ಅಮೆರಿಕನ್ನಡ
Amerikannada
ನಮ್ಮ ಮಡಿಕೇರಿ ಪ್ರವಾಸ
ವಾಣೀ ಸುರೇಶ್, ಕ್ಯಾಲಿಫೋರ್ನಿಯಾ
“ಜೀವನದಲ್ಲಿ ನಮಗೆದುರಾಗುವ ಪ್ರತಿಕ್ಷಣವನ್ನೂ, ಪ್ರತಿಯೊಂದನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸಿ, ಅನುಭವಿಸಿ, ಸುಖಿಸಿದಾಗಷ್ಟೇ ನಾವೆಷ್ಟು ಅದೃಷ್ಟವಂತರು, ಜೀವನ ಎಷ್ಟು ನವನೂತನ, ವೈವಿಧ್ಯಮಯ ಅನ್ನೋದು ತಿಳಿಯೋದು” - ಅಂತನ್ನೋದು ಇಂದಿನ ದಿನಗಳ ಪ್ರಖ್ಯಾತ ಕಾರ್ಪೋರೇಟ್ ಲೈಫ್ ಪ್ರೋಗ್ರಾಂ ( ಅರ್ಥಾತ್ - ಒತ್ತಡ ರಹಿತ ಉತ್ತಮ ಮಟ್ಟದ ಜೀವನ ಶೈಲಿ ಬೆಳೆಸಿಕೊಳ್ಳುವುದರ ಬಗೆಗಿನ) ಕಾರ್ಯಕ್ರಮಗಳ ಆಯೋಜಕರ ಅಥವಾ ಅಂಥಹ ಪುಸ್ತಕ ಕರ್ತೃಗಳ ಒಂದು ಚಿರಪರಿಚಿತ, ಫೇವರಿಟ್ ಸಾಲೇ ಅಲ್ವೇ? ಸುಮಾರು ಹತ್ತು ಹನ್ನೆರಡು ವರ್ಷಗಳ ಕೆಳಗೆ, ಏನಿರಬಹುದು ಈ ತರಹದ ಕಾರ್ಯಕ್ರಮಗಳು ಎಂಬ ಕುತೂಹಲದೊಡನೆ ಅಂಥಹ ಒಂದು ಪ್ರೋಗ್ರಾಮಿಗೆ ರೆಜಿಸ್ಟರ್ ಮಾಡಿಕೊಂಡು ಹೋದವಳನ್ನು ಸ್ವಾಗತಿಸಿದ್ದು - ಸಾಂಗ್ಲಿಯ ಅತೀ ಮಧುರವಾದ ಒಂದೇ ಒಂದು ಪುಟಾಣಿ ತಿಳಿ ಹಸಿರು ಸೀಡ್ಲೆಸ್ ದ್ರಾಕ್ಷಿಯನ್ನು ಕೊಟ್ಟು, ಅಲ್ಲಿ ಅವರು ಹೇಳಿದ್ದ ಅತ್ಯಂತ ಸಾಮಾನ್ಯವಾದ ಈ ಮಾತು! ಆ ದ್ರಾಕ್ಷಿಯನ್ನು ತಕ್ಷಣ ತಿನ್ನದೇ ದವಡೆಯಲ್ಲಿ ಒತ್ತರಿಸಿಕೊಂಡು ಅದರ ಮಾಧುರ್ಯದ ಬಗ್ಗೆ ಗಮನಿಸುತ್ತಾ ಸ್ವಲ್ಪ ಸ್ವಲ್ಪವಾಗಿ ಸವಿಯಬೇಕು ಎನ್ನೋದು ಅವರ ಮುಂದಿನ ಇನ್ಸ್ತ್ರಕ್ಷನ್ನು.
ಆದಿರಲಿ, ಈ ಮಾತಿನ ಪ್ರತ್ಯಕ್ಷ ಅನುಭವ ನನಗಾಗಿದ್ದು ನೋಡಿ, ಮೊನ್ನೆ ಕೊಡಗಿನ ಮಡಿಕೇರಿಯ ಗರ್ವಾಲೆ ಗ್ರಾಮದ ಭಾರತೀಯ ವಿದ್ಯಾಭವನ ಶಾಲೆಯ ಭವನೋತ್ಸವದೊಂದಿಗೆ ಜಂಟಿಯಾಗಿ ನಡೆದ ಅಪರಂಜಿ ಕೊರವಂಜಿ ಟ್ರಸ್ಟ್ ನಡೆಸಿಕೊಟ್ಟ ಹಾಸ್ಯೋಲ್ಲಾಸ ಕಾರ್ಯಕ್ರಮದ ವೀಕ್ಷಕರಾಗಿ ಹೋದಾಗ.
