ಅಮೆರಿಕನ್ನಡ
Amerikannada
ಕಥೆಯಾಗಿ ಹೋದ ಪ್ರಾತಃಸ್ಮರಣೀಯರು
‘ವೇದಜೀವಿ ಗುಂಡಾವಧಾನಿಗಳು’

-ಶಿಕಾರಿಪುರ ಹರಿಹರೇಶ್ವರ
ಮನೆಯ ಹಿರಿಯರೊಬ್ಬರ ಬಗ್ಗೆ ಸವಿನೆನಪುಗಳನ್ನು ಮೆಲುಕು ಹಾಕುತ್ತ, ಸಾಂದ್ರವಾಗಿ ಅವನ್ನು ಒಟ್ಟುಗೂಡಿಸಿ ಬರಹರೂಪವನ್ನು ಕೊಡುತ್ತಿರುವ ಶ್ರೀಮತಿ ಜಯಂತಿ ಅಮೃತೇಶ್ ಅವರ ಪ್ರಯತ್ನ ಸ್ತುತ್ಯರ್ಹವಾದದ್ದು. ತಾವು ಕಲೆಹಾಕಿದ ವಿವರಗಳೊಂದಿಗೆ ಕುಲಬಾಂಧವರನ್ನೆಲ್ಲ ಸಂಪರ್ಕಿಸಿ, ಮೌಲಿಕ-ಲಿಖಿತ ಮಾಹಿತಿ ಗಳನ್ನು ಪರಿಷ್ಕರಿಸಿ, ಆ ಹಿರಿಯರ ವಿಚಾರವಾಗಿ ಒಂದು ಸಮಗ್ರ ಅಧಿಕೃತ ಚಿತ್ರ ದೊರಕುವಂತೆ ಶ್ರೀಮತಿ ಜಯಂತಿ ಅವರು ನಡೆಸಿರುವ ಹಲವು ದಿನಗಳ ಸಾಹಸದ ಫಲಶ್ರುತಿಯಾಗಿ ಹೊರಹೊಮ್ಮಿದೆ- ಈ ಕೃತಿ.
‘ವೇದರತ್ನಂ’ ಬಿರುದಾಂಕಿತ ವೇ|ಬ್ರ|ಶ್ರೀ ಗುಂಡಾವಧಾನಿಗಳು ಮೂವತ್ತರ ದಶಕದ ಮೈಸೂರಿನ ಪ್ರಸಿದ್ಧ ಸಂಸ್ಕೃತ ವಿದ್ವಾಂಸರು. ಬರೆದುದು ಕಡಿಮೆಯಾದರೂ ಪ್ರಾಧ್ಯಾಪಕರಾಗಿ ಪಾಠ ಹೇಳಿ, ತಮ್ಮ ವಿದ್ವತ್ತನ್ನೆಲ್ಲ ಧಾರೆ ಎರೆದುದರ ಫಲವಾಗಿ ಈಗ ಪ್ರಖ್ಯಾತರಾಗಿರುವ ಶಿಷ್ಯಸ್ತೋಮವೇ ಅವರ ಪಾಂಡಿತ್ಯಕ್ಕೆ ಸಾಕ್ಷಿ. ಅವರ ಜೀವನದ ನಾನಾ ಮುಖಗಳನ್ನು ತಮ್ಮ ತಮ್ಮ ದೃಷ್ಟಿಗಳಿಂದ ಕಂಡ ಕುಲ ಶಿರೋಮಣಿಗಳ ನಿಕಟ ಸಂಬಂಧಿಗಳಿಂದಲೂ, ಪ್ರಾತಿನಿಧಿಕವಾಗಿ ಶಿಷ್ಯರಿಂದಲೂ ಅವರವರ ಅನುಭವವನ್ನು ಈ ಹೊತ್ತಿಗೆಯ ಸ್ಮೃತಿಸಂಪುಟದಲ್ಲಿ ಲೇಖಕಿಯವರು ಸೇರಿಸಿರುವುದು ಈ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದೆ.
