ಅಮೆರಿಕನ್ನಡ
Amerikannada
ಹಿರಿತನದ ತಾಯಿತನಕೆ ಸಾಷ್ಟಾಂಗ ನಮಸ್ಕಾರ
ಡಾ. ಕೆ. ಆರ್. ಎಸ್. ಮೂರ್ತಿ
ನಿನಗಿಂದು ನಮಸ್ಕಾರ; ನಿನಗೆಂದೂ ನಮಸ್ಕಾರ, ಅಂಬೆ
ನಿನ್ನಿಂದ ಬಂದೆ; ನಿನ್ನಿಂದ ಉಂಡೆ; ನೀನೆಂದದೇ ಅಂದೆ

ಕಣ್ಣಲ್ಲಿ ಕಾಣುವ ಮುಂಚೆಯೇ ಎದೆಯಲ್ಲಿ ಮುದವ ಹೊತ್ತೆ
ಭ್ರೂಣವನು ಅಂದದಲಿ ಅಂಡದಲಿ ಪೋಷಿಸಿ ಆಶ್ರಯವಿತ್ತೆ

ಹೊಟ್ಟೆಯಲಿ ಒಂಬತ್ತು ಮಾಸ ಹೊತ್ತು ಏದುಸುರು ಬಿಟ್ಟವಳು
ಹೆತ್ತಾಗ ಉಂಬು ಇತ್ತು, ಮುತ್ತು ಇಟ್ಟು, ಸೊಂಟದಲಿ ಹೊತ್ತವಳು

ಅಂಬೆಗಾಲಿಟ್ಟು ತುಂಟತನ ಮಾಡುವಾಗ, ಕಿಲಕಿಲ ನಕ್ಕಾಗಲೆಲ್ಲಾ
ತುಂಬು ಹೃದಯದಿ ಆನಂದವನು ಸೂಸಿದವಳು ದಿನ ರಾತ್ರಿಯೆಲ್ಲಾ

ಅದೆಷ್ಟು ಭರದಲಿ ಬೆಳೆದೆನೋ! ಬಲಿಷ್ಠ ದೇಹದಿ ಏನೆಲ್ಲಾ ಮಾಡಿದೆನೋ
ಅದಷ್ಟೂ ನಿನಗೆ ಪಾದಾರ್ಪಣೆ; ಮನದಲ್ಲಿಯೇ ಸಾಷ್ಟಾಂಗ ನಮಿಸುವೆನು

ತಾಯಿತನವ ಮೀರುವುದು ಇಳೆಯಲ್ಲೇ ಅಳೆದು ಜಾಲಾಡಿದರೂ ಸಿಗಬಹುದೇ!
ತಾಯಿತನದ ಒಲವಿನ ಸಾಲವದು ಎಷ್ಟು ಸವೆಸಿದರೂ ಉಳಿಯುವಂತಹದೇ