾನದಲ್ಲಿ ಅನಾಹತ ನಾದ ಕೇಳುವುದು.
“ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ” ಜೀವನ ನಡೆಯುವುದು ಹೃದಯ ಕೇಂದ್ರದ ಕೆಳಗಿನ ಲೋಕದಲ್ಲಿ. ಅಂದರೆ ಮೂಲಾಧಾರ, ಸ್ವಾಧಿಷ್ಟಾನ, ಮಣಿಪೂರಕ ಕೇಂದ್ರಗಳಲ್ಲಿ. ಜೀವನ ಸಾಗಿಸುವುದು, ವಂಶ ಮುಂದುವರೆಸುವುದು ಇತ್ಯಾದಿ ಲೋಕ ವ್ಯಾಪಾರಗಳಲ್ಲಿ ತೊಡಗಿರುತ್ತೇವೆ. ಮೇಲೆ ಹೋಗವಾಗ ಈ ಮೂರನ್ನು ದಾಟಿ ಹೃದಯ ಸ್ಥಾನದ ಅನಾಹತ ಕೇಂದ್ರಕ್ಕೆ ಹೋಗಬೇಕು. ಜೀವಿಯ ಮೂರು ಕೇಂದ್ರದ ಜೀವನದ ರಂಗ ಭೂಮಿ (ಮಣ್ಣು ,) ಜಲ ಮತ್ತು ಅಗ್ನಿ (ಕಣ್ಣು). ಇದು ಕಣ್ಣು ಮಣ್ಣುಗಳ ರಂಗ. ಇಲ್ಲಿ ಜೀವಿಯ ಆಡುವುದು ದಿನ ನಿತ್ಯದ ಹಾಡು.
ಹಾಗು, ಬೆನ್ನೆಲಬು ವೀಣೆಯದಂಡ ಎನ್ನುತ್ತಾರೆ. ಹಾಗೂ ಅದು ಕೃಷ್ಣನ ಕೊಳಲು. ದೇಹದ ಅಗ್ನಿಯಿಂದ ಮೂಲಾಧಾರ ತುದಿಯಲೊಂದು ಮಂದ್ರ ವೆಂಬ ವಾಯು ನಿರಂತರವಾಗಿ ಹರಿಯುವ ಬೆನೆಲುಬಿನ ಮಂದ್ರ ಶ್ರುತಿ ಯಾಗುತ್ತದೆ. ಇದು ಕಣ್ಣು ಮಣ್ಣು ಕೂಡುವ ಜಾಗ. ಇಲ್ಲಿ ಹುಟ್ಟುವುದು ವಾಕ್‌ಸಾಮರ್ಥ್ಯ ಕೊಡುವ ನಾದದ ನಿರಂತರ ಶೃತಿ. ಪ್ರತಿ ಕೇಂದ್ರದಲ್ಲು ಅಕ್ಷರಗಳು ಉತ್ಪನ್ನ ವಾಗುತ್ತವೆ. ನಾವು ಮಾತನಾಡುವಾಗ, ನಮ್ಮ ವಾಕ್‌ಶಕ್ತಿ ಸದಾ ಮಿಡಿಯುತ್ತಿರುವ ಮಂದ್ರಶ್ರುತಿಯನ್ನು, ಒಂದು ಕೇಂದ್ರದಲ್ಲಿ ವೀಣೆಯನ್ನು ಮೀಟುವಂತೆ ಮೀಟಿದಾಗ ಆ ಕೇಂದ್ರದ ಅಕ್ಷರಗಳು ಹುಟ್ಟುತ್ತವೆ.
ಕೂಡಲು ಎಂದರೆ ಸಂಗಮ. ಯೋಗ ಎಂದರೆ ಜೀವ ಆತ್ಮ (ಯುಗ್) ಕೂಡುವುದು, ಅಂದರೆ ನಾವು ಯೋಗದ ಮೂಲಕ ಆದಿಯಲ್ಲಿ ಸಂಗಮವಾಗುವುದು. ಈ ಯೋಗದ ಮಾರ್ಗವೂ ಸಹ ಹಲಾವಾರು ಹಂತಗಳಾಗಿರುತ್ತದೆ. ಕಣ್ಣು ಮಣ್ಣು ಕೂಡುವುದು ಯೋಗ ಒಂದು ಧ್ಯಾನ ಕ್ರಮವಾಗಬಹುದು. ಇದು ಕಣ್ಣುಮುಚ್ಚಿ, ಒಳಗಣ್ಣಿನಿಂದ ಮೂಲಾಧಾರವನ್ನು ನೋಡುವ ಕ್ರಮ. ಅಲ್ಲಿ ಓಳ ದೃಷ್ಟಿಯಲ್ಲಿ ಮಂದ್ರ ಸ್ವರವನ್ನು ಇತರ ನಾದಗಳನ್ನು (ಹಾಡು) ಕೇಳಬಹುದು.