“ಇಬ್ಬರೇ ಇಲ್ಲಿ ಮನೇಲಿ ಕೂತ್ಕೊಂಡು ಏನ್ಮಾಡ್ತಿದ್ದೀರಿ ಈ ವೀಕೆನ್ಡಲ್ಲಿ, ಹೊರಡಿ ನಮ್ಮ ಬಳಗದೋರ ಜೊತೆ. ಗರ್ವಾಲೇಗೆ ಹೋಗ್ಬರೋಣಾಂ”ತ ಒತ್ತಾಯಿಸಿ ನಮ್ಮಂಥಾ ಶತ ಸೋಮಾರಿಗಳನ್ನ ಹೊರಡಿಸಿದ್ದು ಅಪರಂಜಿಯ ಸಂಪಾದಕರು. ಯಾವಾಗ್ಲೂ ಚೈತನ್ಯಭರಿತರಾಗಿರುವಂತೆ ಅನ್ನಿಸೋ ಅಪರಂಜಿ ಬಳಗದೋರ ಜೊತೆ ಎರಡು ದಿನ ನಗ್ ನಗ್ತಾ ಕಾಲ ಕಳೆಯಬಹುದೂನ್ನೋ ಟೆಂಪ್ಟೇಶನ್ನೇ ಸರಸರಾಂತ ಎರಡ್ಜೊತೆ ಬಟ್ಟೆಬರೆಗಳನ್ನ ಪೆಟ್ಟಿಗೆಗೆ ಹಾಕಿ ರೆಡಿಯಾಗಕ್ಕೆ ಪ್ರೇರೇಪಿಸ್ತೂಂದ್ರೆ ತಪ್ಪಲ್ಲ ನೋಡಿ.
ಅವತ್ತು ಮುಂಜಾನೆ ಆರೂವರೆಗೆ ಮನೆ ಬಿಡೋಣಾಂತ ಹೊರಟರೆ, ನಮ್ಮ ಕಾರಿನ ರಸ್ತೆಗಡ್ಡವಾಗಿ ನಮ್ಮನೆಯ ಬೃಹತ್ ನುಗ್ಗೇ ಮರ ಬಿದ್ದಿರೋಣವೇ? ಧರಾಶಾಯಿಯಾಗಿದ್ದ ಮರದಲ್ಲಿ ನೇತಾಡುತ್ತಿದ್ದ ಹಚ್ಚ ಹಸಿರು ನುಗ್ಗೆಕಾಯಿಗಳನ್ನ ಬೀದಿಪಾಲು ಮಾಡಿ ಹೋಗಲು ನಾವೇನು ಕಟುಕರೇ ಸದ್ಯ? ನಮ್ಮ ಪ್ರವಾಸದ ಮಿನಿ ಬಸ್ಸೇನು ಮಹಾ, ಕಾಯತ್ತೆ, ನಮ್ಮನ್ನೇನು ಹಾಗೆ ಬಿಟ್ಟು ಹೋಗ್ತಾರ್ಯೇ? ಇಷ್ಟೊಂದು ಹದವಾದ ನುಗ್ಗೆಕಾಯಿ, ಇಷ್ಟು ಸುಲಭವಾಗಿ ಕೈಗೆ ಸಿಗೋದೂಂದ್ರೇನು! ಸರಿ, ಬೇಗ ಬೇಗ ನಮ್ಮ ಶಕ್ತ್ಯಾನುಸಾರ ಅಷ್ಟು ದೊಡ್ಡ ಮರದ ರೆಂಬೆಗಳಿಂದ ಮೈಕೈ ತರಚಿಸಿಕೊಂಡು, ಇಷ್ಟು ದಿನ ನಮಗೆ ಸೆಡ್ಡು ಹೊಡೆಯುತ್ತಾ ಅಷ್ಟೆತ್ತರ ಮರದಲ್ಲಿ ಜೋಕಾಲಿಯಾಡುತ್ತಿದ್ದ ನುಗ್ಗೇಕಾಯಿಗಳನ್ನು ಕೊಂಬೆಗಳಿಂದ ಎಳೆದೆಳೆದು ಕಿತ್ತು, ತಂಡದ ಉಳಿದವರಿಗೆ ಹಂಚಲು ಸಂಭ್ರಮದಿಂದ ಸಂಪಾದಕರ ಮನೆಗೆ ಓಡಿದ್ವಿ. ಆ ಕ್ಷಣಕ್ಕೆ ನಮಗೆ ನುಗ್ಗೇ ಹುಳಿಯೇ ಪ್ರಪಂಚದ ಅತ್ಯಂತ ಪಾವನವಾದ ವಸ್ತುವಿಶೇಷದಂತೆ ಭಾಸವಾಯ್ತೂಂತಲೇ ಅನ್ನಬೇಕು.