ಚಿತ್ರಗಳು ಸೊಬಗನ್ನು ಇಮ್ಮಡಿಗೊಳಿಸಿವೆ. ಅನುಬಂಧದಲ್ಲಿನ ಸ್ಥಳನಾಮ ಸೂಚಿ ಮತ್ತು ವ್ಯಕ್ತಿನಾಮ ಸೂಚಿ ಮತ್ತು ವಿಳಾಸದರ್ಶಿಗಳು ಗ್ರಂಥದ ಉಪಯುಕ್ತತೆಯನ್ನು ವಿಶಿಷ್ಟ ರೀತಿಯಲ್ಲಿ ಹೆಚ್ಚಿಸಿವೆ. ಐತಿಹಾಸಿಕ ಮಹತ್ವವುಳ್ಳ ಈ ಬಗೆಯ ಜೀವನ ಚರಿತ್ರೆಗಳು ಅಂದು ಪ್ರಸಿದ್ಧರಾಗಿದ್ದ ವ೦ಶದ ಹಿರಿಯರೊಬ್ಬರ ನಡೆ ನುಡಿ ಶ್ರದ್ಧೆ ಆದರ್ಶ ಗುರಿ ಮಾನವೀಯ ಗುಣ- ಇವುಗಳನ್ನು ಮನೆತನದ ಇಂದಿನ ಕುಡಿಗಳಿಗೆ ಪರಿಚಯಿಸುವುದಷ್ಟೇ ಅಲ್ಲ, ಆ ಕಾಲದ ಜನಜೀವನ ನಡವಳಿಕೆಗಳ ಒಳನೋಟವನ್ನು ಒದಗಿಸುವ ಒಂದು ಸಾಧನವೂ ಆಗಿದೆ; ಇಲ್ಲಿ ಯಶಸ್ವೀಯಾಗಿದೆ.
ಪ್ರೊ. ಜಿ.ಟಿ. ನಾರಾಯಣರಾಯರು ತಮ್ಮ ಮುನ್ನುಡಿಯಲ್ಲಿ ಶ್ರೀ ಗುಂಡಾವಧಾನಿ ಗಳಂಥವರ ಜೀವನ ಚರಿತ್ರೆ ಏಕೆ ನಮಗೆ ದಾರಿದೀಪವಾಗಬಹುದು- ಎಂಬುದನ್ನು ಚೆನ್ನಾಗಿ ವಿವರಿಸುತ್ತಾರೆ: “ಹತ್ತೊಂಬತ್ತನೆಯ ಶತಮಾನಕ್ಕಿಂತಲೂ ಹಿಂದೆ ತಮಿಳುನಾಡಿನಿಂದ ಮೈಸೂರು ರಾಜ್ಯಕ್ಕೆ ವಲಸೆ ಬಂದು ಇಲ್ಲಿಯೇ ಶಾಶ್ವತವಾಗಿ ನೆಲಸಿದ ಸಂಸ್ಕೃತ-ವೇದ-ಆಚಾರ-ವಿಚಾರ-ಸಂಪ್ರದಾಯ ಪರಿಣತರ ಪರಂಪರೆಗೆ ಸೇರಿದವರಿವರು. ಭಾರದ್ವಾಜ ಗೋತ್ರದಲ್ಲಿ ಜನಿಸಿದ ಗುಂಡಾವಧಾನಿಗಳಿಗೆ ವೇದವಾಙ್ಮಯದಲ್ಲಿ ಭಾರದ್ವಾಜಮುನಿ ಸದೃಶವಾದ ಭಕ್ತಿ ಶ್ರದ್ಧಾದಿಗಳು ಸ್ವಾಭಾವಿಕ ವಾಗಿಯೇ ಮೈಗೂಡಿಕೊಂಡಿದ್ದುವು. .. .. ಅವಧಾನಿಗಳೊಬ್ಬ ಕರ್ಮಠ ನಿಷ್ಠುರ ಆಚಾರವಂತ ಬ್ರಾಹ್ಮಣ.”