ದೀಪಾವಳಿಯಲ್ಲಿ ಪಟಾಕಿ ಹೊಡೆಯುವ ಕ್ರಮವೂ ಈ ನಾದ ಜ್ಯೋತಿಗಳನ್ನು ಸಾಂಕೆತಿಕವಾಗಿ ತೋರಿಸುತ್ತದೆ. ದೀಪಾವಳಿ ದಿನ ಯೋಗಿಕೇಳುವ ನಾದಗಳ ಕೇಂದ್ರಗಳು ಜನಸಾಮಾನ್ಯರಲ್ಲೂ ವಿಕಾಸಗೊಂಡಿರುತ್ತವೆ. ಆದ್ದರಿಂದ ಹಬ್ಬಗಳನ್ನು ಆಚರಿಸುವುದು. ಪಟಾಕಿ ಹೊಡೆಯುವ ಕ್ರಮ, ಮೊದಲು ಬರೀ ಅನೇಪಟಾಕಿ ಇತ್ಯಾದಿ ಸ್ಪೋಟಕಗಳು, ನಾದಮಾತ್ರ ಕೇಳುವದನ್ನು ಸಂಕೇತಿಸುತ್ತದೆ. ನಂತರ ಹೂವಿನ ಕುಂಡ ಇತ್ಯಾದಿಗಳು ನಾದದೊಂದಿಗೆ ಬರುವ ಜ್ಯೋತಿಯನ್ನು ತೋರಿಸುತ್ತವೆ. ನಂತರ ಬರೀ ಸುರ್ ಸುರ್ ಬತ್ತಿ ನಾದ ರಹಿತ ಜ್ಯೋತಿಯನ್ನು ತೋರಿಸುತ್ತದೆ. ನಂತರ ಮೌನ.
ಈ ಸಣ್ಣದೊಂದು ಕವನ ಸಾಂಖ್ಯ ಯೋಗ ಸಾರದ ಗಣಿ. ಆಳಾವಾಗಿ ಹುಡುಕಿದರೆ ಚಿನ್ನದ ಅದಿರು ಸಿಗುವುದು.
ಆಧಾರ:
ಮೈಸೂರು ಚಾಮರಾಜ ನಗರದ ಮಧ್ಯೆ ಹೆಡತಲೆ ಎನ್ನುವ ಊರಲ್ಲಿ ಕಳೆದ ಶತಮಾನದಲ್ಲಿ ಶ್ರೀ ರಂಗ ಎಂಬ ಮಹಾಯೋಗಿ ಹೇಳಿದನ್ನು, ನನ್ನ ಯೋಗ ಪರಂಪರೆಯ ಗುರುಗಳಾದ ಕಾಶೀ ಬಾಬ ಎನ್ನುವ ಶ್ರೀ ಸಮಾಚರಣ ಲಹಿರಿ ಮಹಾಶಯ ಸಂಪ್ರದಾಯದವರು, ತಿಳಿಸಿದ್ದ ನನ್ನ ವಿಮರ್ಶ ಕಥನಕ್ಕೆ ಆಧಾರ. ನನಗೆ ಅವರು ಹೇಳಿದ ಮಾತು ಅರ್ಥವಾದಷ್ಟು ಇಲ್ಲಿ ಹೇಳುತ್ತಿದ್ದೇನೆ. ಆದ್ದರಿಂದ ಶ್ರೀ ರಂಗ ಮಹಾಗುರು, ಸಮಯಾಚರಣ ಲಹರಿ ಮತ್ತು ಸನಾತನ ಧರ್ಮದ ಋಷಿ ಪರಂಪರೆಗೆ (ಆರ್ಷ ಪರಂಪರೆಗೆ) ನಾನು ಹೇಳುವ ಸಕಲವೂ ಸೇರಿದ್ದು. ನಾನು ಮಾಡುವ ತಪ್ಪನ್ನು ಸದಾ ತಿದ್ದುಕೊಳ್ಳುತ್ತಿರುತ್ತೇನೆ. ತಪ್ಪಿದರೆ ದಯವಿಟ್ಟು ತಿಳಿಸಿ.