ನಮ್ಮ ಪುಣ್ಯ, ಬಸ್ಸಿನ್ನೂ ಬಂದಿರಲಿಲ್ಲ, ಆದ್ರಿಂದ ಹೆಚ್ಚೇನೂ ಅವಮಾನವಾಗ್ಲಿಲ್ಲ, ಸದ್ಯ! ನುಗ್ಗೇಕಾಯಿಗಳನ್ನು ಅವರ ಮನೆಯ ಫ್ರಿಜ್ಜಲ್ಲಿ ಎಲ್ಲರೂ ಹಿಂದಿರುಗಿ ಬರೋವರೆಗೂ ಹಾಳಾಗದಂತೆ ಇಟ್ಟು ಭದ್ರಪಡಿಸೋ ಹೊತ್ಗೆ ಬಂತು! ಗುಂಪಿನ ಇನ್ನರ್ಧ ಸದಸ್ಯರುಗಳನ್ನು ಅಷ್ಟು ಮುಂಚೆಯೇ ದೂರದ ಜೆ. ಪಿ. ನಗರದಿಂದ ಅಟ್ಟಿಕೊಂಡು ಬಂದು, ಇಲ್ಲಿದ್ದ ಇನ್ನರ್ಧ ಗುಂಪಿನವರೊಡನೆ ಆಗಲೇ ದೊಡ್ಡ ದನಿಯಲ್ಲಿ ಹರಟಲು ಶುರು ಮಾಡಿದ್ದ ಬೇಲೂರರೂ ಸೇರಿದಂತೆ ಎಲ್ಲರೂ ಸಾವಕಾಶವಾಗಿ ಅದರಲ್ಲಿ ವಿರಾಜಮಾನರಾದ್ವಿ.
ಸರಿ ಶುರುವಾಯಿತಪ್ಪ ನಗೆ ಹನಿಗಳ ಸುರಿಮಳೆ! ಬಸ್ಸಿನ ಶಬ್ದವನ್ನೂ ಮೀರಿಸುವಂತೆ ನಾನ್ ಸ್ಟಾಪ್ ನಗೆಬುಗ್ಗೆ.., ಮೆಟ್ರೋ ಕಾಮಗಾರಿ ಎಲ್ಲೆಲ್ಲೂ ರಚಿಸಿರುವ ಚಕ್ರವ್ಯೂಹದಲ್ಲಿ ದಾರಿ ತಪ್ಪಿದ ಬಸ್ ಚಾಲಕನನ್ನೂ ಬಿಡದ ಗೇಲಿ.., ಬೆಳಗಿನ ಉಪಾಹಾರಕ್ಕಾಗಿ ಎಲ್ಲಿ ಬಸ್ ನಿಲ್ಲಿಸಬೇಕು ಎನ್ನುವ ಅತ್ಯಂತ ಪ್ರಾಮುಖ್ಯ ವಿಷಯದ ಬಗ್ಗೆ ಪಾರ್ಲಿಮೆಂಟಿನವರೂ ನಾಚುವಂಥಹ, ಅಷ್ಟೊತ್ತಿನಲ್ಲಿ ಹೋಟೆಲಿನ ಹಬೆಯಾಡುವ ಇಡ್ಲಿ-ಕಾಫಿಗಿಂತಾ ಬಿಸಿ ಬಿಸಿಯಾದ ಚರ್ಚೆ!.. ಗರ್ವಾಲೆ ತಲುಪುವವರೆಗೂ ಯಾರೊಬ್ಬರೂ ಕಣ್ಣು ಮುಚ್ಚಿ ತೂಕಡಿಸಿದ್ದೂ ಕಾಣೆ, ಯಾರೊಬ್ಬರ ನಗುಮುಖ ಮಾಸಿದ್ದೂ ಕಾಣೆ! ಅಲ್ಲ, ತೀರಾ ಆರಾರು ಘಂಟೆಯ ಬಿಸಿಲಲ್ಲಿ ಪ್ರಯಾಣವಾದರೂ ಸ್ವಲ್ಪವೂ ಆಯಾಸವೇ ಆಗಬೇಡವೇ?!?
