ಅಮೆರಿಕನ್ನಡ
Amerikannada
ತಾಯಿಯೇ ಮೊದಲ ಗುರು
-ನಾಗಲಕ್ಷ್ಮೀ ಹರಿಹರೇಶ್ವರ
ಸಾಮಾನ್ಯವಾಗಿ ಮಕ್ಕಳಿಗೆ ಕಲಿಕೆ (ಲರ್ನಿ೦ಗ್) ಎಂಬುದು ಸುಲಭ. ಅವರಲ್ಲಿ ಅಸಮಾನ್ಯ ಗ್ರಹಣ ಶಕ್ತಿ ಇರುವುದೇ ಇದಕ್ಕೆ ಮೂಲ ಕಾರಣ. ಆಸಕ್ತಿ ಮೊಳೆತಾಗ, ಬೆಳೆದಾಗ ಹೊಸ ಹೊಸ ಬಗೆಯ ಆಟ, ಪಾಠ, ಹಾಡು, ಅಭಿನಯ, ಚಿತ್ರಕಲೆ - ಮೊದಲಾದುವನ್ನು ಗ್ರಹಿಸಿ, ಅವನ್ನು ಬೇಗ ತನ್ನದನ್ನಾಗಿ ಮಕ್ಕಳು ಮಾಡಿಕೊಳ್ಳುತ್ತಾರೆ. ನಮ್ಮ ಊಹೆಗೂ ಮೀರಿದ ಅಪಾರ ಅಂತಃಸತ್ವ, (ಪೊಟೆನ್ಶಿಯಲ್)ಅವರಲ್ಲಿ ಇದೆ. “ನಾವು ಅದನ್ನು ಸರಿಯಾದ ದಾರಿಯಲ್ಲಿ ಕಾಲುವೆ ಹರಿಸುವಾಗ ಕನ್ನಡವನ್ನು ಕಲಿಸಲೂ ಬಳಸಬಾರದೇಕೆ?”
ಶಾಲೆಯಲ್ಲಿ ಹೊಸ ಹೊಸ ಪಠ್ಯ ವಿಷಯಗಳನ್ನೂ, (ಸ್ಪ್ಯಾನಿಷ್ ಫ್ರೆ೦ಚ್ ಜರ್ಮನ್) ಮುಂತಾದ ಸ್ವಲ್ಪವೂ ಸಂಪರ್ಕವೇ ಇಲ್ಲದ ಅಪರಿಚಿತ ಭಾಷೆಗಳನ್ನೂ ಕಲಿತು ಕರಗತ ಮಾಡಿಕೊಳ್ಳುತ್ತಿರುವ ನಮ್ಮ ಬುದ್ಧಿವಂತ ಮಕ್ಕಳಿಗೆ ಕನ್ನಡ ಕಲಿಯುವುದು ಅಂತಹ ಕಷ್ಟದ ಸಂಗತಿ ಏನಲ್ಲ.
ಮೊದಲು, ಬೇಕಾದ ವಾತಾವರಣದ ಮಾತು : ಬೇಸಿಗೆ ರಜಕ್ಕೆ ನಾವು ‘ಊರಿ’ ಗೆ ಹೋಗಿ ಬಂದಾಗ, ಆ ಮೂರೇ ವಾರದ (ಅಥವಾ ಇನ್ನು ಸ್ವಲ್ಪ ಹೆಚ್ಚು ಕಾಲದ) ಅಲ್ಪಾವಧಿಯಲ್ಲಿ ನಮ್ಮ ಜಾಣ ಮಕ್ಕಳು ಎಷ್ಟೊಂದು ಕನ್ನಡ ಕಲಿತು ಬಂದಿರುತ್ತಾರೆ, ಎಂಬುದನ್ನು ನಾವೆಲ್ಲ ಗಮನಿಸಿದ್ದೇವೆ; ಮನೆಗೆ ಬಂದ ಸ್ನೇಹಿತರ ಮುಂದೆ ಹಾಡಿ ಹೊಗಳಿದ್ದೇವೆ. ಅಲ್ಲಿ, ಭಾರತದಲ್ಲಿ ಸುತ್ತ ಮುತ್ತ ಕನ್ನಡದ ಪರಿಸರ, ಮನೆಯಲ್ಲಿ ಈ ಮಕ್ಕಳ ಕಸಿನ್‌ಗಳು, ಅಜ್ಜ, ಅಜ್ಜಿ, ಹಿರಿಯರು ಬಹುತೇಕ ಕನ್ನಡದಲ್ಲೇ ಮಾತನಾಡುವ ವಾತಾವರಣವೇ ಈ ಮಿಂಚು ವೇಗದ ಕನ್ನಡ ಕಲಿಕೆಗೆ ಕಾರಣ. ಇಲ್ಲಿಗೆ ಬಂದೊಡನೆ, ಕಲಿತಷ್ಟೇ ವೇಗದಲ್ಲಿ ಅವರುಗಳು ಕನ್ನಡ ಮರೆಯ ತೊಡಗಿದರೆಂದರೆ - ನಾವೇ ಅಲ್ಲವೆ ಅದಕ್ಕೆ ಹೊಣೆ?
