ಅಮೆರಿಕನ್ನಡ
Amerikannada
ಶ್ರೀ ಆದಿ ಶಂಕರಾಚಾರ್ಯ
-ಡಾ. ನಾಗಭೂಷಣ ಮೂಲ್ಕಿ, ಶಿಕಾಗೋ, ಅಮೇರಿಕ
ಸನಾತನ ಧರ್ಮ ಅನಾಥ ಸ್ಥಿತಿ, ಅಧೋಗತಿಯಲ್ಲಿರಲು
ವಿಶ್ವನಾಥ! ಅವತಾರ ನೀ ಧರ್ಮ ಸಂಸ್ಥಾಪಕನಾಗಿ
ಹಿಂದೂ ಧರ್ಮದ ಪುನರ್ಜೀವನಕಾಗಿ, ಓ ತಂದೆಯೇ !
ತುಂಡುತುಂಡಾದ ಭರತ ಖಂಡ ಒಗ್ಗೂಡಿಸುವುದಕಾಗಿ ಬಂದೆ

ವಿದ್ಯಾ ಅಧಿದೇವತೆ ಶ್ರೀ ಶಾರದಾಂಬೆ ಜಗದಂಬೆಯ ಒಲಿಸಿ
ಅಪವಾದ, ವಾದ ವಿವಾದವ ಬಗೆಹರಿಸಿ, ಜಯಿಸಿ ಅಜೇಯನೆನಿಸಿ
ಅತ್ಯುನ್ನತ ಜ್ಞಾನಪೀಠ ಸರ್ವಜ್ಞ ಪೀಠವೇರಿದ ಗುರು ಶ್ರೀಜಗದ್ಗುರು ನೀ
ಋಷ್ಯಶೃಂಗ ತಪ್ಪಲು, ತುಂಗಾ ತೀರ ಶೃಂಗೇರಿ ತಪೋವನ ನಿವಾಸಿ

ಜಟಿಲ ಕಠಿಣ ವೇದಶಾಸ್ತ್ರ, ಆಚಾರ ವಿಚಾರ
ಅತ್ಮ ಜ್ಞಾನ ವಿಜ್ಞಾನದಿ ಅಜ್ಞಾನ ದೂರವೆಂದೆ
ಸಾರಿ ಹೇಳಿದೆ ಸಂಸ್ಕಾರ ಸತ್ವ ಸಾರ
ಸಂಸಾರ ಸುಸೂತ್ರ ಸೂತ್ರ ಆಧಾರ

ಸರಳ ಸ್ತೋತ್ರ ಸ್ತುತಿ ಶ್ರುತಿ ಸ್ಮೃತಿ ಸ್ವಾರಸ್ಯವಾಗಿ
ತ್ರಿಕಾಲದಲೂ ಸಕಲ ಜೀವ ಜೀವಿಗಳಲ್ಲೂ ಕಂಡೆ ಅದ್ವೈತ
ಜೀವಾತ್ಮನಲಿ ಅತ್ಮ ಸೌಂದರ್ಯ ಆನಂದ ಲಹರಿ
ಪರಮಾತ್ಮಾ ಆದಿ ಆಧ್ಯಾತ್ಮಿಕ ಆತ್ಮೀಯ ಅಮೃತತ್ವ
ಅಚಲ ಚರಾಚರ ಚಲನವಲನ ಚಲನೆ ಚಾಲನೆಯಲ್ಲೂ

ಪ್ರಕೃತಿ ಪ್ರತಿ ಕೃತಿ ವಿಕೃತಿಯಲ್ಲೂ ಸಕೃತಿ ಜೀವನ
ಬಲ್ಲವ ಬಲ್ಲ ಎಲ್ಲವ ಒಲ್ಲ ಎಲ್ಲವನೆಂದು ನುಡಿದೆ
ತೃಪ್ತಿ ಸಂತೃಪ್ತಿ ಸಂತಸ ಕಾಣುವೆ ಆತ್ಮನಲ್ಲೇ, ಇಲ್ಲೇ
ಪರಮಾನಂದ ಸುಖಾನಂದ ಅತ್ಮ ಪರಮಾತ್ಮನಲ್ಲೇ