ಹಚ್ಚಹಸಿರು ವನದೇವಿಯ ಶಿರೋಭಾಗದ ಮಧ್ಯಬೈತಲೆಯನ್ನು, ಪ್ರಕೃತಿದೇವಿ, ಏಕೋ ಸೊಟ್ಟುಸೊಟ್ಟಾಗಿ ತೆಗೆದಂತೆ ಕಾಣುತ್ತಿದ್ದ, ಸೋಮವಾರಪೇಟೆಯಿಂದಾಚೆಯ ಕಿರಿದಾದ ಅಂಕುಡೊಂಕು ರಸ್ತೆಯಲ್ಲಿ ನಮ್ಮ ಬಸ್ಸು ಏದುಬ್ಬಸಪಡುತ್ತಾ ಸಾಗಿ, ಗರ್ವಾಲೆಯಲ್ಲಿ ನಿಂತಾಗ ಮಧ್ಯಾನ್ಹ ಎರಡು ಘಂಟೆ. ಭಾರತೀಯ ವಿದ್ಯಾಭವನದ ಶಶಿಕಲಾ ಅವರ ಮುಗುಳ್ನಗೆಯಿಂದ ಕೂಡಿದ ಹಾರ್ದಿಕ ಸ್ವಾಗತ ಬಸ್ಸಿಂದಿಳಿದ ಎಲ್ಲರನ್ನೂ ಇನ್ನೂ ಮುದಗೊಳಿಸಿತು.
ಅಲ್ಲೇ ಅನತಿ ದೂರದಲ್ಲಿದ್ದ ಶಾಲೆಯ ನಡುವೆ ಇದ್ದ ಭವನದ ಚೇರ್ಮನ್ ರಾಮಾನುಜ ದಂಪತಿಗಳ ಬೆಚ್ಚಗಿನ ಆತ್ಮೀಯತೆಯಂತೂ ಇನ್ನೂ ಚೆನ್ನ. ಅಲ್ಲೇ ಮುಂದಿದ್ದ ಕಾವೇರಿ ತಾಯಿಯ ಮುದ್ದಾದ ವಿಗ್ರಹದಿಂದ ಪ್ರಾರಂಭಿಸಿ ಅವರು ಮಾಡಿದ ಸ್ಥಳಪರಿಚಯ, ಅವರ ಲೈಬ್ರರಿಯನ್ನು ಹಾದು, ವಿಶಾಲ ಅಂಗಳವನ್ನು ದಾಟಿ, ಅತಿಥಿಗಳು ತಂಗಲು ನಿರ್ಮಿಸಿದ್ದ ಭವ್ಯ ಕೊಟಡಿ, ಡಾರ್ಮಿಟರಿ, ಸುಸಜ್ಜಿತ ಪಾಕಶಾಲೆಗಳನ್ನು ಹೊಕ್ಕು, ಕೊನೆಗೆ ಮುಗಿದದ್ದು ಆ ಕ್ಷಣಕ್ಕೆ ನಮ್ಮ ತಂಡಕ್ಕೆ ಅತ್ಯಂತ ಆಪ್ಯಾಯಮಾನವೆನಿಸಿದ ಭೋಜನಶಾಲೆಯಲ್ಲಿ! ಅಲ್ಲಿಯ ಲಕ್ಸ್ಮಿ ಮತ್ತಿತರರು ನೀಡಿದ ಸರಳ, ಸ್ವಾದಿಷ್ಟ ಭೋಜನವನ್ನು ಅವರವರ ಶಕ್ತ್ಯಾನುಸಾರ ಇಳಿಸಿ, ಒಂದೆರಡು ಘಂಟೆಗಳ ಆರಾಮದ ನಂತರ ಮತ್ತೆ ಸಿದ್ಧರಾದೆವು - ಅಂದಿನ ಮುಖ್ಯ ಕಾರ್ಯಕ್ರಮವಾದ ಗರ್ವಾಲೆ ಶಾಲೆಯ ಭವನೋತ್ಸವಕ್ಕೆ.