ಮನೆಯಲ್ಲಿ ತಾಯಿ ತಂದೆ ಕನ್ನಡ ಮಾತನಾಡುತ್ತಿದ್ದರೆ, ಮಗುವಿಗೆ ಕನ್ನಡ ಓದಲು, ಬರೆಯಲು, ಕಲಿಯಲು ಕಷ್ಟವೇ ಇಲ್ಲ. ಪ್ರೀತಿ ಎರಡೂ ದಿಕ್ಕಿನಲ್ಲಿ ಹರಿವ ಅಮೃತದ ಪ್ರವಾಹ. “ನಮ್ಮ ಮುದ್ದಿನ ಮಕ್ಕಳು ತಂದೆ ತಾಯಿಗಳನ್ನು ಮೆಚ್ಚಿಸಲು ಏನನ್ನು ಬೇಕಾದರೂ ಮಾಡ ಹೊರಡುತ್ತಾರೆ, ಇದು ಸ್ವಾಭಾವಿಕ. ಅವರು ಕನ್ನಡ ಕಲಿತರೆ, ನಮಗೆ ತುಂಬಾ ಸಂತೋಷ - ಎಂಬುದನ್ನ ಅವರಿಗೆ ಮನದಟ್ಟು ಮಾಡಿದರೆ ಮಕ್ಕಳ ಕನ್ನಡಾಭ್ಯಾಸ ಇನ್ನೂ ಸುಲಭವಾದೀತು.” “ಮನೆಯೇ ಮೊದಲ ಪಾಠಶಾಲೆ; ಜನನಿ ತಾನೇ ಮೊದಲ ಗುರುವು...”- ಎಂಬ ಒಂದು ನಾಣ್ಣುಡಿ ಇದೆ; ನಮ್ಮ ತಾಯ್ನುಡಿಯನ್ನು ಮಕ್ಕಳಿಗೆ ಕಲಿಸುವಾಗ ಈ ಮಾತು ಇಲ್ಲಿಗೇ ಹೆಚ್ಚು ಒಪ್ಪುತ್ತದೆ. ‘ಗುರು(ತಾಯಿ)’- ಶಿಷ್ಯ(ಮಗು)ವಿನ ಈ ಏಕಮಾತ್ರ, (ಒನ್ ಟು ಒನ್ ಬೇಸಿಸ್) ನ ಸಂಬಂಧ ಸಹ ಕನ್ನಡದ ಕಲಿಕೆಗೆ ಇನ್ನಷ್ಟು ಬೆಂಬಲವೀಯುತ್ತದೆ.
ಬೇಸಿಗೆ ರಜದ ದಿನಗಳಂತೂ ಕನ್ನಡ ಕಲಿಯಲು ಮಕ್ಕಳಿಗೆ ಸುದಿನಗಳು. ಇದಕ್ಕೆ ವಿನಿಯೋಗಿಸಲು ಈಗ ಅವರಿಗೆ ಹೆಚ್ಚಿಗೆ ವೇಳೆಯೂ ಇರುತ್ತದೆ. ಮನೆಯಲ್ಲೇ ‘ಬೇಸಿಗೆ ಶಿಬಿರ’ ಇದೆಂದುಕೊಳ್ಳಿ. ತಂದೆ ತಾಯಿಗಳು ಗುರುವಿನ ಮನೋಭಾವ ತಳೆದು, ತಮ್ಮ ಸ್ವಲ್ಪ ಸಮಯವನ್ನು ಮಕ್ಕಳೊಡನೆ ಈ ರೀತಿ ಹಂಚಿಕೊಂಡರೆ ಅವರಿಗೂ ಸಂತೋಷ; ಹೊಸದೊಂದನ್ನು ಸಾಧಿಸಿದೆವೆಂದು ಮಕ್ಕಳಿಗೂ ಹೆಮ್ಮೆ.
ಹೀಗೆ, ಇಲ್ಲಿ ವಿದೇಶದಲ್ಲಿ ಕನ್ನಡದ ಮನೆ ಮನೆಯೂ ಶಾಲೆಯಾದಾಗಲೇ ಮತ್ತೊಂದು ಪೀಳಿಗೆಗೆ ಇಲ್ಲಿ ಕನ್ನಡ ನಿಲ್ಲಲು ತಳಪಾಯ ಹಾಕಿದಂತಾಗುತ್ತದೆ.