ಸಂಸ್ಕೃತ, ಕರ್ನಾಟಕ ಸಂಗೀತ, ಪರಂಪರಾಗತ ಹಬ್ಬ ಹರಿದಿನಗಳ ಆಚರಣೆ, ಸಂಸಾರದಲ್ಲಿ ಒಪ್ಪ-ಓರಣ ಮುಂತಾದವುಗಳಲ್ಲಿ ಅಪಾರ ಶ್ರದ್ಧಾಸಕ್ತಿ. ಶಾಸ್ತ್ರ ಸಂಬಂಧವಾದ ವಿಷಯಗಳಲ್ಲಿ ಜಿಜ್ಞಾಸೆ ಚರ್ಚೆ ಎದ್ದಾಗ ಇವರದೇ ಅಂತಿಮ ನಿರ್ಣಯ - ಅಂದರೆ ಆ ಮಟ್ಟದ ವೈದುಷ್ಯ ಇವರದು. ಇಂಥ ಅನೇಕ ಸನ್ನಿವೇಶಗಳು ಇವರ ಸಾರ್ಥಕ ಸುದೀರ್ಘ ಜೀವನದಲ್ಲಿ ಅರಳಿವೆ. ಇವರ ನಿವಾಸ ಕೇವಲ ಮನೆಯಲ್ಲ, ಅದೊಂದು ಮಹಾಮನೆ. ಅಲ್ಲಿ ವಾಸವಾಗಿದ್ದು ಶಾಲೆ ಕಾಲೇಜುಗಳಲ್ಲಿ ಓದಿ ಮೇಲಕ್ಕೆ ಬಂದ ಯುವ ಚೇತನಗಳು ಅಸಂಖ್ಯ. ಅದೊಂದು ಕಾಮಧೇನುಸದೃಶ ಧರ್ಮಶಾಲೆ. ‘ವಸುಧೈವ ಕುಟುಂಬಕಂ’ ಅಲ್ಲಿಯ ಆಧಾರಶ್ರುತಿ. ಇಂಥ ಮಹಾಮನೆಯನ್ನು ಸಮರ್ಥವಾಗಿ ಪ್ರೀತಿಯಿಂದ ಪತಿಯ ಶಿಸ್ತಿನ ಚೌಕಟ್ಟಿನೊಳಗೆ ನಿರ್ವಹಿಸಿದವರು ಮಹಾಮಾತೆ ಅಲಮೇಲಮ್ಮನವರು.
ಅಂದಿನ ಕರ್ನಾಟಕಸಂಗೀತ ಪಂಚರ್ಷಿಗಳೆನಿಸಿಕೊಂಡಿದ್ದ ಮೈಸೂರು ವಾಸು ದೇವಾಚಾರ್ಯರು, ರಾಳ್ಳಪಲ್ಲಿ ಅನಂತಕೃಷ್ಣಶರ್ಮರು, ಮುತ್ತಯ್ಯ ಭಾಗವತರು, ಚೆಂಬೈ ವೈದ್ಯನಾಥ ಭಾಗವತರು ಮತ್ತು ಮೈಸೂರು ಟಿ.ಚೌಡಯ್ಯನವರು ಅವಧಾನಿಗಳ ವೈಯಕ್ತಿಕ ಮಿತ್ರರು. ಇವರೆಲ್ಲರೂ ಗುಂಡಾವಧಾನಿಗಳನ್ನು ತಮ್ಮ ಗುರುಸಮಾನರೆಂದು ಅಂಗೀಕರಿಸಿದ್ದರು... ವಾಸುದೇವಾಚಾರ್ಯರ ಹೊಸ ಕೃತಿಗಳ ಪ್ರಥಮ ಪ್ರಯೋಗ ಗುಂಡಾವಧಾನಿಗಳ ಸಾನ್ನಿಧ್ಯದಲ್ಲಿ ನಡೆಯುತ್ತಿತ್ತು. ಅವಧಾನಿಗಳು