ಸುತ್ತಲೂ ಕೊಡಗಿನ ಬೆಟ್ಟಗುಡ್ಡಗಳಿಂದ ಆವೃತವಾಗಿದ್ದ ಆ ಅನೌಪಚಾರಿಕ ಬಯಲು ರಂಗಮಂದಿರ ಗಿಜಿಗಿಜಿಸ್ತಿದ್ದಿದ್ದು ಶಿಸ್ತಿನಲ್ಲಿ ಕುಳಿತಿದ್ದ ಪ್ರಾಥಮಿಕ ಶಾಲೆಯ ಸುಮಾರು ನೂರು-ನೂರೈವತ್ತು ಚಿಳ್ಳೆಪಿಳ್ಳೆಗಳು, ಅವರ ಪೋಷಕರು, ಮತ್ತು ಅಂದಿನ ಸಭೆಗೆ ಆಹ್ವಾನಿತರಾಗಿದ್ದ ಹಲಕೆಲವು ಗಣ್ಯರಿಂದ. ಪ್ರಕೃತಿದೇವಿಯ ಮುದ್ದು ಮಕ್ಕಳಾದ ಈ ಚಿಣ್ಣರು, ಹಾಗೂ ಆಕೆಯ ಮಡಿಲಲ್ಲೇ ಜರುಗಿದ ಅವರ ಅದಮ್ಯ ಉತ್ಸಾಹಪೂರಿತ ಉತ್ಸವಕ್ಕೂ, ಟೀವಿಯಲ್ಲಿ ನಾವು ನೋಡುವ ಬೆಂಗಳೂರಿನ ಕೃತಕ ಪರಿಸರದ ನಡುವೆ ನಡೆಯುವ ನಮ್ಮ ಇತರ ಶಾಲೆಗಳ ವಾರ್ಷಿಕೋತ್ಸವಗಳ ಪಾಶ್ಚಾತ್ಯೀಕರಣದ ದಟ್ಟ ವಾಸನೆಯ ಉಸಿರು ಕಟ್ಟಿಸುವಿಕೆಗೂ - ಪುಳಿಯೋಗರೇಗೂ ಮತ್ತು ಬಿರಿಯಾನೀಗೂ ಇರೋವಷ್ಟೇ ಸಾಮ್ಯ ಅನ್ನಿಸ್ತು! ನಂತರದ ಅಪರಂಜಿ ಬಳಗದವರು ಮಕ್ಕಳಿಗಾಗಿ ಆಯೋಜಿಸಿದ್ದ ಎಂದೆಂದಿಗೂ ಪ್ರಸ್ತುತವಾದ ಗೋವಿನ ಹಾಡಿನ ಬಗ್ಗೆ ಅದ್ಭುತವಾಗಿ ಮೂಡಿ ಬಂದ ನೆರಳು ಬೆಳಕಿನಾಟ ಮತ್ತು ಬೇಲೂರ್ ಮತ್ತು ಗುಂಡೂರಾವ್ ಅವರ ಹಾಸ್ಯಲೇಪಿತ ಸಾರಥ್ಯದಲ್ಲಿ ಮಕ್ಕಳಿಗಾಗಿ ನಡೆಸಿಕೊಟ್ಟ ಹಾಸ್ಯೋಲ್ಲಾಸ ಕಾರ್ಯಕ್ರಮ.. ಗಾನವಿನೋದಿನಿಯವರ ಚಿಕ್ಕ ಚಿಕ್ಕ ಹಾಸ್ಯಭರಿತ ತುಣುಕುಗಳಿಗೆ, ಕೇಕೆಹಾಕಿ ನಕ್ಕುನಲಿದು ಪ್ರತಿಕ್ರಿಯಿಸಿದ ಮಕ್ಕಳ ಉಲ್ಲಾಸ, ನಗರ ಜೀವನದ ಏಕತಾನತೆಯಿಂದ ಬೇಸತ್ತ ನಮ್ಮೆಲ್ಲರ ‘ಬ್ಯಾಟರಿ’ಗಳನ್ನೂ ಮತ್ತೆ ಪುನಶ್ಚೇತನಗೊಳಿಸಿತೂಂತಲೇ ಅನ್ನಬೇಕು.
ಮತ್ತೆ ರಾತ್ರಿಯ ಸುಗ್ರಾಸ ಭೋಜನಾನಂತರ ಮೈ ಜುಮುಗುಟ್ಟಿಸುತ್ತಿದ್ದ ಮಡಿಕೇರಿಯ ಚಳಿಯಿಂದ ಪಾರಾಗಲು ನಕ್ಷತ್ರದ ಛಾವಣಿಯಡಿ ಎಬ್ಬಿಸಿದ್ದ ಆಳೆತ್ತರದ ಬೆಂಕಿಯ ಜ್ವಾಲೆಯ ಸುತ್ತ ಕುಳಿತು, ಮಧ್ಯ ಮಧ್ಯೆ ಜರುಗುತ್ತಿದ್ದ ಸುಶ್ರಾವ್ಯ ಭಾವಗೀತೆಗಳ ಬೈಟಕ್ಕಿನ ನಡುವೆ ಎಲ್ಲರೂ ಮಲಗುವವರೆಗಿನ ತನಕ ನಡೆದ, ಲಘು ವಿಚಾರ ವಿನಿಮಯಗಳು ಚೇತೋಹಾರಿಯಾಗಿತ್ತು. ಮಾರನೆಯದಿನ ಬೆಳಗಿನ ಆತ್ಮೀಯ ಉಪಾಹಾರದ ನಂತರ ನಮ್ಮ ತಂಡ ಮರಳಿ ಹೊರಟಿದ್ದು ಕುಶಾಲನಗರದ ಬಳಿಯ ಬೈಲುಕುಪ್ಪೆಯ ಬೌದ್ಧ ವಿಹಾರಕ್ಕೆ., ಆಮೇಲೆ ಮೈಸೂರು ಮೂಲಕ ವಾಪಸ್ ಪ್ರಯಾಣಿಸಿ ಸಂಪಾದಕರ ಫ್ರಿಜ್ಜಿನಲ್ಲಿ ನಮಗಾಗಿ ಕಾದು ಕುಳಿತಿದ್ದ ನುಗ್ಗೇ ಕಾಯಿಗಳ ಸೆರೆ ಬಿಡಿಸಿದ ನಂತರದ ನಮ್ಮ ಯಾಂತ್ರಿಕ ಜೀವನದ ಕಡೆಗೆ!
ಮಡಿಕೇರಿಯ ಮಾರ್ಗ ಬಿಟ್ಟ ತಕ್ಷಣ ನಮಗಾಗಿಯೇ ಕಾಯುತ್ತಿದ್ದಂತೆ ಅನ್ನಿಸುತ್ತಿದ್ದ ಬಯಲು ಸೀಮೆಯ ಬಿಸಿಲಿನ ಝಳ ವ್ಯಾನಿನಲ್ಲಿದ್ದ ಎಲ್ಲರನ್ನೂ ಬಸವಳಿಸಿತು. ಮುಂಜಾನೆ, ಹದಮೀರಿ ಕಬಳಿಸಿದ್ದ ಗರಿಗರಿಯಾಗಿದ್ದ ವಡೆ ಇಡ್ಲಿಗಳು ಹೊಟ್ಟೆಯಲ್ಲಿ ಕುಳಿತಲ್ಲಿಂದಲೇ ಈಗೆಲ್ಲರೂ ತಂಪಾದ ನೀರಿಗಾಗಿ ಹಾತೊರೆಯುವಂತೆ ಮಾಡುತ್ತಿದ್ದಾಗಲೇ ಹುಣಸೂರಿನ ಸಮೀಪ ಹೆದ್ದಾರಿಯ ಪಕ್ಕದಲ್ಲಿ ಸುರಿದುಕೊಂಡಿದ್ದ ಹಚ್ಚ ಹಸಿರಾದ ಕಲ್ಲಂಗಡಿ ಹಣ್ಣುಗಳ ರಾಶಿ ಕಣ್ಣಿಗೆ ಬೀಳಬೇಕೇ? ಅಷ್ಟರವರೆಗೆ ತಮ್ಮ ಜೀವನದಲ್ಲಿ ವ್ಯಾನಿನಲ್ಲಿದ್ದ ಯಾರೂ, ಅಂದು ತಿಂದಂತೆ ಮಾರ್ಗ ಮಧ್ಯದ ಸೌತೆ ಕಾಯಿ, ಕಲ್ಲಂಗಡಿ ಚೂರುಗಳನ್ನು ತಿನ್ನುವ ಧೈರ್ಯ ಮಾಡಿರಲಾರರು ಎಂದೇ ನನ್ನ ಭಾವನೆ. ನಗರೀಕರಣ, ಪಾಶ್ಚಾತ್ಯೀಕರಣಗಳ ಪ್ರಭಾವ ಅಷ್ಟು ಸುಲಭವಾಗಿ ಬಿಡಿಸಿಕೊಳ್ಳುವಂಥದ್ದಲ್ಲವಲ್ಲ ಸದ್ಯ! ಅಲ್ವೇ?