ಸಂಗೀತಶಾಸ್ತ್ರಕೋವಿದರಾಗಿರದಿದ್ದರೂ ಅವರ ಶ್ರವಣಸೂಕ್ಷ್ಮತೆ ಮತ್ತು ತಾರತಮ್ಯವಿವೇಕಜ್ಞಾನ ಎಂಥ ಉನ್ನತ ಮಟ್ಟದಲ್ಲಿದ್ದುವು ಎಂಬುದಕ್ಕಿದು ನಿದರ್ಶನ... .. ವರ್ತಮಾನ ದಿನಗಳಲ್ಲಿಯ ಅರೆವಿಚಾರವಂತರು ಸಂಪ್ರದಾಯ ಶರಣರನ್ನು “ಕುರುಡುನಂಬಿಕೆಗಳ ದಾಸರು ವಿಗತಿಶೀಲ ಅವಿಚಾರ ಮತಿಗಳು” ಮುಂತಾಗಿ ಹೀಗಳೆಯುವುದುಂಟು. ಇದು ದೋಷಯುಕ್ತ ದೃಷ್ಟಿಯೆಂದು ಹೇಳದೆ ವಿಧಿಯಿಲ್ಲ.
“ಯಾವುದೇ ಕಾಲದಲ್ಲಿ ಆದರ್ಶ ವ್ಯಕ್ತಿಗಳು ಎಂದು ಜನಗೌರವಕ್ಕೆ ಪಾತ್ರರಾಗಿದ್ದ ಹಿರಿಯರ ಬದುಕನ್ನು ಅಂದಿನ ಜೀವನದ ಮುನ್ನೆಲೆಯಲ್ಲಿ ಪರಿಶೀಲಿಸಬೇಕೇ ಹೊರತು ಇಂದಿನ ವಿಭಿನ್ನ ಧೋರಣೆಗಳ ಅನುಸಾರ ಅಲ್ಲ. ಅಂದಿಗೆ ಅದು ಸರಿ. ಎಂದೆಂದಿಗೂ ಅದು ಸರಿ ಆಗಿರಬೇಕಾಗಿಲ್ಲ. ನೈತಿಕ ಪಾರಿಶುದ್ಧ್ಯವೊಂದೇ ಸದಾಕಾಲ ಸಲ್ಲುವ ಜೀವನಮೌಲ್ಯ. ಅಂದಿನವರ ನಡವಳಿಕೆಗಳಲ್ಲಿ ಕಂಡುಬಂದ ಲೋಪದೋಷಗಳನ್ನು ತ್ಯಜಿಸಿ ಮೌಲ್ಯಗಳನ್ನು ಅನುಸರಿಸಿ ಕಟ್ಟೋಣ ಹೊಸನಾಡೊಂದನ್ನು ಎಂಬ ಆರೋಗ್ಯವಂತ ದೃಷ್ಟಿಯಿಂದ ನೋಡುವಾತನಿಗೆ ವೇದಜೀವಿ ಶ್ರೀ ಗುಂಡಾವಧಾನಿಗಳು ಒಂದು ಅದ್ಭುತ ರಸಕುಂಭ. ಜನಜೀವನದ ಕ್ವಥನಭಾಂಡದಲ್ಲಿ ನಿರಂತರವಾಗಿ ಬುದ್ಬುದಿಸುವ ಶಾಶ್ವತ ಜೀವನಮೌಲ್ಯಗಳ ದಾಖಲೆಯೇ ಮನುಕುಲದ ಇತಿಹಾಸ ಎನ್ನುವ ಮಾತುಂಟು. ಇಂಥ ಒಬ್ಬ ಮೌಲ್ಯಪ್ರದಾಯಕ ವ್ಯಕ್ತಿ ಗುಂಡಾವಧಾನಿಗಳು...”