ಬಾಲವಿಲ್ಲದ ಕಪಿಗಳಂತೆ ಅಥವಾ ನಮ್ಮ ಪಂಚತಂತ್ರ / ಈಸೋಪನ ಕತೆಗಳಲ್ಲಿ ಬರುವ ಬಾಯಾರಿದ ನರಿ, ಮಂಗಗಳಂತೆ (ನಮ್ಮ ತಂಡದ ಸದಸ್ಯರ ಕ್ಷಮೆಯಿರಲಿ) ಬಹುಶಃ ತಮ್ಮತಮ್ಮ ಆಯುಷ್ಯದಲ್ಲಿ ಕನಿಷ್ಠ ಪಕ್ಷ ಅರ್ಧ ಶತಮಾನದಷ್ಟಾದರೂ ಸವೆಸಿದ್ದ ಎಲ್ಲರೂ ಏನೊಂದೂ ಎಗ್ಗಿಲ್ಲದೇ, ಆ ಹಣ್ಣಿನ ವ್ಯಾಪಾರಿ - ಅದನ್ನು ಕೊಂಡಾಗಿನಿಂದ ನೀರಿನ ಮುಖವನ್ನೇ ಕಂಡಿರಲಾರದ ಚಾಕುವಿನಿಂದ, ರಸ್ತೆಯ ಧೂಳಿನಲ್ಲಿ ಚೆನ್ನಾಗಿ ಮಿಂದೆದ್ದ ಹಣ್ಣಿನ ರಾಶಿಯಿಂದ ತೆಗೆದು - ಕುಯ್ದುಕೊಟ್ಟ ಕಲ್ಲಂಗಡಿ ಚೂರುಗಳನ್ನು ಚಿಕ್ಕ ಮಕ್ಕಳಂತೆ ಹೀರಿ, ಬೇರೆ ಯಾವ ಚಿಂತೆಯಿಲ್ಲದೇ ಸವಿದದ್ದೇ ಸವಿದದ್ದು! ಇಷ್ಟು ವರ್ಷದ ನನ್ನ ಅನುಭವದಲ್ಲಿ ಅಂಥಹ ರುಚಿಕರ ಹಣ್ಣನ್ನು ನಾನಂತೂ ಯಾವ ಸ್ಟಾರ್ ಹೊಟೇಲಿನಲ್ಲೂ ತಿಂದ ನೆನಪಿಲ್ಲಪ್ಪ! ಹೌದಲ್ಲ, ನನಗೆ ತಿಳಿದ ಮಟ್ಟಿಗೆ ನಮ್ಮಲ್ಲಿ ಆಮೇಲೆ ಯಾರಿಗೂ ಯಾವ ರೀತಿಯ ಉದರ ಬೇನೆಯ ಉಪದ್ರವಗಳೂ ಕಾಣಿಸಿಕೊಳ್ಳಲೇ ಇಲ್ಲವೇ! ಇದೆಲ್ಲವನ್ನೂ ಈಗ ಹತ್ತಾರು ಸಾವಿರ ಮೈಲಿಗಳಾಚೆ ದೂರದ ಮಿಶಿಗನ್ನಿನಲ್ಲಿ ಕುಳಿತು ಜೆಟ್ ಲ್ಯಾಗ್ ಮಾಡುತ್ತಿರುವಾಗ ಇಂದು ನೆನೆಸಿಕೊಳ್ಳುತ್ತಿರುವಾಗಲೇ ಅನ್ನಿಸಿದ್ದು, ನಿಮಗೆ ಮೊದಲಲ್ಲೇ ಹೇಳಿದ ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ ಹೇಳುವ ಜೀವನದ ಬಗೆಗಿನ ಅನುಭವದ ಮಾತು - “ಜೀವನದಲ್ಲಿ ನಮಗೆದುರಾಗುವ ಪ್ರತಿಕ್ಷಣವನ್ನೂ ಹೃತ್ಪೂರ್ವಕವಾಗಿ...........” ಇತ್ಯಾದಿ ಇತ್ಯಾದಿ.